ವರ್ಷ 2016ರಲ್ಲಿ ವಿಶ್ವಾದಂತ್ಯ ನೆಡೆದ ಸೈಬರ್ ದಾಳಿಗಳನ್ನು ವಿಶ್ಲೇಷಿಸಿದಾಗ, ವರ್ಷ 2017ರಲ್ಲಿ ಹೊಸ ಪೀಳಿಗೆಯ ಸೈಬರ್ ದಾಳಿಗಳು ನೆಡೆಯುವ ಸಂಭವ ಹೆಚ್ಚಾಗಿದೆಯಂದು ಹೇಳಬಹುದು. ಇಂತಹ ಹೊಸ ಪೀಳಿಗೆಯ ಸೈಬರ್ ದಾಳಿಗಳಿಂದ ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಭಾರತದ ಸರ್ಕಾರಿ ಜಾಲತಾಣಗಳು, ಬ್ಯಾಂಕುಗಳು, ವಿಮಾ ಸಂಸ್ಥೆಗಳು ಮತ್ತು ವಿಶೇಷವಾಗಿ ನಗದು ರಹಿತ ವ್ಯವಹಾರಕ್ಕೆ ಅಂತರ್ಜಾಲ ಬಳಸುವ ಎಲ್ಲಾ ಸಂಸ್ಥೆಗಳು ಕೈಗೊಳ್ಳಬೇಕಾಗಿದೆ.
20, ಸೆಪ್ಟೆಂಬರ್, 2016ರಂದು ಫ್ರಾನ್ಸ್ ದೇಶದ ಓ.ವಿ.ಹೆಚ್ ಸಂಸ್ಥೆಯ ಮೇಲೆ ಏಕ ಕಾಲದಲ್ಲಿ ನೆಡೆದ ಎರಡು ಡಿಡಿಓಎಸ್ ( ಡಿಸ್ಟ್ರಿಬ್ಯೂಟೆಡ್ ಡಿನೈಯಲ್ ಆಫ್ ಸರ್ವೀಸ್) ಸೈಬರ್ ದಾಳಿಗಳು, ಹೊಸ ದಾಖಲೆಯನ್ನು ಸೃಷ್ಟಿಸಿವೆ. ಒಂದು ಸೆಕೆಂಡ್ಗೆ 1 ಟೆರಾಬೈಟ್ಗಿಂತ ಅಧಿಕ ಬ್ಯಾಂಡ್ವಿತ್ ಸಾಮರ್ಥ್ಯದ ಈ ಸೈಬರ್ ದಾಳಿಗಳಿಂದಾಗಿ, ಓ.ವಿ.ಹೆಚ್ ಸಂಸ್ಥೆಯು ನೀಡುವ ಅಂತರ್ಜಾಲ ಸೇವೆಗಳು ಸ್ಥಗಿತಗೊಂಡಿದ್ದವು. ಕೇವಲ 48 ಗಂಟೆಗಳ ಅವಧಿಯಲ್ಲಿ 25 ಬಾರಿ ಡಿಡಿಓಎಸ್ ಸೈಬರ್ ದಾಳಿ ನೆಡೆದಿರುವುದಾಗಿ ಈ ಸಂಸ್ಥೆ ಹೇಳಿಕೊಂಡಿದೆ.
ಗೃಹ ಬಳಕೆಗೆ ಅಂತರ್ಜಾಲ ಸೇವೆ ನೀಡಲು ಬಳಸಲಾಗುವ ಮೋಡೆಮ್ಗಳು, ಸುರಕ್ಷತೆಗಾಗಿ ಬಳಸುವ ಸಿಸಿಟಿವಿ ಕ್ಯಾಮರಾಗಳು, ವೀಡಿಯೋ ರೆಕಾರ್ಡರ್ ಗಳು ಮತ್ತು ಮನೆ, ಆಸ್ಪತ್ರೆ, ಉದ್ಯಮ, ಸ್ಮಾರ್ಟ ಸಿಟಿಗಳಲ್ಲಿ ಬಳಸಲಾಗುತ್ತಿರುವ ಸ್ಮಾರ್ಟ್ ಉಪಕರಣಗಳನ್ನು ಮೊದಲು ನಿಯಂತ್ರಣಕ್ಕೆ ತೆಗೆದು ಕೊಂಡಿದ್ದ ಸೈಬರ್ ಅಪರಾಧಿಗಳು, ಇಂತಹ 1,45,000 ಸ್ಮಾರ್ಟ ಉಪಕರಣಗಳನ್ನು ಬಳಸಿ ಓ.ವಿ.ಹೆಚ್ ಸಂಸ್ಥೆಯ ಮೇಲೆ ಸೈಬರ್ ದಾಳಿ ಮಾಡಿದ್ದರು.
ಅಂತಿಮವಾಗಿ ಸೈಬರ್ ಸುರಕ್ಷತೆಯ ತಜ್ಞರು ಈ ಸೈಬರ್ ದಾಳಿಯನ್ನು ವಿಫಲಗೊಳಿಸಿ, ಮತ್ತೆ ಓ.ವಿ.ಹೆಚ್ ಸಂಸ್ಥೆಯು ತನ್ನ ಅಂತರ್ಜಾಲ ಸೇವೆಗಳನ್ನು ನೀಡಲು ಅನುವು ಮಾಡಿಕೊಟ್ಟರು. ಆದರೆ ಇಷ್ಟು ವ್ಯಾಪಕ ಮತ್ತು ಬೃಹತ್ ಪ್ರಮಾಣದ ಡಿಡಿಓಎಸ್ ದಾಳಿ ವಿಶ್ವಾದಂತ್ಯ ತಲ್ಲಣವನ್ನುಂಟು ಮಾಡಿತ್ತು.

21 ಅಕ್ಞೋಬರ್ 2016ರಂದು ಸಿಎನ್ಎನ್, ನೆಟ್ಫ್ಲಿಕ್ಸ್, ಪೇಪಾಲ್, ಫಾಕ್ಸ್ ನ್ಯೂಸ್, ಟ್ವಿಟರ್ ಮೊದಲಾದ ಜಾಲತಾಣಗಳು ಮತ್ತು ಪ್ರಮುಖ ದಿನಪತ್ರಿಕೆಗಳಾದ ನ್ಯೂಯಾರ್ಕ ಟೈಮ್ಸ್, ಗಾರ್ಡಿಯನ್, ವಾಲ್ಸ್ಟ್ರೀಟ್ ಜರ್ನಲ್ ಗಳ ಇ-ಪತ್ರಿಕೆಗಳು, ಹೀಗೆ ಹಲವಾರು ಕಡೆ ಏಕಕಾಲಕ್ಕೆ ಡಿಡಿಓಎಸ್ ಸೈಬರ್ ದಾಳಿ ನೆಡೆಸಲಾಗಿತ್ತು. ನಿಮಿಷಕ್ಕೆ 1.2 ಟೆರಾಬೈಟ್ ಬ್ಯಾಂಡ್ವಿತ್ ನಷ್ಟು ಬೃಹತ್ ಪ್ರಮಾಣದ ಡಿಡಿಓಎಸ್ ದಾಳಿ ಇದಾಗಿತ್ತು ಎಂದು ಹೇಳಲಾಗಿದೆ. ಅಂತರ್ಜಾಲದಲ್ಲಿ ಡೊಮೈನ್ ನೇಮ್ ಸರ್ವಿಸ್ (ಡಿಎನ್ಎಸ್) ಸೇವೆಯನ್ನು ನೀಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಡಿವೈಎನ್ ಮೇಲೆ ನೆಡೆದ ಈ ಸೈಬರ್ ದಾಳಿ, ಅಮೇರಿಕಾದ ಅನೇಕ ಕಡೆ ಮತ್ತು ಐರೋಪ್ನಲ್ಲಿ ಕೆಲವು ಕಡೆ ಅಂತರ್ಜಾಲ ಸೇವೆಗಳಲ್ಲಿ ವ್ಯತ್ಯಯವನ್ನುಂಟು ಮಾಡಿತ್ತು.
ಸುಮಾರು 1,00,000 ಸ್ಮಾರ್ಟ ಉಪಕರಣಗಳನ್ನು ಮೊದಲು ನಿಯಂತ್ರಣಕ್ಕೆ ತೆಗೆದುಕೊಂಡು ನಂತರ ಈ ಡಿಡಿಓಎಸ್ ದಾಳಿಯನ್ನು ಮಾಡಲಾಗಿದೆ. ಒಂದೇ ದಿನದಲ್ಲಿ ಮೂರು ಬಾರಿ ಇಂತಹ ಡಿಡಿಓಎಸ್ ದಾಳಿ ತನ್ನ ಮೇಲೆ ನೆಡೆದಿದೆ ಎಂದು ಡಿವೈಎನ್ ಸಂಸ್ಥೆ ಹೇಳಿಕೊಂಡಿದೆ.

ಹೀಗೆ ಲಕ್ಷಾಂತರ ಸ್ಮಾರ್ಟ ಉಪಕರಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಬೃಹತ್ ಪ್ರಮಾಣದ ಡಿಡಿಓಎಸ್ ದಾಳಿ ನೆಡೆಸಲು ಸೈಬರ್ ಅಪರಾಧಿಗಳಿಗೆ ದೊರೆತಿರುವ ಹೊಸ ಅಸ್ತ್ರವಾಗಿದೆ “ಮಿರಾಯಿ” ಬಾಟ್ ನೆಟ್. ಸಾಮಾನ್ಯವಾಗಿ ಸೈಬರ್ ದಾಳಿಗೆ ಬಳಸುವ ಬಾಟ್ ನೆಟ್ ಗಳಲ್ಲಿ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿ ಬಳಸಲಾಗುತ್ತದೆ. ಆದರೆ ಮಿರಾಯಿ ಬಾಟ್ ನೆಟ್ ಸ್ಮಾರ್ಟ ಉಪಕರಣಗಳನ್ನು ಹ್ಯಾಕ್ ಮಾಡಿ ಬಳಸುತ್ತಿರುವುದು, ಸೈಬರ್ ಸುರಕ್ಷತೆ ತಂತ್ರಜ್ಞರ ಆತಂಕಕ್ಕೆ ಕಾರಣವಾಗಿದೆ. ಮಿರಾಯಿ ಬಾಟ್ ನೆಟ್ ನ ತಂತ್ರಾಂಶದ ಸೋರ್ಸ್ ಕೋಡ್ನ್ನು ಅಂತರ್ಜಾಲದಲ್ಲಿ ಉಚಿತವಾಗಿ ವಿತರಿಸಲಾಗಿರುವುದರಿಂದ, ಮುಂಬರುವ ದಿನಗಳಲ್ಲಿ ವಿಶ್ವಾದಂತ್ಯ ಇರುವ ಸೈಬರ್ ಅಪರಾಧಿಗಳು “ಮಿರಾಯಿ” ಬಳಸಿ ಹೆಚ್ಚು ಡಿಡಿಓಎಸ್ ಸೈಬರ್ ದಾಳಿಗಳನ್ನು ನೆಡೆಸುವ ಎಲ್ಲಾ ಸಾಧ್ಯತೆಗಳಿವೆ. ವಿಶ್ವಾದಂತ್ಯ 3,80,00 ಸ್ಮಾರ್ಟ ಉಪಕರಣಗಳು ಈಗಾಗಲೇ ಮಿರಾಯಿ ಬಾಟ್ನೆಟ್ ನಿಯಂತ್ರಣದಲ್ಲಿವೆ ಎಂದು ಮಿರಾಯಿ ಬಾಟ್ನೆಟ್ ತಂತ್ರಾಂಶ ಅಭಿವೃದ್ಧಿಪಡಿಸಿರುವವರು ಹೇಳಿಕೊಂಡಿದ್ದಾರೆ. ಮಿರಾಯಿ ಬಾಟ್ನೆಟ್ ನಂತೆ ಬ್ಯಾಷ್ಲೈಟ್ ಹೆಸರಿನ ಬಾಟ್ನೆಟ್ ಕೂಡಾ ವಿಶ್ವಾದ್ಯಂತ ತಲ್ಲಣವುಂಟು ಮಾಡಿದೆ. ವರ್ಷ 2015ರ ಅಂತ್ಯದಲ್ಲಿ ಬ್ಯಾಷ್ಲೈಟ್ ತಂತ್ರಾಂಶದ ಸೋರ್ಸ ಕೋಡ್ನ್ನು ಉಚಿತವಾಗಿ ಅಂತರ್ಜಾಲದಲ್ಲಿ ವಿತರಿಸಲಾಗಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ಡಿಡಿಓಸ್ಗೆ ಬಳಸಲಾಗುವ ಮಿರಾಯಿ ಅಥವಾ ಬ್ಯಾಷ್ಲೈಟ್ ಬಾಟ್ ನೆಟ್ ನ ಹೊಸ ಆವೃತ್ತಿ ಹೇಗಿರುತ್ತದೆ ಮತ್ತು ಅದನ್ನು ಬಳಸಿ ನೆಡೆಯುವ ಸೈಬರ್ ದಾಳಿ ಎಷ್ಟು ಭೀಕರವಾಗಿರುತ್ತದೆ ಎನ್ನುವುದು ಊಹಿಸಲು ಅಸಾಧ್ಯ. ಆದರೆ ಹೊಸ ಪೀಳಿಗೆಯ ಸೈಬರ್ ದಾಳಿಗಳು ವರ್ಷ 2017ರಲ್ಲಿ ನೆಡೆಯುವ ಸಾಧ್ಯತೆ ಹೆಚ್ಚಾಗುತ್ತಿದೆ.
ಅಂತರ್ಜಾಲ ಸೇವೆ ನೀಡುವ ಸಂಸ್ಥೆಗಳು, ಡೇಟಾ ಸೆಂಟರ್, ಬ್ಯಾಂಕುಗಳು, ಹೀಗೆ ವಿವಿಧ ಸಂಸ್ಥೆಗಳ ಮೇಲೆ ಮತ್ತೆ ಮತ್ತೆ ಸೈಬರ್ ದಾಳಿ ಮಾಡಿ, ಅವುಗಳ ಅಂತರ್ಜಾಲ ಸೇವೆಯನ್ನು ನಿಲ್ಲುವಂತೆ ಮಾಡಲು ಅಡ್ವಾನ್ಸ್ಡ್ ನಿರಂತರ ಡಿನೀಯಲ್ ಆಫ್ ಸರ್ವಿಸ್ ( ಎಪಿಡಿಓಎಸ್) ತಂತ್ರಜ್ಞಾನವನ್ನು ಸೈಬರ್ ಅಪರಾಧಿಗಳು ಬಳಸುತ್ತಾರೆ. ನಿರಂತರವಾಗಿ ನೆಡೆಯುವ ಈ ಸೈಬರ್ ದಾಳಿ, 38 ದಿನಗಳವರೆಗೂ ನೆಡೆದಿರುವ ಉದಾಹರಣೆಗಳಿವೆ. ಎಪಿಡಿಓಎಸ್ ದಾಳಿಗೆ ಬಲಿಯಾದ ಸಂಸ್ಥೆ ಹಲವಾರು ಮಿಲಿಯನ್ ಡಾಲರ್ ಆರ್ಥಿಕ ನಷ್ಟವನ್ನು ಅನುಭವಿಸಿದ ಉದಾಹರಣೆಗಳಿವೆ. ಗೆರಿಲ್ಲಾ ಯುದ್ಧತಂತ್ರದಂತೆ, ಮತ್ತೆ ಮತ್ತೆ ಸೈಬರ್ ದಾಳಿ ನೆಡೆಸಲು ಎಪಿಡಿಓಎಸ್ ಬಳಸಿಕೊಳ್ಳುವುದರಿಂದ, ಇಂತಹ ದಾಳಿಯ ವಿರುದ್ಧ ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಬ್ಯಾಂಕುಗಳು, ಸರ್ಕಾರಿ ಇಲಾಖೆಗಳು ಮೊದಲಾದ ಸಂಸ್ಥೆಗಳು ಡಿಡಿಓಎಸ್ ದಾಳಿಯನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ, ಎಪಿಡಿಓಎಸ್ ದಾಳಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವುದು ಅತ್ಯಗತ್ಯವಾಗಿದೆ.

ಹೊಸ ಪೀಳಿಗೆಯ ಸೈಬರ್ ದಾಳಿಗಳಲ್ಲಿ ಪರ್ಮನೆಂಟ್ ಡಿನೀಯಲ್ ಆಫ್ ಸರ್ವೀಸ್ ( ಪಿಡಿಓಎಸ್) ತಂತ್ರಜ್ಞಾನವನ್ನು ಸೈಬರ್ ಅಪರಾಧಿಗಳು ಬಳಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗುವ ಹಾನಿ ಮತ್ತು ಆರ್ಥಿಕ ನಷ್ಟ ಅಪಾರವಾಗಿರುವುದು ಪಿಡಿಓಎಸ್ ಬಳಸಲು ಒಂದು ಕಾರಣವಾಗಿದೆ. ಇಂತಹ ದಾಳಿ ನೆಡೆಸಿದಾಗ ಸೈಬರ್ ಅಪರಾಧಿಗಳು ಸಂಸ್ಥೆಯ ಸರ್ವರ್ ಮತ್ತು ನೆಟ್ವರ್ಕ ಉಪಕರಣಗಳನ್ನು ನಿಯಂತ್ರಣಕ್ಕೆ ತೆಗೆದು ಕೊಳ್ಳುತ್ತಾರೆ. ನಂತರ ಸೈಬರ್ ಅಪರಾಧಿಗಳನ್ನು ಅವುಗಳನ್ನು ಸಂಪೂರ್ಣವಾಗಿ ನಿರುಪಯುಕ್ತಗೊಳಿಸುವುದರಿಂದ, ಅವುಗಳನ್ನು ರಿಪೇರಿ ಮಾಡುವುದಾಗಲಿ ಅಥವಾ ಮರುಬಳಕೆ ಮಾಡುವುದಾಗಲಿ ಸಾಧ್ಯವಾಗುವುದಿಲ್ಲ. ಪಿಡಿಓಎಸ್ ದಾಳಿಗೆ ತುತ್ತಾದ ಸಂಸ್ಥೆ ಹಾರ್ಡ್ವೇರ್, ನೆಟ್ವರ್ಕ್ಗಳನ್ನು ಹೊಸದಾಗಿ ಸಿದ್ಧಪಡಿಸಿಕೊಂಡ ನಂತರವಷ್ಟೇ ಮತ್ತೆ ತಮ್ಮ ವ್ಯವಹಾರ ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಂಸ್ಥೆಗೆ ಅಪಾರವಾದ ಆರ್ಥಿಕ ನಷ್ಟ ಮತ್ತು ಗ್ರಾಹಕರನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಸಂಸ್ಥೆಯು ಅಂತರ್ಜಾಲ ಮತ್ತು ಸಂವಹನಕ್ಕಾಗಿ ಬಳಸುವ ವಿದ್ಯುತ್ ವ್ಯವಸ್ಥೆ ಮತ್ತು ಬ್ಯಾಟರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಅವುಗಳನ್ನು ನಾಶಪಡಿಸುವುದನ್ನು ಕೂಡಾ ಪಿಡಿಓಎಸ್ ಬಳಸಿ ಕೆಲವು ಸೈಬರ್ ಅಪರಾಧಿಗಳು ಮಾಡಿದ್ದಾರೆ. ಯುಎಸ್ಬಿ ಬಳಸಿ ಪಿಡಿಓಎಸ್ ದಾಳಿ ನೆಡೆಸಿರುವ ಉದಾಹರಣೆಗಳು ಇವೆ. ಕಂಪ್ಯೂಟರ್ ನಿಂದ ವಿದ್ಯುತ್ ಪಡೆದು ಯುಎಸ್ಬಿನಲ್ಲಿರುವ ಪೋಲ್ಟೇಜ್ ಪರಿವರ್ತಕ ಬಳಸಿ, 220 ವೋಲ್ಟ್ ವಿದ್ಯುತ್ ಚಾರ್ಜ ಮಾಡುತ್ತಾರೆ. ನಂತರ ಈ ಅಧಿಕ ಪ್ರಮಾಣದ ವಿದ್ಯುತ್ನ್ನು ಯುಎಸ್ಬಿ ಮೂಲಕ ಕಂಪ್ಯೂಟರ್ಗೆ ಹರಿಸಿದಾಗ, ಕಂಪ್ಯೂಟರ್ ಹಾಳಾಗುತ್ತದೆ.

ಮೊಬೈಲ್ ಫೋನ್ಗಳಲ್ಲಿ ಇರುವ ಸುರಕ್ಷತೆಯ ಲೋಪ ದೋಪಗಳನ್ನು ಗುರುತಿಸಿ, ಅವುಗಳ ಮೂಲಕ ಮಾಲ್ವೇರ್ ಮತ್ತು ಬಾಟ್ಗಳನ್ನು ಸೇರುವಂತೆ ಮಾಡಲಾಗುತ್ತದೆ. ನಂತರ ದೂರ ನಿಯಂತ್ರಣ ತಂತ್ರಜ್ಞಾನ ಬಳಸಿ ಈ ಮಾಲ್ವೇರ್ ಮತ್ತು ಬಾಟ್ಗಳ ಸಹಾಯದಿಂದ ಮೊಬೈಲ್ ಫೋನ್ ತಾಪಮಾನ ಹೆಚ್ಚಾಗುವಂತೆ ಮಾಡುವುದು ಸೈಬರ್ ಅಪರಾಧಿಗಳು ಬಳಸುವ ಮತ್ತೊಂದು ಉದಾಹರಣೆಯಾಗಿದೆ. ಹೀಗೆ ತಾಪಮಾನ ಹೆಚ್ಚಾಗಿ, ಮೊಬೈಲ್ ಫೋನ್ ಇದ್ದಕ್ಕಿದಂತೆ ಬೆಂಕಿ ಹತ್ತಿ ಉರಿಯುವಷ್ಟು ಈ ಸೈಬರ್ ದಾಳಿ ಪ್ರಬಲವಾಗಿರುತ್ತದೆ.
ಸೈಬರ್ ಅಪರಾಧಿಗಳು ಜನಸಾಮಾನ್ಯರ ಮೇಲೆ ಸೈಬರ್ ದಾಳಿ ನೆಡೆಸುತ್ತಿರುವುದು ಸೈಬರ್ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಉದಾಹರಣೆಗೆ, ಅಕ್ಟೋಬರ್ 2016ರಲ್ಲಿ ಫಿನ್ಲ್ಯಾಂಡ್ ದೇಶದ ಪಶ್ವಿಮ ಭಾಗದಲ್ಲಿರುವ ಎರಡು ವಸತಿ ಸಮುಚ್ಛಯಗಳ ಮೇಳೆ ಸೈಬರ್ ದಾಳಿ ನೆಡೆಸಲಾಗಿತ್ತು. ವಸತಿ ಸಮುಚ್ಛದಲ್ಲಿರುವ ಅಪಾರ್ಟಮೆಂಟ್ಗಳ ಅಂತರ್ಜಾಲ ಸಂಪರ್ಕ ಕಡಿತಗೊಳಿಸಿದ ಸೈಬರ್ ಅಪರಾಧಿಗಳು, ನಂತರ ಅಪಾರ್ಟಮೆಂಟ್ಗಳ ಶಾಖ ನಿಯಂತ್ರಣ ವ್ಯವಸ್ಥೆಯನ್ನು ಮತ್ತು ಬಿಸಿ ನೀರು ಪೂರೈಸುವ ವ್ಯವಸ್ಥೆಯನ್ನು ನಿಯಂತ್ರಿಸುವ ಕಂಪ್ಯೂಟರ್ಗಳನ್ನು ನಿಷ್ಕ್ರಿಯಗೊಳಿಸಿದರು.

ಚಳಿಗಾಲದಲ್ಲಿ ಫಿನ್ಲ್ಯಾಂಡಿನಲ್ಲಿ ನೀರು ನಿಂತು ಮಂಜುಗಡ್ಡೆಯಾಗುವ ವಾತಾವರಣವಿರುತ್ತದೆ. ಕೊರೆಯುವ ಚಳಿಯಲ್ಲಿ ಅಪಾರ್ಟಮೆಂಟ್ಗಳ ಒಳಗಿನ ವಾತಾವರಣವನ್ನು ಬೆಚ್ಚಗೆ ಇಡಬೇಕಾದ ಶಾಖ ನಿಯಂತ್ರಣ ವ್ಯವಸ್ಥೆಯು ನಿಷ್ಕ್ರೀಯಗೊಂಡ ಕಾರಣ ಮತ್ತು ಬಿಸಿ ನೀರು ಪೂರೈಕೆ ವ್ಯವಸ್ಥೆ ವಿಫಲವಾದ ಕಾರಣ, ವಸತಿ ಸಮುಚ್ಛಯದ ನಿವಾಸಿಗಳು ತೊಂದರೆಗೊಳಗಾದರು.

ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ 3ನೇ ತಾರೀಖಿನವರೆಗೂ ಮಕ್ಕಳು, ವೃದ್ಧರು, ರೋಗಿಗಳು ಚಳಿಗಾಲದಲ್ಲಿ ಶಾಖ ನಿಯಂತ್ರಣ ವ್ಯವಸ್ಥೆ ಇಲ್ಲದೆ ನರಳ ಬೇಕಾಯಿತು. ಈ ಸಮಯದಲ್ಲಿ ವಸತಿ ಸಮುಚ್ಛಯದ ಮೇಲೆ ನೆಡೆದಿರುವ ಸೈಬರ್ ದಾಳಿಯನ್ನು ತಿಳಿದು, ಸ್ಥಳಕ್ಕೆ ಧಾವಿಸಿದ ತಜ್ಞರು ಮತ್ತೆ ಶಾಖ ನಿಯಂತ್ರಣ ವ್ಯವಸ್ಥೆ ಕೆಲಸ ಮಾಡುವಂತೆ ಮಾಡಿದರು ಮತ್ತು ಅಂರ್ತಜಾಲ ಸಂಪರ್ಕವನ್ನು ಪುರ್ನಸ್ಥಾಪಿಸಿದರು.
ದೂರವಾಣಿ ವ್ಯವಸ್ಥೆಯನ್ನು ನಿಷ್ಕ್ರೀಯಗೊಳಿಸುವ ಉದ್ದೇಶದಿಂದ ಸೈಬರ್ ಅಪರಾಧಿಗಳು ಟೆಲಿಫೋನಿ ಡಿನಿಯಲ್ ಆಫ್ ಸರ್ವೀಸ್ (ಟಿಡಿಓಎಸ್) ಸೈಬರ್ ದಾಳಿಯನ್ನು ಮಾಡಬಹುದೆಂದು ಹೇಳಲಾಗುತ್ತಿದೆ. ಉದಾಹರಣೆಗೆ ಒಂದು ಸ್ಥಳದಲ್ಲಿ ಉಗ್ರಗಾಮಿಗಳು ದಾಳಿ ಮಾಡಿದಾಗ, ಆ ಸ್ಥಳದಲ್ಲಿರುವ ಮೊಬೈಲ್ ಫೋನ್ ಮತ್ತು ಸ್ಥಿರದೂರವಾಣಿ ವ್ಯವಸ್ಥೆಯನ್ನು ನಿಷ್ಕ್ರೀಯ ಗೊಳಿಸಲು ಸೈಬರ್ ಅಪರಾಧಿಗಳು ಟಿಡಿಓಎಸ್ ದಾಳಿ ಮಾಡುತ್ತಾರೆ. ಟಿಡಿಓಎಸ್ ನಿಂದ ಸೃಷ್ಟಿಯಾಗುವ ಸಾವಿರಾರು ಸಂಖ್ಯೆಯ ಹುಸಿ ಫೋನ್ ಕರೆಗಳು ಮೊಬೈಲ್ ಫೋನ್ ಮತ್ತು ಸ್ಥಿರ ದೂರವಾಣಿ ನೆಟ್ವರ್ಕ್ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತವೆ. ಇದರಿಂದಾಗಿ ನಿಜವಾದ ದೂರವಾಣಿ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಗ್ರಾಹಕರಿಗೆ ಸಾಧ್ಯವಾಗುವುದಿಲ್ಲ. ಟಿಡಿಓಎಸ್ ಸೈಬರ್ ದಾಳಿಯಿಂದ ಕಾನೂನು ಪಾಲನಾ ವ್ಯವಸ್ಥೆ, ತುರ್ತು ಆರೋಗ್ಯ ಸೇವೆ, ಹೀಗೆ ಹಲವಾರು ಸೇವೆಗಳಿಗೆ ಅಡಚಣೆ ಕೂಡಾ ಉಂಟು ಮಾಡಬಹುದಾಗಿದೆ.

ಜನಸಾಮಾನ್ಯರು ಬಳಸುವ ಸ್ಮಾರ್ಟ ಫೋನ್, ಅಂತರ್ಜಾಲ, ಇ-ಮೇಲ್, ಸಾರ್ವಜನಿಕ ಸ್ಥಳಗಳಿರುವ ಐಪಿ ಕ್ಯಾಮರಾಗಳು, ಉಚಿತ ಅಂತರ್ಜಾಲ ಮೊದಲಾದವುಗಳನ್ನು ನಿಯಂತ್ರಣಕ್ಕೆ ತಗೆದುಕೊಂಡು, ಹೊಸ ಪೀಳಿಗೆಯ ಸೈಬರ್ ದಾಳಿಗಳಿಗಳನ್ನು ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ನಿಜವಾದ ಸೈಬರ್ ಅಪರಾಧಿಗಳ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನೆಡೆಸಿ, ಅದನ್ನು ನಿಯಂತ್ರಣಕ್ಕೆ ತೆಗೆದು ಕೊಳ್ಳುವುದನ್ನು ಸೈಬರ್ ಅಪರಾಧಿಗಳು ಮಾಡಬಹುದು ಎಂದು ಶಂಕಿಸಲಾಗಿದೆ. ಅಂತಹ ಸಂದರ್ಭದಲ್ಲಿ ಈ ಸೈಬರ್ ಅಪರಾಧಿಗಳು ಕೇಳಿದಷ್ಟು ಹಣ ನೀಡಿ, ಸಾರ್ವಜನಿಕ ವ್ಯವಸ್ಥೆಯನ್ನು ಅವರಿಂದ ಬಿಡಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಸೈಬರ್ ಅಪರಾಧಿಗಳು ಇಂತಹ ದಾಳಿ ನೆಡೆಸಬಹುದು ಎನ್ನಲು ತಜ್ಞರು ಈ ಉದಾಹರಣೆ ಕೊಡುತ್ತಾರೆ.

ಡಿಸೆಂಬರ್ 2016ರಲ್ಲಿ ಉಕ್ರೇನ್ ದೇಶದಲ್ಲಿರುವ 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವೊಂದು, ಇದ್ದಕ್ಕಿದಂತೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಇದರಿಂದಾಗಿ ಉಕ್ರೇನಿನ ರಾಜಧಾನಿ ಕೀವ್ನ ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಡಿತವುಂಟಾಯಿತು. ಉತ್ತಮವಾಗಿ ಕೆಲಸ ಮಾಡುತ್ತಿದ್ದ ವಿದ್ಯುತ್ ಉತ್ಪಾದನಾ ಘಟಕ ಇದಕ್ಕಿದಂತೆ ಕೆಲಸ ಮಾಡುವುದನ್ನು ನಿಲ್ಲಿಸಲು ಸೈಬರ್ ದಾಳಿ ಕಾರಣವಿರಬಹುದೆಂದು ಶಂಕಿಸಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಉಕ್ರೇನಿನಲ್ಲಿರುವ ವಿದ್ಯುತ್ ಉತ್ಪಾದನೆ ಘಟಕ ಇದ್ದಕ್ಕಿದಂತೆ ಕೆಲಸ ಮಾಡುವುದನ್ನು ನಿಲ್ಲಿಸಿರುವುದು ವಿಶ್ವಾದ್ಯಂತ ತಲ್ಲಣ ಉಂಟು ಮಾಡಿದೆ ಈ ಸೈಬರ್ ಅಪರಾಧಿಗಳು ಯಾರು ಮತ್ತು ಅವರು ಹೀಗೆ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಲು ಕಾರಣವೇನು ಎಂದು ತನಿಖೆ ನೆಡೆಯುತ್ತಿದೆ.

ಡಿಜಿಟಲ್ ಜಗತ್ತು ಹೊಸ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ನೀಡುತ್ತಿದೆ. ಇದೇ ಸಮಯದಲ್ಲಿ, ಸರ್ಕಾರ, ವಾಣಿಜ್ಯ ಸಂಸ್ಥೆಗಳು ಮತ್ತು ಜನ ಸಾಮಾನ್ಯರು ಅನಧಿಕೃತ ತಂತ್ರಾಂಶಗಳ ಬಳಕೆನ್ನು ನಿಲ್ಲಿಸಬೇಕು. ಮೊಬೈಲ್ ಫೋನ್, ಕಂಪ್ಯೂಟರ್, ಸ್ವಯಂಚಾಲಿತ ವ್ಯವಸ್ಥೆ, ಅಂತರ್ಜಾಲ ಮೊದಲಾದ ಕಡೆ, ಹೆಚ್ಚಿನ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.