ಊರಾಚೆ ಒಂಟಿ ಮನೆ. ಬಂದವರು
ಆಹಾ ಏನು ಸೊಗಸಾಗಿದೆ ಸುತ್ತಣ ನೋಟ
ಎನ್ನುತ್ತಾರೆ. ಅನತಿ ದೂರದ ಆಯಸ್ಕಾಂತ
ಬಣ್ಣದ ಗುಡ್ಡ ; ಅತ್ತ ತಗ್ಗಿನಲ್ಲೇ ತಲೆಯೆತ್ತಿ
ಹಸಿರು ಗರಿ ಝಳಪಿಸುವ ತೆಂಗಿನ ತೋಟ,
ಎಡಕ್ಕೆ ತಳತ್ತಳಿಸಿ ಹೊಳೆವ ಕೆರೆ. ಸಂಜೆ
ಬಾನಂಚಿನಲ್ಲಿ ಬಣ್ಣದ ಮೋಡ. ಇರುಳು
ಆಗಾಗ ‘ಬೆಳುದಿಂಗಳ ನೋಡಾ’

ಇವರ ಹೊಗಳಿಕೆಗೆ ಹಿಗ್ಗುತ್ತ ಒಂದೆರಡು
ದಿನ ಸಂಭ್ರಮ. ಇರುಳು ‘ಗುಂ’ ಎನುವ ಕತ್ತಲೆ,
ಮತ್ತೆ ಸದ್ದೇ ಇಲ್ಲ. ಕಿಟಕಿ ಗಾಜಿಂದಾಚೆ
ದೂರದಲ್ಲಿ ಎಲ್ಲೋ ದೀಪಗಳ ಕಿಲಕಿಲ.
ಹೊರಗೊಂದು ತರೆಗೆಲೆಯು ಗಿರುಕೆಂದರೂ
ಎದೆ ಬಡಿತ. ಗೋಡೆ ಗಡಿಯಾರ ನೆಟ್ಟಗೆ
ದಿಟ್ಟಿಸಿದರೂ ಇವಳಿಗೆ ಬೆವರು. ಗಂಡ
ಮನೆಗೆ ಬರುವುದೊಂದಿಷ್ಟು ತಡವಾದರೂ
ಶುರುವಾಗುತ್ತದೆ ಗಿರಣಿ. ಇದುವರೆಗು
ಊರ ನಡುವಿದ್ದ ಬಾಡಿಗೆ ಮನೆಯ
ಇಕ್ಕಟ್ಟಿನಲ್ಲಿ ಕಳೆದ ದಿನಗಳ ನೆನಪು
ಕಾಡುವುದು ಹಿತವಾಗಿ. ಈ ಒಂಟಿಕೊಂಪೆಯ
ನಡುವೆ ಕಟ್ಟಿಸಿಕೊಂಡ ಹೊಸ ಮನೆಯಲ್ಲಿ
ಸುಖವಿಲ್ಲ. ಸುತ್ತ ಖಾಲಿ ಸೈಟುಗಳಲ್ಲಿ
ಮನೆ ಎದ್ದು, ನೆರೆಹೊರೆಯವರು ಮಾತ-
ನಾಡುವ ಸದ್ದು ಕಿವಿಗೆ ಬೀಳುವ ತನಕ
ಈ ಹೊಸ ಮನೆ ಕೂಡ, ಇವಳಿಗೆ ನರಕ.