ಎಲ್ಲರಿಗೂ ಶಿಕ್ಷಣ ದೊರೆಯಬೇಕು, ಎಲ್ಲರೂ ಸುಶಿಕ್ಷಿತರಾಗಬೇಕು ಎನ್ನುವುದನ್ನು ಒಂದು ಸಮಾಜದ ಅಪೇಕ್ಷೆ ಎಂದು ಹೇಳಬಹುದು. ಸಮಾಜದ ಅಪೇಕ್ಷೆಯನ್ನೇ ಸರಕಾರದ ಅಪೇಕ್ಷೆಯೆಂದೂ ಪರಿಭಾವಿಸಬಹುದು. ಆದರೆ ಶಿಕ್ಷಣ ಅಂದರೆ ನಿಜವಾಗಿ ಏನು ಎನ್ನುವ ಪ್ರಶ್ನೆಗೆ ಸಮಗ್ರವಾದ ಉತ್ತರ ಸಿಗುವುದಿಲ್ಲ. ಓದು, ಬರಹ ಲೆಕ್ಕ ಕಲಿತರೆ ವಿದ್ಯಾವಂತ ಎಂದು ಗುರುತಿಸಲ್ಪಡುವ ಕಾಲವೊಂದಿತ್ತು. ಓದುವ ಬರೆಯುವ ಲೆಕ್ಕಮಾಡುವ ಸಾಮರ್ಥ್ಯವಷ್ಟೇ ಶಿಕ್ಷಣ ಅಲ್ಲ, ಶಿಕ್ಷಣ ವ್ಯಕ್ತಿತ್ವ ನಿರ್ಮಾಣ ಮಾಡಬೇಕು; ಶಿಕ್ಷಣ ವ್ಯಕ್ತಿಯ ಪ್ರತಿಭೆಯನ್ನು ಬೆಳಕಿಗೆ ತರಬೇಕು; ಶಿಕ್ಷಣ ವ್ಯಕ್ತಿಯನ್ನು ವಿಚಾರಶೀಲನನ್ನಾಗಿಯೂ ಕ್ರಿಯಾಶೀಲನನ್ನಾಗಿಯೂ ಮಾಡಬೇಕು. ಇದೆಲ್ಲ ಹೇಗೆ ನಡೆಯಬೇಕೆಂದರೆ, ಸುಶಿಕ್ಷಿತ ವ್ಯಕ್ತಿ ಆತ್ಮೋನ್ನತಿಯೊಂದಿಗೆ ಅದಕ್ಕೆ ಅನುಕೂಲ ಮಾಡಿಕೊಟ್ಟ ಸಮಾಜದ ಉನ್ನತಿಗಾಗಿ ಕೂಡ ತನ್ನ ಪ್ರತಿಭೆ ಕೌಶಲ ಪರಿಣತಿಗಳನ್ನು ಉಪಯೋಗಿಸಬೇಕು. ಹಾಗಾದಾಗಲೇ ವ್ಯಕ್ತಿ ಮತ್ತು ಸಮಷ್ಟಿ ಜೊತೆಜೊತೆಯಾಗಿಯೇ ಬೆಳೆಯುವುದು. ಹಾಗಾಗದಿದ್ದರೆ, ಉನ್ನತ ಶಿಕ್ಷಣ ಪಡೆದ ವ್ಯಕ್ತಿ ಕೊಳೆಗೇರಿಯ ಮಧ್ಯೆ ಇರುವ ಅರಮನೆಯಂತಾಗುತ್ತಾನೆ. ಇದ್ದುದನ್ನು ಇರುವಂತೆ ಇರಗೊಟ್ಟರೆ ಸಾಲದು, ಸಾಮಾಜಿಕ ಪುನರ್ ನಿರ್ಮಾಣ, ಪರಿವರ್ತನೆ ನಿರಂತರವಾಗಿ ನಡೆಯಬೇಕು. ಏಕೆಂದರೆ, ಇಂದಿನ ತಲೆಮಾರಿಗೆ ಸಾಧಕವಾದದ್ದೇ ಮುಂದಿನ ತಲೆಮಾರಿಗೂ ಸಾಧಕ ಎನ್ನುವಂತಿಲ್ಲ. ಆದ್ದರಿಂದ ಶಿಕ್ಷಣ ವಿಧಾನ ಕಾಲ ಮತ್ತು ಕ್ಷೇತ್ರ ಎರಡನ್ನೂ ಲಕ್ಷ್ಯದಲ್ಲಿರಿಸಿಕೊಳ್ಳಬೇಕು.

ಬ್ರಿಟಿಷ್ ಆಡಳಿತೆಯ ಕಾಲದಲ್ಲಿ ಒಂದು ಸೀಮಿತ ಉದ್ದೇಶ ಸಾಧನೆಗಾಗಿ ರೂಪಿತವಾದ ನಮ್ಮ ಶಿಕ್ಷಣ ವಿಧಾನ ಬಹಳ ಕಾಲದವರೆಗೆ ಅದೇ ಹಾದಿಯಲ್ಲಿ ಮುಂದುವರಿಯಿತು. ಶಾಲೆಯಲ್ಲಿ ಓದುವ ಮಗುವಿಗೆ ತನ್ನ ಓದಿನ ಉದ್ದೇಶ ಏನು ಎಂದು ತಿಳಿದಿರಲಿಲ್ಲ. ಮಗುವನ್ನು ಶಾಲೆಗೆ ಕಳಿಸುವ ತಾಯಿತಂದೆಯರಲ್ಲಿ ಬಹಳ ಮಂದಿಗೆ ಓದಿನಿಂದ ಆಗಬೇಕಾದ್ದೇನು ಎಂದು ಗೊತ್ತಿರಲಿಲ್ಲ. ಓದಿದರೆ ನೌಕರಿ ಸಿಗುತ್ತದೆ ಎನ್ನುವುದೇ ಸಾಮಾಜಿಕರ ನಂಬಿಕೆಯಾಗಿತ್ತು. ಓದಿನಿಂದ ಪ್ರಾಪಂಚಿಕ ಲಾಭವಿಲ್ಲವೆಂದಾದರೆ ಓದು ವ್ಯರ್ಥ ಎಂಬ ಭಾವನೆ ಸಹ ವ್ಯಾಪಕವಾಗಿತ್ತು.

ಇಂದಿನ ಓದಿನ ಚೌಕಟ್ಟಿನ ಒಳಗೆ ವ್ಯಕ್ತಿಯ ವ್ಯಕ್ತಿತ್ವ ವಿಕಾಸ ಮತ್ತು ಗುಣವಂತಿಕೆಯ ಉನ್ನತೀಕರಣದ ಉದ್ದೇಶ ಅಡಗಿದೆ. ಶಾಲಾ ಪಾಠಪಟ್ಟಿ ಅಥವಾ ಸಿಲೆಬಸಿನಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಅದನ್ನು ಸಮಾಜ ಮತ್ತು ವಿದ್ಯಾರ್ಥಿ ಬಹುಮಟ್ಟಿಗೆ ಬದಿಗೆ ಸರಿಸಿರುವುದು ಕಂಡುಬರುತ್ತದೆ. ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕಿಂತ ವ್ಯಕ್ತಿಯನ್ನು ಏಕಗುಣ ಶ್ರೇಷ್ಠನನ್ನಾಗಿಸುವುದೇ ಶ್ರೇಷ್ಠ ಶಿಕ್ಷಣ ಎನಿಸಿಕೊಂಡಿದೆ. ಆ ಏಕಗುಣ ಯಾವುದು ಎಂದು ಕೇಳಿದರೆ, ಅದು ಶಿಕ್ಷಣದ ಮೂಲಕ ಅತ್ಯಂತ ಶ್ರೇಷ್ಠ ಮಟ್ಟದ ಬದುಕನ್ನು ಪಡೆಯುವ ಗುಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. `ಶ್ರೇಷ್ಠ ಮಟ್ಟದ ಬದುಕು’ ಎಂದರೆ ಯಾವ ಬದುಕು ಎನ್ನುವುದು ಕೂಡ ಲೋಕವಿದಿತ. `ಶ್ರೇಷ್ಠ ಮಟ್ಟದ ಬದುಕು’ ಎಂಬುದಕ್ಕೆ, ಈಗ ಜನಜನಿತವಾಗಿರುವ ಅರ್ಥ `ಭೌತಿಕವಾಗಿ ಉಚ್ಚ ಮಟ್ಟದ ಬದುಕು’, `ಭೌತಿಕವಾಗಿ ಉಚ್ಚ ಮಟ್ಟದ ಬದುಕು’ ಎಂದರೆ, ಒಂದು ಉತ್ತಮ ವೃತ್ತಿ ಅಥವಾ ಉದ್ಯೋಗದ ಮೇಲೆ ನಡೆಯುವ ಬದುಕು; ಒಂದು ಉತ್ತಮ ವೃತ್ತಿ ಅಥವಾ ಉದ್ಯೋಗ ಎಂದರೆ ಗರಿಷ್ಠ ಸಂಪಾದನೆ. ಹೀಗಾಗಿ, ವ್ಯಕ್ತಿ ಸಕಲ ಗುಣಸಂಪನ್ನನಾಗಿರಬೇಕಾದ ಅಗತ್ಯವಿಲ್ಲ. ಏಕಗುಣ ಸಂಪನ್ನನಾಗಿದ್ದರೆ ಸಾಕು. `ಏಕ ಗುಣ ಸಂಪನ್ನತೆ’ ಎಂದರೆ ವ್ಯಕ್ತಿಯ ಸ್ವಂತ ಗುಣ ಅಥವಾ ಸ್ವಂತ ಪ್ರತಿಭೆ ಎಂದರ್ಥವಲ್ಲ. ಎಲ್ಲರದೂ ಒಂದೇ ಆಗಿರುವ ಕಲಿಕಾ ಸಾಮರ್ಥ್ಯದಲ್ಲಿ ಸಂಪನ್ನತೆ ಎನ್ನುವುದೇ ಎಲ್ಲರ ನಂಬಿಕೆ. ಅಂದರೆ `ಗುಣಶ್ರೇಷ್ಠತೆ’ಯ ಲೇಬಲ್ ಹಚ್ಚಿ ಮಾರುಕಟ್ಟೆಯಲ್ಲಿ ಮಾರಲಾಗುವ ಗುಣ. ಶ್ರೇಷ್ಠ ಶಿಕ್ಷಣ ಎಂದರೆ ಎಲ್ಲರನ್ನೂ ಒಂದೇ ಗುಣಶ್ರೇಷ್ಠರನ್ನಾಗಿಸುವ ವಿಧಾನ. ಇದು ಇವತ್ತು ಸಾರ್ವತ್ರಿಕವಾದ ನಂಬಿಕೆಯಾಗಿರುವುದು ಸುಸ್ಪಷ್ಟ. ಇದನ್ನು ತಪ್ಪು ಅಥವಾ ಒಪ್ಪು ಎನ್ನುವುದರಲ್ಲಿ ಅರ್ಥವಿಲ್ಲ. ಇದು ಕಾಲವೇ ತಂದಿರುವ ಬದಲಾವಣೆ.

ಬದಲಾವಣೆಯ ಸುಳಿವು

ವಿದ್ಯಾರ್ಥಿಯನ್ನು ಸಾಂಸ್ಕೃತಿಕವಾಗಿ ಸಂಪನ್ನನಾಗಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಎಷ್ಟು ಮಾಡಿದರೂ ಸುಸಂಸ್ಕೃತ ವ್ಯಕ್ತಿಯಾಗುವ ಜವಾಬ್ದಾರಿ ವ್ಯಕ್ತಿಯದೇ ಆಗಿದೆ. ಹಾಗಾಗಬೇಕಾದರೆ ಅದು ವಿದ್ಯಾರ್ಥಿಯ ಕುಟುಂಬದ್ದು ಅರ್ಥಾತ್ ಪಾಲಕರದ್ದು ಕೂಡ ಆಗಿರಬೇಕು. ವ್ಯಕ್ತಿತ್ವದಲ್ಲಿ ಸಾಂಸ್ಕೃತಿಕ ಸಂಪನ್ನತೆ ಎಷ್ಟು ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಂಡಾಗಲೇ ಅದು ನಡೆಯಲು ಬೇಕಾದ ವಾತಾವರಣ ನಿರ್ಮಾಣವಾಗುವುದು.

ಶಿಕ್ಷಣ ಯಾವುದಾದರೊಂದು ವೃತ್ತಿಗೆ ಅಥವಾ ನೌಕರಿಗೆ ತಯಾರು ಮಾಡುವಂಥದಾಗಿರಲಿ, ಅಲ್ಲದಿರಲಿ, ಮಗುವಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದು ಹಿಂದೆಂದಿಗಿಂತಲೂ ಇವತ್ತು ಪಾಲಕರ ಜವಾಬ್ದಾರಿಗಿರುವುದು ಸ್ಪಷ್ಟ. ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಕರನ್ನು ನೇಮಿಸಿ, ಶ್ರೇಷ್ಠ ಶಿಕ್ಷಣ ನೀಡುತ್ತಿರುವುದು ನಿಜವಿರಬಹುದು. ಆದರೆ ಅದು ಎಷ್ಟು ಶ್ರೇಷ್ಠ ಮತ್ತು ಹೇಗೆ ಶ್ರೇಷ್ಠ ಎಂದು ಕಂಡುಕೊಳ್ಳಬೇಕಾದ್ದು ಪಾಲಕರ ಜವಾಬ್ದಾರಿ ಆಗಿದೆ. ಒಂದು ಹಂತದಲ್ಲಿ ಇದು ಶ್ರೇಷ್ಠ ಶಿಕ್ಷಣವನ್ನು ಪಡೆದುಕೊಂಡಿರುವ ವ್ಯಕ್ತಿಯ ಸ್ವಂತ ಜವಾಬ್ದಾರಿ ಕೂಡ ಆಗುತ್ತದೆ. ಜ್ಞಾನವನ್ನು ಪಡೆಯಲು ಇವತ್ತು ಗುರು ಮತ್ತು ಶಾಲೆ ಬೇಕೇ ಬೇಕು ಎಂದೇನಿಲ್ಲ. ಜ್ಞಾನ ಬೇರೆ ವಿಧಾನಗಳಿಂದಲೂ ಲಭ್ಯವಿದೆ. ಬಹಳಷ್ಟು ಸಾನ್ಯ ಜ್ಞಾನ ಅರ್ಥಾತ್ ಜನರಲ್ ನಾಲೆಜ್ ಎಂಬುದು ಒಂದು ಕ್ಲಿಕ್ನಷ್ಟು ಹತ್ತಿರವಿದೆ. ಶಾಲೆ ಕಾಲೇಜುಗಳಲ್ಲಿ ಕಂಪ್ಯೂಟರ್ ಬಳಕೆಗೆ ಹೆಚ್ಚು ಹೆಚ್ಚು ಒತ್ತು ನೀಡುತ್ತಿರುವುದನ್ನು ಕಾಣಬಹುದಾಗಿದೆ. ಈ ಪವಾಡಸದೃಶ ಬೆಳವಣಿಗೆ `ಇಲೆಕ್ಟ್ರೊನಿಕ್ ಬುಕ್’ ಕಾಗದದ ಪುಸ್ತಕವನ್ನು ವಿನಾಶದ ಅಂಚಿಗೆ ತಳ್ಳಬಹುದು ಎಂದು ಆತಂಕ ವ್ಯಕ್ತಪಡಿಸುವವರೂ ಇದ್ದಾರೆ. ಆದರೆ ಇದು ವಸ್ತು ಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳದಿರುವವರ ಆತಂಕ. ವಿದ್ಯಾರ್ಥಿಯ ಪಾಲಕರಿಗೆ ಸುಲಭದಲ್ಲಿ ಅರ್ಥವಾಗದಂಥ ಅಪಾರ ವೆಚ್ಚದ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣ ಸಂಸ್ಥೆಗಳು ಒಂದರೊಡನೊಂದು ಪೈಪೋಟಿ ನಡೆಸುತ್ತಾ ಜ್ಞಾನ ನೀಡುವ ಗುತ್ತಿಗೆದಾರರಂತೆ ನಡೆದುಕೊಳ್ಳುತ್ತಿರುವುದೇನೋ ನಿಜ. ಆದರೆ ಇದು ಜ್ಞಾನವೆಂಬುದು `ಮಾರಾಟದ ಸರಕು’ ಆಗಿರುವ ವರೆಗೆ ನಡೆಯಬಹುದು. ಆ ರೀತಿ ಗಳಿಸಿಕೊಂಡಿರುವ `ಜ್ಞಾನವಂತ’ನಿಗೆ ಅದರಿಂದ ಉಪಯೋಗವಿಲ್ಲದಾದಾಗ ಶಿಕ್ಷಣ ಸಂಸ್ಥೆಗಳು ಜ್ಞಾನ ನೀಡುವ ವ್ಯಾಪಾರೀ ವಿಧಾನಗಳನ್ನು ಕೈಬಿಡಬೇಕಾಗುತ್ತದೆ.

ಮಾಹಿತಿಯನ್ನು ಒದಗಿಸುವಲ್ಲಿ ಕಂಪ್ಯೂಟರಿನ ಸೇವೆ ಅನ್ಯಾದೃಶವಾದುದು. ಮಾಹಿತಿಗಾಗಿ ಗ್ರಂಥಾಲಯಗಳಲ್ಲಿ ಹುಡುಕುವ ಸಮಯ ಮತ್ತು ಶ್ರಮವನ್ನು ಅದು ಉಳಿಸುತ್ತದೆ. ಆದರೆ ಏನಾದರೊಂದು ವಿಷಯದ ಕುರಿತು ಅಧ್ಯಯನ ನಡೆಸಬೇಕಾದ ಸಂದರ್ಭದಲ್ಲಿ ಪುಸ್ತಕವನ್ನು ಓದುವುದು ಅನಿವಾರ್ಯವಾಗುತ್ತದೆ. ತೆರೆದ ಪುಸ್ತಕವನ್ನು ಎದೆಯ ಮೇಲಿರಿಸಿಕೊಂಡು ಅಥವಾ ದಿಂಬಿನಡಿಯಲ್ಲಿರಿಸಿಕೊಂಡು ವಿಶ್ರಾಂತಿ ಪಡೆಯಬಹುದು. ಕಂಪ್ಯೂಟರಿನೊಂದಿಗೆ ಹಾಗೆ ನಡೆದುಕೊಳ್ಳಲಾಗುವುದಿಲ್ಲ. ವಿದ್ಯುಚ್ಛಕ್ತಿಯನ್ನು ಅವಲಂಬಿಸಿರುವ ಕಂಪ್ಯೂಟರ್ ನಮ್ಮ ಆಜ್ಞೆಯಂತೆ ನಡೆದುಕೊಳ್ಳಬಹುದಾದರೂ ನಾವು ಹೋಗುವಲ್ಲಿಗೆಲ್ಲ ನಮ್ಮ ಜೊತೆ ಬರುವ ಪುಸ್ತಕ ಅಗದು. `ಲ್ಯಾಪ್ಟಾಪ್’ ಸಾವಿರಾರು ಪುಸ್ತಕಗಳನ್ನೇನೋ ಇರಿಸಿಕೊಳ್ಳುವ ಗ್ರಂಥಾಲಯವಾಗಬಹುದು. ಆದರೆ ಒಂದು ಬೃಹತ್ಗ್ರಂಥದ ಪುಟಗಳನ್ನು ಇಷ್ಟಪಟ್ಟಂತೆ ತೆರೆಯುವ ಮುಚ್ಚುವ ರೀತಿಯಲ್ಲಿ `ಇಲೆಕ್ಟ್ರೊನಿಕ್ ಪುಸ್ತಕ’ದ ಪುಟಗಳನ್ನ್ನು ತೆರೆಯಲು ಮುಚ್ಚಲು ಆಗುವುದಿಲ್ಲ. ಉನ್ನತ ವ್ಯಾಸಂಗದ ಸಂದರ್ಭದಲ್ಲಿ ಪುಸ್ತಕವಿಲ್ಲದೆ ಅಧ್ಯಯನ ನಡೆಯದು.

ಲೈಬ್ರರಿಗಳು ಸಂಖ್ಯೆಯಲ್ಲಿಯೂ ಗಾತ್ರದಲ್ಲಿಯೂ ವೃದ್ಧಿಸುತ್ತಾ ಹೋಗುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಕಂಪ್ಯೂಟರಿಗೆ ಸುಲಭವಾಗಿ ಮತ್ತು ಶೀಘ್ರ ಗತಿಯಲ್ಲಿ ಪುಸ್ತಕಗಳನ್ನು ಹೊರತರುವ ಸಾಮರ್ಥ್ಯವಿದೆ. ಆದುದರಿಂದ ಅದು ಹೆಚ್ಚು ಹೆಚ್ಚು ಪುಸ್ತಕಗಳನ್ನು ಉತ್ಪಾದಿಸುವ ಸಾಧನವಾಗಿ ಈಗಾಗಲೇ ಕೆಲಸ ಮಾಡತೊಡಗಿದೆ.

ಹೊಸ ಯುಗದ ಗ್ರಂಥಾಲಯಗಳು ಅಧ್ಯಯನ ದೇಗುಲಗಳೇ ಆಗಲಿವೆ. ಹಳೆಯ ಕಾಲದ ಶಾಲೆ ಕಾಲೇಜುಗಳು ಹಾಳು ಗುಡಿಗಳಾಗದಿರಬೇಕಾದರೆ ಅವುಗಳ ಜೀರ್ಣೋದ್ಧಾರ ತುರ್ತಿನಿಂದ ಆಗಬೇಕು. ಅವುಗಳು ಸರ್ಟಿಫಿಕೇಟು ಮುದ್ರಿಸುವ ಫ್ಯಾಕ್ಟರಿಗಳಾಗಿ ಬಹುಕಾಲ ಮುಂದರಿಯಲಾರವು. ಏಕೆಂದರೆ ನಿರುಪಯೋಗಿಯಾದ ಆ ಸರ್ಟಿಫಿಕೇಟನ್ನು ಪಡೆಯುವವರ ಸಂಖ್ಯೆ ಕ್ಷೀಣವಾಗುತ್ತಾ ಹೋಗಬಹುದು.

ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಹಲವು ಪರೀಕ್ಷೆಗಳು ಇಂಟರ್ನೆಟ್ ಮೂಲಕ ನಡೆಯುತ್ತವೆ. ವಿಶ್ವವಿದ್ಯಾನಿಲಯದ ಪ್ರವೇಶಕ್ಕೆ ಅಥವಾ ಉದ್ಯೋಗಕ್ಕೆ ಸಂದರ್ಶನಗಳು ಕಂಪ್ಯೂಟರ್ ಪರದೆಯ ಮೇಲೆ ಇಂಟರ್ನೆಟ್ ಮೂಲಕ ನಡೆಯುತ್ತವೆ. ಅಭ್ಯರ್ಥಿಯ ಧ್ವನಿ ಮತ್ತು ದೃಶ್ಯವನ್ನು ಇಂಟರ್ನೆಟ್ಟಿನಲ್ಲಿ ವೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಫಾರಮ್ಮುಗಳನ್ನು ಮತ್ತು ನೇಮಕಾತಿ ಪತ್ರಗಳನ್ನು ಇಂಟರ್ನೆಟ್ ಮೂಲಕ ರವಾನಿಸಲಾಗುತ್ತದೆ. ಇಂಥ ಅದ್ಭುತ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಸಂವಹನ ವಿಧಾನದಲ್ಲಿ ಆಗುತ್ತಿರುವ ಕ್ರಾಂತಿ ಏನು ಮತ್ತು ಅದರ ವೇಗ ಎಷ್ಟು ಎಂಬುದನ್ನು ತಿಳಿದುಕೊಳ್ಳಬಹುದು. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಶಿಕ್ಷಣ ವಿಧಾನದಲ್ಲಿ ಆಗಬಹುದಾದ ಬದಲಾವಣೆಗಳು ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಏನೇ ಆಗಲಿ, ಕಂಪ್ಯೂಟರ್ ಪರದೆಗೆ ನಾವು ಆಭಾರಿಗಳಾಗಿರಲೇ ಬೇಕು. ಏಕೆಂದರೆ, ಕಡತ-ಕಾಗದಪತ್ರವಾಗುವ ಲಕ್ಷೋಪಲಕ್ಷ ಮರಗಳನ್ನು ಅದು ಉಳಿಸಿದೆ. ವಿದ್ಯುನ್ಮಾನ ಸಂವಹನಾನುಕೂಲತೆಯಿಂದಾಗಿ ಉಪನ್ಯಾಸಕನ ಧ್ವನಿಪೆಟ್ಟಿಗೆಗೂ ಸ್ವಲ್ಪ ವಿರಾಮ ಸಿಕ್ಕಿದೆ. ಈಗಂತೂ ವಿಶ್ವವಿದ್ಯಾನಿಲಯಗಳು ಪಾಠಗಳನ್ನು ವಿದ್ಯಾರ್ಥಿಯ ಅಧ್ಯಯನ ಕೊಠಡಿಗೇ ರವಾನಿಸುವ ಪ್ರಯತ್ನದಲ್ಲಿ ತೊಡಗಿವೆ. ಎಲ್ಲಾ ಪಾಠಗಳು, ಸಂಭವನೀಯ ಪ್ರಶ್ನೆಗಳು ಮತ್ತು ಉತ್ತರಗಳು ಕಂಪ್ಯೂಟರ್ ಮೂಲಕ ಲಭಿಸುವುದಾದರೆ, ಕಾಲೇಜುಗಳ ಕೆಲಸವಾದರೂ ಏನು? ಅವು ಕೇವಲ ಪರೀಕ್ಷಾ ಭವನಗಳಾಗಿ ಮುಂದರಿಯುತ್ತವೆ, ಹೇಗೆ? ಅಧ್ಯಾಪಕರೆಲ್ಲ ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾದೀತೆ?

ಖಂಡಿತ ಇಲ್ಲ. ಕಂಪ್ಯೂಟರೀಕೃತ ಮಾಹಿತಿ ತಂತ್ರಜ್ಞಾನದ ದೆಸೆಯಿಂದ ಅಧ್ಯಾಪಕನ ಜವಾಬ್ದಾರಿ ಹೆಚ್ಚುತ್ತದೆ. ವಿದ್ಯಾರ್ಥಿಯ ಜ್ಞಾನದ ಬೇಡಿಕೆ ಹೆಚ್ಚುವುದರಿಂದ ಅಧ್ಯಾಪಕ ಮೊದಲಿಗಿಂತ ಹೆಚ್ಚು ತಿಳಿದುಕೊಂಡಿರಬೇಕಾಗುತ್ತದೆ. ಪಾಠಗಳು, ಪ್ರಶ್ನೆಗಳು ಮತ್ತು ಉತ್ತರಗಳು ವಿದ್ಯಾರ್ಥಿಗಳ ಬಳಿ ಇರುವುದರಿಂದ, ಪುಸ್ತಕದ ವಿಚಾರಗಳ ಮೇಲಿನ ಉಪನ್ಯಾಸ ವಿದ್ಯಾರ್ಥಿಗೆ ಬೇಕಾಗುವುದಿಲ್ಲ. ಆದುದರಿಂದ ಅಧ್ಯಾಪಕ ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕಾಗುತ್ತದೆ. ಹಾಜರಿ ಮುಖ್ಯವಾಗುವುದಿಲ್ಲ. ಕಲಿಕೆ ಮಾತ್ರ ಮುಖ್ಯವಾಗುತ್ತದೆ. ಕಲಿಯುವ ಉದ್ದೇಶದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಹ ತಮಗೆ ಬೇಕಾದ ವಿಶೇಷ ಜ್ಞಾನವನ್ನು ಸಂಪಾದಿಸಿಕೊಳ್ಳಲು ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ. ಸ್ವಾಭಾವಿಕವಾಗಿ ಈ ಹೆಚ್ಚಿನ ಶೈಕ್ಷಣಿಕ ಹೊಣೆಗಾರಿಕೆಯಿಂದಾಗಿ ಅಧ್ಯಾಪಕ ಹೆಚ್ಚು ತಲಬನ್ನು ಅಪೇಕ್ಷಿಸುವುದು ತಪ್ಪೆನಿಸುವುದಿಲ್ಲ. ಬದಲಾಗುವ ಶೈಕ್ಷಣಿಕ ಪರಿಸರಕ್ಕೆ ನಮಗೆ ಮೊದಲಿಗಿಂತ ಉತ್ತಮ ಪಾಲಕರ ಅಗತ್ಯವುಂಟಾಗುತ್ತದೆ. ಅರ್ಥಾತ್ ಪಾಲಕರು ಮೊದಲಿಗಿಂತ ಹೆಚ್ಚು ತಿಳಿದವರು ಮತ್ತು ಹೆಚ್ಚು ಜವಾಬ್ದಾರಿಯನ್ನು ಹೊರುವವರು ಆಗಬೇಕಾಗುತ್ತದೆ. ಪಾಲಕರು ಹೆಚ್ಚು ತಿಳಿದವರು ಮತ್ತು ಹೆಚ್ಚು ಎಚ್ಚರವುಳ್ಳವರು. ಆದರೆ, ಅಧ್ಯಾಪಕರು ಪಾಲಕರ ನಿರೀಕ್ಷೆಯ ಮಟ್ಟಕ್ಕೆ ಬರಬೇಕಾಗುತ್ತದೆ. ಆದ್ದರಿಂದ ಅವರು ಇನ್ನಷ್ಟು ಹೆಚ್ಚು ತಿಳಿದಿರುವವರು ಮತ್ತು ಹೆಚ್ಚು ಎಚ್ಚರವುಳ್ಳವರು ಆಗಬೇಕಾಗುತ್ತದೆ. ಪಾಲಕರು ತಮ್ಮ `ಮಗು’ವಿನ ಶಿಕ್ಷಣಕ್ಕಾಗಿ ಹೆಚ್ಚು ವ್ಯಯಿಸಬೇಕಾಗುವುದರಿಂದ ಅವರು ಹೆಚ್ಚಿನ ಗುಣ ಮಟ್ಟದ ಶಿಕ್ಷಣವನ್ನು ಶಾಲೆ ಕಾಲೇಜುಗಳಿಂದ ನಿರೀಕ್ಷಿಸುವುದು ಸ್ವಾಭಾವಿಕವೇ ಆಗಿದೆ.

ಬಹುಮುಖ ಸಿದ್ಧಿ-ಸಿದ್ಧತೆ

ಶಿಕ್ಷಣವು ವ್ಯಕ್ತಿಯನ್ನು ಸಿದ್ಧಗೊಳಿಸಬೇಕಾದ್ದು ಬದುಕಿಗೆ, ಒಂದು ನಿರ್ದಿಷ್ಟವಾದ ನೌಕರಿಗಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಬದುಕು ನೀಡುವುದೇನಿದೆ, ಎಲ್ಲಿದೆ, – ಅದಕ್ಕೆ ವಿದ್ಯಾರ್ಥಿ ತಯಾರಿ ಮಾಡಬೇಕಾಗುತ್ತದೆ. `ಕೋರ್ಸು’ ಸಾಮಾನ್ಯ ವಿಷಯದ್ದಾಗಿರಲಿ ವಿಶೇಷ ವಿಷಯದ್ದಾಗಿರಲಿ, ವಿಜ್ಞಾನ ವಿಷಯದ್ದಾಗಿರಲಿ ತಾಂತ್ರಿಕ ವಿಷಯದ್ದಾಗಿರಲಿ, ಅದು ಅವನಿಗೆ ತೋರಿಸುವುದು ಒಂದು ದಾರಿಯನ್ನು ಮಾತ್ರ. ಆ ದಾರಿಯಲ್ಲಿ ಹೋಗಿ ತನಗೆ ಬೇಕಾದುದನ್ನು ಮತ್ತು ತನ್ನಿಂದ ಸಾಧ್ಯವಿರುವುದನ್ನು ಮಾಡುವ ಸಾಮರ್ಥ್ಯ ಅವನಿಗಿರಬೇಕಾಗುತ್ತದೆ. ಆ ಸಾಮರ್ಥ್ಯ ಸರ್ಟಿಫಿಕೇಟಿನಲ್ಲಿ ಅಥವಾ ಅದರಲ್ಲಿ ಕಾಣಿಸಿರುವ ವಿಷಯಗಳಲ್ಲಾಗಲಿ ಇರುವುದಿಲ್ಲ. ಅದು ಅವನಲ್ಲಿ ಇರುತ್ತದೆ. ಅಂದರೆ ಅದು ಅವನ ಸ್ವಯಾರ್ಜಿತವಾಗಿರಬೇಕಾಗಿರುತ್ತದೆ. ಹಾಗಾಗಬೇಕಾದರೆ, `ಏಕ ವಿಷಯ ಪ್ರಭುತ್ವ’ ಸಾಕಾಗುವುದಿಲ್ಲ. ಅಧ್ಯಯನದ ಕಾಲದಲ್ಲಿ , ಅದು `ಪ್ರೊಫೆಷನಲ್ ಕೋರ್ಸ್’ ಆಗಿದ್ದರೂ ಕೂಡ, ಅವನು ಪರ್ಯಾಯ ಔದ್ಯೋಗಿಕ ಅವಕಾಶಗಳಿಗೆ ಸಹ ಸಿದ್ಧನಾಗಿರಬೇಕಾಗುತ್ತದೆ. ಅವನು ಕಲಿಯುತ್ತಿರುವ ಕೋರ್ಸಿನಲ್ಲಿ ಕೂಡ ಆ ವೃತ್ತಿಗೆ ಸಂಬಂಧಿಸಿದಂತೆ ಅದರ ಚೌಕಟ್ಟಿನಿಂದ ಹೊರಗೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿರುವ ಜ್ಞಾನವನ್ನು ಪಡೆದುಕೊಳ್ಳಬೇಕಾಗುತ್ತದೆ. ಅಗತ್ಯ ಜ್ಞಾನದಿಂದ ಲಭ್ಯವಿರುವ ಅವಕಾಶಗಳ ಮೇಲೆ ದೃಷ್ಟಿ ಮತ್ತು ಅದನ್ನು ಗಳಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಉದ್ಯೋಗ ಲಭಿಸದ ಬಳಿಕವೂ ಅಷ್ಟೆ, ಅದಕ್ಕೆ ತಕ್ಕ ಸಾಮರ್ಥ್ಯವನ್ನು ಅವನು ತೋರಿಸಲೇಬೇಕಾಗುತ್ತದೆ. ಜವಾಬ್ದಾರಿಯುತ ಪ್ರಜೆಯಾಗಿ ಬದುಕಬೇಕಾದರೆ, ವೃತ್ತಿಯಿಂದ ಹೊರಗಿನ ಜೀವನದಲ್ಲಿ ಕೂಡ ಹಿಂದೆಂದಿಗಿಂತ ಹೆಚ್ಚು ತಿಳಿವಳಿಕೆ ಉಳ್ಳವನಾಗಿರಬೇಕಾಗುತ್ತದೆ.

ಕೇವಲ ಒಬ್ಬ ಉಪನ್ಯಾಸಕನ ಅಥವಾ ತರಬೇತಿದಾರನ ಪ್ರಭಾಷಣವನ್ನು ಆಲಿಸುವ ಮೂಲಕ ಯಾರೂ ತಮ್ಮ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳಲಾರರು. ಪ್ರತಿಭೆಯಿದ್ದರೂ ಸೃಜನಶೀಲತೆ ಪ್ರಕಾಶಕ್ಕೆ ಬರಬೇಕಾದರೆ, ಅದಕ್ಕಾಗಿ ದುಡಿಯಬೇಕು. ದೃಢ ನಿರ್ಧಾರ ಬೇಕು, ಹಟ ಬೇಕು. ಹಣ ಮಾಡಲು ಅಡ್ಡದಾರಿಗಳಿರಬಹುದು. ಆದರೆ ಪ್ರತಿಭಾವಿಕಾಸಕ್ಕೆ ಅಡ್ಡದಾರಿಗಳಿಲ್ಲ. ಪಟ್ಟುಬಿಡದ ಪ್ರಯತ್ನವೊಂದೇ ದಾರಿ. ಸೃಜನಶೀಲ ಚಿಂತನೆ ಮತ್ತು ಬರವಣಿಗೆ ಸೋಮಾರಿ ಮನಸ್ಸಿನಿಂದಾಗದು. ತಟ್ಟನೆ ಮನೋರಂಜನೆಗೆ ಜಿಗಿಯುವ ಮನಸ್ಸಿನಿಂದಾಗದು. ಸೃಜನಶೀಲತೆಯ ಅಭಿವ್ಯಕ್ತಿಗೆ ಸತತ ಪ್ರಯತ್ನ ಬೇಕು. ಮೇರೆಯಿಲ್ಲದಂಥ ತಾಳ್ಮೆ ಬೇಕು.

ವಿಷಯ ಯಾವುದೇ ಆಗಿರಲಿ, ಸೃಜನಶೀಲ ಕ್ರಿಯೆಯ ಆರಂಭ ಸೃಜನಶೀಲ ಯೋಚನೆಯಿಂದ. ಸಾವಿರಾರು ವಿಜ್ಞಾನಿಗಳು, ಲೇಖಕರು ಮತ್ತು ಕಲಾವಿದರು ಸೃಷ್ಟಿದದ್ದು ಈ ರೀತಿಯಿಂದಲೇ. ಥಾಮಸ್ ಆಲ್ವಾ ಎಡಿಸನ್ ಗ್ರಾಮಫೋನ್ ರಿಕಾರ್ಡಿಂಗ್ ಕಂಡುಹಿಡಿದಂತೆ ಅಥವಾ ಅಲೆಕ್ಸಾಂಡರ್ ಫ್ಲೆಮಿಂಗ್ ಪೆನಿಸಿಲಿನ್ ಪತ್ತೆ ಮಾಡಿದಂತೆ, ಆಕಸ್ಮಿಕ ಸಂಶೋಧನೆಗಳಾಗಿರಬಹುದು. ಆದರೆ ಅದಾದದ್ದು ಏನನ್ನೋ ಮಾಡುತ್ತಿರುವ ಸಂದರ್ಭದಲ್ಲಿ ಹೊರತು, ಏನೂ ಮಾಡದೆ ಸುಮ್ಮನಿರುವಾಗ ಅಲ್ಲವಲ್ಲ! ಹೊಲದಲ್ಲಿ ಅಥವಾ ಹಣ್ಣಿನ ತೋಟದಲ್ಲಿ ಕೆಲಸ ಮಾಡುವ ಕೃಷಿಕರು ಅಥವಾ ಮನೆಯಲ್ಲಿ ಅಡುಗೆ ಮಾಡುವ ಗೃಹಿಣಿಯರು ಕೂಡ ತಮ್ಮ ಸೃಜನಶೀಲ ಗುಣದಿಂದ ಏನನ್ನೋ ಮಾಡುತ್ತಿರುವಾಗ ಮತ್ತೇನನ್ನೋ ಕಂಡುಕೊಂಡು ಲೋಕಕ್ಕೆ ಹತ್ತು ಹಲವು ಹೊಸದನ್ನು ಕೊಟ್ಟಿದ್ದಾರೆ. ಎಷ್ಟೋ ಹೊಸ ವಿಚಾರಗಳ, ಕ್ರಿಯಾವಿಧಾನಗಳ ಮತ್ತು ಹೊಸ ಪರಿಕರಗಳ ರೂವಾರಿಗಳಾಗಿದ್ದಾರೆ.

ಗತ ಕಾಲದ ಬಹಳಷ್ಟು ವಿಜ್ಞಾನಿಗಳು ಮತ್ತು ಲೇಖಕರು ಶಾಲೆ ಕಾಲೇಜುಗಳ ಉತ್ತನ್ನಗಳಲ್ಲ. ಬಹಳ ಮಂದಿ ಶಾಲೆ ಕಾಲೇಜನ್ನು ಅರ್ಧದಲ್ಲಿ ಬಿಟ್ಟವರು! ಅಂಥವರು ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ಅವರ ಬದುಕಿನಿಂದ ನಾವು ಕಂಡುಕೊಳ್ಳಬಹುದಾದ ಒಂದು ಮುಖ್ಯ ವಿಚಾರವೆಂದರೆ, ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕಿಂತ ತರಗತಿಯ ಹೊರಗೆ ಕುಳಿತುಕೊಳ್ಳುವುದು ಸೃಜನಶೀಲತೆಗೆ ಹೆಚ್ಚು ಉತ್ತೇಜಕ! ಭವಿಷ್ಯದ ಶಾಲೆಗಳು ಇದನ್ನು ಅರ್ಥ ಮಾಡಿಕೊಳ್ಳಬಹುದು. ಗೋಡೆಗಳ ನಡುವಿನ ಕಲಿಕೆಗಿಂತ ಗೋಡೆಗಳ ಹೊರಗಿನ ಕಲಿಕೆ ಹೆಚ್ಚು ಸೃಜನಶೀಲವಾದುದು ಎಂಬದನ್ನು ಕಂಡುಕೊಳ್ಳಬಹುದು.