ಹೊಸ ವರ್ಷದಲ್ಲಿ ಮರ ಚಿಗುರಿದಾಗ
ನೋಡುವುದಕ್ಕೆ ತುಂಬ ಹಗುರಾಗಿ ಕಂಡರೂ
ಆಗಿರುವ ಕೆಲಸ ಸುಲಭದ್ದಲ್ಲ.
ಮೊದಲು ಇದ್ದುದನ್ನೆಲ್ಲ ಬುಡಮಟ್ಟ
ಕಿತ್ತು ಎಸೆಯುವುದು
ಮತ್ತೆ ಒಳಗಿಂದ ಮೂಲಾಧಾರ ಒತ್ತಿಕೊಂಡು
ಒಡಮೂಡುವುದು
ತುಂಬ ನೋವಿನ ಕೆಲಸ.

ನಿನಗೆ ಕಾಣುವುದಿಲ್ಲ, ಬರೀ ಕಣ್ಣಿಗೆ ; ಅಥವ
ಕೇಳುವುದಿಲ್ಲ ಕಿವಿಗೆ ಚಕ್ರಗಳ ಚಲನೆ
ಮತ್ತೆ ಆಕ್ರಂದನ,
ನಿನಗನಿಸುತ್ತದೆ ಇದು ಸಹಜ ಸಲೀಸು
ಮತ್ತೆ ದೈನಂದಿನ.

ನಾವು ನೋಡುವುದಿಲ್ಲ ಯಾವುದನ್ನೂ
ಒಳಗಿನಿಂದ ;
ಬೇರಿಂದ ಮೇಲಕ್ಕೆ ಪುಟಿವ ಜೀವರಸ
ಜುಳು ಜುಳು ನಾದ ಹೇಗೆ ಅರಳುತ್ತದೆ
ಕೊಂಬೆ-ರೆಂಬೆಗಳ ಪ್ರಾಸ-ಛಂದಗಳಲ್ಲಿ
ನಿನಗೆ ತಿಳಿಯುವುದಿಲ್ಲ.
ಚಿಗುರುವುದು, ಎಲೆಯಾಗಿ ತೂಗುವುದು,
ಮೊಗ್ಗಾಗಿ ಬಿರಿಯುವುದು, ಹೂವಾಗಿ, ಕಾಯಾಗಿ
ಹಣ್ಣಾಗಿ ಬೀಜವಾಗುವುದು
ನಿರಂತರ ಸೃಷ್ಟಿ.
ಸೃಷ್ಟಿ ಎಂದರೆ, ಹೊರುವ, ಹೆರುವ,
ಅಸ್ತಿತ್ವವನ್ನೆ ಕೊರೆದು ಹೊರ ಬರುವ
ಹೂಟ
ನಿತ್ಯವೂ ಹೊಸತಾಗುವುದಕ್ಕೆ
ನಿಸರ್ಗ ಕಟ್ಟಿದ ಆಟ.