ಹೊಸ ವರ್ಷದ ಮುಂಜಾನೆ
ಮನೆಯಂಗಳಕ್ಕೆ ಹಾರಿ ಬಂದು ಕೂತ
ಯುಗಾದಿಯ ಕೊಕ್ಕಿನಲ್ಲಿ
ಚೈತ್ರದ ಚಿಗುರಿರಲಿಲ್ಲ
ಚೂಪಾದ ಚೂರಿಯಿತ್ತು.

ಹೊಸ ವರ್ಷದ ಮುಂಬೆಳಗಿನಲ್ಲಿ
ಕಾರಿರುಳ ದುಃಸ್ವಪ್ನದಂತೆ ಕೂತ
ಯುಗಾದಿಯ ಕಣ್ಣುಗಳಲ್ಲಿ
ಅರಳುವ ಹೂವಿರಲಿಲ್ಲ
ಸಿಡಿಮದ್ದಿನ ಕಿಡಿ ಇತ್ತು.

ಮನೆಯಂಗಳದಲ್ಲಿ ಭಗ್ನಾವಶೇಷಗಳ
ರಾಶಿಯಂತೆ ಕೂತ
ಯುಗಾದಿಯ ರೆಕ್ಕೆಗಳ ಮೇಲೆ
ವಸಂತದ ಬಣ್ಣಗಳಿರಲಿಲ್ಲ
ರಕ್ತದ ಕಲೆಯಿತ್ತು.

ಅದರ ಕೊರಳಲ್ಲಿ
ಗಿಳಿ ಕೋಗಿಲೆ ಕಾಜಾಣಗಳ
ಇಂಚರವಿರಲಿಲ್ಲ
ಅಮಾಯಕರ ಆಕ್ರಂದನವಿತ್ತು.
ಅದರ ಸುತ್ತಲೂ ಜಾರುವ ಮಾಗಿಯ ಮಂಜಿನ
ಧೂಪವಿರಲಿಲ್ಲ
ಶ್ಮಶಾನಗಳ ಹೊಗೆಯಿತ್ತು.