ಜನನ: ೩.೧೧.೧೯೩೫-ಹೊಸನಗರದಲ್ಲಿ ಶಿವಮೊಗ್ಗ ಜಿಲ್ಲೆ.

ಮನೆತನ: ತಂದೆ ಕೆ. ನಾಗಪ್ಪಯ್ಯನವರು ಹೊಟೆಲ್ ಉದ್ಯಮಿ. ತಾಯಿ ಮೂಕಾಂಬಿಕಮ್ಮ. ಕಲಾಸಕ್ತರ ಮನೆತನ.

ಗುರುಪರಂಪರೆ: ಉಡುಪಿ ಪ್ರಭಾಕರರಾಯರಲ್ಲಿ ಪ್ರಾರಂಭಿಕ ಶಿಕ್ಷಣ. ಅನಂತರ ಚಕ್ರಕೋಡಿ ನಾರಾಯಣಶಾಸ್ತ್ರಿಯವರಲ್ಲಿ ಉನ್ನತ ಶಿಕ್ಷಣ, ಹರಿಕಥೆಯಲ್ಲೂ ಸಾಕಷ್ಟು ಪರಿಶ್ರಮ.

ಸಾಧನೆ: ಮನೆಯಲ್ಲಿ ನಡೆಯುತ್ತಿದ್ದ ಭಜನೆ-ಸಂಕೀರ್ತನೆಗಳೇ ಇವರಿಗೆ ಕಲಾರಂಗಕ್ಕೆ ಧುಮುಕಲು ಸ್ಪೂರ್ತಿ ಸ್ವಂತ ಪರಿಶ್ರಮದಿಮದ ಹಾರ್ಮೋನಿಯಂ ನುಡಿಸಲು ಅಭ್ಯಾಸ ಮಾಡಿ ಅನೇಕ ಹರಿಕಥಾ ಕಾರ್ಯಕ್ರಮಗಳಿಗೆ ಪಕ್ಕವಾದ್ಯ ನುಡಿಸಿರುತ್ತಾರೆ.ಜೊತೆಗೆ ತಬಲಾ, ಕೊಳಲು ವಾದನದಲ್ಲಿ ಪರಿಶ್ರಮವಿದ್ದು, ಇದು ಇವರ ಭಕ್ತಿ ಸಂಗೀತ, ಸುಗಮ ಸಂಗೀತದ ಕಡೆ ಮನಸ್ಸು ಕೊಡಲು ಹಾದಿಯಾಯಿತು. ಕುವೆಂಪು, ಬೇಂದ್ರೆ, ಅಡಿಗ ಮುಂತಾದವರ ಕವನಗಳನ್ನು ಹಾಡುವ ಮೂಲಕ ಜನಮನ್ನಣೆ ಗಳಿಸಿ ಮುಂದೆ ಜಾನಪದ ಗೀತೆಗಳು ಶಿಶುನಾಳ ಶರೀಫರ ತತ್ವಪದಗಳನ್ನು ಹಾಡುವಲ್ಲಿ ಹೆಚ್ಚಿನ ಹೆಸರು ಮಾಡಿದವರು. ನಾಟಕ ಕಂಪೆನಿಗಳಲ್ಲೂ ಸಾಕಷ್ಟು ಕಾಲ ದುಡಿದಿದ್ದಾರೆ. ರಾಜ್ಯಾದ್ಯಂತ ಇವರ ಕಾರ್ಯಕ್ರಮಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆದಿವೆ. ಇವರು ಉತ್ತಮ ರಾಗ ಸಂಯೋಜಕರೂ ಕೂಡ. ಇವರು ಹಾಡಿರುವ ಕೆಲವೊಂದು ಧ್ವನಿ ಸುರುಳಿಗಳೂ ಹೊರಬಂದಿವೆ. ೨೦೦೪ರಲ್ಲಿ ಮಸ್ಕಾಟ್‌ನಲ್ಲಿ ಕನ್ನಡ ಕಾರ್ಯಕ್ರಮ ನಿಡಿದ್ದಾರೆ.

ಪ್ರಶಸ್ತಿ-ಪ್ರಧಾನ: ಹೊಸನಗರ ಕನ್ನಡ ಸಂಘ, ಹೊದಲಿ ಮಿತ್ರಮಂಡಲಿ, ಅಂಬುತೀರ್ಥ ಕಲಾರಸಿಕರು ಇವರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ೧೯೯೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೨-೯೩ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ೧೯೯೭ರಲ್ಲಿ ಭಾರ್ಗವ ಪ್ರಶಸ್ತಿ, ೨೦೦೦ದ ಅನನ್ಯ ಕಲಾಭಿಜ್ಞ, ೨೦೦೧ರ ಗಾನಕಲಾ ಪರಿಷತ್ತಿನ ಪುರಸ್ಕಾರ, ೨೦೦೫ರಲ್ಲಿ ಮೈಸೂರಿನ ಗುರುಕೃಪಾ ಕಲಾ ಕೇಂದ್ರದಿಂದ ಗೌರವ ಸನ್ಮಾನ, ೨೦೦೩ರಲ್ಲಿ ಸಂತ ಶಿಶುನಾಳ ಶರೀಫರ ಪ್ರಶಸ್ತಿಗೆ ಭಾಜನರಾಗಿದ್ದಾರೆ.