ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ೦೩.೧೧.೧೯೩೫ರಂದು ಗರ್ತಿಕೆರೆ ರಾಘಣ್ಣ ಹುಟ್ಟಿದ್ದು. ತಂದೆ ಕೆ. ನಾಗಪ್ಪನವರು ಹೊಸನಗರದಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದರು. ತಾಯಿ ಮೂಕಾಂಬಿಕಮ್ಮ ಸಂಗೀತಾಸಕ್ತೆ. ತಮ್ಮ ಮನೆಯ ಉಪ್ಪರಿಗೆಯಲ್ಲೇ ರಾಮಮಂದಿರವೊಂದನ್ನು ನಿರ್ಮಿಸಿದ್ದರು. ಅಲ್ಲಿ ನಿತ್ಯವೂ ಭಜನೆ, ಶನಿವಾರಗಳಂದು ವಿಶೇಷ ಭಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇಷ್ಟೇ ಅಲ್ಲದೇ ಶ್ರೀ ರಾಮನವಮಿ ಹಾಗೂ ನವರಾತ್ರಿಗಳಲ್ಲಿ ಎಂಟು ದಿನಗಳು ಬೀದಿ ಉತ್ಸವ ಹಾಗೂ ನವಮಿಯಂದು ರಥೋತ್ಸವವನ್ನು ರಾಘಣ್ಣನವರ ತಂದೆ ನಡೆಸುತ್ತಿದ್ದರು.

ಹೊಸಮನೆ ಶೇಷಗಿರಿರಾಯರು ಹಾರ್ಮೋನಿಯಂನೊಂದಿಗೆ ಭಜನೆ ಹೇಳಿಕೊಡುತ್ತಿದ್ದರು. ತಬಲಾ ಕೃಷ್ಣಚಾರ್ಯರು ಉತ್ತಮ ಗಾಯಕರೂ ರಂಗನಟರೂ ಆಗಿದ್ದು ಅವರ ವಾಸ್ತವ್ಯ ರಾಘಣ್ಣನ ಮನೆಯಲ್ಲೇ. ಅಷ್ಟೇ ಅಲ್ಲ ಹೊಸನಗರಕ್ಕೆ ಬರುತ್ತಿದ್ದ ಕಲಾವಿದರೆಲ್ಲರಿಗೂ ಇವರ ಮನೆಯಲ್ಲೇ ವಾಸ್ತವ್ಯ, ಊಟೋಪಚಾರ. ಉಡುಪಿ ಪ್ರಭಾಕರರಾಯರು, ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು, ಸುಬ್ಬಯ್ಯ ಹರಿದಾಸರು, ವಾಗೀಶ ಚನ್ನಬಸವಪ್ಪನವರು, ಹರಿದಾಸ ಶೃಂಗೇಶ್ವರ ಶಾಸ್ತ್ರಿಗಳು, ಬಿ.ಕೆ.ಎನ್‌. ಮೂರ್ತಿ ಮುಂತಾದ ವಿದ್ವಾಂಸರುಗಳ ಸಂಗೀತ ಕಾರ್ಯಕ್ರಮ ರಾಘಣ್ಣನ ಮನೆಯಲ್ಲಿ ಆಗಾಗ ನಡೆಯುತ್ತಿತ್ತು. ಭಜನೆ ಮಾಡದಿದ್ರೆ ಊಟ ಹಾಕೋಲ್ಲ ಎನ್ನುವ ಹಿರಿಯರ ಆಗ್ರಹ ಒತ್ತಾಯಪೂರ್ವಕವಾಗಿ ಕಿರಿಯರನ್ನು ಭಜನೆಗೆ ತೊಡಗಿಸುವಲ್ಲಿ ಯಶಸ್ವಿಯಾಯಿತು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ರಾಘಣ್ಣನಿಗೆ ಅವರ ಮನೆಯೇ ಮೊದಲ ಮತ್ತು ನಂತರದ ಸಂಗೀತ ಶಾಲೆಯಾಯಿತು. ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡದಿದ್ದರೂ ರಾಘಣ್ಣನಿಗೆ ಶಾಸ್ತ್ರೋಕ್ತವಾದ ಸಂಗೀತ ಕೇಳುವ ಶ್ರದ್ಧೆ, ಹಾಡುವ ಹುಚ್ಚು ಹಿಡಿಯಿತು.

ಯಾರಿಂದಲೂ ನೇರವಾಗಿ ಸಂಗೀತಾಭ್ಯಾಸ ನಡೆಸದ, ಆದರೆ ತಮ್ಮ ಮನೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಕಲಾವಿದರ ಹಾಡುಗಾರಿಕೆಯ ಭಾವ, ಪದ ವಿಂಗಡನೆ, ಕೃತಿಗಳ ಆಯ್ಕೆ ಇವೆಲ್ಲವುಗಳ ಪ್ರಭಾವದಿಂಧ ರಾಘಣ್ಣ ಕಲಾವಿದರಾಗಿ ರೂಪುಗೊಳ್ಳತೊಡಗಿದರು. ತಮ್ಮ ಹನ್ನೆರಡನೇ ವಯಸ್ಸಿನಲ್ಲೇ ಭಜನೆ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ನುಡಿಸಲು ಪ್ರಾರಂಭಿಸಿದರು. ಹರಿಕಥೆ ದಾಸರಾಗಿದ್ದ ಸುರಳಿ ಸುಬ್ಬಯ್ಯನವರಿಗೆ ಹಾರ್ಮೋನಿಯಂ ನುಡಿಸಲು ಅಂದು ಆರಂಭಿಸಿದ ರಾಘಣ್ಣನವರ ಸಂಗೀತ ಕಾಯಕ ಏಳು ಬೀಳುಗಳೊಂದಿಗೆ ಇಲ್ಲಿಯವರೆಗೂ ನಿರಂತರವಾಗಿ ಸಾಗಿ ಬಂದಿದೆ. ಹಾಡುವವರಿಗೆಲ್ಲ ಹಾರ್ಮೋನಿಯಂ ಸಾಥಿ ನೀಡುವ ಅನಿವಾರ್ಯತೆ ರಾಘಣ್ಣನಿಗೆ ಉತ್ತರಾದಿ, ದಕ್ಷಣಾದಿ, ಜನಪದಾದಿಗಳನ್ನು ಕಲಿಸಿದೆ.

ರಾಘಣ್ಣನವರ ಶ್ರೀಮಂತ ತಂದೆ ನಾಗಪ್ಪಯ್ಯನವರು ವ್ಯವಹಾರದಲ್ಲಿ ಸೋಲುಂಡು ಹೀನದೆಸೆಗೆ ಬರುವಂತಾಯಿತು. ಅಪ್ಪನ ಬಡತನದ ಬದುಕಿನ ಹಾವು, ಏಣಿ ಆಟದಲ್ಲಿ ಸಂಗೀತ ಕಲಿಯುವುದಿರಲಿ ವಿದ್ಯಾಭ್ಯಾಸ ಮಾಡುವುದೇ ಕಷ್ಟವಾಯಿತು. ಹಾಗಾಗಿ ಆಗಿನ ಫೋರ್ತ್‌ಫಾರಂಗೆ ಅಂದರೆ ಈಗಿನ ಒಂಬತ್ತನೆ ತರಗತಿಗೆ ರಾಘಣ್ಣ ಮಂಗಳ ಹಾಡಬೇಕಾಯಿತು.

ರಾಘಣ್ಣನವರ ಸೋದರಮಾವ ರಘುರಾಮ ಅಡಿಗರ ಮನೆ ಗರ್ತಿಕೆರೆಯಲ್ಲಿತ್ತು. ಆ ಹಳ್ಳಿಗೇ ಅವರದೇ ಮೊದಲ ಮನೆ. ಇಡೀ ಕುಟುಂಬ ಗರ್ತಿಕೆರೆಗೆ ಬಂದದ್ದು ರಾಘಣ್ಣನಿಗೆ ೧೫ ವರ್ಷವಾಗಿದ್ದಾಗ ೧೯೫೫ನೇ ಇಸವಿ ತಂದೆ ಸಾವನ್ನಪ್ಪಿದರು. ಮುಂದೆ ರಾಘಣ್ಣನ ಸೋದರಮಾವನೇ ಇಡೀ ಕುಟುಂಬಕ್ಕೆ ಆಸರೆ. ರಾಘಣ್ಣ ೨೦ನೇ ವಯಸ್ಸಿನಲ್ಲಿ ೧೯೫೬ ಜೂನ್‌ ೨೧ ಸೋದರಮಾವನ ಮಗಳು ಮಹಾಲಕ್ಷ್ಮಿಯನ್ನು ವಿವಾಹವಾದರು. ರಾಘಣ್ಣನಿಗೆ ನಾಲ್ಕು ಹೆಣ್ಣುಮಕ್ಕಳು ಇಬ್ಬರು ಗಂಡು ಮಕ್ಕಳು. ರಾಘಣ್ಣ ಬದುಕು ಕಟ್ಟಲು ಮಾಡದ ಕಸುಬಿಲ್ಲ. ನಾಟಕಕ್ಕೆ ಸಂಗೀತ ನಿರ್ದೇಶನ, ಗೀತರಚನೆ, ಹಾರ್ಮೋನಿಯಂ ವಾದನ, ಮೇಕಪ್‌ಮ್ಯಾನ್‌, ಹರಿಕಥೆ, ತಬಲಾವಾದನ, ಕೊಳಲು ವಾದನ… ಹೀಗೆ ಎಲ್ಲೆಲ್ಲಾ ಸುತ್ತಾಡಿ ಕೊನೆಗೆ ಸೈಕಲ್‌ ಶಾಪ್‌ ಇಟ್ಟಿದ್ದೂ ಇದೆ. ಚಕ್ರಕ್ಕೆ ಗಾಳಿ ತುಂಬಿದ್ದೂ ಲಯಬದ್ಧವಾಯಿತು. ರಾಘಣ್ಣ ಪ್ರಚಾರ ಮಾಧ್ಯಮಗಳಿಂದ ದೂರವಾಗಿ ಉಳಿದವರು. ಕಾಲ್ನಡಿಗೆ, ಎತ್ತಿನಗಾಡಿ, ಬಸ್ಸುಗಳಲ್ಲಿ ಸಂಚರಿಸಿ, ಹೆಗಲಮೇಲೆ ಹಾರ್ಮೋನಿಯಂ ಪೆಟ್ಟಿಗೆ ಹೊತ್ತುಕೊಂಡು ಹಳ್ಳಿಗಳ ಮೂಲೆಮೂಲೆಗಳಲ್ಲೂ ಸುಗಮಸಂಗೀತ ಹಾಡುಮ ಮೂಲಕ ಕಳೆದ ಐದು ದಶಕಗಳಿಗಿಂತ ಹೆಚ್ಚುಕಾಲಿ ಸದ್ದಿಲ್ಲದ ಸಂಸ್ಕೃತಿಯ ಕ್ರಾಂತಿಯನ್ನು ರಾಘಣ್ಣ ಮಾಡಿದ್ದಾರೆ.

ಇಂತಹ ಎಷ್ಟೋ ಕಾರ್ಯಕ್ರಮಗಳನ್ನು ರಾಘಣ್ಣ ನೀಡಿದ್ದಾರೆ. ಸಂಭಾವಣೆ ನೀಡದ ಬಗ್ಗೆ ಎಳ್ಳಷ್ಟು ಬೇಸರ ಪಟ್ಟುಕೊಳ್ಳಲಿಲ್ಲ. ತಮ್ಮ ಶಕ್ತಿ ಇರುವುದೇ ಜನರ ಪ್ರೀತಿಯಲ್ಲಿ ಎಂಬುದು ರಾಘಣ್ಣನ ನಂಬಿಕೆ. ನನಗೆ ಹೃದಯಘಾತವಾದಾಗ, ಕಣ್ಣುಗಳ ಶಸ್ತ್ರಚಿಕಿತ್ಸೆಯಾದಾಗ, ಮಕ್ಕಳ ಮದುವೆ ಮಾಡುವಾಗ ಜನ ಸಹಾಯಹಸ್ತ ಚಾಚಿ ಪ್ರೀತಿ ತೋರಿದ್ದಾರೆ. ಆ ಪ್ರೀತಿಗೆ ನಾನು ಏನು ತಾನೆ ಕೊಟ್ಟೇನು, ಎಂದು ಮುಗ್ಧತೆಯಿಂದ ರಾಘಣ್ಣ ಪ್ರಶ್ನೆ ಹಾಕುತ್ತಾರೆ. ಕೇವಲ ಹಾಡುಗಾರನಾಗಿ ಮಾತ್ರವಲ್ಲ ಹೃದಯವಂತಿಕೆಯಲ್ಲೂ ರಾಘಣ್ಣ ಸಾಟಿ ಇಲ್ಲದ ವ್ಯಕ್ತಿ.

೧೯೭೨ರಲ್ಲಿ ಭಾರತ ಸರಕಾರದ ಸಂಗೀತ ನಾಟಕ ಅಕಾಡೆಮಿಗಾಗಿ ರಾಜ್ಯಾದ್ಯಂತ ಪ್ರವಾಸ. ರಾಜ್ಯ ಸರ್ಕಾರದ ವಾರ್ತಾ ಇಲಾಖೆ, ಕುಟುಂಬ ಕಲ್ಯಾಣ, ವಯಸ್ಕರ ಶಿಕ್ಷಣ, ನೀರಾವರಿ ಮುಂತಾದ ಇಲಾಖಾ ಪ್ರಚಾರ ಕಾರ್ಯಗಳಲ್ಲಿ ಹಾಡುಗಾರರಾಗಿ ಇಪ್ಪತ್ತು ವರ್ಷಗಳ ಸತತ ಸೇವೆ.

೧೯೫೨ರಲ್ಲಿ ಇವರು ಕಾರ್ಯಕ್ರಮ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಒಂದು ರೂಪಾಯಿ. ಈಗಲೂ ಇವರು ಕಾರ್ಯಕ್ರಮಕ್ಕೆ ಇಂತಿಷ್ಟು ಸಂಭಾವನೆ ಎಂದು ನಿಗದಿಪಡಿಸುವುದಿಲ್ಲ. ಕೊಟ್ಟಷ್ಟನ್ನು ಸಂತೋಷದಿಂದ ಸ್ವೀಕರಿಸುವ ಹೃದಯವಂತಿಕೆ ರಾಘಣ್ಣನವರದ್ದು.

೧೯೯೩ರಲ್ಲಿ ರಾಘಣ್ಣನಿಗೆ ಲಘು ಹೃದಯಘಾತವಾಯಿತು. ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆಘಾತ! ದೃಷ್ಟಿ ಮಂಕಾದದ್ದು.

೧೯೯೪ರಲ್ಲಿ ಎರಡೂ ಕಣ್ಣುಗಳ ಆಪರೇಷನ್‌. ವಿಶ್ರಾಂತಿ ಎಂದು ರಾಘಣ್ಣ ತಮ್ಮ ಜೀವನದಲ್ಲಿ ಕಂಡಿದ್ದು ಈಎರಡು ವರ್ಷಗಳಲ್ಲೇ.

ಬೆಂಗಳೂರಿನ ಜನಕ್ಕೆ ರಾಘಣ್ಣನ ಪರಿಚಯವಾದದ್ದು ೧೯೯೩ರಲ್ಲಿ. ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸುಗಮಸಂಗೀತಗಾರರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜಿ.ವಿ. ಅತ್ರಿ ಹಮ್ಮಿಕೊಂಡಿದ್ದರು. ಅನಿವಾರ್ಯ ಕಾರಣಗಳಿಂದ ರಾಘಣ್ಣ ಬರಲಾಗಲಿಲ್ಲ. ಅದೇ ವರ್ಷ ಸಂಗೀತ ಸಮ್ಮೇಳನ ನಡೆಸಿದ ಅತ್ರಿ ರಾಘಣ್ಣನವರನ್ನು ಆಹ್ವಾನಿಸಿ ಸುಮರು ಅರ್ಧ ತಾಸು ಹಾಡಲು ಅವಕಾಶ ಮಾಡಿಕೊಟ್ಟರು. ಮೈಸೂರು ಅನಂತ ಸ್ವಾಮಿ, ಸಿ. ಅಶ್ವಥ್‌, ಜಿ.ಎಸ್‌. ಶಿವರುದ್ರಪ್ಪ ಮುಂತಾದ ದಿಗ್ಗಜರಿಗೆ ರಾಘಣ್ಣ ಗಾಯನದ ಪರಿಚಯ ಆದದ್ದು ಆ ಸಂದರ್ಭದಲ್ಲಿ. ಅಂದು ಅನಂತಸ್ವಾಮಿಯವರು ಹೇಳಿದ ರಾಘಣ್ಣ ಎಂಬ ಈ ಕಲಾವಿದ ಹಾಡಿದ ಈ ಭಾವಗೀತೆಗಳನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ. ಎಂಥಹ ಏರಿಳಿತ, ಗೀತೆಯ ಭಾವಗಳನ್ನು ಅಭಿವ್ಯಕ್ತಪಡಿಸುವ ರೀತಿಯೇ ಮೋಹಕ.

ಇದಾದ ನಂತರ ೧೯೯೪ರಲ್ಲಿ ರಾಘಣ್ಣನವರಿಗೆ ದೃಷ್ಟಿ ಮಂಕಾದ ಸಂದರ್ಭ. ಎನ್‌.ಎಸ್‌. ಲಕ್ಷ್ಮೀನಾರಾಯಣಭಟ್ಟರ ನೇತೃತ್ವದಲ್ಲಿ ಕಲಾವಿದರಾದ ಎಸ್‌.ಭಾಲಿ, ಎನ್‌.ಎಸ್‌. ಪ್ರಸಾದ್‌ ಮುಂತಾದವರೆಲ್ಲಾ ಸೇರಿ ರಾಘಣ್ಣ ರಾಗ ಸಂಯೋಜಿಸಿದ ಲಕ್ಷ್ಮೀನಾರಾಯಣಭಟ್ಟರ ಕವಿತೆಗಳನ್ನೊಳಗೊಂಡ ಅಭಿನಂದನ ಎಂಬ ಧ್ವನಿಸುರುಳಿಯನ್ನು ಲಹರಿ ಸಂಸ್ಥೆಯಿಂದ ಹೊರತಂದರು. ಅನಂತಸ್ವಾಮಿ, ಸಿ. ಅಶ್ವಥ್‌, ನರಸಿಂಹ ನಾಯಕ್‌, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲ ಪ್ರಕಾಶ್‌, ರಾಘಣ್ಣನ ಮಗಳು ಶ್ರೀದೇವಿ ಇದರಲ್ಲಿ ಹಾಡಿದ್ದಾರೆ. ರಮ್ಯ ಕಲ್ಚರಲ್‌ ಅಕಾಡೆಮಿ ಸಮಾರಂಭ ಏರ್ಪಡಿಸಿ, ಧ್ವನಿಸುರುಳಿ ಬಿಡುಗಡೆ ಮಾಡಿ, ಸುಮರು ೩೦ ಸಾವಿರ ರೂ.ಗಳ ನಿಧಿ ಸಂಗ್ರಹಿಸಿ ಸಮರ್ಪಿಸಿತು.

ಮುಂದೆ ಹೊಂಬಾಳೆ ಪ್ರತಿಭಾರಂಗ, ರಮ್ಯ ಕಲ್ಚರಲ್‌ ಅಕಾಡೆಮಿ, ಸಾಧನಾ, ಸಂಗೀತಗಂಗಾ, ಉಪಾಸನಾ, ಆದರ್ಶ ಮುಂತಾದ ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಹಾಡಲು ರಾಘಣ್ಣನವರನ್ನು ಆಹ್ವಾನಿಸಿ, ಸನ್ಮಾನಿಸಿ, ಅಭಿನಂದಿಸಿ ಈ ಹಿರಿಯ ಕಲಾವಿದರಿಗೆ ಗೌರವ ಸೂಚಿಸಿದ್ದಾರೆ.

ಎಪ್ಪತ್ತರ ಅಂಚಿನ ರಾಘಣ್ಣ ಇಂದಿಗೂ ಲವಲವಿಕೆಯಿಂದ  ಇದ್ದಾರೆ. ವೇದಿಕೆಯೇರಿ ಹಾಡಲು ಶುರುಮಾಡಿದರೆ ರಾಘಣ್ಣನ ಶಾರೀರದ ಗಟ್ಟಿತನ ಅವರ ಶರೀರದ ಮುದಿತನವನ್ನು ಮರೆಮಾಚಿಬಿಡುತ್ತದೆ. ಶ್ರುತಿ, ತಾಳಗಳ ಮಿಲನದೊಡನೆ ಸೊಬಗಿನಿಂದ ಹಾಡುತ್ತಾ ಕೇಳುಗರ ಮೈನವಿರೇಳಿಸುತ್ತಾರೆ. ಹಾಡಲು ಅವರಿಗೆ ಪುಸ್ತಕದ ಅಗತ್ಯವೇ ಇರುವುದಿಲ್ಲ. ಕನ್ನಡ ಸಾಹಿತ್ಯಲೋಕದ ಸುಪ್ರಸಿದ್ಧರ ಸಹಸ್ರಾರು ಕವಿತೆಗಳು ಅವರ ನೆನಪಿನ ಭಂಡಾರದಲ್ಲೆ ಇದೆ. ರಾಘಣ್ಣ ಹಾಡಿರುವ, ರಾಗ ಸಂಯೋಜಿಸಿರುವ ಅನೇಕ ಧ್ವನಿಸುರುಳಿಗಳು ಹೊರಬಂದು ಅತ್ಯಂತ ಜನಪ್ರಿಯವಾಗಿವೆ.

ರಾಘಣ್ಣನವರ ಧ್ವನಿಯ ಕಸುಬಿಗೆ ತಲೆದೂಗದ ಸಂಗೀತ ಪ್ರೇಮಿಗಳೇ ಇಲ್ಲ. ಅವರ ಹಾಡುಗಾರಿಕೆ ಎಷ್ಟು ಶ್ರೀಮಂತವೊ, ವ್ಯಕ್ತಿತ್ವ ಅಷ್ಟೇ ಸರಳ. ಬಿರುದು, ಪದವಿಗಳು ಬೆಂಬೆತ್ತಿದರೂ ಅವುಗಳ ಯಾವ ಥಳುಕನ್ನೂ ಅಂಟಿಸಿಕೊಳ್ಳದ ಸಾದಾಸೀದ ಮುಗ್ಧ ಸ್ವಭಾವದ ಕಲಾವಿದ. ರಾಘಣ್ಣನವರಿಗಿರುವುದು ಪ್ರತಿಭೆಯೇ ಮಹಾ ಆಸ್ತಿ. ಇನ್ನೊಂದು ಜನರ ಪ್ರೀತಿ. ಜತೆಗೆ ಕಂತೆ ಕಂತೆ ಬಿರುದುಗಳು.

ಪ್ರಶಸ್ತಿ ಪುರಸ್ಕಾರಗಳು

೧೯೯೧ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ; ೧೯೯೩ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ ಪ್ರಶಸ್ತಿ; ೧೯೯೭ ಬೆಂಗಳೂರು ದಕ್ಷಿಣ ವೇದಿಕೆಯಿಂದ ಭಾರ್ಗವ ಪ್ರಶಸ್ತಿ;೨೦೦೦: ಅನನ್ಯ ಸಂಸ್ಥೆಯಿಂದ ಅನನ್ಯ ಕಲಾಭಿಜ್ಞಪ್ರಶಸ್ತಿ;೨೦೦೧:ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್‌ ಸದಸ್ಸಿನಲ್ಲಿ ಪುರಸ್ಕಾರ;೨೦೦೩: ಹೊಂಬಾಳೆಯ ಸ್ವರಮಂದಾರ ಪ್ರಶಸ್ತಿ; ೨೦೦೩: ಕರ್ನಾಟಕ ಸರ್ಕಾರ ನೀಡುವ ಸುಗಮಸಂಗೀತ ಕ್ಷೇತ್ರದ ಅತ್ಯುನ್ನತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ

ಇವಿಷ್ಟೇ ಅಲ್ಲದೆ ಹೊಸನಗರದ ಕನ್ನಡ ಸಂಘ, ತೀರ್ಥಹಳ್ಳಿಯ ಕನ್ನಡ ಸಾಹಿತ್ಯ ಪರಿಷತ್‌, ಶಿವಮೊಗ್ಗದ ಕರ್ನಾಟಕ ಸಂಘ, ಗದಗದ ಕಲಾಚೇತನ, ಶಿಕಾರಿಪುರದ ಸಾಹಿತ್ಯ ಪರಿಷತ್ತು, ಬೆಂಗಳೂರಿನ ಸಾಧನಾ ಸಂಗೀತ ಶಾಲೆ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಮುಂತಾದ ಹಲವಾರು ಸಂಸ್ಥೆಗಳು ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿವೆ.