ಒಂದೇ ಸಮನೆ ತಿನ್ನುವುದೆ ಕೆಲಸ ;
ಬೇರೆ ಕಡೆ ಬೇರೆ ಬೇರೆಯ ಕೆಲಸ ಮಾಡುವ
ಜನವ ಕಂಡರೆಂತೋ ಅಂತೆ,
ಇಗೊ ಇಲ್ಲಿ ತಿನ್ನುವುದೊಂದೆ ಚಿಂತೆ !

ನಿಮಿಷ ನಿಮಿಷಕ್ಕೂ ಘೇರಾಯಿಸುತ್ತಿದೆ
ಗಿರಾಕಿಗಳ ತಂಡ.
ತಿಂದವರು ಎದ್ದೆದ್ದು ಹೊರಗೆ ಹೋದಂತೆ
ಮತ್ತೊಂದು ಗುಂಪು ಧಾವಿಸುತ್ತಿದೆ ಒಳಗೆ,
ಮುಗಿವಿರದ ಸಂತೆ.

‘ಸರ್ವರಿ’ಗಾಗಿ ಕಾದು ಕಾತರಿಸಿ
ಕಪ್ಪಾದ ಮುಖ ಹಲವು ;
ಬಂದದ್ದನೆಲ್ಲ ಗಬಕ್ಕನೆ ನುಂಗಿ
ಮುಂದೆ ಬರುವುದ ನೆನೆದು ತುಟಿಗೆ ನಾಲಗೆ ಸವರಿ
ಕಾದಿರುವ ಮುಖ ಹಲವು.
ಉಳಿದದ್ದೆಲ್ಲ ಕಚಪಚನೆ
ಕಬಳಿಸುವ ಬಾಯಿ
ಗಾಜು ಲೋಟದ ತುದಿಗೆ ತುಟಿಯೊತ್ತಿ
ಹೀರುವ ಪೀಪಾಯಿ !

ಚದುರಿ ಬಿದ್ದಿದೆ ಮುಂದೆ ಮೇಜಿನ ಮೇಲೆ
ಗೆದ್ದರಾಜ್ಯದ ನಕ್ಷೆ :
ತಟ್ಟೆಬಟ್ಟಲುಗಳಲಿ ತಿಂದುಳಿಸಿದವಶೇಷ,
ಕೈತೊಳೆದ ಪ್ಲೇಟಿನಲಿ ಹಳದಿಯ ಜಿಡ್ಡು,
ಹತ್ತಾರು ಹಿತ್ತಾಳೆ ಲೋಟದ ಡ್ರಿಲ್ಲು ;
ಸಾವಿರ ತುಟಿಗೆ ಮುತ್ತಿಟ್ಟ ನುಣುಪು ಗಾಜಿನ ಕಪ್ಪು,
ನೂರಾರು ನಾಲಗೆಯಲ್ಲಿ ಹೊರಳಾಡಿ ಹೊರಬಂದ ಚಮಚ,
ಈಗ ಬಂದಿದೆ ನಿನಗೆ, ತೆಗೆದುಕೋ ಬೇಡ ಚಿಂತೆ ;
ವ್ಯಕ್ತಿತ್ವವಿದ್ದರಲ್ಲವೆ ಚಿಂತೆಯ ಪ್ರಶ್ನೆ-
ಇಲ್ಲಿ ಎಲ್ಲರೂ ತಿನ್ನುವ ಜನವೆ,
ಇಗೊ ಹಿಂದೆ ಇಗೊ ಮುಂದೆ
ಅಕ್ಕಪಕ್ಕಗಳಲ್ಲಿ ಒಂದೇ ಸಮನೆ ಮೇಯುವ ಮಂದೆ !

ಅವನವನ ತಟ್ಟೆಯಲಿ ಅವನವನು ಹೇಳಿದ್ದು-
ಪಂಚಾಮೃತವೆ ಇರಬೇಕು ನಿನಗೀಗ ಬಂದದ್ದು.
ಏನಾದರೇನಂತೆ, ತರಾತುರಿಯಲ್ಲಿ
ಸಾಗಲಿ ರೈಲು,
ಸಲ್ಲದು ಇಲ್ಲಿ ಮನೆಯ ಭೋಜನದ ಸಾವಧಾನದ ಶೈಲಿ.
ಬೆನ್ನಿನ ಹಿಂದೆ ಜಮಾಯಿಸಿ ಕಾದಿದ್ದಾರೆ ಜನ
ಮೈಲಿ ಮೈಲಿ,
ನೀ ಏಳದಿದ್ದರೆ ಬೇಗ, ಹೊಡೆದೆಬ್ಬಿಸುವ ಚಾಟಿಯಿದೆ
ಅವರ ಕಣ್ಣಲ್ಲಿ !

ಇನ್ನೇನು ಬಂದಿತು ‘ಬಿಲ್ಲು’-
ತೆಗೆದುಕೋ ಕೈಗೆ.
ಏಳು, ಅವನ ಋಣ ಅವನಿಗೆ ಸಲಿಸಿ
ಬಾ ಹೊರಗೆ.
ಎಲ್ಲ ಸರಿಯಾಗಿದೆಯೆ ನಿನ್ನೊಳಗೆ ?
ನೋಡಿಕೋ ಒಂದು ಸಲ.
ಏನು, ಹೆಸರೇನು, ನಿನ್ನದು ?
ಜೇಬಿನಲ್ಲಿರಬೇಕು ನಿನ್ನ ವಿಸಿಟಿಂಗ್ ಕಾರ್ಡು,
ಅಥವಾ ನೆನೆಸಿಕೋ ನಿನ್ನ ಮನೆಯ ಮುಂದಿನ ಬೋರ್ಡು.