ಅನುವಂಶಿಕವಾಗಿ ಯಕ್ಷಗಾನ, ಬಯಲಾಟಗಳಲ್ಲಿ ಪ್ರಸಿದ್ಧಿ ಪಡೆದ ಮನೆತನದಲ್ಲಿ ಜನಿಸಿದವರು ಹೆಚ್‌.ಪುಟ್ಟಾಚಾರ್ ಬಾಲ್ಯದಿಂದಲೂ ಸಂಗೀತಾಭಿರುಚಿ ಸಹಜವಾಗಿಯೇ ಮೈಗೂಡಿಸಿಕೊಂಡಿದ್ದ ಇವರು ತಮ್ಮ ಹತ್ತನೇ ವಯಸ್ಸಿನಿಂದಲೇ ನೃತ್ಯ ಮತ್ತು ಹಾಡಿಕೆಯ ಪರಿಚಯ ಹೊಂದಿದ್ದ ಕಾರಣ ಬಯಲಾಟದ ಕಾರ್ಯಕ್ರಮಗಳಲ್ಲಿ ಮದ್ಧಳೆ ನುಡಿಸಲಾರಂಭಿಸಿದರು. ಅದರಲ್ಲೂ ಪ್ರಸಿದ್ಧ ಆಂಜನೇಯ ವೇಷಧಾರಿ ಎನಿಸಿಕೊಂಡಿದ್ದ ಅವರ ತಂದೆ ಹೊನ್ನಾಚಾರ್ ಅವರ ಕಾರ್ಯಕ್ರಮಗಳಲ್ಲಿ ನುಡಿಸಿ ಹಸ್ತ ಲಾಘವವನ್ನು ಬೆಳೆಸಿಕೊಂಡರು.

ಮುಂದೆ ತಬಲಾ ವಾದನದಲ್ಲಿ ಆಸಕ್ತಿ ತಳೆದ ಪುಟ್ಟಾಚಾರ್ ಸುಪ್ರಸಿದ್ಧ ಗಾಯಕ ಡಿ. ಸುಬ್ಬರಾಮಯ್ಯನವರ ತಂದೆ ಶ್ರೀ ದಾನಪ್ಪನವರ ಶಿಷ್ಯ ಚಿಕ್ಕಣ್ಣನವರಲ್ಲಿ ಅಭ್ಯಾಸ ಮಾಡಿದರು. ಮಹಮದ್‌ ಪೀರ್ ಅವರ ನಾಟಕ ಕಂಪೆನಿಯಲ್ಲಿ ಕೆಲವು ಕಾಲ ತಬಲಾ ವಾದಕರಾಗಿ ಸೇವೆ ಸಲ್ಲಿಸಿದ ನಂತರ ಭೈರವಿ ಕೆಂಪೇಗೌಡರ ಶಿಷ್ಯ ಕೃಷ್ಣಮೂರ್ತಿ, ನಂದಿಮಠದ ಪುಟ್ಟಾಚಾರ್, ಫಾಲ್ಘಾಟ್‌ ಕುಂಜುಮಣಿ, ಕರ್ನೂಲು ವೆಂಕಟಾಚಲಯ್ಯ ಅವರುಗಳಲ್ಲಿ ಮೃದಂಗವನ್ನು  ಅಭ್ಯಾಸ ಮಾಡಿ ವಾದನ, ತಾಳ, ಲಯ, ಪಲ್ಲವಿಗಳಲ್ಲಿ ಹೆಚ್ಚಾದ ಪರಿಶ್ರಮ ಪಡೆದು ತಮ್ಮ ಕಲೆಯ ಸಿರಿಯನ್ನು ವೃದ್ಧಿಸಿಕೊಂಡರು.

ನಾಡಿನ ಎಲ್ಲಾ ಹಿರಿಯ ವಿದ್ವಾಂಸರಿಗೂ ಪಕ್ಕವಾದ್ಯ ನುಡಿಸಿದ ಕೀರ್ತಿ ಇವರದು. ಸಂಗೀತ ಪರೀಕ್ಷೆಗಳಲ್ಲಿ ತಾಳವಾದ್ಯಕ್ಕೊಂದು ಸ್ಥಾನಮಾನ ಗಳಿಸಿಕೊಟ್ಟು ಅದಕ್ಕೆ ಬೇಕಾದ ಪಠ್ಯ ವಸ್ತು ತಯಾರಿಕೆಗೂ ನೆರವಾದರು. ‘ಲಯವಾದ್ಯ ಧುರೀಣ’ ‘ಮೃದಂಗ ನಾಟ್ಯರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಪುಟ್ಟಾಚಾರ್ ೧೯೭೦-೭೧ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯಿಂದಲೂ ಪುರಸ್ಕೃತರಾದರು. ಲಯ ವಾದ್ಯಗಾರರ ಪಂಕ್ತಿಯಲ್ಲಿ ಅಗ್ರಸ್ಥಾನ ಗಳಿಸಿಕೊಂಡ ಮಹನೀಯರು.