ಹೋಮಿ ಭಾಭಾ ಆಧುನಿಕ ಭಾರತದ ವಿಜ್ಞಾನ ನಿರ್ಮಾಪಕರಲ್ಲಿ ಪ್ರಮುಖರು. ಸ್ವತಂತ್ರ ಭಾರತದ ವಿಜ್ಞಾನದ ಇತಿಹಾಸದಲ್ಲಿ ಅವರ ಪಾತ್ರ ಅತಿ ಹಿರಿದು. ನವಭಾರತದ ಅಣು ವಿಜ್ಞಾನದ ಶಿಲ್ಪಿ ಅವರು.

ಬಾಲ ವಿಜ್ಞಾನಿ

ಹೋಮಿ ಜಹಾಂಗೀರ್ ಭಾಭಾ ಹುಟ್ಟಿದ್ದು ೧೯೦೯ರ ಅಕ್ಟೋಬರ್ ೩೦ರಂದು; ಮುಂಬಯಿಯಲ್ಲಿ. ತಂದೆ ಜಹಾಂಗೀರ್ ಭಾಭಾ; ಆಕ್ಸ್‌ಫರ್ಡ್‌‌ನಲ್ಲಿ ಓದಿ, ಟಾಟಾ ಸಂಸ್ಥೆಯಲ್ಲಿದ್ದ ಖ್ಯಾತ ವಕೀಲರು. ತಾಯಿ ಮೆಹರಾನ; ಬಹು ಉದಾರಿಗಳೆಂದು ಹೆಸರು ಪಡೆದ ಪೆಟಿಟ್‌ವಂಶಕ್ಕೆ ಸೇರಿದವರು. ಇವರ ಅಜ್ಜ ಮೈಸೂರಿನ ವಿದ್ಯಾ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದರು.

ಚಿಕ್ಕಂದಿನಲ್ಲಿ ಭಾಭಾ ಸಾಕಷ್ಟು ನಿದ್ರೆ ಮಾಡುತ್ತಲೇ ಇರಲಿಲ್ಲವಂತೆ. ಇದರಿಂದ ತಂದೆ-ತಾಯಿಗೆ ಎಲ್ಲಿಲ್ಲದ ಕಳವಳ. ಅನೇಕ ವೈದ್ಯರು ಹುಡುಗನನ್ನು ಪರೀಕ್ಷಿಸಿದರು; ಪ್ರಶ್ನೆ ಬಗೆಹರಿಯಲಿಲ್ಲ. ಕೊನೆಗೆ ಖಚಿತವಾಗಿ ತಿಳಿದ ಸಂಗತಿ ಎಂದರೆ; “ಹುಡುಗನ ಆರೋಗ್ಯ ಚೆನ್ನಾಗಿದೆ. ವಿಚಾರ ಧಾರೆ ತಲೆಯಲ್ಲಿ ನಿರಂತರ ಬಹುಬೇಗ ಪ್ರವಹಿಸುತ್ತಿರುವುದರಿಂದ, ಅದೇ ವಯಸ್ಸಿನ ಇತರ ಮಕ್ಕಳಿಗಿಂತ ಅವನ ನಿದ್ರೆ ಕಡಿಮೆಯಾಗಿದೆ, ಗಾಬರಿಪಡಬೇಕಾದ ಅಗತ್ಯವಿಲ್ಲ.” ಅಂತೂ ಈ ಸಮಸ್ಯೆ ಕಾಲಕ್ರಮದಲ್ಲಿ ತಾನಾಗಿ ಪರಿಹಾರ ಕಂಡಿತು.

ವಿಜ್ಞಾನದತ್ತ ಭಾಭಾನ ಆಸಕ್ತಿ ಕುದುರುವಂತೆ ಆತನ ತಂದೆ ತಾಯಿ ಮುತುವರ್ಜಿ ವಹಿಸಿದರು. ಅಂತೆಯೇ ಉತ್ತಮ ವಿಜ್ಞಾನ ಪುಸ್ತಕಗಳನ್ನೊಳಗೊಂಡ ಪುಟ್ಟ ಗ್ರಂಥಾಲಯವೊಂದು ಭಾಭಾ ಪಾಲಿಗೆ ದಕ್ಕಿತು. ಪುಸ್ತಕ ಪ್ರಪಂಚದಲ್ಲಿ ಭಾಭಾ ತಲ್ಲೀನರಾಗತೊಡಗಿದರು. ಹೀಗೆ ಭಾಭಾ ಅವರ ವೈಜ್ಞಾನಿಕ ಜೀವನಕ್ಕೊಂದು ಭದ್ರ ತಳಹದಿ ಸಿಕ್ಕಿತು. ಐನ್‌ಸ್ಟೈನ್ (೧೮೭೯-೧೯೫೫) ಎಂಬುವವನು ಈ ಶತಮಾನದ ಬಹುದೊಡ್ಡ ವಿಜ್ಞಾನಿಗಳಲ್ಲಿ ಒಬ್ಬ. ಆತನ “ಸಾಪೇಕ್ಷವಾದ”ವನ್ನು ಅರ್ಥಮಾಡಿಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ಹದಿನೈದನೆಯ ವಯಸ್ಸಿಗೇ ಐನ್‌ಸ್ಟೈನ್‌ನ ಸಾಪೇಕ್ಷವಾದ ಕುರಿತ ಪುಸ್ತಕವನ್ನು ಓದಿ ಅರಗಿಸಿಕೊಳ್ಳುವಷ್ಟರ ಮಟ್ಟಿಗೆ ಭಾಭಾ ಪರಿಣತಿ ಪಡೆದಿದ್ದರಂತೆ.

ಬಾಲ್ಯದಿಂದಲೇ ಭಾಭಾ ಪ್ರಕೃತಿಪ್ರೇಮಿ. ಚಿತ್ರಕಲೆ, ಸಂಗೀತ, ಸಾಹಿತ್ಯದಲ್ಲಿ ಅವರಿಗೆ ವಿಶೇಷವಾದ ಆಸಕ್ತಿ. ಆದರೆ ಆಟಪಾಠಗಳಲ್ಲಿ ಅಂತಹ ಉತ್ಸಾಹ ಇರಲಿಲ್ಲ. ಗಹನ ವಿಷಯಗಳನ್ನೂ ಕಿವಿಗೊಟ್ಟು ಆಲಿಸುವ ಪ್ರವೃತ್ತಿ ಅವರದು. ಅಪಾರ ಪುಸ್ತಕ ಸಂಗ್ರಹ, ಧ್ವನಿಮುದ್ರಿಕೆಗಳು, ಸದಭಿರುಚಿಯ ಒತ್ತಾಸೆ-ಇವಲ್ಲದರ ಸದುಪಯೋಗವನ್ನು ಭಾಭಾ ಪಡೆದರು.

 

ಉತ್ತಮ ವಿಜ್ಞಾನ ಪುಸ್ತಕಗಳ ಪುಟ್ಟ ಗ್ರಂಥಾಲಯ ಬಾಬಾ ಪಾಲಿಗೆ ದಕ್ಕಿತು.

ಪುಸ್ತಕ ಸಂಗ್ರಹವಿದ್ದರೆ ಆಯಿತೆ? ಅದರ ಸದುಪಯೋಗ ತಾನೇ ಮುಖ್ಯ!

ಶಿಕ್ಷಣ, ಸಂಶೋಧನೆಯ ಪ್ರಾರಂಭ

ಭಾಭಾ ಮುಂಬಯಿಯ ಕಥೀಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆಗಳಲ್ಲಿ ಓದಿದರು. ಉತ್ತಮ ವಿದ್ಯಾರ್ಥಿಯೆಂದು ಎಲ್ಲರಿಂದ ಪ್ರಶಂಸೆಯ ಸುರಿಮಳೆ. ಅನೇಕ ಪಾರಿತೋಷಕಗಳನ್ನು ಪಡೆದ ಪ್ರತಿಭಾಶಾಲಿ ಎಂದು ಎಲ್ಲರಿಂದ ಮನ್ನಣೆ. ಇಂದಿನ ಈ ಚಿಗುರುವ ಸಸಿ ನಾಳಿನ ಫಲ ಬಿಡಲಿರುವ ಮರ!

ಹದಿನೈದನೆಯ ವರ್ಷದಲ್ಲಿ ಸೀನಿಯರ್ ಕೇಂಬ್ರಿಜ್‌ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಎಲಿಫಿನ್‌ಸ್ಟನ್‌ಕಾಲೇಜನ್ನು ಸೇರಿದರು ಭಾಭಾ. ಅನಂತರ ಮುಂಬಯಿಯ ರಾಯಲ್‌ಇನ್‌ಸ್ಟಿಟ್ಯೂಟ್‌ಆಫ್ ಸೈನ್ಸ್‌ನಲ್ಲಿ ಎರಡು ವರ್ಷಗಳ ಕಾಲ ಅವರ ವ್ಯಾಸಂಗ ಮುಂದುವರಿಯಿತು.

ಭೌತ ವಿಜ್ಞಾನವೆಂದರೆ ಭಾಭಾಗೆ ಬಲು ಆಸೆ. ಗಣಿತಶಾಸ್ತ್ರವೂ ಅವರ ಮೆಚ್ಚಿನ ವಿಷಯವಾಗಿತ್ತು. ಆದರೆ ಭಾಭಾ ಅವರ ತಂದೆಯ ನಿರ್ಧಾರ ಬೇರೆ ತೆರನಾಗಿತ್ತು. ತನ್ನ ಮಗ ಇಂಜಿನಿಯರಾಗಲಿ ಎಂಬುದು ಅವರ ಇಚ್ಛೆ. ತಂದೆಯ ಈ ನಿರ್ಧಾರಕ್ಕೆ ತಲೆಬಾಗಿ ಭಾಭಾ ಉನ್ನತ ವ್ಯಾಸಂಗಕ್ಕಾಗಿ ಕೇಂಬ್ರಿಜ್‌ತಲುಪಿದರು. ೧೯೩೦ರಲ್ಲಿ ಮೆಕ್ಯಾನಿಕಲ್‌ಇಂಜಿನಿಯರಿಂಗ್ ಟ್ರೈಪಾಸ್‌ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಅದೇ ವರ್ಷ ತಾತ್ವಿಕ ಭೌತಶಾಸ್ತ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸ ಪ್ರಾರಂಭಿಸಿದರು.

ಕಲೆಯ ಆರಾಧನೆ

ಭಾಭಾ ಕೇವಲ ಪುಸ್ತಕ ಕೀಟವಾಗಿರಲಿಲ್ಲ. ಅನೇಕ ವಿದ್ಯಾರ್ಥಿವೇತನಗಳನ್ನು ಗಿಟ್ಟಿಸಿಕೊಂಡಿದ್ದ, ವಿವಿಧ ಆಸಕ್ತಿಗಳನ್ನು ಮೈಗೂಡಿಸಿಕೊಂಡಿದ್ದ ವಿಚಾರಶೀಲ ವಿದ್ಯಾರ್ಥಿಯಾಗಿದ್ದರು ಭಾಭಾ. ಇಂಗ್ಲೆಂಡ್ ಮತ್ತು ಯುರೋಪಿನಲ್ಲಿದ್ದಾಗ ಬಿಡುವಿನ ಸಮಯ ದೊರೆತಾಗಲೆಲ್ಲಾ ಚಿತ್ರಗಳನ್ನು ಬಿಡಿಸುವುದರಲ್ಲಿ ಭಾಭಾ ಮಗ್ನರಾಗಿರುತ್ತಿದ್ದರು. ಅಲ್ಲಿಯ ಕಲಾ ಪ್ರದರ್ಶನಗಳಿಗೆ ಮತ್ತು ವಸ್ತು ಸಂಗ್ರಹಾಲಯಗಳಿಗೆ ಹಲವಾರು ಭಾರಿ ಭೇಟಿ ಕೊಡುತ್ತಿದ್ದರು. ಒಳ್ಳೆಯ ಸಂಗೀತ ಸಮಾರಂಭಗಳಲ್ಲಿ ಅವರು ತಪ್ಪದೆ ಹಾಜರಿರುತ್ತಿದ್ದರು. ಯುರೋಪಿನ ಪ್ರಖ್ಯಾತ ಅರಮನೆಗಳು ಮತ್ತು ಉದ್ಯಾನಗಳಲ್ಲಿ ಅವರು ಗಂಟೆಗಟ್ಟಲೆ ಕಾಲಕಳೆಯುತ್ತಿದ್ದರು. ವಿಜ್ಞಾನದ ಅಧ್ಯಯನದೊಡನೆ ಕಲೆಯು ಆರಾಧನೆ ಸಹ ಭಾಭಾ ಅವರ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಇಂಗ್ಲೆಂಡಿನ ಕೆಲವು ಕಲಾ ಭವನಗಳ ಗೋಡೆಗಳ ಮೇಲೆ ಇವರ ವರ್ಣಚಿತ್ರಗಳು ಇಂದಿಗೂ ಕಂಗೊಳಿಸುತ್ತಿವೆ.

ಮುಂದುವರಿದ ಸಂಶೋಧನೆ

೧೯೩೨ರಲ್ಲಿ ರೌಸ್‌ಬಾಲ್ ಪರ್ಯಟನ ವಿದ್ಯಾರ್ಥಿ ವೇತನ ದೊರಕಿ, ಎರಡು ವರ್ಷಗಳ ಈ ಅವಧಿಯಲ್ಲಿ ಭಾಭಾ ಅವರ ಜ್ಯೂರಿಚ್‌ನಲ್ಲಿ ಪೌಲಿ ಅವರೊಡನೆಯೂ ರೋಮಿನಲ್ಲಿ ಎನ್ರಿಕೊ ಫರ್ಮಿ ಅವರೊಡನೆಯೂ ಸಂಶೋಧನಾ ಕಾರ್ಯ ನಿರ್ವಹಿಸಿದರು. ೧೯೩೪ರಲ್ಲಿ ಐಸಾಕ್ ನ್ಯೂಟನ್ ವಿದ್ಯಾರ್ಥಿವೇತನವೂ, ೧೯೩೬ರಲ್ಲಿ ೧೮೫೧ರ ವಸ್ತು ಪ್ರದರ್ಶನ ವಿದ್ಯಾರ್ಥಿವೇತನವೂ ಅವರಿಗೆ ದೊರೆತವು.

ಹೀಗೆ ೧೯೪೦ರವರೆಗೆ ರುದರ‍್ಫರ್ಡ್‌, ಡಿರ್ಯಾಕ್‌, ನೀಲ್ಸ್‌ಬೋರ್, ಕಾಕ್ರಾಫ್ಟ್‌, ಬ್ಲ್ಯಾಕೆಟ್, ಹೈಟ್ಲರ್ ಮುಂತಾದ ಪ್ರಸಿದ್ಧ ವಿಜ್ಞಾನಿಗಳೊಡನೆ ನಿಕಟ ಸಂಬಂಧವನ್ನು ಪಡೆಯುವ ಅವಕಾಶ ಭಾಭಾ ಅವರಿಗೆ ಲಭಿಸಿತು. ಈ ಸಹವಾಸ ಅವರ ಸಂಶೋಧನೆ ಹಾಗೂ ಜೀವನ ವಿಧಾನದ ಮೇಲೆ ತುಂಬ ಪರಿಣಾಮ ಬೀರಿತೆನ್ನಬಹುದು.

ವಿಶ್ವಕಿರಣ ಅಧ್ಯಯನ

೧೯೩೭ರಲ್ಲಿ ಹೈಟ್ಲರ್ ಅವರೊಡನೆ ಸೇರಿ ವಿಶ್ವಕಿರಣದ ಸೋಪಾನಪಾತವಾದವನ್ನು ಭಾಭಾ ಮಂಡಿಸಿದರು. ಇದಕ್ಕೆ “ಭಾಭಾ-ಹೈಟ್ಲರ್ ಸೋಪಾನಪಾತ ತತ್ವ” ಎಂದು ಹೆಸರು. ಭೌತಶಾಸ್ತ್ರಕ್ಕೆ ಭಾಭಾ ಅವರ ವಿಶೇಷ ಕೊಡುಗೆ ಇದು. ಈ ಸಂಶೋಧನೆ ಭಾಭಾ ಅವರಿಗೆ ಅಪಾರ ಕೀರ್ತಿಯನ್ನು ತಂದಿತು. ಈ ತತ್ವ ವಿಶ್ವಕಿರಣಗಳಲ್ಲಿ ಎಲೆಕ್ಟ್ರಾನ್ ವೃಷ್ಟಿ ಉತ್ಪಾದನಾ ಕ್ರಿಯೆಯ ಬಗ್ಗೆ ವಿವರಣೆ ನೀಡುತ್ತದೆ.

ವಿಶ್ವಕಿರಣಗಳೆಂದರೆ ಭೂಮಿಗೆ ಎಲ್ಲ ಕಡೆಗಳಿಂದಲೂ ನಿರಂತರವಾಗಿ ಬರುತ್ತಿರುವ ಚೈತನ್ಯಪೂರಿತ ಕಣಗಳ ಧಾರೆ. ಇವುಗಳಲ್ಲಿ ಅತಿ ವೇಗವಾಗಿ ಚಲಿಸುವ ಪ್ರೋಟಾನು, ಎಲೆಕ್ಟ್ರಾನು ಮುಂತಾದ ಕಣಗಳೂ ತೀಕ್ಷ್ಣವಾದ ಗಾಮಾ ಕಿರಣಗಳೂ ಇರುತ್ತವೆ. ಇವು ಭೂವಾತಾವರಣದ ಪರಮಾಣುಗಳಿಗೆ ಡಿಕ್ಕಿ ಹೊಡೆದು ಹೊಸ ಕಣಗಳಿಗೆ ಕಾರಣವಾಗುತ್ತವೆ. ಭಾಭಾ ಅವರ ಈ ತತ್ವ ಪರಸ್ಪರ ವರ್ತನೆಯ ಕ್ರಮ ಹಾಗೂ ಪರಿಣಾಮಗಳನ್ನು ಸರಳ ಸುಂದರವಾಗಿ ವಿವರಿಸುತ್ತದೆ.

ವಿಶ್ವಕಿರಣಗಳಲ್ಲಿರುವ ಎಲೆಕ್ಟ್ರಾನು ಅಥವಾ ಪಾಸಿಟ್ರಾನು ಪರಮಾಣು ಬೀಜದ ಸಮೀಪದಲ್ಲೇ ಅತ್ಯಂತ ವೇಗದಿಂದ ಹಾದುಹೋದಾಗ, ಗಾಮಾಕಿರಣ ಉತ್ಪತ್ತಿಯಾಗುತ್ತದೆ. ವಿದ್ಯುತ್ಕಾಂತೀಯ ಕ್ರಿಯೆಯ ಪರಿಣಾಮವಿದು. ಈ ಗಾಮಾಕಿರಣ ಎಲೆಕ್ಟ್ರಾನು ಸಾಗಿದ ದಿಕ್ಕಿನಲ್ಲಿಯೇ ಚಲಿಸುತ್ತದೆ. ಧನ-ಋಣ ಎಲೆಕ್ಟ್ರಾನುಗಳಿಗೆ ಜನ್ಮ ಕೊಡುತ್ತದೆ. ಈ ಯುಗ್ಮದ ಒಂದೊಂದು ಕಣವು ಒಂದೊಂದು ಗಾಮಾಕಿರಣವನ್ನು ಉಂಟುಮಾಡುತ್ತದೆ. ಜೋಡಿ ಜೋಡಿ ಎಲೆಕ್ಟ್ರಾನುಗಳು ಹುಟ್ಟುವ, ಲಯವಾಗುವ ಸಂಭವನೀಯತೆಯನ್ನು ಭಾಭಾ ಲೆಕ್ಕ ಹಾಕಿದರು. ಅಂತೆಯೇ ಈ ಸೋಪಾನಪಾತದ ಪ್ರಬಲತೆಯನ್ನು ನಿಖರವಾಗಿ ತಿಳಿಸುವ ಪ್ರಯತ್ನ ಮಾಡಿದರು.

ವಿಶ್ವಕಿರಣಗಳಲ್ಲಿ ಕಂಡುಬಂದ “ಭಾರವಾದ ಎಲೆಕ್ಟ್ರಾನ್‌” ಕಣಗಳನ್ನೂ ಗುರುತಿಸಿ, ವಿಮರ್ಶಿಸಿ ಭಾಭಾ ಅವಕ್ಕೆ “ಮೆಸಾನ್‌” ಎಂದು ಹೆಸರಿಟ್ಟರು. ಅವರ ಈ ಸಂಶೋಧನೆ “ಮೂಲ ಕಣ ಭೌತಶಾಸ್ತ್ರ”ಕ್ಕೆ ತಳಹದಿ ಎನ್ನಬಹುದು. ಗಣಿತಶಾಸ್ತ್ರದಲ್ಲಿ ಅವರಿಗಿದ್ದ ಕುತೂಹಲ, ಕೌಶಲದ ಪರಿಣಾಮವಾಗಿ “ಸಾರ್ವತ್ರಿಕ ಭ್ರಮಣ ತತ್ವ” ಬೆಳಕು ಕಂಡಿತು.

೧೯೩೯ರಲ್ಲಿ ಭಾಭಾ ಭಾರತಕ್ಕೆ ವಿಶ್ರಾಂತಿಗೆಂದು ಬಂದರು. ಆಗ ಎರಡನೆಯ ಮಹಾಯುದ್ಧದ ಕಾಲ. ಮತ್ತೆ ಅವರು ಇಂಗ್ಲೆಂಡಿಗೆ ಹಿಂದಿರುಗಲಿಲ್ಲ. ಅದು ಭಾರತದ ಸೌಭಾಗ್ಯ.

ಬೆಂಗಳೂರಿನಲ್ಲಿ

ಚಿಕ್ಕ ವಯಸ್ಸಿನಲ್ಲೇ ಉತ್ತಮ ಭೌತ ವಿಜ್ಞಾನಿಯೆಂದು ಹೆಸರು ಪಡೆದಿದ್ದ ಭಾಭಾ ಅವರಿಗೆ ಪ್ರಪಂಚದ ಯಾವುದೇ ಮುಂದುವರಿದ ದೇಶದಲ್ಲಿ ದೊಡ್ಡ ಹುದ್ದೆ ಸಿಗುವುದು ಕಷ್ಟವಾಗಿರಲಿಲ್ಲ. ಆದರೆ ಅವರ ಮನಸ್ಸು ಅತ್ತ ಹೊರಳಲಿಲ್ಲ. ಪರದೇಶದ ಸುಖಸಂಪತ್ತು ಅವರನ್ನು ಆಕರ್ಷಿಸಲಿಲ್ಲ. ನಾಡಿನ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವ ನಿರ್ಧಾರ ಕೈಗೊಂಡರು ಭಾಭಾ.

೧೯೪೦ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ಆಫ್ ಸೈನ್ಸ್‌ನಲ್ಲಿ ರೀಡರ್ ಆಗಿ ಸೇರಿದರು. ವಿಶ್ವಕಿರಣಗಳ ಸಂಶೋಧನೆಗಾಗಿ ಶಾಖೆಯೊಂದನ್ನು ಕಟ್ಟುವ ಹೊಣೆ ಅವರ ಮೇಲೆ ಬಿದ್ದಿತು. ಅದೇ ವರ್ಷ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರಾಗಿ ಅವರು ಆಯ್ಕೆಯಾದರು. ಈ ಉನ್ನತ ಸನ್ಮಾನ ದೊರಕಿದಾಗ ಭಾಭಾ ಅವರ ವಯಸ್ಸು ಕೇವಲ ಮೂವತ್ತೊಂದು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆ ಗೌರವ ಪಡೆದವರು ಆ ಪ್ರಸಿದ್ಧ ಸಂಸ್ಥೆಯ ಚರಿತ್ರೆಯಲ್ಲಿ ವಿರಳ. ೧೯೪೦ರಲ್ಲಿ ಭಾಭಾ ಪ್ರಾಧ್ಯಾಪಕರಾದರು. ಇಂಗ್ಲೆಂಡಿನ ಆಡಮ್ಸ್‌ಪಾರಿತೋಷಕವೂ ಅವರಿಗೆ ದಕ್ಕಿತು.

ಹರೆಯದ ಭಾಭಾ ಆ ದಿನಗಳಲ್ಲಿ ಭವಿಷ್ಯ ಭಾರತದ ಕನಸು ಕಂಡರು. ಬೆಂಗಳೂರಿನ ಶಾಂತ ವಾತಾವರಣದಲ್ಲಿ ದೇಶದ ಉಜ್ವಲ ಸಂಸ್ಕೃತಿಯ ಹಿನ್ನೆಲೆಯನ್ನು ಮನನ ಮಾಡಿದರು. ಅಂದಿನ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಕುರಿತು ಆಳವಾಗಿ ಚಿಂತಿಸಿದರು. “ವಿಜ್ಞಾನದಿಂದಲೇ ಪ್ರಗತಿ” ಎನ್ನುವ ಭಾವನೆ ಅವರಲ್ಲಿ ಬಲವಾಗಿ ಬೇರೂರಿತು.

ಬೆಂಗಳೂರಿನಲ್ಲಿದ್ದಾಗ ಭಾಭಾ ಅವರಿಗೆ ಭಾರತೀಯ ಶಾಸ್ತ್ರೀಯ ಸಂಗೀತ, ಶಿಲ್ಪ, ನೃತ್ಯಗಳಲ್ಲಿ ಅಭಿರುಚಿ ಉಂಟಾಯಿತು. ಈ ಆಸಕ್ತಿ ಅವರನ್ನು ಜೀವನದುದ್ದಕ್ಕೂ ಕಲೋಪಾಸನೆಯ ಹಾದಿಯಲ್ಲಿ ಕರೆದೊಯ್ದಿತು. ಅವರ ಬದುಕಿನ ಮೇಲೆ ಅದು ಅಗಾಧ ಪ್ರಭಾವ ಬೀರಿತು.

ಬೆಂಗಳೂರಿಗೆ ಬಂದ ಹೊಸತರಲ್ಲಿ ಭಾಭಾ ಅವರ ಭಾಷಣವೊಂದನ್ನು ಏರ್ಪಡಿಸಲಾಗಿತ್ತು. ಸಿ.ವಿ.ರಾಮನ್ ಅವರು ಅಂದಿನ ಸಮಾರಂಭದ ಅಧ್ಯಕ್ಷರು. ಪರಮಾಣುವಿನ ವೈಚಿತ್ರ್ಯ ಕುರಿತ ಭಾಷಣವನ್ನು ಕೇಳಿ ಬೆಂಗಳೂರಿನ ಬುದ್ಧಿ ಜೀವಿಗಳು ಬೆಕ್ಕಸಬೆರಗಾದರು. ಭೌತಶಾಸ್ತ್ರ ಕ್ಷೇತ್ರದಲ್ಲಿ ತೀರ ಅತ್ಯಾಧುನಿಕವಾಗಿತ್ತು ಭಾಷಣದ ವಿಷಯ. ಸಿ.ವಿ.ರಾಮನ್ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರಂತೆ. “ಈ ಭಾಷಣ ಮೂವರಿಗೆ ಅತ್ಯಮೋಘವಾಗಿತ್ತು. ಉಪನ್ಯಾಸಕರಿಗೆ, ಅಧ್ಯಕ್ಷರಿಗೆ ಹಾಗೂ ಅಲ್ಲಿ ಹಾಜರಿದ್ದ ಇನ್ನೊಬ್ಬ ಗಣಿತಶಾಸ್ತ್ರಜ್ಞರಿಗೆ.”

ದೂರದೃಷ್ಟಿ

ಭಾರತದಲ್ಲಿ ಅಂದು ಪರಮಾಣು ಭೌತಶಾಸ್ತ್ರದ ಶಿಕ್ಷಣ ಸಂಶೋಧನೆಗೆ ಅಗತ್ಯವಾದ ಸೌಕರ್ಯಗಳು ಇರಲಿಲ್ಲ. ಇದನ್ನು ಮನಗಂಡು ಭಾಭಾ ಈ ದಿಸೆಯಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯನಿರತರಾದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಹುದ್ದೆಯ ಆಹ್ವಾನ ಬಂದಿತು. ಆದರೆ ಭಾಭಾ ಅದನ್ನು ಒಪ್ಪಿಕೊಳ್ಳಲಿಲ್ಲ. ಭಾರತದಲ್ಲೇ ನಿಂತು ಉತ್ತಮ ಸಂಶೋಧನಾಲಯವನ್ನು ಕಟ್ಟುವ ತಮ್ಮ ಬಯಕೆಯನ್ನು ಆಗ ಅವರು ವ್ಯಕ್ತಪಡಿಸಿದರು. ೧೯೪೪ರ ಮಾರ್ಚ್‌೧೨ರಂದು ಸರ್ ದೋರಾಬ್ಜಿ ಟಾಟಾ ಟ್ರಸ್ಟಿಗೆ ಭಾಭಾ ಹೀಗೆ ಪತ್ರ ಬರೆದರು:

“ಇನ್ನು ೧೦-೨೦ ವರ್ಷಗಳ ಅವಧಿಯಲ್ಲಿ ಪರಮಾಣು ಶಕ್ತಿಯ ಬಳಕೆಯಿಂದ ವಿದ್ಯುಚ್ಛಕ್ತಿ ಉತ್ಪಾದನೆಯಾಗುವ ಸಂಭವವಿದೆ. ಆಗ ಈ ಶಾಸ್ತ್ರದಲ್ಲಿ ಪರಿಣಿತ ವಿಜ್ಞಾನಿಗಳಿಗಾಗಿ ನಾವು ಪರದೇಶಗಳತ್ತ ದೃಷ್ಟಿ ಹರಿಸಬೇಕಾಗಿಲ್ಲ. ಅಂತಹ ಸಮರ್ಥ ತಂಡವೊಂದು ಭಾರತದಲ್ಲೇ ಸಿದ್ಧವಾಗಿರುತ್ತದೆ. ಇಂತಹ ಕಾರ್ಯಕ್ರಮದಿಂದ ಮೂಲಭೂತ ಭೌತಶಾಸ್ತ್ರ ಸಂಶೋಧನೆ ನಿರಾತಂಕವಾಗಿ ಸಾಗುವುದಲ್ಲದೆ, ಕೈಗಾರಿಕೆ ಉದ್ಯಮಗಳಲ್ಲಿ ತಲೆ ಎತ್ತುವ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಉತ್ತಮ ಪರಿಸರ ಮತ್ತು ಆರ್ಥಿಕ ಸಹಾಯದ ಅಭಾವ ಭಾರತದ ವೈಜ್ಞಾನಿಕ ಪ್ರಗತಿಯನ್ನು ತಡೆಹಿಡಿದಿದೆ. ಪಾಶ್ಚಾತ್ಯ ದೇಶಗಳಲ್ಲಿರುವ ವಿಶ್ವವಿದ್ಯಾಲಯ, ವಿಜ್ಞಾನ ಸಂಶೋಧನಾಲಯಗಳಿಗೆ ಸರಿದೂಗುವ ಸಂಸ್ಥೆಗಳನ್ನು ನಮ್ಮ ದೇಶದಲ್ಲಿ ನಾವು ಸ್ಥಾಪಿಸಬೇಕು.”

ಈ ಪತ್ರ ಬರೆದದ್ದು, ಜಪಾನಿನ ಹಿರೋಷಿಮಾ, ನಾಗಸಾಕಿಗಳ ಮೇಲೆ ಪರಮಾಣು ಬಾಂಬುಗಳು ಪ್ರಯೋಗವಾಗುವುದಕ್ಕೆ ಒಂದು ವರ್ಷ ಮುಂಚೆ! ಭಾಭಾ ಅವರ ದೂರದೃಷ್ಟಿ ಹಾಗೂ ದೇಶಭಕ್ತಿಗೆ ಒಂದು ನಿದರ್ಶನ ಈ ಪತ್ರ. ಭಾಭಾ ಮಂಡಿಸಿದ ಈ ಯೋಜನೆ ಅವರು ಮುಂದೆ ಸ್ಥಾಪಿಸಲು ಆಶಿಸಿದ ಭೌತವಿಜ್ಞಾನ ಶಾಲೆಯ ಅಂಕುರ ಅಷ್ಟೆ.

ಹೊಸ ವಾತಾವರಣ ಸೃಷ್ಟಿ

೧೯೮೫ರಲ್ಲಿ ತಾತಾ ಟ್ರಸ್ಟಿನವರು “ತಾತಾ ಮೂಲಭೂತ ಸಂಶೋಧನಾ ಸಂಸ್ಥೆ”ಯನ್ನು ಸ್ಥಾಪಿಸಿದರು. ಬೆಂಗಳೂರಿನಲ್ಲಿ ಭಾಭಾ ಅವರ ಮುಂದಾಳುತನದಲ್ಲಿ ಪ್ರಾರಂಭವಾದ ಈ ಸಂಸ್ಥೆ ಕೆಲವು ತಿಂಗಳುಗಳ ನಂತರ ಮುಂಬಯಿಗೆ ವರ್ಗವಾಯಿತು. ಮುಂಬಯಿ ಸರಕಾರ ಮತ್ತು ಭಾರತ ಸರ್ಕಾರ ಈ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದವು. ಭಾಭಾ ಅವರು ಸಂಸ್ಥೆಯ ಮೊದಲ ನಿರ್ದೇಶಕರಾಗಿ ನೇಮಕ ಹೊಂದಿದರು. ಭಾರತವು ಅಣು ವಿಜ್ಞಾನಯಾತ್ರೆಯಲ್ಲಿ ಮೊದಲ ಹೆಜ್ಜೆ ಇಟ್ಟಿತು.

ಶುದ್ಧ ಗಣಿತ, ತಾತ್ವಿಕ ಮತ್ತು ಪ್ರಯೋಗಿಕ ಭೌತಶಾಸ್ತ್ರ, ಗಣಕಯಂತ್ರಶಾಸ್ತ್ರ, ಭೂಭೌತ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಉತ್ತಮ ಮಟ್ಟದ ಸಂಶೋಧನೆ ಈ ಸಂಸ್ಥೆಯಲ್ಲಿ ಪ್ರಾರಂಭವಾಯಿತು. ಇಲ್ಲಿ ಪರಮಾಣುವಿನ ಸ್ಫೋಟದ ನಿಗೂಢ ತತ್ವಗಳ ಪರಿಶೀಲನೆ, ಐಸೋಟೋಪಗಳ ಉತ್ಪಾದನೆ, ಶುದ್ಧವಾದ ಪರಮಾಣು ಸಾಮಗ್ರಿಗಳ ತಯಾರಿಕೆ, ಯುರೇನಿಯಂ ಖನಿಜದ ಶುದ್ಧೀಕರಣ ಇತ್ಯಾದಿ ಕಾರ್ಯಗಳು ಭರದಿಂದ ಸಾಗಿದವು. ಈ ತೆರನಾಗಿ ಕೇಂಬ್ರಿಜ್‌ಪ್ಯಾರಿಸ್‌ಗಳಲ್ಲಿ ಕಲಿತದ್ದನ್ನು ಭಾರತದಲ್ಲಿ ಸಹ ಕಲಿಯಬಲ್ಲ ಬೌದ್ಧಿಕ ವಾತಾವರಣವನ್ನು ಕಲ್ಪಿಸುವ ದಿಸೆಯಲ್ಲಿ ಭಾಭಾ ಸಫಲರಾದರು.

ಕೈಗಾರಿಕೋದ್ಯಮಿ ಜೆ.ಆರ್‌.ಡಿ. ತಾತಾ ಅವರೊಡನೆ ಭಾಭಾ ನಡೆಸಿದ ಚರ್ಚೆಯ ಫಲ; ತಾತಾ ಟ್ರಸ್ಟಿನ ಸಮ್ಮತಿ, ಬೆಂಬಲ; ದೂರದೃಷ್ಟಿಯ ತೀರ್ಮಾನ: ಇಂದು ಈ ಸಂಸ್ಥೆ ಭಾರತದ ಶ್ರೇಷ್ಠ ಭೌತವಿಜ್ಞಾನ ಕೇಂದ್ರವಾಗಿದೆ. ಹಿರಿಮೆಯಲ್ಲಿ, ಪ್ರಸಿದ್ಧಿಯಲ್ಲಿ ಪ್ರಪಂಚದ ಯಾವ ಸಂಶೋಧನಾ ಸಂಸ್ಥೆಗೂ ತಲೆಬಾಗದೆ ನಿಂತಿದೆ. ಭಾಭಾ ಅವರ ಮಾರ್ಗದರ್ಶನ, ದುಡಿಮೆಯ ಫಲವಾಗಿ ಭಾರತದ ಪರಮಾಣು ಶಕ್ತಿಯ “ಗರಡಿಮನೆ”ಯಾಗಿದೆ ಈ ಕೇಂದ್ರ. ಭಾಭಾ ಕಂಡ ಕನಸು ಇಲ್ಲಿ ನನಸಾಗಿದೆ. ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವ ಸಂಸ್ಥೆ ಇಂದು ವೈಜ್ಞಾನಿಕ ಪರಂಪರೆಯ ಪ್ರತೀಕವಾಗಿದೆ.

ಅಣುವಿಜ್ಞಾನದ ನವವಿಕಾಸಕ್ಕೆ ನಾಂದಿ

೧೯೪೭ರ ಆಗಸ್ಟ್‌೧೫; ಭಾರತ ಸ್ವಾತಂತ್ರ್ಯ ಗಳಿಸಿದ ದಿನ. ಅದಾದ ಹನ್ನೊಂದನೆಯ ದಿನ (೨೬-೮-೧೯೪೭) ಅಣುಶಕ್ತಿ ಸಂಶೋಧನಾ ಸಮಿತಿಯ ಸಭೆಯಲ್ಲಿ ಭಾಭಾ ಅವರಾಡಿದ ಮಾತಿದು:

“ನಮ್ಮ ದೇಶದ ಇತಿಹಾಸದಲ್ಲೊಂದು ಹೊಸ ಅಧ್ಯಾಯ ಪ್ರಾರಂಭವಾಗುತ್ತಿರುವ ಈ ಪರ್ವಕಾಲದಲ್ಲಿ ನಾವು ಸೇರಿದ್ದೇವೆ. ನಮ್ಮ ಆಶೋತ್ತರಗಳು ಅಪಾರ; ಯಶಸ್ಸು ಸಂಪಾದಿಸುವ ನಮ್ಮ ಹೊಣೆ ಹಿರಿದು. ಅಣುಶಕ್ತಿಯ ಬಳಕೆ ಮತ್ತು ಪ್ರಗತಿ ರಾಷ್ಟ್ರದ ಮಹತ್ವದ ವಿಷಯ. ನುರಿತ ವಿಜ್ಞಾನಿಗಳ ತಂಡದ ಸಹಾಯದಿಂದ ಅಣುಶಕ್ತಿ ಸಂಸ್ಥೆಯನ್ನು ಸದ್ಯದಲ್ಲೇ ತೆರೆಯುವ ನಂಬಿಕೆ ನನಗಿದೆ.”

ಭಾಭಾ ಅವರ ಮುಂದಾಲೋಚನೆಯ ಫಲ. ೧೯೪೮ರಲ್ಲಿ ಭಾರತ ಸರ್ಕಾರ ಅಣುಶಕ್ತಿ ಆಯೋಗವನ್ನು ರಚಿಸಿತು. ಭಾಭಾ ಅದರ ಅಧ್ಯಕ್ಷ ಪದವಿಯನ್ನು ಅಲಂಕರಿಸಿದರು. ಅಣುಶಕ್ತಿಗೆ ಸಂಬಂಧಿಸಿದಂತೆ ದೇಶದಲ್ಲಿರುವ ಖನಿಜಗಳ ಶೋಧನೆ. ಈ ಖನಿಜಗಳಿಗೆ ಸಂಬಂಧಿಸಿದ ಕೈಗಾರಿಕೋದ್ಯಮಗಳ ಅಭಿವೃದ್ಧಿ, ಅಣುಶಕ್ತಿ ಕುರಿತ ತಾಂತ್ರಿಕ ಪರಿಜ್ಞಾನ ಮತ್ತು ತರಬೇತಿಯನ್ನು ರೂಢಿಸುವುದು ಹಾಗೂ ಇನ್ನಿತರ ಅಗತ್ಯ ಕಾರ್ಯಕ್ರಮಗಳ ಯೋಜನೆ-ಇವು ಆಯೋಗಕ್ಕೆ ಒಪ್ಪಿಸಲಾದ ಕೆಲಸಗಳು.

ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರತರಾಗಿದ್ದ ವಿಜ್ಞಾನಿಗಳ ಸೇವೆ ಈ ಆಯೋಗದ ಪಾಲಿಗೆ ಕಾದಿತ್ತು. ಈ ನೆಲದ ಜನಮನ, ಬುದ್ಧಿಶಕ್ತಿ, ವಿಜ್ಞಾನ ಕೌಶಲ ಹೊಸದಾದ ಕ್ಷೇತ್ರವೊಂದರಲ್ಲಿ ವಿಶಾಲ ಹಂದರದ ಚೌಕಟ್ಟಿನಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿತ್ತು. ಆಯೋಗದ ಕಾರ್ಯವ್ಯಾಪ್ತಿ ವಿಸ್ತರಿಸಿತು. ಅಣುಶಕ್ತಿ ಯೋಜನೆ ವಿಶಿಷ್ಟ ರೂಪ ಪಡೆಯಿತು. ಶಾಂತಿಯುತ ಬಳಕೆ ಮತ್ತು ಅಭಿವೃದ್ಧಿಗಾಗಿ ಅಣುಶಕ್ತಿ ಸಂಸ್ಥೆ (ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‌ಮೆಂಟ್) ಯನ್ನು ಪ್ರಾರಂಭಿಸಬೇಕೆಂದು ೧೯೫೪ರಲ್ಲಿ ತೀರ್ಮಾನವಾಯಿತು. ೧೯೫೬ರ ಜನವರಿ ೨೦ ರಂದು ಅದು ಉದ್ಘಾಟಿಸಲ್ಪಟ್ಟಿತು. ಅಂತೆಯೇ ೧೯೫೪ರಲ್ಲಿ ಅಣುಶಕ್ತಿ ಖಾತೆ ಭಾರತ ಸರ್ಕಾರದ ಸ್ವತಂತ್ರ ಶಾಖೆಯಾಗಿ ಪ್ರಧಾನಮಂತ್ರಿ ನೆಹರೂ ಅವರ ನೇರ ಆಡಳಿತದಲ್ಲಿ ಅಸ್ತಿತ್ವಕ್ಕೆ ಬಂದಿತು. ಭಾಭಾ ಅವರು ಸಚಿವ ಖಾತೆಯ ಪದನಿಮಿತ್ತ ಕಾರ್ಯದರ್ಶಿಗಳಾದರು. ಅದೇ ವರ್ಷ “ಅಣುಶಕ್ತಿಯ ಶಾಂತಿಯುತ ಬಳಕೆ” ಕುರಿತ ವಿಶ್ವ ಸಮ್ಮೇಳನ ದೆಹಲಿಯಲ್ಲಿ ಜರುಗುವ ವ್ಯವಸ್ಥೆಯೂ ಆಯಿತು.

ಹೀಗೆ ಅಣುಶಕ್ತಿ ಕ್ಷೇತ್ರದಲ್ಲಿ ಭಾರತ ಹೊಸ ವಿಕ್ರಮಗಳನ್ನು ಸಾಧಿಸತೊಡಗಿತು. ಭಾಭಾ ತಮ್ಮ ಆಲೋಚನಾ ಶಕ್ತಿಯಿಂದ, ಅವಿರತ ದುಡಿಮೆಯಿಂದ ದೇಶದ ವಿಜ್ಞಾನರಂಗವನ್ನು ಶ್ರೀಮಂತಗೊಳಿಸುವುದರಲ್ಲಿ ತಲ್ಲೀನರಾದರು.

ಭಾಭಾ ಅವರ ಯೋಚನಾಧಾರೆಗೆ ಬೆಂಬಲ, ಪ್ರೋತ್ಸಾಹ ನೀಡಿದವರಲ್ಲಿ ಪ್ರಮುಖರೆಂದರೆ, ಜೆ.ಆರ್.ಡಿ. ಟಾಟಾ ಮತ್ತು ಜವಾಹರಲಾಲ್ ನೆಹರೂ. ಭಾಭಾ ಅವರ ದೂರದೃಷ್ಟಿ, ಕಾರ್ಯಕ್ಷಮತೆ, ದೇಶಾಭಿಮಾನವನ್ನು ಕಂಡು ಮೆಚ್ಚಿನ ನೆಹರೂ ಅವರಿಗೆ ಭಾಭಾ ತುಂಬ ಆಪ್ತರಾದರು. ಸ್ನೇಹ ಸಾಮರಸ್ಯ ಕುದುರಿತು. ಕರ್ಮ ಧರ್ಮ ಸಂಯೋಗ. ಇದರ ಪರಿಣಾಮವಾಗಿ ಭಾಭಾ ಅವರಿಗೆ ಅಪಾರ ಕಾರ್ಯ ಸ್ವಾತಂತ್ರ್ಯ ಲಭಿಸಿತು. ಇದರಿಂದ ವಹಿಸಿಕೊಟ್ಟ ಹೊಣೆಯನ್ನು ಸಮರ್ಪಕವಾಗಿ ಕಾರ್ಯಗತ ಮಾಡಲು ಅವರಿಗೆ ಸಾಧ್ಯವಾಯಿತು. ವೈಜ್ಞಾನಿಕ ಚಟುವಟಿಕೆಗಳಿಗೆ ಅನುಗುಣವಾಗಿ ಆಡಳಿತ ವಿಧಾನವನ್ನು ರೂಪಿಸುವುದರ

ಕೆನಡಾ-ಇಂಡಿಯಾ ರಿಯಾಕ್ಟರ್, ಟ್ರಾಂಬೆ.

ಮೂಲಕ, ನಿಧಾನ ಪ್ರವೃತ್ತಿ ಹಾಗೂ ಸಂಪ್ರದಾಯ ಶರಣತೆಯನ್ನು ಅವರು ಬುಡಮೇಲು ಮಾಡಿದರು. ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಸರ್ಕಾರವು ವಿಜ್ಞಾನದ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದುವಂತೆ ಮಾಡಿದ್ದು ಭಾಭಾ ಅವರ ಸಾಧನೆಗಳಲ್ಲೊಂದು.

ರಿಯಾಕ್ಟರುಗಳು

೧೯೫೫ರಲ್ಲಿ ಜಿನೀವಾದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಭಾಭಾ ಭಾಗವಹಿಸಿದ್ದರು. ಆಗ ಕೆನಡಾದವರು ಭಾರತಕ್ಕೆ ರಿಯಾಕ್ಟರ್ ನೀಡಲು ಮುಂದೆ ಬಂದರು. ಆಗಸ್ಟ್ ೨೫ರ ರಾತ್ರಿ. ಭಾಭಾ ನೆಹರೂ ಅವರಿಗೆ ತಂತಿ ಕಳುಹಿಸಿದರು. ಈ ನಿವೇದನೆಯ ಅಂಗೀಕಾರಕ್ಕಾಗಿ. ಕೇವಲ ಮೂರು ದಿನಗಳೊಳಗಾಗಿ ನೆಹರೂ ಅವರ ಸಮ್ಮತಿ ಭಾಭಾ ಅವರಿಗೆ ತಲುಪಿತು. ಈ ರೀತಿ ಕೆನಡಾ-ಇಂಡಿಯಾ ರಿಯಾಕ್ಟರ್ “ಸೈರಸ್‌” ಜನ್ಮತಾಳಿತು. ಇದು ಇಂದು ಏಷ್ಯದ ಅತಿ ಪ್ರಬಲ ಬೀಜ ಕ್ರಿಯಾಕಾರಿ.

ಅಪ್ಸರಾ (೧೯೫೬), ಸೈರಸ್‌(೧೯೬೦) ಮತ್ತು ಜೆರ್ಲಿನಾ(೧೯೬೧) ಎಂಬ ಮೂರು ಪರಮಾಣುಕೇಂದ್ರಗಳನ್ನು ವಿದೇಶಿ ನೆರವಿನಿಂದ, ಹಾಗೂ ಫೀನಿಕ್ಸ್ (೧೯೬೪) ಎಂಬ ಕೇಂದ್ರವನ್ನು ಸಂಪೂರ್ಣವಾಗಿ ಭಾರತೀಯ ಪರಿಣತಿಯಿಂದ ಟ್ರಾಂಬೆಯಲ್ಲಿ ನಿರ್ಮಿಸಲಾಗಿದೆ. ಈ ಕೇಂದ್ರಗಳನ್ನು ಬಳಕೆಗೆ ತಂದ ಕೀರ್ತಿ ಭಾಭಾ ಅವರಿಗೆ ಸಲ್ಲುತ್ತದೆ.

ಟ್ರಾಂಬೆ ಕೇಂದ್ರ

ಪ್ರತಿವರ್ತಕಗಳಿಗೆ ಬೇಕಾದ ರೂಪದಲ್ಲಿ ಅಪರೂಪವಾಗಿ ಸಿಗುವ ಯುರೇನಿಯಂ ಖನಿಜವನ್ನು ಉತ್ಪಾದಿಸುವುದು ಸುಲಭದ ಕಾರ್ಯವಲ್ಲ. ಪ್ರತಿಕ್ರಿಯೆಗೊಂಡ ಯುರೇನಿಯಂನಿಂದ ಫ್ಲುಟೇನಿಯಂ ಮತ್ತು ವಿದಳನ ಕ್ರಿಯೆಗೆ ಅನುಕೂಲವಾದ ಇತರ ವಸ್ತುಗಳನ್ನು ಟ್ರಾಂಬೆಯಲ್ಲಿ ಉತ್ಪಾದಿಸುವುದು ಈಗ ಸಾಧ್ಯವಾಗಿದೆ. ಮುಖ್ಯ ಪರಮಾಣು ಇಂಧನಗಳಲ್ಲಿ ಒಂದಾದ ಥೋರಿಯಂನ ನಿಕ್ಷೇಪ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಭಾರತದಲ್ಲಿದೆ. ಈ ಇಂಧನ ಕುರಿತು ಸಂಶೋಧನಾ ಕಾರ್ಯ ಮುಂದುವರಿದಿದೆ. ಇಂದು ಕೃಷಿ, ಕೈಗಾರಿಕೆ, ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ಬಳಸಲಾಗುತ್ತಿರುವ ೨೫೦ಕ್ಕಿಂತ ಮಿಗಿಲಾದ ರೇಡಿಯೋ ಐಸೋಟೋಪುಗಳು ಟ್ರಾಂಬೆಯಲ್ಲಿ ಉತ್ಪಾದನೆಯಾಗುತ್ತಿವೆ; ಅನೇಕ ದೇಶಗಳಿಗೆ ರಫ್ತಾಗುತ್ತಿವೆ.

ಟ್ರಾಂಬೆ ಸಂಸ್ಥೆಯ ಪ್ರಗತಿಗಾಗಿ ಭಾಭಾ ಅವಿರತವಾಗಿ ಶ್ರಮಿಸಿದರು. ಅವರ ದುಡಿಮೆ, ಮನಸ್ಸು, ಕಾಲವೆಲ್ಲ ಅದಕ್ಕಾಗಿಯೇ ಮೀಸಲಾಗಿದ್ದವು. ಅಪ್ಸರಾ ಮೊದಲಾದ ರಿಯಾಕ್ಟರ್‌ಗಳು ಥೋರಿಯಂ ಮತ್ತು ಯುರೇನಿಯಂ ಕಾರ್ಖಾನೆಗಳು, ಫ್ಲುಟೇನಿಯಂ ಉತ್ಪಾದನಾ ಸ್ಥಾವರ, ವ್ಯಾನ್ ಡಿ ಗ್ರಾಫ್ ಮತ್ತು ಸೈಕ್ಲೋಟ್ರಾನ್ ಯಂತ್ರಗಳು-ಇವೆಲ್ಲ ಭಾಭಾ ಅವರ ಕೊಡುಗೆಗಳು.

ಪರಮಾಣು ಕಿರಣಗಳ ಸಹಾಯದಿಂದ ಆಹಾರವನ್ನು ದೀರ್ಘಕಾಲ ಕೆಡದಂತೆ ಇಡುವ ಸಂಶೋಧನೆ ಈ ಸಂಸ್ಥೆಯಲ್ಲಿ ನಡೆದಿದೆ. ವಿಶ್ವಕಿರಣಗಳ ಮೂಲವಸ್ತುವನ್ನು ಕಂಡುಹಿಡಿಯುವ ಪ್ರಯತ್ನ ಸಾಗಿದೆ. ಧಾನ್ಯಗಳ ಬೀಜಗಳು ಹೆಚ್ಚು ಇಳುವರಿ ಕೊಡುವಂತೆ ಅವನ್ನು ಕಿರಣಗಳ ಪ್ರಯೋಗದಿಂದ ಸಂಸ್ಕರಿಸುವ ವಿಧಾನವನ್ನೂ ಸಹ ಕಂಡು ಹಿಡಿಯಲಾಗಿದೆ.

ಅಣುಶಕ್ತಿಯೇ ಆಧಾರ

ಜಗತ್ತಿನಲ್ಲಿ ಶಕ್ತಿಯ ಉಪಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಲ್ಲಿದ್ದಲು, ಎಣ್ಣೆ ಮುಂತಾದ ಸ್ವಾಭಾವಿಕವಾಗಿ ಸಿಗುವ ಚೈತನ್ಯದ ಮೂಲಗಳು ಭಾರತದಲ್ಲಿ ಬರಿದಾಗುತ್ತಿವೆ. ಅನೇಕ ಸ್ಥಳಗಳಲ್ಲಿ ಜಲಶಕ್ತಿಯ ಕೊರತೆ ಬೇರೆ. ಇದನ್ನರಿತ ಭಾಭಾ ಭಾರತದ ಕೈಗಾರಿಕೆಗಳ ಏಳಿಗೆಗೆ ಅಣುಶಕ್ತಿಯೇ ಮುಂದಿನ ಆಧಾರ ಎಂದು ಸಾರಿದರು. ದೇಶದಲ್ಲಿ ಹೇರಳವಾಗಿ ಸಿಗುವ ಥೋರಿಯಂ ಖನಿಜವನ್ನು ಉಪಯೋಗಿಸಿ, ಬೀಜ ಕ್ರಿಯೆಯಿಂದ ವಿದ್ಯುತ್ತನ್ನು ತಯಾರಿಸುವುದರಿಂದ ಮಿತವ್ಯಯ ಸಾಧ್ಯ ಎಂದು ಅವರು ಪ್ರತಿಪಾದಿಸಿದರು. ಈ ದೃಷ್ಟಿಯನ್ನು ಅನುಸರಿಸಿ ಅವರು ಕಾರ್ಯತತ್ಪರರಾದರು. ಇದರ ಫಲವಾಗಿ ಮಹಾರಾಷ್ಟ್ರದ ತಾರಾಪುರ ಪರಮಾಣು ವಿದ್ಯುತ್‌ಕೇಂದ್ರ ಈಗಾಗಲೇ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ಪ್ರಾರಂಭಿಸಿದೆ. ರಾಜಸ್ಥಾನದ ರಾಣಾಪ್ರತಾಪ ಸಾಗರ ಮತ್ತು ತಮಿಳುನಾಡಿನ ಕಲ್ಪಾಕಂ ಕೇಂದ್ರಗಳ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಈ ಮೂರು ಅಣುಶಕ್ತಿ ಕೆಂದ್ರಗಳಿಂದ ಭಾರತದ ವಿದ್ಯುಚ್ಛಕ್ತಿ ಉತ್ಪಾದನೆ ಗಣನೀಯ ಮಟ್ಟದಲ್ಲಿ ಹೆಚ್ಚಾಗಲಿದೆ. ಇವು ಭಾಭಾ ಅವರ ಮಹತ್ವದ ಸಾಧನೆಗೆ ಸಾಕ್ಷಿ; ಅವರ ದುಡಿಮೆಗೆ ಜೀವಂತ ಸ್ಮಾರಕಗಳು.

ದೇಶದ ಪರಮಾಣು ಶಕ್ತಿ ಮತ್ತಿತರ ಉದ್ಯಮಗಳಿಗೆ ಬೇಕಾಗುವ ಎಲೆಕ್ಟ್ರಾನಿಕ್‌ಉಪಕರಣಗಳನ್ನು ಪೂರೈಸಲು ಅಗತ್ಯವಾದ ಯೋಜನೆಯ ರೂಪರೇಖೆ-ವರದಿಗಳನ್ನು ಭಾಭಾ ಸಿದ್ಧಪಡಿಸಿದರು. ಇದರಿಂದ ಎಲೆಕ್ಟ್ರಾನಿಕ್ ಉದ್ಯಮ ಇಂದು ಉನ್ನತ ಸ್ಥಿತಿಗೇರಿದೆ ಎನ್ನಬಹುದು. ಎಲೆಕ್ಟ್ರಾನಿಕ್ ಕಾರ್ಪೋರೇಶನ್ ಆಫ್ ಇಂಡಿಯಾ ಇಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುತ್ತಿದ್ದರೆ, ಅದು ಭಾಭಾ ಅವರ ದೂರಾಲೋಚನೆಯಿಂದಾಗಿ.

ಇತರ ಕೇಂದ್ರಗಳಿಗೆ ನೆರವು

ಭಾರತ ಇನ್ನಿತರ ವಿಜ್ಞಾನ ಕೇಂದ್ರಗಳ ಒಳಿತಿಗಾಗಿ ಭಾಭಾ ಉದಾರವಾಗಿ ನೆರವಾದರು. ಕಲ್ಕತ್ತಾದ ಸಾಹಾ ಪರಮಾಣು ವಿಜ್ಞಾನಕೇಂದ್ರ, ಅಹಮದಾಬಾದಿನ ಭೌತವಿಜ್ಞಾನ ಕೇಂದ್ರ ಮತ್ತಿತರ ಸಂಸ್ಥೆಗಳು ಅಣುಶಕ್ತಿ ಇಲಾಖೆಯ ನೆರವು ಪಡೆದವು. ರಾಕೆಟ್ ಪ್ರಯೋಗಗಳ ಮೂಲಕ ಗಗನಯಾನದತ್ತ ಹೆಜ್ಜೆಯಿಟ್ಟ ಕೇರಳದ ತುಂಬಾ ರಾಕೆಟ್ ಉತ್‌ಕ್ಷೇಪಣ ಕೇಂದ್ರ, ಕಾಶ್ಮೀರದ ಉನ್ನತ ಪ್ರದೇಶದ ಸಂಶೋಧನಾ ಕೇಂದ್ರ, ಬಿಹಾರಿನ ಯುರೇನಿಯಂ ಗಣಿ, ನಂಗಲ್ನ ಭಾರಜಲ ಕಾರ್ಖಾನೆ-ಇವೆಲ್ಲ ಪರಮಾಣು ಶಕ್ತಿ ಇಲಾಖೆಯ ಉದ್ಯಮಗಳೇ!

ಇಷ್ಟಾಗಿ ಭಾಭಾ ಮೂಲಭೂತ ವಿಜ್ಞಾನದ ಬೆಳವಣಿಗೆಯ ಬಗ್ಗೆ ಸದಾ ಗಮನ ಕೊಡುತ್ತಿದ್ದರು. ದೇಶ ವಿದೇಶಗಳ ವಿಶ್ವವಿದ್ಯಾನಿಲಯಗಳು ಮತ್ತು ವೈಜ್ಞಾನಿಕ ಸಂಸ್ಥೆಗಳೊಡನೆ ನಿಕಟ ಸಂಪರ್ಕ ಹೊಂದಿದ್ದರು. ವಿದ್ಯಾರ್ಥಿ ವೇತನ, ಸಹಾಯಧನ, ಸಾಮಗ್ರಿ ಸಲಕರಣೆಗಳ ಅನುಕೂಲತೆ ಮುಂತಾದ ಸೌಕರ್ಯಗಳನ್ನು ಒದಗಿಸಿ ಮೂಲಭೂತ ಭೌತವಿಜ್ಞಾನ ಸಂಶೋಧನೆಗೆ ಬಹುವಾಗಿ ಆಸರೆ ನೀಡಿದರು.

ದಕ್ಷ ವಿಜ್ಞಾನಿ ತಂಡದ ನಿರ್ಮಾಣ

ಭಾರತ ಅಣುಯುಗಕ್ಕೆ ಪ್ರವೇಶಿಸುತ್ತಿದ್ದ ಪರ್ವಕಾಲದಲ್ಲಿ ಭಾಭಾ ವಿದೇಶದಲ್ಲಿದ್ದ ಎಲ್ಲ ಸಮರ್ಥ ಭಾರತೀಯ ಯುವ ವಿಜ್ಞಾನಿಗಳಿಗೆ ನೀಡಿದ ಆಹ್ವಾನ: “ಟ್ರಾಂಬೆಗೆ ಬನ್ನಿ; ದೇಶಕ್ಕೆ ಹಿಂತಿರುಗಿ ಬನ್ನಿ.” ಅವರ ಕರೆಗೆ ಓಗೊಟ್ಟು ಟ್ರಾಂಬೆಗೆ ಬಂದ ಅನೇಕ ತರುಣರು ಇಂದು ಭಾರತದ ಖ್ಯಾತ ವಿಜ್ಞಾನಿಗಳು. ಚತುರ ವಿಜ್ಞಾನಿಯನ್ನು ಜಾಗರೂಕತೆಯಿಂದ ಆರಿಸಿ, ಆತನ ಸುತ್ತ ಅಚ್ಚುಕಟ್ಟಾದ ತಂಡವೊಂದನ್ನು ಕಟ್ಟುವುದರಲ್ಲಿ ಭಾಭಾ ತುಂಬ ಜಯಗಳಿಸಿದರು.

ನಾಡಿನ ಪ್ರಗತಿಗಾಗಿ ಕೈಗೊಂಡ ಕೆಲಸಗಳನ್ನು ಸಫಲಗೊಳಿಸುವ ಸಲುವಾಗಿ, ಭಾಭಾ ಅವರು ಎಲ್ಲ ಸಹೋದ್ಯೋಗಿಗಳಿಗೆ ಸೂಕ್ತವಾದ ವಾತಾವರಣವನ್ನು ನಿರ್ಮಿಸಿದರು. ಸಂಶೋಧನೆಗೆ ಅಗತ್ಯವಾದ ಸಲಕರಣೆಗಳನ್ನು ಒದಗಿಸಿಕೊಟ್ಟರು. ಆಡಳಿತ ನಿಯಮಗಳನ್ನು ಸಡಿಲಗೊಳಿಸಿ, ಕಾರ್ಯ ಸ್ವಾತಂತ್ರ್ಯವನ್ನು ನೀಡಿದರು.

ಹೀಗೆ ತಾಯ್ನಾಡ ಸೇವೆಗಾಗಿ ಭಾಭಾ ತನ್ನ ಬದುಕನ್ನೇ ಮುಡಿಪಾಗಿಟ್ಟರು. ಅಷ್ಟೇ ಅಲ್ಲ; ಪರದೇಶಗಳಲ್ಲಿದ್ದ ಅನೇಕ ಮಂದಿ ಶ್ರೇಷ್ಠ ವಿಜ್ಞಾನಿಗಳು ಹಾಗೂ ಎಂಜಿನಿಯರುಗಳು ಸ್ವದೇಶಕ್ಕೆ ಹಿಂದಿರುಗಿ ಬಂದು ನೆಲೆ ನಿಂತಾಗ ಅವರಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು. ಎಲ್ಲ ಕಾರ್ಯಗಳಲ್ಲಿ ಶಿಸ್ತಿನ ಅಚ್ಚುಕಟ್ಟು, ಪರಿಪೂರ್ಣತೆಯನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮುಂತಾದ ವಿಶೇಷ ಗುಣಗಳು ಭಾಭಾ ಅವರಲ್ಲಿ ಮನೆಮಾಡಿದ್ದವು.

ನಡೆದ ಹಾದಿಯಲ್ಲಿ ಎಡರುವುದು ಸಹಜ. ಈ ರೀತಿ ತಾವೆಸಗುವ ಕಾರ್ಯಭರದಲ್ಲಿ ಯಾರಾದರೂ ತಪ್ಪು ಮಾಡಿದ್ದರೆ, ಅದನ್ನು ಸಹಿಸುವ ಔದಾರ್ಯ ಭಾಭಾ ಅವರಲ್ಲಿತ್ತು. ಆದರೆ ಅಜಾಗರೂಕತೆಯನ್ನಲ್ಲ; ಉದ್ಧಟತನವನ್ನಲ್ಲ; ನಿರ್ಲಕ್ಷ್ಯ ಮನೋಭಾವವನ್ನಲ್ಲ. ಒಳ್ಳೆಯ ಕೆಲಸದ ಬಗ್ಗೆ ಅವರ ಮೆಚ್ಚುಗೆ ಸದಾ ಕಾದಿತ್ತು ಎನ್ನಬಹುದು. ವ್ಯಕ್ತಿ ಸಹಜ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದೊಡ್ಡ ಮನಸ್ಸು ಭಾಭಾ ಅವರದು. ತುಂಬು ಹೃದಯದ ಈ ವ್ಯಕ್ತಿಯ ಬಾಳಿನಲ್ಲಿ “ಸಣ್ಣತನ” ಇಣುಕುವ ಧೈರ್ಯ ಮಾಡಲೇ ಇಲ್ಲ.

ಪರಮಾಣು ವಿಜ್ಞಾನದ ವಿವಿಧ ಶಾಖೆಗಳಲ್ಲಿ ಯುವಕರಿಗೆ ತರಬೇತಿ ನೀಡಲು ಶಿಕ್ಷಣ ಕೇಂದ್ರವನ್ನು ಭಾಭಾ ಸ್ಥಾಪಿಸಿದರು. ೧೯೫೭ರಲ್ಲಿ, ಭಾರತದ ಎಲ್ಲೆಡೆಗಳಿಂದ ಪ್ರತಿಭಾವಂತ ಯುವಜನರನ್ನು ಕರೆಸಿ, ವಿಶೇಷ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಮಾಡಿದರು. ನಾಡಿನ ತರುಣ ವಿಜ್ಞಾನಿಗಳ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರಲು ಅವರು ಶ್ರಮಿಸಿದರು.

ಭಾರತೀಯರಲ್ಲಿ ವಿಜ್ಞಾನ ಹಾಗೂ ಅದರ ಅಭ್ಯಾಸ, ಆಚರಣೆಯ ಬಗ್ಗೆ ಅರಿವು ಮೂಡಿಸಿದಷ್ಟೇ ಅಲ್ಲ; ಆತ್ಮವಿಶ್ವಾಸದಿಂದ ಕೆಲಸಗಳನ್ನು ಕೈಗೊಳ್ಳುವಂತೆ ತರುಣರನ್ನು ಹುರಿದುಂಬಿಸಿದರು. ಉದ್ಯಮಶೀಲರಾಗುವಂತೆ ಅವರಲ್ಲಿ ಭರವಸೆ ಹುಟ್ಟಿಸಿದರು. ಸಮರ್ಥ ವಿಜ್ಞಾನಿ-ಇಂಜಿನಿಯರುಗಳ ಸಮೂಹವೊಂದನ್ನೇ ನಿರ್ಮಿಸಿದರು. ಇದು ಜನತೆಗೆ ಭಾಭಾ ಬಿಟ್ಟುಹೋದ ದೊಡ್ಡ ಆಸ್ತಿ.

ಆದರ್ಶ-ವಾಸ್ತವಿಕತೆಗೆ ಸಂಗಮ

ಭಾಭಾ ಅವರಿಗೆ ಕಾರ್ಯಶ್ರದ್ದೆ ಮೊದಲ ಒಲವು. ಅದೂ ವಿಶೇಷವಾಗಿ ವಿಜ್ಞಾನ ಸಂಶೋಧನೆ, ಯೋಜನೆ ಮತ್ತು ನಿರ್ದೇಶನದಲ್ಲಿ, ಭಾರತದ ಸರ್ಕಾರದ ಸಚಿವ ಸಂಪುಟದಲ್ಲಿ ಪರಮಾಣು ಶಕ್ತಿ ಇಲಾಖೆಯ ಸಚಿವರಾಗಲು ಆಮಂತ್ರಣ ಬಂದಾಗ ಭಾಭಾ ಅದನ್ನು ನಿರಾಕರಿಸಿದರು. ವಿಜ್ಞಾನವೇ ಅವರಿಗೆ ಹೆಚ್ಚು ಪ್ರಿಯವಾಯಿತು. ಮಂತ್ರಿ ಪದವಿಯ ವ್ಯಾಮೋಹ ಅವರನ್ನು ಕಾಡಲಿಲ್ಲ.

ಅವರ ಆಕಾಂಕ್ಷೆಗಳು ಆಕಾಶದೆತ್ತರ; ಆದರೆ ಅವನ್ನು ಧರೆಗೆಳೆದು ತರುವ ಅವರ ದುಡಿಮೆಯೂ ಅಷ್ಟೇ ಅಪಾರ. ಅವರ ಯೋಜನೆ ಕೇವಲ ಗಾಳಿಗೋಪುರವಾಗಿರಲಿಲ್ಲ. ಅದು ಕಾರ್ಯಸಿದ್ಧಿಯ ದ್ಯೋತಕವಾಗಿತ್ತು. ಆದರ್ಶ-ವಾಸ್ತವಿಕತೆಗಳ ಅಪೂರ್ವ ಸಂಗಮ ಭಾಭಾ ಅವರಲ್ಲಿ ಮಿಳಿತವಾಗಿತ್ತು. ಹೀಗೆ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ದಿಗಂತಗಳನ್ನು ವಿಸ್ತರಿಸಿ, ಅದಕ್ಕೊಂದು ಪ್ರತಿಷ್ಠಿತ ಸ್ಥಾನವನ್ನು ತಂದುಕೊಟ್ಟ ಭಾಭಾ ವಿಶ್ವವಿಜ್ಞಾನಿಗಳ ವಿರಳ ಪಂಕ್ತಿಗೆ ಸೇರಿದವರು. ಅವರ ಹೆಸರು ಬಹುಮುಖ ಪ್ರತಿಭೆಗೆ, ಬಹುಮುಖ ದಕ್ಷತೆಗೆ ಪರ್ಯಾಯನಾಮ.

ಅವರ ಕೊಡುಗೆ

೧೯೭೪ರ ಮೇ ೧೮ರಂದು ಭಾರತ ಮೊಟ್ಟಮೊದಲ ಬಾರಿಗೆ ಪರಮಾಣು ಸ್ಫೋಟವನ್ನು ಭೂಗರ್ಭದಲ್ಲಿ ಯಶಸ್ವಿಯಾಗಿ ನಡೆಸಿತು-ರಾಜಸ್ಥಾನದ ಪ್ರೋಕ್ರಾನ್‌ನಲ್ಲಿ. ಭಾರತ ಅಣುಶಕ್ತಿ ರಾಷ್ಟ್ರಗಳ ಪಂಕ್ತಿಗೆ ಸೇರುವ ಹೆಗ್ಗಳಿಕೆ ಪಡೆಯಿತು. ಜಗತ್ತಿನ ಆರನೆಯ ಅಣುಶಕ್ತಿ ರಾಷ್ಟ್ರವಾಗಿ ಮೆರೆಯಿತು. ಅಮೆರಿಕ, ರಷ್ಯ, ಬ್ರಿಟನ್, ಪ್ರಾನ್ಸ್‌, ಮತ್ತು ಚೀನಾ ನಂತರ ಈ ಸಾಲಿನಲ್ಲಿ ಭಾರತ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಭಾರತದ ಅಣುಸ್ಫೋಟ ತಾಂತ್ರಿಕ ಪ್ರಗತಿಯಲ್ಲೊಂದು ದಿಟ್ಟ ಹೆಜ್ಜೆ; ವೈಜ್ಞಾನಿಕ ಮಹೋನ್ನತಿಯ ಮೈಲಿಗಲ್ಲು. ಇದು ಶೇಕಡಾ ನೂರರಷ್ಟು ಭಾರತೀಯ ಪ್ರಯತ್ನ. ಈ ಸಾಧನೆಯ ಯಶಸ್ಸು ಭಾರತದಲ್ಲಿ ಸುವ್ಯವಸ್ಥಿತ ಅಣುಶಕ್ತಿ ಯೋಜನೆಯ ನಿರ್ಮಾಪಕ ಭಾಭಾ ಅವರಿಗೇ ಸಲ್ಲುತ್ತದೆ.

ಗೌರವ ಸನ್ಮಾನಗಳು

ಭಾಭಾ ಅವರಿಗೆ ಯೋಗ್ಯತೆ, ವಿದ್ವತ್ತು, ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಡಾಕ್ಟರೇಟ್ ಪದವಿಗಳನ್ನು ನೀಡಿ ಮನ್ನಣೆಯಿತ್ತ ದೇಶ-ವಿದೇಶಗಳ ವಿಶ್ವವಿದ್ಯಾನಿಲಯಗಳು ಹಲವಾರು. ಅವುಗಳಲ್ಲಿ ಕೆಲವೆಂದರೆ; ಲಂಡನ್, ಕೇಂಬ್ರಿಜ್, ಪಡೋವ, ಪರ್ತ್‌, ಬನಾರಸ್, ಅಗ್ರ, ಪಾಟ್ನ, ಲಕ್ನೋ, ಅಲಹಾಬಾದ್, ಆಂಧ್ರ ಮತ್ತು ಅಲೀಗರ್.

೧೯೪೮ರಲ್ಲಿ ಕೇಂಬ್ರಿಜ್ ಫಿಲಾಸಾಫಿಕಲ್ ಸೊಸೈಟಿಯ ಹಾಪ್‌ಕಿನ್ಸ್ ಪಾರಿತೋಷಕ ಭಾಭಾ ಅವರದಾಯಿತು. ೧೯೫೧ರಲ್ಲಿ ಅವರು ಭಾರತೀಯ ವಿಜ್ಞಾನ ಸಮ್ಮೇಳನದ ಬೆಂಗಳೂರು ಅಧಿವೇಶನದ ಅಧ್ಯಕ್ಷರಾಗಿದ್ದರು. ೧೯೬೩ರಲ್ಲಿ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ಅವರು ಚುನಾಯಿತರಾದರು. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಈ ಬಹುಮುಖ ಪ್ರತಿಭೆಯ ವಿಜ್ಞಾನಿಯನ್ನು ಗೌರವಿಸಿತು.

ಈ ರೀತಿ ಜೀವಿತಕಾಲದಲ್ಲಿ ಗೌರವ ಸನ್ಮಾನಗಳು ಅವರಿಗೆ ಎಡೆಬಿಡದೆ ಬಂದವು. ಭಾಭಾ ಅವರ ಮಾತೆಂದರೆ ಎಲ್ಲರಿಗೆ ಅತಿ ಗೌರವ. ದೇಶದ ಪರಮಾಣು ವಿಜ್ಞಾನದ ಪ್ರಗತಿಗೆ ಇದರಿಂದಾದ ಪ್ರಯೋಜನ ಅಪಾರ.

ಭಾಭಾ ವಿಶ್ವಸಂಸ್ಥೆಯ ಹಲವಾರು ವೈಜ್ಞಾನಿಕ ಸಲಹಾ ಸಮಿತಿಗಳ ಸದಸ್ಯರಾಗಿ ಹಾಗೂ ಭಾರತ ಸರ್ಕಾರದ ಸಚಿವ ಸಂಪುಟದ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೫೫ರಲ್ಲಿ ಜಿನಿವಾ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಪ್ರಥಮ “ಶಾಂತಿಗಾಗಿ ಅಣು” ಸಮ್ಮೇಳನದ ಅಧ್ಯಕ್ಷರಾಗಿ ಭಾಭಾ ಸರ್ವಾನುಮತದಿಂದ ಚುನಾಯಿತರಾದರು. ಈ ಸಮ್ಮೇಳನದ ಫಲಶೃತಿಗಾಗಿ ಅಂತರ ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯೊಂದು ರೂಪುಗೊಂಡಿತು.

ಬಹುಮುಖ ವ್ಯಕ್ತಿತ್ವ

ಭಾಭಾ ಅವರು ಪ್ರಯೋಗ ಮಂದಿರದ ಪ್ರಾಕಾರದೊಳಗೆ ಬಂಧಿತರಾದ ವಿಜ್ಞಾನಿಯಾಗಿರಲಿಲ್ಲ. ಅವರು ವಿವಿಧ ರೀತಿಯ ಆಸಕ್ತಿಗಳನ್ನು ಮೈಗೂಡಿಸಿಕೊಂಡಿದ್ದ ಸೌಂದರ್ಯೋಪಾಸಕರಾಗಿದ್ದರು.

ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿ – ಈ ಮೂರೂ ಕ್ಷೇತ್ರಗಳಲ್ಲಿ ಹೆಸರಾಂತ ಈ ವ್ಯಕ್ತಿ ಸರಸಿ, ಕಲಾ ಪ್ರೇಮಿ, ಉದಾರಿ ಹಾಗೂ ಸ್ನೇಹಜೀವಿ. ಜೀವನದ ಎಲ್ಲ ಮುಖಗಳನ್ನು ತುಂಬು ಹೃದಯದಿಂದ ಪ್ರೀತಿಸಿದ ಧೀಮಂತ. ಕೈಹಿಡಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ಪ್ರತಿಭಾವಂತ.

ಭವಿಷ್ಯದ ದಟ್ಟ ಮಂಜಿನಲ್ಲಿ ಸಹ ತನ್ನ ಧ್ಯೇಹ ಧೋರಣೆಗಳ ಅನುಸರಣೆಯಿಂದ ಸ್ಪಷ್ಟ ಚಿತ್ರವನ್ನು ಕಾಣಬಲ್ಲ ಶಕ್ತಿ ಭಾಭಾ ಅವರದು. ಮಸುಕಾಗದ ಚಿತ್ರ ಅದು.

ಹೊಸ ಹೊಸ ವಿಚಾರಗಳ ಬಗ್ಗೆ ಸದಾ ತೆರೆದ ಮನ. ಇತರರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವ ಸಮಾಧಾನ ಬುದ್ಧಿ. ಪ್ರತಿಯೊಂದು ಸಂಗತಿಯಲ್ಲೂ ಖಚಿತ ನಿಲುವು. ಪೂರ್ವಗ್ರಹವಿಲ್ಲದ ಅಭಿ‌ಪ್ರಾಯ.

ಯಾವುದೇ ವಿಷಯದ ಬಗ್ಗೆ ಕೂಲಂಕುಷ ಪೂರ್ವ ಸಿದ್ಧತೆಯಿಲ್ಲದೆ, ಭಾಭಾ ಅವರೊಡನೆ ಮಾತುಕತೆ ನಡೆಸುವ ಸಾಹಸ ಯಾರಿಗೂ ಇರಲಿಲ್ಲ. ಸಂಸ್ಥೆಗಾಗಿ ವ್ಯಕ್ತಿಗಳನ್ನು ಹುಡುಕದೆ, ಪ್ರತಿಭಾವಂತ ವಿಜ್ಞಾನಿಗಳಿಗಾಗಿ ಸಂಸ್ಥೆಯನ್ನು ಕಟ್ಟಿದವರು ಭಾಭಾ.

ನಿಧಾನ ಪ್ರಕೃತಿ, ಆಲಸ್ಯ, ಅದಕ್ಷತೆ ಕಂಡರೆ ಭಾಭಾ ಅವರಿಗೆ ಎಲ್ಲಿಲ್ಲದ ಸಿಡುಕು; ಸಹೋದ್ಯೋಗಿಗಳಿಗೆ ಅಗತ್ಯವಾದ ಸೌಕರ್ಯ ಕಲ್ಪಿಸುವುದರಲ್ಲಿ ಎಲ್ಲಿಲ್ಲದ ತವಕ ಜೊತೆಯವರೊಡನೆ ಅವರಿಗಿದ್ದ ಪ್ರೀತಿ, ನಂಬುಗೆ, ಅಭಿಮಾನ ಅಪರಿಮಿತ. ಅತಿಥಿಗಳನ್ನು ಟ್ರಾಂಬೆಯ ನಾನಾ ವಿಭಾಗಗಳಿಗೆ ಕರೆದೊಯ್ಯುವುದರಲ್ಲಿ ಭಾಭಾ ಅವಿಗೆ ಅತ್ಯಂತ ಸಂತೋಷ.

ಆತ ಕೇವಲ ಭೌತವಿಜ್ಞಾನಿ ಮಾತ್ರವಲ್ಲ; ಅತ್ಯಂತ ಸಮರ್ಥ ಆಡಳಿತಗಾರ. ದೇಶಾಭಿಮಾನದ ಹಿನ್ನೆಲೆಯಲ್ಲಿ ಭಾರತದ ಭವಿಷ್ಯವನ್ನು ರೂಪಿಸಿದ ಪ್ರಗತಿಶೀಲ ಸಮಾಜ ತತ್ವಜ್ಞಾನಿ.

ಭಾಭಾ ಆಕಾರದಲ್ಲಿ ದೃಢಕಾಯರು. ಎಣ್ಣೆಗೆಂಪಿನ ಮುಖ: ಚೂಪಾದ ಮೂಗು, ಅಗಲವಾದ ಹಣೆ; ಚುರುಕಾದ ಕಣ್ಣುಗಳು. ಮಧ್ಯಕ್ಕೆ ಬೈತಲೆ ತೆಗೆದ ಅಚ್ಚುಕಟ್ಟಾದ ಕ್ರಾಪು. ಠೀವಿಯ ನಡೆ; ಖಚಿತ ಪ್ರವೃತ್ತಿಯ ಈ ವ್ಯಕ್ತಿ ಅಜೀವ ಬ್ರಹ್ಮಚಾರಿ.

೧೯೩೮ರಲ್ಲಿ ಭಾಭಾ ತಮ್ಮ ಆತ್ಮೀಯರಿಗೆ ಬರೆದ ಪತ್ರದಲ್ಲಿ ವ್ಯಕ್ತವಾಗಿರುವ ಭಾಭಾ ಅವರ ವಿಚಾರಧಾರೆ ಹೀಗೆ: “ಜೀವನದಲ್ಲಿ ಎಲ್ಲವನ್ನೂ ತಿರುಗು ಹಾದಿಯಲ್ಲಿ ನಡೆಸಬಹುದು. ಸಾವೊಂದನ್ನು ಬಿಟ್ಟು.” ದೃಢ ಆತ್ಮ ವಿಶ್ವಾಸಕ್ಕೆ ಈ ಮಾತು ಸಾಕ್ಷಿ.

“ಜೀವನದಿಂದ ಎಷ್ಟು ಸಾಧ್ಯವೋ ಅಷ್ಟೆಲ್ಲ ಪಡೆಯುವ ನಿಶ್ಚಯ ನನ್ನದು. ಜೀವನದ ಕಾಲ ಅಲ್ಪ. ಅದನ್ನು ಲಂಬಿಸುವುದು ಸಾಧ್ಯವಿಲ್ಲ. ಆದ್ದರಿಂದ ಜೀವನದ ಮೌಲ್ಯವನ್ನು ನಾನು ಅರಿಯಬಯಸುತ್ತೇನೆ. ಕಲೆ, ಕಾವ್ಯ, ಸಂಗೀತ ಇವು ಜೀವನದ ಅರಿವು-ಸಾಫಲ್ಯವನ್ನು ಹೆಚ್ಚಿಸುತ್ತವೆ.” ಇದು ಬಾಳಿನ ಬಗ್ಗೆ ಭಾಭಾ ಅವರ ಧೋರಣೆ.

ಎರಡು ಸಂಸ್ಕೃತಿಗಳ ಸಿರಿ

ಕಲೆ ಮತ್ತು ವಿಜ್ಞಾನ ಭಾಭಾ ಅವರ ಬಾಳ ಉಸಿರಾಗಿದ್ದವು. ಅವರು ಅನೇಕ ಚಿತ್ರಗಳನ್ನು ರಚಿಸಿದರು; ಸಂಗೀತದ ಸುಧೆಯನ್ನು ಸವಿದರು. ಮಾನವೀಯ ಹೊಂಗನಸುಗಳು ನನಸಾಗಿದ್ದ ಸ್ಮಾರಕಗಳನ್ನು ನೋಡಲು ಎಲ್ಲೆಡೆ ಸುತ್ತಾಡಿದರು. ಕಲೆಯ ಗುಡಿಯನ್ನೋ ವಸ್ತುವನ್ನೋ ಸ್ಥಳವನ್ನೋ ಕಂಡಾಗ ಅದರ ಸಾರ ಸರ್ವಸ್ವವನ್ನು ತನ್ನೆದೆಯಲ್ಲಿ ಸೇರಿಸಿಕೊಂಡರು. ಅವುಗಳ ಎಲ್ಲ ಮುಖಗಳ ವಿಶದ ಪರಿಚಯವನ್ನು ಪಡೆದರು. ಹೀಗೆ ಇವೆಲ್ಲದರ ಹಿನ್ನೆಲೆಯಲ್ಲಿ ಭಾಭಾ ಅವರ ವ್ಯಕ್ವಿತ್ವ ವಿಕಾಸಗೊಂಡಿತು.

ವೈಜ್ಞಾನಿಕ ಸಂಸ್ಕೃತಿ ಮತ್ತು ಕಲಾತ್ಮಕ ಸಂಸ್ಕೃತಿ-ಇವೆರಡರ ನಡುವೆ ತಿಕ್ಕಾಟ ಕೂಡದು; ಅವುಗಳ ಮಧ್ಯೆ ಕಂದರವಿರಕೂಡದು ಎನ್ನುವ ದೃಷ್ಟಿ ಭಾಭಾ ಅವರದು. ವಿಜ್ಞಾನವೂ ಮನಸ್ಸನ್ನು ಬೆಳೆಸುತ್ತದೆ. ಕಲೆಯೂ ಮನಸ್ಸನ್ನು ಬೆಳೆಸುತ್ತದೆ. ಪ್ರತಿಯೊಬ್ಬರೂ ಈ ಎರಡು ಬೆಳಕುಗಳನ್ನೂ ಮನಸ್ಸಿನ ಜಗತ್ತಿನಲ್ಲಿ ಬರಮಾಡಿಕೊಳ್ಳಬೇಕು ಎಂದು ಅವರು ನಂಬಿದ್ದರು. ಅದರಂತೆ ನಡೆದುಕೊಂಡಿದ್ದರು. ಇಂತಹ ಉದಾತ್ತ ವಿಚಾರಧಾರೆ ಅವರನ್ನು ಈ ಯುಗದ ಮಾನವತಾ ವಾದಿಯನ್ನಾಗಿ ಮಾಡಿತು.

 

ಬಾಬಾ ಚಿತ್ರಕಾರರೂ ಆಗಿದ್ದರು. ಅವರು ಬರೆದ ಒಂದು ಚಿತ್ರ.

ಕೈಗಾರಿಕಾ ಚಕ್ರ ಸತತವಾಗಿ ಸಾಗಲು, ಲಕ್ಷಾಂತರ ಹಳ್ಳಿಗಳ ಮನೆಗಳು ಬೆಳಗಲು ಭಾಭಾ ಯೋಜಿಸಿದ ಪರಮಾಣು ಶಕ್ತಿ ಕೇಂದ್ರಗಳು ದೇಶದ ಪ್ರಗತಿಯ ಇತಿಹಾಸದಲ್ಲಿ ಮೈಲಿಗಲ್ಲುಗಳೆನ್ನಬಹುದು. ಜನರ ಒಳಿತಿಗಾಗಿ ನೆರವಾಗುವ ಇಂತಹ ಅದ್ಭುತ ಕಾರ್ಯಗಳನ್ನು ನಡೆಸುವುದು ಭಾಭಾ ಅವರಂತಹ ಅಪಾರ ಹುಮ್ಮಸ್ಸಿನ, ಕೆಚ್ಚೆದೆಯ ವ್ಯಕ್ತಿಯಿಂದ ಮಾತ್ರ ಸಾಧ್ಯವಾಯಿತು.ಅವರ ಜ್ಞಾಪಕಾರ್ಥವಾಗಿ ಟ್ರಾಂಬೆ ಸಂಸ್ಥೆಯನ್ನು ಇಂದು “ಭಾಭಾ ಪರಮಾಣು ಸಂಶೋಧನಾ ಕೇಂದ್ರ” ಎಂದು ನಾಮಕರಣ ಮಾಡಿರುವುದು ಉಚಿತವೇ ಆಗಿದೆ.

ಜೀವನದುದ್ದಕ್ಕೂ ಸಂಗೀತ ಭಾಭಾರ ಸಂಗಾತಿ. ಬಿಡುವಿನ ವೇಳೆಯಲ್ಲಿ ಚಿತ್ರಕಲೆಯ ಹವ್ಯಾಸ. ಸಾಹಿತ್ಯದ ಬಗೆಗೂ ವಿಶೇಷ ಆಸಕ್ತಿ. ಆಸಕ್ತಿಗಳು ಹೀಗೆ ಒಂದಲ್ಲ, ಹಲವಾರು. ಅವರು ಉತ್ತಮ ಸಂಗೀತಗಾರರಾಗಬಹುದಿತ್ತು. ಚತುರ ಕಲಾವಿದರಾಗಬಹುದಿತ್ತು; ಶ್ರೇಷ್ಠ ಸಾಹಿತಿಯಾಗಬಹುದಿತ್ತು. ಆದರೆ ವಿಜ್ಞಾನಿಯಾಗಿ ಸೇವೆ ಸಲ್ಲಿಸುವ ನಿಲುವನ್ನು ಬಾಳಿನಲ್ಲಿ ಅವರು ಅಳವಡಿಸಿಕೊಂಡರು.

ಒಂದು ಅಪೂರ್ವವಾದ ಗಿಡವನ್ನೋ ಹೂ ತುಂಬಿದ ಮರವನ್ನೋ ನೋಡಿ ತನ್ಮಯರಾಗುತ್ತಿದ್ದ ವೃಕ್ಷ ಪ್ರೇಮಿ ಭಾಭಾ. ಹೂಗಿಡಗಳೆಂದರೆ ಎಲ್ಲಿಲ್ಲದ ಪ್ರೀತಿ ಅವರಿಗೆ. ಬೇರುಸಹಿತ ಮರಗಳನ್ನು ಬೇರೆಡೆಗೆ ಸಾಗಿಸಿ, ನೆಟ್ಟು, ಅವಕ್ಕೆ ಜೀವಕೊಡುವ ದೊಡ್ಡ ಮನಸ್ಸು ಅವರದು.

ಶಿಲ್ಪಿ ಭಾಭಾ

ಬೆಟ್ಟದ ತಪ್ಪಲಲ್ಲಿರುವ ಟ್ರಾಂಬೆಯ ಆವರಣದಲ್ಲಿ ಸುಂದರ ಉದ್ಯಾನಗಳನ್ನು ನಿರ್ಮಿಸಿದ ಶಿಲ್ಪಿ ಹೋಮಿಭಾಭಾ. ವಿದೇಶಗಳ ಸುಂದರ ಉದ್ಯಾನಗಳ ವಿನ್ಯಾಸದ ಅಗಾಧ ಪರಿಚಯ ಭಾಭಾ ಅವರಿಗಿತ್ತು.

ಟ್ರಾಂಬೆಯಲ್ಲಿ ಸಂಸ್ಥೆಯನ್ನು ಕಟ್ಟುವ ಹಿರಿಯಾಸೆ ಕಾರ್ಯಗತವಾಗಬೇಕಾಗಿದ್ದ ಸಮಯ. ಆಗ ಕೈತೋಟಗಳ ಯೋಜನೆ ಭಾಭಾ ಅವರ ಮನಸ್ಸನ್ನು ಆವರಿಸಿತ್ತು. ಮನೆಯಲ್ಲೊಂದು ದೊಡ್ಡ ನಕ್ಷಾ ಫಲಕ. ಅದರ ಮೇಲೆ ಹಲವಾರು ನಕ್ಷೆಗಳು. ಅನೇಕ ರಾತ್ರಿ ಕೆಲವು ಗಂಟೆಗಳ ಕಾಲ ಟ್ರಾಂಬೆಯ ಭವಿಷ್ಯವನ್ನು, ಅಲ್ಲಿಯ ಪ್ರಕೃತಿ ವಿನ್ಯಾಸವನ್ನು ರೂಪಿಸುವುದರಲ್ಲಿ ಮಗ್ನರಾಗಿರುತ್ತಿದ್ದರು. ಅವರ ಮಾನಸಿಕ ಪಟಲದ ಮೇಲೆ ಒಂದಲ್ಲ, ನೂರಾರು ಯೋಜನೆಗಳ ಸುಳಿದಾಟ. ಕೊನೆಗೆ ಪರಿಸರಕ್ಕೆ ಹೊಂದುವ ರೀತಿಯಲ್ಲಿ ಉದ್ಯಾನಗಳ ರಚನಾಶೈಲಿಯ ಜೋಡಣೆ. ಇದರ ಪರಿಣಾಮ-ಟ್ರಾಂಬೆಯಲ್ಲಿ ಎತ್ತ ನೋಡಿದರತ್ತ ಹಸಿರು ಹುಲ್ಲು, ಕೈಚಾಚಿ ಕರೆವ ಸಾಲುಮರಗಳು, ನಾನಾ ಬಗೆಯ ಹೂಗಿಡಗಳು.

ಟ್ರಾಂಬೆ ಸಂಶೋಧನಾಲಯಗಳ ಸುತ್ತಮತ್ತಲಿರುವ ವನಸಿರಿ ಭಾಭಾ ಅವರಿಗೆ ಕೊಡುಗೆ. ಅವರ ಉತ್ತಮ ಅಭಿರುಚಿಗೆ, ರಸಿಕತೆಗೆ, ಸೌಂದರ್ಯ ಉಪಾಸನೆಗೆ ಟ್ರಾಂಬೆ ಜೀವಂತ ಉದಾಹರಣೆ.

ವಾಸ್ತುಶಿಲ್ಪದ ವಿಷಯದಲ್ಲೂ ಅಷ್ಟೇ. ಕಟ್ಟಡಗಳ ರೂಪರೇಷೆ-ರಚನೆಯಲ್ಲಿ ಭಾಭಾ ತೋರಿಸಿದ ಕಲಾತ್ಮಕ ಅಭಿರುಚಿ ಅಪೂರ್ವ ಎನ್ನಬಹುದು. ಒಂದೊಂದು ಕಟ್ಟಡದ ವೈಶಿಷ್ಟ್ಯ ಒಂದೊಂದು ಬಗೆ. ಹಡಗಿನ ಆಕಾರದಲ್ಲಿ ಒಂದು ಕಟ್ಟಡವಾದರೆ, ಕೆಂಪುಕೋಟೆಯ ವಿನ್ಯಾಸದಲ್ಲಿ ಇನ್ನೊಂದು. ಸುಮಾರು ೨,೦೦೦ ಅಡಿ ಉದ್ದದ ಕಟ್ಟಡವೊಂದಕ್ಕೆ ನಾಲ್ಕು ಅಂತಸ್ತುಗಳು ಸೈರಸ್ ರಿಯಾಕ್ಟರಿನ ಭವ್ಯ ಗಮ್ಮಟ ಒಂದೆಡೆ; ಆಕಾಶದೆತ್ತರ ನೀಳ ಕೊಳವೆಗಳು ಇನ್ನೊಂದೆಡೆ. ಸಿಬ್ಬಂದಿಯವರಿಗಾಗಿ ವಿಶ್ರಾಂತಿ ಗೃಹಗಳು, ಭೋಜನ ಶಾಲೆಗಳು, ವಾಸಿಸುವ ಮನೆಗಳು. ಒಟ್ಟಾರೆ ದೃಷ್ಟಿಯಿಂದ, ವೈಜ್ಞಾನಿಕ ಶಿಲ್ಪಸಾಧನೆಯೊಂದಿಗೆ ಸೌಂದರ್ಯದ ಸಮನ್ವಯ.

ಟ್ರಾಂಬೆಯ ಕಟ್ಟಡಗಳನ್ನು ಅಕ್ಕರೆಯ ಕಣ್ಣಿಂದ ನೋಡುವುದರಲ್ಲಿ ಅದೆಷ್ಟು ಗಂಟೆಗಳನ್ನು ಭಾಭಾ ಕಳೆದಿದ್ದರೋ! ಇಂದು ನಾವಲ್ಲಿ ಕಾಣುವ ಕಟ್ಟಡಗಳು ಭಾಭಾ ಅವರ ದೂರದೃಷ್ಟಿ, ಕಲಾಪ್ರೇಮ ಹಾಗೂ ವಾಸ್ತು ಕೌಶಲಕ್ಕೆ ಸಾಕ್ಷಿಯಾಗಿವೆ.

ಕಲ್ಪೆನೆ ಗರಿಗೆದರಿದಾಗ ಅವರು ಚಿತ್ರಕಾರರು. ಕುಂಚದಿಂದ ಮೂಡಿಬಂದ ಬಣ್ಣಗಳ ಬೆಡಗು, ವಿನ್ಯಾಸದಲ್ಲಿ ಅವರು ಸೃಷ್ಟಿಯನ್ನು ಕಂಡರು. ಕಲಾಪ್ರದರ್ಶನಗಳಿಗೆ ಹಲವಾರು ಸಲ ಭೇಟಿ ಕೊಡುತ್ತಿದ್ದ ಅವರು ಕಲಾವಿದರ ಆಪ್ತ ಸ್ನೇಹಿತರು.

ಭಾಭಾ ಬರೆದಿರುವ ವರ್ಣಚಿತ್ರಗಳು ಅನೇಕ. ಟ್ರಾಂಬೆ ಸಂಸ್ಥೆಯಲ್ಲಿ ನಾವಿಂದು ಕಾಣುವ ಸುಂದರ ಕಲಾಕೃತಿಗಳು ಅವರ ಕಲಾರಾಧನೆಯ ಕುರುಹಾಗಿವೆ. ಕಲೆಯೊಂದಿಗೆ ವಿಜ್ಞಾನ ಕೂಡಿ ಬಾಳಿದ ರೀತಿಗೊಂದು ನಿದರ್ಶನ ಭಾಭಾ ಜೀವನ.

ಕಲೆಯಲ್ಲಿ ಕುಶಲತೆ, ವಿಜ್ಞಾನದಲ್ಲಿ ಪ್ರತಿಭೆ, ಸಂಗೀತದಲ್ಲಿ ತನ್ಮಯತೆ, ಜನತೆಗಾಗಿ ಸಹಾನುಭೂತಿ, ನಾಡಿಗಾಗಿ ಸೇವಾಭಾವನೆ-ಈ ಗುಣಗಳು ಭಾಭಾ ಅವರನ್ನು ವಿಶಿಷ್ಟ, ವಿರಳ ವ್ಯಕ್ತಿಯನ್ನಾಗಿ ಮಾಡಿದವು. ಸದಭಿರುಚಿಗಳಿಂದ ಪರಿಪಕ್ವವಾದ ಅವರ ವ್ಯಕ್ತಿತ್ವ ಭವ್ಯ ಜೀವನಕ್ಕೊಂದು ಸುಂದರ ಉಪಮಾನ. ಭಾಭಾ ತುಂಬು ಬದುಕನ್ನು ಬಾಳಿದ ಸೃಜನಶೀಲ ವ್ಯಕ್ತಿ.

ಕೊನೆಯುಸಿರು

ಸಮಿತಿಯ ಸಭೆಯೊಂದರಲ್ಲಿ ಭಾಗವಹಿಸಲು ಭಾಭಾ ಅವರು ಜಿನಿವಾಕ್ಕೆ “ಕಾಂಚನ ಗಂಗಾ” ಬೋಯಿಂಗ್ ವಿಮಾನದಲ್ಲಿ ತೆರಳುತ್ತಿದ್ದಾಗ, ಮಾಂಟ್‌ಬ್ಲಾಕ್‌ನಲ್ಲಿ ದುರಂತ ಸಂಭವಿಸಿತು. ನಿಸರ್ಗ ಪ್ರೇಮಿ ಭಾಭಾ ಪ್ರಕೃತಿಯ ಮಡಿಲನ್ನು ಸೇರಿದರು. ತಮ್ಮ ೫೬ನೆಯ ವಯಸ್ಸಿನಲ್ಲಿ ೧೯೬೬ರ ಜನವರಿ ೨೪ರಂದು ಭಾಭಾ ಕೊನೆಯುಸಿರೆಳದರು. ಭಾಭಾ ಇಲ್ಲವಾದರು. ಬಹುಜನ ಕಂಬನಿಗೆರೆದರು. ಟ್ರಾಂಬೆಯ ಸಿಬ್ಬಂದಿ ವರ್ಗ ದಿನದ ದುಡಿಮೆಗಿಂತ ಹೆಚ್ಚು ದುಡಿದು ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಭಾಭಾ ಆಶಿಸಿದ್ದಾದರೂ ಈ ದುಡಿಮೆಯನ್ನೇ!

ಮಾನವ ಪ್ರಗತಿ ಎಂದೂ ಅಸಾಧಾರಣ ಶಕ್ತಿ-ಪ್ರತಿಭೆಯ ಕೆಲವೇ ವ್ಯಕ್ತಿಗಳ ಸಾಧನೆಯ ಬುನಾದಿಯ ಮೇಲೆ ನಿಂತಿದೆ. ಅಂತಹ ಅಸಾಮಾನ್ಯ ವ್ಯಕ್ತಿ ಭಾಭಾ.

ಹುಟ್ಟು-ಸಾವು ಪ್ರಕೃತಿಯ ನಿಯಮ. ಆದರೆ ಬದುಕಿಗೊಂದು ನೆಲೆ-ಬೆಲೆ ಸಿಗುವುದು ವ್ಯಕ್ತಿಯ ಸಾಧನೆ-ಸಿದ್ಧಿಗಳಿಂದ. ಭಾಭಾ ಅವರ “ಪೂರ್ಣ ಜೀವನ” ಬದುಕುವವರಿಗೊಂದು ದಾರಿದೀಪ.

“ಇದ್ದ ಇಂತೊಬ್ಬ ಮಹನೀಯ,

ಮತ್ತೆ ಬರುವನಿನ್ನೆಂದು?”