ನಿದ್ದೆವೊನಲಿನ ನಡುವೆ ಎಚ್ಚರದ ಬಂಡೆ ! ಇದೊ
ಸುತ್ತ ಹರಿದಿದೆ ಹೊನಲು ಅರಿವು ನಿಲುಕದ ಕಡೆಗೆ !
ನಾನಿಲ್ಲೆ ನಿಂತೆ, ಹರಿಯಲಾರದ ಕರಗಲಾ-
ರದ ಜಡದ ಮುದ್ದೆ. ದೂರ ಕನಸಿನ ನೆರಳು ಹುಡು-
ಗಾಟವಾಡುತಿವೆ ಸೋತ ಕಣ್ಣಿನ ಸುತ್ತ ! ದಿನ
ದಿನದ ಜಂಜಡದ ಧೂಳು ಕವಿದಿಹ ಚಿತ್ತದಲಿ
ಒಳಸಂಚು ನಡೆಸುತಿವೆ ಮುರಿದ ಬಯಕೆಯ ಮುರುಕು !

ಸೊಳ್ಳೆ ಪರದೆಯ ಹೊರಗೆ ಸಿಳ್ಳು ಹಾಕಿತು ಸೊಳ್ಳೆ !
ಲಕ್ಷ ತೂತಿನ ಪಹರೆ ಕೋಂಟೆ ಬಳಸಿದೆ ಸುತ್ತ !
ಆಚೆ ಕತ್ತಲ ಕಡಲು, ಅದರೊಳೀ ದನಿದೋಣಿ
ತೇಲಿ ಬರುತಿದೆ ಹುಡುಕಿ ತನ್ನ ತೃಪ್ತಿಯ ದಡವ.
(ಎಲ್ಲೆಲ್ಲಿಯೂ ಅದೇ ಹೊಟ್ಟೆಪಾಡಿನ ಯಾತ್ರೆ !)
ಹಗಲು ಇರುಳೂ ಲೋಕ ಹುಡುಕಾಟಗಳ ಕಂತೆ !
ಇಷ್ಟೊಂದು ಚಿಂತೆಯೊಳು ನಮ್ಮದೇತರ ಚಿಂತೆ !