ದೇವರ ದೇವನೆ ದೇವ ಮಹೇಶನೆ
ಪಾವನರೂಪನೆ ಪುರಹರನೆ  ರತಿ
ದೇವಿಯ ಭಾವನ ಶಿರಧರನೆ  ಗಿರಿ
ದೇವನ ಸುತೆಯ ಮೋಹದ ವರನೆ  ದೃಢ
ಭಾವದಿ ಭಜಿಸುವ ಭಕ್ತರಿಚ್ಛಿತ ಫಲ
ಮೀವನ ಶ್ರೀಗುರು ದೇವನ ಭಜಿಪೆ                                                           ॥

ಜಾಣರು ಲಾಲಿಸಿ ಜಗದೊಳು ಜಲಜಾಕ್ಷ
ಬಾಣಸುರನಿಗಾದ ಸಂಗತಿಯ  ನಾನು
ಕ್ಷೋಣಿಯೊಳುಸುರುವೆನೀ ಕಥೆಯ  ಫಣಿ
ವೇಣಿವಾಣಿಯೆ ಕೊಡು ಸುಮತಿಯ  ವಿದ್ಯೆ
ಶ್ರೇಣಿಗಳರಸ ವಿಘ್ನೇಶನ ಬಲಗೊಂಡು
ಮಾಣದೆ ಪೇಳುವೆ ಮಾತಿಗೆ ತಕ್ಕನಿತ                                                     ॥

ಧರೆಯೊಳು ಶ್ರೋಣಿತಪುರವೆಂಬು ಪಟ್ಟಣ
ದರಸು ಬಾಣಾಸುರನೆಂಬವನು  ಎಲ್ಲ
ದೊರೆಗಳೊಳವನತಿ ಬಲ್ಲಿದನು  ಪುರ
ಹರನ ಪೂಜೆಯ ನಿತ್ಯ ಮಾಡುವನು  ಹೀಂಗ
ಇರುತಿರಲೊಂದಿನ ಹರನಿಗೆರಗಿ ದೇವ
ಕರುಣಿಸು ವೈರಿಯಿಂದೆಂದನಾ ಬಾಣ                                                      ॥

ಈಶನು ಕೇಳಿ ನಗುತ ಬಣಾಸುರನಿಗೆ
ಲೇಸು ಲೇಸೈಯೆನುತಲಿ ಕೊಟ್ಟನು  ರಕ್ಕ
ಸೇಶನ ಮಾತಿಗೊಡಂಬಟ್ಟನು  ಗರ್ವ
ನಾಶ ಮಾಡ್ವುದು ಮನದೊಳಗಿಟ್ಟನು  ಮುಂದೆ
ಭೂಸುರಪಾತಾಳ ಲೋಕದೊಳರಸಿಟ್ಟು
ಉಸುರಿದ ಕೃಷ್ಣನೆಂದು ಸದಾಶಿವನು                                                        ॥

ಈ ಪರಿ ಯತನದೊಳಿರುತಿರೆ ಹರ ಬಾಣ
ನಾ ಪುತ್ರಿ ಉಷೆಯೆಂದೆಂಬುವಳು  ಪ್ರಾಯ
ರೂಪು ಗುಣದಿ ಭರಿತಳಾಗಿಹಳು  ತಕ್ಕ
ಪ್ರಿಯನಿಲ್ಲದೆ ಬಾಳ ಬಯಸುವಳು  ಇಂಥ
ಆಪತ್ತಿನಿಂದ ಚಿತ್ರರೇಖೆಯ ಕರೆಯುತ
ಪೋಪುವ ನಡೆ ಗೌರಿ ಶ್ರೀಪಾದದೆಡೆಗೆ                                                      ॥

ಎಂದು ಈರ್ವರು ಪ್ರೀತಿಲಿಂದ ವನಕೆ ಪೋಗಿ
ಚಂದದಿ ಗೌರಿಯ ಬಲಗೊಂಡರು  ದೃಢ
ದಿಂದಲಿ ಕೈಯ ಮುಗಿದು ನಿಂದರು  ಗಿರಿ
ನಂದನೆ ವರವ ಪಾಲಿಸುಯೆಂದರು  ಕೇಳಿ
ಮಂದಹಾಸದಿ ದೇವಿ ಮೆಚ್ಚಿ ಮಗಳ ಮನ
ದಂದವನರಿದೆನೇಳೆಂದಳಾ ಗೌರಿ                                                             ॥

ತರುಳೆ ಫಾಲ್ಗುಣ ಶುದ್ಧ ವರ ದಶಮಿಯ ದಿನ
ಸರುರಾತ್ರಿಯೊಳು ನಿನ್ನ ಕನಸಿನಲಿ  ಬಂದು
ನೆರೆವನಾ ಪುರುಷನ ಗುರುತಿರಲಿ  ಇನ್ನು
ಇರು ಚಿಂತೆ ಬೇಡ ನೀ ಹರುಷದಲಿ  ಎಂದು
ವರವಿತ್ತು ಕಳುಹಲು ಉಷೆಯು ಸಂತೋಷದಿ
ಸ್ಮರಿಸುತ್ತ ದಿನವನ್ನು ಎಣಿಸುತ್ತಲಿರಲು                                                     ॥

ಸಂದಿ ಹೋಯಿತು ನವ ಮುಂದೆ ದಶಮಿಯ ದಿನ
ಬಂದು ಲೆಕ್ಕವನು ತಾ ನೋಡಿದಳು  ಮುದ
ದಿಂದ ಗೆಳತಿಯೊಳಗಾಡಿದಳು  ಬೇರೆ
ವೊಂದು ಮಂಚದಿ ನಿದ್ರೆ ಮಾಡಿದಳು  ಹೀಂಗ
ಇಂದುವದನೆ ಸ್ವಲ್ಪು ನಿದ್ರೆಯೊಳಿರೆ ಬಂದು
ಕಂದರ್ಪನಂದನ ಚಂದದಿ ಮೆರೆದಾ                                                         ॥

ಸ್ಮರಕಂದ ಸ್ವಪ್ನದಿ ನೆರೆದು ಪೋಗಲ್ಕಿತ್ತ
ತರುಳೆ ಉಷೆಗೆ ಎಚ್ಚರವಾಯಿತು  ಆಕಿ
ವಿರಹಸಂತಾಪ ತೀರದೆ ಹೋಯಿತು  ಕಣ್ಣು
ತೆರೆದು ನೋಡಿದರೆ ಕಾಣಿಸದಾಯಿತು  ಬಹು
ಮರುಗಿ ಬೆರಳನೊಡಮುರಿದು ಮುಂಗಾಣದೆ
ಕರೆದು ಕರೆದು ಕಾಂತನೆಂದಳಲಿದಳು                                                    9॥

ಪ್ರದ್ಯುಮ್ನನಂದನ ಇದ್ದಿಲ್ಲದಿರೆ ಕಾಣು
ತೆದ್ದು ಕುಳಿತಳಾಗ ಮಂಚದಲಿ  ಬದಿ
ಲಿದ್ದ ಕಂಬವನು ತಕ್ಕೈಸುತಲಿ  ನಲ್ಲ
ಎದ್ದಿಲ್ಲಿಗ್ಯಾಕ ಬಂದೆಂಬುತಲಿ  ಹುಚ್ಚ
ಬುದ್ಧಿಲಿ ಬಯಲ ಚುಂಬಿಸಿ ಮೋಹಿಸಲು ಉಷೆ
ಬಿದ್ದಳು ಬೇಗೈದ ಬಳ್ಳಿಯಂದದಲಿ                                                             ॥

ನಲ್ಲನೆ ನಾ ನಿನ್ನಗಲಿ ಜೀವಿಸಲಾರೆ
ತಲ್ಲಣಗೊಂಬುತೆ ತಾಪದೊಳು  ಕ್ಷಣ
ನಿಲ್ಲದೆ ಬರುವರೆ ಕೋಪದೊಳು  ಭೂಮಿ
ಯಲ್ಲೆ ನಾ ಕಾಣೆನು ರೂಪದೊಳು  ಕುಂದ
ಮಲ್ಲಿಗೆ ಗಂಧೆಯು ಸ್ವಲ್ಪು ಸುಳುವ ಕಂಡು
ಮೆಲ್ಲನೆ ಬಂದಳು ಇಲ್ಲಿಹನೆನುತ                                                                ॥

ಮಂದಗಮನೆ ಚಿತ್ರರೇಖೆಯು ಮುಸಕಿಕ್ಕಿ
ಚಂದದಿ ನಿದ್ರೆಯೊಳಿರುತಿಹಳು  ಉಷೆ
ಬಂದು ಮಂಚವ ಹೊಂದಿ ನಿಂದಿಹಳು  ಎನ್ನ
ಸುಂದರನಿವನೆಂದು ಅರಿದವಳು  ಭರ
ದಿಂದಲಿ ಬಿಗಿದಪ್ಪಿ ಮುದ್ದಿಸು ವ್ಯಾಳ್ಳೆದಿ
ಮಂದಗಮನೆಗೆ ಎಚ್ಚರಿಕಾದಿತಾಗ                                                            ॥

ಎಚ್ಚತ್ತು ಕುಳಿತು ಈಕೆಯ ನೋಡಿ ಮನದೊಳು
ಅಚ್ಚರಿಯ ಭಾವವ ತಾಳಿದಳು  ಇಂಥ
ಹುಚ್ಚಾಟವ್ಯಾಕೆಂದು ಕೇಳಿದಳು  ಎಲ್ಲ
ಬಿಚ್ಚಿ ನಾಚದೆ ಉಷೆ ಹೇಳಿದಳು  ಬಲು
ಮೆಚ್ಚುದೋರುತ ನಲ್ಲ ಮಾಡದ ಬಗೆಯನು
ಮೆಚ್ಚಗಂಗಳೆಯೊಳು ಉಚ್ಚರಿಸಿದಳು                                                      ॥

ಎರಳೆಗಂಗಳೆ ಎನ್ನ ತುರುಬ ಹಿಡಿದು ಮುದ್ದು
ಸುರಿಸುತ ಮಾಲೆಯೊಳು ಉಗರೂರಿದ  ಚಾಪ
ವರೆ ಚೆಂದುಟಿಯ ರಸವ ಪೀರಿದ  ಕೇಳು
ಸುರತದಿ ಸುಗುಣ ಸೊಗಸುದೋರಿದ  ಇಂಥ
ಪುರುಷನ ಮರೆದು ನಾ ಅರಗಳಿಗಿರಲಾರೆ
ಕರೆದು ತಾರೆಂಬುತಲೆರಗಿದಳವಳು                                                          ॥

ತಲೆಹಿಡಿದೆತ್ತುತ ತಂದು ಕೊಡುವೆನೆಂದು
ಬಲು ನಂಬುಗೆಯನಿತ್ತು ಅಳಿಯೊಳು  ಅವ್ನ
ನೆಲೆಯಾತಕೆಂದು ಹೇಳಿದಳು  ಉಷೆ
ತಿಳಿಯಲಿಲ್ಲವು ಹೊತ್ತುಯೆಂದು ಹೇಳಿದಳು  ಮತ್ತೆ
ಲಲನೆ ಧೈರ್ಯದಿ ಸರ್ವಲೋಕದ ಪುರುಷರ
ಚೆಲ್ವಿಕೆಯನು ಚಿತ್ರದಲ್ಲಿ ಬರೆದಳು                                                              ॥

ಬರೆದ ಪಟವ ತಂದು ತ್ವರಿತದಿ ಅದರೊಳ
ಗಿರುವವರೆಲ್ಲರನು ತಾ ಸಾರಿದಳು  ಕಾಮ
ತರುಳನ ಗುರುತವ ತೋರಿದಳು  ಕಂಡು
ಹರುಷದಿ ಉಷೆ ಕಳೆಯೇರಿದಳು  ಕರದು
ತರುವಡೆ ಕಳೆರೂಪ ಬರಕೊಂಡು ದ್ವಾರಕೀ
ಪುರಕೆ ಬರಲು ಇತ್ತ ಹರಿಯ ಮೊಮ್ಮಗನು                                             ॥

ಅನಿರುದ್ಧ ನಿನ್ನಿನ ದಿನ ರಾತ್ರಿಯೊಳು ತನ್ನ
ಕನಸಿನೋಳ್ಕೂಡಿದ ಕಾಂತೆಯಳಾ  ನೆನ
ನೆನಸಿ ಚಿಂತಿಸಿ ಬಲು ಭ್ರಾಂತಿಯಳಾ  ಗಿರು
ವನಿತರೊಳ್ಕಂಡನು ನಿಂತವಳಾ  ಯಾರು
ಎನುತ ಕೇಳಲು ಚಿತ್ರರೇಖೆ ಉಷೆಯ ರೂಪ
ವನು ತೋರಲಾಕ್ಷಣ ಮನ್ಮಥಸುತಗೆ                                                       ॥

ತರುಣಿರೂಪದ ಪಟ ಕರದೊಳು ಹಿಡಕೊಂಡು
ಹರುಷದಿಂದನಿರುದ್ಧ ನೋಡಿದನು  ಪರಿ
ಪರಿಯ ಮೋಹವನು ತಾ ಮಾಡಿದನು  ಬಲು
ಸರಸದಿಂದವಳ ಕೊಂಡಾಡಿದನು  ಇನ್ನು
ಬರುವೆನು ಕರೆದೊಯ್ಯ ಎನಲ್ಚಿತ್ರರೇಖೆಯು
ಭರದಿ ಹೆಗಲೊಳೊ ಹೊತ್ತು ತೆರಳಿದಳವಳು                                          ॥

ಬಂದು ಬೇಗದಿ ಬಾಣನಾತ್ಮಜೆ ಇರುತಿಹ
ಮಂದಿರವನು ಪೊಕ್ಕು ಮಂಚದಲಿ  ಕರ
ತಂದನಿರುದ್ಧನ ಇಳಿಸುತಲಿ  ಇಕೊ
ಬಂದಿಹ ನೋಡು ನೋಡೆಂಬುತಲಿ ಪೇಳಿ
ಮಂದಗಮನೆ ಮಂತ್ರಿಸುತ ಮರೆಯಾಗಲು
ಕಂದರ್ಪ ಕೇಳಿಗ ಒಂದುಗೂಡಿದರು                                                         ॥

ಕಾಂತೆಯ ಕೂಡಿನ್ನು ರಮಿಸುತ ಕೆಲದಿನ
ಕಂತುವಿನಾತ್ಮಜನಿರುತಿರಲು  ಪೇಳ್ವೆ
ನಂತ ನಾರದ ಋಷಿ ಬರುತಿರಲು  ಬಲು
ಭ್ರಾಂತಿಯಿಂದವಳಿಗೆ ಮೆಚ್ಚಿರಲು  ಕೇಳಿ
ಸಂತೋಷದಿಂದಲಿ ಬಾಣನು ಇದಿರ್ಗೊಂಡು
ಸಂತುಷ್ಟಿಪಡಿಸಲು ಇಂತೆಂದ ಋಷಿಪ                                                     ॥

ಬಾಣನೆ ಕೇಳ್ನಿನ್ನ ಭಾಗ್ಯಕ್ಕೆ ಸರಿಸಮ
ಗಾಣೆನು ನಾನಿನ್ನು ಭೂಮಿಯೊಳು  ಭುಜ
ತ್ರಾಣನಹುದು ಧರೆ ಮೂರರೊಳು  ಒಂದು
ಊಣೆಯ ಮಾತುಂಟು ಕೇಳ್ನಿನ್ನೊಳು  ಫಣಿ
ವೇಣಿ ನಿನ್ನಣುಗೆಯು ಒಬ್ಬ ವಿಟನ ತಂದು
ಜಾಣತನದಿ ಕೂಡಿ ಇರುತಿಹಳೆಂದ                                                           ॥

ಎಂದ ಮಾತನು ಕೇಳಿ ಬಾಣನು ಕೋಪದಿ
ಚಂದದಿ ಮಂತ್ರಿಯ ಕರಿಸಿದನು  ಸೋವಿ
ಗೆಂದವನಲ್ಲಿಗೆ ಚರಿಸಿದನು  ನೋಡಿ
ಬಂದು ರೋಷದಿ ಉಚ್ಚರಿಸಿದನು  ಕೇಳಿ
ಮುಂದಿರ್ದ ಮನುಜರಿಗಾಗ ನೇಮಿಸಿ ಬಾಣ
ನಂದನೆ ಮಂದಿರಕಾಗ ಮುತ್ತಿದರು                                                           ॥

ದಂಡಿನ ನಾಯಕರಾಗ ಒಳಗೆ ಹೋಗಿ
ಪುಂಡರೀಕಾಕ್ಷಿ ಉಷೆಯ ಕಾಣುತ  ಇಂಥ
ಭಂಡಾಟ ಮಾಡುವರೇ ಎನುತ  ನಿನ್ನ
ಮಿಂಡನ್ಯಾವಲ್ಲಿಹ ತೋರೆನುತ  ಆಗ
ಕಂಡರನಿರುದ್ಧನ ಕೈಯ ಬಿಗಿದು ಕರ
ಕೊಂಡು ಬಂದರು ಕದ್ದ ಕಳ್ಳನ ತೆರದಿ                                                      ॥

ಉರಿಯನು ಉಗುಳುತ ಉಗ್ರದಿ ಬಾಣನು
ಸ್ಮರಕಂದನಿಗೆ ಬಾಳ ಕೋಪಿಸಿದ  ಮಂತ್ರಿ
ಶಿರ ಹೊಡಿಸೆಂದು ನಿರೂಪಿಸಿದ  ಆಗ
ಪರಮ ನಾರದ ಕಂಡು ತಾಪಿಸಿದ  ನಿನ್ನ
ತರುಳೆಯ ವರನೀತನಿರಿಸಿ ಕಾರ್ಯವ ಮಾಡು
ಹರಿಯು ಕೇಳಿದರೆ ಹಾವಳಿ ಬಂದಿತೆಂದ                                                  ॥

ಬಂದು ನಾರದ ಋಷಿ ಬಾಣನ ಇದಿರೊಳು
ನಿಂದು ಹೇಳಿದ ಹರಿಯ ಪದನು  ಚಲ
ದಿಂದಲಿ ಫಲವಿಲ್ಲ ಬಿಡುಯೆಂದನು  ನಿನ್ನ
ನಂದನೆ ಅವನಿಗೆ ಕೊಡುಯೆಂದನು  ಕೋಪ
ದಿಂದಲಿ ಕರಕರ ಹಲ್ಲು ಕಡಿದು ಬಾಣ
ಎಂದಿಗಾಗುವದಯ್ಯ ಈ ಮಾತು ಮುನಿಪ                                              ॥

ತಿರಿಗಿ ನಾರದ ಹೋಗಿ ಹರಿಗೆಯೆರಗಿ ಬಾಣ
ಸುರನೆಂದ ಮಾತನು ಹೇಳಲಾಗ  ಕೇಳಿ
ನರಹರಿ ಬರೆದ ತನ್ನವರಿಗಾಗ  ಸುಮ್ನ
ಸೆರೆಸೂರಿ ಮಾಡಿರಿ ಪುರವ ಬೇಗ  ಖಂಡ
ಧರ ಹರಿಸದೆ ಬಾಣಸುರನೊಡಗೂಡಿ ತಾ
ಭರದಿ ಯುದ್ಧವ ಮಾಡುತಿರುವದೇನೆಂಬೆ                                                ॥

ಕಾಣುತ ಶ್ರೀಹರಿ ಕರದಿ ಚಕ್ರವನೆತ್ತಿ
ಬಾಣಸುರನ ಮೇಲೆ ಹೊಯ್ಯಲಾಗ  ಭುಜ
ಶ್ರೇಣಿಯುದುರಿಯೆರಡುಳಿಯೆ ಬೇಗ  ಕಂಡು
ಜಾಣ ನಾರದ ಕೈಯ ಹಿಡಿದನಾಗ  ಬಿಡು
ಕೇಣವ ಬಾಣಗ ಬೀಗತನದ ಮಾಳ್ಪೆ
ಆಣೆ ತಪ್ಪಿರೆ ಈಶನ ಪಾದದಾಣೆಂದ                                                         ॥

ನಾರದನಾಡಿದ ಮಾತನಾಲಿಸಿ ಬಾಣ
ಸುರನ ಕರವಾಗ ಮನ್ನಿಸಲು  ತಂದು
ಧೀರ ಮೊಮ್ಮಗನ ಕೈಯಲಿ ಕೊಡಲು  ಬೇಗ
ನೀರಜಾಕ್ಷಿಣಿಯ ಲಗ್ನವ ಮಾಡಲು  ಕೃಷ್ಣ
ದ್ವಾರಕೀಪುರಕೈದು ಸಾರ ಸಂತೋಷದಿ
ನಾರಿಯರೊಡಗೊಡಿ ಇರುತಿ……ಕೇಳಿ                                                       ॥

ಬಂದದ್ದು ನೋಡುವೆನೆನುತಾಗ ಕಾಮನ
ಕಂದನ ಸೆರೆಯೊಳಗಿರಿಸಿದನು  ತನ್ನ
ಮಂದಿ ಮಕ್ಕಳಿಗೆ ಉಚ್ಚರಿಸಿದನು  ಪೋಪೆ
ನೆಂದು ನಾರದ ಋಷಿ ಚರಿಸಿದನು  ಬೇಗ
ಬಂದು ಶ್ರೀ ಕೃಷ್ಣನ ಮುಂದೆ ಕರವ ಮುಗಿ
ದೆಂದನು ಕೇಳು ಗೋವಿಂದ ಬಿನ್ನಪವ                                                      ॥

ಬಲು ದ್ರವ್ಯಮದದಿಂದ ಮಲೆತಿಹ ಬಾಣನ
ನೆಲೆಯನಿನ್ನೇನ ಪೇಳಲಿ ಅವನ  ಸುತೆ
ಗೊಲಿದು ಸಿಕ್ಕಿಹನನಿರುದ್ಧನನ  ಕಟ್ಟಿ
ಕೊಲೆಗೆಳಿಸಿದ ಬಗೆ ಪೇಳಲೇನ  ನಿನ್ನ
ಚಲುವ ಮೊಮ್ಮಗನೆಂದು ಒಲಿದುಸುರುವೆನು
ಚಲದಿದ ಸೆರೆಯೊಳಗಿರಿಸಿಹನೆಂದ                                                          ॥

ಎಂದ ಮಾತನು ಕೇಳಿಯೆದ್ದು ಗರ್ಜಿಸಿ ಎನ್ನ
ಕಂದನ ನಂದನನೆಂದರಿದು  ಮುದ
ದಿಂದಲಿ ನಿನ್ನ ಮಾತನು ಜರಿದು  ಕೊಲ್ವೆ
ನೆಂದು ಸೆರೆಯೊಳು ಮುದ್ರೆಯ ಸರಿದು  ಭರ
ದಿಂದಲಿ ಸೆರೆಯೊಳು ಬಂಧಿಸಿದಸುರನ
ಇಂದು ತೋಳಿಳುಹುವೆನೆಂದ ಮುಕ್ಕುಂದ                                              ॥

ಕಾಳಿಯ ಹಿಡಿಸುತ ಕಡು ತವಕದಿ ಬರ
ಹೇಳಿದ ತನ್ನಯ ಚತುರಂಗಕೆ  ಆಗ
ಗೋಳಿಡುತಲಿ ಬಂತು ಸಂಗರಕೆ  ಬಲು
ದಾಳಿ ಮಾಡಿದರು ಬಾಣನ ಪುರಕೆ  ಸಿಕ್ಕ
ಕೋಳನ ಕೊಡದಿರೆ ತೋಳ ಸವರುವೆನೆಂದು
ಹೇಳಿ ತಾ ಕಳುಹಿದ ನಾರದನೊಡನೆ                                                       ॥

ಹೋಳಿಯ ಪದದಿಂದೆ
ಹೇಳಿದ ಉಜ್ಜಯನಿ ಪಟ್ಣವನು  ಬಿಡ
ದಾಳುವ ಮರುಳಸಿದ್ಧೇಶ್ವರನು  ಪದ
ಬಾಲಕ ಹೇಳಿದ ಕವಿತೆಯನು  ಕೇಳಿ
ಸಂತೋಷದಿಂದಲಿ ವರ್ಣಿಸಿ ಪೇಳಲು
ವ್ಯಾಳಕಂಕಣಧರ ಒಲಿವನು ನಿಮಗೆ                                                         ॥

* * *