ಪಿತ ಸುತ ಹಿತ ಬಂಧು ಯತಿ ಗುರುಗಳು ಬೇರೆ
ಅತಿವೀರ ರಣಕೆ ನೋಡುವನೆ  ಕೊಲೆಯು
ಹಿತವಲ್ಲ ಪಾಪವೆಂಬುವನೆ  ಬಂಟ
ಹತಿಸದೆ ಜೀವಂತ ಬಿಡುವನೆ  ನೋಡು
ರತಿಪತಿ ಸಮರಕೆ ಸತಿಯರಾರೇನು ಕೊಮರಾಮ
ರತಿಭೋಗ ಸಮರದ ಇರಿತವೆಂಬುವಳೂ                                               ॥

ಪರನಾರಿ ಸಂಗದಿ ಸುರರೊಡೆಯ ತಾ ಕೆಟ್ಟು
ತಿರುಗಿದನು ಹರಿ ದಶಭವದೊಳಗೆ  ಮತ್ತೆ
ದುರುಳ ರಾವಣ ಮರುಣಾದನಲ್ಲ  ಪಾಂಡ
ವರ ಸತಿಗೆ ಕೀಚಕ ಅಳಿದನಲ್ಲ  ಇಂಥ
ವರದೀ ಪಾಡು ಪರದಾರ ಸೋಬತಿಗೆ ಬುದ್ಧೆಲ್ಲಿ
ನರಕ ತಪ್ಪದು ತಾಯಿ ಕರಮುಗಿವೆನೆಂದ                                               ॥

ಧಿಟ್ಕೊಮರಾಮ ನಿನ್ನ ಆಟ್ಕಂಡು ಮನಸೋತು
ತಿಟ್ಕುಪ್ಪಸ ನಾ ತೊಟ್ಕೊಂಡೆನು  ಮಾಟ
ಬಟ್ಕುಚಗಳ ಮೇಲೆ ವಸ್ತಿಟ್ಕೊಂಡೆನು  ಮುಡಿಯ
ಬಿಟ್ಕಟ್ಟಿ ಹೂವೇರಿಸಿಟ್ಕೊಂಡೆನು  ಒಳ್ಳೆ
ಘಾಟ್ಕಾಂಬು ನಾರಿಗೆ ಬೇಟ್ಕೂಟ ಕೂಡದಲೆ ಕಾಮನ
ಆಟ್ಕಂಜಿ ಪೋದರೆ ನೇಟ್ಕಾಣೆ ರಾಮ                                                       ॥

ಇಳೆಯೊಳು ತಾಯೆಂದು ತಿಳಿತಿಳಿದು ಕೂಡಿದರೆ
ಬಳಲಿಸಿ ಯಮದೂತರೆಳೆಯುವರು  ಒಯ್ದು
ಖಳಖಳ ಕುದಿವೆಣ್ಯಾಗ ಚೆಲ್ಲವರು ಬಹಳ
ಹುಳುವಿನ ಕೊಂಡಕ ತುಳಿಯುವರು  ಒಳ್ಳೆ
ಮಳಿಗಳ ಬಲುಕಾಸಿ ಕಣ್ಗೆ ಚುಚ್ಚುವರು ಬಳಲಿಸಿ
ತುಳಿಯುವರು ನರಕಕ ತಿಳಿಯೆನ್ನ ತಾಯಿ                                              ॥

ಅಂಗಜನ ಮೊನೆಬಾಣ ನುಂಗಿ ನನ್ನ ಮನವ
ಅಂಗ ಸಂಗ ಸುಖವ ಬಿಡಲಾರೆ  ರಾಮ
ಭಂಗ ಮಾಡಲು ಬ್ಯಾಡ ನುಂಗಲಾರೆ  ಕಾಮ
ದಿಂಗ ಬಡಿಸಲು ಬ್ಯಾಡ ಚೆನ್ನಿಗನೆ  ಬಾರೊ
ಜಂಗಿ ಕಾಮೂಟಕ ಹಾರಿ ಚೆಂಗನೆ ಕೈಕೊಟ್ಟು
ಅಂಗವಾಲಿಂಗಿಸಿ ಹಿಂಗಿಸು ಕಾಮತಾಪ                                                  ॥

ಹೆರವರ ಹೆಣ್ಣಿಗೆ ಹರಿದು ಆಲಿಂಗಿಸಲು
ನರಕ ಹುಳುವಾಗಿ ಹುಟ್ಟುವನು  ಮತ್ತೆ
ಕುರುಡಾಗಿ ಕೂಳಿಗಿ ತಿರುಗುವನು  ಸಿಗದೆ
ಎರಡು ಕೈಲೆ ಹೊಟ್ಟೆ ಬಡೆಯುವನು  ತಾಯಿ
ಕೊರಗಿ ಮರಗಿ ಹದ್ದ ಪಾಲಾಗುವನು ಜೀವಂತ
ಇರುತಿರಲು ಗಿನ್ನಿ ತನ್ನಿ ಹತ್ತಿ ಸೋರುವನು                                              ॥

ಕುಸುಮಶರಕೆ ಬಾಳ ಕಸವಿಸಿ ಬಿಡುತಿಹೆನು
ಹಸಿದವರಿಗನ್ನ ಉಣಬಡಿಸು  ಬಾಳ
ತೃಷೆಯುಳ್ಳವರಿಗೆ ನೀರ ನೀಡಿಸು  ರಾಮ
ವಶವಾದ ಅಂಗನೆಯ ಭೋಗಿಸು  ಎಂದು
ಶಶಿಮಖಿ ರಾಮಗ ಬಿಗಿದಪ್ಪು ಸಮಯದಿ
ಕೊಸರಿ ಕೈಚೆಂಡ ಕಸಗೊಂಡ ನೋಡಿ                                                     ॥

ಭರರರರ ಪ್ರಾಣ ಪಕ್ಷಿ ಹಾರಿತೊ ರಾಮ
ಭರರರ ಓಡಿ ಹೋಗುತಲಿ  ಕಂಡು
ಸರರರರ ವಿರಹ ಹಾರುತಲಿ  ತಲೆಯು
ಗಿರಿರಿರಿರಿ ತಿರುಗಿ ಬೀಳುತಲಿ  ರತ್ನಿ
ಧರರರರ ಹಿಡಿದೆಳೆದು ರಾಮನಹ ಕರೆತರಸಿ
ಖರರರರ ಕೊರೆಸುವೆ ಜೀವಂತ ಸಿರವ                                                    ॥

ಛಲದಿ ರಾಮನ ಕೊಲಿಸಿ ಎಳಿಸಿ ಗೋರಿಗೆ ಹಾಕಿ
ಗೆಲಿಸಿ ಕೊಂಬುವೆ ಬತವನು  ಕೋಪ
ಬಲಿದು ರತ್ನಿ ಯುಗತಿ ತಗೆಯುತಲಿ  ಮೈಯ
ಮಾಲೆ ಸಹಿತ ಉಗರಿಲೆ ಚೂರುತಲಿ  ತನ್ನ
ಬಲಗೈಯ ಬಳೆಗಳ ಒಡೆಯುತಲಿ ಸಿಡಿಮಿಡಿ
ತಲೆ ಕಟ್ಟಿ ನೆಲಕ್ಹಾಸಿ ಕೆದರಿ ಮಲಗುತಲಿ                                                  ॥

ಚೆನ್ನಿಗ ಕೊಮರಾಮ ಕೆನ್ನಿಗೆ ಕಣ್ಣೀರು
ಬನ್ನ ಬಡೆವುತ ಬಂದ ಅಂಗಳಕ  ಸಾಕು
ನನ್ನೀ ತಾಯಿಯ ಮಾತ ಕೇಳದೆ ತಂದೆ  ಚೆಂಡ
ಸೊನ್ನಿಲಾಡದೆ ಲೆಗ್ಗಿ ಏರಾಡಿದೆ  ಅಯ್ಯ
ಅಣ್ಣ ಕಾಟಣ್ಣಗ ಇದುರಾಡಿದೆ ಈ ಪಾಟ
ಬೆನ್ನ ಸೀಳ್ವುದು ಕಾಯೊ ಎನ್ನ ಜಟ್ಟಿಂಗ ದೊರೆಯೆ                                         ॥

ಕಂಪಿಲರಾಯನ ಬೇಟಿ ಸಂಪಿನಿಂದಲಿ ಆಡಿ
ಕಂಪ ಕತ್ತುರಿ ಹೊತ್ತಂದಿದ್ದ  ರತ್ನಿ
ಚಿಂಪು ಚಿಪ್ಪಡಿಯಾಗಿದ್ದು ಕಂಡ  ಕೋಪ
ಕೆಂಪೇರಿ ಕಿಡಿಕಿಡಿ ಕಾರಿದ  ಮಡದಿ
ನೆಂಪ ಮಾಡಿ ಹೇಳ ಜುಲುಮೆ ಮಾಡಿದವನ
ಹೆಂಪೇರಿ ಕೊಯ್ದಂಗ ಈಗ ಕೊಯ್ಸುವೆ                                                    ॥

ಏನು ಹೇಳಲಿ ನಾಥ ಮಾನಹಾನಿಯ ನಾನು
ತಾನು ಮೈಮೇಲಿ ಏರಿ ಬಂದ  ರಾಮ
ಗ್ಯಾನವೇಟಿಲ್ಲದ ಕಾಮಕಂದ  ಎಳೆದ
ಸ್ವಾನ ಒಲ್ಲೆ ನಾನೆನಲು ಮೈಚೂರಿದ  ನಾಥ
ತಾನೆ ಚೆಲುವನೆಂದ ಮೇಲೆ ಬಂದ ನೀರೆ ಬಾ
ನೀನೆ ಕಾಮಾಟ ಕೊನೆಯೂಟಕೆಂದ                                                          ॥

ಪೊಡವಿಪತಿಯೆ ಕೇಳು ಆಡುತಾಡುತ ಚೆಂಡು
ಸಿಡಿದು ಮನಿಯಾಗ ಬೀಳುತಲಿ  ಚೆಂಡು
ಕೊಡುಯೆಂದು ಬಂದೆನ್ನ ನೋಡುತಲಿ  ಎನ್ನ
ಕಡುಚೆಲ್ವ ರೂಪಕ ಭ್ರಮಿಸುತಲಿ  ಎನ್ನ
ಕೆಡಿಸಿದ ಪರಿಯನು ನಾನೇನು ಹೇಳಲಿ ರಾಮನ
ಹೊಡಿಸಿ ರುಂಡರಕ್ತ ಹಣಿಗಿಟ್ಟು ನುಡಿಯೊ                                               ॥

ಸತಿಮಾತ ಕೇಳುತಲಿ ಅತಿಕೋಪ ಭೂಪತಿ
ಮತಿವಂತ ಬೈಚಪ್ಪಗ್ಹೇಳಿದನು  ಮಂತ್ರಿ
ಸುತನ ಹೊಡೆದು ತಲೆ ತೋರೆಂದನು  ಕೇಳಿ
ಮತಿವಂತ ಮರುಗುತ ಕೊರಗಿದನು  ದೊರೆಯ
ಸತಿಯರ ಕೃತಕವ ಅರಿಯದಲೆ ಒಮ್ಮೆಲೆ
ಮತಿಗೆಟ್ಟು ಸುತನ ತೆಲಿ ಹೊಡಿಸಬಹುದೆ                                                ॥

ತಿಳಿಯೆಲೆ ಮಂತ್ರೀಶ ಅಳಿಯನೆಂಬುತ ಪ್ರಾಣ
ತುಳಿಸದಿರೀ ಚಣಕ ಕೇಳ್ನಾನು  ಕೊನೆಗೆ
ಎಳಿಸಿ ನಿನ್ನಯ ತಲೆಯ ಹೊಡಿಸುವೆನು  ಹೊಡಿರಿ
ಅಳುಕದೆ  ಮರು ಅಪ್ಪಣೆಯೆಂದನು  ಮಾತು
ಒಳಗ್ಹುದುಗಿ ಅಡಗುತ ಕೇಳಿ ಮೈನಡಗುತ
ತಳಮಳಿಸಿ ನೊಂದು ನುಡಿಯದಾದನು                                                  ॥

ಚಣದೊಳು ಬೈಚಪ್ಪ ಎಣಿಸದೆ ರಾಮನ
ತಣಿಸಲು ಕಂಪಿಲರಾಯನಿಗೆ  ಹಿಡಿಸಿ
ಜನ ಕೊಟ್ಟು ಕರೆಸಿದ ಛೀ ಹಾಕಿ  ರಾಮ
ನಿನಗೆ ತಿಳಿಲಿಲ್ಲವಪರಾಧ ಮಾಡುದಕೆ  ತಾಯಿ
ಮನ ನೋಯ್ಸಿ ವ್ಯಭಿಚಾರ ಕೇಳುದಕೆ ಪಾಪಕೆ
ಕೊನೆ ಬಂತು ಜನುಮ ಉಳಿಸುವರಾರು                                                 ॥

ಪುರದೊಳು ರಾಮನ ಸಿರವ ಹೊಡಿಯುವರೆಂದು
ಹರಿದ ಸುದ್ದಿ ತಾಯಿ ಕೇಳಿದಳು  ಮರುಗಿ
ಮರಮರನೆ ಧರೆಯ ಮೇಲುರುಳಿದಳು  ಎದ್ದು
ತರುಳನ ಬಳಿಗೆ ಹೋಗುತಲಿ  ಎನ್ನ
ಕೊರಳ ಹರಿದು ಹೋಗೆನ್ನುತಲಿ ಮಗ ರಾಮ
ಮರೆದು ಜೀವಿಸಲ್ಹ್ಯಾಂಗ ಹೇಳೆಂದಳೂ                                                   ॥

ಹರಿಯಾಲಿ ಹಡೆದ್ಹೊಟ್ಟಿ ಕರೆದು ಬೈಚಪ್ಪನಿಗೆ
ತರುಳನ ತುಳಿಸನ್ನು ದುರುಳೆ  ಆರೊ
ಹರನೆ ರಾಮಲಿಂಗನೆ ನೀ ಕಾಯೊ  ನಿನ್ನ
ಹೊರತು ನಮಗ್ಯಾರಿಲ್ಲ ಶಿವಶಿವನೆ  ಎಂಥ
ಹರಲಿಯ ಮಾತಿದು ಲಾಲಿಸ ತಂಗಿ ರತ್ನಾಲಿ
ಸರಿಯಲ್ಲ ದುರುಮರಣ ರಾಮಗ ತಾಯಿ                                                 ॥

ಮಡದಿ ರಾಮಲದೇವಿ ತಡೆಯದಲ್ಲಿಗೆ ಬಂದು
ಕಡು ಚೆಲ್ವ ಕಾಂತನ ನೋಡುತಲಿ  ದುಃಖ
ಅಡರಿ ಎದೆಯೆದೆ ಹೊಡೆಕೊಳ್ಳುತಲಿ  ಎನ್ನ
ಗುಣ ರನ್ನನೆ  ಮೋಹನನೆ  ಸಂಪನ್ನನೆ
ಹೊಡೆದು ಮುಂದಕಡಿ ಇಡೆಂದಳು  ಜಲ್ಮ
ಸುಡುಸುಡು ಬಾಳೇಕೆಂದಳು  ಎಂದು
ಹೊಡಮರಳಿ ನೆಲಕ ಬೀಳುತಲಿ ಬಡಿಯಲು
ಒಡೆದು ಹಣಿನೆತ್ತರ ಸೋರುದೇನೆಂಬೆ                                                      ॥

ಮನ್ಯ ಮನ್ಯರು ಬಂದು ಮನ್ನುಣಿಯಿಂದಲಿ
ಚೆನ್ನಿಗ ರಾಮನಪ್ಪುತಲಿ  ತುಂಬ
ಕಣ್ಣೀರು ಸುರಸಿ ಚೀರಿ ಅಳ್ವುತಲಿ  ರಾಮ
ನಿನ್ನ ಮರೆವುದ್ಹ್ಯಾಂಗನ್ನುತಲಿ  ಕೇಳು
ವೀರನೆ  ರಣಶೂರನೆ  ಬಹುಧೀರನೆ
ಇನ್ನು ಛಪ್ಪನ್ನ ದೇಶಕಿಲ್ಲೆಂಬುವರು  ಶಿವನೆ
ಚೆನ್ನಿಗ ರಾಮನ ಸಲಹೆಂಬುವರು  ನಾವು
ಮುನ್ನೂರು ಸಾವಿರ ಗಣಗಳೂಟಕ ತಪ್ಪದಲೆ
ಸಣ್ಣಕ್ಕ ಹೋಳಿಗೆ ಚಿನ್ನಿಸಕ್ಕರಿತುಪ್ಪ ಹಾಕುವೆವು                                               ॥

ಚೆಂದುಳ್ಳ ರಾಮನು ಇಂದು ನಮ್ಮಗಲುವನು
ನೊಂದು ಗೆಳೆಯರೆಲ್ಲ ದುಃಖಿಸಿ  ನೇತ್ರ
ದಿಂದಲಿ ಕಣ್ಣೀರು ಹರಿಯುತ  ಇದಿಯು
ಬಂದು ರಾಜ್ಯ ನುಂಗಿತೆನ್ನುತ  ಅಯ್ಯೋ
ವಿಧಿ ಬಂದಿತೆ  ಮುಂದೆ ನಿಂತಿತೆ  ಕೇಡ ತಂದಿತೆ
ಇಂದಿಗೆ ಋಣ ತೀರಿತೆನ್ನುತಲಿ  ಶಿವನೆ
ಮುಂದೇನು ಗತಿಯೆಂದು ಗೋಳಿಡುತಲಿ  ಕೂಡಿ
ಮಂದಿ ಎದೆ ಬಡಕೊಂಡು ಜಟ್ಟಿಂಗ ರಾಮಲಿಂಗ
ವಂದಿಸಿ ಬೇಡುವೆವು ಸಲಹು ನೀನೀಗ                                                     ॥

ನೆರೆದ ಜನರಿಗೆಲ್ಲ ಕರಮುಗಿದು ಕೊಮರಾಮ
ಶಿರವಾಗಿ ಕೈಮುಗಿದು ನುಡಿದು  ಬ್ರಹ್ಮ
ಬರೆದಂತಾಗಲಿ ಚಿಂತಿಸಿ ಫಲವೇನು  ಪಾಪ
ವಿರದೆ ಶಿರವು ಪೋಗುವದೇನು  ಕೇಳಿ
ಹೀಗೆ ಆಡಿದ  ಧೈರ್ಯ ತಾಳಿದ  ಜನ ಕೇಳಿದ
ಬರುವೆನು ಕೃಪೆಯಿರಲಿ ನಮಿಸಿದ  ರಾಮ
ತೆರಳಿದ ಮತ್ತೊಂದು ಬಗೆಯದೆ  ಜನರು
ಮರುಗುತ ಹರಹರನೆ ಉಳಿಸೆಂದರು ಮರಳಿತು
ಸುರಿಸುತ ಕಣ್ಣೀರು ಬರುತ್ತಿದ್ದು ರಾಮ                                                       ॥

ಪಿಡಿದೋದು ರಾಮನ ಅಡವಿಯಾರಣದಾಗ
ನುಡಿಸಿ ಮಂತ್ರೀಶ ಕೇಳಿದನು  ಇಂಥ
ಹುಡುಗ ಬುದ್ಧಿ ಮಾಡಿದ್ಯಾಕೆಂದನು  ಶಿರವ
ಹೊಡೆವೆನು ಖಡ್ಗ ತಾರೆಂದನು  ಅಯ್ಯ
ಮಾಡಿದಿ ಚ್ಯಾಷ್ಟಿ ನೀ  ಬಹುದುಷ್ಟ ನೀ  ಕೆಟ್ಟ ಭ್ರಷ್ಟ ನೀ
ಹಡೆದವ್ನ ವಚನ ಮೀರಿದೆಂದನು  ಕೇಡು
ತಡೆಯದೀ ಚಣ ಬಂತೆಂದನು  ತಪ್ಪು
ತಡೆಯಲಾರೆನು ರಾಮ ನಾ ನಿನ್ನ ಶಿರವಿಲ್ಲೆ
ಕಡಿವೆನು ಖಡ್ಗಕೊಡು ಬೇಗೆಂದನು                                                            ॥

ನುಡಿಯಲಾಗ ಎದಿಗೆ ಹೊಡೆದಂತೆ ಮೊನೆಬಾಣ
ಬಿಡು ಕೇಡ ನುಡಿಯನಾಡುದನು  ದುಃಖ
ಅಡರುತ ಪಾಪಿ ನಾನಲ್ಲೆಂದನು  ಮತ್ತೆ
ಕೆಡಕು ಗುಣಗಳಿದ್ದರೆ ಹೊಡಿಯೆಂದನು  ಇದಿಯು
ಮುಂದ ತಿಳದೀತು  ಮಾತು ಹೊಳದೀತು  ಮನವಿಳಿದೀತು
ಬಿಡದೆ ಇದಿ ಕಾಡುತಿರ್ಪುದೆಂದನು  ನಾನು
ನುಡಿದರೆ ಹುಸಿ ಮಾತಾಗುವದೆಂದನು  ಮಾವ
ಹಿಡಿ ಖಡ್ಗ ಝಳಪಿಸಿ ಕರದೊಳೆಂದನು ತಡವೇಕೆ
ಹೊಡಿಯೆನ್ನ ಶಿರವನ್ನು ಕೊಡುತಿರ್ದನವನು                                            ॥

ಫುಲ್ಲಲೋಚನ ನಿನ್ನ ಎಲ್ಲ ಹೋಲಿಕಿರಾಮ
ನಿಲ್ಲದಲೆ ಓಡಿ ತಾ ಬಂದನು  ಅಣ್ಣಾ
ಇಲ್ಲಿಗೇತಕೆ ಬಂದೆ ನೀನೆಂದನು  ಬಂಧ
ದಲ್ಲಿ ಇರುವ ಕಾರಣೇನೆಂದನು  ಅಯ್ಯ
ಇಂಥಾದಾತೇನು  ನಿನ್ನ ಚಿತ್ತೇನು  ಈ ಸುದ್ದೇನು
ಅಲ್ಲಿ ರಾಮನ ಪಾದಕ್ಕೆರಗಿದನು  ಮತ್ತೆ
ಸೊಲ್ಲು ಸೊಲ್ಲಿಗೆ ದುಃಖ ತೋಡಿದನು  ಜೀವ
ನಿಲ್ಲದು ಬೇಗನೆ ಪೇಳೆನಲು ಕೊಮರಾಮ
ಎಲ್ಲ ತನಗಾದುದ ನಿಲ್ಲದೆ ಹೇಳಿದನು                                                       ॥

ಹಿರಿಯಣ್ಣ ನಿನಗಿಂಥ ಹರಲಿಯ ಪರಿಯೇನು
ಮರುಗಿ ಧರೆಮ್ಯಾಲೆ ಉರುಳಿದನು  ಎನ್ನ
ಶಿರವ ಕೊಡುವೆ ಕೊರೆ ಎಂದನು  ಚಿಂತಿ
ಮರೆತು ಸುಖದಲ್ಲಿರು ಎಂದನು  ನಿನ್ನ
ಬಂಧಿ ಕಡಿಸುವೆ  ನಿನ್ನ ಬಿಡಿಸುವೆ  ಗುಪ್ತ ಇಡಿಸುವೆ
ಇರುವದು ಹೋಲಿಕಿ ನಿನ್ನಂತೆ ನನ್ನದು  ರತ್ನಿ
ಅರಿಯಲು ಬದಲು ಇದೆಂಬುದನು  ನಿನ್ನ
ಮರೆದು ಇರುವುದ್ಹ್ಯಾಂಗೆಂದು ಹೊಲ್ಕಿರಾಮ
ಶಿರ ಬೇಗ ಹೊಡೆಯೆನುತಿರ್ದನಗ್ರಜಗೆ                                                     ॥

ನಿನ್ನಂಥ ತಮ್ಮನ ಇನ್ನೆಲ್ಲಿ ಕಾಣೆನಯ್ಯ
ಎನ್ನೂತ ದುಃಖದಿಂದಪ್ಪಿದನು  ತನ್ನ
ಕಣ್ಣೀರಿಂದಲಿ ಮೈದೊಳೆದನು  ಮತ್ತೆ
ಮನ್ನಿಸಿ ಹಿತಮಿತ ಹೇಳಿದನು  ಬೇಗ
ಕೇಳು ತಮ್ಮನೆ  ನೀನು ಸುಮ್ಮನೆ  ಪೋಗು ಘಮ್ಮನೆ
ತನ್ನ ಪುಣ್ಯ ಪಾಪ ತನಗೆಂದನು  ಇದಿಯು
ಬೆನ್ನ ಬಿಡದೆ ಉಣಿಸುವದೆಂದನು  ಕೇಳು
ಅಣ್ಣ ಇಂಥ ಅನ್ಯಾಯ ತರವಲ್ಲ ಎಂದೆನುತ
ನಿನ್ನ ಕೊಲ್ಲಿಸು ಕೆಲಸ ಹೀನೆಂದನು                                                           ॥

ಕತೆಯ ಪೇಳುವೆನಣ್ಣ ಹಿತದಿಂದ ಲಾಲಿಸು
ಮತಿವಂತ ಪುತ್ಥಳಿ ಮೂವತ್ತೆರಡು  ಪರರ
ಹಿತಕಾಗಿ ವಿಕ್ರಮರಾಜನು  ಪ್ರಾಣ
ಹತವಾದ ವಿಧಿ ಮಾಡುವದೇನು  ಶಿವನೆ
ಇಂಥ ನೀತಿಯು  ಕೇಳುಪ್ರೀತಿಯು  ಮಾಡುಜಾತಿಯು
ಬತಗೆಟ್ಟು ಮಾಡಿದ ಮಾತಿನ ಮರ್ಮವು  ಕೇಳು
ಮತಿವಂತ ಮಂತ್ರಿಗೆ ಅರಿಕೆಯು ಅಣ್ಣಯ್ಯ
ಅತಿ ಬೇಗ ಹೇಳು ಹತಿಸಬೇಡೆಂದ                                                           ॥

ತರವಲ್ಲ ತಮ್ಮನೆ ಮರೆಯಲಾರದು ವಿಧಿಯು
ಹರ ಹರಿ ನರರನುಭವಿಸಲಿಲ್ಲೆ  ಪಾಂಡ
ವರು ಮನಿಮನಿ ತಿರಿದುಣ್ಣಲಿಲ್ಲೆ  ವನಕ
ಚರಿಸಿ ರಾಮ ಶೋಕಿಸಲಿಲ್ಲೆ  ಕೇಳು
ರಾಮಸೀತೆಯು  ಧರ್ಮದ್ರೌಪತಿಯು  ವೀರರತಿಪತಿಯು
ಹರಿಚಂದ ಹೊಲೆಯಾಳಾಗಲಿಲ್ಲೆ  ನಳನು
ಧರೆಯೊಳು ದೇಶ ಬಿಡಲಿಲ್ಲೆ  ಇಂತೀ
ದೊರೆಗಳು ದುಃಖ ಪರಿಭವಿಸಿದಾಗ ಹೇಳಯ್ಯ
ಪರರ ಹಿತಕರು ಯಾರು ಬಿಡಿಸಿದರೆನಲು                                                ॥

ಕತೆ ಕೇಳು ಅಣ್ಣಯ್ಯ ಸತ್ಯೇಂದ್ರ ಚೋಳನ ಮಗ
ಮತಿವಂತ ರಾಜಶೇಖರನೆಂಬವನು  ಮೈತ್ರ
ಹಿತವಾದ ಮಂತ್ರಲಕ್ಷನೆಂಬವನು  ಇರುತ
ಅತಿ ಪೇರಿಯೊಳು ರಾಜಶೇಖರನು  ಮಗನ
ಹಯ ಒದ್ದೀತು  ಕೂಸು ಬಿದ್ದೀತು  ಜೀವ ಹೋದೀತು
ಸತ್ಯೇಂದ್ರ ರಾಜನಿಗೆ ತಾಯಿ ದೂರಿದಳು  ಸುತನ
ಅತಿ ಕೋಪದಿ ಮಂತ್ರಿ ಹೊಡಿಯೆಂದನು  ಶಿರವ
ಹತಿಸುವ ವ್ಯಾಳ್ಳೇಕ ಮಿತ್ರ ಮಂತ್ರ ಲಕ್ಷ ಬಂದು
ಗತಿಯಾದೆನೆಂದು ಕುತ್ತಿಗೆ ಕೊಟ್ಟನು                                                         ॥

ಬಿಡು ತಮ್ಮ ಮಾತ್ಯಾಕ ಜಡಜಬಾಣನ ಸಾಂಬ
ಸುಡುವಾಗ ಹರಿಬಂದು ಬಿಡಿಸಿದನೆ  ಪೆರೆಯ
ಹಿಡಿವ ರಾಹುಬಂದು ಬಿಡಿಸಿತೇನು  ಕೃಷ್ಣ
ಮಡಿವಾಗ ಪಾಂಡವರು ಪಿಡಿದರೇನು  ಮತ್ತೆ
ಕೇಳು ಚಂದ್ರನು  ದೇವೇಂದ್ರನು  ಈ ಕುಬೇರಿಂದ್ರನು
ಒಡಗೂಡಿ ದೇವರ ಸಮೂಹವು  ಶಿವನು
ಸುಡುವಾಗ ದಕ್ಷನ ಬಿಡಿಸಿದರೇನು  ಜೀವ
ಬಿಡುವ ಸಮಯದಿ ತಾಯ್ತಂದೆ ಬಳಗೆಲ್ಲ
ಒಡಹುಟ್ಟಿದವರು ಬಿಡಿಸುವರೇನು                                                              ॥

ಬಿಡು ಮಾತು ಅಣ್ಣನೆ ಒಡಲುರಿ ತಾಳದು
ಕೊಡುವೆನು ಎನ್ನ ಪ್ರಾಣವನು  ತಮ್ಮ
ಬಿಡು ಧರ್ಮವೇ ನೀ ನಡೆಯೆಂದನು  ಅಣ್ಣ
ಕೊಡುವೆನು ಭಿಡೆಯಿಲ್ಲ ಪ್ರಾಣವನು  ಅಯ್ಯ
ಮನ ನೊಂದುತ  ದೇಹ ಕುಂದುತ  ಮುಖ ಕಂದುತ
ಬಿಡು ಹಟ ಬೇಡೆಂದು ಮಿಡುಕಿದನು  ತಮ್ಮ
ತಡೆಯದಪ್ಪಣಿ ಕೊಡಣ್ಣ ಎಂದನು  ಪಿಡಿದು
ಒಡಗೂಡಿ ಶೋಕದಿ ಬಿಗಿದಪ್ಪುತ ಮಂತ್ರೀಶ
ತಡವಾದೀತೆಂದು ರಾಮನ ಹಿಡಿದೆಳೆದನು                                              ॥

ಪಿಡಿಯಲಾಕ್ಷಣ ಮಂತ್ರಿ ಕಡುಕೋಪದಿ ಪೋಲ್ಕಿರಾಮ
ಬಿಡು ನನ್ನಣ್ಣನೆಂಬುವನು  ಮತ್ತೆ
ಬಿಡದಿರೆ ಜಡಿಯುವೆ ಕಡಿಯುವೆನು  ಶಿರವ
ಎಡೆಮಾಡಿ ಕೈಮುಗಿವೆ ಶಿವನಿಗೆ  ಅಯ್ಯ
ಇಂಥ ಕರ್ಮೇನು  ಮಾಡು ಧರ್ಮೇನು  ನಿನ್ನ ವರ್ಮೇನು
ಮಡಿಯುವೆ ಅಣ್ಣನ ಕಾಲಾಗ ನಾನು  ಎಂದು
ಕೊಡುದಿಲ್ಲ ಅಣ್ಣನ ಮಂತ್ರೀಶ ನಾನು  ಕೇಳು
ಕೊಡುವೆನು ಶಿರವನು ಕಡಿ ನೀನು ತಡಬೇಡ
ಹೊಡಿಯದಿದ್ದರೆ ರಾಮಲಿಂಗನಾಣೆಂದನು                                               ॥

ಆಲಿಸು ಪದ್ಮಿನಿ ಹೋಲಿಕಿ ರಾಮಯ್ಯ
ಮೇಲಾದ ನಿನ್ನ ಪುರುಷತ್ವ  ಹೋದ
ಕಾಲವು ಬಂದಲ್ಲಿ ಒದಗಿತವ್ವ  ಮತ್ತೆ
ಶೂಲಧರನೀಗ ಮುನಿದನವ್ವ  ನಾರಿ
ಕೇಳು ಆತನ ತೆಲಿಯ ಮಂತ್ರಿ ಹೊಡೆಯಲು
ಆಲಸವಿಲ್ಲದೆ ಮಡಿದನಾಗವ್ವ                                                                     ॥

ಕೇಳಕೇಳುತ ಎದಿಯ ಕಾಳಜ ತಾ ಒಡಿದು
ಕಾಳಗವಿದು ಕಣ್ಣು ಕಾಣದಲಿ  ಒಳ್ಳೆ
ಗೋಳಿಟ್ಟು ಬೋರಾಡಿ ಚೀರುತಲಿ  ದುಃಖ
ತಾಳದೆ ಒಡಲುರಿ ಏಳುತಲಿ  ತಿರುಗಿ
ಬೀಳುತಲಿ ತಲೆಯೊಡೆದು ಚೀರುತಲಿ ಅಂಜುತಲಿ
ಕೇಳುತ ನಾರೇರು ಗದಗುಟ್ಟಿ ನಡಗುತಲಿ                                                ॥

ಪರಿಪರಿ ದುಃಖದಿ ಉರುಳಿ ಭೂಮಿಯ ಮ್ಯಾಗ
ಕರಕರ ಕಂದಿ ಕರಗುತಿರ್ದಲು  ಅಯ್ಯ
ಮರಮರನೆ ಮನದೊಳು ಮರಗುವಳು  ಒಮ್ಮೆ
ಚಿರಿಚಿರಿ ಬಳಲುತ ಉರುಳುವಳು ಪದ್ಮಿನಿ
ಹರಹರ ಸ್ಮರಿಸುತ ನಮಿಸುವಳು                                                             ॥

ಒಡಲುರಿ ತಾಳದೆ ಹೊಡಮರಳಿ ಬೀಳುತ
ಸಿಡಿದು ಗುಡುಗುಡು ಉರುಳುತಲಿ  ಸಣ್ಣ
ಮಿಡಿಮೀನ ಪರಿಯಂತೆ ಮಿಡುಕುತಲಿ  ಹಣೆಯ
ಬಡಿದು ನೆಲಕ ಧೂಳಡರುತಲಿ  ಮಾರಿ
ಒಡೆದು ನೆತ್ತರ ಸೋರಿ ಹರಿಯುತಲಿ ಆ ನಾರಿ
ಸುಡು ಜಲ್ಮವೆನ್ನತ  ಬಡಕೊಂಡಳಯ್ಯೋ                                              ॥

ಏಳಲು ಚೇತರಿಸಿ ಮೇಲೆದ್ದು ನಿಲ್ಲಲು
ತಾಳದೆ ಭೂಮಿಗೆ ಬೀಳುವಳು  ಅಯ್ಯ
ಬಾಳಲೋದನೆ ಮುನಿದನೆಂಬುವಳು  ಎನ್ನ
ಅಳುವ ದೊರೆಯು ಮುಡಿದನೆಂಬುವಳು  ಏನು
ಹೇಳದೆ ಹೋದನು ಬಾಳಲಿನ್ನೇನು ರಾಮಲಿಂಗ
ಬೀಳುವೆ ಬೆಂಕ್ಯಾಗ ಬೂದ್ಯಾಗಲಯ್ಯೋ                                                  ॥

ಮೈಯಾಗ ಅರುವಿಲ್ಲ ಕಾಯ ಕಾಂತನ ಬಯಸಿ
ಬಾಯೆಂದು ಬಯಲಪ್ಪಿಗೊಂಬುವಳು  ಗೋಡೆ
ಹಾಯುತ ಧಡಧಡ ಬೀಳುವಳು  ಒಮ್ಮೆ
ಮಾಯಾಮೋಹವೆ ಬಾ ಕೈಚಾಚುವಳು  ಚೀರಿ
ಬಾಯೆದ ಬಡಕೊಂಡು ಘಾಯಾಗುತಲಿ ತುಟಿಜೇನ
ಮಾಯಾದಿ ಎನ್ನ ಜೀವದ ಬೆಳಕ                                                               ॥

ಮುತ್ತಿನ ಮೂಗುತಿ ಎತ್ತ ಒಗಿಯಲೆವ್ವ
ಸತ್ತ ಗಂಡಗ ಮೂಲವ್ವ  ಹಣಿಗೆ
ಕತ್ತುರಿ ಕುಂಕುಮ ಎರವಾತ  ಎನ್ನ
ಮುತ್ತೋದಿತನವಿಂದಿಗ್ಹಾಳಾತ  ಮಾರಿ
ಎತ್ತಿ ತಿರುಗಿ ಗರತೆರೋಳಿರಲಾರೆ ಅನುತ
ಕುತ್ತಿಗಿ ಶಿರಬಿಗಿದು ದುಃಖಿಸಿ ಬಿಕ್ಕುವಳು                                                   ॥

ಮಂಡಲದೊಳು ನಾನು ರಂಡಿಯಾದ ಮೇಲೆ
ದಂಡಿಮುತ್ತಿನ ಕೊಟ್ಟು ಕೊಂಡೇನೆಂದ  ಹಣಿಯ
ಮಂಡಲೊಳು ಕುಂಕುಮಿಟ್ಟೇನೆಂದ  ಕರೆದು
ಕೊಂಡು ಮುತ್ತೋದಿಗಳುಂಡೇನೆಂದ  ಎನ್ನ
ಗಂಡನ ಕೊಲ್ಲಿಸುತ ಕೆಂಡಗಣ್ಣಿನ ಶಿವ ತನ್ನ
ರುಂಡಮಾಲಿಗೆ ಶಿರವ ಕೊಂಡನೆನಲು                                                     ॥

ಕಡುಚಲುವ ಕಾಂತನು ಅಡಗಿದ ಚಣದೊಳು
ನಡುನೀರಾಗ ಕೈ ಬಿಟ್ಟಂಗವ್ವ  ಘೋರ
ಅಡವಿಯ ಹೊಗಿಸಿ ಮರೆತಂಗಾತವ್ವ  ಈಗ
ಪೊಡವಿಯೊಳಿಂಥ ಕಡುಪಾಪಿಲ್ಲವ್ವ  ಎಂದು
ಅಡರಿ ನೆಲಕ ಬಡಿದು ಅಳುತಿರಲು ತುಂಬಿದ
ಹಡಗ ನಡುಗಡಲಾಗೊಡೆದಂಗಾತವ್ವ                                                      ॥

ವಡವಾಗ್ನಿ ಉರಿಯೆದ್ದು ಸುಡುವದು ಮೈಯೆಲ್ಲ
ಕೊಡ ನೀರು ಗುಟುಗುಟು ಕುಡಿಯಲೇನ  ಒಳ್ಳೆ
ಮಡುವಿರ್ದ ನೀರೊಳು ಧುಮುಕಲೇನೆ  ತಾಪ
ತಡೆಯದೆ ಅಲ್ಲಿಗೆ ಪೋಗಲೇನೆ  ದೀಪ
ಹಿಡಿದ ಹುಳದಡಿಗಳ ಪರಿಯಂತೆ ಪದ್ಮಿನಿ
ಅಡಿಗಳ ಹೊಸೆದಾಡಿ ಸಿಡಿದುರುಳುತಿರಲು                                             ॥

ಮರೆಯಲಾರೆನು ಎನ್ನ ಅರಸನಿಲ್ಲದೆ ಈಗ
ಗಿರಿಯ ಮೇಲೇರಿ ಕೆಳಗ್ಹಾರಲ್ಯಾ  ದೊಡ್ಡ
ಶರಧಿಯೊಳು ಬಿದ್ದು ಮುಳುಗ್ಹೋಗಲ್ಯಾ  ಘೋರ
ಧರಣಿಯ ಬಗದಾಳ ಸೇರಲ್ಯಾ  ತಾಪ
ತರಹರಿಸಿ ಚಿರಶಾಂತಿ ಕೊಡುವಂಥ ವಿಷವರೆದು
ಹರಹರನೆ ಕುಡಿವೆನೆಂದು ಹೊರಳುತಲಿಹಳು                                                   ॥

ಹಿಂದಿನ ಜಲ್ಮದಿ ಮಂದಿಯ ಗಂಡರನ
ಕೊಂದ ಪಾಪ ಬಂದು ತಟ್ಟಿತೇನು  ಉಣ್ಣು
ಮುಂದಿನೆಡೆಯ ಕಸಿದಿಟ್ಟೆ ತಟ್ಟಿತೇನು  ಮನವ
ನೊಂದಿಸಿ ವಿಷವ ಕೊಟ್ಟೆನೇನು  ಪಾಪ
ಬಂದಿಂದು ನರಕಕ ಎಳೆದವೇನು ಅದು
ಇಂದಿಗೆ ಬಿಡದೆನಗೆಂದು ಚಿಂತಿಪಳು                                                         ॥

ತರುಳ ಹುಟ್ಟಿ ಮೂರುವರೆ ತಿಂಗಳಿಗೆ ನಿನ್ನ
ಮರಣವಾಗಲೆಂದು ಹಣೆಗೆ  ಪಾಪ
ಬರೆದಳು ಸೆಟವಿ ಅರಣ್ಯದೊಳು ನಿನಗೆ  ಆರು
ಅರಿಯದಲೆ ಮಂತ್ರಿಯ ಕರದೊಳಗೆ  ಖೊಟ್ಟಿ
ಬರೆಸಿದ ಬ್ರಹ್ಮನ ಕರವ ಖಂಡಿಸಿದೆ ನೀ ಬಂದು
ಸಿರವ ತಗಿದ್ಯಾಕೆ ಹರನೆಂಬುವಳು                                                            ॥

ಪುಟ್ಟಿಸು ಬ್ರಹ್ಮನು ಕೊಟ್ಟವನಿವನೆಂದು
ಕೊಟ್ಟಿದ್ದ ಶಿವ ಪುಟ್ಟಿಸದಿರಲಿ  ಒಡಲ
ಹುಟ್ಟಿದವನೊಬ್ಬ ಹರಿದು ಹೋಗಲಿ  ಅವನ
ಹೊಟ್ಟಿಲಿರುವ ಮಗ ತಿರಿದುಣ್ಣಲಿ  ತನ್ನ
ಪಟ್ಟದರಸಿ ಮಗ ಕಟ್ಟು ಹೋಗಲಿ ಎಂದಾಕಿ
ಕುಟ್ಟಿತರುತ ಮಣ್ಣ ಬಟ್ಟು ಮುರಿಯುವಳು                                                ॥

ಸುಂದರ ಪುರುಷನ ಎಂದು ನೋಡುವೆ ಮುಖವ
ಹೊಂದಿ ಪೂರ್ಣಿಮಿ ಚಂದ್ರನೇನ  ಭೋಗ
ದಿಂದಲಿ ರಾಜಿಸು ದೇವೇಂದ್ರನೇನ  ದ್ರವ್ಯ
ದಿಂದಲಿರುವ ಕುಬೇಂದ್ರನೇನ  ಕೇಳು
ಮಂದಗಮನಿಗೀಗ ಬೇರೊಂದು ನೆನಪಾಗಿ
ನೊಂದು ಕಣ್ಣಿಗೆ ನೀರ ತಂದು ಅಳುವಳು                                                ॥

ಕೇಳದು ಕಣ್ಣೀರು ಏಳ್ವುದು ಸಂತಾಪ
ತಾಳದು ಮನವು ಶಿವಶಿವನೆ  ಎನ್ನ
ಆಳರಸರಿಲ್ಲದ ಬಾಳು ಯಾತರದಯ್ಯ  ಸಾರಿ
ಬೀಳುತೇಳುತ ಬಲು ಮಿಡಕುವಳು  ಅಯ್ಯ
ಹಾಳು ಮನೆಯ ನೋಡಿ ಗೋಳೆಂಬುವಳು ಜನದಾಗ
ಹೇಳಿ ಕೇಳಿ ಬಾಳ್ವುದು ತರವೇನಯ್ಯೋ                                                 ॥

ನಿನ್ನಿನ ಇರುಳಿನೊಳು ಎನ್ನ ಕನಸಿನೊಳಗ
ರನ್ನ ತಾಳಿಯು ಮಾಯವಾಗಿತ್ತವ್ವ  ಕೇಳ
ಮುನ್ನ ಗಾಬರಿಯಾಗಿ ಹುಡುಕುತಲಿದ್ದೆ  ನೋಡ
ಮಣ್ಣಾಗ ಮಿಂಚೂತ ಕಣ್ಮರೆಯಾತ  ಮೋಡ
ಕಾಣ್ವೊಡೆ ಮಿಂಚಾಗಿ ಅರಸರ ಮೇಲೆ ಭೋರೆಂದು
ಮಣ್ಮಳಿ ಬಿದ್ದೆನಗ ಎಚ್ಚರಾತವ್ವ                                                                 ॥

ಹರಿಯಾಗ ಏಳುತಲಿ ಮಾರಿ ಮೈಯನು ತೊಳೆದೆ
ಅರಸರ ಚಿಂತ್ಯಾಗ ಇರುತಿರಲು  ಕೇಳ
ಇರುಳ ಕನಸು ಸತ್ಯ ತೋರಿತಲ್ಲ  ಎನ್ನ
ಹರಣನ ಮರಣ ಸುದ್ದಿ ಹರಿವಿತಲ್ಲ  ಅಯ್ಯ
ಹರ ಮುನಿದ ಮ್ಯಾಲಿನ್ನು ಉಳಿಸುವರ್ಯಾರು ಗೋಳೆಂದು
ಕೊರಗಿ ಚದುರಿ ಬಲು ಬಿಕ್ಕಿ ಅಳುವಳೂ                                                   ॥

ಹರುಷದಿಂದಲಿ ಕಾಂತ ಹೊರಗೆ ಹೋಗುವಾಗ
ಬೆರಳೆಡವಿ ನೆತ್ರ ಸುರದೀತವ್ವ  ನೋಡಿ
ತರಹರಿಸಿ ಚಾಲೊರೆದ ಹೋಗಬ್ಯಾಡೆಂದು  ದೊಡ್ಡ
ತುರಗ ತಾ ಮುಂದಕ ಸಾಗಾತವ್ವ  ಮುಂದೆ
ಹೊರಡಲು ಬೆಕ್ಕು ಅಡ್ಡಗಟ್ಟಿತವ್ವ ಬೇಡಂದೆ
ತಿರುಗದೆ ಮುಂದೆ ಸಾಗಿದರವ್ವ                                                                 ॥

ಕನ್ನೆಮಣಿಯೆ ಕೇಳ ಎನ್ನ ಮೋಹಿಸುವಾಗ
ಚೆನ್ನಿಗ ಮುಖವನು ನೋಡಲಿಲ್ಲ  ಬೇಡ
ಮುನ್ನೆನ್ನಲು ನುಡಿಯ ಕೇಳಲಿಲ್ಲ  ಮನದ
ಎನ್ನ ಬೆಂಕಿ ಬಯಕೆಲ್ಲ ತೀರಲಿಲ್ಲ  ಗುಣವೆ
ರನ್ನ ಸಂಪನ್ನ ಮೋಹನ್ನ ಸೂಸನ್ನ ಜೀವನ್ನ
ರನ್ನ ಎದಿಮ್ಯಾಗಿನ ಹಾರೆಂಬುವಳು                                                          ॥

ಸರಳ್ಹೆಗಿದ ಬೈತಲೆಗೆ ಹೊರಳು ರಾಗುಟಿ ಚೌರಿ
ಅರಳ ಮಲ್ಲಿಗೆ ಹಾರ ಸುರುಳೊಲ್ಲದು  ಮುತ್ತಿ
ನ್ಹರಳಾಭರಣ ಕೊರಳೊಲ್ಲದು  ರತ್ನ
ಹರಳಿನುಂಗುರ ಬೆರಳೊಲ್ಲದು  ಎಂದು
ಉರುಳಿ ಹೊರಳಿ ನೆರಳುವಳು ತೆರಳುವಳು
ಎರಳಿ ಸುರಳಿ ಕೊರಗಿ ಮರುಗುವಳು                                                      ॥

ಗುಣರೂಪ ಯೌವನ ವರಣಿಸಲಿಂತೆನ್ನ
ಚಣಕೊಮ್ಮೆ ಬಂದೆನ್ನ ನೋಡುವನು  ಒಂದು
ಚಣವಗಲೆನ್ನ ಬಿಟ್ಟಿರಲಾರನು  ರತ್ನ
ಮಣಿಹಾರಗಳಿಟ್ಟು ನೋಡುವನು  ಅಯ್ಯ
ರುಣವು ತೀರಿತು ಎನ್ನ ಗುಣಮಣಿ ಅಗಲಿದ
ಹಣೆಬರಹ ನಂದೆಂದು ಮಣಿದುರುಳುತಿರಲು                                          ॥

ಹೊಗರು ತಿದ್ದಿದ ಮೀಸಿ ನಿಗರಿ ಗಡ್ಡದ ಭಾವ
ನಗಿಮುಖವೊಮ್ಮೆರ ತೋರೆನ್ನುವಳು  ನಿನ್ನ
ಅಗಲಿ ಜೀವಿಸುದ್ಹ್ಯಾಂಗೆನ್ನುವಳು  ಬಂದು
ಸೊಗಸು ಮಾತೆನ್ನೊಡನಾಡೆನುವಳು  ನೆಲವ
ಬಗಿದು ಸುಗುಣನೆಂದು ಗಗನಕ್ಕೆ ಬಾಯೊಡ್ಡಿ
ನಗಿಗೇಡಾದಿತೆಂದು ಹೌಹಾರುವಳು                                                         ॥

ಬಗಿಬಗಿಯಿಂದಲಿ ಸೊಗಸುವ ಸುಂದರ
ಬಿಗಿದಪ್ಪಿ ಬಾ ಬಾ ಬಾರೆನ್ನುವಳು  ಎನ್ನ
ಬಗರಿಕುಚ ಕೋ ಕೋ ಕೋಯೆನ್ನುವಳು  ನಿನ್ನ
ಹಗೆಯಾಳಾದೆನೆನೆ ಎನ್ನುವಳು  ಅಯ್ಯ
ಅಗಹರನೆ ಹೋ ಹೋ ಹೋಯೆಂದು ವಿಧಿ ಬಂದು
ನೆಗೆವಾಗ ಹಾ ಹಾ ಹಾಯೆನ್ನುತಿಹಳೂ                                                    ॥

ಅರಳ ಮಲ್ಲಿಗೆ ಹಾಸಿ ಇರುಳ ದೀವಿಗೆ ತುಂಬಿ
ಸರಳ ಮಂಚದೊಳೆನ್ನ ಹೊರಳಿ ಮಲಗಿಸಿ  ಒಳ್ಳೆ
ಮರುಳ ಮಾಡುತ ಎನ್ನ ಕೈ ಹಿಡಿವಾ  ಎನ್ನ
ಹೊರಳ ಮುಡಿ ಬೈತಲಿ ಸರಳ ಮಾಡುವಾ  ಮತ್ತ
ಕೊರಳಮಾಲೆ ತೊಡಕ ವಿರಳ ಮಾಡುವಾ ಕೇಳವ್ವ
ಕರುಳು ಮಿಡುಕದೆ ಪತಿಯ ಕೊಂದರೆನ್ನುವಳು                                                ॥

ಗುಣಗಾನ ಕೇಳುತ ಮಣಿದು ಮೋಹಿಸಿ ಚಣಕ
ಚಣಕೊಮ್ಮೆ ಮುಖವ ನೋಡುವನು  ಎನ್ನ
ಗುಣಮಣಿ ಹಾರೆಂದು ನುಡಿಸುವನು  ಮನವು
ದಣಿವಂತೆನ್ನ ಚುಂಬನ ಕೊಡುವನು  ರನ್ನ
ಮಣಿಯೆಂದು ಬಂಗಾರ ಖಣಿಯೆಂದು ಕೂಸಿಗೆ
ಹಣಿಯಾಗ್ಹಣಿಯಿಟ್ಟು ಮಣಿದಾಡುತಿಹನು                                                  ॥

ಕೂಸಿನ ಮ್ಯಾಲತಿ ಏಸೊಂದು ಮಮತೆಯು
ಗಾಸಿ ಮಾಡದೆ ಕೂಸ ನಗಿಸುವನು  ಮನೆಯ
ಹಾಸುಗಲ್ಲಿನ ಮ್ಯಾಲೆ ನಡೆಸುವನು  ಹೂವಿ
ನ್ಹಾಸಿಗಿ ಮ್ಯಾಲೆ  ಮಲಗಿಸುವನು  ಎನ್ನ
ವಾಸಗಾರನು ಇಂಥ ಕೂಸ ಬಿಟ್ಟಗಲಿದ ಭೂಮ್ಯಾಗ
ಕಾಸಿಗಿ ಕಡಿಯಾಗೆನ್ನ ಜೀವಾತ ಸಖಿಯೆ                                                  ॥

ತರುಳ ಹುಟ್ಟಲಾಗ ಹರುಷದಿಂದಲಿ ಕಾಂತ
ಕರೆಸಿ ಜಂಗಮರ ಕೇಳಿದನು  ಸ್ವಾಮಿ
ಸರಸ ಮೂರ್ತವು ಶುಭವ ಹೇಳಿದನು  ಮತ್ತ
ವರ ಚೌಸಟ್ಟಿವಿದ್ಯೆ ಕಲಿಯುವನು  ಕೇಳಿ
ಹರಷದಿಂದಲಿ ಕರಿಸಿ ಜಂಗಮರನ್ನು
ನೆರಸಿ ಜೋಳಿಗೆ ಹಿಡಿಹೊನ್ನ ತುಂಬಿದನು                                               ॥

ಖೊಟ್ಟಿ ವ್ಯಾಳ್ಳೆದಿ ಕೂಸು ಹುಟ್ಟಿತೇನಯ್ಯಿ
ಹೊಟ್ಟಿಗಯ್ಯನು ಬಚ್ಚಿಟ್ಟನೇನು  ಒಳ್ಳೆ
ಕೆಟ್ಟ ಮೂರ್ತವು ಬಂದು ತಟ್ಟಿತೇನು  ಕೂಸು
ಹುಟ್ಟಿದ ನೆವ ಕಾಂತ ಬಿಟ್ಟನೇನು  ಎಂದು
ಹೊಟ್ಟಿಕಿಚ್ಚಿಗೆ ಕೂಸ ಕಟ್ಟಿಯ ಕೆಳಗ ಇಕ್ಕರಿಸಿ
ಒಟ್ಟಿರಿಸಿ ತುಂಬಿ ದುಃಖೇನ್ಹೇಳಲಿ                                                               ॥

ಚಿಟಚಿಟನೆ ಚೀರಿತು ಚಟಪಟ ಉಸಲ್ಹಿಡಿದು
ಲಟಪಟ ಒದ್ದಾಡಿ ಸೆಟೆಯುತಲಿ  ಈಕಿ
ಸೆಟಸೆಟದ್ಹಿಂದಕ ಬೀಳುತಲಿ  ಅವರು
ಪುಟನೆದ್ದು ಕೂಸನ್ಹಿಡಿಯುತಲಿ  ನೀರ
ಪಟಪಟ ನೆತ್ತಿಗೆ ಬಡಿಯುತಲಿ  ದುಃಖದಿ
ತಟತಟ ಕಣ್ಣೀರು ಗೊತ್ತಿಲ್ಲದುದರುತಲಿ                                                     ॥

ನಾರೇರೆಲ್ಲರು ಕೂಡಿ ಘೋರ ವೇದನೆಯೆಂದು
ಬೋರಾಡಿ ದುಃಖವ ಮಾಡುವರು  ಒಳ್ಳೆ
ಸೂರೆದ್ದು ಕಣ್ಣೀರ ಸುರಿಸುವರು  ಕೂಸು
ಮಾರಿ ನೋಡಲು ಧೈರ್ಯತಾಳುವರು  ಮತ್ತೆ
ಸಾರಿ ಒಂದೆಡೆ ದುಃಖ ಸೂಸುವರು ಸೂರ್ಯನು
ಸೇರಿ ಪಡುವಲಕ ಮರೆಯಾದನೇನೆಂಬೆ                                                  ॥

ತರವಲ್ಲ ಪದ್ಮಿನಿ ಮರುಗ ಬೇಡ ನೀನು
ಪುರದೊಳಗಾರಾರು ಇಲ್ಲವೇನ  ನಿನ್ನ
ತುರಳನ್ನ ಕೆಳಗ್ಹೀಂಗ ಒಗೆಯುವರೇನ  ಕೂಸು
ಮರಣವಾದರೆ ಹೇಳ ನಿನಗ ಒಳಿತೇನ  ಇನ್ನು
ಮರೆ ನಿನ್ನ ಪುರುಷನ ದುಃಖವನು ಸಲುಹು ನೀ
ತರುಳನು ಮನ ಚಿಂತೆ ಮರೆಸುವನವನು                                               ॥

ಪತಿಯಿಂದ ಸಿಂಗಾರ ಪತಿಯಿಂದ ಸೌಭಾಗ್ಯ
ಪತಿಯಿಂದ ಸಕಲ ಜೀವನವು  ಮತ್ತೆ
ಪತಿಯಿಂದ ತನು ಸುಮತಿಯೆಲ್ಲವು  ಕೇಳು
ಪತಿಯಿಂದ ಲೋಕಕ್ಕೆ ಹಿತಮಿತವು  ಮತ್ತೆ
ಪತಿಯಗಲಿ ಸೀತೆಗೆ ದುಃಖ ಘನವಾಯಿತು ಅಯ್ಯಯ್ಯೋ
ಪತಿ ಮಡಿದ ಮ್ಯಾಗ ಗತಿಯುಂಟೆ ಶಿವನೆ                                                ॥

ಚೆನ್ನ ಪುರುಷನಿಲ್ಲ ಇನ್ಯಾಕ ಬೇಕವ್ವ
ರನ್ನ ತಾಳಿಯು ಎನಗ ಹರಿಯುತಲಿ  ಕೊರಳ
ಚೆನ್ನ ಮಲ್ಲಿಗಿ ಹಾರ ತೆಗೆಯುತಲಿ  ಮುಡಿಯ
ಮುನ್ನ ಬಿಚ್ಚುತ ಹೆರಳ ಹರಡುತಲಿ  ಅಯ್ಯ
ಇನ್ನೆಂದು ಕಾಣುವೆ ಪುರುಷನ ಶಿವನೆ ಬೋರಾಡಿ
ಖಿನ್ನಾಗಿ ಬಿಕಿ ಬಿಕ್ಕಿ ಅಳುತಿಹಳಯ್ಯೋ                                                     ॥

ಕಳಿಸಲ್ಯಾ ದೂತಿಗೆ ತಿಳಿಸಲ್ಯಾ ರಾಜನಿಗೆ
ಹಳಿಸಲ್ಯಾ ಮಂತ್ರಿ ಘೋಳಿಸಲೇನು  ಅಂತು
ಅಳಿಸಲ್ಯಾ ದಂತ ಕೀಳಸಲೇನು  ಕೋಲ್ಗೆ
ಎಳಿಸಲ್ಯಾ ಕುತ್ತಿಗೆ ಕೊಯ್ಸಲೇನು  ಮೈಯ
ಥಳಿಸಿ ಚರ್ಮ ಸುಲಿಸಲೇನು ಮಣ್ಣೊಳು
ಎಳೆಸುತ ಮಾನ್ಗೇಡಿ ಹುಗಿಸಲೇನು                                                          ॥

ಎಲ್ಲಿ ಇರುವನವ್ವ ನಿಲ್ಲಲಾರದು ಮನವು
ಖುಲ್ಲ ಮಂತ್ರಿಯನೀಗ ತೋರುವನನೆ  ಎನ್ನ
ವಲ್ಲಭನ ಕೊಂದೆಲ್ಲಿ ಉಳಿಯುವನೆ  ಎಂದು
ಹೊಲ್ಲ ನುಡಿಯುತ ಕೂಸ ಬಗಲಿಗೆನೆ  ಎತ್ತಿ
ಫುಲ್ಲಲೋಚನೆಯರು ಎಲ್ಲಾರು ನಡಿರೆಂದು
ಚೆಲ್ಲುತ ಕಣ್ಣೀರ ನಲ್ಲೇರು ನಡೆದಿಹರು                                                       ॥

ಅರಿದು ನೋಡಿ ಮಂತ್ರಿ ಗಹ್ವರದೊಳು
ವರ ಕೊಮರಾಮನಲ್ಲಿಡುವುತಲಿ  ಹತ್ತು
ವರುಷರ ಹಾರ ಮಾಡಿ ಇಡುವುತಲಿ  ಯಾರು
ಅರಿದಂಗ ಗುಪ್ತ ಮಾಡಿಡುವುತಲಿ  ಹೊಡೆದ
ಶಿರವನೊಯ್ದು ಕರೆದು ರತ್ನಿಗೆ ಕೊಟ್ಟು ಬೈಚಪ್ಪ
ಒರಗಿ ಮನಿಯಾಗ ಇರಲತ್ತಲವರು                                                          ॥

ನಾರೆರೇರು ಭರರರು ಮರಗಾಳಿ ಪದರ ಮೋಡ
ಹಾರುವ ತೆರೆಯ ತಿಕ್ಕಾಟೊ  ಒಳ್ಳೆ
ಬೋರಾಡಳುವ ಗುಡುಗು ದನಿಯೊ  ಕಣ್ಣೀರು
ಸೋರಿ ಬೀಳುವ ಮಳೆಯ ತೂರ ಹನಿಯೊ  ಅಂತು
ತೋರುವದೀ ಪರಿ ಅರೆದೊಂದು ಜನರಿಗೆ
ದೂರಿಂದ ಮಂತ್ರಿಯ ಕಾಣುತೋಡಿದಳು                                                ॥

ದುಡುದುಡೋಡೋಡಿ ಮಂತ್ರಿಯಡಿಯಲ್ಲಿ ಪದ್ಮಿನಿ
ಫಡಫಡಾ ನೆಲಕ್ಹಣಿ ಬಡಸೂತಲಿ  ಕೂಸ
ಹಿಡಿದಿರೆಂದು ಮುಂದ್ಹೋಗುತಲಿ  ಎದ್ದು
ಧಡಧಡಾ ಹಿಂದಕ ಬೀಳುತಲಿ  ಮತ್ತ
ಗುಡುಗುಡುಳ್ಳುತ ಮಾತ ನುಡಿಯುತಲಿ ಮಂತ್ರಿಗೆ
ಥಡಥಡಾಡಿದಳೇನೆಂಬೆನಯ್ಯೋ                                                              ॥

ಧರ್ಮವೇನಿದು ಮಂತ್ರಿ ನಿರ್ಮಲ ಅಳಿಯಾನ
ಪದ್ಮಿನಿ ಕಾಂತನ ಠಾರ್ಮಾಡಿದಿ  ಒಳ್ಳೆ
ಘೋರ್ಮಾಡಿ ಭೂಮಿಗೆ ಹಾರ್ಮಾಡಿದಿ  ದುಃಖ
ಪೂರ್ಮಾಡಿ ನೀ ಮನ ಘಾರ್ಮಾಡಿದಿ  ನಿಮ್ಮ
ಕರ್ಮವಿಲ್ಲದಲೆ ವಿಚಾರ ಮಾಡದಲೆ ಕೊಂದಂಥ
ಮರ್ಮವೇನೆಂಬುತ ಮಣ್ಣು ಸೂರ್ಮಾಡುತಿಹಳು                                            ॥

ಹೇಸ್ಮನಸಿನ ಮಂತ್ರಿ ಆಸ್ಮಾಡಿ ಅಳಿಯಾಗ
ಮೋಸ್ಮಾಡಿ ಅನ್ಯಾಯ ಖಾಸ್ಮಾಡಿದಿ  ನೀನು
ಕೂಸ್ಮಡದಿಗೆ ನಾಸ್ಮಾಡಿದಿ  ಮನಕ
ಸೂಸ್ಮಿಡುಕದೆ ಕೊಂದು ನಿನ್ಬತವ  ಅಯ್ಯ
ಮೋಸ್ಮಾಡಿ ಎನ್ನೊಳು ದೋಸ್ಮಾಡಿದಿ ಶಿವಶಿವನೆ
ಘಾಸ್ಮಾಡಿ ಕೊಂದೆಲ್ಲೊ ನನ್ಮೋಜಿನ್ಕಣಿಯ                                              ॥

ಆರು ಇಲ್ಲದ ಅಡವಿ ನೀರು ಇಲ್ಲದ ತಾಣ
ಏರು ಕಿಚ್ಚಿನ ಕುಡಿಗೆ ದೇಹ ತುರುಕಿ  ಬೆಂಕಿ
ಕಾರಿತು ಕಿಡಿಯ ಕಿಚ್ಚು ನುಂಗಿತು  ಕಾಯ
ಹಾರಿ ಹೋಯಿತು ಜೀವ ಬೆಂದು  ಅಯ್ಯ
ಯಾರಿಗ್ಹೇಳಲಿ ಶಿವನೆ ನಾರಿಗಾದ ತಾಪ ಗೋಳೆಂದು
ಚೀರಿ ಅತ್ತು ಹೊರಳಿ ಬೀಳುವಳು                                                              ॥

ಧೀರ ದುಂದುಭಿ ವೀರ ಮೀರಿದ ವರಶೂರ
ನೂರು ಸಾವಿರದೊಳು ಗೆದೆವನು  ರಣಕ
ಸೂರಿ ಮಾಡುವ ಸಮರಂಗವನು  ಮಹಾ
ವೀರ ಪರಾಕ್ರಮ ಪಾರ್ಥನು  ಇಂಥ
ಧೀರನ ಯಾವ ಪರಿಯಲಿ ಕೊಂದಿ ಎನ್ನುತ
ಮೋರಿ ತೋರೆಂದು ನಾರಿ ಕೇಳಿದಳು                                                    ॥

ಬಿಡು ತಂಗಿ ಶೋಕವ ಪೊಡವಿಯೊಳು ರಾಮನ
ಹೊಡೆವ ಸಮಯಕ ನಿನ್ನ ವಲ್ಲಭನು  ಬಂದು
ಹಿಡಿದನು ಎನ್ನ ಮುಂಗೈಗಳನು  ಅಣ್ಣ
ನುಡಿಬ್ಯಾಡ ನೀನೆಂದು ಆಡಿದನು  ಎನ್ನ
ಹೊಡಿಯೆಂಬು ಮಾತಿಗೆ ಬಿಡದೆ ಹೇಳಿದೆನು ತಂಗೆವ್ವ
ಮೃಡನಾಣಿ ಹಾಕಲು ಹೊಡಿಸಿದೆನವ್ವಾ                                                    ॥

ಒಡೆಯ ರಾಮನ ಕೂಡ ಬಿಡದೆ ತಲೆಯನು ಕೊಟ್ಟ
ಕಡುಧೀರ ನಿನ ಗಂಡ ಅವನ ಸಾಟಿ  ಭೂಮಿ
ಹುಡುಕಲು ವಿರಳ ಬಂಡನವನೊಬ್ಬ  ಸಾರಿ
ಬಡಿಸುವೆ ಸುತ್ತ ಹೊತ್ತು ಡಂಗುರವ  ತಂಗಿ
ಒಡಲ ದುಃಖದ ಉರಿಯು ಹಿಂಗಲಿ ಅನ್ನುದಕ
ಉಡಿಯ ಕೂಸನು ನಾರಿ ಅತ್ತು ಕೊಂಡಾಡಿ                                            ॥

ಲೇಸು ಮಾಡಿದಿ ಮಂತ್ರಿ ಈಶನು ಒಲಿಯುವನು
ಕೂಸು ಎನ್ನನು ಈಗ ಹತಿಸೆಂದಳು  ಇರುವ
ಆಸೆ ನಮಗಿನ್ನು ಸಾಕೆಂದಳು  ಎನ್ನ
ವಾಸಗಾರನು ಹೋದಿನ್ನೇಕೆಂದಳು  ಮನವು
ಹೇಸದೆ ಕೊಲಲುಂಟೆ ಘಾಸಿ ಮಾಡುತ ಈ ಜೀವ
ಏಸು ಜಲುಮದ ಪಾಪ ಒದಗಿ ಬಂತು ಶಿವನೆ                                                  ॥

ಕಾದ ಹಂಚಿನ ಮಾಲ್ಯೆ ಹೋದ ದೋಸಿಯ ಪರಿಯು
ಆದೀತು ಎನ್ನ ಆತ್ಮಕೆಂದನು  ನೀನು
ಸಾಧಿಸಿ ನುಡಿವುದು ಆಗಲೆಂದನು  ಭಿನ್ನ
ಭೇದ ಎನ್ನೊಳಗೇನೇನಿಲ್ಲವೆಂದನು  ನಿನ್ನ
ಸೋದರನಂತೆ ನಾ ಬಿಡದೆ ನೋಡುವೆನು ಏ ತಂಗಿ
ಆದ ಮಾತಿಗೆ ಅತ್ತು ಖೇದ ಮಾಡುದು ಬೇಡ                                          ॥

ಚೆಲುವ ಚೆನ್ನಿಗ ನಿನ್ನ ನಲ್ಲನಗಲಿಸಿದೆಯಾ
ಮೊಲೆಯುಣ್ಣು ಶಿಶುವ ಬಿಡಿಸಿದಂತೆ  ಈದು
ಮಲಗಿದ ಹುಲಿಯನು ಕೆಣಕಿದಂತೆ  ಮತ್ತ
ತಳಕು ಬಿದ್ದ ಸರ್ಪ ತಡವಿದಂತೆ  ರತಿಯ
ಕಲಹದೊಳಿದ್ದ ನಾರಿನೆಬ್ಬಿಸಿದಂತೆ ಪದ್ಮಿನಿ
ಫಲವೆನಗಾಯಿತು ಮಂತ್ರೀಶನೆಂದ                                                         ॥

ಪರಿಪರಿ ರೀತಿಯಲಿ ನಾರಿಗ್ಹೇಳುತ ಮಂತ್ರಿ
ಪರಮ ವಚನ ಕೊಟ್ಟು ಬೇಡಿದನು  ತಂಗಿ
ಹರುಷದಿಂದಲಿ ನಿನ್ನ ಕಾಣುವೆನು  ಕೇಳು
ಹರನಾಣೆ ಬೈಚಪ್ಪ ನುಡಿಯುತಲಿ  ಎನ್ನ
ಸರುಭಾಗ್ಯ ಸಂಪತ್ತು ನಿಮ್ಮದೆನ್ನುತಲಿ ಸಂತೈಸಿ
ಮರೆಸುತ ದುಃಖವ ಮನ್ನಿಸಿದ                                                                   ॥

.ಯೊಳು ಗೋಕಾವಿ ಪುರದೊಳಗಿರುವನು
ಗುರುವರ ಸಿದ್ಧ ಸೇವಕನು  ಅಂದು
ಬರುತಿರೆ ಮಾಲಿಂಗಪುರದೊಳವನು  ವಸ್ತಿ
ಇರುತಿರಲು ರಾಮನಾಟ ನೋಡಿದನು  ಇದರ
ಚರಿತವ ನೋಡಿ ಕವಿತೆ ಬರೆದನು ರಸಿಕರು
ಅರತುಳ್ಳ ಸುಜನರು ಕೇಳಿರಿ ಲಾಲಿಸಿದನು                                              ॥

* * *