15. ಧೀರ ಕುಮಾರ ರಾಮ
ಶಿರವ ಕಾಣಿಕೆಯಿಟ್ಟು ಗುರು ನಿನ್ನ ಚರಣಕೆ
ಹರ ಪಾರ್ವತಿಯ ಕೊಂಡಾಡುವೆನು ಮತ್ತೆ
ಕರಿಮುಖ ಗುಹವೀರ ಸ್ಮರಿಸುವೆನು ಮಹಾ
ಶರಣರ ಪಾದವ ಬಲಗೊಂಬುವೆನು ಇಂತಿ
ವರ ಭಕ್ತಿಯಿಂದಲಿ ಎರಗಿ ಹೃದಯದೊಳು ಶ್ರೀ ಗುರುವೆ
ಬರುವಂತೆ ನುಡಿಯುವೆ ಧರೆಯೊಳಿಂದಿದನು ॥
ಕರಚೆಲುವಿ ಪದ್ಮಿನಿಯು ಇರುವ ಬಾಣತಿ ಮುಂದೆ
ವರ ಕೊಮರಾಮನ ಚರಿತೆಯನು ಬದಿಗೆ
ಇರುವ ದೂತಿಯರು ಪೇಳ್ವ ಪರಿಯನು ನಿನ್ನ
ಪುರುಷನು ತಾನಳಿದನೆಂಬುದನು ಕೇಳಿ
ಪರಮ ದುಃಖ ಆ ನಾರಿಗಾದುದನು ಅದರ
ಇರುವನೆಲ್ಲವ ಮುಂದೊರೆವೆ ಈ ಕೃತಿಯಲಿ ॥
ಧರೆಯೊಳು ಕುಮ್ಮಟ ನಗರ ಪಾಲಿಸುವಂಥ
ಅರಸು ಕಂಪಿಲರಾಯನೆಂಬುವನು ಆತನ
ಅರಸಿ ಹರಿಯಾಲಮ್ಮ ಇರುವಳಿನ್ನು ಇಟ್ಟು
ಕರಚೆಲುವಿ ರತ್ನಿ ಬೇರೆ ಮಾಲಿನೊಳು ಮತ್ತೆ
ವರಮಂತ್ರಿ ಬೈಚಪ್ಪ ದೊರೆಯು ಮಾರ್ಬಲದಂಡು ಕೇಳು
ಪರಮಾನಂದದೊಳಿರೆ ಪುರದ ವಿಸ್ತಾರವನ್ನು ॥
ಕೋಟೆಗಳು ಸುತ್ತಲೆ ಮಾಟ ಬುರುಜು ತೆನೆಯು
ನೀಟಗಸಿ ಪಾರಾಕಾರಗಳೆಷ್ಟು ಪುರದ
ತೋಟಗಳು ಪುಷ್ಪದ ಘಮಾಟವೆಷ್ಟು ಒಳ್ಳೆ
ಪ್ಯಾಟಿಗಳಲ್ಲಲ್ಲಿಗೆ ಕಟ್ಟೆಗಳೆಷ್ಟು ಮೇಲೆ
ಅಟ್ಟಗಳು ಸಾಲ್ಮನಿ ಚಿತ್ರನೊಟಗಳು ರಾಜ್ವಾಡೆ
ಆಟಗಳ ವಿಚಿತ್ರ ಥಾಟ್ಕಾಂಬುತಿಹುದು ॥
ಹೊಂಡದ ಸುತ್ತಲೆ ಮದ್ದಿನುಂಡಿಗಳು ಕಿಲೇದ
ಗುಂಡಗಳಸಿನ ತೋಪು ಜಂಡೆಗಳೆಷ್ಟು ಆನಿ
ಹಿಂಡುಗಳ್ತುರಗವೊಂಟಿ ತಂಡಗಳೆಷ್ಟು ಪುರದ
ತಂಡು ತಂಡುಗಳು ಕಾಲ್ಬಲ ದಂಡುಗಳೆಷ್ಟು ಒಳ್ಳೆ
ಗೊಂಡೆಗಳರ್ಚಿಸಿ ಕರಿ ತುಂಡುಗಳೆಷ್ಟು ಬೇರಿನ್ನು
ಪಂಡಗಳು ಜಾತಿಯ ರಥದೊಳು ಪ್ರಚಂಡವೆಂಬೆ ॥
ಘಮುಘಮು ನುಡಿಯುವ ನಗಾರಿ ಚೌಗಡ ಡಂಕೆ
ಘಮು ಘಮುತೆಂಬ ಮದ್ದಲಿ ಸರವು ಒಳ್ಳೆ
ಘಮ ಘಮ ಬರುವ ಗಂಧದ ವಾಸನೆ ಮತ್ತೆ
ಚಿಮುಚಿಮುತಿರೆ ಕಾರಂಜಿ ನೀರು ಇಂತು
ಖುಮುಖುಮಿಸುವ ಪುರವ ರವಿಯು ನೋಡುದಕೆ
ಚುಮುಚುಮು ಬೆಳಗಾಗಿ ಬರುವನೇನೆಂಬೆ ॥
ಎತ್ತ ನೋಡಲು ಜನವು ಮತ್ತಿ ಡಾಲ್ವಾಟಗಳು
ಜತ್ತಾಗಿ ಅಲ್ಲಲ್ಲಿ ಸಿಸ್ತುಗಳು ಸಭೆಯ
ನಿತ್ಯಕಪ್ಪುರ ಗುಗ್ಗುಳ ಬತ್ತಿಗಳು ಪಾತ್ರ
ನೃತ್ಯ – ಸುಸ್ವರ ಅಭಿನಾರ್ಥಗಳು ಮೇಲೆ
ಎತ್ತಿದ ಸುತ್ತಲೆ ಛತ್ರ ಚಾಮರ ಹೊಳೆಯುವ
ರತ್ನದ ಪೀಠದೊಳಿರುತಿರೆ ಪೊಡವಿಪನು ॥
ಬಳಿಯಲ್ಲಿ ಎಡಬಲಕ ಪೊಳೆವ ಮಿಸುನಿ ಬೆತ್ತ
ಒಳೆ ಹಿಡಿದು ಹೊಗಳುವ ಭಟ್ಟಂಗಿಗಳು ಮತ್ತೆ
ಕಾಳಿನ ಪೂರಿ ಕೀಸರ್ಹಿಡಿಸುವರು ಪುರವ
ಮೊಳಗಿಸಿ ನಾದಮಯ ಹಾಡುವರು ಇಂತು
ಥಳಥಳಿಸಿ ಮುತ್ತು ರತ್ನದ ವಸ್ತ ಸಡಗರದಿ
ಇಳೆಯಾಣ್ಮ ನಿತ್ಯ ವೈಭವದಿಂದಿರುತಿರಲು ॥
ಇನಿತು ಸಂಭ್ರಮದೊಳು ಅನುದಿನವಿರುತಿರಲರಸ
ತನುಜರಿಲ್ಲೆಂಬ ಒಣ ಚಿಂತೆಯಲಿ ಆಗ
ಮುನಿಪುಂಗ ಜಂಗಮ ಮಾವಿನ್ಹಣ್ಣೀಯುತಲಿ ಇದನ
ತಿನಿಸು ಮಡದಿಗೆಂದು ಹೇಳುತಲಿ ಮುಂದೆ
ಘನವೀರ ಕುವರನು ಪುಟ್ಟುವನು ನಿಮಗೆಂದು
ಮುನಿರಾಯ ಅರಸನಿಗೆ ವರಕೊಟ್ಟು ನಡೆದನು ॥
ಯತಿರಾಯ ಕೊಟ್ಹಣ್ಣ ಅತಿ ಹರುಷದಲಿಯರಸ
ಸತಿ ಹರಿಯಾಲಿಗೆ ಕೊಡುವತಲಿ ಆ ಸು
ಮತಿ ತಿಂದು ತ್ವಾಟಿ ಬೀಜೊಗೆಯುತಲಿ ತೊತ್ತು
ಹಿತದಿಂದ ತ್ವಾಟಿಯ ತಿನ್ನುತಲಿ ಮಂದ
ಮತಿ ಕತ್ತೆ ಬೀಜ ತಿನ್ನುತ ಕುಕ್ಷಿ ತಾ ಬೆಳೆದು
ಮತಿವಂತ ಪುತ್ರರ ಪಡೆದರು ಗೃಹದಿ ॥
ಸುಂದರಿ ಹರಿಯಾಲಿ ತಿಂದ ಸುರಸಗಳಿಗೆ
ಅಂದು ಕೊಮರಾಮ ಪುಟ್ಟಿದನು ತ್ವಾಟಿ
ಯಿಂದ ಹುಟ್ಟಿದ ಹೋಲ್ಕಿರಾಮನು ಬೀಜ
ದಿಂದ ಹುಟ್ಟಿತು ಬೊಲ್ಲೆಂಬ ಕುದುರೆಯು ಇಂತು
ಒಂದೆ ಫಲದಿ ಜೀವ ಭೂಮಿಗೆ ಬರಲು ದಿನದಿನಕ
ಚೆಂದಾಗಿ ತಮ್ಮನೆಯಾಗ ಬೆಳೆಯುತಿರಲು ॥
ಪರಮ ಉಲ್ಲಾಸದಿ ದೊರೆಯು ಸಕ್ಕರಿ ಫೇಡೆ
ಪುರದೊಳಗಲ್ಲಲ್ಲಿ ಹಂಚುತಿರೆ ಇರಲು
ಹರುಷದಿ ಚಣಚಣಕ ಕೂಸು ಬೆಳೆಯುತಿರೆ ಮತ್ತೆ
ಮೆರೆಯುತೆ ಬಾಲಲೀಲೆಯಾಡುತಿರೆ ಇಂತು
ಬರುತಿರೆ ಎಳೆಹರೆಯು ಒತ್ತೊಡೆದು ಮಕಮೀಸೆ
ಪರಮ ಸುಂದರ ಮುಖ ಮಿರಗುತಲಿಹುದು ॥
ಬೊಲ್ಲನೆಂಬು ಕುದುರೆ ಅಲ್ಲಿ ಬೆಳೆಯುತ್ತಿರಲು
ನಿಲ್ಲದೆ ಅಂತರಲೆ ಹಾರುವದು ದೊಡ್ಡ
ಕಿಲ್ಲೆ ಅಲಕ್ಕನೆ ಜಿಗಿಯುವದು ಒಳ್ಳೆ
ಬಲ್ಲಿದ ಹೊಳಿ ಮೀರಿ ಹಾರುವದು ಮತ್ತೆ
ಬಲ್ಲಿದ ಸರದಿಂದ ಕಲಕಲೋಡುವದು ಯಾರಿಗು
ಎಲ್ಲೆಲ್ಲಿ ಕೈಸಿಗದೆ ಓಡಿಹೋಗುವದು ॥
ಕುದುರೆಯ ಆರ್ಭಾಟ ಚದುರ ಬಣ್ಣಿಸಲಾರೆ
ಒದರಿ ನೆಲಕ ಕಾಲ್ಬಡಿಯುವದು ನೆಲವು
ಅದರಿ ಖರಪುಟಕೆ ಕೆಂಧೂಳೇಳುವುದು ತನ್ನ
ಎದುರಿಗೆ ಆರಾರನು ಸುಳಿಯಗೊಡದು ಆ ಕುದುರೆ
ಚದುರ ರಾಮನ ಕಂಡು ಸ್ವಾಧೀನವಹುದು ॥
ಹರಿಯಾಲದೇವಿಯ ಹಿರಿಯಣ್ಣ ಬೈಚಪ್ಪ
ವರಮಂತ್ರಿ ಕಂಪಿಲರಾಯನಿಗೆ ತನ್ನ
ತರುಳೆ ರಾಮಲದೇವಿ ಇರುವಳಿನ್ನು ಕೊಟ್ಟು
ವರ ಕೊಮರಾಮಗ ಮದುವೆ ಮಾಡಿಯಿನ್ನು ಬ್ಯಾರೆ
ವರ ಹೋಲ್ಕಿರಾಮಗ ಪದ್ಮಿನಿಯ ತಂದು ಎಲ್ಲರು
ಪರಮಾನಂದದಿ ಮದುವೆಯ ಮಾಡಿದರಂದು ॥
ಎಲ್ಲ ವಿದ್ಯೆಯೊಳಗ ಬಲ್ಲಿದನೆನಿಸಿದ
ಬಿಲ್ಲು ದಾಂಡೆ ಪಟಗಳ ತಿರುವುವನು ಒಳ್ಳೆ
ಬಲ್ಲಿದ ಮಲ್ಲಯುದ್ಧ ಮಾಡುವನು ಗರಡಿ
ಯಲ್ಲಿ ಜೋರು ನಿತ್ಯ ತೆಗೆಯುವನು ತನ್ನ
ಬಲ್ಲಿದ ಎಪ್ಪತ್ತೇಳು ಮಾನ್ಯರ ಕೂಡುತ
ನಿಲ್ಲದೆ ಎಲ್ಲಿ ಬೇಕಾದಲ್ಲುಡಾವನು ॥
ಪರಿಪರಿ ರತ್ನಮಾಲೆ ಕೊರಳೊಳು ಹಾಕುತಲಿ
ತರತರ ಪೋಷಾಕ ಧರಿಸುತಲಿ ಮತ್ತೆ
ಜರತರದ ಮುಂಡಾಸ ಸುತ್ತುತಲಿ ವಜ್ರ
ಹರಳಿನ ಸಿರಪೇಚ ಮೇಲಿಡುವುತಲಿ ತನ್ನ
ಬೆರಳೊಳು ರನ್ನದ ಹರಳಿನುಂಗುರ ಇಟಗೊಂಡು
ಹೊರಸೂಸಿ ಚಿಮ್ಮುತ ಬೆಳಕು ಹರಿವುತಲಿ ॥
ಧೀರ ಸುಂದರ ಮಹಾವೀರ ಪರಾಕ್ರಮನು
ಏರಿ ಹಯವನು ಒಯ್ಯುತಿರೆ ಹೊರಗ
ನಾರಿ ಹೋದರ ನೆನೆಸುತಿರೆ ಹೊಳೆಯ
ನೀರಿನೊಳು ನೀರಾಟವಾಡುತಿರೆ ಇತ್ತ
ಚಾರು ಚೆನ್ನಿಗ ಹೋಲ್ಕಿ ರಾಮನು ಮಡದಿ
ನಾರಿ ಪದ್ಮಿನಿ ಮನೆಯೊಳು ಹಡೆದಿರಲು ॥
ನಾರಿ ಪದ್ಮಿನಿಯೆಂಬ ವಾರಿಜನೇತ್ರಿಯು
ಮೀರಿದ ಮಗನೊಂದ ಪಡೆಯುತಲಿ ಆಕೆ
ಮೂರುತಿಂಗಳ ಬಾಣತಿ ಇರುವುತಲಿ ಮನೋ
ಹಾರಿ ಹೊರಸಿನಲ್ಲಿ ಮಲಗುತಲಿ ಮೊಲೆಯ
ಧಾರೆ ಕೂಸಿಗೆ ಕೊಟ್ಟು ಮಾರಿ ನೋಡುತಲಿ ಮನದೊಳು
ಮೀರಿದ ಹರುಷದಿಂದಿರುವಳಾ ಚದುರಿ ॥
ಮಡದೇರಿಬ್ಬರು ಬಂದು ಹಡೆದ ಬಾಣತಿತಲೆಯ
ಮುಡಿಬಿಚ್ಚಿ ಎಣ್ಣೆ ಹಚ್ಚೆರೆವುತಲಿ ಬೆನ್ನು
ಹೆಡಕುಗಳೊರಸಿ ತಪ್ಪಡಿಸುತಲಿ ಮೇಲೆ
ಸುಡುಸುಡು ನೀರು ತಂದೆರೆವುತಲಿ ಕೈಯ
ಹಿಡಿದು ಹೊರಸಿನ ಮ್ಯಾಲೆ ಮಲಗಿಸಿ ಮಡದಿಗೆ
ಕಿಡಿಗಿಚ್ಚು ಅಗ್ಗಿಟಿಯ ಬುಡಕಿಟ್ಟ ರಾಗ ॥
ಕುಳ್ಳುಬೆಂಕಿಯ ಮ್ಯಾಗ ಬಳ್ಳೊಳ್ಳಿ ಸೆದೆಹಾಕಿ
ಒಳ್ಳೆ ಸರ್ವಾಂಗದ ಕಾಸುವರು ಹಸಿದ
ವೇಳೆಗೆ ಬಿಸಿಬೋನ ಉಣಿಸುವರು ಕಣ್ಣಿ
ಗೊಳ್ಳೆ ಕಾಡಿಗಿ ಕಪ್ಪು ಒರಸುವರು ಮತ್ತೆ
ಸೊಲ್ಲುಸೊಲ್ಲಿಗೆ ಬಂದು ಬಾಣತಿಯ ಒಡನುಡಿಸಿ
ಎಲ್ಲ ಮಾತನು ಕೇಳಿ ಮುದದಿಂದಿರುವರು ॥
ಪರಿಪರಿ ನಾರೇರ ತರತರ ಸೇವೆಗೆ
ಹರುಷವಾಗುತ ತನ್ನ ಮನದೊಳಗೆ ನಾರಿ
ಸರಸ ಮಗನ ಕಂಡು ಕರದೊಳಗೆ ಕೂಸ
ಅರಳೆಲೆ ಇಡಿಸೂತ ಶಿರದೊಳಗೆ ಹೇಮ
ಕೊರಳೊಳು ಅಸಲಿ ತಾಯಿತ ಮುತ್ತು ರನ್ನದ
ಕರದೊಳು ಬಿಂದುಲಿ ಪರಿಗಳೇನೆಂಬೆ ॥
ನಡುವಿನೊಳು ಬಂಗಾರ ಉಡುದಾರವಿಡಿಸುತಲಿ
ಕಡಗ ಕಾಲೊಳು ಗೆಜ್ಜೆಯಿಡಿಸುತಲಿ ಒಂದು
ಬಿಡದೆ ಜರದಂಗಿ ತೊಡಿಸುತಲಿ ಹಸಿದ
ಹುಡುಗನೆಂದು ಮೊಲೆ ಕುಡಿಸುತಲಿ ಇಂಥ
ಕಡು ಪ್ರೀತಿಯಿಂದಲಿ ಕೂಸಿನ ನುಡಿಸುತ
ಸಡಗರಾನಂದ ಬಡುವಳೇನೆಂಬೆ ॥
ಕುಂಚಿಗಿ ಜರದ್ಹೊಚ್ಚಿ ಅಂಚೆದುಪ್ಪಳ ಹಾಸಿ
ಮಂಚದ ಮೇಲೆ ಮಲಗಿಸುತಲಿ ಮುತ್ತು
ಗೊಂಚಲದ್ಹಾರವ ಇಡಿಸುತಲಿ ತಾನು
ವಂಚನೆಯಿಲ್ಲದೆ ಪ್ರೀತಿವೆರಸುತಲಿ ಇಂಥ
ಮಿಂಚುವ ಮಗನನ್ನು ಪಂಚಮುಖನೆ ಕೊಟ್ಟೆಂದು ॥
ಚಿಟಚಿಟನೆ ಚೀರ್ಯಳುವ ಮಂಚದೊಳಗಿನ ಕೂಸು
ಪುಟಿಪುಟಿದು ಬೀಳುವದ ಕಂಡು ತಾಯಿ
ಲೊಟಲೊಟನೆ ಮುದ್ದಿಟ್ಟು ಮುದಿಸುತಲಿ ಬೆರಳು
ಚಿಟಿಚಿಟಿ ಮುರಿದಪ್ಪಿಕೊಳ್ಳುತಲಿ ಕೂಸು
ಬಿಟಬಿಟ್ಟೆರಡು ಮೊಲೆ ಗುಟುಗುಟು ಕುಡಿಯಲು
ಚಟಚಟ ದಿಟ್ಟಿಯ ಮುರಿವಳೇನೆಂಬೆ ॥
ಬಾಲನ ಮೇಲೆ ನಿವಾಳಿಸಿ ದಿಟ್ಟಿಯ
ಆಲಯದ್ಹೊರಗೆ ಒಗೆಯುತಲಿ ಮೇಲೆ
ಆಲಿಸಿ ಮಗನ ಮುಖ ನೋಡುತಲಿ ಬಹಳ
ಲೀಲೆಯಿಂದಲಿ ತಾನು ಇರುವುತಲಿ ಮಹಾ
ಮೇಲಾದ ಪುತ್ರೋತ್ಸವದೊಳಿರುವ ನಾರಿಗೆ
ಬಾಲಿಯರಾಗ ವೃತ್ತಾಂತ ಪೇಳುತಲಿ ॥
ನಾರಿ ಪದ್ಮಿನಿ ಕೇಳ ವಾರಿಜನೇತ್ರಿಯೆ
ವೀರ ಕೊಮರಾಮನೆಂಬುವನು ನದಿಯ
ತೀರದೊಳು ಚೆಂದ ನಲಿದಾಡುವನು ಅಣ್ಣ
ಬಾರೊ ಕಾಟಣ್ಣ ಬಾರೆಂದು ಕರೆಯುವನು ಬಾರಿ
ಮೀರಿ ಉಳದೀತೆಂದು ತೋರಮುತ್ತಿನ ಚೆಂಡ ನೀ
ತಾರೊ ಆಡುನು ಮನಪೂರೆಂಬುವನು ॥
ತರವಲ್ಲ ತಮ್ಮನೆ ಹಿರಿಯರಾಡುತ ಕೆಟ್ಟು
ಸರಿದರು ಬೇಡೆಂದು ಪೇಳಿದನು ಅಣ್ಣ
ತರಹರಿಸುವದು ಮನವೆಂದನು ತಮ್ಮ
ಸರಿ ಬಾರದೆನ್ನ ಚಿತ್ತದೊಳೆಂದನು ರಾಮ
ಇರದೆ ಮನಿಗೆ ಬಂದು ಹರಿಯಾಲಿ ದೇವಿಯ
ಚರಣಕೆರಗಿ ಚೆಂಡ ಕೊಡವ್ವಂದನು ॥
ಮಗನೆ ಬೇಡದು ಎಂದು ಬಿಗಿದಪ್ಪಿ ಮುದ್ದಾಡಿ
ಬಗೆ ಬಗೆ ರೀತಿಲಿ ಗ್ಯಾನ್ಹೇಳುವಳು ಆಟ
ಸೊಗಸಲ್ಲವೆಂಬೂತ ಸಿರದೂಗುವಳು ಕರವ
ಮುಗಿವೆ ಮಗನೆ ಆಡಬೇಡೆಂಬುವಳು ಇದುವೆ
ಜಗಲಿಗಿಟ್ಟು ಪೂಜೆಯಾಗುವ ಚೆಂಡು ಮಗರಾಮ
ತಗಿಬೇಡ ಇದರ ಹಾದಿ ನಗ್ಗೇಡೆಂಬುವಳು ॥
ಹಡದವ್ವ ಈ ಚೆಂಡು ಹಿಡಿಗೆ ಅಮರುವದಿಲ್ಲ
ಕೊಡು ಎಲ್ಲಿ ಕಳೆಯುವದಿಲ್ಲೆಂಬುವನು ತಾಯಿ
ಕೊಡು ತಡಮಾಡಬೇಡೆಂಬುವನು ಆಡಿ
ಇಡುವೆನು ತಂದು ಇದ್ಹಾಗೆಂಬುವನು ಮುತ್ತು
ಒಡಿದಾವು ಬೇಡೆಂದು ಕೊಡುವಲ್ಲಿ ಏನವ್ವ
ಬಿಡಲಾರೆ ಆಡುವೆ ಕೊಡು ಕೊಡೆಂಬುವನು ॥
ಮುತ್ತಿನ ಕಂದುಕ ಮುತ್ಯಾ ಮುಮ್ಮಡಿಸಿಂಗ
ಸತ್ತರಿದಕಾಗಿ ಬೇಡ ಮಗನೆಂದಳು ಇದುವೆ
ಸತ್ಯ ಕೇಡು ತಪ್ಪದು ನಮಗಿನ್ನೆಂದಳು ಎನ್ನ
ಕುತ್ತಿಗೆ ಕೊಯ್ದಿಂದ ಇದನೊಯ್ಯೆಂದಳು ನಾರಿ
ಚಿತ್ತ ಪಲ್ಲಟವಾಗಿ ಮತ್ತೆ ಭ್ರಮಿಸುವಳು ಇದಕೇಳು
ಗೊತ್ತು ಮುಟ್ಟದು ಬೇಡೆಂದತ್ತು ಹೇಳಿದಳು ॥
ಪರನಾರಿಗೆನ್ನಯ ಕರಗದು ಮನವೆಂದು
ಹರುಷದಿಂದಲಿ ಚೆಂಡು ಕೊಡ ಕೇಳಿದನು ತಾಯಿ
ಹರನಾಣೆ ಕೊಡುವೆ ಕೊಡು ಎಂಬುವನು ನೀನು
ಹರನಾಣೆ ಕೊಟ್ಟರೆ ಮಗನೆ ಹರ ಗತಿ ನಮಗೆ
ಮರಗುತ ಹಡೆದವ್ವ ಜೋಕೆಂದು ಚೆಂಡ ಕೊಡಲಾಗ
ಕರದೊಳು ಹಿಡಕೊಂಡು ಹೊರಗೆ ಬಂದಾನವನು ॥
ಹರುಷದಿಂದಲಿ ರಾಮ ಪರಮ ಸಿಂಗರದಿಂದ
ನೆರೆಗೂಡಿ ಗೆಳೆಯರಿಗೆ ಹೇಳಿದನಂದು ಒಳ್ಳೆ
ಪುರಮಾಸಿ ಚೆಂಡಾಟ ಆಡೋಣವೆಂದು ಸಿಸ್ತು
ಇರುವದು ತಾಣವು ಗೊತ್ತೆ ನಿಮಗೆಂದು ರತ್ನಾಜಿ
ಅರಮನೆಯಂಗಳವು ಆಡುದಕೆ ಬಲು ಇಂಬು
ನೆರೆದ ಗೆಳೆಯರೆಲ್ಲವೊರೆದು ಪೇಳಿದರು ॥
ನುಡಿಯ ಕೇಳುತ ರಾಮ ತಡೆಯದೆ ಚಣದೊಳು
ಪಿಡದೇರಿ ತೇಜಿಯ ನಡೆದನಾಗ ಕಾಳಿ
ಹಿಡಿದು ನಾದಗಳೆಲ್ಲ ನುಡಿದವಾಗ ಗೆಳೆಯ
ರೊಡಗೂಡಿದಾ ಚಣಕ ನಡೆದರಾಗ ಒಳ್ಳೆ
ಸಡಗರದಿಂದಲಿ ನಡೆದಾವು ದಂಡಲ್ಲಿ ಕುದುರೆಯ
ಬಿಡವುತ ಹೋಗಿ ನುಡಿದಾಡುತಿಹರು ॥
ಕೂಡುವರು ಎಲ್ಲರು ಆಡುವರು ನುಡಿದಾಡಿ
ಮಾಡುವರು ಮಸಲತ್ತ ನೋಡುವರು ಸಿಸ್ತ
ತೋಡಿ ಪಣವ ಕಟ್ಟಿ ಹೂಡುವರು ಲೆಗ್ಗಿ ಚೆಂಡ
ಬೇಡುವರು ಆಡುತ ನೋಡುತಲಿ ಮತ್ತೆ
ಆಡುವರು ಒಗೆಯುತ ಓಡುವರು ಚೆನ್ನಾಟ
ಆಡುವರೆಲ್ಲರನು ನೋಡುವಳು ರತ್ನಾಜಿ ॥
ವಾರಿಜನೇತ್ರಿ ನೀ ಬಾರಿತ್ತ ಸಂಗಾಯಿ
ಯಾರೆ ಈತೆಂದು ಕೇಳುವಳು ಇವನು
ಯಾರು ಹೇಳ ಹೆಸರು ಸೆಲ್ಲೆದಾತ ಈತ
ಯಾರ ರತ್ನದ ಹರಡವ ಹಾಕ್ಯಾನ ಇವನು
ಯಾರ ಕೆಂಪನು ಇವನ್ಯಾರ ಕಪ್ಪನು ಮತ್ತಿವನು
ಯಾರ ಸುಂದರ ಇವನ್ಯಾರೆಂಬುತಿಹನು ॥
ಶಶಿಮುಖಿ ರತ್ನಾಜಿ ಹೆಸರು ಹೇಳುವೆ ಕೇಳ
ಹಸಮುಖದೀತ ಕೊಮರಾಮನ ಬಲಕ
ನಸುಗೆಂಪು ಮೈಕಟ್ಟು ರುದ್ರನ ಈತ
ದಶದಿಕ್ಕು ಇಮ್ಮಡಿ ಜಟ್ಟಿಂಗನ ಮತ್ತ
ರಸಿಕ ಸೋಯಣ್ಣ ಕಾಟಣ್ಣ ಸಹಿತ ಲಿಂಗಣ್ಣ
ಕುಸಿಯಿಂದಲಾಡುವನು ಹೋಲ್ಕಿಯ ರಾಮ ॥
ತಾರೆಯ ನಡುನಡುವೆ ತೋರುವ ಚಂದ್ರಾಮ
ತೂರಿ ಚೆಂಡನಾಡುವನಿವನ್ಯಾರ ತಾಯಿ
ಸಾರುವೆ ಮಗನವ್ವ ಕೊಮರಾಮ ಸಂಗಿ
ತೋರ ಈತನ ತಂದು ಕೇಳ ಯಾಕೆ
ಹಾರೈಸುವದು ರತ್ನಾಲಿ ಕೇಳ ಅರಿತಿರಲಿ
ನಾರಿ ಹರಿಯಾಲೆಮ್ಮನ ಮಗನಿವನವ್ವ ॥
ಹರಿಯಾಲಿ ಮಗನೇನ ಸರಿಸವತಿ ನನಗಾಕಿ
ಕರತಂದು ತೋರ ನನಗೇನ ತಾಯಿ
ತರವಲ್ಲ ರತ್ನಾಲಿ ಪಾಪವಲ್ಲೇನ ನಾಯಿ
ಹರಿಯದೆ ಮಾಡುವ ಕೂಪೇನ ಸಂಗಿ
ಥರಥರ ನಡಗುತ ಬರುವೆಯೇನ ಹ್ಯಾಂಗಾರ
ಬರಲಿ ಚೆಂಡೆಂದು ದೇವರಿಗೆ ಬೇಡುವೆನ ॥
ಚೆಂಡಾಟ ನೆವದಿಂದ ಕಂಡೆನೆನ್ನುತ ರತ್ನಿ
ಹಿಂಡದೇವರನು ಭಜಿಸಿದಳು ಅಮರ
ಗುಂಡ ಮಲ್ಲೇಶನಿಗೆ ಒದಗೆಂದಳು ದೇವ
ಕೆಂಡಗಣ್ಣಿನ ಹಂಪಿ ವಿರೂಪಾಕ್ಷ ಈಗ
ಚೆಂಡು ನಮ್ಮನೆಯೊಳು ಕಂಡದ್ದು ಆದರೆ
ದಿಂಡರಕಿ ಹಾಕಿ ಕೈಮುಗಿವೆ ನಾನು ॥
ವರಯುಕ್ತಿಯಿಂದ ದೇವರಿಗೆ ಬೇಡುತ ರತ್ನಿ
ಜರದಂಬರವನುಟ್ಟುಕೊಂಡು ನಿಂದು
ಕರಿಗೀರ ಹಸರು ಕುಪ್ಪಸ ತೊಟಗೊಂಡು ವಂಕಿ
ಸರ ಮುತ್ತು ಚಿಂತಾಕ ಬಾಜುಬಂದು ಒಳ್ಳೆ
ಚರರುವ ರಾಗುಟಿ ಬಂಗಾರ ಮುರಡಿಯ ಸಿಂಗರದಿ
ಕಿರಿಬೆರಳ ಕದಪಿಟ್ಟು ಹೊರಗ ನೋಡುವಳು ॥
ಚೀರುವರು ಅತ್ತಿತ್ತ ಹಾರುವರು ಮ್ಯಾಲಕ
ಹಾರುವರು ಮಂಡೆಗಾಲೂರುವರು ಪುಟಿದು
ತೋರುವರು ಜಿಗಿಜಿಗಿದ್ಹಾರುವರು ಮೇಲೆ
ಹಾರುತ ಅಂತರ ತೋರುವರು ಮನಸು
ಹಾರುವದು ಆಟವು ಸುರುವಾಗಲು ಅದ ನೋಡಿ
ಏರುವದು ರತ್ನಿಗೆ ಪೂರ್ವವಿರಹವು ॥
ಕಡುಚೆಲುವೆ ನಾರಿಯು ಮಿಡಕುತ ಮನದೊಳು
ಕೊಡುಕೊಡು ದೇವ ಕಂದುಕವೆಂದು ಇಂಥ
ಕಡುಚೆಲುವ ಎನಗೇಕಿಲ್ಲೆದು ಇತ್ತ
ಹೊಡೆದಾಡು ವೀರರೊಳು ರಾಮ ಹೊಡೆಯಲು ರತ್ನಿ
ಕಡೆ ಬಾಗಿಲಕ ತಾಕಿ ಚೆಂಡು ಹಾರಿ ಪುಟಿಪುಟಿದು
ನಡುಮನೆಯೊಳು ಬಿದ್ದು ಸಿಡಿದಾಡುತಿರಲು ॥
ಗೆಳೆಯರೆಲ್ಲರು ಮಾರಿ ಹುಳುಹುಳು ನೋಡುತ
ತಿಳಿಯೊ ಕಾಟಣ್ಣ ಚೆಂಡ್ಹೋತು ರತ್ನಿ
ಬಳಿಗೆ ಹೋಗಿ ಚೆಂಡು ತಾಯೆನುತ ರತ್ನಿ
ಇಳಿದು ಉಪ್ಪರಗಿಯ ಚೆಂಡುಕೊಂಡು ನಿಂದು
ಇಳಿಮಾಗೆದ ಕಾಟಣ್ಣ ಸಾಗಿ ಬಳಲುತ ಉಪ್ಪರಿಗಿ
ಯೊಳಗ ಹೋಗಿ ಚೆಂಡು ಕೊಡೆಂದೆರಗಿದನು ॥
ಬರಬಾರದ್ಯಾತಜ ವರರಾಮನಿಲ್ಲಿಗೆ
ತಿರಿಗ್ಹೋಗಿ ಕಳಹು ಅವನಿತ್ತ ಇಂಥ
ಸರಸ ನಾಜೂಕ ಚೆಂಡಿದೆಂದು ನಿನ್ನ
ಕರದೊಳು ಕೊಡಲಾರೆ ಹೋಗೆಂದು ಅಯ್ಯೋ
ಪರಿಪರಿ ಚಾಲೊರೆದ ಎಷ್ಟು ಕೊಡದಾಕಿ ಕಾಟಣ್ಣ
ತಿರುಗಿ ಬಂದೊರೆದ ಕರೆವಳೆನ್ನುತ ॥
ಇಂದು ಘಾತಾದಿತು ಎಂದು ನುಡಿದನು ಕಾಟ
ಬಂತು ವಿಧಿ ಕಾಟವೆನ್ನುತಲಿ ಕೇಳು
ಮುಂದಾಗಿ ಚೆಂಡಿನಾಟವ ಬೇಡೆಂದೆ ಮನವ
ಕುಂದಿಸಿ ತಾಯಿಗೆ ಚೆಂಡ ನೀ ತಂದೆ ರಾಮ
ಬಂದಿತು ನಮಗಿಂದು ವಿಪರೀತವು ರತ್ನಿಗೆ
ವಂದಿಸಿ ಬೇಗನೆ ಚೆಂಡು ತಾರೆಂದ ॥
ನುಡಿಯ ಕೇಳುತ ರಾಮ ತಡಿಯದಲ್ಲಿಗೆ ಹೋಗಿ
ಕೊಡು ತಾಯಿ ಕದುಂಕವೆಂದು ರತ್ನಿ
ಕಡು ಮೋಹದಿಂದ ಮೊಗ ನೋಡುತಲಿ ಕಾಮ
ತಡೆಯಲಾರದೆ ಮೋಹಿಸುತ ಕೂಡ ಬಾ
ಪಿಡಿದು ಕರವ ಎಳಿದು ಕೈಗಳ ಚಾಚಿ ॥
ಎರಡು ಕಣ್ಗಳ ಮುಚ್ಚಿ ಹರಹರೆನ್ನುತ ರಾಮ
ಥರಥರನೆ ನಡುಗಿ ಬಿದ್ದನು ತಾಯಿ
ತರುಳನ ಮೇಲೆ ಇದೇಕೆಂದನು ಕಾಮ
ತರಂತುರಿ ಮಾಡುವ ರೀತೇನೆಂದನು ಯಮನ
ಪುರದೊಳು ಕಾಯ ಕರಕರನೆ ಕೊರೆವರು ಕೇಳಮ್ಮ
ದುರುಳ ಬುದ್ಧಿಯೇಟು ತರವಲ್ಲೆಂದನು ॥
Leave A Comment