ಪರಮ ಶ್ರೀಗುರು ನಿಮ್ಮ ಚರಣಸರೋಜದಿ
ಕರವ ನೇಮಿಸಿ ನಮಸ್ಕರಿಸು ವೆನು
ಪರಿಪರಿ ವಿಧದಲಿ ನಿತ್ಯ ಸ್ಮರಿಸುವೆನು ಘನ
ತರವಾದ ಸ್ತುತಿಯಿಂದ ಹರಸುವೆನು ಅತಿ
ಸರಸದಿ ಬಹುವಿರಸದಿ ಕಡುಹರು ಷದಿ
ಹರಭಕ್ತ ಮಲುಹಣ ಚರಿತೆಯ ನಯದಿಂದ
ವಿರಚಿಸುವೆನು ಬೇಗ ಕರುಣಿಸು ಮತಿಯ ॥
ಧಾತೆ ತ್ರಿಭುವನ ವಿಖ್ಯಾತೆ ಸರ್ವಾಗಮ
ತೀತೆ ಸಕಲಗುಣಯುತೆಯನು ಗಿರಿ
ಜಾತೆ ಅನಾಥರ ನಾಥೆಯನು ಪೂರ್ಣ
ವ್ರಾತೆ ಶಶಿಧರ ಸಮ್ಯಕ್ತೆಯನು ಮಹ
ರ್ಭೂತೆಯ ಸ್ವಯಂಜ್ಯೋತಿಯ ಪುಣ್ಯ ಪೂ ತೆಯ
ಭೀತೆ ದುರ್ಗತಿಗೆ ಸುನೀತೆ ಶಂಕರಗೆ ಸಂ
ಪ್ರೀತೆ ನಿರ್ಮಲ ಜಗನ್ಮಾತೆಯ ಭಜಿಪೆ ॥
ಮದನಹರನ ಪುತ್ರ ಚೆದುರ ವಿಘ್ನೇಶನೆ
ಉದಿಸೆನ್ನ ಹೃದಯೊಬ್ಜ ಸದನದೊಳು ಚಿತ್ತ
ಹುದುಗಿಸುವದು ಗುಪಿತತನದೊಳು ಬಹು
ಮೃದು ನುಡಿ ನುಡಿಸೆನ್ನ ವದನದೊಳು ಬಾಳ
ವಿಧದಿಂದ ಹೋಳಿಪದದಿಂದ ಪೇಳು ಮುದ ದಿಂದ
ಸದುಗುಣ ಮಲುಹಣ ಸದಮಲ ಚರಿತೆಯ
ಒದಗಿಸುವದು ಗುಣನಿಧಿಯ ಗಣಪತಿಯೆ ॥
ವಾಣಿಯ ಜಗಕತಿ ಜಾಣಿಯ ಬ್ರಹ್ಮನ
ರಾಣಿಯ ವಿದ್ಯಕೆ ಚೂಣಿಯನು ಬಹು
ತ್ರಾಣಿಯ ಲಲಿತ ಸುಪ್ಪಾಣಿಯನು ಗುಣ
ಶ್ರೇಣಿಯ ಅಧಿಕ ಪ್ರವೀಣೆಯನು ಸರ್ಪ
ವೇಣಿಯ ವೀಣಾಪಾಣಿಯ ಗೀರ್ವಾಣಿ ಯ ಶ
ರ್ವಾಣಿಯ ಮಾಣದೆ ನೆನೆವೆ ನಿ
ರ್ವಾಣಿಯ ವಿಮಲಕಟ್ಟಾಣಿಯ ಬೇಗ ॥
ಮಲುಹಣೆಂಬುವ ವಿಪ್ರಕುಲವಾರ್ಧಿಚಂದ್ರನು
ಬಲು ಭಾಗ್ಯದಲಿ ನಲಿನಲಿಯುತಲಿ ಓರ್ವ
ಮಲುಹಣಿಯೆಂಬಳಿಗೊಲಿಯುತಲಿ ಚಿಕ್ಕ
ಲಲನೆಯೊಡನೆ ಮೋಹ ಬಲಿಯುತಲಿ ಬಲ್
ಮೊಲೆಯಿಂದ ಸರ್ವಕಲೆಯಿಂದ ಅವಳ್ನೆಲೆ ಯಿಂದ
ಸಲೆ ಸುಖದಿಂದಿರ್ದು ಮಲಹರನೊಲಿಸಿ ಶ್ರೀ
ಚಲಕೈದ ಕಥೆಯನು ಒಲಿದು ಕೇಳುವದು ॥
ಧರಣಿಗಧಿಕವಾಗಿ ಮೆರೆವ ಭಾರತಿಯೆಂಬ
ಪುರವ ವರ್ಣಿಸುವರಿಗರಿದೆನಿಸಿ ಬೇರೆ
ಸರಿಯಪ್ಪುದೆಲ್ಲೆಲ್ಲಿ ಇರದೆನಿಸಿ ಚೆಲ್ವ
ಸುರ ನಗರಕೆ ಇದು ಪಿರಿದೆನಿಸಿ ಒಪ್ಪು
ತಿರುವದು ಸುಖ ಸುರಿವದು ಪ್ರೀತಿಗರೆ ವದು
ಪರಮಾನುರಾಗದೊಳಿರುವ ಪಟ್ಟಣದಿ ಸು
ವರ್ಣಸೆಟ್ಟಿ ಎಂಬ ಹರದನೊಪ್ಪಿದನು ॥
ಧನದಲಾಭರಣಾದಿ ಕನಕ ಸೊತ್ತಾಗೆ ನೂ
ತನವಾದ ವಸ್ತ್ರವಾಹನದಿಂದಲಿ ಸುಸ
ದ್ಘನವಪ್ಪ ಪವಳ ರತುನದಿಂದಲಿ ಮತ್ತೆ
ಮಿನುಗುವ ಮೌಕ್ತಿಕಾಸನದಿಂದಲಿ ಜಾಣ
ತನದಲ್ಲಿ ಒಂದೆ ಮನದಲ್ಲಿ ಧರ್ಮಗುಣ ದಲ್ಲಿ
ತನಗೆ ಇಮ್ಮಿಗಿಲಾದ ಜನರಿಲ್ಲ ಲೋಕದೊ
ಳೆನುತ ಸುವರ್ಣಸೆಟ್ಟಿಯು ಸುಖಮಿರ್ದ ॥
ಆತನಾತ್ಮಜನಾದ ಮಲುಹಣನೆಂಬ ಸು
ಜಾತನೊಪ್ಪಿದ ಮುತ್ತಿನಂದದಲಿ ಮೀನ
ಕೇತನಗಿಂದತಿ ಚೆಂದದಲಿ ಪ್ರ
ಖ್ಯಾತನು ಗೀತಪ್ರಬಂಧದಲಿ ಸರ್ವ
ಮಾತಿಲಿ ತತ್ವನೀತಿಲಿ ವಿಪ್ರಜಾ ತಿಲಿ
ಭೂತಳದೊಳಗತಿ ಜಾಣಪ್ರವೀಣ ಇ
ನ್ನೀತಗೆ ಸಮನಾದ ಪುರುಷರಿನ್ನುಂಟೆ ॥
ವಾರವೊಂದಕ್ಕೆ ಸಾಸಿರದಂತೆ ವರುಷವು
ನೂರಕ್ಕೆ ಸಲುವಷ್ಟು ಹೊನ್ನುಗಳ ಮುತ್ತ
ಹಾರ ಮಾಣಿಕ ಹೊಸ ರತ್ನಗಳ ಉಡು
ದಾರ ಉಂಗುರ ಬೆಳ್ಳಿ ಚಿನ್ನಗಳ ಜರ
ತಾರವು ಕೇಯೂರವು ವೈಢೂರ್ಯ ವು
ಮೂರು ಕೋಟಿ ಅರುವತ್ತಾರು ಲಕ್ಷಹೊನ್ನ
ತೋರಿಸಿದನು ತನ್ನ ಕುವರಗೆ ಪಿತನು ॥
ಆ ಕುವರಗೆ ಕೊಟ್ಟು ಉಳಿದಂಥ ಧನವನು
ನಾಲ್ಕೆರಡರಿಗೆ ನಮಸ್ಕರಿಸಿ ಮುಂದೆ
ಬೇಕು ಬೇಡೆಂಬುದು ನಿಷ್ಕರಿಸಿ ನಾನಾ
ತಾಪತ್ರಯಂಗಳ ಬಹಿಷ್ಕರಿಸಿ ಆಸೆ
ಯಾಕೆಂದು ಲೋಕ ಸಾಕೆಂದು ಸೊರಗಬೇ ಕೆಂದು
ಶ್ರೀಕಂಠನಂಘ್ರಿಯಪ್ಪಣೆಯಿಂದ ಕಾಯವ
ನಿಕ್ಕರಿಸುತ ನಾಕಲೋಕಸ್ಥನಾದ ॥
ತರುಳನು ದಿನಚರಿಯಲಿ ವಿಜಯೇಶನ
ಚರಣಕ್ಕೆ ಅಭಿಷೇಕ ಮಾಡುವನು ನಾನಾ
ಪರಿಯ ಪನ್ನೀರ್ಗಳ ನೀಡುವನು ಪೂವಿ
ನರಳ ಸಮರ್ಪಿಸಿ ನೋಡುವನು ಗಂಧ
ಇರಿಸುವ ಭಸ್ಮಧರಿಸುವ ನಮಸ್ಕರಿ ಸುವ
ಚಿರಕಾಲ ಲಿಂಗಧ್ಯಾನದೊಳು ತದ್ಗತನಾಗಿ
ಪರಮಾನುರಾಗದೊಳಿರುತಿರ್ದನಾಗ ॥
ಇತ್ತಲಾ ಸೂಳಿಗೇರ್ಯೊಳಗೆ ಒಪ್ಪುವ ಪೊಸ
ಮುತ್ತಿಗಿಮ್ಮಿಗಿಲಾದ ವೇಸಿಯರು ಮತ್ತೆ
ಚಿತ್ತಜ ಹಾವಕೆ ವಿಲಾಸಿಯರು ಮಹ
ದುತ್ತಮ ವಿಟಕುಲ ನಾರಿಯರು ಪರ
ರರ್ಥವ ಕೊಂಡನರ್ಥವ ಮಾಡಿ ವ್ಯರ್ಥ ವ
ಅತ್ತಿತ್ತ ಪುರುಷನ ಬಿಡದೆ ಕಾಮನ ಕೈಯ
ಕತ್ತಿಯಂತೊಪ್ಪುವ ಬೆಲೆವೆಣ್ಗಳೆಸೆಯೆ ॥
ಕಡೆಗಣ್ಣ ನೋಟಕ್ಕೆ ಕಡುಜಾಣ ವಿಟರೆದೆ
ಒಡೆದು ಮುಂದಕೆ ತಮ್ಮ ಅಡಿಗಳನು ಇಟ್ಟು
ನಡೆಯಲಾರದೆ ತೋಳು ತೊಡೆಗಳನು ಮುಂದೆ
ನಡುಗಿಸುತಲಿ ತೊದಲ್ನುಡಿಗಳನು ಈಗ
ನುಡಿವುತ ಎದೆ ಬಡಿವುತ ಉಗಳ್ಗುಡಿ ವುತ
ಕಡುಗಂಗಳೆಯರ ಬೆಡಗು ಬಿಂಕಕೆ ಕಾಮ
ಸಡಲಿಸುತ ಕಂಗೆಡುತಿದ್ದರವರು ॥
ಸೊಕ್ಕುಜವ್ವನೆ ಇವ ತಕ್ಕವ ನನಗೆಂದು
ಕಕ್ಕಸ ಕುಚಕೆ ಕೈಯಿಕ್ಕೆಂದಳು ಮುಂದೆ
ಮಿಕ್ಕಿದ ಸುರತದೊಳುಕ್ಕೆಂದಳು ನಿನ್ನ
ತೆಕ್ಕೆಯೊಳಗೆ ಮರೆಹೊಕ್ಕೆಂದಳು ಅವ
ನಕ್ಕಾನು ಬಹು ಪಕ್ಕಾನು ಮಹವೆಕ್ಕಾ ನು
ಸಿಕ್ಕದೋಡಲು ಕಂಡು ಮಕ್ಕಳಾಟಿಕೆ ಆಯಿ
ತಕ್ಕಟಕ್ಕಟ ಎಂದು ದುಃಖಿಸುತಿಹಳು ॥
ಮುಗ್ಧೆಯೋರ್ವಳು ಭಿತ್ತಿಯೊಳಗೆ ಚಿತ್ರದಿ ಬರೆ
ದಿರ್ದ ನಲ್ಲನ ರೂಪ ಕಾಣುತಲಿ ಬೆರ
ಳ್ಮುದ್ರೆಯುಂಗುರ ಹಿಡಿಯೆಂಬುತಲಿ ತಾನು
ಮುದ್ದಿಸಿ ಬಿಗಿದಪ್ಪಿಕೊಂಬುತಲಿ ನೋಡು
ತಿದ್ದಳು ಅಲ್ಲೆ ಬಿದ್ದಳು ತಿಳಿದೆದ್ದ ಳು
ಹೊದ್ದಿನೋಡುತ ನಲ್ಲನಲ್ಲೆಂದು ಮನದೊಳು
ಕದ್ದ ಕಳ್ಳಿಯರಂತೆ ಇದ್ದಳಾ ವನಿತೆ ॥
ಬಾಲೇರು ವಿಟರೆದೆ ಶೂಲೇರು ವಿರಹಕ್ಕೆ
ಲೋಲೇರು ಪರಮ ವಿಶಾಲೆಯರು ಮುಂದೆ
ಮೇಲಾದ ರತಿಗನುಕೂಲೆಯರು ಪುಷ್ಪ
ಗೋಲನ ಸುಖಕೆ ಕುಶಾಲೆಯರು ಬಹು
ಜಾಲೇರು ಕಾಮಜ್ವಾಲೇರು ಕೃಷ್ಣಲೋ ಲೇರು
ಸೋಲನರಿದು ಜಯಶೀಲರ್ಸಹಿತ ಭೂಮಿ
ಪಾಲ ಕಾಲಸಂಕೋಲೆಯಂತಿಹರು ॥
ಮುದಿ ಸೂಳೆಯೋರ್ವಳು ಹಾದಿಯೊಳಗೆ ಒಬ್ಬ
ಚೆದುರ ಜಾಣನ ಕಂಡು ನಿಲ್ಲೆಂದಳು ಎನ್ನ
ಅಧರಾಮೃತವನೇಕೆ ಒಲ್ಲೆಂದಳು ನಾನು
ಬೆದಿ ಮಾಡಿ ಕಲಿಸೂದ ಬಲ್ಲೆಂದಳು ಬಾಬಾ
ಸದನಕ್ಕೆ ಕೂಡು ಕದನಕ್ಕೆ ಮುದ್ದುವದ ನಕ್ಕೆ
ನೆದರಿಟ್ಟು ನೋಡಿನ್ನು ಹದಗಾಯಿ ರುಚಿಯುಂಟೆ
ಮೃದುವಣ್ಣು ಸವಿಯುಂಟು – ಎಂದಳಾ ವನಿತೆ ॥
ನಾಡಾಡಿ ಸೂಳೆಯೋರ್ವಳು ವಿಟಗಾರನ
ನೋಡುತ್ತ ಚಂದ್ರನ ಕಿರಣದೊಳು ತನ್ನ
ಜೋಡು ಕುಚವ ಬಿಟ್ಟು ಹರಣದೊಳು ಚಿಂತಿ
ಗೂಡಿತು ಕಾಮನ ಸ್ಮರಣೆಯೊಳು ಮುಖ
ಬಾಡಲು ಕಣ್ಣೀರಾಡಲು ದುಃಖ ಮಾ ಡಲು
ಮೂಡಿದ ಮೊಲೆಯ ಕಾಣುತಲೊಬ್ಬ ವಿಟನು ಹಾಳ
ಗೋಡೆಯ ಒಳಿಯಕ್ಕ ಎಳದೊಯಿದನವಳ ॥
ಇಂತಪ್ಪ ಸೂಳೆರೋಳಧಿಕವಾಗಿರುವ ಸ್ತ್ರೀ
ಮಂತಮಣಿಯು ಸಾರ ಸದ್ಗುಣಿಯು ಚಂದ್ರ
ಕಾಂತಿಯಂತೊಪ್ಪುವ ಮಲುಹಣಿಯು ಕಾಮ
ತಂತ್ರಕ್ಕೆ ನವಮೋಹನದ ಖಣಿಯು ಅಜ
ಯಂತಿಯೊ ದಮಯಂತಿಯೊ ಕೀರ್ತಿವಂತಿ ಯೊ
ಕಂತುವಿನರಸಿಗಿಮ್ಮಡಿ ರೂಪಿನವಳ ನಾ
ನೆಂತು ಬಣ್ಣಿಸುವೆನು ಕೋಮಲಾಂಗಿಯಳ ॥
ಕಳಸ ಕುಚವು ಚೆಲ್ವ ಗಳರವ ಕೋಗಿಲಿ
ನಳನಳಿಸುವ ತೋಳು ತಳಿರಡಿಯು ವಾರಿ
ಸುಳಿಯಂತೆ ನಾಭಿಯು ಗಿಳಿನುಡಿಯು ಥಳ
ಥಳಿಪ ರಂಭೆಯ ಪೋಲ್ವ ಒಳದೊಡೆಯು ಚಿಕ್ಕ
ಅಳಿಮುಡಿ ಕಿಸಕುಳ ನುಡಿ ಕರ್ಣಗಳು ಹೆಡಿ
ತಿಳಪು ಗಲ್ಲಗಳಿಂದ ಪೊಳೆವ ಸುವರ್ಣ ಪು
ತ್ಥಳಿಯಂತೆ ಎಸೆವಳು ನಳಿನ ಸುಗಂಧಿ ॥
ಕೆಂಬಲ್ಲಧರ ತೊಡೆ ರೂಪು ಕೊರಳ್ಗೊಂಡು
ಮುಂಬಿರಿದಿರ್ದ ದಾಳಿಂಬಗಳು ಸವು
ರಂಬದಿಂದೊಪ್ಪುವ ಬಿಂಬಗಳು ಸೊಬ
ಗಂ ಬೀರುತಿಹ ಬಾಳಿಕಂಬಗಳು ಮದ
ಕುಂಭಿಯು ಹೊಸ ನಿಂಬಿಯು ಮರಿದುಂಬಿಯು ಮಹ
ರಂಭೆಯೊಳೆಸೆವ ರೂಪಕೆ ನಾವು ಸರಿಯಲ್ಲ
ವೆಂಬುತ ಬಿಟ್ಟಡವಿಯನು ಸೇರಿದವು ॥
ಕಾಲುಂಗರ ಪಿಲ್ಲಿ ಸರಪಳೀ ವಂಕಿ
ಮೇಲಾದ ಹಣೆಯ ಬಟ್ಟಿನ ಶೃಂಗಾರ ರತ್ನ
ಕೀಲಿಸಿದಂತೆ ಹೇಳಲು ಬಂಗಾರ ಮುತ್ತು
ನೀಲ ವೈಡೂರ್ಯ ವಜ್ರದ ಉಂಗುರ ಕೊಟ್ಟು
ವಾಲಿಂದ ಮೋಹನ್ಮಾಲಿಂದ ಎಣ್ಣೆ ನೂ ಲಿಂದ
ಕೀಲಗಂಕಣ ಹಸ್ತ ಕಡಗ ಒಡ್ಯಾಣದಿ
ಬಾಲೆ ಒಪ್ಪಿದಳು ಚಿತ್ರದ ಬೊಂಬೆಯಂತೆ ॥
ಕಡು ಚೆಲ್ವ ಮಗಳಿಗೆ ಹಡೆದ ಪದ್ಮಾವತಿ
ಸಡಗರದಲಿ ಪೂವ ಮುಡಿಸುವಳು ನಿರಿ
ವಿಡಿದು ಪೀತಾಂಬರಿ ಉಡಿಸುವಳು ಬಹು
ಬೆಡಗಿನಿಂ ಕಂಚುಕ ತೊಡಿಸುವಳು ಮುದ್ದು
ಕೊಡುವಳು ಗಂಧ ತೊಡುವಳು ತಿಲ್ಕ ಇಡು ವಳು
ಕಡು ತವಕದಿ ಗಲ್ಲವಿಡಿದು ನಿವಾಳಿಯ
ಕಡೆಗಿಟ್ಟು ನಿಟ್ಟಿಸುವಳ್ಕುಡುತೆಗಂಗಳೆಯ ॥
ತಾಳ ಮೃದಂಗ ತಿತ್ತಿಯು ರುದ್ರವೀಣೆಯ
ಬಾಲ ಪ್ರಾಯದ ಮುದ್ದು ನಾರಿಯರು ವಿದ್ಯೆ
ಕೊಳುಗೊಡುವ ತಾಳಧಾರಿಯರು ರಾಗ
ಹೇಳುವ ಗಾಯನಕಾರಿಯರು ಮುಂದೆ
ಆಳೇರು ಚೌರ ಡಾಳೇರು ಸರ್ವ ಸೂ ಳೇರು
ಮ್ಯಾಳ ಸಹಿತ ವಿಜಯೇಶ್ವರಲಿಂಗನ
ಆಲಯ ಪೊಕ್ಕಳು ಲೋಲ ಲೋಚನೆಯು ॥
ಸಿತಕಂಠನಿಗೆ ಕೈಯ ಮುಗಿದು ಮದ್ದಳೆ ತಾಳ
ಗತಿಗಭೀನದ್ವಯ ಕರಗಳಿದ ಬಹು
ಹಿತವಾದ ಕೋಕಿಲ ಸ್ವರಗಳಿಂದ ರಾಗ
ಗತಿಗೂಡಿಸುತ ತರತರಗಳಿಂದ ಪುಣ್ಯ
ಸತಿಯರು ರೂಪವತಿಯರು ಸುಸಂಗತಿ ಯರು
ವ್ರತಿಗಳ ಎದೆ ಕುಲಕುವವೊಲು ಬತ್ತೀಸ
ಅತುಳ ರಾಗದಿ ನಲಿಯುತಿರ್ದರಾಗ ॥
ಸುಗತಿಮಣಿಯು ಕಿರಿಗೆಜ್ಜೆ ಹೆಜ್ಜೆಗಳಿಂದ
ಝಗಝಗಿಸುತ ಥೈಥೈ ತೋಂಕಿಟಿತ ದಿಪ್ತ
ತಗಡ್ದತ್ತ ತಗಡ್ದತ್ತ ಹುಂಕಿಟಿತ ಎಂದು
ಹುಗಗಿರೆ ಕರಡ್ವಂಕ ಝಂಕಟಿತ ಇಂತು
ಬಗೆ ಆಡಿ ಆಟ ಮಿಗಿಲಾಡಿ ಮುಗುಳ್ನಗೆ ಗೂಡಿ
ಸೊಗಸಿಂದ ನರ್ತನವಾಡುತಿರುವದ ಕಂಡು
ಬೆಗಡುಗೊಂಡನು ಮಲುಹಣ ಮಲುಹಣಿಗ ॥
ಮರಿದುಂಬಿ ಸರಗೈದು ವರ ಇಕ್ಷುದಂಡಕೆ
ತಿರುಹನೇರಿಸಿ ಪಂಚಸ್ವರಗಳಿಂದ ಕರ್ಣ
ಪರಿಯಂ ಬಿಗಿದು ಝಣತ್ಕರಗಳಿಂದ ನೋಡಿ
ಸ್ಮರರಾಯನೆಚ್ಚನಬ್ಬರಗಳಿಂದ ಎದೆ
ಕರಗುತ ಕಂಡು ಸೊರಗುತ ಮನ ಮರು ಗುತ
ತರಹರಿಸದೆ ಕಾತರ ಹೆಚ್ಚಿ ಮಲುಹಣ
ಬೆರಗುವಟ್ಟನು ಮುದ್ದು ತರಳೆ ರನ್ನಳಿಗೆ ॥
ಚದುರ ಸುಜಾಣನ ಸುದತಿ ಕಂಡಾಕ್ಷಣ
ಮದನ ಕೋದಂಡಕ್ಕೆ ಹೆದೆಗಳನು ಜೋಡಿ
ಸಿದ ಕಾಣುತ ಒಳ್ಳೆದೆಂಬದಿಗಳನು ಮುಂದೆ
ಹದವಿಕ್ಕಿದಂಬಿನ ತುದಿಗಳನು ತೀಡಿ
ಚೆದುರಲಿ ಅವಳಿದಿರಿಲಿ ನೋಡಿ ನೆದ ರಿಲಿ
ಒದಗಿದ ಕುಚದ ಮಧ್ಯದಿಂ ಬಿಗಿದೆಸೆಯಲು
ಮುದದಿ ಮೈಮರೆದಳು ಮದಗಜಗಮನೆ ॥
ಮಾರನಾಲಿಯ ತಾಳಲಾರದವನ ಕೈಯ
ವಾರಿಜ ಪಿಡಿದು ಹಸ್ತಾಂತ್ರದಲಿ ಅತ್ತ
ಸಾರಿದಳಾಗ ಸ್ವತಂತ್ರದಲಿ ಹರ್ಮ್ಯ
ಸೇರಿದರವರು ಗುಪ್ತಾಂತ್ರದಲಿ ಪುಣ್ಯ
ನಾರಿಯು ಹೊಂತಕಾರಿಯು ಸೂಶರೀ ರಿಯು
ಆ ರಮಣನ ತೆಕ್ಕೆಯೊಳಗಾಂತು ಶಕುನಿಯ
ಪರ್ಯಂಕದೊಳು ಬಹು ಉಪಚರಿಸಿದಳು ॥
ಪುರುಷನ ಕಾಲ್ಗೆ ಆ ತರುಣಿ ಅಳಿಯರಿಂದ
ತರಿಸಿ ಪನ್ನೀರ್ಗಳ ಬೆರಸುತಲಿ ಸೀರಿ
ಸೆರಗಿಂದ ಚರಣವನೊರಸುತಲಿ ದಿವ್ಯ
ಪರಿಮಳಕ್ಷತೆ ಗಂಧ ಧರಿಸುತಲಿ ಮಹಾ
ಧೈರ್ಯದಿ ಕಾಮ ಕಾರ್ಯದಿ ಬಹುವೀ ರ್ಯದಿ
ಸರಸ ಮಾತುಗಳಾಡಿ ಸುರತಕ್ಕೆ ಬಹು ಚಮ
ತ್ಕರದಿಂದ ಕೂಡಿ ಅಕ್ಕರದೊಳಗಿರುತ ॥
ತೆಕ್ಕೆ ಹನ್ನೆರಡು ಷೋದಶ ಕಲೆ ನವಮೋಹ
ಉಕ್ಕುತ ಬತ್ತೀಸ ಕೂಟದಿಂದ ಮುಖ
ವಿಕ್ಕಿ ಮುದ್ದಿಸಿ ಅರೆನೋಟದಿಂದ ಬಹು
ಅಕ್ಕರಾಗುವ ಮಾರನಾಟದಿಂದ ಬೆವ
ರಿಕ್ಕುತ ಮೈಯ ತಿಕ್ಕುತ ಉಸುರಿ ಕ್ಕುತ
ಸುಕ್ಕಿ ಸುರ್ರನೆ ಶ್ರಮಗಳೆದು ಪರ್ಯಂಕವ
ಗಕ್ಕನಿಳಿದರೀರ್ವರಗಲದಂದದಲಿ ॥
ಸಲೆ ಹರುಷದಿ ಆ ಲಲನೆ ಸಹಿತ ತಪ್ತ
ಜಲದಿಂದ ಕಾಲ್ಮೊಗ ತಲೆಗಳನು ಬಹು
ಗೆಲವಿನಿಂದಲಿ ಸರ್ವ ಕಲೆಗಳನು ಕಡು
ಚೆಲುವ ಕಾಮನ ಪ್ರೀತಿ ನೆಲೆ ಗಳನು
ಎಲ್ಲ ತೊಳೆವುತ ಮೂರ್ಛೆ ತಿಳಿವುತ ಚಿಂತಿ ಅಳಿ ವುತ
ಸುಲಲಿತವಾದಂಥ ಹಲವು ವಸ್ತ್ರವನುಟ್ಟು
ಬಲು ತವಕದಲಿ ಸುಸ್ಥಲಕೈದಲವರು ॥
ಲೆತ್ತ ಪಗಡಿ ಚದುರಂಗ ಹಾಸಂಗಿಯ
ನೆತ್ತಿ ಚದುರಂಗವನಾಡಿದರು ಮೇಲೆ
ಬತ್ತೀಸ ರಾಗವ ಪಾಡಿದರು ಅದ
ರೊತ್ತಿಲಿಬ್ಬರು ಕೂಡಿ ಹಾಡಿದರು ಅವ
ರರ್ತಿಲಿ ಸುಸಂಪತ್ತಿಲಿ ಬಂದೋಬ ಸ್ತಿಲಿ
ಅತ್ತಿತ್ತ ಅಗಲದಂದಲಿರುವರು ಅಚ್ಚ
ನೊತ್ತಿದ ಬಣ್ಣದ ಪ್ರತಿಮೆಯಂದದಲಿ ॥
ಜನಕ ಕಳಿಸಿಕೊಟ್ಟ ಧನವನೆಲ್ಲವ ತಂದು
ವನಿತೆಯ ಕೈವಶ ಮಾಡಿದನು ರತ್ನ
ಕನಕ ವಸ್ತುಗಳೆಲ್ಲ ನೀಡಿದನು ತಮ್ಮ
ಮನಿಮಾರ ಬಿಟ್ಟವಳ್ಕೊಡಿದನು ತನ್ನ
ತನುವನು ಚೆಲ್ವ ಮನವನು ಶುದ್ಧ ಧನ ಮನು
ಅನುಮಾನಿಸದೆ ನೂತನವಾದ ವಸ್ತು ವಾ
ಹನವನೆಲ್ಲವನಿತ್ತ ಘನತಕದಲಿ ॥
ಸಮರೂಪು ಸಮಪ್ರಾಯ ಸಮಜಾಣ್ಮೆ ಸಮಚಿತ್ತ
ಸಮವಾದ ಸದ್ಗುಣ ಸಮತೆಯಿಂದ ಸ್ನೇಹ
ಸಮವರ್ಗ ಸಮಭಾವ ಮಮತೆಯಿಂದ ಮೋಹ
ಸಮಯಾಂತಿ ಸಮದಾಂತಿ ಸಮತೆಯಿಂದ ಶಮೆ
ದಮೆಯಿಂದ ಕ್ರಿಯಗಮೆಯಿಂದ ಶ್ರೀಲಕ್ಷ್ಮಿ ಯಿಂದ
ಸಮಸುಖ ಸಮರತಿ ಸಮವಾಗಿ ಅನುದಿನ
ಸಮರಸದಲಿ ತಾವು ಸಮನಾಗಿರುತ ॥
ಗಳಿಲನೆ ತಾನೊಂದು ದಿನದಿ ಯೋಚಿಸಿದಳು
ನಳಿನ ಮುಖಿಯು ತನ್ನ ಮನದೊಳಗೆ ಬ್ಯಾಗ
ಸುಳಿದಾಡಬೇಕು ಆ ವನದೊಳಗೆ ನೀರ
ತಳಿರ ಕ್ರೀಡಿಸಬೇಕು ಕೊಳನೊಳಗೆ ತನ್ನ
ಗೆಳೆಯಗೆ ಚಂದ್ರಕಳೆಯಗೆ ವಿದ್ಯಪ್ರಳ ಯಗೆ
ಕಳುಪಿ ಲಾವಣ್ಯ ವಸ್ತ್ರವನುಟ್ಟು ತನ್ನಯ
ಕೆಳದರ್ಸಹಿತವಾಗಿ ನಡೆದಳಾ ವನಕೆ ॥
ಶಿವನಂತೆ ಶಿವನ ವಾಹನದಂತೆ ಋಷಿಯಂತೆ
ಯುವತೇರ ಮಂಗಲ ಸೂತ್ರದಂತೆ ಗೌರೀ
ಧವನ ಕೈಲೊಪ್ಪುವ ಪಾತ್ರದಂತೆ ವಾ
ಸವ ಖಡ್ಗದಿ ಪೊಯ್ದ ಗೋತ್ರದಂತೆ ಇಂದು
ರವಿಯಂತೆ ರುಕ್ಷಹವಿಯಂತೆ ಶ್ರೀ ಶಾಂಭವಿ ಯಂತೆ
ತವೆ ಕರ್ಣನಂತೆ ಕಾರ್ಮುಕದಂತೆ ಹಯದಂತೆ
ವಿವರಿಸಿ ಕರೆವಂತೆ ಬನವೊಪ್ಪುತಿಹುದು ॥
ನಳಿನ ಶೃಂಗಾರದ ಛತ್ರ ಚೌರ ಕೋಗಿಲಿ
ಗಿಳಿ ಮುಂದೆ ಹೊಗಳುವಂಥ ಪಾಠಕರು ಸೋಗೆ
ಗಳು ನಲಿದಾಡುವ ನಾಟಕರು ಕೋಕ
ಕೊಳರ್ವಕ್ಕಿ ಮೃಗಪಕ್ಷಿ ನೋಟಕರು ಪರಿ
ಮಳದಿಂದ ಸೂಸಿ ತಳದಿಂದ ಸರ್ವಫಳ ದಿಂದ
ಅಳಿನಾದ ಭೇರಿಯು ವನಲಕ್ಷ್ಮಿ ಇವರಿದಿ
ರ್ಗೊಳಬಂದಳೆಂಬಂತೆ ವನವೆಸೆದಿಹುದು ॥
ಮೇಲಾದ ವನ ಇರುತಿರಲದರೊಳು ಚಂದ್ರ
ಸಾಲೆ ಒಪ್ಪಿತು ಹೊನ್ನ ಕುಟ್ರಿಯಿಂದ ಪಚ್ಚ
ಶೈಲಗಟ್ಟಿಹ ನೆಲಗಟ್ಟಿಯಿಂದ ರತ್ನ
ಕೀಲಿಸಿ ವಜ್ರದ ಕಟ್ಟಿಯಿಂದ ಬೊಂಬೆ
ಸಾಲ್ಗಳು ಮುತ್ತು ನೀರ್ಗಳು ಸುತ್ತ ಜಾ ಲ್ಗಳು
ಜಾಳಂದ್ರದತೆ ಶೋಭಿಸುವ ಮಂಟಪದಲ್ಲಿ
ಬಾಳ ಸಂತೋಷದಿ ಇರುತಿರ್ದರವರು ॥
ತಿಳಿನೀರು ಕೊಣದ ಸುತ್ತಿನೊಳು ದೂತೇರ ಕೈಯ
ತಳಯ ಬಂದೀ ಎಡಬಲದೊಳಗೆ ಅಲ್ಲಿ
ಸೆಳೆಮಂಚ ಇರಿಸುತ ಜಲದೊಳಗೆ ಬಂದು
ಕುಳಿತರು ತಂಪಿನ ಸ್ಥಲದೊಳಗೆ ಮಂಚ
ಕ್ಕೆಳೆವುತ ಸೀರಿ ಸೆಳೆವುತ ನೀರ ತಳಿ ವುತ
ನಳಿನದಿಂದೆಸೆದಾಡಿ ದಣಿದು ಈರ್ವರು ತಮ್ಮ
ನಿಳಯಕ್ಕೆ ನಡೆದಾರು ಘನ ತವಕದಲಿ ॥
ನಡೆಯಲ್ಲಿ ನುಡಿಯಲ್ಲಿ ಒಡೆಯಾನು ತಾನಾಗಿ
ದೃಢದಿಂದ ಗೃಹಕೃತ್ಯ ನಡಸುವನು ಮತ್ತೆ
ಹಿಡದದ ಇಡುವಲ್ಲಿ ಇಡಿಸುವನು ವಸ್ತ
ಒಡವಿಯ ಕೊಡುವಲ್ಲಿ ಕೊಡಿಸುವ ಅಟ್ಟ
ಅಡಿಗೀಲಿ ತೊಟ್ಟ ತೊಡಿಗೀಲಿ ಉಟ್ಟ ಉಡಿ ಗೀಲಿ
ಎಡದೆರಪಿಲ್ಲದೆ ಮಡದಿಯೋಳ್ಸುರತದಿ
ಒಡಗೂಡುತಲಿ ಸುಖಬಡುತಿರ್ದನಾಗ ॥
Leave A Comment