ಇರಲೊಂದು ದಿನ ಕೆಟ್ಟ ದುರುಳೆ ಪದ್ಮಾವತಿ
ತರುಳೆಯ ಮುಂದಕ್ಕೆ ಕರೆವುತಲಿ ಈಗ
ಸರಿಬಾರದುದನೊಂದು ಒರೆವುತಲಿ ತಾನು
ಬರಿಯ ಬಣ್ಣದ ಮಾತ ಸುರಿಸುತಲಿ ಇದು
ಸರಿಯೇನೆ ಬುದ್ಧಿ ಅರಿಯೇನೆ ನಿನ್ನ ಪರಿ ಯೇನೆ
ಮರುಳೆ ಕೇಳೆಲೆ ಸರಿಗರತೇರಂತಿಬೇಕು
ತರವಲ್ಲ ಅವನೊಡನಿರುವದು ಮಗಳೆ ॥
ಒತ್ತೆಗೊಟ್ಟವನ ಚಾಳಿಸಿ ಬಿಟ್ಟು ಹೊರಡಿಸಿ
ಒತ್ತಿ ಕವಾಟವ ಬಲಿಯಬೇಕು ನೋಡಿ
ಮತ್ತೊಬ್ಬ ಧನಿಕನಿಗೆ ಒಲಿಯಬೇಕು ಕೈಯ
ಅರ್ಥ ಒಡವಿ ವಸ್ತು ಸುಲಿಯಬೇಕು ಒಂದು
ತುತ್ತಿಗೆ ಇಲ್ಲೊಪ್ಪತ್ತಿಗೆ ತೈಲ ನೆ ತ್ತಿಗೆ
ಮತ್ತಿಲ್ಲದಂತೆ ಮಾಡುತ ವಿಟ ಪುರುಷರ
ಕುತ್ತಿಗಿ ಹಿಡಿದು ದಬ್ಬಲಿಬೇಕು ಮಗಳೆ ॥
ಎಷ್ಟು ಹೇಳಲಿ ಇಂಥ ಮಟ್ಟಿ ಹಾರುವನ ನೀ
ಬಿಟ್ಟು ಮತ್ತೊಬ್ಬನ ಇಟ್ಟುಕೊಳ್ಳೆ ಅವ
ಕೊಟ್ಟ ದ್ರವ್ಯವ ಗಂಟು ಕಟ್ಟಿಕೊಳ್ಳೆ ಪಟ್ಟ
ಪಟ್ಟಾವಳಿಯ ಸೀರಿ ಉಟ್ಟುಕೊಳ್ಳೆ ಉಟ್ಟ
ಬಟ್ಟೆಗೆ ನಮ್ಮ ಹೊಟ್ಟೆಗೆ ತುತ್ತು ರೊ ಟ್ಟಿಗೆ
ಹಿಟ್ಟಿಲ್ಲದಾಯ್ತು ಈ ಪಟ್ಟುಗುಡುಮನಿಂದ
ಸಿಟ್ಟಿನಿಂದ ಬಂದು ಕುಟ್ಟಿದಳ್ ಮಗಳ ॥
ಮಲುಹಣನೆನ್ನ ವಲ್ಲಭ ಮುದ್ದು ಚೆನ್ನಿಗ
ಚೆಲುವ ಸುಜಾಣನ ಬಿಡಬಲ್ಲೆನೆ ಮತ್ತೆ
ಹುಲುಮನುಜರಿಗೆ ಚಿತ್ತವಿಡಬಲ್ಲೆನೆ ಇಂಥ
ಕೆಲಬರ್ಗೆ ಸುರತವ ಕೊಡಬಲ್ಲೆನೆ ಮುಂದೆ
ಫಲವೇನೆ ಇದು ಗೆಲವೇನೆ ನಿನ್ನ ಛಲ ವೇನೆ
ಸುಲಲಿತಾಂಗನ ತೆಕ್ಕೆಯೊಳಗಿರ್ದ ಬಳಿಕ ಈ
ಹಲವು ಜಾತಿಗೆ ನಾನು ಒಲಿದು ಪೋಗುವೆನೆ ॥
ಮಗಳ ಕೈ ಹಿಡಿದೆಳದೊಯಿದೊಂದು ಕೋಣಿಯ
ಹೊಗಸಿ ಹಲ್ಲಿನೊಳವ್ಡ ಕಚ್ಚುತಲಿ ಕೋಪ
ಮಿಗಿಲಾಗಿ ದ್ವಾರವ ಮುಚ್ಚುತಲಿ ಚಿಲ್ಕ
ಸಿಗಿಸಿ ಕೀಲಿಗಿ ಮುದ್ರಿ ಹಚ್ಚುತಲಿ ಪರ್ಣ
ಜಗಿಯೂತ ಉಗಳುಗಿವೂತ ತಾಂಬುಲೊಗೆ ವೂತ
ಟಗರ್ದಲೆಯಿಂದ ಬಾಗಿಲ ಮುಂದೆ ಕುಳಿತು
ಆಗ ಪುರುಷನ ಕಂಡು ನೀ ಬರಬೇಡೆನಲು ॥
ಸರಿಗರತೇರ ವಿಟಪುರುಷರ ಕೈಯಿಂದ
ಪರಿಪರಿ ಭರಣಾವ ತರಿಸಿಕೊಂಡು ತರ
ತರದಿಂದ ಮೈತುಂಬ ಧರಿಸಿಕೊಂಡು ಮುಂದೆ
ಮೆರೆವ ಹೊನ್ನಿನ ರಾಸಿ ಸುರಿಸಿಕೊಂಡು ತಾವು
ಇರುವರು ಮತ್ತೆ ಮೆರೆವರು ಪ್ರೀತಿಗರೆ ವರು
ಅರಿಯದ ಹುಡಿಗಿಯ ಮರುಳ್ಮಾಡಿ ನೀನಿನ್ನು
ನೆರೆದು ಪೋಗುವದಿದು ತರವಲ್ಲವೆನಲು ॥
ನಿನ್ನ ಚೆಲ್ವಿಕಿಯನ್ನು ತೊಳೆದು ನಿಟ್ಟಿಸಬೇಕೆ
ನನ್ನ ವಿದ್ಯೆಯು ಹೊಟ್ಟಿಗನ್ನಗಳೆ ಮುಂದೆ
ನಿನ್ನ ಪ್ರಾಯವು ಹೊನ್ನು ಚಿನ್ನಗಳೆ ಹೀಗೆ
ನಿನ್ನ ಜಾಣ್ವಿಕೆ ಮುತ್ತು ರನ್ನಗಳೆ ಚಿಕ್ಕ
ಕನ್ನೇರು ಮುದ್ದು ಚೆನ್ನೇರು ಮೋಹ ರನ್ನೇರು
ಇನ್ನೆಲ್ಲಿ ನಿನಗಿನ್ನು ದೊರಕದಿಹರೆಯೆಂದು
ಮುನ್ನ ಕೋಪದಿ ಕತ್ತ ಹಿಡಿದು ನೂಕಿದಳು ॥
ಕಡು ಚಿಂತೆಯೊಳು ಕಳವಳಿಸಿ ಅವ್ವಳಿಸುತ
ನಡೆತಂದು ಕುಳಿತು ಆ ವನದೊಳಗೆ ನಾರಿ
ಅಡಗಿದಳಿಂದಿನ ದಿನದೊಳಗೆ ಎದೆ
ಯೊಡೆದು ಯೋಚಿಸಿದನು ಮನದೊಳಗೆ ನನ್ನ
ಮಡದಿಯೆ ಯಾಕೆ ತಡದಿಯೆ ಮತ್ತೆ ನಡ ದಿಯೆ
ಬಿಡದಿವಳ್ನೆನಸಿಕೊಳ್ಳುತಲೊಂದು ಭೂರುಹದ
ಅಡಿಯಲ್ಲಿ ಕುಳಿತು ಬಾಯ್ಬಿಡುತಿರ್ದನವನು ॥
ನಾರಿಯು ಕಣ್ಮುಂದೆ ಸುಳಿದಂತಾಗಳು ಬಾ ಬಾ
ನೀರೆ ಎನ್ನಲು ಬಯಲಪ್ಪುವನು ಸನ್ನಿ
ಏರಿದ ಮಾನ್ವರಂತೊಪ್ಪುವನು ಚಿಂತೆ
ದೋರುತ ಭವಣಿಯೊಳಿಪ್ಪವರು ಅರ್ಧ
ಧೈರ್ಯದೊಳ್ ಬಾಳವೀರ್ಯದೊಳ್ ಕಾಮತೂರ್ಯ ದೊಳ್
ಈ ರೀತಿ ವಿರಹದೊಳಿರಲಾಗ ರವಿ ತಾನು
ಭೋರನೆ ಪಡುವಣ ದೆಸೆಗೆ ಸೇರಿದನು ॥
ಪರಮೇಶ್ವರಗೆ ಈತನಿರವ ಪೇಳುತ ಚಿಂತೆ
ಪರಿಹರಿಸುವೆನೆಂಬ ತೆರದಿಂದಲಿ ತಾನು
ತ್ವರಿತದಿ ನಡೆದನಕ್ಕರದಿಂದಲಿ ಕ್ಷೀರ
ಶರಧಿಯ ಪೊಕ್ಕನಬ್ಬರದಿಂದಲಿ ಕೆಂಪು
ಹರದೀತು ಕಾವಳ್ಗರದೀತು ನೈದಲ್ತೆರ ದೀತು
ಸೊರಗೀತು ಚಕ್ರ ಬಲ್ಮರುಗೀತು ಚಕ್ರ
ತೆರಪಿಲ್ಲದುಡುಗಣವು ಭರದೊಳಗೆಸೆಯೆ ॥
ಬಿಡದಿವನಿರವ ನೋಡಲಿಕೆ ತಾಂ ಬರ್ಪಂತೆ
ಉಡುರಾಜ ಪೂರ್ವದಿಕ್ಕಿಗೇರಿದನು ಅಲ್ಲಿ
ತಡೆಯದೆ ಮುಖಪದ್ಮದೋರಿದನು ತಾನು
ಕಡು ಬೇಗ ಕಿರಣವ ಬೀರಿದನು ಚಕೋ
ರಡಗಲು ಚೋರರ್ ನಡೆಯಲು ಜಾರರ್ ತಡೆ ಯಲು
ಒಡಲೊಳಗುದಿಸಿದಾತನು ಬಂದನೆಂದು ಪಾಲ್
ಗಡಲು ಹಿಗ್ಗುತ ಮೇರೆವರಿದುದು ಭರದೀ ॥
ಇಂತಪ್ಪ ಚಂದ್ರನ ಪ್ರಭೆಯೊಳಗಾದ ಬಹು
ಸಂತಪಗೊಳುತೆ ತನ್ನಂಗದಲಿ ಬಾಳ
ಭ್ರಾಂತಿ ಹತ್ತಿತು ಅಂತರಂಗದಲಿ ಕುವ
ನಾಂತ್ರದೊಳಿಹನತಿ ಭಂಗದಲಿ ಅತ್ತ
ಕಾಂತೆಯು ನಿಂತಿವಂತೆಯು ಸರ್ವಶಾಂ ತೆಯು
ಕಾಂತನ ಕಾಣದೆ ಕಳವಳಿಸುತಲಾಗ
ದಂತಿಗಮನೆ ಬಾಳ ಚಿಂತಿಸುತಿಹಳು ॥
ಹರಣದೊಲ್ಲಭನಿಗೆ ತ್ವರಿತದಿ ನಡೆತಂದು
ಹೊರಬಾಗಿಲೊಳು ನಿಂದು ಕರೆದನೇನೊ ದ್ವಾರ
ತೆರಿಯಲಿಲ್ಲೆನುತಲಿ ಮುನಿದನೇನೊ ಇವ
ಳ್ಬರಲಿಲ್ಲವೆನುತೆನ್ನ ತೊರೆದನೇನೊ ಕೂಗಿ
ಕರೆವುತ ಬಾಯಿದೆರೆವುತ ಕಣ್ಣೀರ್ಗರೆ ವುತ
ಪುರುಷನಿಲ್ಲದೆ ಸರ್ವಾಭರಣವೇತಕೆಯೆಂದು
ಹರಿದು ಬಿದ್ದು ನೆಲಕ್ಹೊರಳಿದಳವಳು ॥
ಕಡುಪಾಪಿ ಬ್ರಹ್ಮ ನೀ ಪಡೆದೆ ಯಾತಕೆ ನಲ್ಲ
ನೊಡನೆ ಕೂಡಿಸಿ ಮತ್ತೆ ಕೆಡಿಸುವರೆ ಆತ
ಹಿಡಿದಿರ್ದ ಕೈಯ ನೀ ಬಿಡಿಸುವರೆ ಪಾಪ
ಕೆಡಿಸಿ ಈ ಕಾಯವ ಸುಡಿಸುವರೆ ಮುಂದೆ
ಅಡವಿಗೆ ದೊಡ್ಡ ಮಡುವಿಗೆ ಇಂಥ ಪೊಡ ವಿಗೆ
ಬಿಡದೆ ಸೋಬತಿ ನೀ ನಡೆವಂಥ ಸಮಯಕೆ
ನಡುದಾರಿಯನು ಬೇಗ ಕಡಿದಾನು ಶಿವನು ॥
ಮುಕ್ಕಣ್ಣ ಮೊರೆಯೊ ಈಶ್ವರನೆ ಪೊರೆಯೊ ಎಂದು
ದಿಕ್ಕಾರು ಮುಂದಿನ್ನು ಹೇಳೆನಗೆ ಎನ್ನ
ಅಕ್ಕರ ಪುರುಷನ ತೋರೆನಗೆ ಈಗ
ಗಕ್ಕನೆ ಕರೆತಂದು ತೋರೆನಗೆ ಬಾಳ
ಬಿಕ್ಕುತ ಕಾಯ ಸುಕ್ಕುತ ಕಣ್ಣೀರು ಕ್ಕುತ
ಅಕ್ಕಟಕ್ಕಟ ಆತನೆಲ್ಲಿ ಕಾಂಬೆನುಯೆಂದು
ಸೊಕ್ಕು ಜವ್ವನೆ ತಾನು ದುಃಖಿಸುತಿಹಳು ॥
ಪ್ರಾಣದೊಲ್ಲಭನ ಕಾಣದಲೆದ್ದು ಹುಡಿಮಣ್ಣು
ಜಾಣೆ ತನ್ಮೈಗೆ ಲೇಪಿಸುತಿರಲು ಸರ್ಪ
ವೇಣಿ ಮನ್ಮಥನ ಶಾಪಿಸುತಿರಲು ಮತ್ತೆ
ಮಾಣದೆ ವಿಧಿಗೆ ಕೋಪಿಸುತಿರಲು ಆಗ
ಜಾಣನು ಪಂಚಬಾಣನು ಮಹಾತ್ರಾ ಣನು
ಸಾಣಿಗಿಕ್ಕಿದ ಪೊಸ ಕಣೆಗಳಿಂದೆಸೆಯಲು
ರಾಣಿ ಮೈಮರೆದು ಮಂಚದೊಳೊರಗಿದಳು ॥
ದೂತಿಯರ್ಕಂಡು ತಮ್ಮೆದೆಯ ಘಟ್ಟಿಸಿಕೊಂಡು
ತಾವ್ತವಕದಿ ಬಂದು ಮುತ್ತಿದರು ಕೈಯೊ
ಳಾಂತು ತೆಕ್ಕಿಸಿ ಮ್ಯಾಲಕೆತ್ತಿದರು ಬಾಳ
ಸೀತದಗ್ಗಣಿ ತಲೆಗೊತ್ತಿದರು ನಮ್ಮ
ದಾತೆಯೆ ಏಳೆ ಮಾತೆಯೆ ಯಾತರ್ಭೀ ತಿಯೆ
ಜಾತಿ ನಾಯಕಿಯೆ ಕಾಣ್ದೆರೆದು ನಮ್ಮೊಡನೊಂದು
ಮಾತನಾಡು ಎಂದು ಬಳಲಿದರವರು ॥
ನಳಿನಲೋಚನೆ ಸಾಕಿ ಸಲಹಿದ ಪಕ್ಷಿಗಳು
ಒಳಪೊಕ್ಕು ಒಡತಿಯ ನೋಡಿದವು ಅಂಚೆ
ಗಿಳಿನವಿಲ್ಗಳು ದುಃಖ ಮಾಡಿದವು ಹರ್ಮ್ಯ
ದೊಳಗೆ ಓಡ್ಯಾಡುತ ಚೀರಿದವು ಯಾಕೆ
ಕೆಳದಿಯೆ ಏನ ತಿಳದಿಯೆ ಪ್ರಾಣ ಕಳೆ ದಿಯೆ
ಸೆಳಮಂಚದಿಂದೆದ್ದು ಪಾಲ್ಗಳ ಕುಡಿಸೆಂದು
ಗಿಳಿಗಳು ನವಿಲ್ವಿಂಡು ಬಳಲಿದನಾಗ ॥
ಪನ್ನೀರು ಎದೆಗ್ಹಚ್ಚಿ ಕನ್ನೇರು ಬೂದಿಯ
ಉನ್ನತ ಅಂಗಾಲಿಗೊರಸಿದರು ಮತ್ತೆ
ಸನ್ನುತ ತಂಗಾಳಿ ಬೀಸಿದರು ದೂತೆ
ವೆಣ್ಗಳು ಮೆಲ್ಲನೆಚ್ಚರಿಸಿದರು ಏನೆ
ರನ್ನೆಯೆ ಮುದ್ದು ಚೆನ್ನೆಯೆ ಸಂಪ ನ್ನೆಯೆ
ನಿನ್ನೊಳಗಿರುವಂಥ ದುಗುಡ ಪೇಳೆಂದು
ಚೆನ್ನಾಗಿ ಕೇಳಿದರು ಅಳಿಯರಾಗ ॥
ಚಿತ್ತದೊಲ್ಲಭ ಬರದಿರ್ದರೆನ್ನಯ ಪ್ರಾಣ
ವ್ಯರ್ಥವಾಗುವದೆಂದು ಪೇಳಿದಳು ಆಗ
ಇತ್ತ ಪದ್ಮಾವತಿ ಕೇಳಿದಳು ತಾನು
ಅತ್ಯಂತ ಕೋಪವ ತಾಳಿದಳು ಆಕಿ
ಒತ್ತಿಲಿ ಕುಂತು ಜತ್ತಿಲಿ ಬೇಗ ಅ ತ್ತಲಿ
ಮತ್ತೊಬ್ಬ ಪುರುಷನ ಕರೆದು ಪೊನ್ಗಳಕೊಂಡು
ಪುತ್ರಿಯ ಕೈವಾಸ ಇತ್ತಳಾ ವನಿತೆ ॥
ಸಟೆಚಿತ್ತ ತನ್ನೊಳು ಸಟೆನೋಟ ಅವನೊಳು
ಸಟೆ ಬಂದು ಉಪಚಾರ ಮಾಡುವಳು ಬಾಳ
ಸಟೆ ಮಾತನೊಂದೊಂದನಾಡುವಳು ಆಗ
ದಿಟದಿ ಪ್ರಿಯನ ದಾರಿ ನೋಡುವಳು ಅಂಥ
ವಿಟನೊಳು ಬಹುಸಂಕಟದೊಳು ಆ ಗುಮ್ಮಟ ದೊಳು
ಕುಟಿಲದಿಂದವನೊಡನಿರಲಿತ್ತ ಮಲುಹಣ
ಪಟುತರವಾದ ಚಿಂತೆಯೊಳ್ಬರುತಿರ್ದ ॥
ಆ ವ್ಯಾಳ್ಳೆದೊಳು ಮಲುಹಣನೆಂಬ ಪುರುಷನ
ಕಾವಪ್ಪ ಗೋಲಿಂಗ ಕೊಲ್ಲಲಾಗ ಪ್ರೀತಿ
ಗೈವ ದ್ವಾರದ ಮುಂದೆ ನಿಲ್ಲಲಾಗ ಚಲ್ವೆ
ಭಾವೆ ತಂದುದಕವ ಚೆಲ್ಲಲಾಗ ಮಹಾ
ದೇವನೆ ಏ ಸಂಜೀವನೆ ಎನ್ನ ಕಾ ಯ್ವನೆ
ಭಾವಜಹರನೆ ಹಾ ಹಾ ಎನಲಾಕ್ಷಣ
ಆ ವನಿತೆಯು ಕೇಳಿ ಹರುಷ ತಾಳಿದಳು ॥
ತರಳಾಕ್ಷಿ ಪುರುಷನ ಕರೆದೊಯ್ದು ಸುರತವ
ಬೆರಸಲು ಮರುಳಾಗದಿರು ಎಂದನು ಹೊನ್ನ
ಸುರುವಿದ ಹರದನೊಳು ಎಂದನು ಚಮ
ತ್ಕರದಿಂದ ಪೊರೆವ ಶ್ರೀಗುರು ಎಂದನು ಮಬ್ಬು
ಹರದೀತು ಕಾಮ ಸರದೀತು ಜ್ಞಾನ ಸುರ ದೀತು
ತರಳೆ ಆ ನರನು ಇರ್ವರು ವಿಜಯರಸನೊ
ಪ್ಪಿರುವ ಮಂದಿರಕೆ ಅಕ್ಕರದಿಂದ ಬರಲು ॥
ಮಕರಾಂಕ ರೂಪ ಸತ್ಕುಲದೀಪ ಕೇಳ್ ಪಂಚ
ಮುಖನ ಶ್ರೀಚರಣವ ನೋಡೆಂದಳು ಸರ್ವ
ಮುಕ್ತಿದಾಯಕನ ಕೊಂಡಾಡೆಂದಳು ಬೇಗ
ನಕ್ಕರ ವರವ ನೀ ಬೇಡೆಂದಳು ಕೇಳು
ಸಖಿಯಳೆ ಚಂದ್ರಮುಖಿಯಳೆ ಮೀನಾಂಬಕಿ ಯಳೆ
ಅಕಳಂಕನಭವನ ಸ್ತುತಿಯ ಮಾಳ್ಪರೆ ನಿನ್ನ
ಮುಖವ ನೋಡುತ ನಾನು ಭಜಿಸುವೆನೆಂದ ॥
ಚೆಂದುಳ್ಳ ಚೆಲುವ ಹೀಗೆಂದ ಮಾತಿಗೆ ಆ
ಚಂದನಗಂಧಿ ಆನಂದದಲಿ ಬಂದು
ಕಂದುಕಂಧರನಿಗೆ ನಮಿಸುತಲಿ ಬೆನ್ನ
ಹಿಂದೆ ಕುಳಿತಳು ಮೈಯ ಹೊಂದುತಲಿ ಜ್ಞಾನ
ಸಂಧಿಸಿ ಚಿತ್ತ ಬಂಧಿಸಿ ದೃಷ್ಟಿ ಹೊಂದಿಸಿ ಚಂದ
ದಿಂದಾತನು ಕಾಂಚ ಕಚ ಪ್ರಚೆಯೆಂ
ದೆಂಬ ಛತ್ತೀಸ ಕಂದದಿ ನುತಿಸುತಿರಲು ॥
ಸತಿಯಳ ಮೊಗವ ನೋಡುತ ಮಲುಹಣ ಮಾಳ್ಪ
ಸ್ತುತಿಯನಾಲಿಸಿದ ರಕ್ಕಸಶಿಕ್ಷನು ತಾನು
ಅತಿ ಬೇಗ ಒಲಿದಾನು ಅಸಮಾಕ್ಷನು ಬಾಳ
ಹಿತದಿ ಮೆಚ್ಚಿದನಾಗ ವಿಷಭಕ್ಷನು ದೇವ
ತತಿಯರು ಮಹಾವ್ರತಿಯರು ಸಪ್ತಜತಿ ಯರು
ಚತುರಾಸ್ಯ ಹರಿ ಇಂದ್ರ ವೀರೇಶ ಗುಹ ಶ್ರೀಪಾ
ರ್ವತಿಗೂಡಿ ಬಂದು ಮೈದೋರಿದ ಶಿವನು ॥
ಜೋಡಿ ನಿಂದವರಿಗಿ ರೂಢಿಗೀಶ್ವರ ಮೆಚ್ಚಿ
ಗಾಡದಿಂದೊರವ ನೀವು ಬೇಡೆಂದನು ಸ್ತೋತ್ರ
ಮಾಡುತ ಪ್ರಮಥರೊಳ್ ಕೂಡೆಂದನು ಇಂಥ
ರೂಢಿಯ ಅತಿಯಸೆ ಬೇಡೆಂದನು ಚಂದ್ರ
ಚೂಡನೆ ನಂದಿರೂಢನೆ ಮಹಾಪ್ರಭು ತಾನೆ
ಮೂಢ ಮಾನ್ವನು ನಾನು ಆಡುವೆ ನಿಮಗೊಂದ
ಗೂಢಕಾಲನ ಕೈಯೊಳ್ಸೂಡಿದ ದೇವ ॥
ಮಾರಾರಿ ಕೇಳಯ್ಯ ಶತ ಸಂವತ್ಸರ ನನ್ನ
ನಾರಿಗೂಡಿರುವ ಸನ್ಮತದಿಂದಲಿ ಇಂಥ
ಧಾರುಣಿಯೊಳು ನಿತ್ಯವ್ರತದಿಂದಲಿ ಪ್ರೀತಿ
ತೀರುವನ್ನೆಗ ನಮ್ಮ ಹಿತದಿಂದಲಿ ಈಗ
ಸೈರಿಸು ಮುಂದೆ ತೋರಿಸು ಸ್ವರ್ಗ ಸೇ ರಿಸು
ಈ ರೀತಿ ನುಡಿದ ಮಾತನು ಕೇಳಿ ಶಿವನು ಕೈ
ವಾರಿಸಿ ಬೇಗನೆ ಪ್ರಮಥರ ಕಳುಹಿದ ॥
ಭವದೂರ ವಿಜಯೇಶ್ವರನೊಳೊಡವೆರೆದು ಇ
ನ್ನಿವರ ಭಾವವ ನಿತ್ಯ ನೋಡುವನು ಒಂದು
ದಿವಸ ಮೀರದೆ ಪ್ರೀತಿ ಮಾಡುವನು ನಿತ್ಯ
ಭವರಹಿತನು ಅವರಂತೆ ಇರುತಿಹನು ತಮ್ಮ
ಭವನದೊಳ್ ಹೋಮಹವನದೊಳ್ ನಿತ್ಯಕವನ ದೊಳ್
ಭವನದೋಳ್ತನಗಾರು ಸಮನಿಲ್ಲವೆನಿಸಿ ಆ
ಯುವತಿಯೋಳ್ಮಲುಹಣ ಸುಖ ಬಾಳು ತಿರ್ದ ॥
ಧರಣಿಯೋಳ್ಮಲುಹಣ ಎಂದೆನಿಸುವ ಶಿವ
ಶರಣರ ಚರಿತೆಯಾನಂದದಲಿ ಈಗ
ವಿರಚಿಸಿದೆನು ನಿರ್ಭಯದಿಂದಲಿ ಪೇಳ್ದೆ
ತುರುವಿ ಗಿರೀಶನ ದಯದಿಂದಲಿ ಕಾಯೊ
ಪರಮೇಶ ಪಾಹಿ ಗಿರಿಜೇಶ ಮುಕ್ತಿ ವರ ಧೀಶ
ಉರಗೇಶ ಕರಭೂಷ ಪರಮ ಭಕ್ತರ ಪೋಷ
ತುರುವಿ ಗಿರೀಶನೆ ಪೊರೆಯೊ ನೀ ಮುದದಿ ॥
ಕಂದ
ಗುರು ಲಘು ಗಣ ನೇಮಂಗಳ್
ವರ ಪ್ರಾಸ ಲಕ್ಷಣ ಅಡಿಗಳ್ತಪ್ಪಾಗಿರಲ್
ನೆರೆ ಜಾಣರು ತಿದ್ದೆ ನಿಮಗೆ
ಸುರಲೋಕದ ಪದವಿಯನೀವ ತುರುವಿ ಗಿರೀಶಂ ॥
ಸಂಪೂರ್ಣ
Leave A Comment