11. ಗಯಾನ ಕಥೆ

ಗಣಪತಿಯ ಸ್ತೋತ್ರ

ಏರ :    ಅಷ್ಟಗಂಧ ಪರಿಮಳ ಅಷ್ಟು ಪುಷ್ಪಗಳೆಲ್ಲ
ನಿಷ್ಠೆಯಿಂದ ಗಣಪ ಧರಿಸುವೆನೋ                                                            ॥

ಕರಿಯ ಮುಖ ನಿನ್ನ ಸ್ಮರಿಸುವೆ ಗೌರಿ
ವರ ಕುಮಾರ ಕರಿಮುಖಾ

ಮುರಹರ ಪುರಾಣ ಆರು ಶಾಸ್ತ್ರಕ
ಮಾರಹರ ಪರಮೇಶ್ವರನ ಬಾಲಕಾ                                                         ॥

ಚಾರುಮೂರ್ತಿ ನಿನ್ನ ಚರಣಕ್ಕೆ ಎರಗುವೆ
ವರ ಕೊಡೋ ನಿನ್ನ ಸೇವಕ
ಚಂದ್ರsನ ವೈರಿ ವಂದಿರುವಾಹನ
ಬಂದ್ರ ನನಗ ಬಹು ಸುಖಾ
ಸರ್ವ ಏಕಾದ್ರ್ಯ ವಿದ್ಯಾದಾಯಕ
ಸುರಾಮರಿಂದ್ರ ಸಹಿತ ಜನಲೋಕಾ
ನಿಂದ್ರದೆ ವಂದಿಸುವೆ ಪಕ್ಕಾ
ಬಂದು ಒದಗೋ ಸುಂದ್ರವಾದ ಗಣನಾಯಕ  ಅಷ್ಟ…….                       ॥

ನಿಷ್ಠಿಯಿಂದ ಗಣಪ ಧರಿಸಿ ನಾ ಪೊಗಳುವೆನೂ
ಕೃಷ್ಣಾರ್ಜುನರ ಕಾಳಗವೂ
ಲೋಕನಾಥನು ಆದ ಪರೀಕ್ಷಿತ ರಾಜಾನು
ಬೇಕೆಂದು ಸುಖಮುನಿಗೆ ಎರಗಿದನು                                                        ॥

ತಂದೆ ಸುಖಮುನಿಯಿನ್ನ ಮುಂದಿನ ಕತಿಯು ನನಗ
ಚಂದದಿಂದ ಹೇಳಿರಂದಾನೋ
ನಮಸ್ಕರಿಸಿ ದುಂದಬಿ ಚರಣ ಪಿಡಿದ ಕೇಳ್ಯಾನೋ ॥
ಮುತ್ಯಾ ನಮ್ಮ ಪಾರ್ಥವೀರಗ ಮತ್ತು ಕೃಷ್ಣನಿಗೆ ಕಲಹ
ಯಾತರ ಸಲುವಾಗಿ ಬಂತು ಹೇಳಿರಿನ್ನು
ಸಾರಥಿ ಕೃಷ್ಣನಿಗೆ ಹಿತವಾದಂತ ಬೀಗ ಪಾರ್ಥನು ॥
ಅವರಿವರೊಳು ಕದನವ್ಯಾಕೋ ಸಂವರಿಸಿ ಹೇಳಯ್ಯ
ಮುನಿ ಅವನಿಪತಿ ಹೀಗೆಂದನೋ
ಪ್ರೀತಿ ಇಟ್ಟ ಶಿವ ಬಂಕನಾಥನಿಗೆ ನಮಸ್ಕರಿಸ್ಯಾನೋ
ಬೇಕೆಂದು ಸುಖಮುನಿಗೆ ಎರಗಿದನೋ ಹರಿ ಪಾರ್ಥಗ
ವಾದ್ಯಾಕ ಬಂತಯ್ಯ ॥
ಮತಿವಂತ ಪರೀಕ್ಷತ ಕಥನ ಹೇಳುವೆ ನಾನು
ಕ್ಷಿತಿಪತಿಯೆ ಕುಂತ ಕೇಳಿನ್ನ                                                                        ॥

ಪುತ್ರಾ ಜನ್ಮ ಜಯ ನಿಮ್ಮ ಮುತ್ತ್ಯಾನಾದ ಪಾರ್ಥವೀರ
ಸತ್ಯದಿಂದ ಇದ್ದೋ ಮಹಾ ಪ್ರಭಲಾ
ಮುಂದಿನ ಕಥಿ ಚಿತ್ತಿಟ್ಟ ನೀ ಕೇಳೋ ಗುಣಶೀಲಾ ॥

1

ಶ್ರೀ ಸಂಪತ ದುರ್ಯೋಧನಗ ದೊರಿಯ ಧರ್ಮರಾಜಾ ಸೋತ
ಅರಣ್ಯವಶವಾಗಿ ಕೋಲಾಹಲ
ಕುಟುಂಬ ಸಹಿತ ಶ್ರೀಹರಿ ನೆನೆವುತ ಮ್ಯಾಲ ಮ್ಯಾಲ
ಕಾಮೇಕ ವನದೊಳು ಇದ್ರೂ ಶ್ಯಾಮಲವರ್ಣ ಬಲದಿಂದ
ಭೂಮಿಪಾಲಕ ಪಾಂಡವರೆಲ್ಲಾ
ನಿಜ ಮನಸಿನಿಂದ ರಾಮ ರಾಮ ಸ್ಮರಿಸುತ ಸಲ್ಲಾ ॥

2

ಕ್ಷತಿಪತಿಯೆ ಕುರಿತ ಕೇಳಿನ್ನು ಜನ್ಮಜಯನೇ
ವತನದಾರ ಮಗನ ವಾರ್ತೆಯನು
ದ್ವಾರಕಿಯ ನಗರದಲ್ಲಿ ಮಹಾಧೀರ ಕೃಷ್ಣನು
ಮೀರಿ ಸೌಖ್ಯದಲ್ಲಿ ಇರುವವನು

ದ್ವಾರಕಿ ನಗರದಲ್ಲಿ ವಾರಿಜಾಂಬರೆಯರು ಹದಿನಾರ ಸಾವಿರಾ ಮಂದಿ
ಗೊಲ್ಲ ಸ್ತೀಯರಲ್ಲಿ
ಕ್ಷೀರಸಾಗರ ವಾಸ್ಯಾ ಹರಿ ಏರಿದನಲೋ
ಮಾರನಾಟದಿಂದ ಸುಖ ಆಗ ಸುರಿಸುತಲಿ ॥

3

ಒಂದ ದಿವಸ ಬಲರಾಮನ ಮುಂದ ಹೇಳತಾನೋ
ಆನಂದದಿಂದ ಹೋಗಿಯವನು ತೀವ್ರದಲಿ
ಅಂದ ಅರ್ಗ್ಯೆ ಬಿಡುವನು ನಡಿ ತೀವ್ರದಲಿ
ಅಣ್ಣ ಬಲರಾಮನೆ ಪುಣ್ಯ ಕಾಳ ವಸಿದಿತು
ಸಣ್ಣಾಗಿ ಅದ್ಯ ಆಗುವಂತೆ
ಕಮಲಮಿತ್ರ ಅನುಕ್ರಮದಿಂದ ಅರ್ಗ್ಯೆವಾ
ಪ್ರೇಮದಿಂದ ಬಿಡುವೆನು ನಡಿರಿ ಮತ್ತೆ ॥

4

ಗಮನದಿ ಬಲರಾಮ ಕೃಷ್ನಾಲಯವನು ತೀವ್ರದಲಿ
ಹೋಗಿ ಆಗಗಮನ ಮಾಡಿದಾರೋ ಅರ್ಗ್ಯೆ ಬಿಡುವತಲಿ
ಎಂಜಲವೆಂದು ಕ್ರೋಧವನು ಆಗ ತಾಳುತಲಿ
ಮೀರಿ ಸೌಖ್ಯದಲಿ ಇರುವುತಲಿ
ಈ ಕಥಿಯ ಧಾರುಣಿಪತಿ ಕೇಳೋ ಹರುಷದಲಿ

ಹರಿಯು ಬಲರಾಮ ಆಗ ಹರುಷದಲಿ ಅರ್ಗ್ಯೆವನು
ಸೂರ್ಯಾಗ ಸುಖದಲಿ ಬಿಡುವುತಲಿ                                                         ॥

5

ಉತ್ತಮ ತೇಜಿಯನೇರಿ ವತ್ತರ ಮಾಡಿ ಪುತ್ರನಾದ
ಗಯಾ ಅಂತರ ಮಾರ್ಗದಲಿ

ಏರಿ ಸತ್ತರ ಲೋಕಕೆ ಹೋಗು ತಿದ್ದೊ ಅವಸರದಲಿ
ಆ ಸಮಯದಲಿ ವಿಪರೀತ ಆದೀತಲ್ಲಿ ॥
ಗಂಧರ್ವನ ವಾಜಿ ಜೊಲ್ಲ ಬಂದ ಗಾಳಿಯಿಂದ
ಮುಕ್ಕುಂದ ಹಸ್ತದಲಿ ಬೀಳುತಲಿ
ಎಂಜಲೆಂದು ಕ್ರೋಧವನು ಆಗ ತಾಳುತಲಿ
ಸಿಟ್ಟಿನಿಂದ ಬಲರಾಮನ ಮುಂದ ಹೇಳಿದೋ ಗೋವಿಂದ
ಗೋಪಾಲ ಶ್ರೀಹರಿ
ಚಾಪ ಹಿಡದ ನಿಂತೋ ಕೋಪ ಏರಿ
ಒಡ್ಡೀನಿ ಎನ್ನ ಕರಕಮಲ ಬಿದ್ದೀತ ಯಾವ ಎಂಜಲ
ಅವನ ಕೊಲ್ಲೋದು ಎಂದು ಬಿಡುವದಿಲ್ಲ
ಶಪಥ ಮಾಡಿದೊ ಕೃಷ್ಣಗೋಪಾಲ
ಸೂರ್ಯಗ ಮುಕದಿ ಬಿಡುವುತಲಿ ವಾಜಿಯ
ಬುರುಗ ಬಿದ್ದಿತೋ ಹಸ್ತದಲಿ

6

ಬರಿ ಕೋಪ ಹರಿಗೇರಿ ಧರಿಯ ನಡಗುವಂತೆ
ಆರ್ಭಟ ಮಾಡಿ ಚೀರುತಲಿ
ದೇವರೊಳು ದಾನವರೊಳು ಯಾವನಾದರು ಆಗಲಿ
ವಸುದೇವನಾಣೆ ಎಂಟ ದಿವಸದಲಿ
ಅವನ ಜೀವ ಕೊಂದು ಬಿಡುವೆನೆಂದು ಪಂಥದಲಿ
ಉಳಿದರೊಂದು ವ್ಯಾಳೆದಲಿ
ಗಳಿಗಿ ತಡವಿಲ್ಲದ ಅಗ್ನಿಯೊಳಗ ಬೀಳುವೆ
ಪ್ರಾಣ ನಂದು ಖಾಲಿ
ಹೀಗೆಂದು ಕೃಷ್ಣನಳಿನಾಕ್ಷ ಮುಳುಗಿದ ಪಂಥದಲಿ
ಗುಢ ಗುಢನೆ ಸಿಟ್ಟಲಿ ಹಲ್ಲ ಕಡಿಯುತ ಯಾವರಿಗೆ
ತಡವಿಲ್ಲದಪ್ಪಣೆ ಕೊಟ್ಟರಲ್ಲೊ
ಬೆಂಕಿ ಬಾಣ ಬಿಡಲು ಸೈನ್ಯ ನಿಂತು ಕೋಪದಲ್ಲೆ ॥

ಆರ್ಭಟ ಮಾಡಿ ಚೀರುತಲಿ ಬಲರಾಮಗ ಗರ್ಜಿಸಿ
ಅಣ್ಣ ನಡಿಯೆಂದ ॥

7

ಲೋಕನಾಥನೆ ಕೇಳೋ ವಾಕ್ಯಮಾಡೋದರೊಳಗ
ಆಕಾಶವಾಣಿ ಆದೀತೋ                                                                             ॥

ಮಂದಮತಿ ಗಯನೆಂದು ಕೊಂದ ಹಾಕುವೆನೆಂದು
ಅಂದಾನೊ ಮುಕ್ಕುಂದ
ಬಂದೀತೊ ಕಾಲನಿಂದ
ಇನ್ನ ಉಳಿಯುವದಿಲ್ಲಯ್ಯ ಗಯಾನೇ ನಳಿನಾಕ್ಷ ಪಂಥದಲೀ
ಕಳಕಳಿಯನಾಗಿ ಮಾಡಿ
ನಿನಗ ತಿಳದಲ್ಲಿ ಹೋಗೋ ನೋಡಿ ॥
ಕೇಳೆಂಟ ದಿವಸದಲಿ ಉಳಿದರೊಂದು ವ್ಯಾಳೆದಲಿ
ಈ ಗಳಿಗಿ ತಡವಿಲ್ಲದಲಿ ಬೀಳುವನು ಅಗ್ನಿಯಲಿ
ನಿನಗ ಅಳಿವ ಬಂದಿತೋ ಗಯಾನೇ ಉಳಿವ ಯತ್ನ ಮಾಡೋ
ತಿಳಿಸೇನೊ ಪಾಪ ಅಂತ
ಜೀವ ಕಳಕೊಂಡಿ ನೋಡೋ ಮತ್ತ ॥
ಇಟ್ಟ ತಂದಿಯ ಆಣಿ ತೊಟ್ಟ ಕೋಪದ ವಾಣಿ
ಬಿಟ್ಟ ಜೀವ ದಯಸ
ತಟ್ಟಿತೋ ನಿನಗಾ
ಹೀಂಗ ಕೃಷ್ಣ ಮಾಡಿದ ಪಂಥ ಹೆಂಗ ಉಳದಿಯೋ ನೀನು
ಕಂಗೆಟ್ಟು ನಿಂತೆ ನಾನು
ಬದುಕು ಹಾಂಗ ನೋಡಿಕೊಳ್ಳು ನೀನು
ಆಕಾಶವಾಣಿ ಆದೀತೋ ಗಯಾ ಕೇಳಿ ಶೋಕದಲಿ
ಮುಳುಗಿ ಹೊರಳಿದನೋ ॥

8

ಪೃಥ್ವಿಪತಿ ಜನ್ಮ ಜಯನೇ ಚಿತ್ತಿಟ್ಟ ಕೇಳಯ್ಯ
ಸತ್ತೆನೆಂದು ಗಯನು ಅಳುವುದನೇ                                                          ॥

ಶಿವ ಶಿವ ಹೆಂತಾ ದುರ್ಗಟಾ ಬಂತೊ ವ್ಯಾಳೆ ಕೆಟ್ಟಾ
ಆದೆನೋ ಹೆಂಗ ಪಾರಾ ॥

ಶ್ರೀ ಕೃಷ್ಣ ಪ್ರತ್ಯಕ್ಷ ದೇವರಾ
ಬಿಡುದಿಲ್ಲ ಹೊಡುವತಾನ ಟಾರಾ
ಯಾರಿಗೆ ಹೇಳಲಯ್ಯ ಏನ ಸಂತಾಪ ಸಂಕಟ ಗೋರಾ
ಸಂಕಟಗೋರಾ
ತ್ರಿಭುವನದೊಳಗ ಉಳಸವರು ಕಾಣವಲ್ಲರ್ಯಾರು ॥
ಅಯ್ಯೋ ಹರಹರಾ
ಅಪರಾಧ ಇಲ್ಲ ನನ್ನ ಕಡೆ  ಕೃಷ್ಣ ಪಂಥ ಮಾಡೆ
ಹೊಡಿಯೋದು ಕರಾರ ಕರಾರ
ದೊಡ್ಡ ಮರ ಏರಿ ಬೀಳಲ್ಯಾ ಬೀಳಲ್ಯಾ
ಉರುವಂತ ಕಿಚ್ಚ ಧುಮಕಲ್ಯಾ ಧುಮಕಲ್ಯಾ
ಅಯ್ಯೋ ನನ್ನ ದೈವ ಏನ ಬೇಡಿ ಬಂದೆನಿಂತಹ ಸಾವಾ
ಶ್ರೀ ಕೃಷ್ಣ ಮಾಡಿದಾನ ಹ್ಯಾಂವಾ
ಹರಣ ನೀಗುವೆನೆಂದು ಹರಿಯಾಕ ಮಾಡಿದಾರ ಡಾವಾ
ಮಾಡಿದಾರ ಡಾವ ॥
ಸತ್ತನೆಂದು ಗಯಾನು ಅಳುವುವನು ಲೋಕದಲ್ಲಿ
ಮತ್ತ ನನಗ್ಯಾರ ಗತಿ ಇಲ್ಲ ॥

9

ಕಿಚ್ಚ ಹೊಟ್ಯಾಗ ಬಿದ್ದ ಹುಚ್ಚನಂಗ ನಿಂತಾನೋ
ಅಚ್ಯುತ ಏನ ಮಾಡಿದನು                                                                          ॥

ಕುದರಿ ಜೊಲ್ಲಾ ಕರದೊಳಗ ಬಿತ್ತ ಚದುರಕೃಷ್ಣ ಮಾಡಿದ ಪಂಥಾ
ಅದರಿಂದ ಹಾಕಿದೋ ಹಿಂತಾ ವಾಣಿ
ನಾ ಅರಿಯನಯ್ಯ ಒಮ್ಮಿಂದೊಮ್ಮೆ ಆದಿತ ಆಕಾಶವಾಣಿ
ಹಲ್ಲ ಕಡದ ಹರಿಯಾಗ ತಲ್ಲಣಿಸಿ ಮಾಡಿದೋ ಪಂಥಾ
ಕೊಲ್ಲದಿದ್ದರ ನಮ್ಮ ತಂದಿ ಆಣಿ
ನಾ ಅರಿಯೆನಯ್ಯ ಆದೀತಯ್ಯ ಆಕಾಶವಾಣಿ ॥
ಕೇಳಿನ್ನ ಕಳವಳಗೊಂಡು ಹೇಳತಾನ ಇಂದ್ರಾಗ ಹೋಗಿ
ತಾಳಲಾರೆನಯ್ಯ ಕೃಷ್ಣನಗಿನ್ನ ದುಃಖ ಮಾಡುತ ಹೊಡಮರಳಿ
ಶ್ರೀ ಬ್ರಹ್ಮನಂತೇಕ ಬನ್ನಿ ॥

ಅಚ್ಯುತ ಏನ ಮಾಡಿದನೋ ನನ್ನ ಮ್ಯಾಲೆ
ಇಂಚಲ ಬಂಕನಾಥ ಮುನಿದಾನೋ                                                        ॥

10

ಸೃಷ್ಟಿಕರ್ತನೆ ಇನ್ನ ಅಷ್ಟಾಂಗ ಸಹಿತಾಗಿ ಮುಟ್ಟಿ ಚರಣಕ್ಕೆ
ಎರಗುವೆನೂ                                                                                           ॥

ಶರಧಿಶಯನನ ಪುತ್ರ ಶ್ಯಾರದೀ ಅರಸನೆ
ಶ್ಯಾರದೀ ಅರಸನೇ
ವರದಿ ಕರುಣಾ ನಿಧಿ ನೀನೇ
ನರವರ ಪಿತನೆ ಕೇಳೋ ನೀನೇ
ಬಾಯ ತೆರದ ಕೈ ಮುಗದ ನಾ ಭಯದಿಂದ ಹೇಳುವೆನೋ
ನ್ಯಾಯ ಬಂದಿತೋ ನ್ಯಾಯ ಬಂದಿತೋ
ನ್ಯಾಯ ಬಂದಿತು ಕಾಯೊ ನನ್ನ ಸೃಷ್ಟಿಕರ್ತ ನೀನೇ
ಆದಿ ಬ್ರಹ್ಮನೆ ಕೇಳೋ ವೇದಮುಖದ ಒಡಿಯನೇ
ಪಾದ ಹಿಡಿಯುವೆನೋ ಅಧಿಕಾರಾ
ಸಾಧಿಸಿ ಬಂದೆನಾ ನಿನ್ನ ಹತ್ತರ ॥
ಮುಟ್ಟಿ ಚರಣಕ್ಕೆ ಎರಗುವೆನೋ ಈ ಮಾತಾ ಗಟ್ಯಾಗಿ
ವಚನ ಕೊಡೋ ನನಗ                                      ॥

11

ಅಂಜಿ ಸುರಪತಿ ಅಂದ ಕಂಜಿನಾಭನ ಹೊಡೆತಕ್ಕ ರುಂಜಿ
ದಾಟುವರು ಯಾರಿಲ್ಲ
ಮಾರವೈರಿಯಾ ಮಾರಿಯ ನೋಡಿ ಈಗ ಚ್ಯಾರಚರಣ ಹಿಡಿದೆನೋ
ಮೀರಿ ಗೋರ ದುಃಖದಿ ಗರಗರದೆನೊ
ಯಾರ ಮುಂದ ಹೋಗಿ ಹೇಳಲಿನ್ನು ತಾಯಿ ಪಾರ್ವತೆಮ್ಮ
ಕೊಟ್ಟಳೋ ನನಗ ಧೈರ್ಯವನ್ನು ॥
ಮುನಿಯ ಕೇಳೋ ಎನ್ನ ಜನನಿ ಪಾರ್ವತಿ ನಿನ್ನ
ಮುಂದ ಹೋಗಿ ಹೇಳಂತಾನು
ಕಳಿವ್ಯಾನೋ ನನ್ನ ಮುನಿ ನಾ ಸಾವತೇನೋ
ನಿನ್ನ ಕಡೆ ವಿನಂತಿ ಬೇಡಿಕೊಳ್ಳತೇನೋ
ಏನ ಹೇಳಿರಯ್ಯ ಇದಕ ಯುಕ್ತಿಯನ್ನು
ಕಾಣ ಕಾಣ ದಿನಮಾನ ಸನೇಕ ಬಂತ ಇನ್ನು ॥

ರುಂಜಿ ದಾಟುವರು ಯಾರಿಲ್ಲ ನನ ಮ್ಯಾಲ
ಕುಂಜರ ವೈರಿ ಮುನಿದಾನೋ ॥

12

ಆಗುದಿಲ್ಲ ನನ್ನಿಂದ ಹೋಗ ಅಂದಾನೋ ಬ್ರಹ್ಮ ಸಾಗಿದನು
ಆಗ ಕೈಲಾಸಕ                                                                                             ॥

ಆಗ ದಯ್ಯ ಗಯಾನೇ ಹೋಗ ಬೇಕಾದಲ್ಲೆ ನೀ
ಸಾಗಿ ನಡದ ಆಗ ಇಂದ್ರ ಒಳಿಯಕ್ಕ
ಬ್ಯಾಗದಿಂದ ಬಾಗಿಲ ಕದಾ ಮಾಡಿದಾನ ರಿಕ್ಕ
ಗಯಾ ಅಂತಾನೋ ಹೋಗಲೆಲ್ಲಿ ತಪ್ಪೇತಿ ದಿಕ್ಕ
ಅಷ್ಟದಿಕ್ಪಾಲಕರ ಹಂತೇಲಿ ಹೋಗಿ ಕೇಳತಾನ ಭಾಳ ಭಾಳ
ಮಾಡಿ ದುಃಖ
ಅಷ್ಟದಿಕ್ಪಾಲಕರೆಲ್ಲಾ ಬಿಟ್ಟ ಓಡಿ ಹೋದರೆಲ್ಲಾ ಕೃಷ್ಣ ಅಂದ ಕ್ಷಣಕ್ಕ
ಗಯಾ ನೋಡಿ ಕೆಟ್ಟೆನೆಂದು ಮಾಡತಾನ ಶೋಕ
ಅಕಟಕಟ ಏನ ಗತಿ ಬಂತೋ ನನ್ನ ಜೀವಕ್ಕ
ಯಾರು ಈ ಯಾಳೇಕ ಧೀರ ಮಾಡಿ ಬಂದೆ ಬ್ರಹ್ಮ ದೇವರ್ಹಂತೇಕ
ಸಾಗಿದನೋ ಆಗ ಕೈಲಾಸಕ ಕೇಳಲಿಲ್ಲಾ
ನಾಗಶಯನನು ಹೀಗಂದಾ ॥

13

ಇಷ್ಟ್ಯಾಕ ಸಂತಾಪ ಕೊಟ್ಟನೋ ಗಯಾ ನಿನಗ
ಅಷ್ಟ ಐಶ್ವರ್ಯ ಬೇಕೇನೋ                              ॥

ನೀ ಏನ ಬೇಡತಿ ಬೇಡ ನೀ ಏನ ಬೇಡತಿ ಬೇಡ
ಕೊಡತೇನ ಅಳಬ್ಯಾಡ ಗಯಾ ಕೇಳೋ ಬಾಲಕಾ
ಕೊಡವುದಕ ನಾನು ಮಾಲೀಕ
ನೀ ಬೇಡಿದಷ್ಟ ರೂಪಾಯಿ ರೊಕ್ಕ
ಶ್ರೀ ಸಂಪತ್ತ ಕೊಡುವೆನು ಅದಕ ಬಂದೆ ನನ ತನಕಾ
ಬಂದೆ ನನ ತನಕಾ
ಯಾಕ ಮಾರಿ ಮಾಡಿದಿ ಸಣ್ಣಾ ಅತ್ತಿತ್ತ ನಿನ್ನ ಕಣ್ಣಾ
ಬಳಲಿದಾವ ಸುತ ಕೇಳೊ ಸುತಾ
ಬಾಳ ಸೋಸಿ ಬಂದಿ ಬಡತನಾ ಅದಕ ನಾ ನಿನ್ನ ಮಾಡುವೆನೋ
ಹಿತ ಕೇಳೋ ಹಿತಾ
ಬಿಟ್ರ ಬಿಡೋ ನಿನ್ನ ಸಂಶಾ ಹೊತ್ತುಕೊಂಡ ದ್ರವ್ಯವಾ ದ್ರವ್ಯವಾ ॥
ಆನಿ ಕುದರಿ ದಂಡ ಮಾರ್ಬಲಾ ಕರಕೊಂಡ ಹಿಂಬಾಲಾ
ಆಗ ತಡವಿಲ್ಲ ಸಂತೋಷಾಗಿ ಹೋಗೋ ಇನ್ನ ಮ್ಯಾಲಾ
ನಿನ್ನ ಭಾವಕ ಮೆಚ್ಚಿದೇನೋ ಬಾಲಾ
ಹೀಂಗಂದ ಬ್ರಹ್ಮ ದೇವರಿಗೆ ಗಯಾ ಮಾತನಾಡುವಲ್ಲೋ
ಮಾತನಾಡವಲ್ಲೋ ॥
ಅಷ್ಟು ಐಶ್ವರ್ಯ ಬೇಕೇನೋ ನನ ಮುಂದ
ತಟ್ಟನೇ ಒಡೆದ ಹೇಳೋ ಕಂದಾ ॥

14

ನಾ ಒಂದ ಹೇಳಿದರ ನೀ ಒಂದ ಹೇಳುವಿರಿ
ಒಂದಕ್ಕ ಒಂದ ಸರಿಯಿಲ್ಲ                                 ॥

ತಾ ಬದುಕಿದರ ಒಂದ ಬದಕ ಶಾಸ್ತ್ರ ಅದಕ ಮಾಡಿ
ಇಟ್ಟಾರೋ ಸುಡ ನಿನ್ನ ನಿನ್ನ ಸಂಪತ್ತ ಸಡಗರ ॥
ಸತ್ತಮ್ಯಾಲ ಏನ ನೋಡುವರ
ಮುಪ್ಪಿನ ಹಣ್ಣ ಹಾಗಲ ಹಣ್ಣ ಆದವಗ ಹೆಣ್ಣ
ಮರಸೋದು ಭಾಳ ಗೋರಾ ಭಾಳ ಗೋರಾ ॥
ಬೆಳಿ ಒಳಗಿ ಹೋದ ಮ್ಯಾಲ ಮಳಿ ಆದರೇನು ತಿಳಿ
ಸುಳ್ಳ ಫಲವಿಲ್ಲಾ ಫಲವಿಲ್ಲಾ ॥
ಕುರುಡನ ಕೈಯಾಗ ಕನ್ನಡಿ ಕೊಟ್ಟಾಂಗ ನಿಮ್ಮ ನುಡಿ ಆಡತೇರಿ
ಅಲ್ಲಾ ಕೇಳದಲ್ಲಾ ॥
ನಮ ನಿಮಗ ಆಗತೇತಿ ಪೇರಾ  ಕೇಳೋ ಪೇರಾ
ಜೀವ ಕಾಯೋ ಬ್ರಹ್ಮ ದೇವರಾ  ದೇವರಾ
ನಾ ಕುದುರಿ ಏರಿ ಹೋಗುವಾಗ ಕೃಷ್ಣನ ಕೈಯಾಗ
ಬಿತ್ತ ಎಂಜಲಾ
ಶಪ್ತ ಮಾಡಿದ ಕೃಷ್ಣ ಗೋಪಾಲಾ
ಎಂಟ ದಿವಸ ದೊಳಗ ನನ್ನ ಪ್ರಾಣ ಹೋಗೋದು ಕರಾರಾ
ಹೋಗೋದು ಕರಾರಾ ॥
ಒಂದಕ್ಕ ಒಂದ ಸರಿಯಿಲ್ಲೇ ಬ್ರಹ್ಮದೇವರ
ತಂದಿಯನ್ನ ಪ್ರಾಣ ಉಳುವಯ್ಯ ॥

15

ಚತುರಮುಖ ತಾ ಕೇಳಿ ಅತಿ ಬ್ಯಾಗ ಅಂತಾನೋ
ಪಿತನಿಗೆ ನನಗ ಕದನವೋ                               ॥

ಆಡ್ಲಿಯಂತೆ ಕುದ್ದಕೊಂತ ಕೊಡ್ಲಿಯೊಳಗ ಕಟಿಗಿ ಹೊಕ್ಕ
ಸಡ್ಲ ಬಿದ್ದಂಗ ಆತಿ ಅದರ ರೀತಿ
ಮಾಡಂತಿಯೋ ತಂದಿ ಕೂಡ ಕದನ ಬೆಳೆಸೋ ರೀತಿ
ಹೋಗ ಗಯಾ ಆಗದಯ್ಯ ಕೇಳೋ ಮಂದಮತಿ
ಸುಳ್ಳ ಬಂದ ಇಲ್ಲೆ ಯಾಕ ನೀ ನಿಂತಿ
ಹೋಗೋ ಹೋಗೋ ಯಾರ ಕೈಯಿಂದ ಏನ ಆಗೋದೈತಿ
ಮಂಕ ಹತ್ತೇತೇನೋ ಪಂಕ ಹಾರಿ ತಿರಗತಿ
ಬಂಕನಾಥಗ ಹೋಗಿ ಕೇಳೋ ಈ ಕತಿ
ಜಲ್ದಿ ಮಾಡೋ ಶಂಕರ ಶಿವ ಶಿವ ಸ್ತುತಿ
ನನ್ನ ಮಾತ ಸಂಕವಿಲ್ಲದಂಗಾತಿ
ನುಗಿಸಿ ಕೊಟ್ಟ ಬ್ರಹ್ಮದೇವರಿಗೆ ಚಿಂತಿ
ಹವ್ವಹಾರಿ ಹೋದಾನೋ ಕೈಲಾಸಕ ಹತ್ತಿ ॥
ಪಿತನಿಗೆ ನನಗ ಕದನ ಬೆಳೆಸೋದಕಾಗಿ
ಮತಿಗೇಡಿ ಬಂದಿ ಎಲ್ಲಿಂದಾ ॥

16

ಕಷ್ಟ ಬಂದಿತಾ ಇಂದ್ರಾ ಎಷ್ಟ ಹೇಳಲಿ ನಿನಗ
ಕೊಟ್ಟ ಎನ್ನ ಪ್ರಾಣ ರಕ್ಷಿಸರಿ ॥
ಉಳಸಯ್ಯ ಪ್ರಾಣವು ಬಂದು ಗಳಸಯ್ಯ ಪುಣ್ಯವು ಮುಂದ
ಅಳತಾನ ಭೂಮಿಗೆ ಬಿದ್ದು ಗಯನು
ಇದರ ಹೊರ್ತ ನನಗ ಹಳಹಳಿ ಏನು ಇಲ್ಲ ಅಂತಾನು ॥
ಹಲ್ಲ ಕಡಿದ ಆಗ ಹರಿಯು ತಲ್ಲಣಿಸಿ ಮಾಡಿದ ಪಂಥ
ಕೊಲ್ಲದಿದ್ದರ ನಮ್ಮ ತಂದಿ ಆಣಿ
ಎಂಟ ದಿವಸ ಮೀರಿದರ ಹೋಗಿ ಬೀಳುವೆನು ಅಗ್ನಿ
ಕೇಳಿನ್ನ ಕಳವಳಗೊಂಡು ಹೇಳತಾನ ಇಂದ್ರಗ ಹೋಗಿ
ತಾಳಲಾರೆನಯ್ಯ ಶ್ರೀ ಕೃಷ್ಣನಗಿನ್ನ
ದುಃಖ ಮಾಡುತ ಹೊಡಮರಳಿ ಶ್ರೀ ಬ್ರಹ್ಮನ ಹಂತೇಕ ಬನ್ನಿ ॥
ಕೊಟ್ಟವನಾ ಪ್ರಾಣ ಉಳಸಯ್ಯ ಶ್ರೀ ಹರಿಯು
ಆಟ ದಿವಸದಲಿ ಹೊಡಿಯುವವನು

17

ಆದಿ ಶಕ್ತಿಯು ಶಿವನ ಪಾದ ಹಿಡದ ಅಂತಾಳೋ
ಸಾಧು ಸಂತರಿಗೆ ಆಗಿ ಪರಿಪಾಲಾ                  ॥

ಮಾಯಾದ ಪರಮೇಶ್ವರಾ ಬಾಯಾರಿ ನಿಂತಾನೊ ಗಯಾ
ತಾಯಿ ಪಾರ್ವತೆಮ್ಮಾ ಕೊಟ್ಟಳೋ ನನಗ ಧೈರ್ಯವನ್ನು
ನನ್ನ ಕಾಯಲಿಲ್ಲ ಜಗತ್ ಕರ್ತ ಪರಶಿವನು
ಕೇಳ ಸಾಯದ ವ್ಯಕ್ತಿ ಒಂದ ಹೇಳುವೆನು
ನಾರದಲ್ಲಿಗಿ ಹೋಗಿ ಸಾರಯ್ಯ ದುಃಖವ ಆತ
ತೋರಿ ಶ್ಯಾನೋ ಏನಾದರೂ ಯುಕ್ತಿಯನ್ನು
ಸುಳ್ಳ ಮಾರಿ ನೋಡಕೊಂತ ನಿಂತರೇನು ತ್ರಿಲೋಕ
ಸಂಚಾರಿ ತ್ರಿಭುವನದೊಳಗ ನಾರದರ ಯುಕ್ತಿವಾನ ॥
ನೀ ಹೋಗಿ ಬೀಳೋ ಅವನ ಬೆನ್ನಾ
ಹೋಗೋ ಲಗು ಋಷಿನ್ನ ಹುಡಕ್ಯಾಡಿ
ತಡ ಆಗತೈತಿ ನಡಿ ನಡಿ  ಭಾಳ ಹೇಳೋ ದುಃಖ ಮಾಡಿ ಮಾಡಿ
ದಾಕ್ಷಾಯಿಣಿ ಪಾದಕ ಬಿದ್ದ ಆ ಕ್ಷಣಾ ಕೈಲಾಸ ಇಳದ
ತಕ್ಷಕಭರಣ ಕೈ ಬಿಟ್ಟಾನೋ
ಆ ಪಕ್ಷಿ ವಾಹನಾ ನನ್ನ ಹೊಡಿಯುವನೋ
ಈ ಕ್ಷಣ ನಾರದ ನನಗ ದೊರದಾನೋ ॥
ಸಾಧು ಸಂತರಿಗೆ ಪರಿಪಾಲಿಸೋ ಶಂಕರನೇ
ಕಾದು ಸಲುವೈ ಕಡಿತನಕಾ ॥