15
ಏರ
ಹರಿಯ ಕೂಗ ಹೊಡದಾನೋ ಸ್ವರ್ಗ ಪಾತಾಳಲೋಕ
ಧರಿಯ ನಡಗೀತ ಗದಗುಟ್ಟಿ ॥
ಚಾಲ
ಬಲರಾಮನ ಆಜ್ಞೆಕೇಳಿ ಬಲು ಕೋಪ ತಾಳಿದ ಆಗ
ಬಲರಾಮ ಅಂತಾನ ಬಹು ಶೀಘ್ರದಲಿ
ಐವತ್ತಕೋಟಿ ಯಾದವರನ್ನು ಆಗ ನೆರವುತಲಿ
ರಾಜಾ ಆಗ ಏರಿ ಹೊಂಟಾನ ಆಗ ಧೀರ ಗರ್ಜನೆಯಲಿ
ನಡದೀತ ಕೃಷ್ಣನ ದಂಡಾ ಪೊಡವಿಯೊಳಗ ಹಿಡಿಸಲಾರದ
ಗುಡಗುಟ್ಟಿ ಸುರಲೋಕ ಎಲ್ಲಾ ನಡಗುತಲಿ
ಧೂಳ ಅಡಗಿತು ಗಗನಕ್ಕೆ ತಾರೆ ಮುಚ್ಚುತಲಿ
ಹೊಕ್ಕರು ಕಾಮಿಕವನಾ ಸೊಕ್ಕಿನ ಪಾಂಡವರನ್ನೆಲ್ಲಾ
ಧಿಕ್ಕು ಪಾಲು ಮಾಡಿ ಬಿಡುವೆವಾ
ಹರಿ ಚಕ್ರ ಹಿಡಿದ ಹೊಡಿವವಾ
ಮುಕ್ಕಟ ಬಲರಾಮ ಮುಗ್ಗಿದಾ
ತಕ್ಕೋ ತಕ್ಕೋ ಅಂದು ಮುಕ್ಕುಂದಾ ದಂಡ ತಯಾರಿಸಿ
ಬರುವದ ಕಂಡ ಪಾಂಡವರು ನಿಂತಾರೋ ಎದ್ದಾ
ದಂಡ ಬಂದದ್ದ ನೋಡಿ ಪುಂಡ ಪಾರ್ಥ ಭೀಮ
ಪ್ರಚಂಡಾಗಿ ನಕುಲ ಸಹದೇವರೆಲ್ಲಾ
ಬಾಣ ಹಿಡಕೊಂಡ ನಿಂತಾರೋ ಮಹಾಕೋಪದಲ್ಲಿ
ಇದನ ಕಂಡ ಕೃಷ್ಣ ಸುದರ್ಶನ ಚಕ್ರ ಬಿಡವುತಲಿ ॥
52
ಏರ
ಧರಿಯು ನಡಗಿತೋ ಗದಗುಟ್ಟಿ
ಪಾಂಡವರನ್ನು ಕಟ್ಟಿಹಿಡಕೊಂಡು ಬರುವೆವು ॥
ಏರ
ನರನು ಈ ಸಹಿತನಾಗಿ ಧುರಕ ಬರಬೇಕೆಂದು
ಕುರುಪತಿಗೆ ಪತ್ರ ಬರೆದಿದನೊ
ಪಾರ್ಥನ ಕುಮುಕಿಲಿಂದ ತುರ್ತಕರಿ ಕಳಿಸಿದರ
ಪತ್ರ ಬರದ ದುರ್ಯೋಧನಗ ಅವಸರಲಿ
ವೀರ ದ್ರೌಪದಾಗೆ ಬರದ್ರ ಹಾಗ ಅವರಸದಲಿ
ಬಂದಾರು ಕೌರವರು ಆಗ ಅಂದಾಗ ಕೃಷ್ಣಗ ನಾವು
ಇಂದ್ಯಾರ ಕೊಲಬೇಕ ಪಾರ್ಥನ ಕುಮುಕಿನಲಿ
ಪಾರ್ಥನ ಸಾರಥಿ ಇಲ್ಲದಂಗಾದ ಮುಂದ ರಣದಲ್ಲಿ
ಚಾಲ
ದ್ರೋಣಾಚ್ಯಾರಿ ಭೀಷ್ಮಾಚ್ಯಾರಿ ಅಶ್ವತ್ಥಾಮ ಭುಜಬಡಿದು
ಮೀಸಿ ತಿರವಿ ಹುರಿ ಮಾಡಿ
ಶ್ರೀ ಕೃಷ್ಣನ ಮ್ಯಾಲ ಶರಾ ತೂರಿ ಬಿಡತಾರ ಬಾಣ
ಗಡಾ ಗಡಾ ಓಡತಾರ ಜನಾ
ಧಡಾ ಧಡಾ ಬೀಳತಾವ ಹೆಣಾ
ಛಡಾ ಛಡಾ ಹಾರತಾವ ಗೋಣಾ
ಒಬ್ಬರಿಗೊಬ್ಬರು ಪಂಥಾ ಮಾಡಿ ಉಬ್ಬಿ ಉಬ್ಬಿ ಜಿಕ್ಕೊಂತ ವೀರ
ಬೊಬ್ಬಿ ಹೊಡದ ತೂರಿಕೋತ ಕೋಪದಲಿ
ಯುದ್ಧ ಆರ್ಭಟಗನಡದೀತ ಶರ ಕಾಳಿ ಅಬ್ಬರದಿಂದ ಕೆಡವ್ಯಾರ ರಣದಲ್ಲಿ ॥
ಕೆಡವಾರ ರಣದಲ್ಲಿ ॥
ಏರ
ಕುರುಪತಿಗೆ ಪತ್ರ ಬರೆದಿದರೋ ದುರ್ಯೋಧನ
ತ್ವರದಿಂದ ಬಂದ ಒದಗಿದನೋ ॥
53
ಏರ
ಮುಗಲೀಗೆ ಹಾರುವಂತೆ ಆಗ ಬಲರಾಮನಿದ್ದ
ನೇಗಿಲ ಹಿಡಕೊಂಡ ಅಡ್ರಾಸಿ
ಚಾಲ
ಬಂದ ಬಂದ ವೀರರನ್ನ ಕೊಂದ ಹಾಕುತ
ಮುಂದ ಮುಂದ ಕಡಕೊಂತ ನಡದ ತಲಿ
ಹೆಣಾ ಹಿಂದ ಹಿಂದ ಹಾರ್ಯಾವು ರಣದಲಿ
ಚಂಡ ಜಿಗದಾವೋ ಒಂದೊಂದ ಮ್ಯಾಲ ಮ್ಯಾಲ
ಭಲೇ ಬಲೇ ಬಲರಾಮ ಬಲವಂತ ನೀ ಕರೇ
ಹಲಧರನಾದರ ಹಾಕಿದೆ ಪಂಥಾ ಮಲ್ಲಿಗೆ ದುಂಡು ಮಲ್ಲಿಗೆ
ನೋಡಿ ಘಟದ್ಘಜ ಮಾಡಿದ ಮಂತ್ರವು
ಕೂಡಿದ ಆಡಿದ ಬಲರಾಮನ್ನ
ಹಿಂದಕ್ಕೋಡಿದ ನೋಡಿದ ಘಟದ್ಘಜ
ಯುದ್ಧ ಮಾಡಿದ ಆಡಿದ ಮಾತವನ್ನು
ಭಪ್ಪsರೆ ಬಲರಾಂ ತಪ್ಪೀಸಿ ಹೊಡಯುವೆನು
ಗುಪ್ಪತ ಬಂದೀತು ನೆಂಪ ಹಿಡಿದೇನೋ ಮಲ್ಲೀಗೆ ದುಂಡು ಮಲ್ಲೀಗೆ
ಕೆಟ್ಟ ಘಟಧ್ವಜ ನಿನ್ನ ನೆಟ್ಟಾಗಿ ಹೊಡೆಯುವೆ
ಬಿಟ್ಟ ಬಾಣವು ಸೊಟ್ಟ ಮಾಡಿದೆಲೋ
ನಿನ್ನ ಗಟ್ಟೀತನಾ ಎಷ್ಟ ನೋಡವೆನಲ್ಲೋ
ಸಿಟ್ಟ ಎಷ್ಟು ತನಕ ಇಡತಿ ಹೊಟ್ಟಿ ಮ್ಯಾಲ
ನಿನ್ನ ಕುಟ್ಟಿ ಹಿಟ್ಟ ಮಾಡುವೆ ಸಿಟ್ಟಾಗಿ ಬಾ ಎಂದು
ಬಿಟ್ಟೇನೊ ಬಾಣಾ
ನಟ್ಟಾವೋ ನಿನಗ ಮಲ್ಲಿಗೆ ದುಂಡುಮಲ್ಲಿಗೆ
ಏರ
ನೇಗಿಲ ಹಿಡಕೊಂಡ ಅಡ್ರಾಸಿ ಎದ್ದಾನೋ
ಹೋಗಿ ಭೀಮಸೈನಗ ದುಡಕಿದನೋ ॥
54
ಏರ
ಎದ್ದ ಭೀಮಸೈನನು ಗದಿಯ ಹೊಡದಾನೋ
ಗದ್ಧರಿಸಿತಾಗ ತ್ರಿಲೋಕವು
ಚಾರ
ಬಂದ ಬಲರಾಮ ಆಗ ಸುಂದ ಆಗಿಯೇನೋ
ನೊಂದಿತೇನೋ ನಿನ್ನ ದೇಹ
ಭೀಮ ಹಿಂಗಂತ ಹೊಡದ ಗದಿಯಾ
ಸಾವಿರಾರು ಮಂದಿ ಬಿತ್ತ ಪ್ರಳಯ
ಇಬ್ಬರ ಲಡಾಯಿ ಹುಯ್ಯ ಹುಯ್ಯ
ನಡದೀತ ಜಬ್ರದಸ್ತ ಧರ್ಮರಾಯಾ
ದ್ರೋಣಾಚಾರಿ ಭೀಷ್ಮ ತ್ರಾಣವುಳ್ಳವರು
ಬಾಣ ಬಿಡತಾರು ತನ್ತನನನಾ
ಜಿಗದ ಗೋಣ ಕೊಯ್ಯತಾರೋ ಚರ್ಚರರರಾ
ಅಶ್ವತ್ಥಾಮ ಜೈದ್ರಥನ ಫಣಾ
ಕೃಷ್ಣನ ಹೊಡಿಬೇಕಂತ ಮಾಡಿದರು ಪಣಾ
ಏರ
ಗದ್ಧರಿಸಿತಾಗ ತ್ರಿಲೋಕ ರಣದಲಿ
ಎದ್ದ ಬಿದ್ದವರು ತಿಳಿಲಿಲ್ಲಾ
55
ಏರ
ಅಚ್ಯುತ ಅಂತಾನು ಮುಚ್ಚುವೆ ಬಾಣದಲಿ
ಹೆಚ್ಚಾತಿ ಅವರ ಕಸ್ತಿಯದು
ಚಾಲ
ಕೃಷ್ಣ ತಿರವತಾನ ಗರಗರರಾ ಚಕ್ರ ತಿರಕೌರವ ಮ್ಯಾಲ ಬಾಣ ಸುರವಿದ
ದ್ರೋಣಾಚ್ಯಾರಿ ಜಿಗದಾನಾ ಟನ್ ಟನ್ ಟಣಣಣಾ
ಜಿಗದ ಕೃಷ್ಣನ ಮ್ಯಾಗ ಬಾಣ ಬಗೆವುದ ಬಾಣ
ಕಡಕಡದ ಕೆಡವುತ ಹೊಡದ ಹೊಡದ
ಈ ಪೊಡವಿಯೊಳಗ ಕಡ್ ಕಡಡಡಾ
ಕೃಷ್ಣ ದ್ರೋಣಾಚ್ಯಾರಿಗೆ ಬಡದ
ಏರ
ಹೆಚ್ಚಾತಿ ಇವರ ಕಸ್ತಿಯದು ಪಾಂಡವರನ್ನ
ತಾಶ್ಚ್ಯಾರ ಮಾಡಿ ನುಡದಾರೋ ॥
56
ಚಾಲ
ದ್ರೋಣಾಚ್ಯಾರಿ ಅಶ್ವತ್ಥಾಮ ಕರ್ಣ ವೀರ ಜಯದ್ರತಾ
ಬಾಣ ಬಡದ ಕಸವಿಸಿ
ವೀರ ದ್ರೌಪದಾಕಿ ಕಂಡ್ರ ಬಂದ್ರ ಕಳವಳಿಸಿ ಆಗ ದುರ್ಯೋಧನ ಅಂದ
ಬಾಣ ಹೆದಿ ಇಳಿಸಿ
ಕೃಷ್ಣ ಸತ್ತರ ಒಳ್ಳೆಯದಾಯಿತಾ ಅರ್ಜುನ ಸತ್ತರ
ಪೀಡಾ ಹೊಯ್ತ
ಇಬ್ರೂ ಸತ್ತರ ನನ್ನ ಜೀವಕ ಭಾಳ ಖುಸಿ
ನಮ್ಮ ಜೀವ ಉಳದರ ಸಾಕಂತ ಓಡ್ಯಾರ ಧಾವಿಸಿ
ಶ್ರೀ ಕೃಷ್ಣ ಹಲ್ಲ ಕರಕರರರರ ತಿಂದ ಗರಗರರರಾ ತಿರವತಾನ ಚಕ್ರ
ಬಲರಾಮ ಬಿಡತಾನ ಟೋಕರಾ
ಇದರಾದ್ರ ನಕುಲಸಹದೇವರ ಬಾಕಿ ಜನರದು ಹಾರಿತು ದೇಹಾ
ನಗತಾರ ನೋಡಿ ಕೌರವ ಶ್ರೀ ಕೃಷ್ಣ ತಿಳಿದನು ಭಾವಾ
ಏರ
ಮುತ್ಯಾ ಭೀಷ್ಮನು ಅಂದು ಎತ್ತ ಹೋಗಲಿ ನಾನು
ಹತ್ತಿದವರೆಲ್ಲಾ ನನ್ನ ಕರುಳು
ಕೋಟ್ಯಾವಧಿ ಬಾಣಗಳು ನಾಟಿಶ್ಯಾನ ಶ್ರೀ ಕೃಷ್ಣ
ಆಟ ಸಾಗಲಿಲ್ಲ ದುರ್ಯೋಧನ ಸೋಸಿ
ತಿಳದ ನೋಡಿ ಓಡಿದಾನ ಜಗಳ ತಪ್ಪಿಸಿ
ಮುರದ ಹೋದಿ ಪಾಂಡವರ ದಂಡ ಚಡಪಡಿಸಿ
ಹತ್ತಿದವರೆಲ್ಲ ನನ ಕರುಳು ಹಾಗೆಂದು
ಉತ್ತಮ ಭೀಷ್ಮ ನುಡಿದಾನೆ ॥
57
ಏರ
ಶರ್ತ ಕೃಷ್ಣಂದ ನೋಡಿ ವ್ಯರ್ಥ ಸಾಯೋದಕಿಂತ
ಪಾರ್ಥ ಬಂದಾನೋ ರಥವೇರಿ ॥
ಚಾಲ
ಆಗ ಧನಂಜಯ ನೋಡಿ ವಿಜಯರಥವನ್ನು ಹೊಡಿ
ಭುಜ ಬಡದ ಮೀಸಿ ಹುರಿ ಮಾಡಿ
ಸಾವಿರ ಬಾಣ ನಿಜವಾಗಿ ಕೃಷ್ಣನ ಮ್ಯಾಲ ತೂರಿ
ಪುಂಡ ಕೃಷ್ಣನು ಅಂದ ಆಗ ಪಾಂಡವರು ನೀವು ಭಂಡರಯ್ಯ
ಲೋಕದೊಳು ಸರಿ
ಪಾಂಡವರು ನೀವು ಉಂಡ ಮನೆ ಗಳ ಎಣಿಸುವರು ಖರೆ ಖರೆ
ಬಿಡುಬಿಡು ಕೃಷ್ಣ ಹಿಂತ ಬಡಿವಾರದ ಮಾತು ಕರೆ
ತುಡಗ ಮಾಡಿದ್ದೆಲ್ಲೊ ಹಾಲ ಸ್ವಾರೀ
ಗೊಲತಿಯರೆಲ್ಲಾ ಕಡಗೋಲಿಂದ ಬಡದಾರ ಮೈಮುರಿ
ಏರ
ಪಾರ್ಥ ಬಂದಾನೋ ರಥವೇರಿ ಕೃಷ್ಣಗ
ಸರ್ಥ ನೋಡಿ ಬಾಣ ಎಸದಾನೋ ॥
58
ಏರ
ಬಡದಿತ ಅರ್ಜುನನ ಬಾಣ ಕಡಲ ಶಯನನು ಆಗ
ಪೊಡವಿ ಮ್ಯಾಲ ಬಿದ್ದ ಕಳವಳಿಸಿ
ಚಾಲ
ಬಿದ್ದ ಬೀಗನ ನೋಡಿದ ಅರ್ಜುನ ಅಯ್ಯ ಶ್ರೀ ಕೃಷ್ಣಾ
ನನ್ನ ಬಿಟ್ಟ ಮಡಿದ್ಯಾ
ವೈಕುಂಠ ಪುರಕ ನೀ ನಡದ್ಯಾ
ಬೀಗ ನನ್ನ ಮ್ಯಾಗ ಬಾಣ ಹಿಡದ್ಯಾ ನಿನ್ನ ಹ್ಯಾಂಗ ಮರೀಲಿ
ಅರಗಿಳಿ ಸುಭದ್ರ ಕಳವಿದ್ಯಾ
ಈ ಭೂಮಿ ಮ್ಯಾಲ ಬಾಳಲಾರೆ, ಬಾಳಲಾರೆ
ದುಃಖ ತಾಳಲಾರೆ ಕೋಪದಿಂದ ಮಡದ್ಯಾ
ಗಯಾನ ಸಲುವಾಗಿ ನನ್ನ ಅಗಲೀದ್ಯಾ
ನನ್ನ ಸಾರಥಿ ಇಲ್ಲದಾದ್ಯಾ
ಸುದ್ದಿ ಏನ ಹೇಳಲಿ ಗೋಪೆರಿಗೆ ಪ್ರಾಣ ಹೋಗಿ ಬಿದ್ಯಾ
ಕೃಷ್ಣನ ಮುಖಕ ಮುಖ ಇಟ್ಟಮ್ಯಾಲ ಅರ್ಜುನ ಗೋಳಿಟ್ಟ
ಮಾಡತಾನ ಶೋಕ ಕೇಳ ಶೋಕ
ಅಮೃತದ ಗಟ್ಟಿ ನೀ ಹೋದ್ಯಾ
ಇರೋದು ನಿನ್ನಿಂದ ನನ್ನ ಬೆಳಕಾ ನನ್ನ ಬೆಳಕಾ
ಎತ್ತ ಹೋದ್ಯೋ ನನ್ನ ಭಾವೋಜಿ ಭಾವೋಜಿ
ನಾವಿಬ್ಬರು ಆಗಿ ಇರುವೆನು ರಾಜಿ ಕೇಳ ರಾಜಿ
ಸುಭದ್ರಾಗೆ ಏನಂತ ಹೇಳಲಿ ಮಾರಿ ತೋರಲಿ ಎದ್ದ ಬಾ ಬಾರೋ
ಕೈಯಾಗ ಕೈಯ ತಾ ತಾರೋ
ಬಾಯಾಗ ಬಾಯಿ ಮುಖದೋರೋ
ನಿನ್ನಗಲಿ ಜೀವಿಸಲಾರೆ ದುರ್ಗಟ ಮಾಡುವ ದೂರ
ಮಾಡುವ ದೂರಾ ॥
ಏರ
ಪೊಡವಿ ಮ್ಯಾಲ ಬಿದ್ದ ಕಳವಳಿಸಿ ಇಂಚಲದ
ಒಡಿಯ ಬಂಕನಾಥನ ದಯದಿಂದ ॥
59
ಏರ
ಬಂದಾನೋ ಬಯಲಾಗಿ ಸಿಂಧು ಶಯನನು ಆಗ
ಸಂದ ನೋಡಿ ಚಕ್ರ ಹೋಡಿದಾನೋ ॥
ಚಾಲ
ಹೊಡದಾನಾಗ ಸುದರ್ಶನ ನಡಗೀತಲ್ಲ ತ್ರಿಭುವನ
ಬಡದೀತ ಹೋಗಿ ಅರ್ಜುನಗ ಚಕ್ರ
ಕಳವಳಗೊಂಡು ಪೊಡವಿಮ್ಯಾಲ ಬಿದ್ದಾನಾಗಾ ನರಾ
ಬಿದ್ದ ಬೀಗನ ನೋಡಿ ಆಗ ಎದ್ದ ಬಂದೊ ಶ್ರೀ ಕೃಷ್ಣ
ಮುದ್ದಿ ಬಂಗಾರದಂಥ ಪಾರ್ಥವೀರಾ
ಮ್ಯಾಲ ಬಿದ್ದ ಹೊರಳಾಡ್ಯಾನೋ ಶ್ರೀ ಕೃಷ್ಣ ದೇವರಾ
ಎನ್ನ ಸಂಜೀವಾನೆ ಎನ್ನ ಪ್ರಾಣದ ಅರಗಿಳಿ ಅಗಲಿ
ಅಳಿಯುವರೇನಾ ಯುದ್ಧದಲಿ ಶೂರಾ
ನಿನ್ನ ಬಿಟ್ಟು ಅರಗಳಿಗೆ ಇರಲಾರೆನು ಬಾರೋ ಧೀರಾ
ಕುಂತಿ ದೇವಿಗೆ ಸುದ್ಧಿ ಏನಂತ ಹೇಳಲಿ
ಮೈದುನ ಪ್ರಾಂತವಲಿ ನಿನ್ನ ಹೆಸರಾ
ಈಶ್ವರನ್ನ ಗೆದ್ದಾ ಪಾಶುಪತಾಸ್ತ್ರ ತಂದಂತಾ ವೀರಾ
ಏರ
ಸಂದ ನೋಡಿ ಬಾಣ ಹೊಡದಾನೋ ಇಂಚಲದ
ತಂದಿ ಬಂಕನಾಥನ ದಯದಿಂದ ॥
60
ಏರ
ತಂಗಿ ಸುಭದ್ರಿಗೆ ಹೆಂಗ ತೋರಲಿ ಮಾರಿ
ಬಂಗಾರದಂತಾ ಬೀಗನೆ ॥
ಚಾಲ
ಎದ್ದ ಪಾರ್ಥ ಮೂರ್ಚೆ ತಿಳಿದ ಅದ್ಭುತ ಗರ್ಜನೆ ಮಾಡಿದ
ಬಿದ್ದ ತಾರಕ್ಕಿಗಳ ಕೂರ್ಮ ನಡಗಿದವು
ಎದಿಯೊಡದ ಯಾದವರಂಜಿ ಆಗ ಬಲರಾಮನು
ಯುದ್ಧ ಸಮತೂಕ ನಡದೀತ ಇನ್ನ ಹೇಳಲೇನು
ಭಗ್ಗ ಭಗ್ಗ ಉರಿದಾಗ ಜ್ವಾಲಾ ತಗಿಬಗಿ ಆದೀತೆ ಜಾಗಾ
ಲಗುಬಗಿ ಇಬ್ಬರ ದರ್ಪಿಗೆ ಭೀಮನ ನಡಗಿ ದಿಗ್ಗಜಗಳಿಗೆ
ಪ್ರಳಯವನು
ಎಂಟ ದಿವಸ ಮೀರುವದೆಂದು ಪಂಟ ಶ್ರೀ ಕೃಷ್ಣಾ
ನೀಟ ಬಿಟ್ಟ ಸುದರ್ಶನ ಮೋಸದಿಂದಾ
ಗಯಾನ ಚಂಡ ಕತ್ತರಿಸಿ ಚಕ್ರ ಬಂದ
ಪುಂಡ ಪಾರ್ಥ ಹಿಂದಕ ಹೊರಳಿ ನೋಡಿದ
ಚಂಡ ಇಲ್ಲ ರುಂಡ ಒಂದ ಕಂಡಾ
ಬೆನ್ನ ಬಿದ್ದವನನ್ನ ಕಾಯಲಿಲ್ಲ ನಾನಾ
ಅಗ್ನಿಯೊಳಗ ಬಿದ್ದು ಕೊಡುವೆನು ಪ್ರಾಣವನ್ನ
ಪಂಥ ಮಾಡಿ ಅರ್ಜುನಾಗ ನಿಂತ ಅಗ್ನಿ ಹಾರಲಿಕ್ಕೆ
ಕಂತುಹರ ತಿಳಿದ ಅವನ ವಾರ್ತಿ
ವಾರ್ಥೇಶ ಅರ್ಜುನನ ಭಾವವನು ಕಂಡ
ನಂದಿವಾಹನ ಸಹಿತ ಬಂದಾ ಒದಗಿದ
ಏರ
ಬಂಗಾರದಂತಾ ಬೀಗನ ನಾನೀಗ ಕೊಂದ
ಮಂಗನಾಗಿ ನಿಂತೇನ ಮನದೊಳಗ
61
ಏರ
ದಿಟ್ಟ ಅರ್ಜುನ ನೀನ ಕೊಟ್ಟ ವಚನಕ ಗಟ್ಟಿ
ಸೃಷ್ಟಿಮ್ಯಾಲ ನಿನ್ನ ಸರಿ ಇಲ್ಲ ಯಾರೂ ॥
ಚಾಲ
ಏನ ಬೇಡತಿ ಬೇಡೋ ಅರ್ಜುನ
ಕಂಡೆ ನಿನ್ನ ಗುಣ ಬಹಳ ಹೆಚ್ಚಿನದ
ಭಕ್ತಿ ಶುದ್ಧ ಇರುವುದು ನಿನ್ನ ಭಾವಾ
ನಿನ್ನ ಸಮಾನ ಇಲ್ಲೊ ಯಾಂವ್ಯಾವಾ
ಹಿಡಿ ಬೇಡಿದ್ದ ಕೊಡತೇನ ಕಳಕೋಬ್ಯಾಡ ನಿನ್ನ ಜೀವಾ ಕೇಳು ನಿನ್ನ ಜೀವಾ
ನನಗೇನ ಬ್ಯಾಡೋ ಈಶ್ವರನೆ ಗಯಾನ ಪ್ರಾಣವನು ಪಡಿಯ ಅಂತಾನೋ
ಬೆನ್ನ ಬಿದ್ದ ಅಂಜಿ ಬಂದ ಗಯಾ ಆಯ್ತ ಅನ್ಯಾಯಾ
ಪ್ರಾಣ ಹೊಡಿಸೇನೋ ಹೊಡಿಸೇನೋ
ಪಾರ್ಥೇಶ ಅರ್ಜುನನ ಭಾವ ಕಂಡ ಗಯಾನ ಪ್ರಾಣ ಪಡೆದ
ಹಚ್ಚಿದಾನ ಚಂಡ ಕೇಳ ಚಂಡ
ಕೃಷ್ಣ ಅರ್ಜುನಗ ಆದಿತ ಹಿತಾ
ಸ್ವಾಮಿ ಬಂಕನಾಥ ಕೂಡಿದಾಗ ಆಗ
ಸೌಖ್ಯದಲಿ ಮುಂಚೆ ಇದ್ದಾಂಗ
ಪಾರ್ಥಗ ಸಾರ್ತಿ ಹಾಲು ಹಣ್ಣಿನಂಗ
ತೇಜ ಮುಂಚಿನಕಿಂತ ಹೆಚ್ಚಾತಿ ಕೃಷ್ಣ ಅರ್ಜುನಗ
ಕೃಷ್ಣ ಅರ್ಜುನಗ ॥
ಏರ
ಸೃಷ್ಟಿಮ್ಯಾಲ ನಿನ್ನ ಸರಿ ಇಲ್ಲೋ ಅವನ ಪ್ರಾಣಾ
ಕೊಟ್ಟನೇ ನೋಡು ಅರ್ಜುನನೆ
62
ಏರ
ಪಾರ್ಥ ಕೃಷ್ಣನ ಕಥಿಯ ಅರ್ಥಿಲಿಂದ ಮುಗಿಸಿದೆವು
ಮರತದೊಂದು ತಪ್ಪ ತಗಿಬ್ಯಾಡರಿ
ಚಾಲ
ಸರ್ವಜನರ ಪಾದದೊಳು ನಾನು ನೆಲಸಲಿ
ಇನ್ನ ಏನೂ ಅರಿಯೆನು
ತಿಳಿದಷ್ಟು ಮಾಡಿ ಕವಿತವನು
ಚೂಕ ಆದ್ರ ಕ್ಷಮಿಸಿರಿ ಇನ್ನೂ
ಹೋಲಿ ಪದಾ ಹೇಳಿದ ಕೆಂಚನಾಯ್ಕ ಮಾಡಿ ಕವಿತವನು ॥
ಸುತ್ತಾ ರಾಜ್ಯದೊಳಗ ಬಾಗೇವಾಡಿ ಬಸವೇಶನ ಪಡಿ
ದೇವರ ದಯದಿಂದಾ ದಯದಿಂದಾ
ಮಲ್ಲ ಬಸವಣ್ಣಿ ಹಾಡುವಲಿ ಸಿಸ್ತಾ, ಬಸಲಿಂಗ ಬಸವಂತ
ಆಧಾರ ಪ್ರಸಿದ್ಧಾ ಪ್ರಸಿದ್ಧಾ
ಪ್ರಾಸಯುಕ್ತಿ ಮುಕ್ತಿ ಮಾಣಿಕರಂಗಾ ಕೇಳೋರಂಗಾ ॥
ಶುದ್ಧ ಕಲಿಸುವ ಸಿದ್ಧಲಿಂಗಾ, ಕೇಳೋ ಲಿಂಗಾ
ನಮೋ ನಮೋ ದೈವಕ ನಮಸ್ಕಾರ ಸ್ವಾಮಿ ಬಸವೇಶ್ವರಾ ॥
ಕರುಣಾಸಾಗರ ಭಕ್ತರಿಗೆ ನಿಮ್ಮ ಪ್ರಿಯಕರಾ
ನಡಸಿಕೊಡು ಹಾಡೋದು ಸೌಖ್ಯ ಸಾಗರಾ
ಸ್ವಾಮಿ ಇಂಚಲ ಬಂಕನಾಥಗ ನೇಮಮಾಡುವೆ ನಮಸ್ಕಾರಾ ನಮಸ್ಕಾರ
ಏರ :
ಮರ್ತರೊಂದು ತಪ್ಪ ತಗಿಬ್ಯಾಡ್ರಿ ದೈವಕ್ಕ
ಅರ್ತಿಯಿಂದ ಬೇಡಿಕೊಳ್ಳುವೆನು ॥
* * *
Leave A Comment