35

ಮೂರು ಲೋಕದ ಗಂಡ ವೀರ ಅರ್ಜುನ ಕೇಳೋ
ಮೀರಿ ಬಂತೆನ್ನ ಉಳವಯ್ಯ ॥

ರಾಜಾ ಕೇಳೋ ಎನ್ನ ಮಾತಾ ಸಚ್ಸತ್ತರ ಲೋಕಕ್ಕೆ
ಮೋಜದಿಂದ ಹೋಗತಿದ್ದೆ ನಾನಾ
ಕೃಷ್ಣನ ಕೈಯಾಗ ವಾಜಿ ಜೊಲ್ಲ ಬಿತ್ತರಿ ತಿಳಿಯಿನ್ನ ॥
ಜೊಲ್ಲಚೆಲ್ಲಿದವನ ನಾನು ನಿಲ್ಲದೆ ಕೊಲ್ಲುವೆನೆಂದು
ಬಲ್ಲಂಗ ಮಾಡಿದೋ ಶಪ್ತವನ್ನು
ಅವನ ಶಪ್ತಕ್ಕ ತಲ್ಲಣಿಸುವೆನಯ್ಯ ಪಾರ್ಥಾ ॥

ಉಳಸಯ್ಯ ಪ್ರಾಣವು ನಂದು ಗಳಸಯ್ಯ ಪುಣ್ಯವು ಮುಂದ
ಅಳತಾನ ಭೂಮಿಗೆ ಗಯಾನು ಬಿದ್ದ
ಇದರ ಹೊರ್ತ ಹಳದಳ ಏನೂ ಇಲ್ಲ ಅಂತಾನೋ ॥
ಮಾರಿ ಬಂತೆನ್ನ ಉಳವಯ್ಯ ನನ್ನ ಪ್ರಾಣಾ
ವಾರಿಜ್ಯಾಂಬಗು ನೀಗುವದು ॥

36

ಚಂದ್ರ ಸೂರ್ಯ ಗ್ರಹವು ಬಂದ ತೊಡರಿದಂತೆ
ಇಂದ್ರ ಬಿದ್ದು ಹೊರಳಿದನೋ                            ॥

ದೇಶ ಕೋಶ ಹೆಣ ತಾ ಸಹಿತವಾದೀತರಣ್ಯ
ಶ್ರೀ ಹರಿ ಶ್ರೀ ಹರಿಯೇ
ಮೋಸವಾದೀತ ನಮಗತಿಯ ಶ್ರೀಹರಿ ಶ್ರೀ ಹರಿಯೇ
ಧ್ಯಾನಿಸಿ ಅರ್ಜುನ ಏನ ಬಂದೀತಯ್ಯ ಶ್ರೀ ಹರಿ ಶ್ರೀ ಹರಿಯೇ
ಹಾನಿಯಾದೀತ್ಯೋ ಶಿವ ಶಿವಾ ಶ್ರೀ ಹರಿಯೆ ॥
ಬೀಗ ನಿಮ ಬಲ್ಲಿ ಯುದ್ಧ ಹ್ಯಾಂಗ ಮಾಡಲಿ ನಾನು ಶ್ರೀ ಹರಿ ಶ್ರೀ ಹರಿಯೇ
ನಾಗಶೈಯನನ ಸಾರಥಿಯ ಶ್ರೀ ಹರಿ ಶ್ರಿ ಹರಿಯೇ
ದುಷ್ಠ ಗಯಾನ ನೋಡಿನಾ ಕಟ್ಟಾಗಿ ಹೋಗಲಿಕೆ
ಕೆಟ್ಟ ಹೋದೀತ ನಮ ಬಾಳ್ವೆ ಶ್ರೀಹರಿ ಶ್ರೀಹರಿಯೇ
ಕೊಟ್ಟ ವಚನ ನಾನು ತಪ್ಪುವವನಲ್ಲ ನಾನು ಶ್ರೀ ಹರಿಯೇ ಶ್ರೀ ಹರಿಯೇ
ಭ್ರಷ್ಟತ್ವ ಬಂದಿತೋ ನಮ ಪಾಲಿಗೆ ಶ್ರೀ ಹರಿ ಶ್ರೀ ಹರಿಯೇ
ಇಂದ್ರಜಾ ಬಿದ್ದ ಹೊರಳಿದನೋ ಹೊಟ್ಯಾಗ
ನೊಂದಕೊಂಡ ದುಃಖ ಮಾಡಿದನೋ ॥

37

ತಮ್ಮನ ದುಃಖವ ಕೇಳಿ ಯಮನಂದನನಾಗ
ಗಮನ ಮಾಡಿದನೋ ನರನ್ಹಂತೆ                    ॥

ಚಿಟ್ಟನೇ ದುಃಖವ ಕೇಳಿ ಯಮನಂದನನಾಗ
ಶ್ರೇಷ್ಠ ಧರ್ಮರಾಜಾ ಕೇಳ್ಯಾನ ಬಂದಾ
ಅರ್ಜುನ ಹೇಳಿದ ದುಷ್ಟ ಗಯಾಗ ಭಾಷಿ ಕೊಟ್ಟೀನಂದಾ ॥
ಪಾಪಿ ಕೌರವನಿಂದ ರಾಜ್ಯ ಲೋಪವಾಗಿ ಅಡವಿ ಸೇರಿ
ಶ್ರೀಪತಿ ಕಾಯಲಿಲ್ಲ ಇದಿವಳಿದಾ ॥
ಹರಹರಾ ವಿಧಿಗೆ ಈ ಪರಿಯಾದೀತೋ ಶಿವಶಿವಾ ಎಂದಾ ॥
ಹುಲಿಗೆ ಅಂಜಿ ನಾವು ಹೋಗಿ ನೆಲದೊಳಗೆ ಸೇರಿದರಿನ್ನು
ಒಳಗಿನ ಸರ್ಪ ಕಡದಂಗಾಯಿತೋ ಬಂದಾ
ಹೆಂಗ ಮಾಡೋಣ ಜಲಜಾಕ್ಷನ ಕೂಡ ಯುದ್ಧಾ
ಗಮನ ಮಾಡಿದನೋ ನರನ್ಹಂತೆ ತಾ ಕೇಳಿ
ಶಮನ ಬಿಟ್ಟದೆಲ್ಲ ಸರಿಯೇನು

38

ಗಾಯದೊಳಗ ಕೋಲ ಹಾಕಿದಂಗಾಯಿತು
ಬಾಯ ಬಿಡತಾನ ವರಧರ್ಮ ॥
ತರಳೆ ದ್ರೌಪದಿ ಹಿಡಿದು ದುರುಳ ಸೀರಿ ಸೆಳೆವಾಗಾ
ಮುರಹರ ಬಂದ ಮಾನ ಕಾಯ್ದ
ಹೆಂತ ಘಾತವಾದಿತೋ ಶಿವಶಿವಾ ॥

ಕಷ್ಟ ಬಂದಾಕ್ಷಣಕ ಕೃಷ್ಣ ಉಳವಿಕೊಳ್ಳಾವಾ
ಕೊಟ್ಟೇವ ಭಾಷಿ ತಿಳಿಯದ ನಾವಾ
ಭ್ರಷ್ಟತ್ವ ಬಂದಿತ ಶಿವ ಶಿವಾ ॥
ಅಳವಳ ಕಳವಳಿಸಿ ಇಳಿಗೆ ಹೊರಳಿದೋ ಧರ್ಮ
ನಳಿನಾಕ್ಷ ನಮಗ ನಳಿನಾಕ್ಷ ನಮಗ
ಭಾಳ ಪ್ರೇಮ ಉಳಿಯಲಿಲ್ಲೋ ಉಪಕಾರ ಕಳದೀ ತಮ್ಮ ॥

ಬಾಯ ಬಿಡತಾನೋ ವರಧರ್ಮ ಕೃಷ್ಣಗ
ದೇಹ ತಮ್ಮದೆಂದು ಹೇಳಿದನು

39

ಆಗ ಭೀಮನು ಕೇಳಿ ಹೀಗೆ ಧರ್ಮಗ ಅಂದಾ
ಆಗದಾಗೋತಿ ಚಿಂತ್ಯಾಕಾ
ಮುಂದಕಿಟ್ಟ ಹೆಜ್ಜೆ ಕಿತ್ತಿ ಹಿಂದಕೆಂದು ಇಡುವರಲ್ಲ
ಕುಂದ ತಂದ ಕೊಟ್ಟೋ ವಚನಕ್ಕ
ಮೆಚ್ಚಿ ಕಿಲ್ಲೋ ಇಂದ್ರ ಚಂದ್ರ ಸೂರ್ಯ ಲೋಕಕ ॥
ಬರಲಿ ಇಂದ ಕೃಷ್ಣ ಯುದ್ಧಕ್ಕ
ಚಂಡ ರುಂಡ ಕಡದ ಹಾಕುವೆನು ತುರ್ತಕ್ಕ ॥
ಅಬ್ಬರ ಭೀಮನ ಮಾತ ಕೇಳಿ ಉಬ್ಬಿ ಅರ್ಜುನ ವೀರ
ಬೊಬ್ಬಿ ಹೊಡದ ನಡಗಿತೋ ತ್ರಿಲೋಕ
ಭೀಮ ಅರ್ಜುನ ಇಬ್ಬರ ಕೂಡಿ ಏರಿ ಬಂದಿತು ಉಕ್ಕ ॥

ಆಗೋದಾಗಲಿ ಅಣ್ಣ ಚಿಂತ್ಯಾಕ ಇನ್ನ ಮ್ಯಾಲ
ನಾಗಶಯನಗ ದರ್ಜೇನ

40

ದಿಟ್ಟ ಅರ್ಜುನನು ತೊಟ್ಟಾನೋ ಕೋಪವನು
ಶ್ರೇಷ್ಠ ಧರ್ಮನಿಗೆ ಹೇಳಿದನೋ

ಶೌರ್ಯ ಅಂಜಿಕೆ ಯಾರಿಗೆ ಅನ್ನುತ ಎರಗಿ ಅಣ್ಣನ ಚರಣಕ
ಕಾಲ ಭೈರವನಂದದಿ ಆರ್ಭಾಟಕ
ಮುರಾರಿ ಬರಲಿ ಯುದ್ಧಕ ಬಾರೋ ಗಂಧರ್ವಜಾ
ಇರ ಇರೋ ಹರುಷಾಗಿ
ಪೂರ ವಚನ ಕೊಟ್ಟ ಈ ಕ್ಷಣಕ ಬಿಡ ನಿನ್ನ ದುಃಖಾ
ಚಿಂತಿ ಬಿಟ್ಟ ಸಂತೋಷವಾಗಿರು
ಕಂತುಪಿತ ಬರಲ್ಯಾಕ ನಿನ್ನ ಭ್ರಾಂತಿ ಬಿಡೋ ಸುಮ್ಮಕ
ಅವನ ಪಂತ ಯಾರ ಕೇಳಬೇಕ
ಒಪ್ಪಿಸಿದ ವಚನ ತಪ್ಪಿಸುವರಲ್ಲಾ ಬಿಟ್ಟಾರ ಅಂತಾರ ಅದಕ
ಕುಡಿ ಉದಕ
ಅನ್ನ ಉದಕ ತಕ್ಕೋಳ್ದಂಗ ಇನ್ನೇನೈತಿ ಬಿಡ ಭಯಾ
ನೀನು ಹಗಲೆಲ್ಲಾ ಮುಗೀ ಬ್ಯಾಡೋ ಕೈಯ್ಯ
ನಾನು ನಿನ್ನ ಮ್ಯಾಲಿಲ್ಲೋ ನಿರ್ದಯಾ
ಹಿಂದ ಪುಣ್ಯ ಮಾಡಿ ಬಂದಿ ಇಂದ ನಿನಗ ಬಹು ಸುಖಾ
ತಾ ಬಂದ ವದಗಿತ ಪ್ರತ್ಯೇಕ

ಆ ಸಿಂಧು ಶೈನಂದು ಬಿಡೋ ಟಕ್ಕಾ ಬಾರೋ ಗಂಧರ್ವಜಾ
ಇರೋ ಇರೋ ಹರುಷಾಗಿ
ಪೂರ ವಚನ ಕೊಟ್ಟ ನೀಕ್ಷಣ ಬಿಡ ನಿನ್ನ ದುಃಖ ॥

41

ಶ್ರೇಷ್ಠ ಧರ್ಮನು ಹೇಳಿದನು ಅರ್ಜುನಗೆ
ಕೆಟ್ಟಿತೋ ಬಾಕಿ ಉಳಿಲಿಲ್ಲಾ ॥

ಏರ

               ಭೂನಾಥ ಕೇಳಯ್ಯ ನಾನಾ ದೇಶದೊಳಗ ಕಾಣಲಿಲ್ಲ
ಗಯಾನ ಹುಡಕಿದರ                                          ॥

ತ್ರಿಲೋಕ ಸಂಚಾರಿ ನಾರದ ದ್ವಾರಕಕ ಬಂದಾ ಋಷಿವರ ಯೋಗಿ
ಕೃಷ್ಣ ಕಾಣೂತ ಬಂದಾನ ಇದರೀಗಿ

ಶಿವ ಪೀಠ ಹಾಕಿ ಗದ್ದೀಗಿ ದೂಪದೀಪ ಗಂಧಾಕ್ಷತಿ ಧರಿಸಿ
ಮುನಿಚರ ರಾಯರಿಗಿ

ಚಾಲ

               ನಾರದರು ಅಂತಾರ ಕೃಷ್ಣಗ ಮಾರೀ ಮ್ಯಲ ರಂಗಾ
ಕಾಣುದಿಲ್ಲ ಶ್ರೀ ಹರಿ ಶ್ರೀ ಹರಿ
ನಿನ್ನ ಚಂದ್ರಣಂತ ಮುಖ ಭಾಳ ಕಳಾ ಕುಂದಿದಾವ ಭಾಳಾ
ಚಿನ್ನ ಎಲ್ಲಾ ಹಾರಿ ನಿನಗೇನ ಬಂತೋ ಸಂಕಟಾ
ಕರೆ ಹೇಳೋ ನನ ಮುಂದ ಸ್ವಚ್ಛಾ ॥

ಏರ

               ಶ್ರೀ ಲಕ್ಷ್ಮೀಕಾಂತ ನಿನ್ನ ಮುಖಾ
ಕಾಣುದಿಲ್ಲ ಠೀಕಾ ಠೀಕಾ ॥
ಚಿನ್ನ ಎಲ್ಲಾ ಹಾರಿ ಕೇಳ ಹಾರಿ ಇದು ಏನ ಭಾಳ ಆಶ್ಚರ್ಯ ಆಶ್ಚರ್ಯ
ಅಚ್ಯುತ ಕರೆ ಹೇಳಿರಿ ಹೇಳರಿ
ಹೇಳರಿ ದಂಡ ಮಾರ್ಬಲಾ ತಯಾರಾದ ಕಾರಣ
ಹೇಳ ದೊರಿಯೇ ಹೇಳ ದೊರಿಯೇ ॥
ಕಾಣಲಿಲ್ಲ ಗಯಾನ ಹುಡುಕಿದರು ಯಾದವರು
ದ್ವಾರಕಕ್ಕೆ ಮಾಡಿದರೋ ॥

47

ಯತಿ ಮುನಿಯೇ ಕೇಳಯ್ಯ ಕ್ಷಿತಿ ಮ್ಯಾಲ ಹುಡುಕಿದೆವು
ಶತಮೂರ್ಖ ಗಯನು ಸಿಗಲಿಲ್ಲಾ                      ॥

ಗಂಧರ್ವನ ವಾಜಿ ಜೊಲ್ಲಾ ಬಂದ ನನ್ನ ಕರದಲ್ಲಿ
ಅಂದ ಬಿದ್ದೀತಯ್ಯ ಮುನಿವರಾ
ಮಾಡೇನ ಪಂಥಾ ಎಂಟ ದಿವಸಾದೊಳಗ ಕೊಲ್ಲು ಕರಾರಾ ॥
ಉಳಿದರೊಂದು ವ್ಯಾಳೆದಲಿ ಬೀಳುವೆನು ಅಗ್ನಿಯೊಳಗ
ಭಾಳಾಕ್ಷನ ಸಾಕ್ಷಿಯಿಂದ ತ್ವರಾ
ಸಿಗವಲ್ಲೋ ಗಯಾ ಹೇಳ ಮುನಿ ಇದರ ವಿಚಾರಾ ॥
ಸುತ್ತರಗಿ ಈರೇಳು ಲೋಕ ಮತ್ತು ಪೇರಿ ತಿರಗುವರು
ಒತ್ತರಲೆ ಹೇಳಲಿ ವಾರ್ತಿ ಮಜಕೂರ
ಗಯಾ ಸಿಗದೀರ ನಾಳೆ ಅಗ್ನಿ ಬೀಳೋ ಕರಾರಾ ॥

43

ಶತಮೂರ್ಖ ಗಯನು ಸಿಗದಿದ್ರ ನನ್ನ ಪ್ರಾಣಾ
ಹತವಾಗೋದು ಬಂತೋ ಮುನಿನಾಥಾ        ॥

ಏರ

               ಗೋಪಾಲ ಕೇಳಯ್ಯ ಆಪತ್ತ ಒದಗಿತು
ಭೂಪಾಲಗಳು ಕೆಡಸಿದರು ॥
ಹೇಳಲಾರೆನಯ್ಯ ಕೃಷ್ಣ ಹೇಳದೆ ಉಳದರ ಮನಾ
ತಾಳಲಾರದ ಏನ ಮಾಡಲಿ ಈ ಹೊತ್ತಿಗಿ
ಕಂಡದ್ಹೇಳಲು ಜಗಳವು ಬಂತು ನಮ್ಮ ಪಾಲೀಗಿ
ಹೇಳದಿದ್ರ ಖೊಟ್ಟಿ ಅನ್ನತೀರಿ ಈ ಗಳಗಿ
ಅನ್ನುವರನ್ನಲಿ ಹೇಳುವೆನು ನಿನ್ನೆ ಗಯಾ ಪಾಂಡವರ ಬೆನ್ನ ಬಿದ್ದ
ಕಾಮಿಕವನಕ್ಕೆ ಹೋಗಿ
ವಚನಕೊಟ್ಟ ಅರ್ಜುನ ಹಾಕಿಕೊಂಡ ತನ್ನ ಬೆನ್ನೀಗಿ

ಚಾಲ

               ಹೀಂಗ ಹೇಳಿ ತೆರಳಿದಾನೋ ಮುನಿ
ಕೃಷ್ಣಾರ್ಜುನಗ ಹತ್ತಿದಂಗ ಆಯ್ತು ಅಗ್ನಿ
ಅಣ್ಣಾ ಬಲರಾಮ ಕೇಳೋ ಈ ವಾರ್ತಿ
ಹೆಂತಾ ಚಂಡಿ ನೋಡೋ ಪಾಂಡವರಾ
ಉಂಡಮನಿ ಗಳಾ ಎಣಿಸವರಾ
ಪುಂಡರಾಗಿದಾರೋ ಈಗವರಾ
ಭಂಡತನದಿ ಬೆಳದಾರವರಾ
ನೋಡಯ್ಯ ಬಲರಾಮ ನಮ್ಮ ಕೂಡ ಪಾಂಡವರ ವರ್ಮ
ಮಾಡಿಕೊಂಡ ತಮಗ ಈಗ ಬೇಕಾಗಿ
ಎಂಥಾ ಗೋಳ ತಂದಿ ಶಂಕರಾ ಶಿವ ಶಿವಯೋಗಿ
ಶಂಭೋ ಬಂಕೇಶಾ ಬಂತೇನೊ ನಿನ್ನ ಮನಸೀಗಿ ॥

ಏರ

               ಭೂಪಾಲಗಳು ಕೆಡಿಸಿದರು ಪಾಂಡವರು
ಈ ಪರಿ ಮಾಡಬೇಕೇನೋ ॥

44

ಏರ

               ಅಣ್ಣ ಬಲರಾಮ ಅಂದ ತಣ್ಣಗಾತೇನೋ ನಿನಗ
ಹಣ್ಣ ಹಾಲಿನಂಗ ಕೂಡಿದ್ರ ॥

ಚಾಲ

               ನುಡಿದ ಬಲರಾಮನು ತಂಗಿ ಕೊಡಬ್ಯಾಡಂತ ಹೇಳಿದರ
ಬಿಡೆ ಹಿರೆತನಾ ಮಾಡಿದ್ಯಲ್ಲೊ ಮಸ್ತಾ ॥
ಕೃಷ್ಣ ಸುಡಸುಡೋ ನಿನ್ನ ಬೀಗತನಾ ಬಹಳ ಹಿತಾ ॥
ಯತ್ನ ಮಾಡೋ ಮಾಡೋ ಕಾಲ ಒದಗಿತಾ ಪಾರ್ಥಾ
ಉಪಕಾರ ಮಾಡವರ ಮ್ಯಾಲ ಅಪಕಾರ ಮಾಡಾಕ ನಿಂತರೋ
ಅಪಕಾರ ಮಾಡೋದು ಅವರ ಮಸಲತ್ತಾ
ನಡಿ  ಗೋಪಾಲ ಹೋಗೋನ ಯುದ್ಧಕ ತುರತ
ಆಗ ಸುಭದ್ರಿ ಕರೆದ ಕೃಷ್ಣನು ತಂಗಿ ಮುಂದಕ ಬಾರವ್ವ ಹೇಳುವೆನು
ನೇಮ ಕೆಡಿಸಿದನು ನಿನ್ನ ಗಂಡನು
ಹೇಳಿ ಗಯಾನ ಹೊರಗ ಹಾಕಿ ಬಾ ನೀನು
ಅಣ್ಣ ಕೃಷ್ಣ ಕೇಳೋ ಹಿಂತಾ ಸಣ್ಣ ಮಾತಿಗಿ ಸಿಟ್ಟ ಯಾಕೋ
ಕುನ್ನಿ ಗಯಾನ ಹೊರಗ ಹಾಕಿ ಬರುವದು ಖಚಿತಾ
ನನ್ನ ವರ್ಣದ ದಾರಿ ಕಾಯೊ ಕಾಯೋ ಗೋಪಿನಾಥಾ
ಅಂತಾ ಕಣ್ಣೀರ ಸುರಿಸುತ ಸುಭದ್ರ ನಿಂತಾ ॥

ಏರ

               ಹಣ್ಣು ಹಾಲಿನಂಗ ಕೂಡಿದ್ರ ಪಾಂಡವರು
ಅನ್ಯ ಮಾಡಿದರು ನಮ್ಮ ಮ್ಯಾಲ ॥

45

ಏರ

               ಕಂದ ಅಭಿಮನ್ನನ ಹಿಂದಿಂದ ಕರಕೊಂಡು
ಬಂದಾಳೋ ಆಗ ಸುಭದ್ರ ॥

ಚಾಲ

               ಬಂದಾಳೋ ಕಾಮಿಕ ವನದೊಳು ಯಮನಂದನ ಅರ್ಜುನನ ಪಾದಕ
ವಂದಿಸಿ ಮಾಡ್ಯಾಳೋ ಅನಿವಾರ ದುಃಖಾ
ಸುಭದ್ರಿ ಅಂತಾಳೋ ಹೆಂಗ ಈ ಯಾಳೇಕ
ಕೇಳಯ್ಯ ರಮಣಾ ನೀ ಹೆಂತಾ ಕಾಳಯಾಳೇದಾಗ ಈ
ಖೂಳ ಗಯಾನ ಇಟಕೊಂಡ ಬಳಿಕ
ನಿಮಗ ನಾನು ಹೇಳುವೆನು ಈ ಕ್ಷಣಕ ॥
ನಾಳಿ ಇವನ ಹೊಡಿಯದಿದ್ರ ಬೀಳುವನು ಅಣ್ಣ ಅಗ್ನಿಯೊಳಗ

ಉಳಿಯುದಿಲ್ಲ ತಿಳಿಯೊ ಮನಕಾ
ನಾವು ನೀವು ಉಳಿಯಾಕಿಲ್ಲಾ ಕೃಷ್ಣ ಸತ್ತ ಬಳಿಕಾ ॥

ಏರ

               ಬಂದಾಳೋ ಆಗ ಸುಭದ್ರಿ ಅರ್ಜುನನ
ದ್ವಂದ್ವ ಚರಣಕ್ಕೆ ಎರಗಿದಳೋ ॥

46

ಏರ

               ಕಮಲಮುಖಿ ಸುಭದ್ರ ರಮಿಸಿ ತಾ ಹೇಳಿದಳು
ರಮಣ ಕೇಳೆನ್ನ ಮಾತು ॥

ಚಾಲ

               ಅಡಿಗೆರಗಿ ದೃಢದಿಂದ ಹೇಳುವೆನು ಎನ್ನ ಒಡೆಯ ಪ್ರಾಣನಾಥ
ಕೇಳೋ ಅರ್ಜುನನೆ
ಬಿಡುಬಿಡು ಮಾಡಬ್ಯಾಡ ಪಂಥವನ್ನು
ಆ ಕಡಲ ಶಯನ ತಡವಿಲ್ಲದೆ ಹೊಡೆಯುವನೋ
ಕೈ ಮುಗಿದ ಭಯದಿಂದ ಹೇಳುವೆನು
ಪ್ರಿಯಾ ದಯಮಾಡಿ ಎನ್ನ ಮಾತ ಕೇಳೋ ನೀನು
ನ್ಯಾಯ ಬ್ಯಾಡ ಇದ ನಿಮಗ ಒಳಿತೇನು
ನಿನ್ನ ಮಾಯದಿಂದ ಹೊಡದಾನೋ ಗೋಪಾಲಾ
ಅರಗಿನ ಮನಿಯೊಳು ಹರಣ ಕಾಯ್ದಂತಾ
ಹರಿ ವರಮೂರ್ತಿ ಮ್ಯಾಲ ನಿಮ್ಮ ಸಿಟ್ಟೇನೋ
ಪಾರ್ಥಾ ಕೇಳೆನ್ನ ಮಾತ ವ್ಯರ್ಥ ಕೆಡುವುದು ಬ್ಯಾಡಾ
ನಿನ್ನ ಸಾರಥಿಯಾಗಿ ರಥ ನಡಿಸುವುದು
ಬಿಡು ಅವರವರ ಧರ್ಮ ಕರ್ಮಕ್ಕೆ ಯಾಕ ಗುರಿಯಾಗುವಿರಿ
ತಿಳಿ ವರ್ಮ ಧರ್ಮ ಶರ್ಮವ ಬಿಟ್ಟು ನೀವು ನಿಂತೀರಿ ॥

ಏರ

               ಶೌರಿ ಕೂಡ ಜಗಳ ಯಾಕ ಐವರು ನಿಮ್ಮ
ಚರಗಳಿಗೆ ಎರಗಿ ಮಾಡುವೆನು ನಮಸ್ಕಾರಾ ॥
ಪಾರ ಗಯಾನ ಬಿಟ್ಟ ಬಿಡರಿ ಬಲ್ಲವರು ನಾ
ಸಾರಿ ಹೇಳತೀನ ಬೀಳತಾದ ಪೇರು ॥

ರಮಣಾ ಕೇಳೆನ್ನ ಗುಣ ರಮಣಾ
ಕಮಲನಾಭ ನಿನಗ ಸರಿಯೇನು                      ॥

47

ಏರ

               ನಾರಿಯಾಡಿದ ಮಾತು ಧೀರರೈವರು ಕೇಳಿ
ಘೋರ ಚಿಂತಿಯಲಿ ಕುಳಿತಿಹರು                      ॥

ಚಾಲ

               ಶೂರ ಅಭಿಮನ್ಯು ಯುದ್ಧವೀರ ಬೊಬ್ಬಿ ಹೊಡದಾನೋ
ಭೋರಗರದ ಜಗದ ಬಣ್ಣ ಟಣಣಣಾ
ತಂದಿಗಳಿರ್ಯಾ ಮಾರಿ ತಗಿಯುವರೇನು ಮಾಡಿ ಪಣ್ಣ ಪಣಣಣಾ
ಮಾತುಳ್ಳ ಕೃಷ್ಣನ್ನ ನಾನು ಯಾತಕ್ಕ ಕೇಳೆನು ನಾನು
ಕೂತಕೊಂಡ ನೋಡ್ರಿ ಖಣ್ಣ ಖಣಣಣಾ
ಹೊಡೆಯುವೆನು ಜಾತಿ ಕ್ಷತ್ರಿಪುತ್ರ ನಾನು ಜನ್ಮ ಜನನನಾ
ತಾತಾ ಬಿಡುವರೇನು ಹಿಂತಾ ಮಾತ ಮ್ಯಾಲ ವಚನಾ
ಸತ್ತ ಹೋದರ ಹೋಗಲಿ ಹೊಡೆಯುವೆನು ಖಣ್ಣ ಖಣಣಣಾ
ಪೃಥ್ವಿ ಮ್ಯಾಲ ಹೊತ್ತೇರಿ ಬಂತು ಅಪಕೀರ್ತಿ ಜನ್ನ ಜನನನಾ ॥

ಏರ

               ಘೋರ ಚಿಂತಿಯಲಿ ಕುಳಿತಿಹರು
ಅಭಿಮನ್ಯು ಹಾರಿದನು ಅಂತ್ರ ತಂತ್ರದಲಿ ॥

48

ಏರ

               ಭೂಪಾಲ ಕೇಳಯ್ಯ ಗೋಪಾಲನ ಕೂಡ
ಈ ಪರಿ ಯುದ್ಧ ಮಾಡುವೆನೋ                       ॥

ಚಾಲ

               ತಾಯಿಯಾದ ಸುಭದ್ರಿಯು ಮಾಯ ಇಟ್ಟ ಅಣ್ಣನ ಮ್ಯಾಲ
ಅನ್ಯದಿಂದ ಆಡುವಳು ಮಾತಾ
ತನ್ನ ಬೆನ್ನ ಬಿದ್ದವರನ್ನ ಕೊಡುವರೇನೋ ಪಿತಾ
ಕಿತ್ತಿ ದ್ವಾರಕಾಪತಿಯನ್ನು ಒತ್ತುವೆನು ಶರಧಿಯೊಳಗಾ
ಅತ್ತರ ನಡಸುವೆ ಈ ಹೊತ್ತು
ಅಲಲಲಾ ಹರಿ ಈ ಹೊತ್ತು ಕುತ್ತಿಗೆ ಕೊಯ್ಯುವದೋ
ಚೋರ ಕೃಷ್ಣ ಬರಲಿ ತೂರಿ ಬಿಡುವೆನು ಅವನ ತಲಿ
ಯಾರ ಕೇಳಬೇಕು ಚಕ್ರದ ಹೊಡತಾ
ಗರ್ಜನಿ ಹೊಡದ ವೀರ ಅಭಿಮನ್ಯು ಪಂಡಿತಾ ॥

49

ಏರ

               ಈ ಪರಿ ಯುದ್ಧ ಮಾಡುವೆನು ಹೀಗೆಂದು
ವಿಪರೀತ ಕೂಗ ಹೊಡದಾನು                          ॥

ಏರ

               ಮಗನ ಮಾತ ಕೇಳಿ ಪಾರ್ಥಾ ಬಿಗಿದಪ್ಪಿ ಮುದ್ದಾಡಿ
ಜಿಗದಾನೋ ಉಬ್ಬಿ ಗಗನಕ್ಕೆ

ಚಾಲ

               ಮಗನ ಮಾತ ಕೇಳಿದ ಅರ್ಜುನಾ
ಉಬ್ಬಿ ಮುಂಡಿ ಬಡದಾ
ಮೂರ ಲೋಕದೊಳಗ ಪ್ರಸಿದ್ಧಾ
ಹೌದ ಹೌದ ಅಂತಾರ ನನ್ನ ಜಿದ್ದಾ
ಕೊಟ್ಟ ವಚನ ತಪ್ಪಿಸಿದರ ಹರಿಯ ನರಕಕ್ಕ ಗುರಿ ಅಂದಾ
ಅರ್ಜುನ ಕರದ ತನ್ನ ಸತಿ ಬಾರ ಮಂದಮತಿ
ಮಡದಿ ಸುಭದ್ರಾ ಸುಭದ್ರಾ
ಗಯಾನ್ನ ಬಿಡುವದಿಲ್ಲ ಆಗೋದ ಆಗಲಿ ಆಗಲಿ
ನಿಮ್ಮ ಅಣ್ಣ ಬಂದ ಮಾಡಲಿ ಮಾಡೋದ ಮಾಡೋದ
ಹಾಂಗಂದ ಸತಿಯ ಬೈದನೋ
ಹರಿಯ ಪರ ನೀನು ಲಗು ಕಳಸೋಗ
ಯುದ್ಧ ನಡೀಲಿ ಅವರಿಗಿ ನಮಗ ಯಾರ ಅಂಜಬೇಕ ಕೃಷ್ಣಗ
ಅವನ ಛಲಾ ಛಲಾ
ಹದಿನಾರ ಸಾವೀರ ಹೆಂಡರೊಳಗ, ಸಾವಿರ ಹೆಂಡರೊಳಗ

ಏರ

               ಜಿಗದಾನೋ ಉಬ್ಬಿ ಗಗನಕ್ಕ ಶ್ರೀ ಹರಿಯು
ಸಿಗಬಾರದ ಸಿಕ್ಕ ನೆರಳುವನು ॥

50

ಏರ

               ಪತಿಯ ಆಡಿದ ಮಾತು ಸತಿಯು ಸೌಭದ್ರಿ ಕೇಳಿ
ಮಿತಿಮೀರಿ ದುಃಖ ಮಾಡಿದಳು ॥

ಚಾಲ

               ಕಾಂತ ಆಡಿದ ಮಾತುಗಳನ್ನು ಕೇಳಿ
ನಿಂತ ಸುಭದ್ರಾ ಕೇಳಿ
ಹೆಂತ ಹೊತ್ತ ಬಂತೋ ಇಂದೀಗೆ
ಸುಭದ್ರ ಹಿಂಗೆ ಅಂತಾ ಹೊರಳಿ ಹೋದಳೋ ದ್ವಾರಕಾವತಿಗೆ
ಅಣ್ಣಾ ಕೇಳರಿ ಅವರು ಮನ್ನಿಸಲಿಲ್ಲೊ ನನ್ನ ಮಾತಾ
ಬಣ್ಣ ಗುಂದಿ ಬಂದೆ ನಾ ಇಲ್ಲಿಗೆ
ಸುಭದ್ರಾ ಅಂತಾಳೋ ಅನ್ಯ ಬಂತೊ ಅವರ ಪಾಲಿಗಿ
ಕೇಳಿದ ಕೃಷ್ಣನು ಕೋಪ ತಾಳಿದ ಹರಹರಾ ಹಿಂತಾ
ಗೋಳ ತಂದೊ ಶಂಕರ ಶಿವ ಶಿವಯೋಗಿ
ಬೀಗ ಬೀಗರ ಯುದ್ಧ ಮಾಡೋದು ಬಾಳ ಬಿಗಿ

ಏರ

                ಮಿತಿ ಮೀರಿದ ದುಃಖ ಮಾಡುವಳು ಶ್ರೀ ಕೃಷ್ಣಗ
ಅತಿ ಬ್ಯಾಗ ಕರದ ತಿಳಿಸಿದಳೋ       ॥