ಆಗಲಾ ಧರ್ಮರಾಯಗೆ ಉಪಚರಿಸಲು
ತಾಗಣ್ಣು ತೆರೆದಾಗ ನೋಡಿದನು  ಭೀಮ
ಆಗೆಂದ ಪಾರ್ಥನ ಪಂಥವನು  ಕೆಟ್ಟು
ಹೋಹದು ಬೀಗನಾ ಭಿಡೆಯವನು  ನೋಡ
ದಾಗದಾಗಲಿ ಅಪಕೀರ್ತಿ ಬಾಹದು ಮುಂದಿ
ನ್ನೀ ಗಯನಂ ಬಿಡಲಾಗದಿನ್ನೆಂದ                                                              ॥

ಭೂನಾಥ ಕೇಳಯ್ಯ ಭೀಮನಾಡಲು ಮತ್ತೆ
ತಾನೆದ್ದು ತವಕದಿ ಫಲ್ಗುಣನು  ಇದ
ಕೇನ ಪೇಳಿದಡೇನು ಮುಂದಿದನು  ದೈವ
ಧೀನ ಬಂದುದಕೆ ಉಪಾಯವೇನು  ದೊಡ್ಡ
ಕಾನನಕೆ ಗಯನೆಬ ಮಾರಿಯು ಬಂದು
ದೇನಾದರಾಗಲಿಯೆಂದನರ್ಜುನನು                                                          ॥

ಆರು ಅರಿಯದಂತೆ ಘೋರಕಾಂತಾರದಿ
ಮೂರು ಸಂಜಿಲೆ ಜೀವದಾನವನು  ಬೇಡಿ
ಪಾರಾಗಿ ಗೆದ್ದ ಗಂಧರ್ವಜನು  ಬಂದ
ಮಾರಿಗೆ ಕುರಿಯಾಹಾರವನು  ಕೊಟ್ಟ
ಈ ರೀತಿ ಇಂದೀಗ ಗುರಿಯಾದೆ ಬರ್ಪುದು
ಬಾರದೆ ಬಿಡುವದೆಯೆದ ಫಲ್ಗುಣನು                                                          ॥

ಮುರಹರನಂಜಿಕೆ ಯಾರಿಗೆನುತ ಬಿಡೆಂ
ದುರವಣಿಸುತ ಕಾಲಭೈರವನು  ಬಂದ
ಪರಿಯಂತರ್ಭಟಿಸಿ ಧನಂಜಯನು  ಕೃಷ್ಣ
ಬರಲು ಸಮ್ಮುಖಕೊಮ್ಮೆ ನೋಡುವೆನು  ಎಂದು
ತರುಳ ಗಂಧರ್ವಜಗಭಯ ಪಾಲಿಸಿ ತನ್ನೊ
ಳಿರಿಸಿಕೊಳ್ಳಲು ಇತ್ತಲಾದುದೇನೆಂಬೆ                                                       ॥

ಪೊಡವಿಪ ಕೇಳೈ ಯಾದವ ಸೇನೆಯಿ
ನ್ನಡವಿಯಂ ದಶದೇಶ ದೇಶಗಳ  ಗುಂಪು
ಗಿಡದ ಮರೆಯು ಹಳ್ಳಕೊಳ್ಳಗಳ  ಮತ್ತೆ
ವೊಡೆಯುತ ಕೆರೆ ಹಾಳುಭಾವಿಗಳ  ಎಲ್ಲ
ಹುಡುಕಲು ಗಯನೆಲ್ಲಿ ಕಾಣದಳಲಿ ದೇಹ
ಬಡವಾಗಿ ಬಂದುದು ಬಲವನೇನೆಂಬೆ                                                      ॥

ಯತಿಪತಿ ನಾರದನಿತರೊಳು ದ್ವಾರಕ
ವತಿಗೆ ಬರಲು ಕೃಷ್ಣ ಕಾಣುತಲಿ  ಆಗ
ಅತಿಶಯದಿಂದಿದಿರ್ಗೊಂಬುತಲಿ  ನವ
ರತುನಪೀಠದಿ ಮೂರ್ತಗೊಳಿಸುತಲಿ  ಗಂಧ
ಕ್ಷತೆ ಪುಷ್ಪಜಲ ಬಹುವಿಧದಿ ಮುದದಿ ಧೂಪಾ
ರತಿಯಿಂದೆ ಪೂಜಿಸಿಯೆರಗಿದ ಹರಿಯು                                                   ॥

ವಂದನೆಗೈದರವಿಂದನಾಭನ ಮುಖ
ದಂದವ ನೋಡಿದ ನಾರದನು  ಕೃಷ್ಣ
ಯೆಂದಿನಂತಿಲ್ಲೊದನಾಬ್ಜವನು  ಬಾಡಿ
ಕಂದಿಹುದ್ಯಾಕೆನೆ ಪೇಳೆಂದನು  ಮುನಿ
ಯೆಂದ ಮಾತಿಗೆ ಇಂದಿರೇಶ ಪೇಳಿದನಾಗ
ಗಂಧರ್ವ ಗಯನ ವೃತ್ತಾಂತವೆಲ್ಲವನು                                                    ॥

ಖೂಳ ಗಯನನಪರಾಧಕ್ಕೆ ನಿಲ್ಲದೀ
ರೇಳು ಲೋಕವನೆಲ್ಲ ನೋಡಿದೆವು  ದೇಶ
ದಾಳಿವರಿದು ಬಿಡದ್ಹುಡುಕಿದೆವು  ಇಲ್ಲೆ
ಭಾಳಾಕ್ಷ ಬಂದಂತೆ ಆಯ್ತು ತಾವು  ನೀವು
ಬಾಳ ಸಂಚಾರಿಕರಿರುವ ಠಾವಿಗೆ ಮತ್ತೆ
ಹೇಳಿಕೊಟ್ಟರೆ ಲೇಸುವಾಗುದಿನ್ನೆಂದ                                                         ॥

ಉಳಿದರೆ ಉಳಿಸು ನೀನುಳಿಸದಿರ್ದಡೆ ಎನ್ನ
ನಳಿಸು ಇರ್ದಡೆ ನಿನ್ನ ಮನಸೆನುತ  ಮತ್ತೆ
ಬಳಸಿ ತಾವರಿಯರಿಂದುವರೆನುತ  ಸರ್ವ
ತಿಳಿದಾತನಿಗೆ ಪೇಳ್ವುದೇನೆನುತ ಒಡ
ಲೊಳಗೆ ದಾವಾಗ್ನಿ ಹತ್ತಿದೆ ನಾಳಿನ್ನೊಂದಿನ
ದೊಳು ಸರಿ ಮೀರಲುಪಾಯವೇನೆಂದ                                                    ॥

ಹೇಳಲಾರೆನು ಹೇಳದುಳಿದೆನಾದರೆ ಮನ
ತಾಳದು ತವಕದಿ ಮಾಡಲೇನು  ಕಂಡು
ಹೇಳದಿರ್ದಡೆ ಮೋಸವೆಂಬೆ ನೀನು  ಕಂಡ
ದ್ಹೇಳಲು ಕೊಂಡೆಂಬೆ ಜಗಳವನು  ಈಗ
ಹೇಳಿದರೀ ಗಯನೆಂಬವಗಸುವನು
ನಾಳಿಗುಳಿವದೆಂತೊ ಎಂದ ನಾರದನು                                                   ॥

ಹಸಿವಿಗೆಂಬುತ ಹಣ್ಣತರಲು ಪೋಗಿರ್ದೆನಾ
ಯಶವಂತ ವನದೊಳಾ ಸಮಯದಲಿ  ಬಂದು
ಒಸುರುವ ಕಣ್ಣೀರ ಸುರಿಸುತಲಿ  ತನ್ನ
ಪೆಸರು ಪೇಳಿದ ಗಯನೆಂಬುತಲಿ  ಸಣ್ಣ
ಹಸುಳ ಕೇಳಿದ ನೋಡು ಪಾಂಡವನೊಳು ಪಾರ್ಥ
ಅಸಮಯ ಕಲಿಯಿರ್ಪ ವನವಾವುದೆಂದ                                                  ॥

ಅವರಿರ್ಪ ಕಾಮ್ಯಕ ವನವನು ಕೇಳುತ
ತವಕದಿಂ ಕಂಡಾಗಲರ್ಜುನನು  ಕೀರ್ತ
ನವ ಮಾಡೆ ಭಾಷೆಯ ಕೊಟ್ಟವನು  ಬಂದ
ಬವರ ನೋಡುವೆನೆಂಬುತಾ ಗಯನು  ಬಿಡ
ದವನ ತನ್ನಲ್ಲಿಟ್ಟುಕೊಂಡಿ ದಿಟ ಕಾಣಿ
ಸುವದೆಂದು ಮುನಿವರ ಕೇಳವನಿಪನೆ                                                      ॥

ಉರಿವ ಕಿಚ್ಚಿಗೆ ಘೃತವೆರೆದಂತೆ ಮುನಿವರ
ವೊರೆಯಲಾಕ್ಷಣ ಕೇಳಿ ಮುರಹರನು  ನಿಲ್ಲ
ದುರಿದೆದ್ದು ತಾ ಕಾಲಭೈರವನು  ಅವ
ತರಸಿದನೆಂಬಂತೆ ತೋರಿದನು  ಕಿಡಿ
ಗರೆದು ಪಾಂಡವರೆಮ್ಮ ಮ್ಯಾಲೆ ವೈರತ್ವವ
ಧರಿಸಿದರೈ ಬಲರಾಮ ನೋಡೆಂದ                                                          ॥

ಜಡಜಾಕ್ಷಿ ಕೇಳಯ್ಯ ಕೌರವೇಶಗೆ ಮುನ್ನ
ಕೊಡಿಸೆಂದು ಪೇಳ್ದ ಸೌಭದ್ರಿಯನು  ಕುಲ
ಗೆಡಕ ಕುಹಕ ನೀಚ ಪಾರ್ಥನನು  ಕೇಡು
ಕೊಡುವನೆಂಬುದ ನಾನು ತಿಳಿದಿದ್ದೆನು  ಸುಡು
ಸುಡು ಇಂಥ ಬೀಗತನವನೆಂದು ಬಲರಾಮ
ನುಡಿದು ಜರಿದನಾಗ ಮುರಹರನೊಡನೆ                                                 ॥

ಕಡುವೈರಿ ಮುಂದೆಡಹಿದ ತೆರನಾಯಿತು
ಹಿಡಿದ ಕೋಪವನಾಗ ಸೈರಿಸುತ  ಎನ್ನ
ಒಡಹುಟ್ಟಿದಾಕೆಯ ಕಳಹಿಸುತ  ಅವ
ರೊಡಲನ್ನಗುಣ ತಿಳುಹುವೆನೆನುತ  ಆಗ
ಕಡು ತವಕದಿ ತಂಗಿ ಕರೆದು ಸೌಭದ್ರಿಗೆ
ಬಿಡದೆ ಹೇಳಿದನಾಗ ಕೃಷ್ಣರಾಯನು                                                         ॥

ತಂಗಿ ಬಾರವ್ವ ಎನ್ನಯ ನೇಮವ್ರತಗಳ
ಭಂಗ ಮಾಡಿದ ಗಯ ನೀಚನನ  ಅದ
ರಿಂಗಿತ ತಿಳಿಯದೆಯಭವನ  ಕೊಟ್ಟು
ಬೆಂಗಡ ಕೊಳ್ಳುರೆ ತಾನವನ  ಇಂಥ
ಸಂಗತಿ ಬ್ಯಾಡೆಂದು ಗಂಡಗೆ ಬುದ್ಧಿ ಪ್ರ
ಸಂಗಿಸಿ ಬಾರೆಂದು ಪೇಳ್ದ ಶ್ರೀಕೃಷ್ಣ                                                           ॥

ಅಣ್ಣನ ಮಾತಿಗೆ ಅತಿ ಬೇಗ ಸೌಭದ್ರಿ
ಹಣ್ಣಿಸದಿರು ಛಲ ನೀನೆನುತ ಇಂಥ
ಸಣ್ಣ ಮಾತಿಗೆ ಫಲವೇನೆನುತ  ಎನ್ನ
ಬಣ್ಣದೋಲೆಯ ಕಾಯಬೇಕೆನುತ  ಮೃಗ
ಗಣ್ಣಳಗ್ರಜಗೂಡುತಿರಲು ಆ ಸಮಯದಿ
ಕಣ್ಣಾರೆ ಕಂಡು ಕೇಳಿದಳು ರುಕ್ಮಿಣಿಯು                                                    ॥

ಕೇಳಿದಾಗಲು ಮತ್ತೆ  ರುಕ್ಮಿಣಿಯಳು ಕೋಪ
ತಾಳದಾಡಿದಳಾಗ ಸೌಭದ್ರಿಗೆ  ಕೆಟ್ಟ
ಖೂಳ ನಿಂದಕನ ಗಯನ ಮಾತಿಗೆ  ಛಲ
ತಾಳಬಹುದೇ ನಿಮ್ಮ ಬಾಳುವೆಗೆ  ಬಿಡ
ದಾಳಾಗಿ ಕಾಯ್ದಂಥ ಉಪಕಾರ ತೀರಿತಿ-
ನ್ನೇಳು ನೀನಿರ ಸಲ್ಲವೆಂದಳತ್ತಿಗಿಗೆ                                                            ॥

ರೋಷದಿ ರುಕ್ಮಿಣಿಯೆಂದಳು ಹದಿನಾರು
ಸಾಸಿರ ಸ್ತ್ರೀಯರ ವಾಲಿಯನು  ಸರ್ವ
ಭೂಷಣ ಹೋದರೆ ನಿನಗಿದನು  ಬಹಳ
ಲೇಸವಾಗುವದ್ಯಾಕೆ ಹೇಳೆಂದನು  ಅಗ್ನಿ
ವಾಸವಾಗುವ ನಮ್ಮ ಗಂಡನೆಂಬುವ ಚಿಂತೆ
ಕಾಸಿನಷ್ಟಿಲ್ಲವು ಕಂಡೆ ಕಾಮಿನಿಯೇ                                                           ॥

ವನವಾಸ ವಲ್ಲಭರಿಗೆ ಬಂತು ನೀ ನಮ್ಮ
ಮನೆಯೊಳು ಚೊಕ್ಕ ಭೋಜನವನುಂಡು  ನೀನು
ನೆನಿಯದಾದಿಯಲ್ಲ ಮರೆತುಕೊಂಡು  ದಿಟ್ಟ
ತನದಿಂದೆ ಹೊಟ್ಟೆಯ ಹೊರೆದುಕೊಂಡು  ಪೋಪ
ವನಿತಿಗಿನ್ಯಾಕಿಷ್ಟು ಮಾತೆಂದು ಸೌಭದ್ರಿ
ಯನು ಜರಿಯುತ್ತಲಾಡಿದಳು ರುಕ್ಮಿಣಿಯು                                               ॥

ದಿಟ್ಟ ರುಕ್ಮಿಣಿ ನಿನ್ನ ಹುಟ್ಟಬಲ್ಲೆನು ಒಡ
ಹುಟ್ಟಿದಣ್ಣನ ಕೈಯ ಕಟ್ಟಲಿಲ್ಲೆ  ಆಗೊ
ತ್ತಟ್ಟೆಯ ಮೀಸೆಯ ತೆಗೆಸಲಿಲ್ಲೆ  ನಿನ
ಗೆಷ್ಟು ಮಾನವು ಬಂತು ನೋಡಲಿಲ್ಲೆ  ಅಣ್ಣ
ಕೃಷ್ಣರಾಯಗೆ ನಾನು ತಂದಿದ್ದೇನೆನುತ ಘೋ
ಳಿಟ್ಟಳುತಿರಲು ಸೌಭದ್ರಿಯಾಕ್ಷಣದಿ                                                           ॥

ತರುಣಿ ರುಕ್ಮಿಣಿಗಾಗ ಹರಿಯು ಕೋಪಿಸಿ ತಂಗಿ
ಕರೆದು ಮನ್ನಿಸಿ ಮತ್ತೆ ಪೇಳಿದನು  ನಿನ್ನ
ಪುರುಷನಲ್ಲಿಹ ಖೂಳ ಗಂಧರ್ವನು  ಬಿಟ್ಟು
ಹೊರಡಿಸುವಂಥ ಉಪಾಯವನು  ಮಾಡೆಂ
ದೊರೆದು ಸೌಭದ್ರಿಯ ಕಳುಹಲಾಕ್ಷಣ ತನ್ನ
ತರುಳನ ಒಡಗೂಡಿ ತೆರಳಿದಳ್ವನಕೆ                                                         ॥

ಕಂದಭಿಮನ್ಯುವಿನೊಡಗೂಡಿ ಸೌಭದ್ರಿ
ಬಂದಳು ಕಾಮ್ಯಕವನದೊಳಗೆ  ಮುದ
ದಿಂದಲಿ ದ್ರೌಪದಿ ಮನದೊಳಗೆ  ನಯ
ದಿಂದ ಪಿಡಿದುದಾಲಿಂಗನದೊಳಗೆ  ಕರ
ತಂದು ಕೂಡ್ರಿಸಿ ಉಪಚರಿಸಲಾ ಸಮಯದಿ
ಬಂದರು ಭೀಮ ಧರ್ಮಜ ಪಾರ್ಥರಿವರು                                                ॥

ತರುಳಸಹಿತ ಬಂದ ಪರಿಯೇನೆನುತ ಕೇಳ
ಲಿರುವ ಗಯನ ಮುಖ ನೋಡಿದಳು  ದುಃಖಾ
ತುರದಿಂದ ವೃತ್ತಾಂತ ಪೇಳಿದಳು  ಸುಳ್ಳೆ
ಪುರುಷಾರ್ಥವಿಲ್ಲ ಈ ಭೂಮಿಯೊಳು  ನಮ್ಮ
ಪೊರೆವ ಶ್ರೀಕೃಷ್ಣನಿವನ ಕೊಲ್ಲದಿರೆ ನಾಳೆ
ಉರಿವ ಕಿಚ್ಚಿಗೆ ದೇಹ ಕೊಡುವೆ ನೋಡೆನಲು                                          ॥

ಹೇ ರಮಣನೆ ಎನ್ನ ಮಾತನಾಲಿಸಿ ಕೇಳು
ಮಾರಮಣೆಮ್ಮಯ ಕಡೆಗೆ ಸಾರ್ಥ  ಪ್ರತಿ
ಪೂರವಾಗಿರ್ದುದು ಪುಸಿಯೆ ಪಾರ್ಥ  ಈ ಕು
ಬೇರನ ಕುವರನ ಹಿಡಿದು ವ್ಯರ್ಥ   ಕಾಂತ
ಈ ರೀತಿ ಇರಲಿದರೊಳು ವೈರ ಬ್ಯಾಡೆಂದು
ಪೋರ ಗಯನ ಬಿಟ್ಟು ಕಳುಹು ನೀನೆನಲು                                              ॥

ನಾರಿಯಳಾಡಿದ ಮಾಡಿಗೆ ಧರ್ಮಜ
ಘೋರ ಚಿಂತಿಯನಾಗ ತಾಳಿದನು  ಈ ಕು
ಮಾರಗೆ ಕೊಟ್ಟಂಥ ಭಾಷೆಯನು  ಮತ್ತೆ
ಮೀರುವದಾಯ್ತು ಇಂದಿಗೆಯೆಂದನು  ಪಾರ್ಥ
ಮಾರುತಿ ಸಹದೇವ ದ್ರೌಪತಿ ಹಲವು ಪ್ರ
ಕಾರದಿಂದ್ಯೋಚಿಸುತಿರಲಭಿಮನ್ಯು                                                          ॥

ತಾತ ಬಿಡುವರೇನೋ ಹಿಡಿದ ಪಂಥವ ಮುನ್ನ
ಮಾತು ಸತ್ಯದಿ ನೀನು ಕೊಟ್ಟ ಮೇಲೆ  ಲೋಕ
ಖ್ಯಾತಪಕೀರ್ತಿಯು ಬಿಟ್ಟ ಮೇಲೆ  ಬಿಡು
ಈ ತಾಯಿ ಮಾತೇನಗ್ರಜನ ಮೇಲೆ  ಮಾಯೆ
ಪ್ರೀತಿಯಿಂದಾಡ್ವಳು ಆಗುದಾಗಲಿಯೆಂದು
ಮಾತುಳ್ಳ ಕೃಷ್ಣನ್ನ ನೋಳ್ಪೆ ನಾನೆಂದ                                                     ॥

ಕಿತ್ತು ದ್ವಾರಾವತೀಪುರ ಶರಧಿಯೊಳಿಂದು
ಒತ್ತಿಡುವೆನು ಒಂದು ನಿಮಿಷದಲಿ  ಸರ್ವ
ಅತ್ತೇರನೆಲ್ಲ ಘೋಳಿಡಿಸುತಲಿ  ಪುರು
ಷೋತ್ತಮನಿರವನು ಕೆಡಿಸದಲಿ  ಬಿಡೆ
ಕೃತ್ತಿವಾಸನ ಕಡೆಗಾಲದಂದದಿ ಘರ್ಜಿ
ಸುತ್ತಲಿ ರೌದ್ರದಿ ನುಡಿದನಭಿಮನ್ಯು                                                          ॥

ಸುತನೆಂದ ಮಾತ ಕೇಳುತ ಪಾರ್ಥ ತನ್ನಯ
ಸತಿಗೆ ಪೇಳಿದ ಮಗನ್ವಚನವನು  ರಾಮ
ಪತಿ ಬಲಗೂಡಿ ಬರಲು ಗಯನ  ಕೊಡ
ದತಿ ಯುದ್ಧಮಾಡುವೆ ಕೇಳಿದನ  ಹೋಗಿ
ಹಿತದಿ ನಿಮ್ಮಂಣ್ಣಗೆ ಪೇಳು ಹೋಗೆನಲಾಗ
ಅತಿ ನೊಂದು ಮನದೊಳು ತಿರುಗಿ ಸೌಭದ್ರಿ                                          ॥

ಇಂದಿಗೆ ಕಾರ್ಯ ಕೆಟ್ಟಿತು ಎಂದು ಸೌಭದ್ರಿ
ಬಂದಳು ದ್ವಾರಕಾನಗರದೊಳು  ಅರ
ವಿಂದನಾಭನಿಗೆ ವೃತ್ತಂತಗಳು  ನಯ
ದಿಂದಲಿ ಅಣ್ಣಗೆ ಪೇಳಿದಳು  ದಯ
ದಿಂದ ಛಲವ ಬಿಟ್ಟು ಪಾಂಡವರನು ಸಲ
ಹೆಂದು ಪೇಳಲು ಖತಿಗೊಂಡನಾ ಕೃಷ್ಣ                                                    ॥

ಭರದಿಂದ ವಾಲಿಯೆ ಬರೆದಾಗ ಕಳುಹಿದ
ಚರನ ಪಾಂಡವರಿರುಸನ್ನಿಧಿಗೆ  ತಾವೊ
ತ್ತರದಿಂದ ಪತ್ರವ ಧರ್ಮಜಗೆ  ಕೊಟ್ಟು
ತ್ವರಿತದಿಂದುತ್ತರವೇನೆಮಗೆ  ನೀವು
ದುರುಳರು ದುಷ್ಟರು ಸ್ವಾಮಿದ್ರೋಹಿಗಳು ನೀ
ಚರು ಕುಂತಿ ಕುವರರು ಎಂದನಾ ದೂತ                                                 ॥

ಕಳುಹಿರಿ ಗಯನಟ್ಟಿ ಒಳಿತಾಯಿತು ಮುಂದೆ
ಇಳೆಯೊಳು ಕೆಡುವಿರಿನ್ನೆಂಬುತಲಿ  ಕೇಳಿ
ಫಲ್ಗುಣ ಕೋಪದಿಂದೇಳುತಲಿ  ಆಗ
ಕಲಿ ಭೀಮ ಗದೆಯ ತಕ್ಕೊಳ್ಳುತಲಿ  ಬಹಳ
ಸಲಿಗಿಯೆಂತುಂಟೊ ಕಳ್ಳದೂತನಾಡುವನೆಷ್ಟು
ಕೊಲುವೆವಿವನ ಎಂದರಾ ಕ್ಷಣದಿ                                                               ॥

ಆಗ ಧರ್ಮಜನು ಸಂಧಾನದ ದಾರುಕ
ನೀಗ ಇವನ ಗೊಡವೇನೆನುತ  ತಂದ
ಕಾಗದ ಕೊರಳಿಗೆ ಕಟ್ಟಿಸುತ  ಮತ್ತೆ
ಮೂಗಿಗೆ ಸುಣ್ಣವ ಹಚ್ಚಿಸುತ  ಎಲೊ
ಈ ಗಯನಿಂದಿಗೆ ಬಿಡುವವರಲ್ಲ ನೀ
ಹೋಗೆಂದು ದೂಡಲು ಬಂದ ದ್ವಾರಕಕೆ                                                   ॥

ಏ ಕಮಲಾಕ್ಷನೆ ಏನು ಪೇಳಲಿ ಜೀಯ
ನೀ ಕೊಟ್ಟ ಪತ್ರವ ಕೊರಳಿನಲಿ  ಬಿಡ
ದೇ ಕಟ್ಟಿ ಕರಗಳ ಬಿಗಿಯುತಲಿ  ನೋಡಿ
ತಾ ಕಳುಹುವರೆ ಸುಣ್ಣ ಹಚ್ಚುತಲಿ  ಸಾಕು
ಸಾಕಯ್ಯ ನಿನ್ನ ಸೇವೆಯನೆಂದು ದಾರು
ಶೋಕದಿಂ ಪೇಳಲು ಕೇಳ್ದ ಶ್ರೀಕೃಷ್ಣ                                                          ॥

ಬಲರಾಮನನುಜನು ಬಲು ಕೋಪ ತಾಳುತ
ಬಲ ಸಹಿತೆದ್ದರು ಶೀಘ್ರದಲಿ  ಮುಂಬಿ
ನಲಿ ಬರ್ಪ ಮದಕರಿ ಕುದುರೆಯಲಿ  ರಥ
ಕಲಿ ಸುಭಟರು ವೀರ ಬೊಬ್ಬೆಯಲಿ  ಚತು
ರ್ಬಲ ವಾದ್ಯ ಗಡಣ ನಿಲ್ಲದಲಿ ಕಾಮ್ಯಕವನ
ದಲಿ ಬಂತು ಕೃಷ್ಣನ ಸೇನೆ ಅಬ್ಬರದಿ                                                         ॥

ಹರಿಸೇನೆ ಬಂದಂಥಬ್ಬರವ ಕಾಣುತ ಪಾಂಡ
ವರು ಪತ್ರ ಬರೆದರು ಕುರುಪತಿಗೆ  ಮತ್ತೆ
ತ್ವರಿತದಿಂದುತ್ರ ಘಟೋದ್ಗಜಗೆ  ವಾಲಿ
ಇರದಟ್ಟಿದರು ದ್ರುಪದರಸನಿಗೆ  ಬಲ
ನೆರಸಿದರಾಗುರವಣಿಸಿಯಾರ್ಭಾಟದಿ
ಧುರಕನುವಾದಂಥ ಪರಿಯನೇನೆಂಬೆ                                                      ॥

ಇತ್ತ ದ್ವಾರಕಿಯೊಳಗಭಿಮನ್ಯು ಮರುದಿವ
ಸತ್ತೇರ ಮನಿಯೊಳು ನೋಡಿದನು  ತನ್ನ
ಹೆತ್ತ ತಾಯಿಯ ಕಂಡು ಅಳುವುದನ್ನು  ದಳ
ವೆತ್ತಿ ಪೋಗಿಹ ಮಾವನೆಂಬುದನು  ಕೇಳಿ
ಅತ್ಯುಗ್ರದಿಂದಲಾರ್ಭಟಿಸಿ ಕರ್ಪುರ ಮಳೆ
ಮತ್ತೆ ಕಿಚ್ಚಿಗೆ ಬಿದ್ದಂತುರಿದ ಕೋಪದಲಿ                                                     ॥

ಪ್ರಳಯ ಕಾಲದ ರುದ್ರನಂತೆ ಘರ್ಜಿಸುತಲಿ
ಪೊಳೆವ ಕಾರ್ಮುಕವೆತ್ತಿ ನಿಂತಿಹನು  ತನ್ನ
ಸ್ಥಳವ ಬಿಟ್ಟೋಡಿದನಿಂದ್ರನನು  ಸುರ
ರುಳಿಯದೆ ನಡೆ ತಾರಾ ನಿಚಯವನು  ಸಲ್ಲ
ದಿಳೆಗೆ ಬಿದ್ದವು ಶಿವ ಬೆರಳೆ ಮೂಗಿನಲಿಟ್ಟು
ಕುಳಿತನು ಮೌನದಿ ಮಗುವಿನರ್ಭಟಕೆ                                                     ॥

ಮತ್ತೆ ನಾರದ ಬಂದು ಮಗುವಭಿಮನ್ಯುವಿ
ಗುತ್ತರ ಪೇಳ್ದ ನಿನ್ಹೆತ್ತವನು  ಹಿಂದೆ
ಕೃತ್ತಿವಾಸನ ಕೂಡ ಯುದ್ಧವನು  ಮಾಡಿ
ಪೃಥ್ವಿಯೊಳ್ ಗೆದ್ದಂಥ ವೀರನನು  ಜಯ
ವಿತ್ತು ಪ್ರಾರ್ಥನ ಗೆಲಿಸುವೆ ಚಿಂತೆ ಬೇಡೆ
ಸುತ್ತ ನಂಬಿಸಿ ಸುರಮುನಿ ಪೋಗಲಿತ್ತ                                                     ॥

ಪೃಥ್ವಿಪ ಕೇಳಯ್ಯ ಕಾಮ್ಯಕ ವನದೊಳು
ಇತ್ತಂಡ ಬಲ ಬಲವೊತ್ತರಲಿ  ಕಲ
ಕಿತ್ತು ವಾದ್ಯದ ಘೋಷಚೂಣಿಯಲಿ  ಮದ
ಮತ್ತೇಭರಥ ಭಟರೋಜೆಯಲಿ  ಗದೆ
ಕತ್ತಿ ಸಬಳ ಗಣಿಯೆತ್ತೆತ್ತಿ ಹೊಯ್ದು ಕಾ-
ದಿತ್ತದು ಬೊಬ್ಬೆಯಾರ್ಭಟವೇನೆಂಬೆ                                                         ॥

ಕರುಳಖಂಡವು ನೆಣ ಮಿದುಳ ರಕ್ತದ ಕೋಡಿ
ಹರಿದಿತು ಒಂದರಕ್ಷಣದೊಳಗೆ  ತಾವ
ಬ್ಬರದಿ ವಾದ್ಯಗಳೇಳೆ ಬಲದೊಳಗೆ  ಮತ್ತೆ
ಉರವಣಿಸುತಲೇಳ್ವರದರೊಳಗೆ  ಇಂಥ
ಪರಿಯಿಂದಬ್ಬರಿಸಿ ಹೊಯ್ದಡಲೊಂದೆಸೆಯೊಳು
ಬರೆವುತೆದ್ದರು ಕಲಿಭೀಮ್ಹಲಧರರು                                                            ॥

ಉಗ್ರದಿಂ ತುಡುಕುತ ಮುಷ್ಟಿಮುದ್ಗರದಿಂದ
ಶೀಘ್ರದಿಂದಬ್ಬರಿಸೈವರು  ತಮ್ಮ
ತ್ಯುಗ್ರದಿಂ ಮದದಾನೆಯಂಥವರು  ತಾ ಸ
ಮಗ್ರ ಆಯುಧದಿಂದ ಕಾದುವರು  ಇಂಥ
ಅಗ್ರಗಣ್ಯರು ರಣದೊಳು ಹೆಣಗಿದರಾಗ
ಸ್ವರ್ಗದ ಸುರರು ಆಶ್ಚರ್ಯವಾದಂತೆ                                                       ॥

ಒಬ್ಬರೊಬ್ಬರು ಪಂಥ ಹಾಕಿಕೊಳ್ಳುತಲಿ ಮೈ
ಯುಬ್ಬಿ ರೋಮಾಂಚನವೇಳುತಲಿ  ವೀರ
ಬೊಬ್ಬಿಟ್ಟು ಹೊಡೆವರಾರ್ಭಟದಲಿ  ಧರೆ
ಇಬ್ಭಾಗಿಸುತ್ತಿದೆ ರೌದ್ರದಲಿ  ಮತ್ತೆ
ಹೆಬ್ಬುಲಿಯಂತೆ ಇಬ್ಬರ ಕಾಳಗವು ಕಣ್ಗೆ
ಹಬ್ಬ ಮಾಡಿದ್ಹಾಂಗ ಭೀಮ್ಹಲಧರರು                                                         ॥

ಅತ್ಯುಗ್ರದಲಿ ಹೆಣಗುತ ಬಂದು ಹೊಕ್ಕರು
ಒತ್ತಿ ಕೌರವ ಪತಿ ಸೇನೆಯನು  ಆಗ
ತತ್ತರಿಸುತ ಬಲ ನಿಚಯವನು  ಸರಿ
ದೆತ್ತ ಪೋದನೊ ಕುರುನಾಥನನು  ಹರಿ
ಸತ್ತರೊಳಿತು ಪಾರ್ಥಮಡಿದರೆ ಪೀಡೆ ಹೋ
ಯಿತ್ತು ಎಂಬುತ ಜುಣಗಲು ದೆಸೆದೆಸೆಗೆ                                                   ॥

ಅರಸಿ ಕೇಳದರೊಳು ಭೀಷ್ಮಕೃಷ್ಣರ ಯುದ್ಧ
ಪರಿಯನೇನೆಂಬೆ ನಾ ಸಮರದಲಿ  ನದಿ
ತರುಳ ಸರಳ ಮಳೆಗರೆವುತಲಿ  ಮುರ
ಹರನಾಗ ಶರಗಳ ಸವರುತಲಿ  ಎಲೊ
ತರುಳ ಪಾರ್ಥನ ಮಾತ ಕೇಳಿ ಬರ್ಪರೆ ಮುಪ್ಪಾ
ವರಿಸಿದಾತನು ಬಿಟ್ಟು ತೆರಳು ನೀನೆನುತ                                                ॥

ವರ ಭೀಷ್ಮನುರಿದೆದ್ದು ಭರದಿ ಮುಖದಿ ಕೋಪ
ವರಿಸಿ ಹರಿಗೆ ಮೂರು ಬಾಣವನು  ಮತ್ತೆ
ಗರುಡಗೆರಡು ರಥಕಾರಂಬನು  ಸುತ
ಗೆರಡಾರು ಸಿಂಧುವಿಗೊಂದೊಂದನು  ಗಣೆ
ಪರಿವಾಕ್ಕಗಣಿತವಾದ  ಕೂರ್ಗಣೆಗಳ
ಸುರಿದು ಬೊಬ್ಬಿರಿದ ಮೋಹರದೊಳೇನೆಂಬೆ                                                   ॥

ಭೂರಿ ಶಕ್ತಿಯ ತೆರದಿ ಭೀಷ್ಮ ಕೊಂದನು ಎರ
ಡಾರು ಸಾವಿರ ಮತ್ತತುರಗವನು  ಆಗ
ನೂರೆಂಟು ಸಾವಿರ ಆನೆಯನು  ಬಿಡ
ದಾರಾರು ಸಹಸ್ರ ವರೂಥವನು  ಪರಿ
ವಾರದೊಳಗಣಿತ ನೆರೆಗೊಂಬುತಲಾಗ
ಚೀರಿ ಬೊಬ್ಬಿರಿದನದ್ಭುತವೇನೆಂಬೆ                    ॥