ಪರಮ ಶ್ರೀ ಗುರುವಿನ ಹರಸಿ ಸ್ಮರಸಿ ಮುಂದೆ
ಸರಸದಿ ಶ್ರೀ ಗಣನಾಥನನ ವಿಘ್ನ
ಹರಣದಿ ನುತಜನಪ್ರೀಯನನ ಸರ್ಪ
ಭರಣ ಶೋಭಿತನುಮೆಜಾತನನ ಇಂದು
ಚರಣಕ್ಕೆರಗಿ ನಮಸ್ಕರಿಸಿ ಬೇಡುವೆ ಮತಿ
ಕರುಣದಿ ಪಾಲಿಪುದೆನಗೆ ಸಂತಸದಿ ॥
ಭೂರಮ್ಯವಾದಂಥ ಭ್ರೂಲತಪುರ ಸ್ಥಿರ
ಗಾರ ಪುಣ್ಯಸ್ಥರೆಂದೆನಿಸುವರು ಮಾಕು
ಮಾರನ ಚೆಲ್ವಿಕೆ ಮರೆಸುವರು ಮತ್ವಿ
ಚಾರಿಸಲ್ ಕುಶಲರಿರುತಿಹರು ನಾಮ
ಚಾರು ಕೆಂಚೇಂದ್ರನನುಜ ಸ್ಥಿರಸೌಖ್ಯ ಸಂ
ಪೂರದಿಂದಿರುವರು ಮನವಪೇಕ್ಷಿಸಲು ॥
ನೆರೆದ ಸಭೆಯೊಳಗೆ ಬರೆದಾರು ಕೃಷ್ಣಾರ್ಜು-
ನರ ಕಾಳಗವನಾಗ ಬೇಕೆನುತ ಮನೋ-
ಹರವಾದ ಕಥೆಯಿದುಯೆಂದೆನುತ ತಾನು
ಪರಮ ವಿಲಾಸದಿ ಸೂಚಿಸುತ ಕೇಳಿ
ವಿರಚಿಸಿದೆನು ಘನ ಹರುಷದಿ ಸಾರವ
ಸರಸದಿ ಕವಿಗಾರರೊಲಿದು ಕೇಳುವದು ॥
ಕ್ಷಿತಿಪತಿ ವರ ಪರೀಕ್ಷಿತನೊಂದು ದಿವಸದೊ
ಳ್ಯೆತಿಪತಿ ಶುಕಮುನಿಗತಿಶಯದಿ ಪೂಜಿ
ಸುತಲಿ ವೇದೋಕ್ತದಿಂದತಿನಯದಿ ನಮಿ
ಸುತಲಿ ಕೇಳಿದ ಭಕ್ತಿಯಿಂ ಭಯದಿ ಮುಂದೆ
ಕಥೆಯು ಕೃಷ್ಣಾರ್ಜುನರೊಳು ಕಾಳಗ ವಿಪ
ರೀತ ಕಾಂಬುದೆನುತ ಬಿನ್ನೈಸಲಾಕ್ಷಣದಿ ॥
ಧಾರುಣೀಪತಿ ಪರಿಪಾಲ ಪರೀಕ್ಷಿತ
ಪೂರ ಸಂತಸದಿಂದ ಕೇಳಿದನು ಪುರ
ದ್ವಾರಕಿಯಲಿ ವಾರಿಜಾಂಬಕನು ಹದಿ
ನಾರು ಸಾವಿರ ಮಂದಿ ಸ್ತ್ರೀಯರನು ನಿತ್ಯ
ಮಾರನಾಟದಿ ಸುಖ ಸೂರೆಗೊಡುತ ಕೃಷ್ಣ
ಮೀರಿದುಲ್ಹಾಸದಿಂದಿರಲೊಂದು ದಿವಸ ॥
ಯಮುನಾತೀರಕೆ ಬಂದು ಯಾದವಪತಿ ಕೃಷ್ಣ
ಗಮಕದಿ ಬಲರಾಮ ಸಹಿತದಲು ವಿಧಿ
ಕ್ರಮದಿಂದಲಿ ಸ್ನಾನವನು ಗೆಯ್ಯಲು ನಿಂದು
ಕಮಲಮಿತ್ರನಿಗರ್ಘ್ಯ ಕೊಡುತಿರಲು ಮತ್ತಾ
ಸಮಯದೊಳೇನೆಂಬೆ ಗಯ ಸತ್ಯಲೋಕಕ್ಕೆ
ಗಮಿಸುತಿರ್ದನು ತೇಜಿಯನೇರಿ ಭರದಿ ॥
ಗಂಧರ್ವನಾದ ಗಯನ ವಾಜಿ ಜೊಲ್ಲು ಮು-
ಕ್ಕುಂದನ ಹಸ್ತದಿ ಬೀಳುತಿರೆ ತನ್ನ
ದ್ವಂದ್ವ ಕಮಲಕರ ನೋಡುತಿರೆ ಎಂಜ-
ಲಂದದಿ ಕೋಪವ ತಾಳುತಿರೆ ಆಗ
ಮಂದರಧರ ಕೃಷ್ಣಮುನಿದು ಮಾಡಿದ ಭರ-
ದಿಂದಲಿ ಪಂಥವನೇನ ಪೇಳುವೆನು ॥
ದೇವರೊಳೀ ದಾನವರೊಳು ಮಾನವರು ಮತ್ತಿ-
ನ್ನಾವನೆಂಜಲವಾಗಲೆಂಬುತಲಿ ವಸು
ದೇವನಾಣಿಂದೆಂಟು ದಿವಸದಲಿ ಕೊಲ್ವೆ
ಹ್ಯಾವದಿಂದುಳಿದರೆ ಭೂಮಿಯಲಿ ಮತ್ತೆ
ಭಾವಜರಿಯ ಸಾಕ್ಷಿಯಗ್ನಿ ಕುಂಡದಿ ಬಿದ್ದು
ಜೀವವನಿಡೆನೆಂದ ಜಿದ್ದು ಮಾಡಿದನು ॥
ಹಲಧರನೆದುರೀಲಿ ಹಾಕಿದ ಪಂಥವ
ಬಲ ಸಹ ಪುರಕಾಗಿ ತಿರುಗುತಲಿ ಅಷ್ಟ
ರಲಿ ಮತ್ತಂಬರವಾಣಿ ಮರುಗುತಲಿ ಬಂದು
ಜಲಜಾಕ್ಷನಿಗೆ ಸುದ್ದಿಯರುಹುತಲಿ ಇಂಥ
ಛಲದಿಂದ ಹೂಣಿಕೆಯನಾಡ್ವರ ಗಯ ಅಂತ್ರ
ದಲಿ ಹಯವೇರಿ ಪೋಗಲು ಬ್ರಹ್ಮನಡಿಗೆ ॥
ಆ ಸಮಯದಲಿ ವಾಜಿಯ ಜೊಲ್ಲು ಭರದಿಂದ
ಸೂಸಿ ಕರದಿ ಬಂದು ಬಿದ್ದಿತಲ್ಲಾ ತೊಟ್ಟ
ಭಾಷೆಯ ಬಿಡು ದಯಮಾಡಿದೆಲ್ಲಾ ಮತ್ತಿ
ನ್ನೇಸು ಪಾಲಿಗೆ ಇದು ನ್ಯಾಯವಲ್ಲಾ ಎಂದಾ
ಕಾಶವಾಣಿಯ ಮಾತನ್ನಾಲಿಸಿ ಮಾಧವ
ಲೇಸಾದಿತೆಂದು ಮಹರ್ಭಟಕೆ ನೇಮಿಸಿದ ॥
ತಡಿಯದೆ ಯಾದವರೊಡನೆ ಪೇಳಿದ ಗಯ
ನಡಗಿರಲಿನ್ನಾವ ಲೋಕದಲಿ ಬಿಡ
ದ್ಹುಡುಕಿ ತಹುದು ನೀವಿನ್ನೆಂಬುತಲಿ ಪೇಳಿ
ನಡೆದು ಪೊಕ್ಕನು ಪುರ ತೀವ್ರದಲಿ ಗದ
ಬಡಸಿಯಂಬರವಾಣಿ ಬಂದು ಗಂಧರ್ವಗೆ
ಬಿಡದೆ ಪೇಳಿದ್ಹರಿಯೆಂದ ಪಂಥವನು ॥
ಇತ್ತಲಾಕಾಶವಾಣಿಯ ಮಾತ ಕೇಳುತ
ಮತ್ತೆ ಕುಬೇರಜ ಮನದೊಳಗೆ ಮರು
ಗುತ್ತ ಬಿದ್ದನು ಆಗ ಧರೆಯೊಳಗೆ ಹೊರ
ಳುತ್ತ ದುಃಖಿಸುತಲಿ ಹುಡಿಯೊಳಗೆ ತನು
ಬಿತ್ತಿತು ಭಯದಿ ಗಾಬರಿಗೊಂಡು ಬದಕುವ
ದೆತ್ತಣ ಗತಿಯೆಂದು ಗಯನು ಚಿಂತಿಸಿದ ॥
ಪಾಪವೆಳ್ಳಿನಿತಿಲ್ಲ ಶಿವಶಿವ ಎನ್ನೊಳು
ಶ್ರೀಪತಿ ವಿವರಿಸಿ ನೋಡದಲಿ ಅನ್ಯ
ಸ್ಥಾಪಿಸುವರೆ ತನ್ನ ಮನಸಿನಲಿ ಪಂಥ
ಕೋಪದಿಂದೆಸಗುರೆ ಛಲದಿಂದಲಿ ಇಂದು
ನಾ ಪರಿಣಾಮಗಾಣುವದಿಲ್ಲೆಂದು ಪ್ರ
ಳಾಪದಿಂ ಲೋಕವ ತಿರುಗಿಂದ್ರನಡಿಗೆ ॥
ಕ್ಷಮಿಸಲಾರದೆ ದುಃಖ ಶ್ರಮಬಡುತಲಿ ಬಂದು
ಅಮರೇಂದ್ರ ಕೇಳೆನ್ನ ಕಷ್ಟವನು ಮತ್ತೆ
ಯಮುನಾತೀರಕೆ ಬಂದು ಕೃಷ್ಣನನು ನಿಂದು
ಕಮಲ ಸನ್ಮಿತ್ರನಿಗರ್ಘ್ಯವನು ಈವ
ಸಮಯ ಕಾಲದಿ ನಾನಂತ್ರಮಾರ್ಗದೊಳಗೆ ಸಂ
ಭ್ರಮದಿಂದೆ ಹಯವೇರಿ ಪೋಗಲೇನೆಂಬೆ ॥
ಆ ಸಮಯದಿಯೆನ್ನ ಲಲಿತ ವಾಜಿಯ ಜೊಲ್ಲು
ಸೂಸಿ ಕೃಷ್ಣನ ಕೈಯೊಳ್ಬಿದ್ದಿತಂತೆ ಮಹಾ
ರೋಷದಿಂ ಪಂಥದಿ ಕೊಲ್ವನಂತೆ ಅಗ್ನಿ
ವಾಸವಾಗುವ ದಿನ ಮಿಕ್ಕದಂತೆ ಎನ್ನ
ಗಾಸರವಿಲ್ಲೆನ್ನ ಪ್ರಾಣ ಕಾಯುವದೆಂದು
ವಾಸವನಡಿಗಳಿಗೆರಗಿ ಪೇಳಿದನು ॥
ಆ ಗಯನಾಡಿದ ನುಡಿಗೇಳಿ ಸುರಪತಿ
ಯಾಗದೆಂದನು ಅಗ್ನಿ ಯಮರಾಜನು ಮೌನ
ವಾಗಿರೆ ನೈರುತಿ ವರುಣನನು ಎದ್ದು
ಹೋಗಲು ವಾಯು ಕುಬೇರನನು ಮುಂದೆ
ಸಾಗೆನ್ನಲೀಶಾನ್ಯನಡಿಯೊಳು ಬಿಟ್ಟು ಗದ್ದ-
ಲಾಗಿರಲಲ್ಲಿಂದ ಬಂದಜನಡಿಗೆ ॥
ತ್ವರಿತದಿಂ ಪೇಳಲು ಬ್ರಹ್ಮನಾಡಿದ ಮುಂದೆ
ಪರಮೇಶನಿಪ್ಪ ಕೈಲಾಸದಲಿ ಪೋಗೆಂ
ದೊರೆಯಲು ಬಂದನು ಶೀಘ್ರದಲಿ ಪುರ
ಹರನಿಗೊಂದಿಸಿ ಬಿದ್ದ ಚರಣದಲಿ ಎನ್ನ
ಪೊರೆಯಯ್ಯ ಜೀವದಾನವ ಕೊಟ್ಟು
ಮುರಹರ ಭರದಿ ಕೊಲ್ಲುವನೆಂದು ಮರಮರುಗಿದನು ॥
ತುಟ್ಟತುದಿಯ ಮರನೇರಿ ವಾನರ ಕೈಯ
ಬಿಟ್ಟಂತೆ ಮಾಡಿದ ಪರಶಿವನು ಆಗ
ತಟ್ಟಿಸ್ಯಾಡಲು ಗಯ ನಡುಗಿದನು ನಾನು
ಕೆಟ್ಟೆನೆನ್ನುತಲಾಗ ಬೆದರಿದನು ದಯ
ಹುಟ್ಟಿತು ಪಾರ್ವತಿ ನೋಡಿಯಾತಗಭಯ
ಕೊಟ್ಟು ಮನ್ನಿಸಿ ಮತ್ತೆ ನುಡಿದಾಳಾ ಹರಗೆ ॥
ಮಾರಸಂಹರ ಕೇಳು ನಿನ್ನ ಹೊರತು ಸಧ್ಯ
ಮೂರು ಜಗದೊಳಿಲ್ಲ ನೋಡಿದನು ಗಯ
ಈರೇಳು ಲೋಕವ ತಿರುಗಿದನು ಮತ್ತಿ
ನ್ನಾರಾರ ಕಾಣನು ಕಾವವರನು ಸರ್ವ
ಕಾರಣ ಮೂರುತಿ ಕಾವುದೈ ಧನಪಕು
ಮಾರನ ಪ್ರಾಣವನೆಂದಳಾ ಗೌರಿ ॥
ತಿಳಿಯದು ಪಾರ್ವತಿ ನಿನಗೆ ಮುಂದಿನ ಮಾತು
ಇಳೆಯ ಜಾರ ಕೃಷ್ಣನಿಳುಹುವನು ಮತ್ತೆ
ಬಳರ ಸಂದಣಿಯ ಸಂಹರಿಸುವನು ಆತ
ನೊಳು ಸಲ್ಲ ಮಾಳ್ಪರೆ ಕಲಹವನು ಇಂಥ
ಛಲವಿದ್ಯಾತಕೆ ಸುಳ್ಳು ಮಾತಿಗೆ ನೀ ಮನ
ತಿಳಿದಂತೆ ಮಾಡೆಂದು ಶಿವ ಮಾಯವಾದ ॥
ಬಾರೊ ಗಂಧರ್ವಜ ಗಯನೆ ನಿನ್ನಯ ಮಾತು
ಮಾರಾರಿ ಮನಸಿಗೆ ತಾರದಾದ ಸುಕು
ಮಾರ ನಿನಗೆ ನಿಜದೋರದಾದ ಸುವಿ
ಚಾರದಿಂದುಕ್ತಿಯ ಸಾರದಾದ ಶತ
ನೂರು ಪಾಲಿಗೆ ಕಷ್ಟ ಬಂದುದು ಕೇಳ್ಮುಂದೆ
ನಾರದನಲ್ಲಿಗೆ ಪೋಗೆಂದಳುಮೆಯು ॥
ತನಯನೆ ಕೇಳು ನಿನ್ನುಳಿವುದಪಾಯವು
ಅನುವ ಪೇಳುವ ಪೋಗಿನ್ನೆಂಬುತಲಿ ಗೌರಿ
ಯೆನಲಾಗ ಚರಣಕ್ಕ ನಮಿಸುತಲಿ ಆಗ
ವಿನಯದಿಂದಪ್ಪಣೆಗೊಳ್ಳುತಲಿ ಹೊರ
ಟನು ಗಯ ಹಿಮಚಲವನು ಬಿಟ್ಟು ಮಾರ್ಗದಿ
ಮುನಿವರ ನಾರದನರಸುತ ನಡೆದ ॥
ಕಂಬನಿಗರೆವುತ ಕಳವಳಗೊಳ್ಳುತ
ಮುಂಬರಿದಳಲುತ ಮನಸಿನೊಳು ಬಲು
ಹಂಬಲಿಸುತ ಜೀವದಾಸೆಯೊಳು ಮತ್ತಿ
ನ್ನಂಬರವನು ಬಿಟ್ಟು ಭೂಮಿಯೊಳು ಗಯ
ನಂಬರ ಸಕಲದೇಶವನೆಲ್ಲ ಹುಡುಕುತ
ಸಂಭ್ರಮದಲಿ ಮುನಿ ಬರ್ಪನೇನೆಂಬೆ ॥
ಸುರಮುನಿ ನಾರದ ಸರಿದನಂಬರದಿಂದೆ
ಕೊರಳೊಳು ತುಳಸಿಯ ಮಾಲೆಯಿಂದ ಕರ
ಬೆರಳೊಳು ಜಪಮಣಿ ಸರಗಳಿಂದ ತನು
ಧರಿಸಿಹ ಭಸ್ಮಲೇಪನಗಳಿಂದ ಹರಿ
ಸ್ಮರಣಹೃದಯನಾಗಿ ಪರಮ ವಿಲಾಸದಿ
ಬರುವಂಥ ಸಮಯದಿ ಕಂಡನಾ ಗಯನು ॥
ಇಂತಪ್ಪ ನಾರದನನು ಕಂಡು ಗಯ ಪದ
ಕ್ರಾಂತನಾಗಲು ಮುನಿ ನೋಡುತಲಿ ಕರ
ವಾಂತು ಮಸ್ತಕಕಾ ಗಯ ಬೀಸುತಲಿ ಮುಖ
ಕಾಂತಿಗುಂದಿರಲಾಗ ಕೇಳುತಲಿ ನಿನ್ನ
ಚಿಂತೆ ಯಾವುದು ಬಹಳ ಬಳಲಿದಿ ಮಗನೆ ನಿ
ನ್ನಂತರಂಗದ ತಾಪ ತಿಳಿಸೆನಗೆಂದ ॥
ತಂದೆ ಚಿತ್ತೈಸು ಮುಕ್ಕುಂದ ಯಮುನೆಜಲ
ಮಿಂದಾಗ ಸೂರ್ಯನಿಗರ್ಘ್ಯವನು ಕೊಡ
ಲಂದು ಬ್ರಹ್ಮನ ವರ ಸಖಿಗೆ ನಾನು ನಲು-
ವಿಂದ ವಾಜಿಯನೇರಿ ಪೋಗುವನು ಕರ
ದ್ವಂದ್ವದಿ ಕುದುರೆಯ ಜೊಲ್ಲು ಬೀಳಲು ಕಡು
ನೊಂದು ನಂದನನಂದ ಶಪಥ ಮಾಡಿದನು ॥
ಅತ್ಯಂತ ಕೋಪದಿಂದೆಂಟು ದಿವಸದೊಳು
ಕುತ್ತಿಗೆ ಕೊಯ್ವೆನೆಂದಾಡಿದನು ದಿನ
ಮತ್ತೆ ಮೀರಲು ಅಗ್ನಿ ಬೀಳುವನು ಛಲ
ವೆತ್ತಿದ ಸುದ್ದಿಯ ಕೇಳಿದೆನು ಭಯ
ಹತ್ತಿ ನಾ ಸುತ್ತ ಲೋಕವನೆಲ್ಲ ಸುತ್ತಿ ಬ್ಯಾ-
ಸತ್ತು ಬಳಲಿ ಬಂದೆನಿದ್ರನಿದ್ದೆಡೆಗೆ ॥
ಅಷ್ಟದಿಕ್ಪಾಲಕರು ಕೃಷ್ಣನೆನ್ನಲು ಗದ
ಗುಟ್ಟಿ ನಡುಗಿದರು ಕೇಳಿದನು ಪರ
ಮೇಷ್ಟಿ ಶಿವನ ಮುಂದೆ ದೂರೆಂದನು ಕೈಯ
ಬಿಟ್ಟು ಪೋದನು ಅಂಥಾ ಪರಶಿವನು ದಯ
ಹುಟ್ಟಿ ಪಾರ್ವತಿ ದೇವಿ ಕರುಣದಿಂದಲಿ ನಿನ್ನ
ಬಟ್ಟೆದೋರಿದರೀಗ ಬಂದೆ ನಾನನಲು ॥
ಅಕ್ಕಟ ಮುನಿರಾಯ ದಿಕ್ಕಿಲ್ಲಯೆನಗತಿ
ದುಕ್ಕದಿ ಮುಂದಿನ ಯುಕ್ತಿಯನು ಎನ್ನ
ಮಿಕ್ಕಿತೆನ್ನಲು ಮುನಿ ಪೇಳಿದನು ಮೊರೆ
ಹೊಕ್ಕರೆ ಕಾಯ್ವನು ಫಲ್ಗುಣನು ಮತ್ತೆ
ಹೆಕ್ಕಳವರಾರಿಲ್ಲ ಧರೆಯೊಳು ತಿಳಿ ನಿನ್ನ
ರಕ್ಷಿಪನೆಂದು ಪೋಗೆನ್ನಲಾ ಗಯನು ॥
ಪಾರ್ಥನೆಂಬವನಾರು ತಿಳಿಯದಿನ್ನಾತನ
ವಾರ್ತೆಯ ಪೇಳು ನೀನೆಂದೆನುತ ಪುರು
ಷಾರ್ಥಮಾಗಲಿ ನಿನ್ನ ನುಡಿಯೆಂಬುತ ಎನ್ನ
ವ್ಯರ್ಥದಿ ನೀ ಕೊಲ್ಲಬ್ಯಾಡೆನುತ ಎಲೋ
ಸ್ವಾರ್ಥದ ಮಾತಲ್ಲ ಸಂದೇಹವ್ಯಾತಕೆ ನಿ-
ರರ್ಥ ಮಾಡುವದಿಲ್ಲ ಕೇಳೆಂದ ಮುನಿಪ ॥
ಕುರುಪತಿಯೊಡನೊಂದು ಜೂಜಾಡಿ ಪಾಂಡವ
ರಿರದೆ ಸೋಲಲು ಕುಂಭಜಾದಿಗಳು ಅಂಗ
ಪುರವರನು ಬಿಡಿಸಿ ಕಾಂತಾರದೊಳು ಮ
ತ್ತೊರುಷ ಹನ್ನೆರಡೊನವಾಸದೊಳು ತಂದು
ತರುಣಿ ಸಹಿತಲೊಂದು ಅಜ್ಞಾತವಾಸದಿಂ
ದಿರುವರು ಕಾಮ್ಯಕಾವನದಿ ಕೇಳೆಂದ ॥
ಬಂದು ಪಾಂಡುವರಲ್ಲಡವಿಯೊಳ್ ಮತ್ತ್ಹ
ನ್ನೊಂದು ವತ್ಸರವಾಯ್ತು ಪೋಗೆಂದನು ಪಾರ್ಥ
ಇಂದುಧರನ ಕೂಡ ಯುದ್ಧವನು ಮಾಡಿ
ಒಂದು ಬಾಣವನಂದು ಪಡೆದಿಹನು ಕೇಳು
ಇಂದಿಗೆ ಇದರಿಲ್ಲ ಈರೇಳು ಲೋಕದೊಳಿಂದು ಇ
ನ್ನೊಂದು ಯುಕ್ತಿಯ ಪೇಳ್ವೆನೆಂದ ॥
ಪೋದಾಕ್ಷಣವೆ ಪಾರ್ಥನಡಿಯ ಪಿಡಿದು ಮುನ್ನ
ನೀ ದುಃಖದಲಿ ಪ್ರಾಣ ದಾನವನು ಬೇಡು-
ತಾ ದಯದಿಂದಲಿ ಹೇಳುವನು ಕೇಳಿ
ದಾದರೆ ನೀ ಸುಮ್ಮನಿರುಯೆಂದನು ಧರ್ಮ
ಭೂಧವನಡಿಯಾಣೆಯಿತ್ತಡೆ ಮಾತಾಡು
ಆದ ವೃತ್ತಾಂತವ ಮೇಲೆ ಪೇಳೆಂದ ॥
ಮುನಿವರನಡಿಗಳಿಗೆರಗಿ ಗಯನು ಮತ್ತೆ
ವಿನಯದಿಂದಪ್ಪಣೆಗೊಳ್ಳುತಲಿ ನಡೆ
ದನು ಕಾಮ್ಯಕವನ ಹುಡುಕುತಲಿ ಪಾರ್ಥ
ನನು ಕಂಡು ಪಾದವ ಪಿಡಿಯುತಲಿ ತನ್ನ
ತನುವನೀಡಾಡಿ ತಾತನೆಯೆನಗೊದಗಿದ
ಘನ ಭಯವನು ಪರಿಹರಿಸು ನೀನೆನಲು ॥
ನೋಡಿದನರ್ಜುನನೀ ಗಯನಿರವನು
ಕಾಡಿನೊಳಗೆ ಬಂದದ್ದೇನೆನುತ ಮುಖ
ಬಾಡಿ ಬಳಲಿ ದೇಹ ಬೆಂಡಾಗುತ ಮತ್ತೆ
ಕೋಡಿವರಿದು ಜಲ ಕಣ್ಣಿಲೆ ತಾ ಮಾತ
ನಾಡು ಮಗನೆ ಮನ ಕರಗಿ ಮುರುಗಿತೆನ್ನ
ಕೂಡ ಸಂದೇಹವು ಬ್ಯಾಡ ನೀಯೆನಲು ॥
ಏನು ಪೇಳಲಿ ಜೀಯ ದೇಹಿಯೆಂಬುತ
ಪ್ರಾಣದಾನ ಬೇಡುವೆ ಈಯಬೇಕೆನುತ ಸಾವ
ಧಾನದಿ ನರನ ಕೀರ್ತನೆಗೈಯುತಾ ಸಣ್ಣ
ಸೂನುಯೆಂಬುತ ಕರುಣದಿ ನೋಡುತ ನಿನ್ನ
ಹಾನಿಯಾವುದು ಪರಿಹರಿಸುವೆ ಧರ್ಮಜ
ಭೂನಾಥನಾಣೆಂದು ಸಟೆಯಲ್ಲವೆನುತ ॥
ಮೇರು ಮಸ್ತಕದೊಳು ಬೀಳಲಿ ವಾರಿಧಿ
ಮೇರೆದಪ್ಪಲು ಒಮ್ಮೆ ಸುರರೊಳಗೆ ಎನ್ನ
ಮೀರುವರಾರುಂಟು ರಣದೊಳಗೆ ಚಂದ್ರ
ಮಾ ರವಿ ಪಶ್ಚಿಮದಿಸೆಯೊಳಗೆ ಮೂಡಿ
ತೋರುವರೊಮ್ಮೆಂದ ಭಾಷೆಗೆ ಕುಂದಿಲ್ಲ
ಮಾರಾರಿ ಪದದಾಣೆ ಸತ್ಯ ಹೇಳೆಂದ ॥
ಅಂಜದೆ ಪೇಳ್ವೆ ಧನಂಜಯ ಕೇಳು ಆ
ಕಂಜಲೋಚನನರ್ಘ್ಯಕಾಲದಲಿ ಅಜ
ರಂಜಿಪ ಸಭೆಗೆ ನಾ ತವಕದಲಿ ಪೋಪೆ
ಮಂಜುಳವಾ ಜೊಲ್ಲು ಬೀಳುತಲಿ ನೋಡಿ
ಯೆಂಜಲೆನ್ನುತ ಕೋಪ ತಾಳಿ ಶ್ರೀ ಕೃಷ್ಣನು
ಅಂಜಿಸಿ ಪಂಥವ ಮಾಡ್ದನೇನೆಂಬೆ ॥
ಕಂಜಾಕ್ಷ ದಿನ ಎಂಟರೊಳು ಕೊಲ್ಲದಿರಲು ಧ
ನಂಜಯವಾಸ ನಿಶ್ಚೈಸಿದನು ಗುಲ
ಗಂಜಿಯಷ್ಟಿಲ್ಲೆನ್ನ ಪಾಪವನು ಗಿಳಿ
ಪಂಜರ ಮುರಿದಂತೆ ಮಾಡಿದನು ಸವಿ
ಪಂಜರ ನೀಯೆನ್ನ ರಕ್ಷಿಪುದೆನುತ ಧ-
ನಂಜಯನಿಗೆ ಮಗುಳೆರಗಿದ ಗಯನು ॥
ಧ್ಯಾನಿಸಿ ಕೇಳ್ವಾಕ್ಷಣವೆ ಪಾರ್ಥ ಶಿವಶಿವ
ಸೂನುವಿಗೆ ಮನ ಕರಗಿತಲ್ಲಾ ಅಯ್ಯ
ನಾನಿತ್ತೆ ಮುಂದಾಗಿ ಭಾಷೆಯಲ್ಲಾ ಸಧ್ಯ
ಹಾನಿ ತಂದನು ಮೋಸವಾಯಿತಲ್ಲಾ ಇದು
ಏನಾಯಿತಕ್ಕಟ ಈ ಪಾಪಿ ಗಂಧರ್ವಜ
ತಾನೆತ್ತಲಿಂ ಬಂದನೆಂದರ್ಜುನನು ॥
ದುಷ್ಟ ಗಯನ ಕಂಡು ದೂರಾಗಲಿಲ್ಲವು
ಕೃಷ್ಣನೊಡನೆ ಯುದ್ಧವೆಸಗಿದರೆ ಕಾರ್ಯ
ಕೆಟ್ಟು ಪೋಪುದು ಮುಂದೆ ನೋಡಿದರೆ ಈಗ
ಕೊಟ್ಟ ಭಾಷೆಗೆ ನಾನು ತಪ್ಪಿದರೆ ಇದು
ಸೃಷ್ಟಿಯೊಳಗೆ ಬಲು ಭ್ರಷ್ಟತ್ವ ಬಂದುದು
ದೃಷ್ಟವೇನಾಗುವದೆಂದಳಲಿದನು ॥
ಈ ಪರಿ ಚಿಂತೆಯೊಳಿರೆ ಪಾರ್ಥ ಧರ್ಮಜ
ಭೂಪ ತಾನಿನಿತೆಲ್ಲ ನೋಡಿದನು ಗಯ
ನಾ ಪೂರ್ವ ವೃಂತ್ತಾಂತ ಕೇಳಿದನು ಅಯ್ಯ
ಪಾಪಿ ಕೌರವನಿಂದ ಅಡವಿಯನು ಸೇರಿ
ಶ್ರೀಪತಿ ಪುಣ್ಯದಿಂದಿರ್ದೆವೆಂದರೆ ವಿಧಿ
ಈ ಪರಿ ಮಾಡಿತೇ ಶಿವ ಶಿವಾಯೆಂದ ॥
ಹುಲಿಗಂಜಿ ಹೋಗಿ ತಾ ಹುತ್ತವ ಹೊಕ್ಕರೆ
ಒಳಗಿನ ಸರ್ಪಗಾಹುತಿಯಂದದಿ ಘೃತ
ಕೊಳುತಿರೆ ದೇಹವ ಸುಡುವಂದದಿ ಮತ್ತೆ
ಜಲ ತಂದು ಜೇನಿನೊಳ್ ಬಿಟ್ಟಂದದಿ ಇಂದು
ಜಲಜಾಕ್ಷನೊಳು ಛಲ ಹಿಡಿದು ಕಾದಲು ಸರ್ವ
ಕೆಲಸ ಕಾರ್ಯ ಕೆಟ್ಟಿತೆಂದ ಧರ್ಮಜನು ॥
ಘಾತವಾಯಿತು ತಮ್ಮ ಈ ತರುಳಗೆ ಮುನ್ನ
ಮಾತು ಕೊಟ್ಟುದದು ಬ್ಯಾಗಡಿಯ ತಂದು ಸ್ವರ್ಣ
ನೂತನದಸ್ತ್ರವಾಗದು ಇಂದು ಎಂಬ
ರೀತಿಯಾಯಿತು ಹಿಂದೆ ಸಭೆಯೊಳೊಂದು ದ್ರೌಪ
ದಾ ತರುಳೆಯ ಮಾನ ಪೋಗಲಾ ಸಮಯದಿ
ತಾ ತವಕದಿ ಕಾದನೊಡನೆ ಕಾಳಗವೆ ॥
ತಾಸು ಹನ್ನೊಂದು ಆಗಿರಲಾಗ ಬಂದು ದು
ರ್ವಾಸ ಭಿಕ್ಷವ ಬೇಡೆ ತವಕದಲಿ ಇದು
ಮೋಸವಾದುದು ಎಂದಾ ಸಮಯದಲಿ ಬಂದು
ಗ್ರಾಸವ ಸಲಹಿದ ಮಮತೆಯಲಿ ಇಂಥ
ವಾಸುದೇವನ ಕೂಡ ಒಲುಮೆಯ ಪಂಥವು
ಲೇಸವೇಯೆಂದೆಮಜಾತ ಚಿಂತಿಸಿದ ॥
ಎಂದಿಗಾದರು ಕುಂದು ಕೊರತೆ ನೋವುಗಳನು
ಬಂದರೆ ತಾ ನೊಂದುಕೊಂಬುವನು ದಯ
ದಿಂದೆಮ್ಮನೆಲ್ಲರ ಸಲಹುವನು ತಮ್ಮ
ತಂದಿ ಈ ಗತಿ ಕನಿಷ್ಠವನು ಅಯ್ಯ
ನಿಂದಕ ಗಯನಿಂದೆ ಬಂದುದೆಂಬುತ ಯಮ
ನಂದನ ಮೂರ್ಛೆಯಿಂ ಬಿದ್ದುರುಳಿದನು ॥
ತೆರೆಯದೆ ಕಣ್ಣು ಸೂರ್ಗರೆವುತ ಸುಣ್ಣದ
ಗಿರಿಯಾಬ್ಧಿಯೊಳಗಿಟ್ಟ ಪರಿಯಂದದಿ ಚಿಂತಾ
ತುರನಾಗಿ ರಾಜ ಮೈಮರೆವುತಲಿ ಇಂಥ
ಪರಿಯ ಕಾಣುತ ಭೀಮ ತ್ವರಿತದಲಿ ಬಂದು
ಅರಸನ ಪಿಡಿದೆತ್ತಿ ಬಂದ ವಿಪತ್ತಿಗೆ
ಇರಬೇಕು ಧೈರ್ಯವೆಂದ ಮರುತಜನು ॥
Leave A Comment