8. ದಕ್ಷಬ್ರಹ್ಮನ ಕಥೆ

ಏರ

               ಸಿಂಧೂರ ಮುಖದವನೇ ದ್ವಂದ್ವ ಕರಗಳನ್ನು ಮುಗಿದು
ವಂದನೆ ಮಾಡಿ ನಮಿಸುವೆನು ……ಪಲ್ಲ

ಚಾಲ

               ಸಿದ್ಧಿ ವಿನಾಯಕ ವಿದ್ಯೆ ಸಾಗರಾ
ಶುದ್ಧ ಸಭಾ ಮಂಟಪಾ  ಕೂಡಲೇ ಬುದ್ಧಿ ಕೊಡೋ ಈ ಗಣಪಾ ॥
ಪೃಥ್ವಿ ಪಾಲಿಪ ಗಣಪಾ ಅಕ್ಷರ ತಿದ್ದಿ ಮಾಡೋ ಸಾಹಿತಾ
ಕರುಣಾ ಸಾಗರಾ ಮರಣ ರಹಿತನೇ ರಾಣಿ ತೊಡೆಯ ಮೇಲೆ ಕೃಪಾ
ಜೀರಣ ಮಾಡಿ ಸುತ್ತಿದಿ ಸರಪಾ
ಕುಕ್ಷಿಗೆ ಪೂರ್ಣ ಬಿದಗಿ ಚಂದ್ರಗ ಇಟ್ಟಿ ಶಾಪಾ
ವಂದನೆ ಮಾಡಿ ನಮಿಸುವೆನು ಇಂಚಲದ ಕಂದನ ಮ್ಯಾಲ
ಕರುಣಾ ಇರಲಿ                                                                                             ॥

ಏರ

               ದಕ್ಷಬ್ರಹ್ಮನ ಕಥೆ ಲಕ್ಷಿಟ್ಟು ಲಾಲಿಸಿರಿ
ನಕ್ಷತ್ರ ಪತಿಯ ಧರಿಸುವರು ॥

1

ಸಣ್ಣ ದೊಡ್ಡ ಜನಾ ಚೆನ್ನಾಗಿ ಕೇಳರಿ
ಉನ್ನತವಾದ ಕಥೆಯ

ಚಾಲ

               ಹೇಳುವೆನು ಪನ್ನಂಗಧರನ ಸತಿಯ ಬಣ್ಣ ಬಡಿಯುತ
ಗನ್ನ ಘಾತಕನೆಂದು ಹೇಳ್ಯಾಲ ಪಾರ್ವತಿಯೆ ಇದ್ದಮ್ಯಾಲ
ಯಾರಾದರ ಗತಿಯಾ
ನಾ ಅಂದ್ರ ನರಕ ಪ್ರಾಪ್ತಿ ಸಾರತಾವ ಸೃತಿಯಾ
ಇನ್ನ ಮುಂದ ಕೇಳರಿ ಕ್ಷೇಮ
ದಕ್ಷಬ್ರಹ್ಮ ಮಾಡಿದ ಹೋಮಾ ॥

ಏರ

               ನಕ್ಷತ್ರ ಪತಿಯ ಧರಿಸಿದನೋ ಹೋಮವನು
ಆ ಕ್ಷಣ ಮಾಡಿ ಬ್ರತಗೆಟ್ಟಾ ॥

2

ಗದ್ಧರಿಸಿ ಗದ್ಧರಿಸಿ ರುದ್ರ ಅವತಾರ ತಾಳಿ
ಭದ್ರ ಹುಟ್ಟಿದನೋ ಅದಕಾಗಿ

ಚಾಲ

               ಲಾಲಿಸಿ ಕೇಳಿರಿ ಮೇಲಾದ ಕಥಿ ನೀವಾ
ಲೀಲಾ ಹೇಳುವೆ ನಾನು
ಬಲ ವೀರಭದ್ರ ಮಾಡಿದ ಕದನ
ತೊದಲ ನುಡಿಯಿಂದಾ ನಾ ಮೊದಲ ಹೇಳತೇನೋ
ಬದಲ ಬಿದ್ರ ಬೆನ್ನಾ
ಹಾಸ್ಯ ಮಾಡಿ ಕದಲಬ್ಯಾಡ್ರಿ ಜನಾ
ಮಂದಮತಿ ನನಗೆ ಬಂದಷ್ಟು ಹೇಳತೇನೋ
ಮುಂದಿನ ಸಂದವನ್ನು
ದಕ್ಷಬ್ರಹ್ಮಗ ಬಂತೊ ಗರ್ವಾ
ಅವನ ಮ್ಯಾಲ ಮುನಿದ ಗುರುವಾ

ಏರ

               ಭದ್ರ ಹುಟ್ಟಿದನೋ ಅದಕ್ಕಾಗಿ ದಕ್ಷನ್ನ
ಚಿದ್ರ ಮಾಡಿ ಬಿಟ್ಟ ಕಥಿ ಕೇಳೋ

3

ಚಂದ್ರಮುಖಿ ಪಾರ್ವತಿಯಮ್ಮಾ
ತಂದಿ ದಕ್ಷಬ್ರಹ್ಮ ಅಂದಾನೋ ತನ್ನ ಮನದೊಳಗ

ಚಾಲ

               ಭವನ ಕರ್ತಾ ಶಿವಗ ನಾವು ಮಾವನಾಗ ಬೇಕಿನ್ನ
ಯಾವನ ಅಂಜಿಕಿಯೇನ ಇಲ್ಲ ನನಗಿಂದ
ಇಂದುಧರಗ ನನ್ನ ಮಗಳ ಸುಂದ್ರ ಪಾರ್ವತಿನ್ನ ಕೊಟ್ಟ ಮಂದ
ಹಾಸದಿಂದ ನನ್ನ ಉಮ್ಮೇದ
ಹರನು ಅಳಿಯ ಆದಮ್ಯಾಲ ಹರಿ ಬ್ರಹ್ಮರಿಬ್ಬರು ನನ್ನ
ಚರಣ ಸೇವಕರು ಸಜ್ಜ
ಅದರಂತೆ ಇದರಿಲ್ಲ ನನಗ ಯಾರು ಪ್ರಸಿದ್ಧ
ಸತ್ತವರ ಲೋಕ ವೈಕುಂಠವು ಮತ್ತು ಕೈಲಾಸದಕ್ಕಿಂತ ನನ್ನಕ್ಕಿಂತ ದೊಡ್ಡವರಿಲ್ಲ
ನಾನಾ ಭಾಳ ಉದ್ದ ಮೂರಲೋಕ ನೊರಜಿನ ಪರಿ ಹಾರಿದಂಗ ಕಾಣಸ್ತೈತಿ
ಹರಾ ನನಗ ಅಬರು ಕೊಡತಾನ ಎದ್ದು
ಇಷ್ಟ ತಿಳಿದ ದಕ್ಷಬ್ರಹ್ಮ ಚಟ್ಟನೆದ್ದ ಕೈಲಾಸಕ್ಕ ಹೊರಟ
ಹೋದ ಹೋದ ಹಮ್ಮಿನಿಂದ
ನೆಟ್ಟಗೋಗಿ ಬಾಗಿಲದೊಳು ನಿಂತಿದ್ದ
ನೀಲಕಂಠ ಶಿವ ನನ್ನ ಕಾಲಮ್ಯಾಲ ಬೀಳತಾನ ಮೇಲಾದೆ
ನನ್ನ ಹೊರತ ಯಾರಿಲ್ಲ
ಮಾವನೆಂದು ಕರದು ಸಿಂಹಾಸನ ತಾ ಕೊಟ್ಟ ಸಿಂಹಾಸನದ ಕೆಳಗ
ತಾ ಕೂಡ್ರತಾನ ನಿರ್ವಾ ಇಲ್ಲ
ಮನಸಿನೊಳು ದಕ್ಷ ಬ್ರಹ್ಮ ತಾನೇ ತಾನೆ ಗೇನಸ್ತಾನಾ
ಅನುಮಾನವಿಲ್ಲ ನನಗಿನ್ನು ಯಾತರದು
ಇದರಿಲ್ಲ ನನಗೇನು ಪ್ರಸಿದ್ಧ

ಏರ

               ಅಂದಾನೋ ತನ್ನ  ಮನದೊಳಗ ಕೈಲಾಸವ
ಹೊಂದಿ ಬಾಗಿಲಕ ನಿಂತುಕೊಂಡ

4

ಅರಿಕಿ ಇಲ್ಲದ ಶಿವನು ತಿರಕ ಜಂಗಮ ನನ್ನ
ಕರಕೊಂಡ ಮಾನ ಕೊಡಲಿಲ್ಲ

ಚಾಲ

               ಕೈಗಾಯುತ ಬನ್ನಿ ಇಷ್ಟ ದಿನಾ ಉದ್ದಾದ ಶಂಕರನ್ನ
ಮಾಡಬೇಕ ಹ್ಯಾಂಗ ॥
ನನ್ನ ಮಾಡಿದಾ ಕಾಲಕಸದಂಗ
ಎಷ್ಟ ಸುಮಾರ ಕಂಡೇನ ನಾ ಇವಗ
ಮಗಳ ಕೊಡಬಾರದಿತ್ತೋ ಈ ಜಗಳಗಂಟ ಜಂಗಮಗ  ಈ ಜಂಗಮಗ
ಇನ್ನೇನ ಮಾಡಲಿ ಮಸಲತ್ತ ದಕ್ಷಬ್ರಹ್ಮನಿಂತ
ತಪ್ಪ ಮಾಡ್ಯಾನೋ ಅಪಮಾನ ಆಗಿ ಹಿಂದಕ ಹೋಗ್ಯಾನೋ
ಸಿಟ್ಟ ಬೆಂಕಿ ಕಿಡಿ ಕಾರ್ಯಾನೋ ಕಾರ್ಯಾನೋ

ಏರ

               ಕರಕೊಂಡ ಮಾನ ಕೊಡಲಿಲ್ಲೊ
ದಕ್ಷಗ ದಾಕ್ಷಿಣ್ಯ ಇಲ್ಲೊ ಯಾರ್ಯಾರದು

5

ಖೊಟ್ಟಿ ಶಿವನನ್ನು ಕೊಂದ ಕಟ್ಟಬೇಕೋ ಕೈಲಾಸಕ
ಪಟ್ಟವನ್ನು ನಮ್ಮ ಸ್ತ್ರೀಯರಿಗೆ

ಚಾಲ

               ಲಕ್ಷಗಾವುದದಾ ಏಳನೂರ ಗಾವುದ ಅಡ್ಡಾಗಲ
ಕುಂಡಾ ತಗಸಿದಾರ ಹೋಮ ಮಾಡೋದಕ
ಗಣತಿ ಇಲ್ಲದ ಎಣ್ಣಿ ಕೊಂಡಾ ಕುಣಕೋತ ಬ್ರಾಹ್ಮಣರ ಬಂದಾರ
ಹಣಿಸಿದಾರೋ
ಕುಂಡದೊಳಗ ನಕ್ಕೊಂತ ಒಂದ ಕ್ಷಣದೊಳಗ
ಹೋಗತಾನ ಶಿವಸತ್ತಾ
ಮಲ್ಲಂಭಟ್ಟನು ಬಂದ ಕಲ್ಲಂ ಭಟ್ಟನು ಬಂದಾ
ಎಲ್ಲಂ ಭಟ್ಟರೆಲ್ಲಾ ಕೂಡಿದರು
ತಿಮ್ಮನ ಭಟ್ಟರು ಭಾಳ ಹಮ್ಮಿಂದ ಅಂತಾನ
ಸಮ್ಮಂತ ಆಡಿ ನನಗ ಮಜಕೂರಾ
ನೀಲಕಂಠ ಶಿವಗ ಇಂದ ಕಾಲ ಬಂದ ಸಾವತಾನ
ಮೂಲವಾಗಿ ಕುಂತಿದ್ದ ನಮ್ಮ ಜನಕ
ಕೃಷ್ಣಭಟ್ಟ ಅಂತಾನೋ ಹೌದ ಅದಕ

ಏರ

               ಪಟ್ಟವನ್ನು ನಮ್ಮ ಸ್ತ್ರೀಯರಿಗೆ ಕೊಟ್ಟರ
ನೆಟ್ಟಗಿರುವದು ನಮ್ಮ ದೈವ

6

ನೀಚ ಹಾರೋರೆಲ್ಲಾ ವಂಚನೆಯ ಮಾಡಿದಾರೋ
ಪಂಚ ಮುಖದವನ ಕೊಲ್ಲೋದಕ

ಚಾಲ

               ಗುಂಡ ಭಟ್ಟ ಅಂತಾನೋ ತಕ್ಕೋ
ಮಂಡಿಗಿ ಬರಿ ನಿರ್ಮಳದ್ದಾ
ಸಂಡಿಗಿ ಹಪ್ಪಳ ಭಾಳ ಸಿಸ್ತಾ ॥
ನೀರ ಕುಡಿ ಬ್ಯಾಡರಿ ಹೋಳಿಗಿ ಹೊಡಿರಿ ಮತ್ತೊಂದ ಹತ್ತಾ ॥
ಕ್ಷೀರನ್ನ ಕರಿಗಡಬು ಏರಿಸಿ ಉಣ್ಣಿರಿ ಮತ್ತಾ
ಸವಿಸಾರ ಸುರಕೊ ಪಂಚಾಮೃತಾ
ಡೊನ್ನಿ ಡೊನ್ನಿ ತುಪ್ಪ ಯಾರದೇನು ಖಬರ ಇಲ್ಲ ಮತ್ತಾ
ಹೊಟ್ಟಿ ಮ್ಯಾಲ ಕೈಯಾಡಿಸಿ ಜುಟ್ಟಲ ಕೂದಲ ಬಡಬಡ ಕೊಂತ
ಊಟಮಾಡತಾರ ನಕ್ಕೋಂತ
ಈಶ್ವರನ ಸಾವ ಗಟ್ಟಿ ಬಂತ ಇಂದ ಸಿದ್ಧಾಂತ
ಕರಚಿಕಾಯಿ ತುಪ್ಪ ಉಂಡ ಹರಕಿ ಕೊಟ್ಟ ಹಾರೋರೆಲ್ಲಾ
ದಕ್ಷಿಣ ಕೊಡರೆಂತ ಬೇಡತಾರ
ಇಸಗೊಂಡ ದುರುಳ ದಕ್ಷ ಬ್ರಹ್ಮನ ಕೊಂಡಾಡುತ

ಏರ

               ಪಂಚಮುಖದವನ ಕೊಲ್ಲೋದಕ ಹಾರೋರು
ಹಂಚಿಕಿ ಹಾಕಿದರೋ ಹರುಷದಲಿ

7

ಹಿಂದ ಮುಂದ ನೋಡದಲೆ ಚಂದನ ಹಾಕ್ಯಾರು ಅಗ್ನಿ
ದುಂದ ಆದೀತೋ ಧುಮಿಕಿಸಿತೋ

ಚಾಲ

               ಭುಗಿ ಭುಗಿಲ ಹತ್ತಿತ ಉರಿ ಉರಿ ಪುಟ ಪುಟದಾಡಿ
ಜಿಗ ಜಿಗದ ಹತ್ಯಾವ ಕಿಡಿ ಒಂದಕ್ಕೊಂದ
ನಗ ನಗತ ಉಪಾಧ್ಯಾರ ಬಂದ
ದಕ್ಷಬ್ರಹ್ಮಗ ಆಗಿ ಆನಂದ
ಉರಿ ಜ್ವಾಲ ಹೋತಿ ಕೈಲಾಸಪುರಕ ಒಮ್ಮಿಂದ ಪುರಕ
ಆರ್ಭಟಿಸಿ ಅಗ್ನಿ ನಾಲಿಗಿ ಗಾಳಿ ಧವಸಿಗೆ ಚಾಲವರದಿತು ವರದಿತೊ
ಥಳ್ ಮಳಸಿ ಯೋಗಿ ಶಿವಗಾ ನಾ ಶಿವಗಾ
ಜಳ ತಾಳಲಾರದ ಬೀಳೋನಾ ಬೀಳೋನಾ

ಏರ

               ದುಂದ ಆದೀತೋ ದುಮಕಸಿತೊ ಕೈಲಾಸದ
ಮಂದೆಲ್ಲಾ ಅಂಜಿ ಥಳಮಳಸಿ

8

ಸಿದ್ಧ ಸಿಂಗ ಮುನಿಗಳು ಇದ್ದ ಸಾಧು ಸಂತರೆಲ್ಲಾ
ಎದ್ದ ಬಂದಾರೊ ಛಡಪಡಿಸಿ

ಚಾಲ

               ಸಿದ್ಧಯ್ಯ ಆಡಿದ ಮಾತು ಮುದ್ದು ಪಾರ್ವತೆಮ್ಮಾ ಕೇಳಿ
ಎದ್ದ ಬಂದ ನಮಸ್ಕಾರ ಮಾಡಿ
ಸೆರಗೊಡ್ಡುವೆ ಸ್ವಾಮಿ ಬುದ್ಧಿ ಹೀನನನ್ನ ಬಿಡರಿ ದಯಮಾಡಿ
ತರ್ಛಿ ಜಂಗಮ ನುಂಗಿದ ಮ್ಯಾಲ [ತರಬಿಪೆನ ಗೊಳೋ]
ಮೆದ್ದವರ್ಯಾರೋ
ತರಬವರ್ಯಾರು ಗುರುರಾಯನ ನುಡಿ
ಹಿಂಗೆಂದು ಚಂದ್ರಧರಗ ಪಾರ್ವತೆಮ್ಮ ವಂದನೆಮಾಡಿ
ಮಂದಿ ಮಾತ ಕೇಳಿ ನಮ್ಮ ತಂದಿ ಯಜ್ಞ ಮಾಡಿದಾನ
ನಂದಿಸಿ ಬರುವೆ ಹೋಮಾ ಲಗು ಮಾಡಿ ಕೊಡೋ ಹೋಗೊ
ಅವನ ಕಾಮ ಸಂವಾರ ಮಾಡಿ ಒಡ್ಡುವೆ ಬೇಡಿ

ಏರ

               ಎದ್ದ ಬಂದಾರೋ ಛಡಪಡಿಸಿ ಅಂತಾರೋ
ಸಿದ್ಧಯ್ಯ ಬೆನ್ನ ಬಿದ್ದೇವೋ ॥

9

ಏ ಈಶ್ವರ ಆಡಿದ ಮಾತ ಹುಸಿಯಲ್ಲ ನಿಜವೆಂದು
ಶಶಿಮುಖಿ ದೇವಿ ಕೇಳಿದಳು

ಚಾಲ

               ಮಾಡಬ್ಯಾಡೋ ಹಿಂತಾ ಯಜ್ಞ ಮಾಡ ಅಂದವರ ಯಾರ ನಿನಗ
ಕೇಡಬಂತ ತಡವಿಲ್ಲ ಈ ಕ್ಷಣನಿನಗ ಬೇಡಕೋತೇನ ಯಜ್ಞ ಬಿಡರಿನ್ನ
ಶಿವ ಉರದ ಸಾಯತಾನೋ ಎಂದು ಅವಗುಣ ಅಪ್ಪ ನನ್ನ ಮಾತು ಕೇಳೋ
ಜಪ್ಪನೆ ನಂದಿಸೋ ಹೋಮ  ಕಪ್ಪುಗೊರಳವಗ
ಇಂದ ಆಗುವದು ಮರಣ
ಆತು ತ್ರಿಪುರ ಸಂವಾರ ಪಂಚವದನ
ಇಂದ್ರ ಯುದ್ಧ ಮಾಡಲಾರದ
ಸಂದ್ರಿ ಹಿಡದ ಓಡಿ ಹೋದಾ
ಚಂದ್ರಾಮಂದ ತಣ್ಣಗಾತು ಎದಿ
ಗದ್ದಲ್ಯಾತಕ ಬೇಕಂತ ಹಿಡದ ಹಾದಿ
ವರುಣಂದು ಏನ ಹೇಳಲಿ ಒಣಗೀತ ತುಟಿ
ನೇರ ಹತ್ತೈತಿ ಅಂಜಿ ಕಡಿಯತೈತಿ ಹೊಟ್ಟೆ

ಏರ

               ಶಶಿಮುಖಿ ದೇವಿ ಕೇಳಿದಳೋ ತನ್ನ ಪಿತನ
ದಶಿಲಿಂದ ಅರ್ಜಿ ಮಾಡಿದಳೋ

10

ಅಷ್ಟು ಬಲ ಸಂಹರಿಸಿರಿ ತುಟ್ಟ ತುದಿ ಆಚಿಕಿಂದ
ಬೆಟ್ಟ ಆದೀತೋ ಇಬ್ಬರಿಗಿ

ಚಾಲ

               ಹುಚ್ಚನಂತ ವೀರಭದ್ರ ಕಿಚ್ಚಗಣ್ಣಿನ ದೇವನ ಮಗ
ಮುಚ್ಚಿ ನೇಮಾ ಕೊಡೋ ಏ ತಾತಾ
ಬತ್ತೀಸ ಹತಾರ ಬಿಚ್ಚಗತ್ತಿ ಬೆಳಕ ಜಳಿಪಿಸುತ
ಮಾರಹರನ ಮಹಿಮೆ ಮತ್ತ
ಯಾರಿಗೆ ತಿಳಿಯದೋ ಇತ್ತ
ಮಾರಿ ಹುಟ್ಟಿದಾಳೋ ದುರ್ಗಿ ಸಹಿತಾ
ಚಾಮುಂಡಿ ಚಂಡಿ ಬನಶಂಕರಿ ಹಿಂತಾಕಿ ನಾಮಾಂಕಿತಾ
ಶರ್ಬಾ ನಿಮ್ಮ ಹಂತೇಲಿ ನಾವು
ಸಿರ್ಬಾಗಿ ಬಂದೇವೋ ಸ್ವಾಮಿ
ಇರತೇವೋ ನಿಮ್ಮ ಚರಣದಲ್ಲಿ ನಂಬಿ
ನಮ್ಮ ಪ್ರಾಣ ಕಾಯಿರಿ
ಅರಿಯದವರು ಮಾಡಬ್ಯಾಡ್ರಿ ದೊಂಬಿ
ಬೊಬ್ಬಿ ಕೇಳಿ ಹರಿ ಬ್ರಹ್ಮರು ಗರ್ವಬಿಟ್ಟ ಗಾಬರಿಯಾಗಿ
ಒಬ್ಬರಿಗೊಬ್ಬರು ಅಡ್ಯಾಡತಾರ ಎಲ್ಲಾ
ವೀರಭದ್ರದೇವ ಅಬ್ಬರದಿಂದ ಬಂದೋ ಹೋಮದ ಮ್ಯಾಲ

ಏರ

               ಭೆಟ್ಟಿ ಆದೀತೋ ಇಬ್ಬರಿಗೆ ತಾ ಕೇಳಿ
ಅಬ್ಬರಲಿ ಜಿಗಿದು ಬಂದಾನೋ

11

ದಕ್ಷಬ್ರಹ್ಮನು ಅಂದ ಪಕ್ಷಿವಾಹನನೆ ಕೇಳೋ
ಭಿಕ್ಷಾ ಬೇಡುವ ಶಿವನ ಸೊಕ್ಕೆಷ್ಟು

ಚಾಲ

               ನಾರಾಯಣನೆ ನಿನ್ನ ಮಗ ಚಾರು ಮನ್ಮಥನ ಕೊಂದ
ಯಾರಿಗಾದರು ಹಿಂಗಾ ಮಾಡಾವಾ
ಸುಮ್ಮನಿದ್ದರ ಬ್ರಹ್ಮನ ಶಿರಾ ಹೊಡೆದು ಕೊಟ್ಟ ಶಿವಾ
ಸುಮ್ಮನಿದ್ದರ ನಮ್ಮ ಮೈಮ್ಯಾಲ ಬರತಾನೋ ಜಂಗಮನು
ಒಮ್ಮಿಗಿಲೇ ಕೈಯ್ಯ ಹಚ್ಚೋನು ನಾವಾ
ಅಷ್ಟೋ ತನಕ ನಮ್ಮ ಬಾಳ್ವೆ ಆಗೂದುಲ್ಲೋ ಬಚಾವಾ
ಅಪ್ಪಾ ಅಪ್ಪಾ ಅಂದಾನ ಮಗ ಕಪ್ಪಾ ಹರದ ಕೊಡಾಕ ಬಂದಾ
ಮುಪ್ಪುರ ಗಾತಕ ಕೆಟ್ಟ ಭಾವಾ
ಈ ಮಾತ ಒಪ್ಪೈತಿ ಕೊಂದ ಬಿಡರಿ ಅವನ ಜೀವಾ

ಏರ

               ಭಿಕ್ಷಾ ಬೇಡೋ ಶಿವನ ಸೊಕ್ಕೆಷ್ಟು ಈಶ್ವರಗ
ದಾಕ್ಷಿಣ್ಯ ಇಲ್ಲೊ ಯಾರ್ಯಾರದು

12

ನೀಲಕಂಧನು ತನ್ನ ಓಲಗಕೆ ಹೇಳಿದನು
ಬಾಲರ್ಯಾಕ ಚಿಂತಿ ಮಾಡುವರಿ

ಚಾಲ

               ಕೊಬ್ಬಿಲಿಂದ ತಿರಗೋ ಶಿವನ
ಅಬ್ಬರ ಮುರಿಯೋದರ ಕೆಟ್ಟ
ಕಬ್ಬಲಗಿತ್ತಿ ಇಟ್ಟುಕೊಂಡಾವ ನನ್ನ ಕರಿಯಲಿಲ್ಲ
ದಿಬ್ಬರ ಸುತಲಿದ್ದೊ ಮಹಾದೇವಾ
ಕಂಡು ಕರಿಯಲಿಲ್ಲ ಅವನ ಚಂಡಿಕಿ ಹೊಡದಾಂಗ ಆಯ್ತು
ಕೆಂಡಗಣ್ಣಾವ ಮಾಡಿ ಸುಮಾರ
ದಕ್ಷನ ಎದಿಯ ಗುಂಡಿಗೆ ಒಡದೀತೋ ಹಾಕಿದೋ ಉಸಿರಾ
ಇತ್ತ ನೋಡಿ ಕೊಂತ ಶಿವನು ಅತ್ತ ಮಾತನಾಡತಿದ್ದ
ನಿಂತ ದಕ್ಷ ಬ್ರಹ್ಮಂದಿಲ್ಲೊ ಖಬರಾ
ಶಂಕರನ ನೋಡಿ ಮತ್ತ ಮಾವನಾದ ಬೆಂಕಿ ಚೂರ

ಏರ

               ಬಾಲರ್ಯಾಕ ಚಿಂತಿ ಮಾಡುವಿರಿ ಹೀಂಗೆಂದು
ಮೇಲಗಿರಿ ವಾಸ ನುಡಿದಾರೋ

13

ಚಂಡಿ ಚಾಮುಂಡೇರು ಹಿಂಡ ಶಕ್ತಿಯರೆಲ್ಲಾ
ಹಿಂಡಿ ಹಿಂಡಿ ರಕ್ತ ಕುಡಿದಾರೋ                                                                ॥

ಚಾಲ

               ನಗಿಮಾರಿ ಪಾರ್ವತಿದೇವಿ ತನ್ನ ಹೊಗಿಯ ನಂದಿಸಿದಂತಾ
ಮಗನ ಬಿಗಿದಾಡಿ ಅಪ್ಪಿಕೊಂಡ ಹೇಳತಾಳೋ
ಗರ್ವ ಬಂದವರ ಹಲ್ಲ ಮುರದಿ ವರ ವೀರಭದ್ರಾ ಹುಟ್ಟಿ
ಪರಿಹರಿಸಿದಿ ದುರ್ಘಟ ಅಂತಾಳೋ
ವಜ್ಜರ ಬಾಣದ ವೀರಭದ್ರಾ ಅಜ್ಜನ ಮ್ಯಾಲ ಹೊಡೆಯ ತಾನ
ಬೆಜ್ಜರ ಹುಟ್ಟಿ ಎದಿಮ್ಯಾಗ ಆದಿ ಕಪ್ಪಾ
ಕೋಪದಿಂದ ವೀರಭದ್ರಾ ಚಾಪ ತಗದ ಹೊಡಿತಾನಾ
ಲೋಪಮಾಡಿ ಬಿಡತೇನ ಅವನ ಅವನ ಮಗನಾ
ಪಾಪಿ ದಕ್ಷ ಬ್ರಹ್ಮನ ವಂಶವನ ॥

ಏರ

               ಹಿಂಡಿ ಹಿಂಡಿ ರಕ್ತ ಕುಡಿದಾರೋ ದಕ್ಷನ
ಚೆಂಡಿಕೆ ಎಲ್ಲ ಕೊಯಿಸಿದರು ॥                                                                    

 14

ಬ್ರಹ್ಮದೇವರು ತಾನು ಸ್ವಾಮಿ ಶರ್ಬನ ಕೂಡ
ಒಮ್ಮಿಗಿಲೆ ಯುದ್ಧ ಮಾಡಿದನು

ಚಾಲ

               ಚ್ಯಾರು ಮುಕ್ಕುಂದ ಬ್ರಹ್ಮ ತಾನು
ಧೀರತನಾ ಮಾಡಿ ಕಾದಿ
ವೀರಭದ್ರನ ಹಿಂಬಾಲಿಸುವನಾಗ
ಹಾರಿ ಹೋದೋ ಬ್ರಹ್ಮಾ ಗಾಳಿಗೂಡಾಗಿ
ಯಾರೂ ಇದರೀಗೆ ಬಂದರೇನು
ಮಾರಿಮ್ಯಾಲ ಕಡಿಯತಾನೋ
ತೀರವಲ್ಲದ ಅವನ ಸಿಟ್ಟಾ ಭೇರಿ ಕೂಗಿ
ವೀರಭದ್ರ ಅಂತಾನೋ ಅವರೀಗೆ ಹೇಡಿ ಉಪಾದ್ಯರು
ಕೂಡಿ ಯಜ್ಞ ಮಾಡಿ ಬೇಡಿಕೊಂತಾರ ಶಿವ ಸಾಯಲೆಂತ
ಬಿಟ್ಟ ಬಿಟ್ಟ ಬಾಣಗಳನ್ನು ಕಟ್ಟ ಕಟನೆ ಕಡಿಯತಾನ
ಮೆಟ್ಟಿ ಮೆಟ್ಟಿ ಕುತ್ತಿಗಿ ಕೊಯ್ದ ನಿಂತಾ
ತೀರವಲ್ಲದೊ ವೀರಭದ್ರನ ಸಿಟ್ಟಾ ॥

ಏರ

               ಒಮ್ಮಿಗಿಲೆ ಯುದ್ಧ ಮಾಡಿದಾನೋ ದಕ್ಷನ
ಹಮ್ಮು ಮುರಿದೀತೋ ಹೈರಾನಾ ॥                                                          

15

ಆದಿ ಶಕ್ತಿಯು ಶಿವನ ಪಾದ ಹಿಡದ ಅಂತಾಳೋ
ಸಾಧು ಸಂತರಿಗೆ ಪರಿಪಾಲಿಸೋ

ಚಾಲ

               ಅಪ್ಪಯ್ಯ ಶಂಕರ ಕೇಳೋ ಕಪ್ಪು ವರ್ಣದ ದೇವಾನಮ್ಮ
ನಿಪ್ಪತ ಪರಿಹಾರ ಸಂಯಮ ಕೋಶ
ಊರಿಗೆ ಒಪ್ಪತ್ತ ಬಂದಿತೊ ಕೇಳೋ ಸರ್ವೇಶ
ಉಳಿ ತ್ರಿಪುತ ಸಂಹಾರ ಪಾರ್ವತಿ ಈಶಾ
ಅಗಹರನೆ ಕೇಳಯ್ಯ ಇಲ್ಲಿಗೆ ಒದಗಿತೋ ಉರಿಯ ಜ್ವಾಲಾ
ತಗಿ ಬಗಿ ಕೊಂಡೇವು ನಾವು ಜಗದೀಶಾ
ಕೈ ಮುಗಿದೇವೋ ಉಳಿಯದು ಕೈಲಾಸ ವಾಸಾ
ಹೀನ ದಕ್ಷ ಬ್ರಹ್ಮಾ ದಾನ ಮಾಡಿ ಬಿಡತಾನ
ಇನ್ನೇನ ಹೇಳಲಿ ಸಂತಾಪ
ಮನ್ನಿಸಿ ಇಡರಿ ನಿಮ್ಮ ಕೃಪಾ
ನಿಮ್ಮ ಹಂತೇಲಿ ಬಂದೇವ ಅಡ್ರಾಸಿ
ನಾವು ದಿಕ್ಕ ಇಲ್ಲದ ಪರದೇಸಿ
ಕರುಣಾ ತೋರಿಸಿ ಪ್ರಾಣ ಉಳಿಸಿ
ಈ ಬೆಂಕಿ ಬ್ಯಾಡ್ರಿ ಬಿಡಿಸಿ

ಏರ

               ಸಾಧು ಸಂತರಿಗೆ ಪರಿಪಾಲಿಸೋ ಶಂಕರನೇ
ಕಾದ ಸಲವಯ್ಯ ಕಡೆತನಕ

16

ದಕ್ಷ ಬ್ರಹ್ಮನು ಅಂದ ಶಕ್ತಿ ಪಾರ್ವತಿಗೆ
ಕಕಲಾತಿ ಇಲ್ಲ ನಿನಗ

ಚಾಲ

               ದುಷ್ಟ ದಕ್ಷ ಬ್ರಹ್ಮ ಅಂದ ಖೊಟ್ಟಿ ರಂಡೇಗಂಡ ಶಿವಾ
ಎಷ್ಟೋ ಮಂದಿಯೊಳಗ ಮಾಡಿದ ಅಪಮಾನ
ಮುಂದ ಬಾ ಅಂತ ಕರಿಯಲಿಲ್ಲ ಇದ್ದ ಸುಮ್ಮನ
ಕರದ ಅಬರು ಕೊಟ್ಟ ಕುಂಡ್ರಸಿಕೊಳ್ಳಲಿಲ್ಲ ನನ್ನ
ನನ್ನ ಕರದಿದ್ರ ಇವನ ನಾಲಿಗಿ ಕಡದ ಬೀಳತಿತ್ತ
ಹೆಣದ ಬೆಣ್ಣಿ ತಿನ್ನುವಂತ ಜಂಗಮನ
ಒಂದು ಕ್ಷಣದೊಳಗ ಕೊಲ್ಲುವೆನು ತಡವೇನಾ
ಶಂಕರ ಅಂತಾನ ಸಂಕೋಚ ನಿನಗ್ಯಾಕಾ
ಬೆಂಕಿ ಕೈಯಾಗ ಗಾಳಿ ಮರಣಾಗುವದು
ಹೀನ ದಕ್ಷಬ್ರಹ್ಮಾ ಅನ್ಯಾಯ ಮಾಡಿದ
ಪುಣ್ಯ ಪಾಪಕ ಸರಿ ಆಗುವದಾ
ನೀಲಕಂಠ ಶಿವಗ ಅಂದ ಕಾಲಬಂತ ಸಾವತಾನೋ
ಮೂಲವಾಗಿ ಕುಂತಿದ್ದ ನಮ್ಮ ಜನಕ
ತಿಮ್ಮನಭಟ್ಟ ಅಂತಾನ ಹೌದದಕ

ಏರ

               ಕಕಲಾತಿ ಇಲ್ಲ ನನಮ್ಯಾಲ
ಉಪಕಾರ ಏನೂ ಅರಿಯಿರಿ

 

(ಅಪೂರ್ಣ)

* * *