9. ಅಭಿಮನ್ಯು ಕಥೆ

ಏರ

 ಸ್ವಾಮಿ ಶಂಕರ ದೇವ ಸ್ವಾಮಲಿಂಗನು ಸೊಗಲ
ಭೂಮಿಯೊಳು ಬಂದು ಇಳದಿರಿ

ಚಾಲ

 ಗಿರಿರಾಜನ ತರಳಿ ಆಗಮಾಡ್ಯಾಳೊ ತಪಶ್ಚರ್ಯ
ವರಪೂಜಿ ಕಲ್ಲಿನ ಮ್ಯಾಲ ನಿಂತ ಬಂದಾರ  ಅಗದಿ ಮೆಚ್ಚಿ ಭಗವಂತಾ
ಮಾದೇವ ಮಾಯ ಮರ್ಧನ
ಮದಹರ ಹೋಮ ಪ್ರೀತಿಕರ
ಮದುವ್ಯಾಗಿ ಮಾಡೇರಿ ಪ್ರಖ್ಯಾತ
ಮೃತ್ಯುಲೋಕಕ್ಕ ಅದರಿಂದ ಹುಟ್ಟೀತರಿ ಲಗ್ನದ ಬೇತ
ಶಕ್ತಿ ಸಹಿತ ಶಂಕರ ಶಿವನೇ ಮುಕ್ತಿ ಕೊಡೋ ಅಧಿಕಾರಾ  ನೀನೇ
ಭಕ್ತಿವಂತರಿಗೆ ಬೇಡಿದಂತಾ ಇಷ್ಟಾರ್ಥ ಕೊಡೋ
ಪಕ್ತ ಏನ ಉಳಿಯದಂಗಾ ಸ್ವತಾ

ಏರ

ಭೂಮಿಯೊಳು ಬಂದು ಇಳಿದರೆ ಶಿವಶಂಭಾ ॥
ಪ್ರೇಮದಿಂದ ಎನಗ ಬೆಸನಾಗೆ

1

ಧರಣಿ ಮ್ಯಾಲ ಇರುವಂತಹ ಮೆರೆವ ಹಸ್ತನಾಪುರ
ದೊರೆಯ ಧರ್ಮರಾಜ ಅನುಜಾನ

 

ಚಾಲ

ಬಲರಾಮ ಹೋಗ್ಯಾನೋ ಆಗ ಭೂಮಿಯ ಪ್ರದಕ್ಷಣಕ
ಕುಂತಕೇಳರಿ ಏಕಚಿತ್ತದಿಂದ
ಅಳಿಯಾ ಇದ್ದರ ಉಳಿಯೋದಿಲ್ಲಂತ ಯುಕ್ತಿ ತಗದ
ಸಮಸಪ್ತಕರ ಲಡಾಯಿ ಹೂಡಿ ಅರ್ಜುನಗ ಬಾ ಎಂದು
ನಿಲ್ಲದಲಿ ಓಲೆಯ ಬರೆದ
ವೀರ ಶೂರ ಅರ್ಜುನ ಲಡಾಯಿಗೆ ಪ್ರಸಿದ್ಧ
ಚಕ್ರವ್ಯೆಹದೊಳು ಇತ್ತ
ಹುಟ್ಟಿತೋ ಜಗಳವು ಮತ್ತ
ದ್ರೋಣಾಚ್ಯಾರಿ ಪತ್ರ ಬರದ ಎತ್ತ ಹೋಗೋಣ
ಸತ್ಯವಚನ ಹೇಳೋ ಮುಕ್ಕುಂದಾ ॥

ಏರ

               ದೊರೆಯ ಧರ್ಮರಾಜಗ ಅನುಜ ಅರ್ಜುನ ಭೀಮ
ಪುತ್ರ ಅಭಿಮನ್ಯುನ ಕಾಳಗವೋ                                                               ॥

ದ್ರೋಣಾಚಾರಿಯು ಮತ್ತ ಕ್ಷೋಣಿಪತಿ ದುರ್ಯೋಧನನು
ತ್ರಾಣುಳ್ಳ ತಂದಿ ಜಯದ್ರತನು

2

ಚಾಲ

ಧರ್ಮ ದುಃಖ ಮಾಡತಾನೋ ತಮ್ಮ ಭೀಮಶೈನ ಕೇಳೋ
ಕುಮ್ಮಕ ಇಲ್ಲದೆ ಹೋದೋ ಅರ್ಜುನಾ
ಮೋಹನನಿಂದ ಗಾಯ ತಿಂದ ಬಂದ ಬಿದ್ಯೋ ನೀನಾ
ಇಂದಿನ ಯುದ್ಧವು ನಂದು
ಹಿಂದ ಮುಂದ ಆಗೂದೇನೋ ತಂದು ಹೂಡೋ ರಥಾ ಈ ಕ್ಷಣಾ
ಕೊಂದ ಹಾಕುವೆನು ಪತ್ರ ಬರದಾನೊ ದುರ್ಯೋಧನ
ಧರ್ಮನ ಆರ್ಭಾಟ ಕೇಳಿ ಬರತಿತ್ತೊ ಮಾರ್ಬಲ ಎಲ್ಲಾ
ಸಾರಾವಳಿ ಸರ್ಪನ ಬಿಲ್ಲುಬಾಣಾ
ಹತಾರ ಹಿಂದ ಕುಶಿ ಅತಿ ದಂಡಪೂರ ಮನಾ

ಏರ

ಬಂತೋ ನಿಮಗಿಂದು ಪ್ರಳಯವು ಶ್ರೀ ಕೃಷ್ಣಾ
ಕುಂದ ತಂದಾನೋ ಅರ್ಜುನಗಾ ॥

3

ಮಾವ ಸೈಂಧವ ನಿನ್ನ ಜೀವ ನನ್ನ ಕೈಯಾಗ
ಯಾಂವ  ಬಂದ ನಿನ್ನ ಉಳಸುವನು ॥

ಚಾಲ

ಹಿಂದೂ ದೇಶದ ಸೈಂದವನ ತಂದಿ ಭೀಮಸೈನನ ಬಿಂಕ
ನನ್ನ ಮುಂದ ಹೇಳ ಬ್ಯಾಡೋ ಕೂಳಾ
ಒಂದ ಪೆಟ್ಟಿಗೆ ಕೊಂದಹಾಕಿ ಹೊಡದೇನೋ ಸರಳಾ
ಬಿಡ ಬಿಡೋ ಬಾಣವ ಈಗ
ತೊಡ ತೊಡೋ ಕೋಪವ ಇನ್ನ
ಹಿಡಿ ಹಿಡಿ ಬಿಡತೇನೋ ನಾನು ಸರಳಾ
ಸೈಂಧವ ಓಡೋಡಿ ಹೋಗತಾನೋ ಹುಚ್ಚ ಮರಳ

ಏರ

ಯಾಂವ ಬಂದ ನಿನ್ನ ಉಳಸುವನು ಹಿಂಗೆಂದು
ಹ್ಯಾವದಲಿ ಬಾಣ ಹೊಡದಾನೋ                                                             ॥

4

ದುರ್ಯೋಧನ ರಾಜನು ದ್ರೋಣಾಚ್ಯಾರಿನ ಕರೆದು
ಗುರುವೆ ಇನ್ನೇನ ಗತಿ ಎಮಗ ॥

ಚಾಲ

ಕರ್ಣ ದ್ರೋಣಾಚ್ಯಾರಿ ಮುಂದ ದುರ್ಯೋಧನ ಅಳುತಾನೋ
ಪಾರ ಹುಡುಗ ಮಾಡಿದ ನಮ್ಮನ್ನ ಗಾಬರಿ
ಯಾವ ರೀತಿಲಿಂದ ಹುಡುಗನ ಹಿಡಿಯಬೇಕೊ ಶೆರಿ
ದ್ರೋಣಾಚ್ಯಾರಿ ಮಹಾಶೂರ ಕಲ್ಪನ ತಗದಾನೊ ಕರ್ಣ
ಹಿಂದ ನಿಂತ ಶಿರಾ ಹೂಡಿ ತೂರಿ
ಮುಂದ ನಿಂತ ನಾನು ಲಢಾಯಿ ಮಾಡತೇನೋ ಅವನ ಸರಿ

ಏರ

ಅಂದ ಕರ್ಣನು ದ್ರೋಣನಿಗೆ ತಾ ಕೇಳಿ
ಸಂದ ನೋಡಿ ಹೊಡದಾನೋ

5

ಕಂದನ ಕರಗಳನು ಹಿಂದ ನಿಂತ ಹೊಡಿವರೆ
ಅಂದ ಕರ್ಣನು ದ್ರೋಣನಿಗೆ

ಚಾಲ

ಕುಂದು ಕ್ಷತ್ರಿಧರ್ಮಕ್ಕೆ ಎಂದೆಂದಿಗೂ ಬಿಡಲಿಕ್ಕಿಲ್ಲಾ
ಹಿಂದ ನಿಂತ ಬಂಧಿಸಲಾರೆ ಕೈಯ್ಯ
ಕರ್ಣ ಹೀಂಗ ಅಂತಾನ ಆಗತೈತಿ ಅನ್ಯಾಯಾ
ದೋಷ ಬರೂದಿಲ್ಲೋ ಕರ್ಣ ಸಂಶ ಇಲ್ಲ ಅದರೊಳು
ತಿಳದ ನೋಡಿ ಮೋಸ ಮಾಡಿ ಹೊಡಿ ಬಿಡೋ ಅಭಿಮನ್ಯು

ಏರ

               ಅಂದ ಕರ್ಣನು ದ್ರೋಣನಿಗೆ ತಾ ಕೇಳಿ
ಸಂದ ನೋಡಿ ಹೊಡದಾನೋ ॥

6

ಒತ್ತರ ಮಾಡಿ ಕರ್ಣನು ಎತ್ತಿ ಹೊಡದಾನೋ ಶರವು
ಕತ್ತರಿಸಿದವು ಎರಡು ಕರಗಳನು

ಚಾಲ

ಮುಂದಿನ ಯುದ್ಧವು ಬಿಟ್ಟ ಹಿಂದ ನೋಡಿದ ಅಭಿಮನ್ಯು
ಚಂದವಾಗಿ ನಿಂತಿದ್ದೋ ಕರ್ಣ
ಮಾರಿ ನೋಡಿ ಅಂದಾನೋ ನೀ ಕುಲಹೀನಾ  ನೀ ಕುಲಹೀನಾ
ಕ್ಷತ್ರ ಧರ್ಮದಲ್ಲಿ ಶಾಸ್ತ್ರ ಯಾತರಾಗ ಹೇಳೇತೊ ಕರ್ಣಾ
ಹಿಂದ ನಿಂತ ಹೊಡಿವುರೇನೊ ನನ್ನ
ಮಾತ ಕೇಳಿ ತೆಳಕ ಮಾರಿ ಮಾಡಿದನೋ ಕರ್ಣಾ
ಪರಸರಾಮನ ಹಂತೇಲಿ ಹೋಗಿ ಹನ್ನೆರಡ ವರ್ಷ ವಿದ್ಯೆ ಕಲಿತಿ
ಸುಡು ಸುಡೋ ಬುದ್ಧಿಯ ಹುಚ್ಚ ಸ್ವಾನಾ
ಥೂ ಭ್ರಷ್ಠಾ ತ್ಯಾಗ ಮಾಡೋ ಕುಲಗೇಡಿ ಕರ್ಣಾ

ಏರ

ಕತ್ತರಿಸಿದ ಎರಡು ಕರಗಳನ್ನು ಅಭಿಮನ್ಯು
ಪುತ್ರ ಗಾಯಾಗಿ ನೆಲನಿಂತೋ                                                                  ॥

7

ಸೊಕ್ಕಿದ ಕುರಿಯೊಳಗ ಮಿಕ್ಕಿ ತೋಳ ಹೊಕ್ಕಾಂಗ
ಧಿಕ್ಕಗೆಡಿಸಿದನೋ ಎಲ್ಲಾರನು ॥

ಚಾಲ

ಮಂಡಗೈಲೆ ಯುದ್ಧವನ್ನು ಮಾಡುವೆನು ನೋಡಬನ್ನಿ
ನಿಮ್ಮ ಕೌರವರ ಬಲವೆಲ್ಲಾ
ತಕ್ಕೊಂಡ ರಥದ ಗಾಲಿಗೆ ಮಂಡಗೈಯ್ಯ ಹಾಕಿದ ಬಾಲ
ಸರಸರದ ಹೊಡದಾನೋ ಗುಣುಗಳ
ತರತರದ ಬಿದ್ದಾವೋ ಹೆಣಗೋಳಾ
ಮುರಮುರದ ಹೋತೋ ಕೌರವರ ಬಲವೆಲ್ಲಾ
ಲಕ್ಷಣಕುಮಾರ ಸತ್ತು ಹೋದ ಆತಿ ಕೋಲಾಹಲಾ
ಕೈಲಿ ಕಾಲಲಿ ಒರಸಿ ವೀರರನೆಲ್ಲಾ ಕೊಂದ ಹಾಕಿದ
ಕಂದ ಅಭಿಮನ್ಯು ಪ್ರಬಲ
ಅಷ್ಟರೊಳು ಪ್ರಾಣ ಕೊಟ್ಟ ಧರುಣಿಗೆ ಹೊರಳಿದನಲ್ಲಾ

ಏರ

ಧಿಕ್ಕ ಗೆಡಿಸಿದನೋ ಎಲ್ಲರನ್ನು ಅಭಿಮನ್ಯು
ಪುತ್ರ ಗಾಯಾಗಿ ನೆಲನಿಂತೋ ॥

8

ಕಪಟ ಮಾಡಿ ಕೃಷ್ಣನು ನಡದಾನ ಪಾತಾಳ ಲೋಕಕ್ಕ
ಗೋಪಾಳ ಕೃಷ್ಣನು ಆಗ ಫಲ್ಗುಣನನ್ನು ಕರಕೊಂಡ ॥

ಚಾಲ

ಬಲಭೀಮ ಧ್ವಜದಲ್ಲಿ ಸಹಿತ ಆಗ ಪಾರ ಮೂರ ಮಂದಿ
ನಡಸ್ಯಾರೋ ರಥಾ
ನಿಷ್ಠಾವಂತ ಪಾರ್ಥ ನಿನ್ನ ಶ್ರೇಷ್ಠತ್ವವು ಎಷ್ಟಂತ ಹೇಳಲಿ
ಸೃಷ್ಠಿಯೊಳು ನೀನು ಪ್ರಖ್ಯಾತ
ಸೋಮಶಪ್ತರನ್ನು ಹೊಡೆದು ಬರುವೆನು
ನಡಿಯೋ ಪಾರ್ಥಾ

ಏರ

ನಡದಾನ ಪಾತಾಳಲೋಕಕ್ಕ ಮುಂದಿನ
ಕೆಡಕ ತಿಳಿದಿಲ್ಲೋ ಅರ್ಜುನಗಾ ॥

9

 ಇತ್ತ ಶಮ ಸಪ್ತಕರ ಮತ್ತು ಕಾಳಗ ಗೆದ್ದ

ಬರತಿಹರು ಪಾರ್ಥ ಶ್ರೀ ಹರಿಯು ॥

ಚಾಲ

ಹರಿಯು ಕೃಷ್ಣ ಹೇಳತಾನೋ ಬ್ಯಾಸರಿಕಿ ಆದೀತ ಪಾರ್ಥ
ಸರೋವರ ದೊಳು ಮಾಡೋನು ಸ್ನಾನಾ
ಈರ್ವರು ಕೂಡಿ ಮುಳಗಿದರ ಮೇಲಕೆದ್ದೋ ಕೃಷ್ಣಾ
ಪಾರ್ಥಾ ಕೇಳೋ ನನ್ನ ಮಾತಾ
ವ್ಯರ್ಥ ಧಾರಾತೀರ್ಥದೊಳಗ ನಿನ್ನ ಮಗಾ ಅಭಿಮನ್ಯು
ಸತ್ತಾನೋ ಅಂತ, ಕೂ ಅಂತ ಕೂಗಿ
ನೀರೊಳು ಮುಳಗಿದ ಆ ಕ್ಷಣಾ
ಅರ್ಜುನನ ಕರ್ಣದೊಳಗ ಅಭಿಮನ್ಯು ಸತ್ತಾನೆಂದು
ಪೂರ್ತಿ ವಾರ್ತೆ ಬಿತ್ತೋ ಚಿನ್ನ ಚಿನ್ನ
ನನ್ನ ಮಗ ಅಭಿಮನ್ಯು ಸತ್ತಂತೋ ಮೈದುನಾ

ಏರ

ಬರತಿಯರೋ ಪಾರ್ಥ ಶ್ರೀ ಹರಿಯು ಅರ್ಜುನಗ
ದೇಹ ತಮ್ಮದೆಂದು ನುಡಿದಾನೋ

* * *