7. ಪಾಂಡವರ ಅಜ್ಞಾತವಾಸ

ಪಾಡಿರಿ ಪಾಂಡವರ ನುಡಿ ಪ್ರೇಮದಿಂದೆ  ಪಾಡಿರಿ ಜನ ಕೂಡಿರಿ ॥
ಮೊದಲಿಗೆ ನೆನದೇನು ಗುರುವಿನ ಅಡಿಯ
ಮುದದಿಂದ ಮತಿಕೊಟ್ಟು ಸಲಹೆನ್ನ ಒಡೆಯ ॥
ಪದುಳದಿ ಪಾಡುವೆ ಪಾಲಿಪುದು ನುಡಿಯ
ಮದನಹರ ಬೆಳಸಯ್ಯ ಕವಿತದ ಕುಡಿಯ                                                ॥

ದ್ವಾಪರಯುಗದಲ್ಲಿ ಧರ್ಮರಾಯನು
ಭೂಪತಿ ದುರ್ಯೋಧನನ ಕೂಡಿನ್ನು ॥
ವಿಪರೀತ ಕಾಲಕ್ಕೆ ಲೆತ್ತ ನಾಡಿದನು
ದ್ರೌಪದಿ ಸಹಜವಾಗಿ ಸೋತು ತೆರಳಿದನು                                             ॥

ಹನ್ನೆರಡು ವರುಷ ವನವಾಸಗಳಿದು
ಇನ್ನೊಂದು ವರುಷ ಅಜ್ಞಾತವುಳಿದು ॥
ಚನ್ನಾಗಿ ಧೌಮ್ಯ ಋಷಿಯಿಂದ ತಿಳಿದು
ಮುನ್ನಿದ್ದ ರೂಪದ ಕುರುಹು ತಾವಳಿದು                                                    ॥

ಧರ್ಮರಾಯನು ಕಂಕ ಭೀಮ ಬಾಣಸಿಗ
ನರ ಬೃಹನ್ನಳೆ ನಕುಲ ಗಾಯ್ಬನು ತುರಗ ॥
ಸುರಭಿ ಪಾಲಕ ಸಹದೇವ ದ್ರೌಪದಿ ಸಹ
ಕುರುಹು ತಪ್ಪಿಸಿ ನಿಂತು ಮತ್ಸ್ಯಪುರದೊಳಗೆ                                                   ॥

ವಿರಾಟ ರಾಜನ ಮಂದಿರದೊಳಗೆ
ಇರುವಂಥ ಕೀಚಕ ಸೈರಂಧ್ರಿಯಳಿಗೆ ॥
ವಾರಿನೋಟದಿ ನೋಡಿ ಮನದೊಳಗೆ
ಸೈರಿಸದಲೆ ಪೋಗಿ ಸುಧೇಷ್ಣಿ ಬಳಿಗೆ                                                        ॥

ಅಕ್ಕ ಈ ಸ್ತ್ರೀಯಳು ದಾರೆಂದು ಎನಗೆ
ತಕ್ಕವಳಿವಳೆಂದು ಪೇಳುವೆ ನಿನಗೆ ॥
ಅಕ್ಕರದಿ ಅನಕೂಲ ಕೇಳಿ ಅವಳಿಗೆ
ಚಕ್ಕನೆ ಕಳಿಸಮ್ಮ ಕಾಮಕೇಳಿಗೆ                                                                ॥

ತಮ್ಮ ಕೇಳೆಲೊ ನೀನು ಹುಮ್ಮತನ ಬೇಡ
ತಮ್ಮ ಹೊತ್ತಿಗಾಗಿ ಬಂದವರ ಕೂಡ ॥
ನಮ್ಮ ಮನ ಬಂದಂತೆ ಆಡುವರೆ ಬ್ಯಾಡ
ಸುಮ್ಮನೆ ಪೋಗಿನ್ನು ಇಲ್ಲಿಂದ ಮೂಢ                                                       ॥

ಮನಸಿಜನ ತಾಪವು ಘನವಾಯಿತೆನಗ
ಅನುಮಾನ ಅಣು ಮಾತ್ರ ಬೇಡ ನಿನ್ನೊಳಗ ॥
ಮನಸೋತೆ ಮಾನಿನಿಗೆ ಭ್ರಮೆಗೊಂಡೆನೀಗ
ಸನುತದಿ ಕಳಿಸಮ್ಮ ನೀನನ್ನ ಬಳಿಗೆ                                                         ॥

ಪರನಾರಿಯರ ಸಂಗ ತರಿ ಕೆಂಡದ್ಹಂಗ
ಉರಿ ಕೆಣಕಿ ಅರಗು ತಾ ಕರಗಿ ಹೋದ್ಹಂಗ ॥
ಮರುಳ ಬುದ್ಧಿಯಿಂದ ಕೆಡದಿರು ಈಗ
ಹುರುಳಿಲ್ಲ ಪರ ನಾರಿಯರ ಸಂಗದೊಳಗ                                               ॥

ನೀತಿ ಮಾತುಗಳನ್ನು ಆಡದಿರಕ್ಕ
ಸೋತು ಸಾವಿರ ಖರ್ಚು ಮಾಡಲು ರೊಕ್ಕ ॥
ನೂತನಾಂಗಿವಳೆನಗೆ ಇರುವಳು ತಕ್ಕ
ಮತ್ತೇಸು ಜನ್ಮವು ಬೇಕು ಸಿಗಲಿಕ್ಕ                                                           ॥

ಕಾಮಿನಿಯರ ಕಂಡು ಮನಸು ಎಳಸುವದು
ಪಾಮರನನು ಬಾಧೆ ಗುರಿಯ ಮಾಡುವದು ॥
ತಮ್ಮ ತಿಳಿಯದು ನಿನಗ ಮುಂದೇನಾಗುವದು
ಕಾಮನ ಗುಣ ನಿನಗ ಪರಿಣಾಮಗುಡದು                                                 ॥

ತಡೆಯಲಾರೆನು ಕಾಮನ್ಹೊಡತವು ಚೇಳ
ಕಡದಂತೆ ಜುಣಕಟದ್ಹಂಗ ತಾಳ ॥
ಇಡುವದು ಮೈಯೆಲ್ಲ ಇರಿತವು ಬಹಳ
ಕಡು ಬೇಗ ಕಳಿಸೆನ್ನ ಪ್ರಾಣ ಪಡಕೋಳ                                                  ॥

ಮಂದ ಬುದ್ಧಿಯಲಿಂದ ಮಾತಾಡದಿರು
ಮಂದಗಮನಿಗೆ ಐದು ಮಂದಿ ಗಂಡರು ॥
ಬಂದ ಕೇಳಲು ನಿನ್ನ ಕೊಂದು ಹಾಕುವರು
ಗಂಧರ್ವ ಪುರುಷರು ಸಮರ್ಥರವರು                                                      ॥

ಗಂಧರ್ವರೆಂಬುವರು ಗಂಭೀರರೇನು
ಬಂದ ಮೇಲವರನ್ನ ನೋಡಿಕೊಂಬುವೆನು ॥
ಸುಂದರಾಂಗಿನ ಮುಂದ ಕಳಿಸಮ್ಮ ನೀನು
ಕಂದರ್ಪ ಶರಬಾಧಿ ತಾಳಲಾರೆನು ನಾನು                                             ॥

ಎಷ್ಟು ಪೇಳಿದರ ತಿಳಿಯದು ನಿನಗೆ
ಘಟ್ಯಾಗಿ ಕಳಿಸುವೆ ನಡೆ ನಿನ್ನ ಮನಿಗೆ ॥
ಕೊಟ್ಟಳು ಬಟ್ಟಲ ಸೈರೆಂಧ್ರಿಯಳಿಗೆ
ಥಟ್ಟನೆ ಮಧು ಕೊಡು ಬಾರಮ್ಮ ಈಗೆ                                                      ॥

ತರಳಿಯೆ ಮಾತೊಂದು ಲಾಲಿಸಿ ಕೇಳ
ಮರುಳ ಕೀಚಕ ಎನ್ನ ಮಾರಿ ಹುಳಹುಳ ॥
ಸರಳವಿಲ್ಲದೆ ಮುಖನೋಡಿದನು ಬಹಳ
ತರಲಾರೆ ಕಳಿಸಮ್ಮ ಪರದೂತಿಯಳ                                                       ॥

ಊಳಿಗಾದವಳಿಗೆ ಇಷ್ಟ್ಯಾಕ ಬೇಕ
ಹೇಳಿದ ಮಾತೊಂದು ಕೇಳುವದೆ ಸಾಕ ॥
ಸುಳ್ಯಾಕ ಸೈರಂಧ್ರಿ ಮಾಡತಿ ಯಾಕ
ಒಳ್ಳೆದಾಯಿತು ಮಧುತಾರ ಈ ಕ್ಷಣಕ                                                      ॥

ಪರರಲಿದ್ದೇನ ಪ್ರಾಣ ಸಂಕಷ್ಟವೆಂದು
ದೊರಿಯಳ ನುಡಿ ಮೀರಬಾರದೆಂದು ॥
ಹರಿದೇವ ಮೊರಿಕಾಯೊ ತ್ವರಿತದಿ ಬಂದು
ದುರುಳ ಕೀಚಕನೆಡೆಗೆ ಪೋಗುವೆನೆಂದು                                                 ॥

ತರುಣಿ ಮಧು ತರಲಿಕ್ಕೆ ಬರುವದನು ಕಂಡ
ಭರದಿ ಕೀಚಕ ಬಂದು ಮುಡಿ ಪಿಡಿದುಕೊಂಡ ॥
ದುರುಳ ಹಿಡಿಯದಿರು ಎನಗ ಮಾಡುವೆನು ಭಂಡ
ಕರುಣದಿ ಮೊರಿ ಕಾಯೊ ತೇಜಮಾರ್ತಂಡ                                          ॥

ಅಯ್ಯಯ್ಯೋ ಶಿವಶಿವ ಏನಾಯಿತೆಂದು
ಕೈಕಾಲ ಅಪ್ಪಳಿಸಿ ಮನದಲ್ಲಿ ನೊಂದು
ಸಾಯಲಾರೆನು ದಿಕ್ಕ ಒಬ್ಬರಿಲ್ಲೆಂದು
ಕಾಯಯ್ಯ ಅಭಿಮಾನ ಶ್ರೀಕೃಷ್ಣಬಂದು                                                     ॥

ಎಷ್ಟು ಪರಿಯಲಿ ಕೃಷ್ಣ ಧ್ಯಾನಿಸಲಿ ನಿನ್ನ
ಅಷ್ಟ ದಿಕ್ಪಾಲಕರೆ ಉಳುವಿನಕೊಳಿರೆನ್ನ ॥
ದುಷ್ಟ ಕೀಚಕ ಕೊಂಬ ಎನ್ನ ಅಭಿಮಾನ
ನಿಷ್ಠೆಯಲಿ ಮಾಡಿದಳು ಸೂರ್ಯನ ಸ್ತವನ                                              ॥

ತರಣನಸ್ತುತಿಸಲು ದ್ರೌಪದಿ ಬಳಿಗಿ
ಕರುಣದಿ ಕಳಿಸಿದ ಪುಂಡ ದೈತ್ಯನಿಗಿ ॥
ಕರಪಿಡಿದು ಎಳದೊಯ್ದು ಅಸುರ ಕೀಚಕಗೆ
ತರುಣಿ ಬಂದಳು ಕೊಸರಿ ಭೀಮನಿದ್ದೆಡೆಗೆ                                               ॥

ಮರುತ ಸುತನಿಗೆ ನಾರಿ ದ್ರೌಪದಿ ಬಂದು
ಕರ ಮುಗಿದು ಶಿರ ಬಾಗಿ ಅಳುತಲಿ ನಿಂದು ॥
ಪುರುಷರಿಲ್ಲದ ಬಾಳ್ವೆ ಆಯಿತು ನಂದು
ಮರಿಯಾದಿ ಕೊಳುತಿದ್ದ ಕೀಚಕನೆಂದು                                                    ॥

ಪುರುಷ ನಿನಗ ನಾನು ಒಬ್ಬವನೇನ
ಇರುವರೈದು ಮಂದಿ ಕೇಳು ಎಲ್ಲರನ ॥
ಧರ್ಮರಾಯನ ಆಜ್ಞೆ ಆದರೆ ಅವನ
ಮರಣ ಮಾಡಿ ಸುಡುವೆ ದುರುಳ ಕೀಚಕನ                                             ॥

ಮಂಡಲದೊಳು ಪುಂಡರೆಂದು ಪಾಂಡವರು
ಕಂಡ ಜನರು ಬಿರುದು ಹೊರಗ ಸಾರುವರು ॥
ಗಂಡರಿದ್ದೀರಿ ನೀವು ಗಂಡರೈವರು
ಭಂಡು ಮಾಡಿಕೊಂಡ ಕೀಚಕ ನನ್ನಬರು                                                  ॥

ಭೀಮ ತಾಮಸಗೊಂಡು ಕಾಮಿನಿಯೊಳಗೆ
ನೀನು ಹಚ್ಚಿ ಮಾತು ಆಡುವಿ ನಮಗ ॥
ರೋಮಗಳು ಗುಡಿಗಟ್ಟಿ ಸಿಟ್ಟೇರಿ ಆಗ
ರಮಣಿಗೆ ಪೇಳಿದ ಯುಕ್ತಿಯನು ಹೀಗ                                                       ॥

ಕೀಚಕನ ಕರದಿಷ್ಟು ಏಕಾಂತ ತಿಳಿಸು
ಯೋಚನೆ ಬಿಡು ಬರುವೆನೆಂದು ಸಂತೈಸು ॥
ನೀಚ ನಿರ್ಬುದ್ಧಿಯ ಕೀಚಕನ ಅಸು
ಕಿಚ್ಚಿನೊಳ್ಪೆಂದಿಸುವೆನೆಂದು ನಿಚೈಸು                                                       ॥

ಮರುತ ಸಂಭವ ನಾರಿ ವೇಷವ ತೊಟ್ಟು
ಗರಡಿ ಮನಿಯಲ್ಲಿ ಮಲಗಿ ಮುಸುಕಿಟ್ಟು ॥
ದುರುಳ ಕೀಚಕ ಭರದಿಂದ ಬಂದನು ಹೊರಟು
ತ್ವರಿತದಿ ಬಿಡು ನಾರಿ ಕುಪ್ಪಸದ ಗಂಟು                                                   ॥

ಬಿಡುವೆನು ಬಾರೆನ್ನ ಒಡೆಯನೆ ನೀನು
ಸಡಗರದಿ ಹಾಸಿಗೆಯ ಮಾಡು ಸಂಗ್ರಾಮ ॥
ಕಡುಬೇಗ ಬಂದಿರುವೆ ನಿನ್ನಡಿಗೆ ನಾನು
ಗಡಬಡ ಇಷ್ಟ್ಯಾಕ ಮಾಡುವದು ನೀನು                                                    ॥

ನಾರಿಯ ಧ್ವನಿಯಲ್ಲ ದಾರೆಲವೊ ನೀನು
ಸಾರಿ ಪೇಳೆಲೊ ಪುರುಷ ಸ್ತ್ರೀಯಳಾದವನು ॥
ಚಾರು ನಾಮವ ಪೇಳಿ ಮಾಡೊ ಯುದ್ಧವನು
ಸಾರದಿದ್ದರೆ ನೀ ರಣಹೇಡಿ ಎಂಬುವೆನು                                                   ॥

ಪಾಂಡವ ಸುತ ನಾನು ಇದ್ದೇನು ಭೀಮ
ರಂಪ ರಣದಲಿ ನಿಂತು ಕೇಳುವರೆ ನಾಮ ॥
ಪುಂಡನಾದರೆ ತೋರೊ ನೀ ಪರಾಕ್ರಮ
ಷಂಡನಾದರೆ ಸುಟ್ಟು ಹಾರಿಸುವೆ ಧೂಮ                                                ॥

ಶೂರನಾದವ ಉಟ್ಟು ಬರುವನೆ ಸೀರಿ
ನಾರಿಯಂಥವ ಎತ್ತಿ ತೋರೆನಗ ಮಾರಿ ॥
ಮೀರಿ ಹೋದರೆ ಬಿಡೆನು ಬಿಚ್ಚುವೆನು ಸೀರಿ
ನೀರನವ ಹರಿಸುವೆನು ರಕ್ತಧಾರಿ                                                              ॥

ಮಡದಿ ಅಲ್ಲವೊ ನಿನ್ನ ಇದಿಗಂಡ ನಾಮ
ಕಡಿದು ಹಾಕುವೆ ನಿನ್ನ ರುಂಡ ದಂಡವನು ॥
ಹಿಡಿಕಿಯೊಳು ತಲಿಪಿಡಿದು ಚೆಂಡನಾಡುವೆನು
ಬಿಡದೆ ಮೃಗ ಪಕ್ಷಿಗೆ ಖಂಡ ಹಂಚುವೆನು                                                  ॥

ಕರಿ ಕೇಸರಿಯ ಬಲಕೆ ಸರಿ ಎನಿಸುವದೆ
ಗರುಡನ ಆರ್ಭಟಕೆ ಉರಗ ತಾಳುವದೆ ॥
ಹರಿದಾಡೊ ಇಲಿ ಬೆಕ್ಕಿನೆದುದರ ನಿಲ್ಲುವದೆ
ಗಿರಿ ವಜ್ರದ್ಹೊಡತಿಗೆ ತಾನು ಬಾಳುವದೆ                                                   ॥

ಹಮ್ಮಿನ ಮಾತುಗಳು ಆಡದಿರು ಬಹಳ
ಗುಮ್ಮಿದರೆ ಬಿದ್ದಾವು ಹೊಟ್ಯಾನ ಕರುಳ ॥
ಸುಮ್ಮನಿರು ಇಷ್ಟಕ ಹುಮ್ಮತನ ಖೂಳ
ಒಮ್ಮೆ ನಿನಗೊದಗಿತ್ತು ಬಂದಿನ್ನು ಕಾಳ                                                    ॥

ಘುಡಿಘುಡಿಸಿ ಕೀಚಕನು ಪಟಪಟನೆ ಚೀರಿ ॥
ಕಿಡಿಕಿಡಿಯನುಗುಳುತ್ತ ಕೆಂಡವನು ಕಾರಿ ॥
ಷಡಷಡನೆ ಗದ್ರಿಸುತ ಅಬ್ಬರದಿ ಹಾರಿ
ಅಡರೇರಿ ಆರ್ಭಟವು ಮಾಡಿದನು ಭಾರಿ                                                  ॥

ಜೊಗ್ಗಿ ಹಗ್ಗದಂತೆ ಹಿಗ್ಗಿಸುವೆ ನಿನ್ನ
ನುಗ್ಗು ನುಗ್ಗು ಮಾಡಿ ಕಿತ್ತುವೆನು ಕಣ್ಣ ॥
ಬುಗ್ಗಿಯು ಪುಟದಂತೆ ರಕ್ತ ಮೈ ಹಣ್ಣ
ಬಗ್ಗಿಸಿ ಗುದ್ದಿದರೆ ಮುಕ್ಕಿ ಹಿಡಿಮಣ್ಣ                                                             ॥

ಸೊಕ್ಕಿದ ರಕ್ಕಸನ ಪೊಲ್ಪ ಕೀಚಕನು
ಉಕ್ಕೇರಿ ಕುಕ್ಕಿರಿವೆನೆಂದು ಭೀಮನನು ॥
ತೆಕ್ಕಿಯೊಳ್ತೆಕ್ಕೊಂಡು ತಿಕ್ಕಿ ನೆಲಕವನು
ಇಕ್ಕಿಳಿಕಿ ಪರಿಯಂತೆ ಪಿಡದ ಕಾಲವನು                                                   ॥

ಸಿಕ್ಕ ಭೀಮನು ಎಂದು ದ್ರೌಪದಿಯು ಬಂದು
ಅಕ್ಕರದಿ ಕೀಚಕನ ಎದುರಲ್ಲಿ ನಿಂದು ॥
ಸೊಕ್ಕಿದ ಕೀಚಕನ ಬಲ ಇಳಿದು ಕುಂದು
ಚಕ್ಕನೆ ಬಂದಿತು ಮರಣೊದಗಿ ಮುಂದು                                                 ॥

ದುರುಳ ಕೀಚಕನ್ಹಿಡಿದ ಬಲಭೀಮ ವೈರಿ
ಹರಿನಾದ ಗೈಯುತ್ತ ಖೋ ಎಂದು ಚೀರಿ ॥
ಧರಣಿ ಮೇಲ್ಕೆಡಮೆಟ್ಟಿ ಸೀಳಿದನು ವೈರಿ
ಮರಣಾದನಾ ಕ್ಷಣಕ ಹೂಡಿಸಿ ರಣಭೇರಿ                                                  ॥

ಶಿರಸಿಗಿ ಪುರದಲ್ಲಿ ಮೆರಿವನು ಬಸವ
ದುರುಳ ಕೀಚಕನಿಗೆ ಮಾಡಿಸಿ ವಧವ ॥
ಕುರುಳಿನ ಥಾಳಿ ವಟ್ಟಿಸಿ ಸುಡುವ
ನೆರಿದ ಜನರು ಪಾಡಿ ಹೋಳಿಯ ಪದವ                                                  ॥

* * *