ಹೋಳಿ ಹುಣ್ಣಿಮೆಯ ಮೂಲ ಕಥೆ

ಗುರು ಶರಭನಡಿಗಳಿಗೆರಗಿ ಪೇಳುವೆನೀಗ ॥
ಧರೆಯೊಳೀ ಹೋಳೀ ಪದಗಳನೂ ॥

ಲಾವಣಿ

ತಾರಕಾ ಸುರನೆಂಬ ದೈತ್ಯ  ಮಾರಹರನ ಕುರಿತು ತಪವ
ವಾರಿಯಾಗದಂತೆ ಮಾಡುತಿರೇ ಘೋರವಾದ ನೈಷ್ಠೆಗಾಗಿ

ಸಾರಿ ಶಿವನು ಮೆಚ್ಚುತವನೆ  ಚಾರು ಕಾಮ್ಯವನು ಬೇಡೆಂದನು
ಧೀರರಿಂದ ಮಾರಿಯನಗೆ  ಸೇರದಂಥ ವರವ ನೀನು

ಭೂರಿ ದಯದಿಂದ ಪಾಲಿಸೆನೆ  ಕಾರಣಿಕ ಮಾತಿಗನಿವನು
ಪೂರ ಮನದ ಬಯಕೆಯನ್ನು  ಕ್ರೂರ ದೈತ್ಯರಿಗೆ ಕೊಟ್ಟನೊ ॥

ಇಳುವು

ವರವ ಪಡಕೊಳ್ಳುತಲಿ
ಸುರರಪುರ ಮುತ್ತುತಲಿ
ಭರದಿ ಜನ ಕಡಿಯುತಲಿ

ಏರ

ತರತರದಿ ಮದಿಸುತಲೀ
ಧರೆಯೊಳೀ ಹೋಳಿ ಪದಗಳನು ಪೇಳುವೆನು                                                ॥

ಸುರರೆಲ್ಲ ಕೂಡುತ್ತಲಿರದೆ ವೈಕುಂಠಕ್ಕೆ
ಭರದಿ ಬಂದಾಗ ಪೇಳಿದರೂ

ಲಾವಣಿ

               ಗರುಡ ವಾಹನನು ಕೇಳಿ  ಪರಮಾಲಚನೆಯೊಳೆಂದ
ಹರಿಯದಿವನ ಪ್ರಾಣವಾರಿಂದಾ  ಹರನ ತಪವ ಕೆಡಿಸಿ ತರಲು
ತರಳನೊಬ್ಬ ಜನಿಪನಾಗ  ಮರಣವಾಗುವದು ಈತಗೆಂದಾ
ಸ್ಮರನ ಕರೆದು ಕೇಳಿದನು  ಭರದಿಯೆನ್ನ ಮಗನೆ ಕಾಲ
ಹರನಯೋಗ ನೀನು ಕೆಡೆಸಿದರೆ  ಪರರಿಗುಪಕಾರವಾಯ್ತು
ಪರಿಹಾರವಾಗುವದು ಬಾಧೆ  ತ್ವರದಿ ನೀನು ಹೋಗಬೇಕಂದಾ

ಇಳುವು

               ತಂದೆ ತಾಯಿಗೆ ನಾನು
ಸಂದೇಹಗೊಳಲೇನು

ಎಂದು ಪಯಣಕ್ಕವನು
ಅಂದು ಅನುವಾದನೂ

ಏರ

               ಭರದಿ ಬಂದಾಗ ಪೇಳಿದರು ನರಹರಿಯು
ಬರೆದು ಕಳುಹಿದನು ಮನ್ಮಥನಾ                                                              ॥

ಗಿಳಿಯ ರಥವನ್ನೇರಿಗಳಿಲನೆ ತಾ ಬಂದು
ಹೊಳೆಯುತಿಹವೈದು ಬಾಣಗಳಾ

ಲಾವಣಿ

               ಜಗ್ಗಿ ಕಿವಿಯ ತನಕ ಹೆದೆಯ  ಬೊಗ್ಗಿನದರ ನಿಟ್ಟು ಸುಖದ
ಸುಗ್ಗಿಯೆಂದು ಹೊಡೆದನಾಕ್ಷಣ  ದುರ್ಗಿ ಗಂಡ ಕಂಡು ತನ್ನ
ಅಗ್ಗಿಗಣ್ಣ ತೆಗೆಯಲಾಗ  ಮುಗ್ಗಿದನು ಮುಸುಕಿ ಬೆಂಕಿಯೊಳು
ಕುಗ್ಗಿತವನ ಬಲವು ಕರುಳ  ಮಗ್ಗಿನಂತೆ ಉರಿದು ಕರಗಿ
ಭರ್ಗಿನಿಂದ ಲಾಯಿತೀಪರಿ  ಎಗ್ಗಿನಿಂದ ನೋಡ್ವಸುರರು
ಮೊಗ್ಗೆಯರಳ ಪುಷ್ಪಗಳ  ವೆಗ್ಗಳಾಗಿ ಸುರಿದರುಘೆಯೆಂದೂ

ಇಳುವು

               ಪತಿ ಸತ್ತುದನು ಕೇಳಿ
ರತಿಯು ತಾನಳುವುತಲಿ
ಹಿತವರೆನಗಾರಿಂದು
ಶಿತಕಂಠ ಶಿವನೆಂದೂ

ಏರ

               ಹೊಳೆಯುತಿಹವೈದು ಬಾಣಗಳ ಹೊಡೆಯಲ್ಕೆ
ಅಳಿದನುರಿತೇತ್ರದಿಂದವನೂ                                                                     ॥

ರತಿಯು ಪ್ರಳಾಪಿಸಲು ಶಿತಕಂಠನದ ಕೇಳಿ
ಗತಿಯನು ಪೇಳ್ದನವಳಿಗೆ

ಲಾವಣಿ

               ಕಾಮಿನಿ ಕೇಳವ್ವ ನಿನ್ನ ನೇಮವಾದ ವಾಸನೆಯಿಂದ
ಭೂಮಿಯೊಳು ಹುಟ್ಟುವಿರಿ ಹೋಗು ಬ್ರಾಹ್ಮಣ ಜನ್ಮದಿ ನಿನ್ನ
ಸ್ವಾಮಿಯು ಹುಟ್ಟುವನವನು ಕಾಮಿಪನು ಹೊಲೆಯ ವೇಶ್ಯಾಗು

ತಾಮಸ ಗುಣದಲಿಂಥ ನಾಮವಾಯಿತೆನಗೆಂದು
ಭೂಮಿಯು ತಾನು ಮರುಗುತಾ ರಮಣೀಯ ಕರ್ನಾಟಕದ
ಸೀಮೆಯೊಳು ಮುಖ್ಯವಾದ ಗ್ರಾಮದೊಳು ಕೃಷ್ಣ ಭಟ್ಟನೆಂಬಾ

ಇಳುವು

               ಬ್ರಾಹ್ಮಣನ ಮಗನಾಗಿ
ಜನ್ಮ ತಾಳಿದನು
ಜಾತಕರ್ಮವ ಮಾಡಿ
ಹರುಷದಲಿ ಕೂಡಿ

ಏರ

               ಗತಿಯನು ಪೇಳ್ದನವಳಿಗೆ ನಿನಗೊಂದು
ಪ್ರತಿಜನ್ಮ ವಾಯ್ತು ಹುಟ್ಟಿಂದಾ                                                                  ॥

ಭೂಮಿಸುರರ್ಹೊಟ್ಟೆಯಲಿ ಕಾಮಜನಿಸಲಿಕಾಗ ॥
ನಾಮಕರಣವನು ಮಾಡಿದರೂ

ಲಾವಣಿ

ಚೆಂದದಿ ಸತಿಪತಿಗಳಿರಲು  ಕಂದು ಕಾಮ ಜನಿಸಿದನು
ಸಿಂಧುವಿನಲಿ ಚಂದ್ರನುದಿಸಿದಂತೆ  ಬಂಧುಬಳಗದವರು ಕೂಡಿ
ನಂದನಗೆ ಜಾತಕರ್ಮ  ಒಂದ ನುಳಿಸದಂತೆ ಮಾಡಲೂ
ಕಂದನಿತ್ತ ಬೆಳೆಯುತಿರಲಂದುಗೆ ಗೆಜ್ಜೆಯನಿಟ್ಟು
ತಂದೆ-ತಾಯಿಗಳು ಪ್ರೀತಿಯಿಂದಾ  ಮುಂದೆ ಬಾಲಲೀಲೆಯಾಡಿ
ಮಂದಹಾಸ ಚಂಡು ಚಿಣಿಯ ಕುಂದು ಕೊರತೆಯಿಲ್ಲದೀ ಪರಿ॥

 

ಇಳುವು

               ಧೂಳಾಟವಾಡಿದನು
ಬಾಲರೊಳು ಬಲ್ಲಿದನು
ಬೀಳುತೇಳುತಲವನು
ಲೋಲದಿಂದೊರ್ತಿಪನೂ

ಏರ

               ನಾಮಕರಣವನು ಮಾಡಿದರು ದಿನದಿನಕೆ
ಪ್ರೇಮದಿಂ ಬೆಳೆದನಾ ಬಾಲಾ                                                                   ॥

ಅಲ್ಲಿ ಹೊಲೆಯರ ಕುಲದಿ ಬಲ್ಲಿದನು ಚೆಂದಣ್ಣಾ
ಎಲ್ಲರೊಳು ಹಿರಿಯ ತಾನಾಗಿ

ಲಾವಣಿ

               ಹರನು ಹೇಳಿದಂತೆ ಭರದಿಯವರ ಗರ್ಭದೊಳು
ಬರಲು ಜನಿಸಿ ಹೆಣ್ಣು ಮಗಳಾಗಿ ಹರುಷದಿಂದ ಬಂಧು-ಬಳಗ
ವೆರೆಸಿ ಹೆಸರನಿಟ್ಟು ತಾವು ಹರಿಸಿದರು ಹೋಳಿಯಿವಳೆಂದು
ನರರೂಪವಿಲ್ಲವಿಂಥ  ಪರಿಯ ಚೆಲುವಿಕೆಯನಾ
ವರಿಯೆವೆಂದು ಮಾತುಗಳನಾಡು  ತಿರಲು ಕೇರಿಯೊಳು ತಾನು
ಹಿರಿದು ಬೆಳಗಿನಿಂದ ನಿತ್ಯ ಮೆರೆಯುತಿರ್ದಳಾ ಕಾಲದೀ

ಇಳುವು

               ತಂದೆ ತಾಯ್ಗಳು ವೇಣಿ ॥
ಯೆಂದಾಗ ನೇಮಿಸಿ
ಬಂಧು ಬಳಗವುವೆರಸಿ

ಏರ

               ಎಲ್ಲರೊಳು ಹಿರಿಯ ತಾನಾಗಿಯಿರುತಿರ್ದ
ನೊಲ್ಲಭೆಯಳೊಬ್ಬಳೊಡಗೂಡಿ                                                                 ॥

ಹನ್ನೆರಡು ವರುಷಗಳನ್ನು ಸಮನಿಸಲಾಗ
ಕನ್ಯೆಯಳ ರೂಪವೇನೆಂಬೇ

 

ಲಾವಣಿ

               ಹುಣ್ಣಿವಿ ಚಂದ್ರನ ಮುಖ  ಕಣ್ಣು ನೈದಿಲೆಗೆ ಸಮ
ನುಣ್ಣನ್ನ ಗಲ್ಲವು ಕನ್ನಡಿ  ಮೂಗು ಸಂಪಿಗೆಯ ತೆನಿ
ರಾಗ ದುಟಿಯು ಹವಳದಂತೆ  ಕೋಗಿಲೆಯ ಸ್ವರಕೆ ಮಿಗಿಲಂತೆ
ಕೊರಳು ಶಂಖ ಚಾಪದಂತೆ, ವಿರಳವಾದ ಹುಬ್ಬುಗಳು
ತರಳೆಯ ಕುಚವು ಕಲಶದಂತೆ, ಬಾಳೆದಿಂಡಿನಂತೆ ತೊಡೆಯು
ಬಾಳ ಮಳಲಿನೊಂಡಿನಂತೆ  ಮೇಳವಾದ ಜಘನದವಿಸ್ತಾರಾ

ಇಳುವು

               ಅಡಿ ತಳಿರಿನಂದದಲಿ
ಬಡನಡವು ಬಳಕುತಲಿ
ಗಜಗಮನ ದಂದದಲಿ
ಮಜ ಭಾಪುವೆನಿಸುತಲೀ

ಏರ

               ಕನ್ಯೆಯಳ ರೂಪವೇನೆಂಬೆ ಚೆಲುವಿಕೆಗೆ
ಸನ್ನಿಭವಾದ ಸತಿಯಿಲ್ಲಾ                                                                             ॥

ಕಾಮಗೆವ್ವನ ಬಂದು ಕಾಮಿಸುತ ವನಿತೆಯರ
ಆ ಮಹಾಜಾರನಾಗಿರ್ದ

ಲಾವಣಿ

               ಒಂದು ದಿನ ಹೋಳಿ ತಾನು  ಬಂದು ಹೊಕ್ಕಳಾಗಲೂರ
ವೃಂದ ಗೂಡಿ ಜನರು ನೋಡ್ದರೂ  ಮಂದಗಮನೆಯ ರೂಪ
ಕಿಂದಿರೆ ಶಚಿಯು ರಂಭೆ  ಇಂದು ಸರಿಗಾಣೆವಿವಳಿಗೆ
ನೋಟವೆಂಬ ಬಲೆಯನೊಡ್ದು ತಾಟವೆಂಬ ಪುರುಷ ಮೃಗವ
ಲೂಟಿ ಮಾಡಿಕೊಂಡು ಹೋಹಳು  ಕಣ್ಣು ಇವಳರೂಪಿನೊಳು
ತಣ್ಣಗಾಗಿ ಹೋದವೀಗ  ದಣ್ಣನೆ ದಣಿಯಲಾರದೆ

ಇಳುವು

               ಮಾರನೀಪರಿ ನೋಡಿ
ಸಾರಿ ಹೋದನು ಕೋಡಿ
ಘೋರ ಬಿಟ್ಟನು ಮನದಿ ನಾರಿಯಳಬೆನ್ಹಿಂದೇ

ಏರ

               ಆ ಮಹಾ ಜಾರನಾಗಿರ್ದ ಹೋಳಿಯನು
ವಾರಿಯಾಗದೆಲೆ ನೋಡಿದನೂ                                                                 ॥

ನದರ ನಿಟ್ಟಾಕ್ಷಣದಿ ಮದನ ಬಾಣದಿ ಹೊರಳಿ
ಚದರಿಯ ಬೆನ್ನ ಹತ್ತಿದನು

ಲಾವಣಿ

               ವಾರಿಗಿ ಗೆಳೆಯರು ಕೂಡಿ  ನಾರಿ ರೂಪವನ್ನು ನೋಡಿ
ಮೀರಿದವಳೆಂದು ಮಾತನಾಡಿ  ಮಾರ ತನ್ನ ಗೆಳೆಯರಿಗೆ
ಸಾರಿ ಹೇಳಿದನು ನಾನು  ಸೇರುತಿಹೆನವಳ ಮನೆಯನ್ನು
ಘೋರಾಟವಿದಾಯಿತೆಂದು  ಚಾರು ಮಿತ್ರರೆಲ್ಲ ಮನೆಯ
ದಾರಿ ಹಿಡಿದು ಹೋದರಾಕ್ಷಣದಿ  ಜಾರ ಬುದ್ಧಿಯಿಂದ ಕಾಮ
ವಾರಿಜಾಕ್ಷಿ ಬೆನ್ನ ಹತ್ತಿ ಕೇರಿಯೊಳು ಹೊಕ್ಕ ಬೇಗದಿ

ಇಳುವು

               ಮನೆಯ ಹೊಗಲಾಕೆಯನು
ಅನುವಿನಿಂ ಕೇಳಿದನು
ನಿನಗೇನು ವೊತ್ತೆಯನು
ಸನುಮತದಿ ಕೊಡುವೆನೂ
ಚದುರೆಯ ಬೆನ್ನ ಹತ್ತಿದನು ಹೋಳಿಯ

ಏರ

               ಚದುರೆಯ ಬೆನ್ನ ಹತ್ತಿದನು ಹೋಳಿಯ
ಸದನಕೆ ಸಲುಗೆಯಿಂದವನು                                                                      ॥

ನಿತ್ಯ ನೂರ್ವರಹಗಳನು ಇತ್ತರೆ ಬಾರೆನ್ನ
ಹತ್ತಿರಕೆಂದು ನುಡಿದಳೂ

ಲಾವಣಿ

               ಗಣಿಕೆಯ ಮಾತನು ಕೇಳು  ತೆಣಿಕೆಯಿಲ್ಲ ದೋಯಿತೆಲ್ಲ
ಅಣಕ ಬೇಡೆನ್ನ ಕೂಡೆಂದ  ಸಟಿಯ ಮಾತನಾಡ್ವಳಲ್ಲ
ವಿಟನೆ ಕೇಳು ಎನ್ನ ಮಾತು  ದಿಟವಿದೆಂದಳಂಬುಜಾನನೆ
ಹೇಳಿದ ಮಾತಿಗೆ ಮೆಚ್ಚಿ  ಬಾಳ ಪ್ರೀತಿಯಿಂದಲವನು
ನಾಳಿಗೆ ಬರುವೆನೆಂದು ತಿರುಗಿ  ತಂದೆಯರಿಯದಂತೆಯೊಂದು
ಬಿಂದಿಗೆಯ ಹೊನ್ನವಾಗ  ತಂದುಕೊಟ್ಟುನವಳ ಕೈಗೆ

ಇಳುವು

               ಹರುಷವಾದಳು ನಾರಿ
ಪುರುಷಗಿವಳು ಮಾರಿ
ಬೆರಸಿದಳು ಕೂಟವನು
ಮರೆಸಿ ಮನೆಮಾಟವನು

ಏರ

               ಹತ್ತಿರಕೆಂದು ನುಡಿಯಲಾ ಕಾಮಣ್ಣ
ನರ್ತಿಯಾಯ್ತೆಂದ ಮನದೊಳಗೇ                                                             ॥

ಕೆಲವು ದಿನವೀಪರಿಯು ಲಲನೆಯೊಡನಿರುತಿರಲು
ಕುಲದವರೆಲ್ಲ ಕೇಳಲ್ಕೇ

ಲಾವಣಿ

               ಪಿತಗೆ ಪೇಳಿದರು ನಿನ್ನ  ಸುತನು ಹೊಲೆಯರೊಡನೆ ಕೂಡಿ
ಮತಿಯಗೆಟ್ಟನೆಂದು ಸರ್ವಜನಾ  ಕೃತಕದ ಮಾತನು ಕೇಳು
ಅತಿಶಯದ ಕೋಪದಿಂದೆ  ಗತಿಯೆ ನಮಗಿಲ್ಲ ದುಷ್ಟನಿಂದಾ
ಇಂದುಯೆನ್ನ ಮಗನು ಸತ್ತ  ನೆಂದು ಕರ್ಮವನ್ನು ಮಾಡಿ
ಬಂಧುಗಳವೆಲ್ಲರ ಕೂಡಿ  ತನುಜನನ್ನು ಹೊರಗೆ ಹಾಕಿ
ಮನೆಯ ಬಿಡಿಸಿದನು ಸರ್ವ  ಜನರು ನೋಡುತಿರಲೀ ಪರಿ

ಇಳುವು

               ವೇಶಿ ಮನೆಗವ ಬಂದು
ಲೇಸಿನಿಂ ನಿಲಲಂದು

ಸಿಟ್ಟಿನಿಂದಾಗವಳು
ಬಿಟ್ಟು ಓಡಿಸಿದಳೂ

ಏರ

               ಕುಲದವರೆಲ್ಲ ಕೇಳಲ್ಕೆ ಪಿತನಾಗ
ಛಲದಿಂದ ಹೊರಗೆ ಹಾಕಿದನೂ                                                                 ॥

 

ಅತ್ತಲಿತ್ತಲು ಕೆಟ್ಟು ನಿತ್ಯದೊಳು ತನ್ನಯ
ಮಿತ್ರರ ಮನೆಯ ತಿರಿದುಂಡಾ

ಲಾವಣಿ

               ವಾರನೆಲ್ಲ ತಿರಿದು ಹೊಟ್ಟಿಗೆ  ಆಹಾರ ಮಾಡುತಿರ್ದನವಗೆ
ಘೋರತರದ ರೋಗ ಬಂದಿತು  ಬಸವಂತನ್ಹುಣವಿಯ ದಿನ
ವೆಸೆವ ಹುಬ್ಬಿ ತಾರೆಯೊಳಗೆ  ಅಸುವ ಬಿಟ್ಟನವ ರಾತ್ರಿಯಲ್ಲಿ
ಮುದ್ದುಬಾಲರೆಲ್ಲ ಕುರುಳ  ಕದ್ದು ತರುತಲೊಟ್ಟಿದರು
ವಾದ್ಯದಿಂದ ಹಲಗಿ ಕಹಳೆಯಾ  ಮೆರಸಿದರು ಕಾಮನನ್ನು
ಸರಸವಾಡಿ ಹೊಯ್ಕಳ್ಳುತ್ತ  ಕರಸಿದರು ತಮ್ಮ ಮಿತ್ರರಾ

ಇಳುವು

               ಸುಡಲಿಕ್ಕೆ ಬೆಂಕಿಯನು
ಕೊಡುವರಾರಿದಕೆನುತ
ನಡೆದರ್ಹೊಲಗೇರಿಗೆ
ಬಿಡದೆ ಬಂದರು ಹೀಗೇ

ಏರ

               ಮಿತ್ರರ ಮನೆಯ ತಿರಿದುಂಡ ಶಿವನಾಜ್ಞೆ
ಯರ್ತಿಯಿಂದವನು ವರ್ತಿಸಿದಾ                                                                ॥

ಕೇರಿಯೊಳಗಾ ಬೆಂಕಿ ಯಾರ ಮನೆಯೊಳಗಿಲ್ಲ
ನಾರಿ ಹೋಳಿಯ ಮನೆಯೊಳಗೇ

ಲಾವಣಿ

               ಹೊತ್ತಿದ ಕೆಂಡವಕೊಂಡು ಹೊತ್ತರಾಕೆ ಸಹಿತವಾಗ
ಮುತ್ತಿದರು ಬಂಧು ಬಳಗದವರು

ಸಿಗದಲೋಡಿ ಬಂದು ಬೇಗ  ನೊಗೆದರಾಕೆ ಕಾಮನ ಕೂಡ
ಧಗ ಧಗ ಧಗನೆ ದಹಿಸುತಾ  ಬಾಳ ಕಷ್ಟ ಪಟ್ಟು ಗೆಳೆಯ
ಹೋಳಿಯಿಂದ ಸತ್ತನೆಂದು ಹೋಳಿ ಹುಣ್ಣಮಿಯೆಂದು ಹೆಸರಿಟ್ಟು
ಹಬ್ಬವಾಯಿತಿಂದು ಎಂದು ಸಬ್ಬರೆಲ್ಲ ಕೂಡಿ ತಾವು
ಮಬ್ಬು ಹಿಡಿದವರಂದದೀ

ಇಳುವು

               ಹುಚ್ಚರಂದದೀ ಹಾಡಿ
ಎಚ್ಚರಿಲ್ಲದೆ ಮಾಡಿ
ಮಧ್ಯಾಹ್ನ ಪರಿಯಂತ್ರಾ
ಗದ್ದಲದ ಬಹುಪಾತ್ರಾ

ಏರ

               ನಾರಿ ಹೋಳಿಯ ಮನೆಯೊಳಗಿನಬೆಂಕಿ
ಚೋರತನದಿಂದ ತಂದರೂ                                                                       ॥

ನದಿಯ ಸ್ನಾನವ ಮಾಡಿ ಮುದದಿ ಮನೆಗೈತಂದು
ಸದಮಲದಿ ಶುಚಿಗಳಾಗುತ್ತಾ

ಲಾವಣಿ

               ಊಟ ಮಾಡಿ ಸಂತಷದ  ಲಾಟವಾಡುವರು ಪ್ರೀತಿ
ನೋಟಕರಿಗರಿವಾಗುವಂತೆ  ಇಂತಪ್ಪ ಕಾಮ ಕಥೆಯ
ಸಂತೋಷದಿ ಕೇಳಿದವರು  ಚಿಂತೆಗಳ ನೀಗುತಿರುವರು
ಧರೆಯೊಳು ಬನಹಟ್ಟಿಯೆಂಬ  ಪುರದ ಬಾಲರೊಂದು ದಿನ
ಗುರುವಿನ ಮಠಕೆ ತಾವು ಹೋಗಿ  ಹೋಳಿ ಹುಣ್ಣಮಿಯ ಮೂಲ
ಕೇಳಲವರು ಹೇಳಿದರು  ಬಾಳ ಲೋಚನ ನವತಾರಾ

ಇಳುವು

               ಬರೆದೋದಿ ಕೇಳುವದು
ಇರದಲಿಷ್ಟಾರ್ಥ ವದು
ಧರೆಯೊಳಾಗುವದೀಗ
ಹರನ ಕರುಣದಿ ಬೇಗ

ಏರ

               ಸದ ಮಲದಿ ಶುಚಿಗಳಾಗುತ್ತಲಾ ಜನರು
ಮದುವೆ ಮಾಂಗಲ್ಯದಂತಿಹರೂ                                                               ॥

ಇತಿ ಹೋಳಿ ಹುಣ್ಣವಿಯ ಮೂಲ ಕಥೆಯ
ಹೋಳಿ ಪದ ಸಂಪೂರ್ಣ

ಮಂಗಲ ಮಸ್ತು

* * *