10. ಇಂದ್ರಜಿತುವಿನ ಹೋಳಿಯಪದ

ನೆರೆದಿರುವ ಜನರೆಲ್ಲ ಕರುಣಿಡರಿ ನನ್ನ ಮ್ಯಾಲ
ಕರ ಮುಗಿದು ಬೇಡಿಕೊಳ್ಳುವೆನೊ ॥

ಚಾಲ

 ಬಂದ ಈ ಸಭೆಯೊಳು ಆ
ನಂದಾಗಿ ಕುಳಿತವರಿಗೆ
ವಂದಿಸಿ ಹೇಳುವೆ ಕಥಿ ಸಾರಾ
ಮಂದಮತಿ ಬಂದಷ್ಟ ಹೇಳುವೆ ಒಂದ ಜರಾ
ಮುಂದ ಆದ ಕಥಿಯೆ ನಾನು
ಛಂದವಾಗಿ ಹೇಳುವೆನು ಸ್ವಲ್ಪ
ಕುಂದ ಬಂದಲ್ಹೇಳ್ರಿ ಒಂದ ಜರಾ
ನಿಮ್ಮ ಕಂದ ಕಲತ ಹಾಡುವೆನೊ ಮುಂದ ಪೂರಾ
ಯುದ್ಧ ಕಾಂಡದೊಳಗ ಅತಿ ಅದ್ಭುತ ಕಾಳಗ ಮಾಡಿ
ಬದ್ಧ ಆದೊ ಕುಂಭಕರ್ಣ ಶೂರಾ
ರಾಮ ಬಾಣಕ ಬಂದ ಸಿಕ್ಕ ಆದ ಸುಮಾರಾ

ಏರ

 ಕರ ಮುಗಿದು ಬೇಡಿಕೊಳ್ಳುವೆ ನಾನು
ಶ್ರೀ ರಾಮಾಯಣದ ಕಥೆಗಳ ॥

ಯುದ್ಧಕಾಂಡದ ಕಥೆಯ ತಿದ್ದಿ ಹೇಳುವೆ ನಾನು
ಶುದ್ಧಾಗಿ ಹೋಳಿ ಪದದೊಳಗ ॥

ಚಾಲ

 ಹಾಳರಗಳಿ ಓದುದಕಿಂತಾ
ಹೇಳತೇನ ಕೇಳರಿ ಕುಂತಾ
ಖೂಳ ಕುಂಭಕರ್ಣ ಮಾಡಿದಾ
ತಾಳಿ ತಾಳಿ ಸೀತಾಪತಿ ರಾಮ ಹೊಡದ ॥
ಧರೆಯೊಳು ಮೆರೆಯುವ ಲಂಕಾಧೀಶನ
ಗರ್ವ ಬಹಳೋ ದಶಕಂಠಂದು
ಕಂದ ಕುಂಭಕರ್ಣಗ್ಹೇಳಿದಾ ॥
ಭರದಿ ಹೋಗಿ ಹರದ ತಾರೊ ಶಿರವ
ಶ್ರೀ ರಾಮಂದಾ ॥

ಏರ

 ಶುದ್ಧಾಗಿ ಹೋಳಿ ಪದದೊಳಗ ಇದ ಒಂದ ಸಂದ
ಸಾರುವೆನೊ ಸಭೆಯೊಳಗ ॥

ಹಾರ ಹೀರಾವಳಿಯೊ
ತೋರು ಮುತ್ತಿನ ಸರವೋ
ಬ್ಯಾರಿ ಬಂಗಾರದ ಪದಕಗಳೊ ॥

ಚಾಲ

 ಒಂಟಿ ಮುತ್ತು ಕಂಟಿ ಸರಾ
ಭಂಟ ಕುಂಭಕರ್ಣಗ ಒಪ್ಪುವ
ಕಂಠಮಾಲಿ ಪದಕ ಜೋಮಾಲಿ
ದಶಕಂಠ ತನ್ನ ಕೈ ಮುಟ್ಟ ಇಡಸೀದೊ ಕೊರಳಲ್ಲಿ
ಹರಳೀನ ಉಂಗರ ಹತ್ತು ಬೆರಳಿನಲ್ಲಿ ಧರಿಸಿದ ವೀರ
ವಿರಳದ ದಾಗೀನ ಮೈಮ್ಯಾಲ
ಸರಳವಾದ ಶೂಲಾಯುಧ ಕೊಟ್ಟೊ ಕೈಯಲ್ಲಿ
ಸ್ವಚ್ಛವಾದ ಕಿರೀಟ ಅಂಗ ಮಸ್ತಕಕ್ಕೆ ಒಪ್ಪುವಂಥ
ಕಸ್ತೂರಿ ಗಂಧ ಹಚ್ಚಿದ ಹೂಮಾಲಿ
ವಿಸ್ತಾರವಾದ ಕರ್ಣ ಕುಂಡಲ ಹೊಳೆಯುವದೆಷ್ಟ್ಹೇಳಲಿ

ಏರ

 ಬ್ಯಾರಿ ಬಂಗಾರದ ಪದಕ ಚಂದ್ರದ ಹಾರಾ
ಭಾರ ಮಾಡಿದರೋ ಕೊರಳಲ್ಲಿ ॥

ಇಂದ್ರಚಾಪದಂತೆ ಸುಂದ್ರ ಕುಂಭಕರ್ಣ
ಚಂದ್ರ ಸೂರ್ಯರಿಗೆ ಸರಿಯಾದೊ

ಚಾಲ

ಸುಂದ್ರ ಕುಂಭಕರ್ಣಾ ಥೇಟ
ಚಂದ್ರ ಸೂರ್ಯರಂತೆ ಒಪ್ಪುವ
ಮಂದರ ಪರ್ವತ ದಾಕಾರಾ
ಇವನ ಸರಿ ಇಂದ್ರಲೋಕದಲ್ಲಿ ಇಲ್ಲೊ ಯಾರಾ ॥

ರಣವಾದ್ಯ ರಣಭೇರಿಗಳು
ಗಣಕೆ ಇಲ್ಲದೆ ಇವನ ಸುತ್ತಾ
ಝಣಝಣ ನುಡಿಸ್ಯಾರೊ ಝೇಂಕಾರಾ
ಅರಮನಿ ಬಿಟ್ಟ ಹೊರಬಿದ್ದ ನಡದಾನೋ ಮಹಾವೀರಾ
ಉಕ್ಕಿನಚ್ಚು ಲೋಹದ ಗಾಲಿ
ಚೊಕ್ಕ ಕಬ್ಬಿಣದ ರಥಕ ತಂದು
ಆನಿ ಹೂಡಿದ ಹನ್ನೆರಡು ಸಾವಿರಾ

ಇವನ ಸರಿ ಇಂದ್ರ ಲೋಕದಲ್ಲಿ ಇಲ್ಲೊ ಯಾರಾ

ಏರ

 ಚಂದ್ರ ಸೂರ್ಯರಿಗೆ ಸರಿಯಾಗಿ ತೋರಿದರೋ
ಮಂದ್ರ ಪರ್ವತಕ ಮಿಗಿಲಾದೋ ॥

ಮತ್ತ ಕುಂಭಕರ್ಣ ಒತ್ತಿ ರಥವನು ಹೊಡದೊ
ಕತ್ತಲಗವಿತೊ ಕಪಿಗಳಿಗೆ ॥

ಚಾಲ

 ಹೊಕ್ಕಾನೋ ರಾಮರ ದಂಡ
ಮುಕ್ಯಾನೋ ಮಂಗ್ಯಾರ ಹಿಂಡ
ತೆಕ್ಕಿಯೊಳಗ ಹಿಡದಾನ ಹತ್ತು ಕೋಟಿ ॥
ನೆಕ್ಕುದಕ ನಾಲಿಗಿ ಚಾಚಿದೊ ಉಪರಾಟಿ ॥
ಬಾಯಿಲಿಂದ ನುಂಗುದರೊಳಗ
ಕಿವಿಯಾಗ ಮೂಗಿನ್ಹೊಳ್ಯಾಗ ಹಾದ
ಜೀವದರಸಿಲೆ ಹೋದಾರ ಎಷ್ಟೋ ದಾಟಿ
ಯಮನ ಬಲಿಯಾಂದ ಉಳದೇವಂತ
ಜಿಗದಾರ ಅಂತ ದಾಟಿ
ನೆಗ್ಗಿತೊ ಅನಿಲಜನ ಬಾಲಾ  ಕುಗ್ಗಿತೊ ಎಲ್ಲರ ಸೊಲ್ಲ
ಮುಗ್ಗಿತೊ ನೂರಾಯೆಂಟ ಕೋಟಿ
ಸುಗ್ರೀವನ ಸೊಂಡಿ ನಾಲಿಗಿ ಆತೊ ತೀರಾ ಸುಂಟಿ ॥

ಏರ

 ಕತ್ತಲಗವಿತ್ತೊ ಕಪಿಗಳಿಗೆ ಎಲ್ಲರಿಗೆ
ಎತ್ತ ಬಂದತ್ತ ಓಡಿದರೊ ॥

ಓಡುವ ಕಪಿಗಳನು ನೋಡಿ ಬ್ರಹ್ಮನ ಸುತನು
ಆಡಿದನೋ ನೀತಿ ನುಡಿಗಳನು

ಚಾಲ

 ಹಿಂಡವಡದ ಕಪಿಗಳೆಲ್ಲ ॥
ಭಂಡ ತಗದ ಹೋಗುವದು ಕಂಡು
ನೋಡಿ ಬ್ರಹ್ಮ ಸುತ ಅಂದ ಜಾಂಬುವಂತಾ ॥
ಕಡು ಹೇಡಿಗಳಿರ್ಯಾ ಹಿಡಿದ ಪಂಥ ಬಿಡವರೆ ಹೆಂಥಾ ಮಾತ ॥
ಕೀರ್ತಿ ಪಡೆಯಬೇಕೊ ಹರಿಭಕ್ತರಾಗಿ ಬಂದ ನಿಮಗ
ಮುಕ್ತಿ ಆಗುವದು ಖಚಿತಾ
ಹರಿಯೆ ಮೆಚ್ಚಿ ವರವ ಕೊಡುವನೊ ರಘುನಾಥಾ
ಕಾಳಗದಲಿ ಸತ್ತವರಿಗೆ ಮುಕ್ತಿ ಆಗುವದು ಖಚಿತ
ಸ್ವಾಮಿಕಾರ್ಯ ನಡಸಬೇಕೋ ಪೂರ್ತ
ಸಾಯುವದ್ಯಾರಿಗೂ ಬಿಟ್ಟಿದ್ದಲ್ಲಾ
ಸಕಲರಿಗಿದ್ದ ಮಾತಾ

ಏರ

 ಆಡಿದರೋ ನೀತಿ ನುಡಿಗಳನು ಕಪಿ ವೀರರಿಗೆ
ಕಡು ಹೇಡಿತನವು ಬ್ಯಾಡೆಂದು ॥
ಓಡುವ ಕಪಿಗಳು ನೋಡಿ ಜಾಂಬುವಂತನ
ಓಡಿ ಬಂದಾವೊ ಹಿಂತಿರುಗಿ

ಚಾಲ

 ಜಾಂಬವಂತನ ಮಾತ ಕೇಳಿ
ಕಪಿಗಳೆಲ್ಲ ಬಂದಾವ ಓಡಿ
ಮನಸಿನಲ್ಲಿ ಮಸಲತ್ತ ಮಾಡುತ್ತ
ರಾವಣನ ತಮ್ಮನ ಕುಂಭಕರ್ಣನ ಹೊಡಿ ಬೇಕಂತ ॥
ಕಪಿಗಳಂತಾವ ಕುಂಭಕರ್ಣನ ಈ ಸಾರಿ ಬಿಡಬಾರದೊ
ಹೀಂಗ ಹಾಕಿಕೊಂಡಾರ ಎಲ್ಲರ ಶರ್ತ
ಲಢಾಯಿ ಮಾಡಾಕ ನಿಂತಾರಾಗ ಎಲ್ಲರು ತುರ್ತಾ ॥
ನಡದಿತೊ ಲಢಾಯಿ ಬಹಳ
ಹರಿದಿತೊ ನೆತ್ತರ ಕಾವಲಾ ॥
ರಾಮಬಾಣಕ ಕುಂಭಕರ್ಣ ಸತ್ತಾ
ಸುದ್ದಿ ಕೇಳಿ ರಾವ ಅಂತಾನ ಆತಿ ನಂದು ಘಾತಾ ॥

ಏರ

 ಓಡಿ ಬಂದಾವೊ ಹಿಂತಿರುಗಿ ಕಪಿಗಳು
ಸೂರಿ ಮಾಡಿದರೊ ಸೈನ್ಯವನು ॥

ನಕ್ಕೊಂತ ಶ್ರೀರಾಮ ದಕ್ಕಾಗಿ ಕೇಳಿದನೊ
ರಕ್ಕಸರೊಳಗ ಇವನ್ಯಾರೊ ॥

ಚಾಲ

 ಅಷ್ಟರೊಳು ವಿಭೀಷಣ
ಚಟ್ಟನೆದ್ದ ರಾಮನ ಚರಣ
ಮುಟ್ಟಿ ಹೇಳಿದಾನೊ ಇವ ನಮ್ಮಣ್ಣಾ
ಹುಟ್ಟಿದ ಏಳ ದಿವಸಕ್ಕ ನುಂಗಿದೊ ಸೃಷ್ಟಿನಾ ॥
ಇವನ ಶೂಲದ ತುದಿಯ ಮ್ಯಾಲೊ
ಯಮನ ಎದಿಯ ರಕ್ತದಲ್ಲೆ
ಕುಬೇರನ ಮಾಂಸದ ಚೂರ್ಣಾ
ದಿಕ್ಪಾಲಕರ ತುಪ್ಪದಲ್ಲಿ ಮಾಡಿದೋ ಲೇಪನಾ ॥
ಯುದ್ಧ ಮಾಡಿ ಇವರ ಕೂಡ
ಗೆದ್ದ ಬಂದೇವೆಂಬವರನ್ನಾ
ಸದ್ದೆ ಕಾಣಲಿಲ್ಲೋ ಯಾರ್ಯಾರನ್ನಾ ॥
ಬದ್ಧ ಆಗು ವ್ಯಾಳ್ಯಾ ಬಂತೊ ಇವರ ಕುಂಭಕರ್ಣ ॥

ಏರ

 ರಕ್ಕಸರೊಳಗ ಇವನ್ಯಾರಂಬುವ ವಾರ್ತಿ
ಭಕ್ತ ವಿಭೀಷಣನ ಕೇಳಿದನೋ ॥

ವೀರ ಕುಂಭಕರ್ಣನ ಮರಣದ ವಾರ್ತೆಯ ಕೇಳಿ
ಶೂರ ದಶಕಂಠ ಬಂದಾನು ॥

ಚಾಲ

 ಸುದ್ದಿಕೇಳಿ ರಾವಣಾಸುರನೇ
ಬದ್ಧ ಆಗಿ ಬಂದಾನ ತಾನು
ಮುದ್ದು ತಮ್ಮನ ಮ್ಯಾಲಿನ ಮೋಹದಿಂದ
ಅಂದಚಂದ ವರ್ಣಿಸಿ ಅಳತಾನು ದುಃಖದಿಂದಾ॥

ತಂದಂಥ ವಸ್ತ್ರ ವಡವಿಗಳೆಲ್ಲಾ
ಒಂದು ದಿನ ಒಂದ ದಿವಸಾ ಇಡಲಿಲ್ಲಾ
ಎದ್ದ ಮಾತಾಡೊ ನನ್ನ ಸಂಗಡ ಬಂದ ॥
ಸಿದ್ಧವಾಗಿ ಬಂದಿರುವೆನು ನಾನು ಅಲ್ಲಿಂದ॥

ಇಂದ್ರನ ಸಮಾನವಾದ
ಚಂದ್ರನ ಹೋಲುವ ಸುಗುಣಾ
ಇಂದು ರಥಾ ತಂದೇನ ಎಳೆದಾ
ಸರ್ದ ನಿಂತ ಚಿಂತಿ ಮಾಡುತ ಬಿದ್ದಾನ ಮೋಹದಿಂದಾ॥

ಏರ

 ಬಂದಾನಾಗಲ್ಲಿ ಬೇಗದಲಿ ರಾವಣನು
ಕಂದಿ ಮುಖ ಬಾಡಿ ಮರಗುತಲಿ ॥
ಕಕ್ಕ ಮಡದ ಸುದ್ದಿ ಇಂದ್ರಜಿತು ತಾ ಕೇಳಿ
ದಿಕ್ಕ ತಪ್ಪಿ ರಣಕ ಬಂದಾನು ॥

ಚಾಲ

 ಮಡದ ಸುದ್ದಿ ಕೇಳಿ ಕಂದ
ಘಡಡಡಾ ಗರ್ಜನಿ ಹೊಡದು
ಸಿಡಲ್ ಬಡಿದಂಗಾತ್ರಿ ಆ ಕ್ಷಣಕ
ಓಡಿ ಹೋದಾರ ಕಪಿಗಳು ಆಗಿನ ತುರತಕ॥

ಖಡ್ಗ ಝಳಪಿಸುತ್ತಾ ತಾನು
ಶಡಗರದಿಂದ ಅಂತಾನ ತಂದಿಗೆ
ಹೊಡದ ಬರುವೆನು ರಾಮನ ಬಲಕ್ಕ ॥
ಕಡದ ಹಾಕುವೆ ವೀಳ್ಯವ ಕೊಡೋ ತತ್ಕಾಲಕ್ಕ॥

ಆಡಿದ ಮಾತ ಕೇಳಿ ರಾವಣ
ಬಡದ ಹಾಕುವದಕ್ಕ ಅವರನ್ನ
ತಡಮಾಡದೆ ಕಳಿಸೋ ನೀ ದೇವಾಂತಕ ॥
ನಡಿ ಬ್ಯಾಗ ಹೊಡದ ಬರುವೆನು ಬೇಗ ನರಾಂತಕ॥

ಏರ

 ಬಂದು ಇಂದ್ರಜಿತುವು ತಂದೆಗೆ ಸಮಾಧಾನ ಹೇಳಿ
ಹೊಂದಿ ಬಂದಾನೊ ನಗರಕ ॥
ನಗರಕ್ಕ ಬಂದು ಬ್ಯಾಗ ಸೈನ್ಯಕ್ಹೇಳ್ಯಾರೊ
ಲಗ್ಗ ಹಗೆ ತೀರಿಸಿಕೊಂಡು ಬರ್ರಿ ಬ್ಯಾಗ ॥

ಚಾಲ

 ಛತ್ರ ಚಾಮರ ಪತಾಕೆಗಳು
ಚತುರಂಗ ಮಾರ್ಬಲವೆಲ್ಲಾ ॥
ಖಾತ್ರಿದಿಂದ ಹೊಂಟಿತು ಭರ್ಪುರಾ ॥
ಸೂತ್ರ ಹಿಡಿದು ಹೊಂಟಿತು ತಿಳದ ಮಜಕೂರ॥

ವತ್ತರದಿಂದ ಹೋದಾರವರು
ಚತುರವಾದ ರಾಕ್ಷಸರು
ರಥವನ್ನು ಹೊಡದಾರೊ ಭರರರಾ
ನೆತ್ತಿ ಮ್ಯಾಲೆ ಹೊಡದರ ಅಂಗಾತ  ಬಿದ್ದಾನೊ ಸೂರಾ॥

ಭರ್ತಿಲೆ ಲಡಾಯಿ ನಡದಾಗ
ಸತ್ತಿತೊ ಎರಡು ಬಲದ ಸೈನ್ಯ
ಸತ್ತ ಹ್ವಾದೊ ದೇವಾಂತಕ ಶೂರಾ ॥
ಮೃತ್ಯು ಹೊಂದಿದ ಅಂಗದವ ನರಾಂತಕ ವೀರಾ॥

ಏರ

 ಹಗೆ ತೀರಿಸಿಕೊಂಡು ಬರುವಾಗ
ರಾಕ್ಷಸರಿಗೆ ಹಣಮಂತ ಕೊಂದೊ ಅವರಿಗೆ ॥

ಶೂರರು ಸತ್ತ ಸುದ್ದಿ ವೀರ ಇಂದ್ರಜಿತು ಕೇಳಿ
ಭರದೆ ಬಂದು ಅಂದೊ ತಂದೆಗೆ ॥

ಚಾಲ

 ಸಿಟ್ಟಿಗೆದ್ದ ಇಂದ್ರಜಿತುವು
ಚಟ್ಟನೆದ್ದ ಹೋದಾನಾಗ
ತಟ್ಟನೆ ತಂದೆಯ ಬಳಿಯಲ್ಲಿ ॥
ಶ್ರೇಷ್ಠ ತಂದೆ ವೀಳ್ಯಾ ಕೊಡೊ ನನ್ನ ಕೈಯಲ್ಲಿ॥

ದಿಟ್ಟ ತಂದಿ ಕೇಳೊ ನಿನ್ನ
ಹೊಟ್ಟಿಲೆ ಹುಟ್ಟಿ ಫಲವೇನು
ಖೊಟ್ಟಿ ರಾಮನ ಹಿಡು ತರುವೆನು ಇಲ್ಲೆ
ಕೊಟ್ಟು ಬಿಡುವೆನು ನಿನ್ನ ಕೈಯಾಗ ಈ ಸಭಾದಲ್ಲೆ॥

ಇಷ್ಟ ಮಾತ ಕೇಳಿ ರಾವಣ
ಕೊಟ್ಟಾನೋ ವೀಳ್ಯವ ತಾನು
ಭಂಟ ರಾಮನ ತಂದು ಕೊಡಬೇಕಿಲ್ಲೆ ॥
ಇಷ್ಟೇ ಎಂದು ಆಶೀರ್ವದಿಸಿ ಕಳುಹಿ ಕೊಟ್ಟಾನಲ್ಲೆ॥

ಏರ

 ಭರದೆ ಬಂದು ಅಂದೊ ತಂದೆಗೆ
ಇಂದ್ರಜಿತವು ತ್ವರದಿ ವೀಳ್ಯಾ ಪಡಕೊಂಡೊ
ವೀಳ್ಯಾಪಡಕೊಂಡೊ ಪ್ರೇಮದಲ್ಲಿ ಇಂದ್ರಜಿತುವು
ಹೊಳ್ಳಿ ಹೊಂಟೊ ಹೋಮ ಮಾಡುದಕ ॥

ಚಾಲ

 ರಥವನ್ನೇರಿ ಇಂದ್ರಜಿತುವು
ಒತ್ತರದಿಂದ ಹೊಡದಾನಾಗ
ಉತ್ತರದಿಕ್ಕಿನ ಕಡೆಯಲ್ಲಿ ॥
ರಥ ಇಳಿದು ಮಂಡಲ ಕೊರದಾನಾ ಸ್ಥಳದಲ್ಲಿ॥

ರಕ್ತದ ವರ್ಣದ ಹೂವು
ರಕ್ತದ ವರ್ಣದ ವಸ್ತ್ರ
ಒತ್ತರದಿಂದ ಧರಿಸಿ ಕೊಂಡಾನಲ್ಲಿ ॥
ಮತ್ತದಿಂದ ಕುಂತಾನೊ ಅಗ್ನಿಯ ಹೋಮದಲ್ಲಿ॥

ಪ್ರತ್ಯಕ್ಷ ಅಗ್ನಿಯು ಬಂದು
ತೃಪ್ತನಾಗಿ ಮನಸಿನೊಳು
ಶಕ್ತಿ ಸಿಂಧು ಶಕ್ತಿ ಕೊಟ್ಟಾನಲ್ಲಿ ॥
ತೃಪ್ತಿದಿಂದ ಹೋಗೋ ನಿನಗ ಜಯವು ಕಾಳಗದಲ್ಲಿ॥

ಏರ

 ಹೋಮ ಮಾಡಿದನೊ ತಾನಲ್ಲಿ ಬ್ಯಾಗದಲ್ಲಿ
ಕ್ಷೇಮ ಪಡಕೊಂಡೊ ಅದರಿಂದ ॥

ಅಗ್ನಿ ಕೊಟ್ಟ ಶಕ್ತಿ ಮ್ಯಾಲೆ ಇಂದ್ರಜಿತು ತಾ
ಕೂತು ಗಗನಕ್ಕೆ ಒಯ್ ಅಂತ್ಹೇಳಿದನು

 

ಚಾಲ

 ಸಾಗ ಮಾಡಿದ ಮ್ಯಾಲೆ ಶಕ್ತಿ
ಗಗನಕ ಒಯ್ತು ಅವನ
ತಗೊಂಡ ಹೋದಿತು ಆಕಾಶ ಮ್ಯಾಲಾ ॥
ಆಗ ಅವನು ಸಿಂಹನಾದಾ ಮಾಡ್ಯಾನ ತತ್ಕಾಲಾ॥

ಬ್ಯಾಗ ಗರ್ಜನಿ ಹೊಡದು
ಸಾಗಿದ ವೈರಿಯ ಮ್ಯಾಲಾ
ಹೋಗಿ ಬಾಣಾ ಹೊಡದೊ ಮೈ ಮ್ಯಾಲಾ
ಆಗಿನ ಕ್ಷಣಕ ಕಪಿಗಳು ಆದಾವೊ ದಿಕ್ಕಾಪಾಲಾ॥

ಬಗೆ ಬಗೆ ಗರ್ಜನಿ ಹೊಡದಾ
ತಗದ ತಗದ ನಾನಾ ಥರಾ
ಬಗಳಿ ಆಗುವ ಹಾಂಗ ಕಪಿಗಳಿದೆಲ್ಲಾ
ಹೊಗಳಿಕೊಂತ ನಡದಾನೊ ರಾಕ್ಷಸಗ ಭಯವಿಲ್ಲಾ॥

ಏರ

 ಗಗನಕ ಒಯ್ ಅಂತ್ಹೇಳಿದನೊ ಇಂದ್ರಜಿತುವು
ಬಗಳಿ ಮಾಡಿದನೊ ಕಪಿಗಳನು
ಬಗಳಿ ಮಾಡಿದ್ದು ನೋಡಿ ಹೊಗಳಿ ಆರ್ಭಟದಿಂದಾ
ಅಗ್ರಜಗ್ಹೇಳಿದೊ ಲಕ್ಷ್ಮಣನು

ಚಾಲ

 ಈಗ ಬಂದು ನಮ್ಮೊಡನೆ ಕಾ
ಳಗ ಮಾಡುವಂಥ ರಣ
ರಂಗದೊಳಗೆ ಮಾಯಾ ಮಾಡುವನು ॥
ಹೇಗಾದರೂ ಮಾಡಿ ಇವನ ಈಗ ಕೊಲ್ಲುವೆನು॥

ಶೀಘ್ರದಿ ಶ್ರೀರಾಮಚಂದ್ರನು
ಬೇಗನೆ ತಮ್ಮಗ ಹೇಳತಾನು
ಹೋಗಾ ವ್ಯಾಳ್ಯಾ ಅಲ್ಲ ಇದು ಇನ್ನೂ ॥
ಕೋಲ್ಗಳು ಹೊಡೆದರೆ ಅಪಾಯವಿಲ್ಲ ಇವಗೇನೇನು॥

ಅಗ್ನಿಯ ವರ ಬಲದಿಂದ ಹಿಗ್ಗಿ ಗರ್ವಿಸಿರುವನು
ಜಗ್ಗಿ ಹೊಡೆಯುವ ಅಗ್ನಿಯಾಸ್ತ್ರವನು
ಹೋಗುವದೋಡಿ ಚೆಲ್ಲ ನೆಲಕ ಶಕ್ತಿ ಇವನನ್ನು॥

ಏರ

 ಅಗ್ರಜಗ ಹೇಳಿದೋ ಲಕ್ಷ್ಮಣನು ಅಧಮನನು
ಶೀಘ್ರ ಶಕ್ತಿ ಚಲ್ಲಿ ಹೋಯ್ತೆಂದು ॥
ಶಕ್ತಿ  ಚಲ್ಲಿ ಓಡಿದ್ದು ಯುಕ್ತಿಯಿಂದಲಿ ತಿಳಿದು
ಕ್ಲುಪ್ತನಾಗಿ ಬಂದೊ ಲಂಕೆಯೊಳು

ಚಾಲ

 ಶಕ್ತಿ ಚಲ್ಲಿ ಹೋದದ್ದನ್ನು
ಯುಕ್ತಿಯಿಂದ ತಿಳಿದು ಸಂ
ತಪ್ತನಾದ ತಂದೆಗೆ ಹೇಳಿದಾ ॥
ರಕ್ತದ ಕಾವಲಿ ಹರಿಯಿತು ರಣದೊಳಗಿಂದಾ॥

ಒತ್ತರ ಮಾಡಿ ರಾಮನ ಯಾ
ವತ್ತು ಸೈನ್ಯವೆಲ್ಲವನ್ನು
ತತ್ತರಗೊಳ್ಳುವಂತೆ ಮಾಡಿದೆನಂದಾ ॥
ಭಕ್ತಿಯಿಂದ ಹೇಳತಾನೊ ತಂದೆಗೆ ಕೈ ಮುಗದಾ॥

ಮಾತು ಕೇಳಿ ಲಂಕಾಧೀಶನು
ಸುತನಿಗೆ ತಾ ಹೇಳ ತಾನು
ಮತ್ತೊಮ್ಮೆ ಹೋಗಿ ಕೊಂದ ಬಾರೋ ಕಂದಾ
ಇಂತು ಮಾತ ಕೇಳಿ ಹೊಡದ ಬಾರೊ ಇನ್ನ ಮುಂದಾ॥

ಏರ

 ಲಂಕೆಯೊಳು ಬಂದ ರಾಕ್ಷಸನ ರಾವಣನು
ಬಿಂಕದಲ್ಲಿ ರಣಕೆ ಕಳಿಸಿದನು ॥
ಬಿಂಕದಲಿ ರಣದೊಳಗೆ ಹಂಕಾರ ಮಾಡುತ ಬಂದು
ಶಂಕೆ ಇಲ್ಲದ್ಹೊಂಟೋ ಸೈನ್ಯದಲಿ ॥

ಚಾಲ

 ಮೂರ್ಖ ಚತುರಂಗವೆಲ್ಲಾ
ತೇರ ಗಜ ತುರಗ ಏರಿ
ಭರದಿ ಮುತ್ತಿ ಕೊಂಡಿತು ವಾನರನಾ ॥
ಸರಸರ ಬಂದು ಆಂಜನೇಯನು ತರುಬಿದೊ ಇವರನ್ನಾ॥

ಮಾರುತಿಯ ಆರ್ಭಟಕ
ಚೀರಿ ಚೀರಿ ಒದರ್ಯಾರು ದೈತ್ಯಾರು
ಭೋರ್ಯಾಡಿ ಅತ್ತರೋ ಒಂದಸವನ ॥
ವೀರ ಇಂದ್ರಜಿತವು ಹಂಚಿಕಿ ತಗದೊ ಮತ್ತೊಂದು ಕವನಾ॥

ತ್ವರಿತದಿಂದ ಮಾಡಿದ ಮಾಯದ
ನಾರಿ ಸೀತಿಯನ್ನು ತಾನು
ಹಿರದ ಹೊಡದಾನಾಕಿ ರುಂಡವನಾ ॥
ಹೊರಟು ಹೋದೋ ನಿಕುಂಭಿಳಾ ಯಾಗಕ್ಕೆ ತಾನಾ॥

ಏರ

 ಶಂಕೆ ಇಲ್ಲದ್ಹೊಂಟೊ ಸೈನ್ಯದಲ್ಲಿ ಇಂದ್ರಜಿತುವು
ಕೊಂಕು ಮಾಡಿ ಹೊಂಟೊ ಬ್ಯಾಗದಲಿ ॥
ಸೀತೆ ಸತ್ತದ್ದು ಕೇಳಿ ಕೋತಿಗಳು ಓಡಿದರೊ
ಘಾತವಾಯ್ತು ಕೇಳ್ರಿ ಸ್ವಾಮಿ ನಮದಾ ॥

ಚಾಲ

 ಅತ್ತ ಕೋತಿ ಕಪಿಗಳೆಲ್ಲಾ
ಒತ್ತರದಿಂದ ಬರತಾರು
ಚಿಂತಿ ಮಾಡುತ ಮನಸಿನಲ್ಲಿ ॥
ಸೀತಾದೇವಿಯನ್ನು ಕೊಂದಾನ ಖಳನು ರಣದಲ್ಲಿ॥

ಇಂಥಾ ಮಾತ ಕೇಳಿ ಸ್ವಾಮಿ
ಭ್ರಾಂತಿ ಬಡದ ನಿಂತಾನು
ಪ್ರೀತಿಯ ಜಾನಕಿ ಹೋದಳೆಲ್ಲಿ ॥
ಸತಿಯ ಅಗಲಿದಳೋ ಎನಗ ಇಂದಿನ ದಿನದಲ್ಲಿ॥

ಮತ್ತು ಮೂರ್ಛೆ ತಿಳಿದು ಎದ್ದು
ಎತ್ತ ಹೋದರೆ ಬಿಟ್ಟೇನ ಖಳನೀಗಿ
ಮೃತ್ಯು ಲೋಕದೊಳಗ ಇರಲಿ ॥
ಪಾತಾಳ ಲೋಕದೊಳಗ ಹೋದರ ಬಾಣ ಬಿಡುವೆನಲ್ಲಿ ॥॥

ಏರ

 ಘಾತವಾಯ್ತು ಕೇಳ್ರಿ ಸ್ವಾಮಿ ನಮದ
ಈ ವಿವಸಾ ಚಿತ್ತದೋಳೊಂದೆ ಮನವಿಲ್ಲಾ ॥

ಇಂದು ಕೇಳರಿ ಸ್ವಾಮಿ ಚಂದದಿಂದಲಿ ನೀವು
ಮುಂದೆ ಇದಕೇನು ಹಂಚಿಕೆಯಾ ॥

ಚಾಲ

 ಇಷ್ಟ ಕೇಳಿ ವಿಭೀಷಣ
ಚಟ್ಟನೆದ್ದ ರಾಮನ ಚರಣ
ಮುಟ್ಟಿ ಹೇಳತಾನ ಇದಕ್ಯಾಕಿನ್ನ ॥
ಗಟ್ಟಿ ಕೇಳರಿ ಮಾಯದ ಸೀತೆ ಕೊಂದು ಹೋದರಿ ಅವನಾ॥

ಶ್ರೇಷ್ಠ ಹೋಮಾ ಮಾಡುವದಕ್ಕೆ
ತಟ್ಟನೆ ಮಾಯಮಾಡಿ ಹೋದಾ
ಕೆಟ್ಟ ಇಂದ್ರಜಿತವು ಕೇಳ್ರಿನ್ನಾ
ಶಿಷ್ಟವಾದ ನೇಮದಿಂದ ಮಾಡುವನು ತಾನಾ॥

ಭ್ರಷ್ಟ ಇಂದ್ರಜಿತುವಿ ಹೋಮಾ
ತಟ್ಟನೆ ಮುಗಿಯುವ ದಿನಾ
ಸಟ್ಟನೆ ಕಳಿಸರಿ ಲಕ್ಷ್ಮಣನಾ ॥
ಪಟ್ಟನೆ ಹೋಗಿ ಇಂದ್ರಜಿತುವಿನ ಕೊಂದ ಬರುವೆನಾ॥

ಏರ

 ಇದಕೇನು ಹಂಚಿಕೆಯು ತಿಳಿತು ಇದರ ಪರಿಯೂ
ಯುದ್ಧಕ್ಕೆ ನಡಿರಿ ಬ್ಯಾಗದಲ್ಲಿ
ಬ್ಯಾಗ ಬ್ಯಾಗ ನಡಿರಿ ಸಾಗಿ ಸಾಗಿ ಮುಂದಕ್ಕ
ಜಗ್ಗಿ ಜಗ್ಗಿ ಹೊಡಿರಿ ಅರಿಗಳನಾ ॥

ಚಾಲ

 ಶೂರ ಲಕ್ಷ್ಮಣನು ತಾನು
ಅರಿಗಳಿಗೆ ಭೀಕರವಾದ
ಸರಳ್ಗಳ ಬಿಟ್ಟಾನೋ ಸರರಾ
ವೀರ ರಕ್ಕಸನ ಸೈನ್ಯ ಬಂತೊ ಭರ್ಪೂರಾ
ಅರ್ಧಚಂದ್ರಾಕೃತಿಯಲ್ಲಿ॥

ತರದ ತರದ ಬಾಣಗಳಿಂದ
ಶೂರರೆಲ್ಲರ ನಡಿಶಾರ ಭಯಂಕರಾ ॥
ಎರಡೂ ದಳದಲ್ಲಿ ಸತ್ತದೊ ಮಾರ್ಬಲ ಜನರಾ॥

ಶೂರರ ಕಾಳಗದಲ್ಲಿ  ಹರದಿತ್ತೊ ನೆತ್ತರ ಕಾವಲಿ
ವೀರ ಲಕ್ಷ್ಮಣ ಬಹಳ ಶೂರಾ
ಕೊಂದ ಹಾಕಿದ ಇಂದ್ರಜಿತುವಿನ ಶಿರಾ॥

ಏರ

 ಜಗ್ಗಿ ಜಗ್ಗಿ ಹೊಡಿರಿ ಅರಿಗಳನು ಎಲ್ಲರನು
ಕುಗ್ಗಿ ಇಂದ್ರಜಿತವು ಮಡದಾನು ॥
ಇಂದ್ರಜಿತು ಸತ್ತದ್ದು ಸುಂದ್ರ ರಾಮಚಂದ್ರ ಕೇಳಿ
ಚಂದ್ರನಂತೆ ಶಾಂತ ಆದಾನು ॥

ಚಾಲ

 ಒಕ್ಕಟ್ಟಾಗಿ ಕಪಿಗಳೆಲ್ಲರು
ರಕ್ಕಸರನ್ನೆಲ್ಲ ಕೊಂದು
ಒಕ್ಕಲಿಕ್ಕಿ ಹೊಡದಾರ ಎಲ್ಲರನ್ನು ॥
ಠಕ್ಕ ಇಂದ್ರಜಿತುವು ಮಡದ ವಾರ್ತೆ ಕೇಳ್ರಿನ್ನು॥

ಸಿಕ್ಕ ಸಿಕ್ಕ ರಕ್ಕಸರನ್ನು ॥
ಅಕ್ಕರದಿಂದ ಎತ್ತಿ ಖಡದಾ ॥
ಶೋಕ ಮಾಡಿ ಹೊಂದ್ಯಾರ ಮರಣವನ್ನು ॥
ಲಕ್ಷ್ಮಣನ ಬಾಣಕ ಇಂದ್ರಜಿತು ಮಡದಾನು॥

ರಕ್ಕಸ ಮಡದ ವಾರ್ತೆ ಕೇಳಿ
ಕೊಕ್ಕುಟ ಹೊಡದ ನಗತಾರ ಎಲ್ಲಾರು
ಮಿಕ್ಕ ರಾಮನು ಅಪ್ಪಿಕೊಂಡು ಲಕ್ಷ್ಮಣನನ್ನು ॥
ತೆಕ್ಕೈಸಿ ಮೈಮ್ಯಾಲೆ ಕೈ ಆಡಿಸಿದನು॥

ತಿಕ್ಕಿ ತಿಕ್ಕಿ ಆಡಿಸುವಾಗ
ಸಿಕ್ಕ ಸಿಕ್ಕಲ್ಲಿ ಗಾಯಗಳಿರಲು
ತರ್ಕದಿಂದ ಕರದಾನು ಸುಕ್ಷೇಣನನ್ನು
ತಕ್ಕಂಥ ಔಷಧ ಕೊಟ್ಟ ಗಾಯ ಮಾಸಿದನೊ॥

ಏರ

 ಚಂದ್ರನಂತೆ ಶಾಂತ ಆದಾನು ರಾಮಚಂದ್ರ
ಸುಂದ್ರ ತಮ್ಮನ್ನಪ್ಪಿ ದ್ಹರುಷದಲ್ಲಿ ॥

ಸರಸರನೆ ಚಾರಕರು ಭರಭರನೆ ಸಾಗಿದರು
ಕರದ ರಾವಣಗ ಹೇಳಿದರು ॥

ಚಾಲ

ಕರ ಮುಗಿದು ಹೇಳುವೆವು ಸ್ವಾಮಿ
ಶಿರಬಾಗಿ ಚರಣಕ್ಕೆರಗುವೆವು
ಭರದೆ ಲಾಲಿಸರಿ ಭಿನ್ನಪ
ತ್ವರದಿ ಪೋಗಿ ಸತ್ತಾನ ಕೇಳ್ರಿ ಇಂದ್ರಜಿತು ಭೂಪ॥

ಕರ್ಣದಿಂದ ಕೇಳಿದ ರಾವಣ
ಶೂರ ಕಂದನ ಮರಣವನ್ನು
ಯಾರಲ್ಲಿ ಅಡಗಿಸಲಿ ನನ್ನ ಕೋಪ
ಭರವಸ ಮಾಡಿನಿ ಕಂದನ ಮ್ಯಾಲಾ ತಾಳಲೆಷ್ಟ ತಾಪ ॥॥

ಪರಿಪರಿ ಕಷ್ಟ ಭೋಗಿಸಿ ನಾನು
ಸ್ಥಿರವಾಗಿ ಇರುವುದು ಬ್ಯಾಡ
ಚಾರಕರಿರ್ಯಾ ಕರಿರ್ಯೊ ನಮ ಗುಂಪ ॥
ಬರಮಾಡಿಸೊ ಅವರನ್ನ ಓಲಗದೀ॥

ಏರ

 ಕರದ ರಾವಣಗ ಹೇಳಿದರೊ ಚಾರಕರು
ಭರದಿ ಕರಿ ಅಂದೊ ನಮ್ಮ ದಳವಾ ॥
ವೀಳ್ಯ ಕೊಡುವೆನು ಬ್ಯಾಗ
ಪಾಳ್ಯಾಕ ಸಾಗುದಕ ಕಾಳಗ ಮಾಡಿ ಜೈಸುದಕ ॥

ಚಾಲ

 ಚಾರಕನೇ ಕೇಳೆನ್ನ ಮಾತು
ಭರದಿ ಪೋಗಿ ಕರಕೊಂಡು ಬಾರೊ
ತ್ವರದಿ ಬರಲಿ ನಮ್ಮ ಸೈನ್ಯ ಬ್ಯಾಗ ॥
ಭರದಿ ಪೋಗಿ ಕರಿಯ ಹೋಗೋ ಅವರನ್ನ ಲಗ್ಗ॥

ಶಿರ ಬಾಗಿ ಲಾಲಿಸಿ ವಚನ
ಚಾರಕ ಹೋಗಿ ಹೇಳತಾನಾ
ತುರದಿ ಬರ್ರಿ ನೀವು ಸಭಾದೊಳಗ
ಕರಿಯೆ ಅಂತ ಹೇಳ್ಯಾರ ನಿಮ್ಮನ್ನ ದಶಕಂಠ ಬೇಗ॥

ಚಾರಕನ ಮುಖದಿಂದ
ಅರಸು ಕರಿಯೆ ಕಳಿಸಿದ್ದು ನೋಡಿ
ಸರಸರನೆ ಬಂದಾರೊ ಓಲಗದೊಳಗ
ಕರವ ಜೋಡಿಸಿ ಕೇಳತಾರೋ ಹೇಳ್ರಿ ಅಪ್ಪಣಿ ಬ್ಯಾಗ॥

ಕರಕರನೆ ಕಡಿಯುತ್ತ
ಶೂರ ದೈತ್ಯರಿಗ್ಹೇಳತಾನ
ವೈರಿ ರಾಮನ ಕೊಂದ ಬರ್ಯೊ ಈಗ
ಹರಸಿ ಕಳಿಸ್ಯಾನ ವೀಳ್ಯಾ ಕೊಟ್ಟು ಅವರ ಕೈಯಾಗ॥

ಏರ

 ಕಾಳಗ ಮಾಡಿ ಜೈಸುದಕ ಹೊಂಟಾರೊ
ಖೂಳ ರಕ್ಕಸರು ಬಲು ಬ್ಯಾಗ ॥
ಬಲು ಬ್ಯಾಗ ಹೊಂಟಾರೊ
ನಲಿ ನಲಿದು ರಕ್ಕಸರು
ಕಲಿಗಳು ನಾವೆ ಎಂದೆನುತ

ಚಾಲ

 ಕ್ರೂರ ರಕ್ಕಸರು ಬ್ಯಾಗ
ವೀರ ಗಜ ತುರಗಗಳನ್ನು
ಮೀರಿ ಹೊಡದಾರ ರಣರಂಗದ ಮ್ಯಾಲ
ತೇರ ಸಿಂಹ ಹುಲಿ ಚತುರಂಗಕ್ಕಳತಿಲ್ಲಾ॥

ತರತರದ ರಾಕ್ಷಸರು ಎಲ್ಲಾ
ಕರದಲ್ಲಿರುವ ಖಡ್ಗ ಹಿಡದಾರ ಮ್ಯಾಲಾ ॥
ಸರಳ ಚಕ್ರ ಶೂಲಗಳಿಗೆ ಏನೂ ಲೆಕ್ಕವಿಲ್ಲ॥

ಶೂರರಾದ ರಕ್ಕಸರೆಲ್ಲಾ
ವೀರ ಬೊಬ್ಬಿಯಾರ್ಭಟದಿಂದ
ತೂರಿ ಬಂದಾರ ಕಪಿಗಳ ಗುಂಪಿನ ಮ್ಯಾಲ ॥
ಬರುವದ ನೋಡಿ ಕಪಿಗಳು ಆದಾರ ಬೆಂಕಿ ಲಾಲಾ॥

ಮರ ಗುಂಡು ಕಲ್ಲುಗಳನ್ನು
ಧೀರ ಕಪಿಗಳು ತೆಗೆದುಕೊಂಡು
ಸರಸರನೆ ಹಾಕ್ಯಾರೊ ದೈತ್ಯರು ಮ್ಯಾಲಾ
ಪರಿಪರಿ ಹೊಡದರ ದೈತ್ಯರ ಧೃತಿಗೆಡಲಿಲ್ಲ॥

ಏರ

 ಕಲಿಗಳು ನಾವೆ ಎಂದೆನುತ ರಕ್ಕಸರು
ನಿಲ್ಲದೆ ಹೊಡದ್ರೊ ವಾನರರು ॥
ವಾನರನ್ಹೊಡದದ್ದು ನೋಡಿ ಮಾನವಂತ
ರಾಮಚಂದ್ರ ಸಾಗಿ ನಿಂತೋ ಕಾಳಗಕ್ಕ

ಚಾಲ

 ಚಂದದಿಂದ ಶ್ರೀರಾಮಚಂದ್ರ
ಮುಂದೆ ಬಂದು ನಿಂತಾನ ನೋಡಿ
ಸುಂದರ ರಕ್ಕಸರೆಲ್ಲಾರನ್ನು
ಇಂದಿನ ದಿವಸಾ ಹೊಡೆಯುವೆನು ಕಾಳಗದಲ್ಲಿ ನಾನು॥

ನೊಂದಂಥ ಕಪಿಗಳೇ ಕೇಳ್ರಿ ॥
ಮಂದಮತಿ ರಕ್ಕಸರನ್ನು
ಕೊಂದ ಹಾಕುವೆನು ಕೇಳ್ರಿ ನಾನು
ಚಂದದಿಂದ ಬಿಟ್ಟೇನ ನೋಡರಿ ಮೋಹನಾಸ್ತ್ರವನ್ನು॥

ಸುಂದರ ಅಸ್ತ್ರ ಬಿಟ್ಟ ಕೂಡಲೇ
ಬಂಧುರವಾದ ರಕ್ಕಸರು
ಕಂದಿ ಬಿದ್ದರು ನೋಡ್ರಿ ನೆಲವನ್ನು
ಕೊಂದ ಬಿಡ್ರಿ ಇವರಲ್ಲಿ ಒಬ್ಬನನ್ನು॥

ಮಂದವಾದ ರಕ್ಕಸರನ್ನು
ಸುಂದರ ರಾಮನ ಆಜ್ಞೆಯಿಂದ
ಬಂದು ಬಿಟ್ಟ ಕೊಂದಾರ ಎಲ್ಲಾರನ್ನೂ ॥
ಆದ ವರ್ತಮಾನಾ ರಾವಣಗ ಹೇಳ ಹೋಗೋ ನೀನು॥

ಏರ

 ತಾನಾಗಿ ನಿಂತೋ ಕಾಳಗಕ್ಕ ರಾಮಚಂದ್ರ
ಚನ್ನಾಗಿ ಕೊಂದು ಅರಿಗಳನಾ ॥
ಅತ್ತಕಡೆ ಚಾರಕನು ವತ್ತರದಿಂದಲಿ ಪೋಗಿ
ಹತ್ತ ತೆಲಿ ರಾವಣಗ್ಹೇಳಿದನು ॥

ಚಾಲ

 ಶಿರಬಾಗಿ ಕರ ಜೋಡಿಸುವೆನು ॥
ಚರಣಕ್ಕೆರಗಿ ಹೇಳುವೆನು

ಮರಗಿ ಕಳವಳಗೊಂಡು ಚಿಂತಿಯಿಂದಾ
ವರತಮಾನಾ ಕೇಳ್ರಿ ಇದು ಕಾಗಳದೊಳಗಿಂದಾ॥

ವೀರ ರಕ್ಕಸರು ಬ್ಯಾಗ  ತರತರ ಕಾಳಗ ಮಾಡಿದರೆ
ಭರದಿ ಅವರ ಮ್ಯಾಲ ಸಾಂಬ ಮುನಿದ ॥
ನರರಾಮನ ಬಾಣಕ ದೈತ್ಯರೆಲ್ಲರು ಬಿದ್ದಾರೊ ಮೂರ್ಛಿ ಬಂದಾ॥

ತ್ವರಿತದಿಂದ ಬಿದ್ದ ಬಳಿಕ  ಮೀರಿದಂಥ ಸೈನ್ಯವನ್ನು
ಹೀರಿ ವಗೆದರಿ ಲಕ್ಷ್ಮಣಬಂದಾ ॥
ವೀರ ಕಪಿಗಳು ಹಾಕ್ಯಾರ ಬಾಕಿ ಎಲ್ಲಾರನ್ನು ಕೊಂದಾ॥

ಚಾರರ ಮುಖದಿಂದ ರಾಕ್ಷ
ಸರ ಮರಣದ ವಾರ್ತೆ ಕೇಳಿ
ಧೀರ ರಾವಣ ತಡಯಾಕಿನ್ನ ಅಂದಾ ॥
ಕಾಳಿ ಹಿಡಿಸಿ ರಥ ಶ್ರಿಂಗಾರ ಮಾಡ್ಹೋಗೊ ಚಂದದಿಂದ॥

ಏರ

 ಕೇಳಿದನು ರಾವಣನು ಚಾರಕಗ ಹೇಳಿದನು
ಕಾಳಿ ಹಿಡಸಿ ರಥವ ಶೃಂಗಾರಿಸೊ ॥

* * *