(ಕ್ರಿ. ಶ. ೧೭೭೭-೧೮೫೧) (ವಿದ್ಯುಚ್ಛಕ್ತಿ ಮತ್ತು ಅಯಸ್ಕಾಂತ ಸಂಬಂಧ)

ಹ್ಯಾನ್ಸ್ ಕ್ರಿಶ್ಚನ್ ಓರ್ಸ್ಟೆಡ್ ಖ್ಯಾತ ಭೌತ ವಿಜ್ಞಾನಿಯಾಗಿದ್ದ ಈತ ಕೋಪನ್ ಹೇಗನ್ ನಲ್ಲಿ ಪ್ರಾಧ್ಯಾಪಕನಾಗಿದ್ದರು.

ಒಮ್ಮೆ ಸಂಭವಿಸಿದ ಅನಿರೀಕ್ಷಿತ ಘಟನೆ ಈ ವಿಜ್ಞಾನಿ ಅದ್ಭುತ ಸಂಶೋಧನೆ ಮಾಡುವುದಕ್ಕೆ ಕಾರಣವಾಯಿತು. ವೈಜ್ಞಾನಿಕ ಕ್ಷೇತ್ರಕ್ಕೆ ಉತ್ತಮ ಅದೃಷ್ಟ ತಂದ ಆ ಘಟನೆ ಯಾವುದು? ಒಮ್ಮೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾಗ ಓರ್ಸ್ಟೆಡ್ ಟೇಬಲಿನ ಕಡೆಗೆ ನೋಡಿದರು. ಬೋಧನೆಗೆ ಅಗತ್ಯವಿದ್ದ ಕಂಪಾಸನ್ನು ಆ ಟೇಬಲಿನ ಮೇಲಿದ್ದ ತಂತಿಗಲ ಮೇಲೆ ಇಟ್ಟಿದ್ದರು. ತಂತಿಗಳು ಬ್ಯಾಟರಿಗೆ ಜೋಡಿಸಲ್ಪಟ್ಟಿದ್ದವು. ಆದರೆ ಕಂಪಾಸು ಆತ ಇಟ್ಟಿದ್ದ ಸ್ಥಿತಿಯಲ್ಲಿ ಇರಲಿಲ್ಲ. ಅದು ಸ್ವಲ್ಪ ಹೊರಳಿತ್ತು. “ವಿದ್ಯುತ್ ತಂತಿಗೂ ಕಂಪಾಸಿನ ಮೊನೆಗೂ ಏನೋ ಸಂಬಂಧ ಇರಬೇಕು. ಅಂತಲೇ ಕಂಪಾಸ್ ಮೊದಲಿದ್ದ ಸ್ಥಿತಿಯಲ್ಲಿಲ್ಲ. ತಂತಿ ಅದರ ಮೇಲೆ ಏನಾದರೂ ಪರಿಣಾಮ ಉಂಟುಮಾಡಿರಲೇಬೇಕು” ಎಂದು ಅವರ ವೈಜ್ಞಾನಿಕ ಮನಸ್ಸಿಗೆ ಹೊಳೆಯಿತು. ಆತ ಹಾಗೆ ಹೇಳಲು ಕಾರಣವೇನೆಂದರೆ, ಕಂಪಾಸಿನ ಮೊನೆ ಅಯಸ್ಕಾಂತದ್ದಿತ್ತು. ವಿದ್ಯುಚ್ಛಕ್ತಿಗೂ ಅಯಸ್ಕಾಂತಕ್ಕೂ ಸಂಬಂಧ ಇದ್ದೇ ಇರಬೇಕೆಂದು ಆತನಿಗೆ ಖಾತ್ರಿಯಾಯಿತು. ಈ ಬಹು ಮುಖ್ಯವಾದ ಸಂಶೋಧನೆಯ ಪರಿಣಾಮವಾಗಿ ಇಲೆಕ್ಟ್ರೊ ಮ್ಯಾಗ್ನೆಟ್ ಅನ್ನು ಕಂಡುಹಿಡಿಯಲು ಸಾಧ್ಯವಾಯಿತು.

ಇಲೆಕ್ಟ್ರೊ ಮ್ಯಾಗ್ನೆಟ್ ಅನ್ನು ಕಂಡು ಹಿಡಿದಿರದಿದ್ದರೆ ಬಾನುಲಿ, ದೂರದರ್ಶನ, ಮೋಟಾರುಗಳು, ಬೃಹತ್ ಕಾರ್ಖಾನೆಗಳು, ಟೆಲಿಫೋನು, ವಿದ್ಯುದ್ವೀಪಗಳು, ವಿದ್ಯುತ್ ರೈಲು ಮಾರ್ಗಗಳು, ಇಲೆಕ್ಟ್ರಿಕ್ ಯಂತ್ರಗಳು ಇರುತ್ತಲೇ ಇರಲಿಲ್ಲ. ಬ್ಯಾಟರಿ ಜತೆ ಸಂಪರ್ಕವಿದ್ದ ತಂತಿಗಳು ಓರ್ಸ್ಟೆಡ್ ರ ಕಂಪಾಸಿನ ಕೆಳಗಿದ್ದುದರಿಂದ ಇದೆಲ್ಲ ಸಾಧ್ಯವಾಯಿತು.

ಪರಿಶುದ್ಧ ಲೋಹರೂಪದ ಅಲ್ಯೂಮಿನಿಯಮ್ ಅನ್ನು ಕಂಡು ಹಿಡಿದದ್ದು ಇವರ ಇನ್ನೊಂದು ಮುಖ್ಯ ಸಾಧನೆ.

ಹ್ಯಾನ್ಸ್ ಓರ್ಸ್ಟೆಡ್ ೧೮೫೧ ರಲ್ಲಿ ನಿಧನ ಹೊಂದಿದರು.