ಒಂದೆ ಮಂಗಳವಾರ ತಿಂಗಳುಟ್ಹೊತ್ತಿನಲ್ಲಿ
ಅಂಗಳದಲ್ ಕೊಂತಿ ಮೈಯ್ಯಾ ನೆರದು
ಅಂಗಳದಲ್ ಕೊಂತಿ ಮೈಯ್ ನೆರದ ಸುದ್ದೀ ಕೇಳಿ
ವಡ್ಡಣಗೇ ಓಲೆ ಬರದಾರು

ವಡ್ಡಣನ ಕರಸಾರು ಒಳಭಾವಿ ತೆಗೆಸಾರು
ಅಲ್ಲಿ ಮೀಯವ್ವ ಹೊಸನೀರಾ
ಅಲ್ಲಿ ಮೀಯವ್ವ ಹೊಸನೀರ – ಮಲನೀರ
ವಡ್ಡಣ ತೆಗೆದವ್ನೆ ಹೊಸ ಭಾವಿ
ವಡ್ಡಣ ತೆಗೆದವ್ನೆ ಹೊಸ ಭಾವಿ – ಕೊಂತ್ಯವ್ವ
ಅಲ್ಲಿ ಮೀಯವ್ವ ಹೊಸ ನೀರಾ

ಒಂದೇ ಗುಂಡೀಸುತ್ತ ಬಿಟ್ಟಾಳು ಮಂಡೇವ
ಮಂಡ್ಹೋಗಿ ಮೇದೊ ಮರುಗವಾ
ಮಂಡ್ಹೋಗೀ ಮೇದೊ ಮರುಗವ ಮಲ್ಲಿಗ್ಹೊವ
ನಿಮ್ ಮಂಡ್ಹೋಗಿ ಮೇದೊ ಜವನಾವಾ

ಎರಡೇ ಗುಂಡೀ ಸುತ್ತ ಬಿಟ್ಟಾಳು ಮಂಡೇವ
ಮಂಡ್ಹೋಗಿ ಮೇದೊ ಮರುಗಾವ
ಮಂಡ್ಹೋಗಿ ಮೇದೊ ಮರುಗ ಮಲ್ಲಿಗ್ಹೂವ
ನಿಮ್ ಮಂಡ್ಹೋಗೀ ಮೇದೊ ಜವನವಾ