ಬಂಜಾರಾ ಬುಡಕಟ್ಟು ಪಿತಾಂಬರದಲ್ಲಿ ಥಳ ಥಳಿಸುವ ಜರದ ಎಳೆಗಳಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಚದುರಿಕೊಂಡಿದೆ. ಶ್ರೀಮಂತ ಜನಪದ ಸಂಸ್ಕೃತಿ ಹೊಂದಿದ ಕ್ಷಾತ್ರತೇಜದ ಬಂಜಾರಾ ಕುಟುಂಬದಲ್ಲಿ ದಿನಾಂಕ ೧-೬-೧೯೫೩ರಲ್ಲಿ ಡಾ. ಖಂಡೋಬಾ ಅವರ ಜನನವಾಯಿತು. ಇವರ ಹುಟ್ಟೂರು ಬಾಗಲಕೋಟ ಸಮೀಪದ ಶಿರೂರ ತಾಂಡಾ. “ತಾಂಡಾ ಸಂಸ್ಕೃತಿ” ಮಡಿಲಲ್ಲಿ ಬೆಳೆದವರಾದುದರಿಂದ ತಮ್ಮ ಜನಸಮುದಾಯದ ನೋವು-ನಲಿವುಗಳನ್ನು ಕಣ್ಣಾರೆ ಕಂಡು ಸ್ವತಃ ಅನುಭವಿಸಿದವರು ಸಹ. “ಕಾಡ ಸಂಸ್ಕೃತಿ”ಯಿಂದ “ನಾಡ ಸಂಸ್ಕೃತಿ”ಗೆ ಬರುವಲ್ಲಿ ಪಟ್ಟ ಶ್ರಮ ಹಲವಾರು. ಅದೆಷ್ಟೋ ಮುಳ್ಳಿನ ದಾರಿಗಳನ್ನು ಕ್ರಮಿಸಿ ವಿಶ್ವವಿದ್ಯಾಲಯದಂಥ ಉನ್ನತ ಶೈಕ್ಷಣಿಕ ರಂಗವನ್ನು ಪ್ರವೇಶಿಸಿದ್ದಾರೆ.

ಡಾ. ಖಂಡೋಬಾ ಅವರು ಹಂತ ಹಂತವಾಗಿ ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳನ್ನು ಅಲಂಕರಿಸಿರುವವರಲ್ಲದೆ, ಕಳೆದ ೨೫ ವರ್ಷಗಳಿಂದ ಕನ್ನಡ ಮತ್ತು ಜಾನಪದ (ವಿಶೇಷವಾಗಿ ಬುಡಕಟ್ಟು) ಕ್ಷೇತ್ರಗಳಲ್ಲಿ ೨೦ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಶಿಬಿರ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ವಿವಿಧ ಪತ್ರಿಕೆಗಳಲ್ಲಿ ಇವರ ೫೦ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಸರಕಾರ ಅವರಿಗೆ ೧೯೯೭ರಲ್ಲಿ “ಜಾನಪದ ತಜ್ಞ” ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ “ಲಂಬಾಣಿ ಸಂಸ್ಕೃತಿ” ಎಂಬ ಕೃತಿ ೧೯೮೮ರಲ್ಲಿ ದಿ. ತೇಜಸಿಂಗ ರಾಠೋಡ ಮೆಮೋರಿಯಲ್ ಟ್ರಸ್ಟ್, ಗುಲಬರ್ಗಾದಿಂದ ಪ್ರಕಟವಾಯಿತು. ಇದರಲ್ಲಿ ಒಟ್ಟು ಹದಿನೇಳು ಲೇಖನಗಳಿದ್ದು, ಡಾ. ಖಂಡೋಬಾ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಕಟಿಸಿದ ಬಿಡಿ ಲೇಖನಗಳಾಗಿವೆ. ಇದರಲ್ಲಿಯ ಎಲ್ಲ ಲೇಖನಗಳು ಲಂಬಾಣಿ ಬುಡಕಟ್ಟಿನ ಸಾಂಸ್ಕೃತಿಕ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲುವಂತಹುಗಳಾಗಿವೆ. ಸಮುದಾಯದ ಒಳಗಿನವರು ನಡೆಸಿದ ಶೋಧನೆಯಲ್ಲಿ ಸಾಮಾನ್ಯವಾಗಿ ದಟ್ಟವಾದ ಮಾಹಿತಿಗಳಿರುವುದು ಸಹಜ. ಅಂತೆಯೇ ಈ ಕೃತಿಯಲ್ಲಿ ಲಂಬಾಣಿಗರ ಮೂಲ-ಚೂಲಗಳನ್ನು ವಿವರಿಸುವುದರಲ್ಲಿ ಡಾ. ಖಂಡೋಬಾ ಅವರು ಯಶಸ್ವಿಯಾಗಿದ್ದಾರೆ. ಅಲ್ಲದೆ ಇದರಲ್ಲಿ ಪ್ರಕಟಗೊಂಡಿರುವ ಓದುಗರ ಗಮನವನ್ನು ತೀವ್ರವಾಗಿ ಸೆಳೆಯುತ್ತವೆ.

ಲಂಬಾಣಿಗರ ಪೂರ್ವದ ಸ್ಥಿತಿಗತಿ ಕುರಿತ ಮೊದಲನೆಯ ಲೇಖನದಲ್ಲಿ “ಲಂಬಾಣಿ” (ಬಂಜಾರಾ) ಸಮಾಜದ ಇತಿಹಾಸ ತುಂಬಾ ಪುರಾತನ ಹಾಗೂ ಗೌರವಶಾಲಿಯಾಗಿದೆ. ರಾಜಸ್ಥಾನದ “ವಣಿಕ್” (ವ್ಯಾಪಾರಿ) ಸಮಾಜಕ್ಕೆ ಸೇರಿದ ಲಂಬಾಣಿಗರು, ರಾಜಕೀಯ ಹಾಗೂ ಸಾಮಾಜಿಕ ಒತ್ತಡಕ್ಕೆ ಸಿಲುಕಿ ತಾಯ್ನಾಡನ್ನು ತ್ಯಜಿಸಿದರು. ಇವರು ತಮ್ಮ ಸಾವಿರಾರು ದನಕರುಗಳ ಮೇಲೆ ಖ್ಯಾದ ಪದಾರ್ಥಗಳನ್ನು ಹೇರಿಕೊಂಡು ತಂಡೋಪತಂಡವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಲೆಮಾರಿಯಾಗಿ ಸಂಚರಿಸಿದರು ಎಂದು ಡಾ. ಖಂಡೋಬಾ ಅವರು ಅಭಿಪ್ರಾಯ ಪಟ್ಟಿರುವುದು ನಿಜ ಸಂಗತಿ. ಏಕೆಂದರೆ ಅದೆಷ್ಟೋ ಜನ ವಿದ್ವಾಂಸರು ಲಂಬಾಣಿಗರ ಮೂಲಸ್ಥಾನ ರಾಜಸ್ಥಾನವೆಂದೇ ಉಲ್ಲೇಖಿಸಿರುವುದನ್ನು ಇಲ್ಲಿ ಗಮನಿಸಬಹುದು. ಆದ್ದರಿಂದ ಇದೊಂದು ಉತ್ತಮ ಲೇಖನವೆಂದು ಹೇಳಬಹುದು.

ಲಂಬಾಣಿಗರು ಹಾಗೂ ಅವರ ಮೂಲ ಅನ್ನುವಂಥ ಎರಡನೆಯ ಲೇಖನದಲ್ಲಿ ರಾಜಾ ಭೋಜನ ಆಡಳಿತ ಕಾಲದಿಂದ ಹಿಡಿದು ಹದಿನಾಲ್ಕನೆಯ ಶತಮಾನದವರೆಗೆ ನಡೆದ ಧಾರ್ಮಿಕ ಸಂಘರ್ಷ, ವಿದೇಶಿ ಆಕ್ರಮಣ ಹಾಗೂ ರಜಪೂತರ ಅನೇಕ ಯುದ್ಧಗಳಲ್ಲಿ ಈ ಸಮುದಾಯದವರು ಕೂಡ ಭಾರತೀಯ ಸೈನಿಕರಾಗಿ ತಮ್ಮ ಸರ್ವಸ್ವ ತ್ಯಾಗ ಬಲಿದಾನ ಮಾಡಿದ್ದರ ವಿವರಣೆ ನೀಡಿದ್ದಾರೆ. ಅಲ್ಲದೆ ಲಂಬಾಣಿಗರ ಉಗಮದ ಬಗೆಗೆ ಒಂದು ಖಚಿತವಾದ ನಿಲುವಿಗೆ ಬಂದಿದ್ದಾರೆ. ಲಂಬಾಣಿ ಜನ ಕುರಿತ ಮೂರನೆಯ ಲೇಖನದಲ್ಲಿ ಲಂಬಾಣಿಗರು, ತಾಯ್ನಾಡಾದ ರಾಜಸ್ಥಾನವನ್ನು ತೊರೆದು ದಕ್ಷಿಣದ ಹಲವಾರು ರಾಜ್ಯಗಳಲ್ಲಿ ತಮಗೆ ಅನುಕೂಲವಾದ ಪ್ರದೇಶಗಳಲ್ಲಿ ನೆಲೆಸಿಕೊಂಡರು. ಇವರನ್ನು ಆಯಾ ಪ್ರದೇಶಗಳಲ್ಲಿ ಬಂಜಾರಾ, ಬಂಜಾರಿ, ಬ್ರಂಜಾರಿ, ಲಂಬಾಣಿ, ಲಂಬಾಡಿ, ಲಮಾಣಿ, ಸುಗಾಲಿ, ಸುಕಾಲಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ ಎಂದು ಪುರಾವೆ ನೀಡಿದ್ದಾರೆ. ಬೇರೆ ಪ್ರದೇಶದಿಂದ ವಲಸೆ ಬಂದುದರಿಂದ ಇವರುಗಳು ಬೇರೆಯವರ ಜೊತೆಗೆ ಬೆರೆಯದೆ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರತ್ಯೇಕವಾದ ತಾಂಡಾಗಳನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಗಮನಿಸುವ ಮುಖ್ಯ ಸಂಗತಿ ಎಂದರೆ ಬೇರೆ ಕಡೆಯಿಂದ ವಲಸೆ ಬಂದಿರುವ ಬಹಳಷ್ಟು ಬುಡಕಟ್ಟಿನವರು ಇತರರ ಜೊತೆಗೆ ಬೆರೆಯದೆ ಪ್ರತ್ಯೇಕವಾಗಿ ಇರಲು ಬಯಸುತ್ತಾರೆ. ಏಕೆಂದರೆ ಅವರ ಸಂಸ್ಕೃತಿಯ ಮೇಲೆ ಅನ್ಯ ಸಂಸ್ಕೃತಿಯ ಪ್ರಭಾವ ಆಗದಂತೆ ಕಾಪಾಡಿಕೊಂಡು ಬರುವಲ್ಲಿ ಅವರು ಕಾಳಜಿ ವಹಿಸುತ್ತಾರೆ. ಮತ್ತು ತಮ್ಮದೇ ಆದ ಕೆಲವು ಸಂಪ್ರದಾಯ, ಆಚರಣೆ, ನಂಬಿಕೆ ಮುಂತಾದವುಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಬರವಲ್ಲಿ ಎಚ್ಚರಿಕೆ ವಹಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಲಂಬಾಣಿ ಒಂದು ವಿವೇಚನೆ ಲೇಖನದಲ್ಲಿ ಲಂಬಾಣಿಗರು ತಮ್ಮನ್ನು ತಾವು “ಗೋರಮಾಟಿ” ಎಂದು ಕರೆದುಕೊಳ್ಳುತ್ತಾರೆ ಎಂದು ಹೇಳಿರುವುದು ಗಮನಾರ್ಹ. ಏಕೆಂದರೆ ಈ ಬುಡಕಟ್ಟಿನವರು ಬೇರೆ ಪ್ರದೇಶಗಳಲ್ಲಿ ಭೇಟಿಯಾದಾಗ ಮೊದಲಿಗೆ “ಗೋರಮಾಟಿ” ಅಥವಾ “ಗೋರಭಾಯಿ ಕಾಂಯಿ” (ಲಂಬಾಣಿ ಬಂಧುಗಳೇನು) ಎಂದು ಪರಿಚಯಿಸಿಕೊಳ್ಳುವುದನ್ನು ಇಲ್ಲಿ ಗಮನಿಸಬಹುದು. ಅಖಂಡ ಭಾರತದಲ್ಲಿಯ ಬಂಜಾರುಗಳಿಗೆ ಆಯಾ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುವ ಹೆಸರುಗಳ ಬಗ್ಗೆ ಡಾ. ಖಂಡೋಬಾ ಅವರು ಮೊಟ್ಟ ಮೊದಲು ದಾಖಲಿಸಿದ್ದಾರೆ. ಉಪಜಾತಿಗಳು, ಪರ್ಯಾಯ ನಾಮಗಳು, ಪೂರ್ವದಲ್ಲಿ ಕೈಗೊಳ್ಳುತ್ತಿದ್ದ ವೃತ್ತಿಗಳ ಬಗ್ಗೆಯೂ ನಾಲ್ಕನೆಯ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.

ಲಂಬಾಣಿ ಸ್ತೀಯರ ರಂಗು ರಂಗಿನ ವೇಷಭೂಷಣಗಳ ಬಗೆಗೆ ಐದನೆಯ ಲೇಖನ ವಿವರವಾದ ಮಾಹಿತಿ ನೀಡುತ್ತದೆ. ಲಂಬಾಣಿ ಸ್ತ್ರೀಯರು ಪೂರ್ವದಲ್ಲಿ ಬಳಸುತ್ತಿದ್ದ ಉಡಿಗೆ-ತೊಡಿಗೆಗಳನ್ನು ಇಂದಿಗೂ ಅಚ್ಚಳಿಯದೆ ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಫೇಟಿಯಾ(ಲಂಗ), ಕಾಂಚಳಿ, (ಚೋಲಿ ಅಥವಾ ಕುಪ್ಪಸ) ಹಾಗೂ ಛಾಂಟಿಯಾ, (ಮೇಲ್ಮುಸುಕು) ಈ ಮೂರು ಅಂಗಗಳಲ್ಲಿ ಲಭ್ಯವಾಗುವ ಸ್ತ್ರೀಯರ ಉಡಿಗೆಗಳು ನಮ್ಮ ಪ್ರಾಚೀನ ಜನಪದ ಕುಶಲ ಕಲೆಗಾರಿಕೆಯನ್ನು ಸೂಚಿಸುತ್ತದೆ. ಲಂಬಾಣಿ ಉಡುಪುಗಳಾದ ಛಾಂಟಿಯಾ, ಕಾಂಚಳಿ, ಫೇಟಿಯಾ, ಲೇಪೋ ಮತ್ತು ಒಡವೆಗಳಾದ ವಾಂಕ್ಯಾ, ಕಡಗಾ, ಕಸ್, ಚೂಡಿ, ಬೋದ್ಲು, ಝಮ್ಮರಕಿ, ಕನಿಯಾ, ಚಮಕ್ಯಾ, ಘುಗರಾ, ಹಾಂಸಲಿ, ಚೈನ ಮುಂತಾದ ಒಡವೆಗಳ ಬಗೆಗೆ ಮಾಹಿತಿ ನೀಡಿ, ಅಲ್ಲಲ್ಲಿ ಭಾವಚಿತ್ರ ಹಾಕಿರುವುದು ಈ ಲೇಖನದ ಉತ್ಕೃಷ್ಟತೆಯನ್ನು ಹೆಚ್ಚಿಸಿದೆ.

ವಿವಾಹಕ್ಕೆ ಸಂಬಂಧಪಟ್ಟ ವಿಧಿ-ವಿಧಾನಗಳ ಬಗೆಗೆ ಲಂಬಾಣಿಗರ ವಿವಾಹ ವೈಶಿಷ್ಟ್ಯ ಎಂಬ ಆರನೆಯ ಲೇಖನದಲ್ಲಿ ಹಲವಾರು ಮಹತ್ವದ ಸಂಗತಿಗಳನ್ನು ಡಾ. ಖಂಡೋಬಾ ಅವರು ಹೇಳಿದ್ದಾರೆ. “ಜಾತ್”, “ಭುಕ್ಯಾ” ಗೋತ್ರಗಳಿರುತ್ತವೆ. ಮತ್ತು ಅವರ ಮಧ್ಯದಲ್ಲಿ ಮದುವೆ ಕಾರ್ಯಗಳು ನಡೆಯುತ್ತದೆ. ಸುಗೋತ್ರ ವಿವಾಹ ನಿಷಿದ್ಧ, ತೆರವು ಪದ್ಧತಿ, ನಿಶ್ಚಿತಾರ್ಥ, ಬೆಲ್ಲದ ಕಾರ್ಯ, ಮದುವೆ ಸಮಾರಂಭ, ವದಾಯಿ ಕಾರ್ಯ, ಸಾಡಿತಾಣೆರೋ, ಮದುಮಗನಿಗೆ ಬೀಳ್ಕೊಡುವ ಸಮಾರಂಭ, ಹವೇಲಿ ಮುಂತಾದ ಅಂಶಗಳ ಬಗೆಗೆ ಮಾಹಿತಿ ನೀಡಿದ್ದಾರೆ. ಲಂಬಾಣಿ ಸಂಸ್ಕೃತಿ ಹಾಗೂ ಬದಲಾವಣೆ ಎನ್ನುವ ಏಳನೆಯ ಲೇಖನದಲ್ಲಿ, ಲಂಬಾಣಿ ಸಂಸ್ಕೃತಿ ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡು ಬಂದಿದೆ. ತುಂಬಾ ಶ್ರಮವಾದಿಗಳಾದ ಲಂಬಾಣಿಗರು ಭಿಕ್ಷೆ ಬೇಡದೆ ಕಷ್ಟದಿಂದ ದುಡಿದು ಜೀವನ ಸಾಗಿಸುವ ಶ್ರಮವಾದಿಗಳು. ಲಂಬಾಣಿಗರಲ್ಲಿ ಅನಕ್ಷರಸ್ಥರ ಸಂಖೆಗಳಿಗೇನು ಕಡಿಮೆಯಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ, ಶಿಕ್ಷಣ ಪಡೆಯಬೇಕು, ಬದುಕಿನಲ್ಲಿ ದಟ್ಟ, ದಾರಿದ್ರ್ಯತೆಯನ್ನು ಬಿಂಬಿಸದೆ ಮೂಢ ನಂಬಿಕೆಗಳಿಂದ ಹೊರಗೆ ಬರಬೇಕೆಂದು ಅವರ ಕಳಕಳಿಯ ಕಾಳಜಿ. ಲಂಬಾಣಿಗಳಲ್ಲಿ ಇಂದಿಗೂ ಮೂಢ ನಂಬಿಕೆಗಳು ರೂಢಿಯಲ್ಲಿರುವುದನ್ನು ಕಾಣಬಹುದು. ಮೂಢ ನಂಬಿಕೆ, ಗೊಡ್ಡು ಸಂಪ್ರದಾಯ ಹೋಗಲಾಡಿಸಬೇಕು ಎಂಬ ಅವರ ಅಭಿಪ್ರಾಯ ಸೂಕ್ತವೆನಿಸುತ್ತದೆ.

ಶ್ರಮ ಜೀವನದಲ್ಲಿ ಸಂತೃಪ್ತಿ ಕಂಡ ಲಂಬಾಣಿಗರು ಅನ್ನುವಂಥ ಎಂಟನೆಯ ಲೇಖನವೂ ಇಡೀ ಸಮಾಜಕ್ಕೊಂದು ಮಾರ್ಗದರ್ಶಿ. ಕರ್ನಾಟಕ ಮಾತ್ರವಲ್ಲ ಭಾರತದುದ್ದಕ್ಕೂ ಹರಡಿಕೊಂಡಿರುವ ಬಂಜಾರಾಗಳು ಶ್ರಮವಾದಿಗಳು. ಮೊದಲಿನಿಂದಲೂ ಬಂಜಾರುಗಳು ಮಾಡುವ ಸಾಹಸದ ಕೆಲಸಗಳಿಗೆ ಮೆಚ್ಚಿ ಮೊಘಲರು ಮತ್ತು ಆಂಗ್ಲರು ತಮ್ಮ ಆಳ್ವಿಕೆ ಕಾಲದಲ್ಲಿ ಇವರಿಗೆ ಮನ್ನಣೆ ಕೊಟ್ಟಿದ್ದರೆಂಬುದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ಶ್ರಮಜೀವಿಗಳಾದ ಲಂಬಾಣಿಗರು ಎಂಥ ಕೆಲಸಕ್ಕೂ ಹಿಂಜರಿಯುವುದಿಲ್ಲ ಮತ್ತು ಅಷ್ಟೇ ದೃಢಕಾಯವುಳ್ಳವರಾಗಿದ್ದಾರೆ. ಪ್ರಕೃತಿಯೊಂದಿಗೆ ಸೆಣಸಾಡುವ ಇವರು ಶ್ರಮಜೀವನದಲ್ಲಿಯೇ ಸಂತೃಪ್ತಿಯನ್ನು ಕಂಡವರು ಎಂದು ಡಾ. ಖಂಡೋಬಾ ಅವರ ಅಭಿಪ್ರಾಯ ಗಮನಾರ್ಹ. ಈ ಜನ ಶ್ರಮವಾದಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಇದರ ಬಗೆಗೆ ಹೆಚ್ಚು ಹೇಳಲಾರೆ. “ಲಂಬಾಣಿಗರ ಆಳುವ ಸಂಪ್ರದಾಯ” ಅನ್ನುವಂಥ ಒಂಬತ್ತನೆಯ ಲೇಖನದಲ್ಲಿ ತಮ್ಮ ಶ್ರಮ ಜೀವನದಲ್ಲಿ ಕಂಡ ಸಂತೃಪ್ತಿಯನ್ನು ಕಡುಬಡತನದ ಮಧ್ಯೆಯೂ ಕುಲಾಚಾರಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಿ, ಮದುವೆಯಾಗಿ ಗಂಡನ ಮನೆಗೆ ಕಳಿಸುವ ಹವೇಲಿ ಸಂದರ್ಭದಲ್ಲಿ ಕೊರಳು ಬಾಚಿಕೊಂಡು ಆಳುವ ಸಂಪ್ರದಾಯದ ಬಗ್ಗೆ ಸೊಗಸಾಗಿ ವಿವರಿಸಿದ್ದಾರೆ. ಅಲೆಮಾರಿಗಳಾದ ಈ ಗುಂಪಿನವರ ಒಂದು ತಂಡ ಮತ್ತೊಂದು ತಂಡದ ಜೊತೆಗೆ ಭೇಟಿಯಾಗುವುದು ದುಸ್ತರವಾಗುತ್ತಿತ್ತು. ಬಹುಶಃ ಈ ಬಗೆಯ ಅಗಲುವಿಕೆಯೇ ಅವರ ಅಳುವಿಗೆ ಮೂಲ ಕಾರಣವಾಗಿರಬೇಕು ಅನ್ನುವಂಥ ಡಾ. ಖಂಡೋಬಾ ಅವರ ಅಭಿಪ್ರಾಯ ನಿಜವೆನಿಸುತ್ತದೆ. ಈ ಮಾತಿಗೆ ಪುಷ್ಟಿ ಅನ್ನುವಂತೆ ಸಂದರ್ಭವನ್ನರಿಯದ ಜನ ಇಂದು “ಲಮಾಣ್ಯಾರಿಗೆ ಹೆಣ್ಣು ಕೊಟ್ಟಾಂಗ” ಎಂದು ಹೇಳುವುದು ಅಪಹಾಸ್ಯಕರವಾಗಿ ಕಾಣುತ್ತದೆ. ಇಂದು ತಾಂಡಾಗಳನ್ನು ಕಟ್ಟಿಕೊಂಡು ನಿಗದಿತ ನೆಲೆಯಲ್ಲಿ ನೆಲೆಸಿಕೊಂಡಿದ್ದರೂ ಪೂರ್ವದ ಆಳುವ ಸಂಪ್ರದಾಯ ಪದ್ಧತಿ ಇಂದಿಗೂ ಈ ಗುಂಪಿನವರಲ್ಲಿ ಉಳಿದಿರುವುದು ವಿಸ್ಮಯ ಸಂಗತಿ. ಮದುವೆಯ ಸಂದರ್ಭದಲ್ಲಿ ಹವೇಲಿ ಹೇಳುವಾಗ ಹೆಣ್ಣುಮಗಳು ಧಾರಾಕಾರವಾಗಿ ಕಣ್ಣೀರು ಹಾಕುತ್ತಾಳೆ. ಈ ಸನ್ನಿವೇಶ ನೋಡಿದವರ ಮನ ಕಲಕುತ್ತದೆ. ಹೆಣ್ಣು ತನ್ನ ಕುಟುಂಬದ ಮತ್ತು ಹಿರಿಯರ ಉಪದೇಶಗಳಿಗೆ ಪ್ರತಿಯಾಗಿ “ಹವೇಲಿ” ಮೂಲಕ ಪ್ರತಿಜ್ಞೆ ಗೈಯುವ ಸೊಗಸಾದ ಸನ್ನಿವೇಶವನ್ನು ಈ ಲೇಖನದಲ್ಲಿ ಅವಲೋಕಿಸಬಹುದು.

“ತಮಾರೆ ಸೀಕೆವಾಡಿನ ಆಂಟೆ ಘಾಲು
ಗಾಂಟೆ ಘಾಲು, ಸೂಯಿವೇನ ಮಾಯಿಗೀತೊ
ಕೀಡಿವೇನ್ ಚಾಲಿಂಯು, ತಮಾರಿ
ನಂಗರೀನ ಓಳಮಕೋನಿ ಲಾಂವು ಬಾಪು ಅಹಿಯ್ಯಾ”

ಅನುವಾದ: ತಮ್ಮೆಲ್ಲರ ಉಪದೇಶಗಳನ್ನು ಬಲು ಕಟ್ಟುನಿಟ್ಟಾಗಿ ಪಾಲಿಸುವೆ. ಎಂಥ ಕಷ್ಟ ಬಂದರೂ ಗಂಡನ ಮನೆಯ ಸದಸ್ಯರೊಂದಿಗೆ ನಡೆದುಕೊಳ್ಳುವೆ. ಬಟ್ಟೆ ಹೊಲೆಯುವಾಗ ಸೂಜಿಯು ಪ್ರವೇಶಿಸಿ ಪಾರಾಗುವಂತೆ ಗಂಡನ ಮನೆಯಲ್ಲಿ ಏನೆಲ್ಲ ಕೆಲಸವನ್ನು ನಿರ್ವಹಿಸಿ ಪಾರಾಗುವೆ. ಒಟ್ಟಿಗೆ ತಮಗೂ ತಾಂಡಕ್ಕೂ ಯಾವುದೇ ಕೆಟ್ಟ ಹೆಸರು ತರಲಾರೆ ಎನ್ನುವಂಥ ಹೆಣ್ಣಿನ ನೋವು ಬಲು ಸೊಗಸಾಗಿ ಈ ಪದ್ಯದಲ್ಲಿ ಮೂಡಿ ಬಂದಿದೆ. ಈ ಸಂಪ್ರದಾಯವು ಜೀವನ ವಿಧಾನ ಬದಲಾಗುತ್ತಿರುವ ಇಂದಿನವರೆಗೂ ಹೇಗೆ ಉಳಿದು ಬಂದಿದೆ. ಅದು ಹೇಗೆ ಸುಶಿಕ್ಷಿತ ವರ್ಗವನ್ನೂ ಬಿಟ್ಟಿಲ್ಲವೆಂಬುದನ್ನು ಡಾ. ಖಂಡೋಬಾ ಅವರು ಮಾರ್ಮಿಕವಾಗಿ ನಿರೂಪಿಸಿದ್ದಾರೆ. ಎಲ್ಲಿಂದಲೋ ಬಂದವರು ಅಲ್ಲಲ್ಲಿ ನಿಂತವರು ಎಂಬ ಕಾವ್ಯಾತ್ಮಕವಾದ ಶೀರ್ಷಿಕೆಯಲ್ಲಿ ಮೂಡಿ ಬಂದಿರುವ ಹತ್ತನೆಯ ಲೇಖನವು ಬಂಜಾರುಗಳು ನಿರಾಶ್ರಿತರಾಗಿ ದೇಶದ ಮೂಲೆ ಮೂಲೆಗಳಲ್ಲಿ ಚದುರಿ ಹೋದ ಈ ಸಂಚಾರಿ ಗುಂಪಿನವರ ಬಗೆಗೆ ಮಹತ್ತರ ಸಂಗತಿಗಳನ್ನು ನೀಡುತ್ತದೆ. ತಮ್ಮ ದೊರೆ ರಾಣಾ ಪ್ರತಾಪಸಿಂಹನಿಗೆ ಗಂಡಾಂತರ ಬಂದಾಗ, ಅವನ ಅನುಯಾಯಿಗಳಾಗಿ ಕಾಡಿಗೆ ಹೋದರು. ರಾಜನಿಗೆ ಮೋಸದಿಂದ ಕೊಲೆ ಮಾಡಿದ ಮೇಲೆ ಜೀವನ ರಕ್ಷಣೆಗಾಗಿ ದೇಶದ ಮೂಲೆ ಮೂಲೆಗಳಲ್ಲಿ ಚದುರಿ ಹೋದರು. ಬಂಜಾರುಗಳು ಹಿಂದೂಸ್ತಾನದ ಹೊರಗೂ ಸಹ ತಮ್ಮ ಸಂಚಾರವನ್ನು ನಡೆಸಿದ್ದಾರೆ. ಬಲ್ಗೇರಿಯಾ, ರೊಮೇನಿಯಾ, ಹಂಗೇರಿ, ಸ್ವಿಜ್ಜರಲೆಂಡ್, ಫ್ರಾನ್ಸ್, ಇಂಗ್ಲೆಂಡ, ಜರ್ಮನ್, ಸ್ಪೇನ್, ಗ್ರೀಸ್ ಮುಂತಾದ ೫೬ ದೇಶಗಳಲ್ಲಿ ನೆಲೆಸಿಕೊಂಡು ಜೀವನ ಸಾಗಿಸುತ್ತಿರುವ ಸಂಗತಿಯನ್ನು ನಿರೂಪಿಸಿದ್ದಾರೆ. ಯುರೋಪಿನ ಜಿಪ್ಸಿಗಳು ಈ ಲಂಬಾಣಿ ಮೂಲಕ್ಕೆ ಸೇರಿದವರು ಎಂಬ ಅಂಶವನ್ನು ಡಾ. ಖಂಡೋಬಾ ಅವರು ಈ ಲೇಖನದಲ್ಲಿ ಪ್ರಥಮ ಬಾರಿಗೆ ದಾಖಲಿಸಿದ್ದಾರೆ. ಇದೊಂದು ಅತ್ಯುತ್ತಮ ಲೇಖನವೆಂದೂ ಹೇಳಬಹುದು.

ಲಂಬಾಣಿರಜಪೂತಜೆಪ್ಸಿಗಳ ಸಾಮ್ಯತೆ ಎನ್ನುವ ತಲೆಬರಹದ ಹನ್ನೊಂದನೆಯ ಲೇಖನದಲ್ಲಿ ಈ ಮೂರು ಸಮಾಜಗಳ ಮಧ್ಯೆ ಇರುವ ಸಂಬಂಧದ ಬಗೆಗೆ ವ್ಯಾಪಕವಾಗಿ ಚರ್ಚಿಸಿದ್ದಾರೆ. ಹನ್ನೆರಡನೆಯ ಲೇಖನ ಲಂಬಾಣಿಬ್ರಾಹ್ಮಣಮಾರವಾಡಿಗುರ್ಜರ ಸಂಬಂಧವನ್ನು ಕುರಿತು ಚರ್ಚಿಸಿದ್ದಾರೆ. ಒಂದು ಕಾಲದಲ್ಲಿ ಈ ಮೇಲಿನ ಸಮಾಜಗಳ ಮಧ್ಯೆ ಪರಸ್ಪರ ಸಂಬಂಧ ಹೇಗಿತ್ತು ಎಂಬುದರ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಕರ್ನಾಟಕದ ಮಾರವಾಡಿ, ಗುರ್ಜರ ಹಾಗೂ ಲಂಬಾಣಿಗರು ಮೂಲತಃ ರಾಜಸ್ಥಾನ “ವಣಿಕ್” (ವ್ಯಾಪಾರ) ಸಮಾಜಕ್ಕೆ ಸೇರಿದವರು. ಈ ಮೂರು ಸಮಾಜಗಳ ವೇಷ, ಭಾಷೆ, ಆಚಾರ, ವಿಚಾರ, ಜೀವನ ಪದ್ಧತಿ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಾಮ್ಯತೆಯನ್ನು ಹಾಗೂ ಸಂಬಂಧವನ್ನು ಕಾಣುತ್ತೇವೆ. ಮುಂತಾದ ವಿವರಗಳನ್ನು ಒದಗಿಸಿದ್ದಾರೆ.

ಹದಿಮೂರನೆಯ ಲೇಖನ ಲಂಬಾಣಿಹರಿಣಶಿಕಾರಿಸಿಕ್ಕಲಿಗರು ಒಂದು ವಿವೇಚನೆ ಈ ಮೂರು ಸಮಾಜಗಳಲ್ಲಿ ಕಂಡುಬರುವ ಸಾಮ್ಯತೆಯ ವಿಷಯಗಳನ್ನು ಚರ್ಚಿಸಿದ್ದಾರೆ. ಸಿಕ್ಕಲಿಗರು ಅಥವಾ ಸುಕ್ಕಾಲಿಗರು ಎರಡೂ ಒಂದೇ ಎಂಬ ಮೊದಲಿನ ಅಭಿಪ್ರಾಯಗಳನ್ನು ಇವರು ತಿರಸ್ಕರಿಸಿ ತಮ್ಮ ವೃತ್ತಿಯ ಹಿನ್ನೆಲೆಯಲ್ಲಿ ಇವರು ಹೇಗೆ ಭಿನ್ನ ಎಂಬುದನ್ನು ವಿಶ್ಲೇಷಿಸಿದ್ದಾರೆ. ಲಂಬಾಣಿ ಹರಿಣಶಿಕಾರಿ ಮತ್ತು ಸಿಕ್ಕಲಿಗರು ಆಡುವ ಭಾಷೆಗೆ ಲಿಪಿ ಮಾಧ್ಯಮವಿಲ್ಲ. ಅವರದು ಆಡುಭಾಷೆಯಾಗಿದೆ. ಈ ಮೂವರೂ ಮೂಲತಃ ಒಂದೇ ಪ್ರಾದೇಶಿಕ ಭಾಷಿಕ ಪರಂಪರೆಯವರಾದ್ದರಿಂದ ಅವರಾಡುವ ಭಾಷೆಯೂ ಪರಸ್ಪರರಲ್ಲಿ ಸುಲಭವಾಗಿ ಅರ್ಥವಾಗುತ್ತದೆ. ಈ ಮೂರು ಬುಡಕಟ್ಟಿನ ಜನರಾಡುವ ಭಾಷೆಗೆ ಮೂಲ ಬಹುಶಃ ರಾಜಸ್ಥಾನಿಯೇ ಆಗಿದೆ. ಇವುಗಳೆಲ್ಲ ರಾಜಸ್ಥಾನಿಯ ಉಪಭಾಷೆಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಂಬಾಣಿ ತಾಂಡಾಗಳು ಒಂದು ಸಮೀಕ್ಷೆ ಅನ್ನುವಂಥ ಹದಿನಾಲ್ಕನೆಯ ಲೇಖನವು ಅವರು ವಾಸಿಸುವ ನೆಲೆಗಳನ್ನು ಪರಿಶೀಲಿಸುತ್ತದೆ. ಲಂಬಾಣಿಗರು ಸಾಮಾನ್ಯವಾಗಿ ಕಾಡು, ಕಣಿವೆ, ಬೆಟ್ಟ, ಗುಡ್ಡಗಳಿದ್ದೆಡೆ ತಾಂಡಾಗಳನ್ನು ಕಟ್ಟಿಕೊಂಡಿರುತ್ತಾರೆ. ತಾಂಡಾಗಳ ಸ್ವರೂಪ, ವೈವಿಧ್ಯ ಏನು ಎಂಬುದನ್ನು ಚಿತ್ರಿಸುತ್ತಾ ಅವುಗಳಲ್ಲಿ ಕಂಡುಬರುವ ಸಾಮಾಜಿಕ ಕಟ್ಟು ಕಟ್ಟಳೆಗಳ ವಿವರಗಳನ್ನು ನೀಡುತ್ತಾರೆ. ಲಂಬಾಣಿ ತಾಂಡಾಗಳನ್ನು ಸ್ವತಂತ್ರವಾದ ಹೆಸರುಗಳಿಂದ ಕರೆಯುವುದು ಜೊತೆಗೆ ಅವುಗಳಿಗೆ ತಮ್ಮದೇ ಆದ ಅಸ್ತಿತ್ವವನ್ನು ಒದಗಿಸಿಕೊಡಬೇಕೆಂದು ಒತ್ತಿ ಹೇಳಿದ್ದಾರೆ. ಇಲ್ಲಿ ಒಬ್ಬ ಉತ್ತಮ ಸಂಶೋಧಕನಲ್ಲಿರಬೇಕಾದ ಅಂಶಗಳು ಇವರಲ್ಲಿ ಎದ್ದು ಕಾಣುತ್ತವೆ. ಭೌತಿಕ ಜಾನಪದದ ಅಂಶವನ್ನು ಪ್ರಸ್ತಾಪಿಸುವುದಕ್ಕಿಂತ ತಾಂಡಾಗಳ ಆಂತರಿಕ ಸ್ವರೂಪವನ್ನು ಮನಗಾಣಿಸಿದ್ದಾರೆ.

ಲಂಬಾಣಿ ಒಗಟುಗಳ ಒಂದು ಅಧ್ಯಯನ ಎಂಬ ಹದಿನೈದನೆಯ ಲೇಖನದಲ್ಲಿ ಒಗಟುಗಳಿಗೆ ಸಂವಾದಿಯಾಗಿ ಲಂಬಾಣಿಗರು “ಕಬದ”, “ಫೋಡೇರ ಸಾಕಿ” (ಒಡಗತೆ), “ಕಲಮೆ” ಎಂದು ಬಳಸುತ್ತಾರೆ. ಲಂಬಾಣಿ ಒಗಟುಗಳಲ್ಲಿ ಅವರ ಆಚಾರ, ವಿಚಾರ, ನ್ಯಾಯ, ನೀತಿ, ಧರ್ಮ, ಸಂಸ್ಕೃತಿ, ಸಂಪ್ರದಾಯ ಅನೇಕ ವಿಷಯಗಳನ್ನು ಕಾಣಬಹುದು.

“ಸಾಸು ಬೋಡಿ ದೀ
ನಣದ್ ಭೋಜಾಯಿ ದೀ
ಕೀದಿ ತೀನ್ ಬಾಟಿ
ಖಾದಿ ಸಾರೀ ಸಾರಿ”

(ಅತ್ತೆ-ಸೊಸೆ ಇಬ್ಬರು; ನಾದಿನಿ-ಅತ್ತಿಗೆ ಇಬ್ಬರು; ಮೂರು ರೊಟ್ಟಿ ಮಾಡಿದ್ದಾರೆ; ಪೂರಾ ಪೂರಾ ತಿಂದಿದ್ದಾರೆ.)

ಈ ಒಗಟಿನ ಶ್ಲೇಷಾರ್ಥವನ್ನರಿಯದವರು ನಾಲ್ಕು ಜನ; ಮೂರು ರೊಟ್ಟಿ; ಒಂದೊಂದು ಪೂರ್ತಿಯಾಗಿ ತಿನ್ನಲು ಹೇಗೆ ಸಾಧ್ಯ? ಎಂದು ಹೇಳಿಬಿಡಬಹುದು. ಆದರೆ ಯೋಚಿಸಿ ಸಮಸ್ಯೆ ಬಿಡಿಸಿದಾಗ ಬರುವ ಉತ್ತರ ತುಂಬಾ ಸುಲಭ. ಇಲ್ಲಿ ಅತ್ತೆ-ಸೊಸೆ-ನಾದಿನಿ ಕೇವಲ ಮೂರೆ ಜನರಿದ್ದಾರೆ; ನಾಲ್ಕಲ್ಲ. ಯಾಕೆಂದರೆ ಸೊಸೆ ಹಾಗೂ ಅತ್ತಿಗೆ ಇಬ್ಬರಲ್ಲ; ಒಬ್ಬರೇ. ಹೀಗಾಗಿ ಮೂವರೂ ಒಂದೊಂದು ಪೂರ್ತಿಯಾಗಿ ರೊಟ್ಟಿ ತಿನ್ನಲು ಸಾಧ್ಯ ಎಂದಾಗ ಸಮರ್ಪಕ ಉತ್ತರ ದೊರೆಯುತ್ತದೆ. ಲಂಬಾಣಿ ಒಗಟುಗಳ ಬದುಕಿನ ಹಿನ್ನೆಲೆಯಲ್ಲಿ ವೈವಿಧ್ಯತೆಯನ್ನು ಈ ಲೇಖನದಲ್ಲಿ ಮನಗಾಣಬಹುದು.

ಲಂಬಾಣಿಗರ ಗೋರಬೋಲಿ ಭಾಷೆಯನ್ನು ಪರಿಚಯಿಸುವಂಥ ಹದಿನಾರನೆಯ ಲೇಖನ ಬಹಳ ಮಹತ್ವದ್ದು. ಈ ಭಾಷೆಯ ಇಂಡೋ-ಆರ್ಯನ್ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದೆ. ಕಾರಣ ಅವರಾಡುವ ದಿನನಿತ್ಯದ ಬಳಕೆ ಪದಗಳೆಲ್ಲ ಇಂಡೋ ಆರ್ಯನ್ ಪದಗಳೇ ಆಗಿವೆ. ಇಂಡೋ-ಆರ್ಯನ್ ಭಾಷಾವರ್ಗಕ್ಕೆ ಸೇರಿದ ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳೇ ಇದಕ್ಕೆ ಪ್ರೇರಕಗಳಾಗಿವೆ ಎಂಬುದನ್ನು ಖಚಿತ ಆಧಾರಗಳಿಂದ ಡಾ. ಖಂಡೋಬಾ ಅವರು ವಿವರಿಸಿದ್ದಾರೆ.

“ಲಂಬಾಣಿ ವೃತ್ತಿ ಗಾಯಕ-ಢಾಡಿ” ಅನ್ನುವಂಥ ಕೊನೆಯ ಲೇಖನವು ಲಂಬಾಣಿ ಜನಾಂಗದ ಕಾವ್ಯ ಪರಂಪರೆಯ ಮೇಲೆ ಬೆಳಕು ಚೆಲ್ಲುವಂತಹದ್ದು. ಲಂಬಾಣಿ ವೃತ್ತಿಗಾಯಕ ಢಾಡಿಯವರ ಬಗ್ಗೆ ಡಾ. ಖಂಡೋಬಾ ಅವರು ಬರೆಯುತ್ತ, “ಲಂಬಾಣಿಗರು ತಮ್ಮ ಜನಪದ ವೃತ್ತಿಗಾಯಕನನ್ನು ಢಾಡಿ ಎಂದು ಕರೆಯುತ್ತಾರೆ. ಈ ಜನಪದ ವೃತ್ತಿಗಾಯಕ ಕರ್ನಾಟಕದ ಧಾರ್ಮಿಕ ವೃತ್ತಿಗಾಯಕರ ಗುಂಪಿಗೆ ಸೇರುತ್ತಾನೆ. ಢಾಡಿ ಎಂಬ ಈ ವೃತ್ತಿಗಾಯಕರು ಲಂಬಾಣಿಗರಲ್ಲಿ ಅಸ್ಪೃಶ್ಯ ಜನಾಂಗದವರಾಗಿದ್ದರಿಂದ ಬಹುಶಃ ಅವರನ್ನು ಢೇಡಿಯಾ-ಢಾಡಿ ಎಂದಾಗಿ ಕರೆದಿರಬೇಕು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಢಾಡಿಯರನ್ನು” ಗುರುತಿಸಿ ನಾನು ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ೧೯೯೭ರಲ್ಲಿ ಜರುಗಿದ ಅಖಿಲ ಭಾರತ ೬೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರಬಂಧ ಮಂಡಿಸಿದ್ದೆ. ಈ ಮುಂಚೆ ಢಾಡಿಯರನ್ನು ಕುರಿತು ಡಾ. ಜೀ.ಶಂ. ಪರಮಶಿವಯ್ಯ, ಬೆನಕನಹಳ್ಳಿ, ಜಿ. ನಾಯಕ, ಡಾ.ಡಿ.ಬಿ. ನಾಯಕ ಮುಂತಾದವರು ಅಧ್ಯಯನ ಮಾಡಿರುವುದು ಗಮನಾರ್ಹ.

ಡಾ. ಪಿ.ಕೆ.ಖಂಡೋಬಾ ಅವರು ಢಾಡಿಯರನ್ನು ಲಂಬಾಣಿಗಳಲ್ಲಿ ಅಸ್ಪೃಶ್ಯರಂತೆ ಕಾಣುತ್ತಾರೆ ಎಂದು ಹೇಳಿರುವುದು ನನ್ನ ದೃಷ್ಟಿಯಲ್ಲಿ ಸರಿ ಅನ್ನಿವುದಿಲ್ಲ. ಏಕೆಂದರೆ ಲಂಬಾಣಿಗಳು ಢಾಡಿಯರನ್ನು ಬರಮಾಡಿಕೊಂಡು ಉಟೋಪಚಾರದ ವ್ಯವಸ್ಥೆ, ಮತ್ತು ಅವರ ವೃತ್ತಿ ಮುಗಿದ ಬಳಿಕ ಕಾಳು-ಕಡಿ, ದುಡ್ಡು, ದುಗ್ಗಾಣಿಗಳನ್ನು ಕೊಟ್ಟು ಗೌರವದಿಂದ ಕಳುಹಿಸುತ್ತಾರೆ. ಇವರು ಧಾರ್ಮಿಕ ವೃತ್ತಿ ಗಾಯಕರಾದುದರಿಂದ ಕೀಳು ಅಸ್ಪೃಶ್ಯ ಶಬ್ದವಾದ ಢೇಡಿಯಾದಿಂದ=ಢಾಡಿ ಹೆಸರು ಬಂದಿರಬೇಕು ಎಂದು ಹೇಳುವುದು ಸಮಂಜಸವೆನಿಸುವುದಿಲ್ಲ.

ಬಂಜಾರ ಜನಪದ ವೃತ್ತಿಗಾಯಕ ಢಾಡಿಯರು ಪಂಜಾಬದ ಭಾಟ್‌-ಮೀರಾಸಿ “ಧಾದಿ”ಗಳನ್ನು ಹೋಲುತ್ತಾರೆ. ಇವರ ಮೂಲ ಪಂಜಾಬ ಎಂಬುದರಲ್ಲಿ ಸಂದೇಹವಿಲ್ಲ. ಈ ಜನಪದ ಗಾಯಕರು ತಮ್ಮ ವೃತ್ತಿಯ ವೇಳೆಯಲ್ಲಿ ಬಳಸುವ ವಾದ್ಯದ ಹೆಸರು “ಧಾದ್” (ಸಾರಂಗಿ) ಆದುದರಿಂದ ಢಾಡಿ ಪದವು ವಾದ್ಯದಿಂದಲೇ ಬಂದಿದೆ ಎಂಬುದು ಸ್ಪಷ್ಟ. ಈ ಪದವು ಧಾದ್ > ಧಾದ > ಧಾಡಿ ಎಂದಾಗಿದೆ. ಈ ಜನಪದ ವೃತ್ತಿಗಾಯಕರು ಬಂಜಾರಾಗಳಲ್ಲಿ ಢಾಡಿ ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿದ್ದಾರೆ.”

[1]

ಡಾ. ಪಿ.ಕೆ. ಖಂಡೋಬಾ ಅವರು ಒಳ್ಳೆಯ ಪ್ರಾಧ್ಯಾಪಕ, ಅಧ್ಯಯನಶೀಲ ವಿದ್ವಾಂಸರು. ತಮ್ಮ ಅಧ್ಯಯನಕ್ಕೆ ಖಚಿತವಾದ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ವಿಶೇಷ ಕಾಳಜಿಪೂರಕವಾದ ಅಧ್ಯಯನ ಮಾಡುತ್ತಾರೆ. “ಲಂಬಾಣಿ ಸಂಸ್ಕೃತಿ” ಎಂಬ ಕೃತಿ ಅವರ ಆಳವಾದ ಅಧ್ಯಯನಕ್ಕೆ ವಿಫುಲವಾದ ಕ್ಷೇತ್ರಕಾರ್ಯಕ್ಕೆ ಕೈಗನ್ನಡಿಯಾಗಿದೆ. ಕನ್ನೆ ನೆಲವಾಗಿರುವ ಲಂಬಾಣಿ ಜನಪದ ಸಾಹಿತ್ಯ ಇವರ ಅಧ್ಯಯನದ ಫಲಶೃತಿಯಿಂದ ಹುಲುಸಾಗಿ ಬೆಳೆಯಲಿ ಮತ್ತು ಇವರಿಂದ ಇನ್ನೂ ಅನೇಕ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.

* * * 

[1]     “ಢಾಡಿ ಬಂಜಾರ ಜನಪದ ವೃತ್ತಿಗಾಯಕರು” “ಕರ್ನಾಟಕ ಭಾರತಿ” ಸಂಪುಟ ೩೦, ಸಂಚಿಕೆ ೧-೨ ಸಂಯುಕ್ತ ಸಂಚಿಕೆ ಸಂಪಾದಕರು : ಡಾ. ಎ.ನೇಗಿನಹಾಳ, ಡಾ. ಎ.ಮುರಿಗೆಪ್ಪ, ಜನೆವರಿ ಹಾಗೂ ಆಗಸ್ಟ್ ೧೯೯೮, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.