ಡಕ್ಕಲಿಗರು ಆರಾಧಿಸುವ ಪ್ರಮುಖ ದೇವರುಗಳೆಂದರೆ ಹನುಮಂತ, ಶಿವ, ಬ್ರಹ್ಮ, ವೀರಭದ್ರೇಶ್ವರ ಮುಂತಾದವು. ಇವರು ಎಲ್ಲಮ್ಮ , ಮರಗಮ್ಮ, ದುರಗಮ್ಮ, ಕೆಂಚಮಾರಮ್ಮ, ಪಾಲಕಮ್ಮ ಗಾಳೆಮ್ಮ, ಸಂಕಾಲಮ್ಮ, ಮಾಯಮ್ಮ, ದ್ಯಾಮವ್ವ, ಕಾಳಮ್ಮ ಮುಂತಾದ ಶಕ್ತಿ ದೇವತೆಗಳನ್ನು ಪೂಜಿಸುತ್ತಾರೆ. ಅವರಿಗೆ ವರ್ಷದ ಒಂದೆರಡು ಸಲವಾದರೂ ತಮ್ಮ ದೇವರುಗಳ ಹೆಸರಿನ ಮೇಲೆ ಕುರಿ-ಕೋಳಿ ಅಥವಾ ಕೋಣವನ್ನು ಬಲಿಕೊಡುತ್ತಾರೆ. ಇಲ್ಲವಾದರೆ ನಮಗೆ ಶಕ್ತಿದೇವತೆಗಳ ಕಾಟ ಪ್ರಾರಂಭವಾಗಿ ಮೈಯಲ್ಲಿ ಆಗಾಗ ಅಮ್ಮ ಕಾಣಿಸಿಕೊಳ್ಳುತ್ತಾಳೆ ಎನ್ನುತ್ತಾರೆ. ಹಿತ್ತಾಳೆ ಅಥವಾ ಬೆಳ್ಳಿಯಿಂದ ಮಾಡಿದ ಎಲ್ಲಮ್ಮನ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿ ಪೆಟ್ಟಿಗೆಯಲ್ಲಿ ಇಟ್ಟಿರುತ್ತಾರೆ. ಹಬ್ಬ-ಹರಿದಿನಗಳಲ್ಲಿ ಅದನ್ನು ಹೊರತೆಗೆದು ಪೂಜೆ ಮಾಡುತ್ತಾರೆ.

ಡಕ್ಕಲಿಗರು ಆಚರಿಸುವ ಪ್ರಮುಖ ಹಬ್ಬಗಳೆಂದರೆ ಕಾರಹುಣ್ಣಿಮೆ, ನಾಗರಪಂಚಮಿ, ದಸರಾ, ದೀಪಾವಳಿ, ಹೋಳಿ ಮತ್ತು ಯುಗಾದಿ. ಶಕ್ತಿ ದೇವತೆಯ ಹಬ್ಬಗಳೆಂದರೆ ರೇಣುಕ, ದುರ್ಗಮ್ಮಾ, ಸಂಕಾಲಮ್ಮ ಮತ್ತು ಮಾರಮ್ಮನ ಹಬ್ಬ. ಈ ಸಂದರ್ಭದಲ್ಲಿ ಕೆಲವರು ಕೋಣನ ಬಲಿಕೊಟ್ಟು ಅಮ್ಮನಿಗೆ ಹರಕೆ ಸಲ್ಲಿಸುತ್ತಾರೆ.

ಹಬ್ಬ ಹರಿದಿನಗಳಲ್ಲಿ ಮಾದಿಗರೇ ತಮ್ಮ ಮನೆಯಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ಇವರಿಗೆ ನೀಡುತ್ತಾರೆ. ಆದ್ದರಿಂದ ಕೆಲ ಡಕ್ಕಲಿಗರು ಹಬ್ಬ ಮಾಡುವ ಗೋಜಿಗೆ ಹೋಗುವುದಿಲ್ಲ. ಕೆಲವರು ಸಂಪ್ರದಾಯ ಎನ್ನುವಂತೆ ಸಿಹಿ ಅಡುಗೆಮಾಡಿ ಪೂಜೆ ಪುನಸ್ಕಾರ ಮಾಡಿ ಹಬ್ಬವನ್ನು ಆಚರಿಸುತ್ತಾರೆ.