• ಪುರುಷರ ಮತ್ತು ಸ್ತ್ರೀಯರ ಮಿದುಳುಗಳಲ್ಲಿ ವ್ಯತ್ಯಾಸವಿದೆಯೇ?

ಪುರುಷರು ಹೆಚ್ಚು ಬುದ್ಧಿವಂತರೋ, ಸ್ತ್ರೀಯರು ಹೆಚ್ಚು ಬುದ್ಧಿವಂತರೋ ಎಂದು ಜನ ಚರ್ಚಿಸುತ್ತಾರೆ. ಸ್ತ್ರೀ ಬುದ್ಧಿ ಪ್ರಳಯಾಂತಕ ಎಂದು ಕೆಲವರು ಹೇಳಿದ್ದಾರೆ. ಸ್ತ್ರೀಯರ ಸಾಮಾನ್ಯ ಜ್ಞಾನ ಕಡಿಮೆ. ಅವರು ಹಿಂಬಾಲಕರಾಗಲು ಅರ್ಹರೇ ಹೊತರು ನಾಯಕರಾಗಲು ಅರ್ಹರಲ್ಲ ಎಂದು ಹೇಳುವವರೂ ಇದ್ದಾರೆ. ಸ್ತ್ರೀ-ಪುರುಷ ಮಿದುಳಿನಲ್ಲಿ ಏನಾದರೂ ವ್ಯತ್ಯಾಸವಿದೆಯೇ? ಎಂದು ಕುತೂಹಲದಿಂದ ಕೇಳುವ ಜನ ಎಲ್ಲೆಡೆ ಸಿಗುತ್ತಾರೆ. ಒಂದು ಮಿದುಳನ್ನು ನೋಡಿ, ಇದು ಪುರುಷನದೇ ಅಥವಾ ಸ್ತ್ರೀಯದೇ ಎಂದು ಹೇಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಹಾಗೆಯೇ ಬುದ್ಧಿವಂತಿಕೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಸಮಾನರೇ. ಕೆಲವು ವಿಷಯ ಕೌಶಲಗಳಲ್ಲಿ ಸ್ತ್ರೀಯರು ಹೆಚ್ಚು ಸಮರ್ಥರಾಗಿದ್ದರೆ ಕೆಲವರಲ್ಲಿ ಪುರುಷರು ಹೆಚ್ಚು ಸಮರ್ಥರಾಗಿರುತ್ತಾರೆ. ಉದಾಹರಣೆಗೆ ಕ್ಷೇತ್ರ ವೀಕ್ಷಣೆ: ನಮ್ಮ ಮುಂದಿರುವ ಭೂಪಟ ನಕ್ಷೆಯ ಸೂಕ್ಷ್ಮ ವಿವರಗಳನ್ನು ಗಮನಿಸುವುದರಲ್ಲಿ ಸ್ತ್ರೀಯರಿಗಿಂತ ಪುರುಷರು ಹೆಚ್ಚು ಸಮರ್ಥರು. ಬೇಗ ಬೇಗ ಎಡಬಲ ವೇಗವಾಗಿ ತೋರಿಸಿ ಎಂದು ಪಂದ್ಯ ಕಟ್ಟಿದರೆ, ಸ್ತ್ರೀಯರಿಗಿಂತ ಪುರುಷರು ಹೆಚ್ಚು ವೇಗವಾಗಿ ತಮ್ಮ ಎಡ, ಬಲಗಳನ್ನು ತೋರಿಸಬಲ್ಲರು. ಸ್ತ್ರೀಯರಿಗೆ ಭಾಷೆಯ ಮೇಲೆ ಪ್ರಬಲವಾದ ಹಿಡಿತವಿರುತ್ತದೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತು ಕಲಿಯುತ್ತಾರೆ. ಹಾಗೇ ಪಟಪಟನೆ ಮಾತಾಡಬಲ್ಲರು. ಹೊಸ ಭಾಷೆಗಳನ್ನು ಕಲಿಯುವುದು ಅವರಿಗೆ ಸುಲಭ. ಬೆರಳುಗಳ ಸೂಕ್ಷ್ಮಚಲನೆ ಸ್ತ್ರೀಯರ ಕೌಶಲ. ಕಸೂತಿ, ಹೆಣಿಗೆ, ಕರಕುಶಲ ಕಲೆಗಳು, ಚಿತ್ರಕಲೆ ಅವರಿಗೆ ಬಹುಬೇಗ ಸಿದ್ಧಿಸುತ್ತದೆ. ಲೆಕ್ಕಾಚಾರಕ್ಕೆ ಬಂದರೆ ಪುರುಷರದೇ ಮೇಲುಗೈ. ಗಣಿತದಲ್ಲಿ ಹುಡುಗಿಯರಿಗಿಂತ ಹುಡುಗರು ಹೆಚ್ಚು ಸಂಖ್ಯೆಯಲ್ಲಿ ಅಧಿಕ ಅಂಕ ಗಳಿಸುತ್ತಾರೆ. ಆದರೆ, ಕಾಗುಣಿತ, ಅಕ್ಷರಗಳನ್ನು ನಿಖರವಾಗಿ ಗುರುತಿಸಲಾಗದಿರುವುದು ( ಡಿಸ್‌ಲೆಕ್ಸಿಯ) ತೊದಲು, ಬಿಕ್ಕುವುದು, ಅನಗತ್ಯ ಚಟುವಟಿಕೆ ಏಕಾಗ್ರತೆ ಕೊರತೆ ಹುಡುಗರಲ್ಲೇ ಹೆಚ್ಚು.

  • ಮಿದುಳಿನ ಗಾತ್ರಕ್ಕೂ, ಬುದ್ಧಿವಂತಿಕೆಗೂ ನೇರ ಸಂಬಂಧವಿದೆಯೇ?

‘ಮಿದುಳು ದೊಡ್ಡದಾಗಿದ್ದರೆ ಬುದ್ಧಿ ಜಾಸ್ತಿ. ವಿಶ್ವೇಶ್ವರಯ್ಯನವರ ಮಿದುಳು ಬಹಳ ದೊಡ್ಡದಿದ್ದಿರಬೇಕು’ ಎಂದು ಜನಸಾಮಾನ್ಯರ ಅನಿಸಿಕೆ. ಒಂದು ಮಿತಿಯೊಳಗೆ ಮಿದುಳಿನ ಗಾತ್ರಕ್ಕೂ, ಬುದ್ಧಿವಂತಿಕೆಗೂ ಸಂಬಂಧವಿದೆ. ಮಿದುಳು ಬೆಳೆಯದೆ ಚಿಕ್ಕದಾಗಿದ್ದರೆ ವ್ಯಕ್ತಿ ಬುದ್ಧಿಮಾಂದ್ಯನಾಗುತ್ತದೆ. ಆದರೆ ಸಾಧಾರಣ ಬುದ್ಧಿವಂತರಿಗೆ ಹಿಡಿದು ಅತಿ ಮೇಧಾವಿಗಳವರೆಗೆ ಮಿದುಳಿನ ಗಾತ್ರದಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಮಹಾಮೇಧಾವಿಗಳ ಮಿದುಳನ್ನು ಸಾಮಾನ್ಯ ಜನರ ಮಿದುಳನ್ನು ಬೆರೆಸಿದರೆ ಯಾವುದು ಯಾರ ಮಿದುಳು ಎಂದು ಹೇಳಲು ಕಷ್ಟವಾಗುತ್ತದೆ. ಮೇಧಾವಿಗಳ ಮಿದುಳಿನ ಯಾವುದೇ ಭಾಗ ವಿಶೇಷವಾಗಿ ಬೆಳೆದಿರುವುದಿಲ್ಲ. ಮಿದುಳಿನ ನರಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ. ಪರಿಸರದಲ್ಲಿ ಎಷ್ಟರಮಟ್ಟಿಗೆ ಪ್ರಚೋದನೆಗಳು ಇರುತ್ತವೆ. ಬುದ್ಧಿ ಸಾಮರ್ಥ್ಯಗಳ ಪ್ರಕಟಣೆಗೆ ಎಷ್ಟು ಹಾಗೂ ಎಂತಹ ಅವಕಾಶಗಳು ಬಂದವು ಎಂಬುದರ ಮೇಲೆ ಮೇಧಾವಿತನ ನಿರ್ಧಾರವಾಗುತ್ತದೆ.

ಹಾಗೆಯೇ ಮಿದುಳಿನ ಮೇಲ್ಮೈಯಲ್ಲಿ ಹೆಚ್ಚು ಮಡಿಕೆಗಳಿದ್ದಷ್ಟೂ ಮಿದುಳಿನ ಮೇಲ್ಮೈ ವಿಶಾಲವಾಗುತ್ತಾ ಅದರ ಬೂದಿ ವಸ್ತು (ಗ್ರೇಮ್ಯಾಟರ್) ಜಾಸ್ತಿಯಾಗಿ, ವ್ಯಕ್ತಿ ಹೆಚ್ಚು ಬುದ್ಧಿವಂತನಾಗುತ್ತಾನೆ ಎಂದು ತಿಳಿಯಾಗಿತ್ತು. ಕಡಿಮೆ ಬುದ್ಧಿಯವರಲ್ಲಿ ಸುಕ್ಕು ಕಡಿಮೆಯಾದರೂ, ಮೇಧಾವಿಗಳಲ್ಲಿ ಸುಕ್ಕು-ಮಡಿಕೆಗಳು ಜಾಸ್ತಿ ಏನೂ ಇರುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

  • ನಾವು ನಮ್ಮ ಮಿದುಳಿನ ಶೇಕಡಾ ೯೦ ಭಾಗವನ್ನು ಬಳಸುವುದಿಲ್ಲವೇ?

ನಾವೆಲ್ಲ ಒಂದು ವೃತ್ತಿಯಲ್ಲಿ ಸ್ಥಿರರಾಗಿ ನಮ್ಮ ದೈನಂದಿನ ಕೆಲಸ ಚಟುವಟಿಕೆಗಳು ಒಂದು ವಿಧಾನಕ್ಕೆ ಒಗ್ಗಿಕೊಂಡ ಮೇಲೆ, ನಾವು ನಮ್ಮ ಮಿದುಳಿಗೆ (ಅಂದರೆ, ಚಿಂತನೆ, ತರ್ಕ, ಸೃಜನಶೀಲತೆಗಳಿಗೆ) ಹೆಚ್ಚು ಕೆಲಸ ಕೊಡುವುದಿಲ್ಲ. ಯಾಂತ್ರಿಕವಾಗಿ ನಮ್ಮ ಮಿದುಳಿನ ಕೆಲ ಭಾಗಗಳು ಮಾಡಿಕೊಂಡು ಹೋಗುತ್ತವೆಯಾಗಿ, ನಾವು ನಮ್ಮ ಮಿದುಳಿನ ಪ್ರತಿಶತ ತೊಂಭತ್ತು ಭಾಗವನ್ನು ಉಪಯೋಗಿಸುವುದಿಲ್ಲ ಎಂಬ ಹೇಳಿಕೆಗಳನ್ನು ನೀವು ಕೇಳಿರುತ್ತೀರಿ. ಇದು ಎಷ್ಟರಮಟ್ಟಿಗೆ ನಿಜ?

ಒಂದು ಸರಳ ಚಟುವಟಿಕೆ ಉದಾಹರಣೆಗೆ, ಕುಳಿತುಕೊಳ್ಳಲು, ಆಕಳಿಸಿ ಮೈ ಮುರಿಯಲು, ಆಹಾರ ಸೇವಿಸಲು ಅಸಂಖ್ಯಾತ ನರಕೋಶಗಳು ಕಾರ್ಯಪ್ರವೃತ್ತನಾಗಬೇಕಾಗುತ್ತದೆ. ದೇಹದ ಒಳಾಂಗ ವ್ಯವಹಾರಗಳನ್ನು ನೋಡಿಕೊಳ್ಳಲು ಬಹುತೇಕ ನರಕೋಶಗಳು ದುಡಿಯಲೇಬೇಕು.ಮಿದುಳಿನ ಒಂದು ಸಣ್ಣ ಭಾಗ ಹೈಪೋಥಲಾಮಸ್, ಪಿಟ್ಯೂಟರಿ, ನರಸೇತುವಿಗೆ ಹಾನಿಯಾದರೆ ನಿಷ್ಕ್ರಿಯಗೊಂಡರೆ ಪರಿಣಾಮ ಭಯಂಕರ. ಕೆಲವು ಸಲ ಇಡೀ ಅರ್ಧ ಮಿದುಳು ನಿಷ್ಕ್ರಿಯಗೊಂಡರೆ ಕೇವಲ ಒಂದು ಭಾಗ ಪೆರಾಲಿಸಿಸ್ ಆಗಿ, ವ್ಯಕ್ತಿಗೆ ಅಂತಹ ಅಪಾಯವೇನೂ ಆಗಲಾರದು.

ಆದ್ದರಿಂದ ಮಿದುಳಿನ ಎಲ್ಲ ಭಾಗಗಳೂ, ನಮ್ಮ ಎಂದಿನ ಸಾಮಾನ್ಯ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುತ್ತವೆ. ಆದರೆ ನಮ್ಮ ಮಿದುಳು ಹಾಗೇ ನಮ್ಮ ದೇಹದ ಅನೇಕ ಶಕ್ತಿ-ಸಾಮರ್ಧ್ಯಳಲ್ಲಿ ಕೆಲವನ್ನು ನಾವು ಸಾಮಾನ್ಯ ಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳುವುದಿಲ್ಲ. ಆದರೆ ವಿಶೇಷ ಸ್ಥಿತಿಯಲ್ಲಿ ನಮಗೆ ಅರಿವಿಲ್ಲದಂತೆಯೇ ಉಪಯೋಗಿಸಬಹುದು. ಉದಾಹರಣೆಗೆ, ಓಡುವ ಅಭ್ಯಾಸವಿಲ್ಲದ ಒಬ್ಬ ವ್ಯಕ್ತಿ ಒಂದು ಫರ್ಲಾಂಗು ಓಡಲಾರದೆ ಕುಳಿತರೆ, ಪ್ರಾಣ ಭಯ ಉಂಟಾದಾಗ, ಕೆಲವು ಮೈಲುಗಳೇ ಓಡಲು ಶಕ್ತನಾಗುತ್ತಾನೆ. ಸಾಮಾನ್ಯ ಸ್ಥಿತಿಯಲ್ಲಿ ನಾಲ್ಕು ಇಡ್ಲಿ ತಿಂದು ಸಾಕೆನ್ನುವ ವ್ಯಕ್ತಿ ಸ್ಪರ್ಧೆಯಲ್ಲಿ ಇಪ್ಪತ್ತು ಇಡ್ಲಿಗಳನ್ನು ತಿನ್ನಲು ಸಮರ್ಥನಾಗುತ್ತಾನೆ. ಸಾಧಾರಣ ಸ್ಥಿತಿಯಲ್ಲಿ ಸಾಮಾನ್ಯ ಸಮಸ್ಯೆಗಳನ್ನು ಬಿಡಿಸಲು ಒದ್ದಾಡುವ ವ್ಯಕ್ತಿ ಮಾನ ಹೋಗುವ ಸಮಯದಲ್ಲಿ ತೀವ್ರ ಸಮಸ್ಯೆಯೊಂದನ್ನು ಬಗೆಹರಿಸಲು ಶಕ್ತನಾಗುತ್ತಾನೆ.

  • ಆಲ್ಕೋಹಾಲ್ ಮಿದುಳನ್ನು ಪ್ರಚೋದಿಸುತ್ತದೆಯೇ?

ಸ್ವಲ್ಪ ರಮ್ ಹಾಕಿದರೆ ನನ್ನ ಮಿದುಳು ಚುರುಕಾಗುತ್ತದೆ ಎನ್ನುವ ವ್ಯಕ್ತಿಗಳು ವಿಸ್ಕಿ ತಗೊಂಡರೇನೇ ನನಗೆ ಸ್ಪೂರ್ತಿ ಬರೋದು. ಕವನ, ಕಥೆ ಬರೆಯೋದಿಕ್ಕೆ ಸಾದ್ಯವಾಗೋದು ಎನ್ನುವ ವ್ಯಕ್ತಿಗಳು ಕಾಣಬರುತ್ತಾರೆ. ಆಲ್ಕೋಹಾಲ್ ಮಿದುಳನ್ನು, ಮನಸ್ಸನ್ನು ಪ್ರಚೋದಿಸುತ್ತದೆ ಎಂದು ಜನ ನಂಬುತ್ತಾರೆ. ಆದರೆ ವಾಸ್ತವದಲ್ಲಿ ಆಲ್ಕೋಹಾಲ್ ಮಿದುಳನ್ನು ಕುಗ್ಗಿಸುವ ರಾಸಾಯನಿಕ. ಅಲ್ಲದೆ ದೀರ್ಘಕಾಲದಲ್ಲಿ ಅದು ಮಿದುಳಿಗೆ ಮಾರಕ.

  • ಶೀರ್ಷಾಸನ ಮಾಡಿದರೆ ಮಿದುಳಿಗೆ ಒಳ್ಳೆಯದೇ ಬುದ್ಧಿಶಕ್ತಿ ಹೆಚ್ಚುತ್ತದೆಯೇ?

‘ಶೀರ್ಷಾಸನವನ್ನು ಮಾಡಿದರೆ ಮಿದುಳಿಗೆ ಹೆಚ್ಚು ರಕ್ತ ಪೂರೈಕೆಯಾಗುತ್ತದೆ. ಇದರಿಂದ ಅದು ಹೆಚ್ಚು ಪ್ರಚೋದನೆಗೊಂಡು, ಅದರ ಸಾಮರ್ಥ್ಯ ಹೆಚ್ಚುತ್ತದೆ’ ಎಂದು ಹೇಳುವವರಿದ್ದಾರೆ. ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ.

ಶೀರ್ಷಾಸನವೂ ಸೇರಿದಂತೆ, ಯಾವುದೇ ಯೋಗಾಸನದಿಂದ ಮೈಮನಸ್ಸುಗಳು ವಿರಮಿಸುತ್ತವೆ. ಆತಂಕ, ಬೇಸರ, ನಿರುತ್ಸಾಹಗಳು ಮರೆಯಾಗುತ್ತವೆ. ವ್ಯಕ್ತಿ ಚೆನ್ನಾಗಿ ಕೆಲಸ ಮಾಡಬಲ್ಲ.