ಶಾರ್ದೂಲವಿಕ್ರೀಡಿತ
ಶ್ರೀಸತ್ಯಾಧವಮಬ್ಜಜಾತಪಿತರಂ ಸರ್ವೇಷ್ಟದಂ ಭೂಧರಂ |
ಶ್ರೀಸಾಮೋದ್ಧರಣಂ ಸಮುದ್ಧೃತಗಿರಿಂ ಶ್ರೀಸ್ವರ್ಣನೇತ್ರಾಂತಕಂ ||
ಶ್ರೀಸಿಂಹಾಸ್ಯನರಂ ವಟುಂ ಜಿತಬಲಿಂ ಪೃಥ್ವೀಶಗರ್ವಾಪಹಂ |
ಶ್ರೀಸೌಮಿತ್ರಿನುತಂ ಕಿರೀಟವಿನುತಂ ಬುದ್ಧಂ ಕಲಿಘ್ನಂ ಭಜೇ ||೧||
ರಾಗ ಭೈರವಿ ಝಂಪೆತಾಳ
ಶ್ರೀಕಾತ್ಯಾಯನಿಕಂದ ನಮಿಪೆ ನಾನನವರತ | ರಾಕೇಂದುನಿಭವಕ್ತ್ರ ಕೋಮಲಗಾತ್ರ ||
ಏಕದಂತನೆ ನಿನ್ನನೇಕಭಾವದಿ ನಮಿಪೆ | ಶ್ರೀಕಂಠತರಳ ನೀ ಬೆಂಬಿಡದೆ ಸಲಹೋ ||೨||
ಶ್ರೀರಮಣ ತವ ಚರಣ ನೆರೆ ನಂಬಿದವರನ್ನು | ಕಾರುಣ್ಯದಲಿ ಕಾವಪಾರಗುಣಸಿಂಧೋ ||
ಸಾರಭಕ್ತಿಯನಿತ್ತು ವಾರಿಜಾಕ್ಷನೆ ಪೊರೆಯೊ | ನೀರಜೋದ್ಭವತಾತ ಸಜ್ಜನರ ಪ್ರೀತಾ ||೩||
ವಾಣೀಶರನು ನಮಿಸಿ ರಾಮಕೃಷ್ಣರ ಭಜಕ | ಹನುಮಂತಭೀಮರಡಿಗೆರಗಿ ಭಕ್ತಿಯಲೀ ||
ಪ್ರಾಣಪತಿ ಗುರುಮಧ್ವರನು ಭಜಿಸುತಲಿ ಭಾವಿ | ವಾಣೀಶ ವಾದಿರಾಜಾಖ್ಯಯೋಗಿಗಳಾ ||೪||
ಮೋದದಲಿ ನಮಿಸುತ್ತ ಯಾದವೋತ್ತಮನು ಹಯ | ಮೇಧವನು ರಚಿಸಿರ್ದನೊಂದು ದಿನದೊಳಗೇ ||
ಆದಿವ್ಯ ಕಥನವನು ಸಾದರದಿ ಪೇಳ್ವೆ ನಾ | ನಾದರಿಸಲಿದನು ಬುಧರೆಂದು ಭಕ್ತಿಯಲೀ ||೫||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಶ್ರೀಪರೀಕ್ಷಿತನೊಂದು ದಿನದಲಿ | ತಾಪಸೋತ್ತಮ ಶುಕಮುನೀಶ್ವರ ||
ರಾ ಪದಾಂಬುಜಕೆರಗಿ ಕೇಳಿದ | ಗೋಪವರನೂ ||೬||
ದ್ವಾರಕಾಪುರವನ್ನು ನಿರ್ಮಿಸಿ | ಶ್ರೀರಮಣ ಷೋಡಶದ ಸಾಸಿರ ||
ನಾರಿರತುನಗಳೆಂಟು ಪಟ್ಟದ | ದಾರರೊಡನೇ ||೭||
ಇನಿತು ಸುಂದರಿಯರನು ಕೂಡುತ | ಚಿನುಮಯಾತ್ಮನು ಮನುಜರಿಗೆ ಬಲು ||
ಘನತೆಯಿಂದಲಿ ಚೋದ್ಯ ಕಾರ್ಯಗ | ಳೇನತೋರ್ದಾ ||೮||
ಎನಲು ವೇದವ್ಯಾಸಮಾನಸ | ತನುಜ ಶುಕಮುನಿಪಿತನ ವಂದಿಸು ||
ತಿನಿತು ಪೇಳ್ದನು ಪಂಕಜಾಕ್ಷನ | ಮನದಿ ನುತಿಸೀ ||೯||
ದ್ವಿಪದಿ
ಪೊಡವಿಪತಿ ಕೇಳು ಜಗದೊಡೆಯ ದ್ವಾರಕಿಯ |
ಕಡಲಮಧ್ಯದಿ ಮಾಡಿ ದೃಢ ಮಹಾಪುರಿಯಾ ||೧೦||
ಅಲ್ಯಲ್ಲಿ ನವರತುನದುಲ್ಲಸಿತ ಕಂಭಾ |
ಗಲ್ಲಿಗಲ್ಲಿಯೊಳೆಸೆವ ಚಲ್ವ ವರಕುಂಭಾ ||೧೧||
ಭಂಗಾರಮಯವಾದ ತುಂಗ ಗೋಪುರವೂ |
ಶೃಂಗರಿಸಿ ಮೆರದಿರ್ಪ ಮಂಗಲಾಂಗಣವೂ ||೧೨||
ಜಂಭಾರಿಪುರದೊಳಿಹ ಕಂಬುಕಂಠಿಯರಾ |
ಹಿಂಬಳಿಸಿ ಮೆರೆವ ಕರಿಕುಂಭಕುಚದವರಾ ||೧೩||
ಬೆಡಗಿನಲಿ ಶೋಭಿಸುವ ನಡುವಿನಾರಾಮಾ |
ಸಡಗರದಿ ಕುಣಿದಾಡಿ ನುಡಿವ ಪಿಕಧಾಮಾ ||೧೪||
ತಿಳಿನೀರ ಕೊಳದೊಳಗೆ ನಲಿದು ಶೋಭೀಸುವಾ |
ನಳಿನಮಧ್ಯದಿ ನಿಲುವ ಕಲಹಂಸವಿಭವಾ ||೧೫||
ಅಂಬುಜದೊಳೆಸೆವ ಮರಿದುಂಬಿಗಳ ಗುಂಪೂ |
ಅಂಬುಜಾಕ್ಷಿಯರ ಕಡೆಯಂಬಕದ ಸೊಂಪೂ ||೧೬||
ಸುರಲೋಕದಿಂದಧಿಕ ಮೆರೆವ ದ್ವಾರಕಿಯಾ |
ನರರಾರು ವರ್ಣಿಸುವರರಿಧರನ ಪುರಿಯಾ ||೧೭||
ಇಂತೆಸೆವ ನಗರದೊಳು ಕುಂತಿಯಾತ್ಮಜರಾ |
ಸಂತಸದಿ ಕರತಂದು ಕಂತುಪಿತನವರಾ ||೧೮||
ವೆರಸುತೆಸಗಿದ ದಿನದಿ ತುರಗಮೇಧವನೂ |
ನರನ ಭಾಷೆಗೆ ವಿಪ್ರತರಳರನು ತಾನೂ ||೧೯||
ಮೆರೆವನಂತಾಸನಕೆ ನರಸಹಿತ ಪೋಗೀ |
ತರುತ ಪುತ್ರರನಿತ್ತು ವರವಿಪ್ರಗಾಗೀ ||೧೧||
ಮತ್ತೆ ಯಾಗವ ರಚಿಸಿ ಯುಕ್ತವಿಧಿಯಿಂದಾ |
ಕ್ರತ್ವಂತ್ಯದವಭೃಥವ ವರ್ತಿಸಲು ಬಂದಾ ||೧೨||
ದಂತವಕ್ರನ ತರಿವುತಂತರದಿ ತಾನೂ |
ಸಂತೋಷದೊಳಗೈದನಿಂತು ಧಾಮವನೂ ||೧೩||
ವಾರ್ಧಕ
ಧೊರೆ ಪರೀಕ್ಷಿತ ಮೌನಿಪದಕೆರಗಿ ಪೇಳ್ದನಾ |
ಗರುಡವಾಹನನೊಂದು ದಿನದೊಳಗೆ ವೈಭವದಿ |
ತುರಗಮೇಧವ ತಾನು ವಿರಚಿಸಲು ಕರಗಳಂ ತರಲಾರು ಪೋದ ಭಟರೂ ||
ಪರಮ ಸಾಹಸ ಗೈದ ಬಲಶಾಲಿಯೆಂತಹನೊ |
ಮರಳಿ ವರ ಭಾಗವತದರಿಧರನ ಕಥೆಯ ವಿ |
ಸ್ತರದೊಳಗೆ ಪೇಳ್ವುದೆನೆ ಮುನಿನಾಥನಿಂತೆಂದ ವಿಸ್ತರಿಸಿ ಶುಭಕಥೆಯನೂ ||೧೪||
ಭಾಮಿನಿ
ಒಂದು ದಿನ ಮಧುವೈರಿ ತನ್ನಯ |
ಮಂದಿರದಿ ರುಕ್ಮಿಣಿಯೆ ಮೊದಲಾ |
ದಿಂದುಮುಖಿಯರ ಸಹಿತ ಒಡ್ಡೋಲಗಕೆ ನಡೆತಂದೂ ||
ಅಂದದಲಿ ಝಗಝಗಿಪ ರತ್ನದ |
ವೃಂದದಲಿ ಮೆರೆದಿರ್ಪ ಪೀಠದೊ |
ಳಿಂದುಲಕ್ಷದ ತೇಜದಲಿ ಕುಳಿತಾಗ ಯದುವರನೂ ||೧೫||
ರಾಗ ಕಾಂಭೋಜಿ ಝಂಪೆತಾಳ
ವಾರಿಜಾಂಬಕಿಯರಿಗಾ ರಮೇಶನು ಪೇಳ್ದ | ಸೂರ್ಯೋಪರಾಗವಿದೆನಾಳೆ ||
ಸೀರಪಾಣಿಯ ಸಹಿತ ತ್ವರ್ಯದಲಿ ಪೋಗುವೆನು | ಸಾರ ಶಾಮಂತ ಪಂಚಕಕೇ ||೧೬||
ಮಡದಿ ರುಕ್ಮಿಣಿ ಸತ್ಯರೊಡಗೂಡಿ ಪೇಳಿದರು | ಬೆಡಗಿ ನಲಿ ಮನವೊಲಿಸುತಾಗಾ ||
ಜಡಜಾಕ್ಷ ನೀನೆಮ್ಮ ಬಿಡುತ ಪೋಗುವರೆ ಮನ | ಕೊಡುವದುಚಿತವೆ ಪೇಳು ರನ್ನಾ ||೧೭||
ಎನಲು ನಗುತಾಗ ಹರಿ ಪ್ರಣಯದಲಿ ಬಿಗಿದಪ್ಪಿ | ವನಿತೆಯರೊಡನೆಂದ ನಿಮ್ಮಾ ||
ಮನ ಪರೀಕ್ಷಿಸೆ ಪೇಳ್ದೆನನು ಸರಿಸಿ ಬಹದೆಂದು | ವನಜಾಕ್ಷ ಚರರ ಕರದೆಂದಾ ||೧೮||
ಎಲವೊ ಚಾರಕ ಬೇಗದಲಿ ಪೋಗಿ | ನೀನೀಗ | ಬಲದೇವನನು ನಮ್ಮ ಸಭೆಗೇ ||
ಚೆಲುವ ವೇಳೆಯನರಿತು ತಿಳುಹುವುದು ಬಹದೆಂದು | ನಳಿನಾಕ್ಷನಿಂತುಸುರಿ ಕಳುಹೇ ||೧೯||
ಕಂದ
ಹರಿಯಾಜ್ಞೆಯೊಳಾ ಚರನತಿ |
ಭರದೊಳು ಬಲರಾಮನ ಸಭೆಗೈದನು ಜವದಿಂ |
ಶರಣೆನುತಲಿ ತಲೆವಾಗುತ |
ಕರಗಳ ಜೋಡಿಸಿ ಬಲು ವಿನಯದೊಳಿಂತೆಂದಂ ||೨೦||
ರಾಗ ಭೈರವಿ ಅಷ್ಟತಾಳ
ಯದುವೀರ ಲಾಲಿಸಯ್ಯ | ನಿಮ್ಮಯ ಕೋ | ವಿದ ವಾಸುದೇವ ಜೀಯಾ ||
ಮುದದಿ ನಿಮ್ಮಯ ಬರವಿದಿರು ನೋಡುತಲಿರ್ಪ |
ಮದಿರನೇತ್ರನೆ ತಡವ ಮಾಡದೆ | ಪದುಮನಾಭನ ಸಭೆಗೆ ಬಾರೈ ||೨೧||
ವಚನ
ಶ್ರೀಲೋಲಂ ಪೇಳಿದ ನುಡಿಯಂ | ಲಾಲಿಸಿ ಚರರಿಂ ಕೇಳುತ ತಾಳಾಂಕಂ ||
ಬಾಲಾರ್ಕನ ವೋಲ್ ಕಣ್ಣಿಂ | ದಾ ಲಕ್ಷ್ಮೀಶನ ಸಭೆಗೈತಂದಿಂತೆಂದಂ ||೨೨||
ರಾಗ ಮಾರವಿ ಏಕತಾಳ
ಅನುಜನೆ ನಮ್ಮಯ ಪುರಕೇಸರಿಗಳು | ಸೆಣಸಲು ಬಂದಿಹರೇ ||
ಘನತರ ಕಾರ್ಯಗಳೇನಿಹುದಾ ಪರಿ | ಯನು ನೀನೆನಗುಸುರೈ ||೨೩||
ಧುರದೊಳು ರಿಪುಕೇಸರಿ ನಾನಿರುತಿರ | ಲರಿಗಜಭಯವೆಲ್ಲೀ ||
ಪರರಾಷ್ಟ್ರವು ಗೆಲಲಿರುವುದೆ ಪೋಗಲು | ಕರದೆಯೊ ಪೇಳಲ್ಲೀ ||೨೪||
ಬಡ ಮುನಿಗಳ ತಪಗೆಡಿಸಲು ದೈತ್ಯರು | ವಡಗೂಡಿಹರೇನೊ ||
ಮೃಡನೊಮ್ಮೆಗೆ ಬರೆ ಬಿಡೆಬಿಡೆನವರನು | ಜಡಜನಾಭನೆ ತಾನೂ ||೨೫||
ರಾಗ ಬೇಗಡೆ ಏಕತಾಳ
ಅಣ್ಣ ಲಾಲಿಪುದೆನ್ನ ಬಿನ್ನಪವನ್ನ |
ನಿನ್ನ ಪೋಲುವ ವೀರರಿರಲು ಸಂಪನ್ನಾ ||೩೬||
ಕಣ್ಣೆತ್ತಿ ನೋಡುವ ವೈರಿಗಳಿಹರೇ |
ಪುಣ್ಯಕಾರ್ಯವದನ್ನು ಪೇಳ್ವೆ ಪೂರ್ವಜರೇ ||೨೭||
ಸೂರ್ಯೋಪರಾಗ ನಾಳಿನ ದಿನವೆನುತ |
ತ್ವರ್ಯದಿ ಕರೆಸಿದೆ ಯದುಸಂಘನಾಥಾ ||೨೮||
ಪೋಗುವದೀಗ ಶಾಮಂತಪಂಚಕಕೆ |
ಭಾಗೀರಥಿಯ ಸ್ನಾನದಾ ಪುಣ್ಯಪಥಕೇ ||೨೯||
ಆ ಗುಣನಿಧಿ ಹರಿಪೇಳಲಾ ಕ್ಷಣದಿ |
ಬೇಗದೊಳ್ಬಲಭದ್ರಾದಿಗಳೆಲ್ಲ ಭರದೀ ||೩೦||
ಪೋದರಾ ಶಾಮಂತಪಂಚಕಕ್ಕಾಗಿ |
ಮಾಧವಾದ್ಯರು ಬಲಭದ್ರರೊಂದಾಗೀ ||೩೧||
ರಾಗ ಭೈರವಿ ತ್ರಿವುಡೆತಾಳ
ಬಂದರಾಗ | ಯದುವರರ್ | ಬಂದರಾಗ ||
ಬಂದರಾ ಯದುಕುಲದ ಶರಧಿಯೊ | ಳಿಂದುವಂದದಿ ಜನಿಸಿದರ್ ಗೋ |
ವಿಂದ ಬಲರಾಮಾದಿ ಯಾದವ | ರಂದಣದಿ ತಾವು ತಮ್ಮ ಸುದತಿಯ |
ವೃಂದದೊಂದಿಗೆ ಭಕ್ತಿಯಲಿ ಸುರ | ಮಂದಾಕಿನಿತಟಕಾಗಿ ಸರ್ವರು || ಬಂದರಾಗ ||೩೨||
ರಾಗ ಘಂಟಾರವ ಝಂಪೆತಾಳ
ಕ್ಷಿತಿಪತೀಶ್ವರ ಪರೀಕ್ಷಿತ ಕೇಳು ಶ್ರೀಹರಿ |
ಯತಿಶಯದ ಮೋಹದ ಸುದತಿಯರೊಡಗೊಂಡೂ ||
ಇತರ ಯಾದವರು ರೇವತಿಯಧವ ಸಹಭಾಗೀ |
ರಥಿಯ ತೀರದೊಳಿರಲ್ ಮತಿವಂತರಿನಿತೂ ||೩೩||
ಅಂದು ಬೇಗದಿ ಪಾಂಡುನಂದನರು ಸಭೆಗೆ ನಡೆ |
ತಂದೀಂದ್ರಪ್ರಸ್ಥದೊಳ್ ನಂದದಲಿ ತಮ್ಮಾ |
ಇಂದುಸಾಸಿರ ಭಾಸದಿಂದಧಿಕ ಲಾವಣ್ಯ |
ಮಂದಿರದ ದ್ರುಪದಜೆಯ ಚಂದ ವೈಭವದೀ ||೩೪||
ಕುಳಿತು ಧರ್ಮಜ ತನ್ನ ಲಲಿತ ರನ್ನದ ಪೀಠ |
ದಲಿ ಭೀಮ ಪಾರ್ಥರೊಡನೊಲವಿನಲಿ ಪೇಳ್ದಾ ||
ಬಲವಂತ ಸಹಜಾತರಿಳೆಯ ಪಾಲರು ತಮ್ಮ |
ಛಲ ಬಿಟ್ಟು ಕಪ್ಪವನು ಸಲಿಸುವರೊ ನಮಗೇ ||೩೫||
ವಾಯುಜನು ಪೇಳ್ದನರಿರಾಯರೆಲ್ಲರು ತಮ್ಮ |
ಕಾಯ ಬಗ್ಗಿಸಿ ಕಪ್ಪವೀಯುವರು ಭಯದೀ ||
ದಾಯಾರ್ಹನಾದ ಕುರುರಾಯನರಿತನದಿಂದ |
ಮಾಯ ತೋರ್ಪನು ದಿಟವು ಜೀಯ ಬಿಡೆನವನಾ ||೩೬||
ಫಲುಗುಣನು ಮಗುಳೆಂದ ಜ್ವಲನಂಗೆ ಖಾಂಡವನ |
ದೊಳಗಿರ್ಪ ನಿಖಿಲವಂ ಘಳಿಸದಿತ್ತುದಕೇ ||
ಒಲಿದಿತ್ತ ಗಾಂಡೀವ ಚಲುವ ಕಾಂಚನರಥವ |
ಕೊಳುಗುಳದಿ ಪರರ ತೋಳ್ಬಲದಿಂದ ಗೆಲುವೇ ||೩೭||
ಕಂದ
ಸಹಜಾತರ ನುಡಿ ಕೇಳುತ |
ಲಹಿತರ ಭೀತಿಯ ತೊರೆವುತ ಧರ್ಮಜನಾಗಳ್ ||
ಬಹು ಸಂಭ್ರಮದೊಳು ಸಹಜರ |
ಸಹಿತಲಿ ರಾಜ್ಯತಂತ್ರದೊಳಿರೆ ಮಹಾಮುನಿಗಳ್ ||೩೮||
ರಾಗ ಸಾಂಗತ್ಯ ರೂಪಕತಾಳ
ಸಮಯದಿ ವೇದವ್ಯಾಸರ್ ಪಾಂಡುಜರಿದ್ದ | ವಾಸಮಂದಿರಕೆ ನಡೆತಂದೂ ||
ತೋಷದಿಂದಲಿ ತನ್ನ ದೋಷದಿಂ ಬಿಗಿದಪ್ಪಿ | ನಾಸದೊಳ್ ಶಿರವಾಘ್ರಾಣಿಸಲೂ ||೩೯||
ಭೂಸುರೋತ್ತಮನಂಘ್ರಿಗೆರಗಿ ಪಾಂಡವರು ಸ್ವ | ರ್ಣಾಸನವಿತ್ತರ್ಚಿಸುತಲೀ ||
ಪೂಶಿಪ ಗಂಧ ಮಾಲ್ಯಗಳಿಂದ ದ್ರುಪದಜೆ | ತೋಷಗೊಳಿಸಿ ಮುನಿಗೆರಗೇ ||೪೦||
ಲೇಸು ಕುಂತಿಜರೆ ನೀ ವಾಸಿಸಿ ಬಹುದಿನ | ದೇಶದೇಶವ ತಿರುಗಿದರೂ ||
ಈ ಸುಶೀಲೆಯು ನಿಮ್ಮ ಕೈ ಸೇರಿದುದರಿಂದ | ಭೂಸಿರಿಯೊಡೆತನವಾಯ್ತೂ ||೪೧||
ಸತ್ಯವಂತೆಯ ಸುತನೆಂದ ಬಾಲಕನೆ ನೀ | ಸತ್ಯಪದ್ಧತಿ ಬಿಡದಿನ್ನೂ ||
ಪೃಥ್ವಿಪಾಲಿಸಿ ರಾಜಸೂಯಾಶ್ವಮೇಧದಿಂ | ದುತ್ತಮ ರಾಜನೆಂದೆನಿಸೋ ||೪೨||
ಮೊಗವ ತಗ್ಗಿಸಿ ಕೈಯಮುಗಿದು ಧರ್ಮಜನೆಂದ | ಜಗದೊಡೆಯನೆ ನಿನ್ನ ನುಡಿಯೂ ||
ನಿಗಮದಿಂದಧಿಕವೆಂದೊದರುವರನಿಬರು | ಮಿಗೆ ಪೇಳ್ವದಿನ್ನೇನು ತಾನೂ ||೪೩||
ಭಾಮಿನಿ
ಸತ್ಯಶರಧಿಯೆ ನಾಳೆಯೊದಗಿದ |
ಸಪ್ತಸಪ್ತಿಯ ಗ್ರಹಣಯೋಗಕೆ |
ಸತ್ಯಭಾಮೆಯ ಧವನು ತಾನೀಗಲ್ಲಿ ಗೈದಿಹನೂ ||
ಸತ್ವರದಿ ನಿಜಸೋದರರು ಸತಿ |
ಯುಕ್ತನಾಗುತೆ ಪೊರಡು ಜಗದೊಳ |
ಗುತ್ತಮದ ಶಾಮಂತನಾಮಕ ಕ್ಷೇತ್ರದೆಡೆಗೆನಲೂ ||೪೪||
ರಾಗ ಮುಖಾರಿ ಏಕತಾಳ
ಕುಂತಿಜಾತರು ಬಂದರ್ ಭರದಿ | ಶ್ರೀಹರಿಯ ನೋಡುವ ಮನದೀ ||
ಕುಂತಿಜಾತರು ಬಂದರ್ಭರದೀ || ಪಲ್ಲ ||
ದಂತಿಪೋತರ ತೆರನಿಂತಲ್ಲಿಹ ಋಷಿ | ಹಂತರದತಿಶಯ ಸಂತೋಷ ಬೀರುತ ||
ಕುಂತಿಜಾತರು ಬಂದರ್ಭರದಿ ||೪೫||
ಭಾಮಿನಿ
ಧರಣಿಪತಿ ಧರ್ಮಜನೆ ನೀ ನೋ |
ಡುರಗವೈರಿಯ ನಾಥಶ್ವಶುರನ |
ಹರಿಗಳಿಂ ಬಂಧಿಸಿದ ವೀರನ ಸತಿಯ ಕದ್ದವನಾ ||
ಮೆರೆವ ವನ ತರಿದವನ ಕೇತನ |
ದಿರಿಸಿದಾತನ ಸಖನ ಮೊಮ್ಮನ |
ತರುಣಿತಾತನ ದೇವ ಶಿರದಿಂದಿಳಿದ ಜಾಹ್ನವಿಯಾ ||೪೬||
ರಾಗ ಮಧ್ಯಮಾವತಿ ತ್ರಿವುಡೆತಾಳ
ಶ್ರೀರಮಣ ಪಾಂಡವರನಾ ಕ್ಷಣ | ದೂರದಲಿ ಕಾಣುತ್ತ ಮನದೊಳು ||
ಭೂರಿ ತೋಷದೊಳಾಗ ನಗುತಾ | ಪಾರಮಹಿಮನು ನುಡಿದನು | ರಾಮನೊಡನೇ ||೪೭||
ಬಂಧುಕುಲಕೆ ಲಲಾಮ ಪಾಂಡುಜ | ರಿಂದು ಬಂದಿಹರಲ್ಲಿ ನೋಡೈ ||
ಮುಂದೆ ಋಷಿವರ ವ್ಯಾಸರೊಡನಾ | ನಂದದಲಿ | ಕರೆಯುವ | ಮೋದದಿಂದಾ ||೪೮||
ಎನಲು ಹಲಧರ ಕೋಪದಲಿ ತಾ | ವನಜನಾಭನೊಳುಸುರಿದನು ನ ||
ಮ್ಮನುಜೆ ಸೌಭದ್ರೆಯನು ಕದ್ದಿಹ | ಬಿನುಗು ಜನರನು ಕರೆಯಲು | ಬರೆನು ತಾನೂ ||೪೯||
ಸಿಟ್ಟು ಮಾಡಲು ಬೇಡ ನಮ್ಮೊಡ | ಪುಟ್ಟಿದವಳಿಗೆ ಯೋಗ್ಯನಹನಿವ ||
ಗಿಷ್ಟದಲಿ ಕೊಡದೀರ್ದುದಕೆ ವಿಧಿ | ಕೊಟ್ಟನಿವಳನು ಪಾರ್ಥಗೆ | ನೋಡು ಮನದೀ ||೫೦||
ನುಡಿದನಾ ಬಲರಾಮ ನಿನ್ನಯ | ನಡತೆಯಂದದಿ ಪಾರ್ಥ ಗೈದಿಹ ||
ಕಡು ವಿರೋಧವಿನ್ಯಾಕೆ ತನಗವ | ರೊಡನೆ ಬರಿದೆಂದೆನುತಲಿ | ಪೊರಟನಾಗಾ ||೫೧||
ಕಾಮಪಿತ ಬಲರಾಮಗರುಹಿದ | ಭೂಮಿಯಲಿ ಬಾಹುಜರ ಸ್ತ್ರೀಯರು ||
ಕಾಮಿಸುತ ಸ್ವಯಂವರದಿ ವರಿಸುವ | ನೇಮವಿಹುದೈ ನಡತೆಯು | ದುಗುಡ ಬೇಡೈ ||೫೨||
ಭಾಮಿನಿ
ಹರಿಯ ಮುನಿವರ ಪಾಂಡುಸುಕುಮಾ |
ರರಿಗೆ ತೋರಿಸುತೆಂದ ಭಕ್ತರ |
ನರಗಿಣಿಯ ವೋಲ್ ಸಲಹಿ ಕರುಣಾಪಂಜರದಿ ತಾನೂ ||
ಬರುವ ದುಗುಡವ ಕಳೆವ ದಾಮೋ |
ದರನು ಧರಣಿಯ ಭಾರವನು ಪರಿ |
ಹರಿಪೆನೆಂದವತರಿಸಿದನು ತನ್ನಂಶ ನೋಡೆನಲೂ ||೫೩||
ಕಂದ
ವ್ಯಾಸನು ನುಡಿ ಕೇಳುತ ಸವ |
ಕಾಶವ ಗೈಯದೆ ಪಾಂಡುಸುತರು ಬಲು ಭರದಿಂ ||
ತೋಷದಿ ರೋಮೊದ್ಗಮದಿಂ |
ಶ್ರೀಶನ ಪದಕೆರಗುತ ನುತಿಸಿದ ರತಿಮುದದಿಂ ||೫೪||
ರಾಗ ಯರಕಲಕಾಂಬೋಧಿ ಝಂಪೆತಾಳ
ಜಯಜಯ ಶ್ರೀರಮಣ ಜಯತು ಭಕ್ತರ ಶರಣ |
ಜಯಜಯ ಗುಣಪೂರ್ಣ ಜಯ ಪಾಪಹರಣಾ ||
ಜಯ ಜೀಯ ಪಾಹಿ ನಮ್ಮನುದಿನದಿ ಮುಂದೆ ನಮ |
ಗಯನ ನೀನೆಂದು ಭವಭಯಹರಗೆ ನಮಿಸೇ ||೫೫||
ಮಂದಹಾಸದಿ ಪೇಳ್ದ ಬಂದರೆಮ್ಮಯ ಮುಖ್ಯ |
ಬಂಧು ಕುಂತಿಯ ಜಾತರಿಂದು ನಮ್ಮೆಡೆಗೇ ||
ಚಂದವೇ ನಿಮಗೆಲ್ಲವೆಂದು ಮಾಧವ ಪೇಳ |
ಲೆಂದನಾ ಮುನಿರಾಯ ನಂದದಲಿ ಹರಿಗೇ ||೫೬||
ಇಂದಿರೇಶನ ಕುಂತಿನಂದನರು ತವ ಪಾದ |
ದ್ವಂದ್ವಸೇವಕರಿವರಿಂದುವಂಶಜರೂ ||
ಕಂದರೀ ಪಾರ್ಥರನು ಮುಂದೆ ನೀ ರಕ್ಷಿಪುದು |
ಸಂಧಿ-ವಿಗ್ರಹ-ಯಾನಗಳಲಿ ಬೆಂಬಿಡದೇ ||೫೭||
ಭಾಮಿನಿ
ಎನಲು ಶ್ರೀಮಾಧವನು ನುಡಿದನು |
ಮುನಿಯೆ ಸೌಭದ್ರೆಯು ಕಿರೀಟಿಯ |
ನನುವರಿಸೆ ರಕ್ಷಿಸುವ ಭಾರವು ನಮ್ಮದೆಂದೆನಲೂ ||
ಚಿನುಮಯನ ನುಡಿ ಕೇಳಿ ಋಷಿವರ |
ಸನುಮತದಿ ಪಾಂಡವರ ನೋಡುತ |
ವನಜನಾಭನೆ ನಿಮಗೆ ಮುಂದಣ ಗತಿಯು ದಿಟವೆನಲೂ ||೫೮||
ವಾರ್ಧಕ
ಧಾರುಣೀಶ್ವರನೆ ಕೇಳಾ ಋಷೀಶ್ವರ ವ್ಯಾ |
ಹಾರಗಳ ಕೇಳಿ ಸುಕುಮಾರರತಿ ಮೋದದೊಳ್ |
ಕೌರವಾದ್ಯರ ಮಹಾಘೋರಕರ ಜಯವು ಕೈ ಸೇರಿತೆಂದೆನುತಲಿರಲೂ ||
ನಾರಿಯರ ಗಡಣದಿಂ ವಾರಿಜಾಂಬಕಿ ಬೇಗ |
ಮಾರಪಿತನೆಡೆಗೆ ವೈಯಾರದಿಂದೈದಿ ಪದ |
ಸಾರಸಂಗಳಿಗೆರಗೆ ಶ್ರೀರಮಣ ಶುಭವೆನುತ ಪಾರ್ಷತೆಯನುಪಚರಿಸಲೂ ||೫೯||
ರಾಗ ಶಂಕರಾಭರಣ ಏಕತಾಳ
ಸತ್ಯಭಾಮಾದೇವಿಯು ತ | ನ್ನತ್ತಿಗೆ ದ್ರೌಪದಿಯ ಕಾ |
ಣುತ್ತಲತಿ ಮುದದಿ ನುಡಿದಳ್ | ಮತ್ತೇಭಗಮನೇ ||೬೦||
ಅತ್ತಿಗೆ ಕ್ಷೇಮವೆ ನಿಮ್ಮ | ನಿತ್ಯದಿ ನಾ ನೋಳ್ಪೆನೆನುತಾ ||
ಚಿತ್ತದಿ ಬಯಸುತ್ತಲಿದ್ದೆ | ಮತ್ತಕಾಶಿನೀ ||೬೧||
ಮಾರನಯ್ಯನರಸಿ ಕೇಳೆ | ಭೂರಿ ತೋಷವಾಯ್ತು ಹರಿಯ ||
ಸೇರಿದ ಭಕ್ತರ್ಗೆ ಕ್ಷೇಮ | ದೊರೆಯದೀರ್ಪುದೇ ||೬೨||
ಕಪಟಮುನಿಯ ವೇಷದಿಂದ | ಜಪಿಸುತಿರ್ಪ ನರಗೆ ಮೋಹಿಸಿ ||
ಗುಪಿತದಿಂದ ರಮಿಸಿ ಪೋದ | ಚಪಲೆಗೆ ಸುಖವೇ ||೬೩||
ಚಂಚಲಾಕ್ಷಿ ಭಾಮೆ ಕೇಳೆ | ವಂಚಿಸಿ ಸ್ತ್ರೀಯರ ರುಕ್ಮಿಣಿ ||
ಪಂಚೇಷುಪಿತಗೊಲಿದುದ ಪ್ರ | ಪಂಚವರಿಯದೇ ||೬೪||
ಪಂಚಶಿರನ ಧನುವನೆತ್ತಿ | ಸಂಚಿತಾರ್ಥಳಾಗಿ ಪಾರ್ಥಗೆ ||
ವಂಚಿಸುತ್ತ ಹ್ಯಾಗೆ ಪಂಚರ | ಹಂಚಿಕೊಂಡಿರ್ಪೇ ||೬೫||
ಮಾತೆಮಾತಿಗಾಗಿ ಸುತರೀ | ರೀತಿಗೈದಪರಿಯು ಶಾಸ್ತ್ರ ||
ವ್ರಾತಕಿದು ಸಮ್ಮತವು ವಿ | ಖ್ಯಾತೆ ನೀ ಕೇಳೇ ||೬೬||
ಭ್ರಾಂತಳಂತೆ ನಿಖಿಲ ಗೋಪೀ | ಕಾಂತ ಹರಿಯ ದಾನಕೊಡುವ ||
ಸ್ವಾಂತ ಬಂತೆ ಮುನಿಗೆಲೆ ಕ | ರ್ಣಾಂತನಯನೆಯೇ ||೬೭||
ಮಾನವಂತೆ ಕೋಪಿಸ ಬೇಡೆ | ಧ್ಯಾನಿಸಿ ನೀ ನೋಡೆ ಪತಿಯ ||
ದಾನಕೊಟ್ಟೆನು ಹರಿಗೆ ನಿತ್ಯದಿ | ರಾಣಿಯಹಳೆನುತಾ ||೬೮||
ಮಂದಯಾನೆ ದ್ರೌಪದಿ ನಾ | ರಂದಮುನಿಯ ಮಾತಿಗೆ ಸಂ |
ಕ್ರಂದಸುತನು ಯಾತ್ರೆಗೈಯಲ್ | ಚಂದದಿ ನೋಡ್ದೇ ||೬೯||
Leave A Comment