ಭಾಮಿನಿ
ಇನಿತು ಪೇಳಿದ ಭಾಮೆನುಡಿಗಳ |
ವನಜನಾಭನು ಕೇಳಿ ಭಗಿನಿಯ |
ನನುನಯದಿ ತಕ್ಕೈಸಿ ತನ್ನಯ ಸತಿಯೊಳಿಂತೆಂದಾ ||
ಬಿನುಗು ನುಡಿಗಳ ಪೇಳ್ವರೇ ಮಾ |
ನಿನಿಯೆ ಬಾಂಧವರೆಂದು ಮರೆತೆಯ |
ಪ್ರಣಯದಲಿ ಮುಂದೀರ್ಪುದೆನುತಲಿ ಹರಿಯೊಡಂಬಡಿಸೀ ||೭೦||
ರಾಗ ಸಾಂಗತ್ಯ ರೂಪಕತಾಳ
ಜಡಜಬಾಂಧವಗೀಗ ಬಂದೊದಗಿತು ರಾಹು | ಕಡು ಛಾಯವೆನುತಲಿ ಹರಿಯೂ ||
ನುಡಿದ ಮಾತಿಗೆ ಧರ್ಮನಂದನಾದ್ಯರು ಯದು | ಗಡಣಸಹಿತ ಗಂಗಾತಟಕೇ ||೭೧||
ಸಂಭ್ರಮದಲಿ ನಡೆತಂದು ಪಾರ್ಥರ ಸಹ | ಶಂಭರಾರಿಯ ಪಿತನು ತಾನೂ ||
ಅಂಬುಜಾಕ್ಷಿಯರೊಡಗೊಂಡು ಮೌನಿಗಳ ಕ | ದಂಬದಿ ಸಹಿತ ತಾ ಮಿಂದೂ ||೭೨||
ಸ್ವರ್ಣ ರೌಪ್ಯವು ವಸ್ತ್ರ ಗಜ ರಥ ನವರತ್ನ | ಪೂರ್ಣಭಾಜನವ ವಿಪ್ರರಿಗೆ ||
ಕರ್ಣಾಂತನಯನೆಯರ ಸಹಿತ ಭೂಭುಜರು ಕೊ | ಟ್ಟಾರ್ಣವಸತಿಯನರ್ಚಿಸುತಾ ||೭೩||
ಭೂದೇವಮುಖದಿಂದ ವಿಧವಿಧದ್ವರಗಳ | ಸಾಧಿಸಿ ಧರ್ಮಾದ್ಯರೆಲ್ಲಾ ||
ಮಾಧವನನು ಪೂಜಿಸುತಲಿರೆ ಭಾಮೆಯು | ಮೋದದಿ ಪೇಳ್ದಳು ಹರಿಯಾ ||೭೪||
ರಾಗ ಕೇತಾರಗೌಳ ಆದಿತಾಳ
ಬಂದ ಕಾರ್ಯವು ನಮಗೆ | ಚಂದದೊಳಾಯಿ | ತಿಂದು ನಾವ್ ದ್ವಾರಕಿಗೇ ||
ಕುಂದರದನೆ ದ್ರೌಪದಿ | ಮೊದಲಾದ ಬಂಧು | ವೃಂದದೊಂದಿಗೆ ಭರದೀ ||೭೫||
ಹೊರಡು ಭವನಕೆನಲು | ತನ್ನವರಿಂಗೆ | ಹರಿಯು ತಾ ಸತ್ವರದೊಳೂ ||
ಪುರಕೆ ಪೋಗುವದೆನಲು | ಯಾದುವರೆಲ್ಲ | ತ್ವರಿತದಿ ಪೊರಮಡಲೂ ||೭೬||
ಶಬ್ದಾರ್ಥ : ವೃಂದ=ಸಮೂಹ, ಭವನ=ಮನೆ
ಭಾಮಿನಿ
ಮಂದಹಾಸದಿ ಪಾಂಡವರ ಕರ |
ದೆಂದ ನಮ್ಮಯ ದ್ವಾರಕಿಗೆ ನೀ |
ವಿಂದು ನಡೆತಂದೆಲ್ಲ ದ್ರುಪದನ ನಂದನೆಯ ಕೂಡೀ ||
ಒಂದೆರಡು ದಿನವಿದ್ದು ನಮಗಾ |
ನಂದವನು ಸಂಜನಿಸಿ ಸಂಭ್ರಮ |
ದಿಂದ ಮುಂದಕೆ ಪೋಗುವದು ಮುನಿಕಂದ ಮೊದಲಾಗೀ ||೭೭||
ರಾಗ ಮಾರವಿ ಏಕತಾಳ
ಎಂದಾ ಕ್ಷಣ ಋಷಿನಂದನ ಮುಖ್ಯರು | ಮಂದಾಕಿನಿತಟದೀ ||
ಮಂದರಧರ ಗೋವಿಂದನ ಜತೆಯೊಳು | ಬಂದರು ತಾವ್ ಮುದದೀ ||೭೮||
ಹರಿ ಪಾರ್ಥರ ಕರದುರುತರ ದ್ವಾರಕಿ | ಗ್ಹರುಷದೊಳೈತರಲೂ ||
ಪುರದ್ವಾರದಿ ಗೋಪ್ಯರು ನೀರಾಜನ | ವರಿಧರಗರ್ಪಿಸಲೂ ||೭೯||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸತ್ಯವಂತೆಯ ಸುತನ ತರಿಸುತ | ನಿತ್ಯತೃಪ್ತನು ನುಡಿದ ಪಾಂಡವ ||
ಪೃಥ್ವಿಪಾಲಕರಿಂಗೆ ಮನ್ನಣೆ | ಯರ್ತಿಯಿಂದಾ ||೮೦||
ವಿರಚಿಸಲು ಮನವಿಹುದು ಪೂರ್ವದೊ | ಳುರ್ವಿಯೊಳಗಿನಿತಾರು ಗೈಯದ ||
ಪರಿಯ ಪೇಳೆಂದೆನಲು ಋಷಿವರ | ನೊರೆದನಾಗಾ ||೮೧||
ಒಂದು ದಿನದಲಿ ವಾಜಿಮೇಧವ | ಚಂದದಲಿ ವಿರಚಿಸುತ ಬಂದಿಹ ||
ಬಂಧುಜಾಲಕೆ ತೋಷಿಸೈ ಗೋ | ವಿಂದ ನೀನೂ ||೮೨||
ತುರಗರಕ್ಷೆಗೆ ಭೀಮಪಾರ್ಥರು | ತರಳ ಪ್ರದ್ಯುಮ್ನಾಖ್ಯ ಸಾತ್ಯಕಿ ||
ಯರನು ನಿನ್ನಯ ರಥದಿ ಕೂರಿಸಿ | ಭರದಿ ಕಳುಹೈ ||೮೩||
ಯಾಮವೊಂದರಲಿಳೆಯ ಚರಿಸುತ | ಭೀಮಮುಖ್ಯರು ಕರವ ತರುವರು ||
ಭೂಮಿಪಾಲರ ಗರ್ವವಿಳುಹುವರ್ | ಕಾಮಪಿತನೇ ||೮೪||
ಪ್ರಹರದಲಿ ಭೂಲಕ್ಷಯೋಜನ | ವಿಹರಿಸುವ ವಾಜಿಯನು ಸತ್ವದಿ ||
ವಿಹಗವಾಹನ ನಿರ್ಮಿಸೈ ಬಲ | ಸಹಜನೆನಲೂ ||೮೫||
ಭಾಮಿನಿ
ಯೋಗಿಯರಸನ ನುಡಿಯ ಕೇಳು |
ತ್ತಾಗ ವಾಯುಜ ಪಾರ್ಥ ಸಾತ್ಯಕಿ |
ನಾಗಸಾಸಿರಬಲದ ಪ್ರದ್ಯುಮ್ಯಾಖ್ಯಸಾಂಬರನೂ ||
ಭೋಗಿಶಯನನು ಕರಸಿ ಮತ್ತನು |
ರಾಗದಲಿ ಪೇಳಿದನು ರಿಪುಮೃಗ |
ವಾಗುರರೆದಿನವೊಂದರಲಿ ಹಯಮೇಧವನು ಮಾಳ್ಪೇ ||೮೬||
ವಾರ್ಧಕ
ಶೈನೇಯ ಕೇಳೀಗ ಯಜ್ಞವಾಟವು ಯೋಗ್ಯ |
ಮೌನಿಗಳು ನಿಲುವುದಕ್ಕುಚಿತ ವೇಶ್ಮವು ಬಂದ |
ಕ್ಷೋಣಿಪರ ಸಂವಾಸ ಠೀವಿಗಳು ಮತ್ತವರ ರಾಣಿಯರ್ಗರ್ಹ ಭವನಾ ||
ದೀನಾಂಧಬಧಿರರಿಗೆ ಮೊದಲಾಗಿ ಸತ್ಕಾರ |
ದಾನಮಾನವು ವಾಸ ವೇಷ ಭೂಷಣ ಯಾಗ |
ಪೂರ್ಣ ಸಾಧನವ ನೀ ಸಾನುರಾಗದಿ ರಚಿಸಿ ಬೇಗದೊಳಗರುಹೆಂದನು ||೮೭||
ರಾಗ ಪಂತುವರಾಳಿ ಏಕತಾಳ
ಹರಿಯ ನುಡಿಯ ಕೇಳಿ | ಹರುಷದಿ ಸಾತ್ಯಕಿ ||
ಭರದಿಂದಲೆಜ್ಞದ | ವರವಾಟಿ ರಚಿಸೀ ||೮೮||
ಸರ್ವ ಸನ್ನಾಹವ | ನರ್ಹ ಸಾಧನವ ||
ತ್ವರ್ಯದೊಳ್ ರಚಿಸುತ್ತ | ನೂರ್ವೀಶಾಜ್ಞೆಯಲೀ ||೮೯||
ರತಿಪತಿಪಿತಗೊಂದಿ | ಸುತ ಸಾತ್ಯಕಿಯು ಪೇಳ್ದ ||
ಕ್ರತುಗೃಹಾದಿಗಳೆಲ್ಲಾ | ಯಿತು ತವದಯದೀ ||೯೦||
ಭಾಮಿನಿ
ಕೋಕದಭಿಧಾಯುಧನು ನರಭವ |
ಶೋಕತೂಲಕೆ ಆಶುಶುಕ್ಷಣಿ |
ಲೋಕಸೃಷ್ಟಕ ಹರಿಯು ತಾ ಶಾಮೈಕ ಕರ್ಣದಲೀ ||
ಚಾಕಚಕ್ಯದೊಳೈದು ಬಣ್ಣದಿ |
ನಾಕಿನಿಕರಕೆ ಚೋದ್ಯ ತೋರುವ |
ನೇಕಗುಣಸಂಪನ್ನ ವಾಜಿಯ ಕರದಿ ನಿರ್ಮಿಸುತಾ ||೯೧||
ರಾಗ ಕೇತಾರಗೌಳ ಅಷ್ಟತಾಳ
ಕಂಜನಾಭನು ಮುದದಿಂದ ಶೋಭಿಪ ತಾರ | ಪುಂಜತೇಜದ ಮುತ್ತಿನಾ ||
ಮಂಜುಳ ಹಾರವ ಕಂಠದಿ ತಾನಿಟ್ಟು | ರಂಜಿಸಿ ಮಖವಾಜಿಯಾ ||೯೨||
ಪೊನ್ನ ಪೈಝಣಿ ಪಾಡಗಗಳನಿಡುತಬ್ಧಿ | ಕನ್ನೆಯ ಪ್ರಿಯನು ತಾನೂ ||
ರನ್ನದ ಪದಕವ ಫಾಲದೊಳಿಡುತಾಗ | ಲುನ್ನತ ವೈಭವದೀ ||೯೩||
ಮೋದದಿ ಹೊದಿಸುತ ದಿವ್ಯಮಾಗಿಹ ಝರಿ | ಛಾದರ ಸುಮಗಂಧವಾ ||
ವಾದ್ಯ ದುಂದುಭಿಘೋಷ ಶುಭಮಂತ್ರಗಳ ಸಹಿ | ತಾದಿಪುರುಷನಿಡುತಾ ||೯೪||
ಫಾಲದಿ ಬಂಧಿಸಿ ಹೇಮಪಟ್ಟದ ಲೇಖ | ಲೀಲೆಯೊಳ್ ವಾಚಿಸುತಾ ||
ಶೀಲಗುಣಾಢ್ಯ ಭೂಭುಜರು ಸಂಭ್ರಮದೊಳ | ಗಾಲಿಸುತೆಲ್ಲವರೂ ||೯೫||
ಬಲ್ಲಿದ ವೀರರು ಕಟ್ಟಿ ವಾಜಿಯ ಧುರ | ದಲ್ಲಿ ಕಾದುವದುಚಿತಾ ||
ಸಲ್ಲದ ರಾಜರು ಕಪ್ಪಕಾಣಿಕೆ ಕೊಡು | ತೆಲ್ಲರು ನಮಿಸುವದೂ ||೯೬||
ಇಂತು ವಾಲೆಯ ವಾಚಿಸುತ ಹರಿ ಸರ್ವರ | ಸಂತೋಷದಲಿ ನೋಡಲೂ ||
ಪಂಥದಿಂದಲಿ ಮುದವಾಂತು ಭೀಮನು ಪೇಳ್ದ | ಕಂತುಪಿತಗೆ ವಂದಿಸೀ ||೯೭||
ರಾಗ ದೇಶಿ ಅಷ್ಟತಾಳ
ಸೃಷ್ಟಿಪಾಲಕ ಕೇಳು ನಾ ತರುವೆ ವಿ |
ಶಿಷ್ಟ ಭೂಪರ ಗೆಲಿದು ಕರಹಯ | ವೃಷ್ಟಿಗಳ ಸಹ ಯಾಮದೀ ||೯೮||
ಪಾರ್ಥ ವಂದಿಸುತೆಂದ ತಾ ಧರಣಿಯ |
ಪಾರ್ಥಿವರ ಗೆಲಿದೀಗ ಕಪ್ಪವ | ನರ್ಥಿಯಲಿ ತಂದೀಯುವೇ ||೯೯||
ಫುಲ್ಲಬಾಣನು ಪಿತಗೆ ವಂದಿಸಿ ಪೇಳ್ದ |
ನೆಲ್ಲ ರಿಪುಗಳ ಗೆಲಿದು ಧುರದಲಿ | ಮಲ್ಲರಿಪುಸುತನೆನಿಸುವೇ ||೧೦೦||
ಒಡೆಯಗೊಂದಿಸುತಾಡಿದ ಸಾತ್ಯಕಿ |
ಪೊಡವಿಯಲಿ ಕರ ಕೊಡದ ಮೂಢರ | ಬಡಿದು ಯಮಪುರ ತೋರ್ಪೆನೂ ||೧೦೧||
ರಾಗ ಭೈರವಿ ಝಂಪೆತಾಳ
ಭೀಮ ಸಾತ್ಯಕಿ ಪಾರ್ಥ | ಕಾಮರಾಡಿದ ಕೇಳಿ ||
ಶ್ರೀಮನೋಹರ ಹರಸಿ | ಪ್ರೇಮದಲಿ ಪೇಳ್ದಾ ||೧೦೨||
ಪೃತನಾಧಿಪತಿತನವ | ಶತಮನ್ಯುಸುತಗಿತ್ತು ||
ರತಿಪತಿಯು ರಕ್ಷಿಸಲಿ | ಕ್ರತುಹಯವನೆನುತಾ ||೧೦೩||
ಶೈನೇಯನನು ಕರದು | ಸೇನೆ ಬೆಂಬಲಕಾಗಿ ||
ಸಾನುರಾಗದಿ ಪೋಗು | ನೀನೆಂದು ಹರಿಯೂ ||೧೦೪||
ಕಾಮಪಿತ ನೇಮಿಸಿದ | ಭೀಮ ನೀ ಸರ್ವರನು ||
ಪ್ರೇಮದಲಿ ಸಲಹಿ ಕರ | ಯಾಮದಲಿ ತಹದೂ ||೧೦೫||
ಭಾಮಿನಿ
ಮುದದಿ ಪೇಳಿದ ನುಡಿಗೆ ಶ್ರೀಹರಿ |
ಪದಕೆ ವಂದಿಸಿ ಭೀಮಪಾರ್ಥರು |
ಕದನಕೋವಿದ ಸಾತ್ಯಕಿ ಪ್ರದ್ಯುಮ್ನರೊಡಗೂಡೀ ||
ಪದುಮನಾಭನ ರಥದೊಳೇರುತ |
ಯದುಬಲವ ಸಹಿತವರು ಕುದುರೆಯ |
ನದುಭುತದ ವೇಗದೊಳಗವರನು ಕರಸಿ ಪೊರಮಟ್ಟೂ ||೧೦೬||
ರಾಗ ಭೈರವಿ ತ್ರಿವುಡೆತಾಳ
ಬಂದನಾಗ | ವಾಯುಜ | ಬಂದನಾಗ ||
ಬಂದ ರಿಪುಕುಲಭೀಮ ಯದುಬಲ | ವೃಂದವೆರಸುತ ಕಾಮಪಾರ್ಥರು |
ಚಂದದಲಿ ರಥದಲ್ಲಿ ಕೂಡುತ | ಮಂದಿ ಮಾರ್ಬಲ ಹಯ ಮತಂಗಜ |
ಸ್ಯಂದನದಿ ಶುಭಭೇರಿ ವಾದ್ಯದ | ಧಿಂಧಿಮ್ಮೆಂಬುವ ಶಬ್ದದಲಿ ಸುರ |
ದುಂದುಭಿಯ ರವದಿಂದ ಮೆರೆಯುತ || ಬಂದನಾಗ ||೧೦೭||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಯೋಗಿವರಗರುಹಿದನು ಕೃಷ್ಣನ | ಭಾಗಿನೇಯಾತ್ಮಜನು ಮುದದಲಿ |
ಯಾಗದಶ್ವವು ಮುಂದಕೆಲ್ಲಿಗೆ | ಸಾಗಿತೆನುತಾ ||೧೦೮||
ಇಂದುಕುಲಸಂಜಾತ ಲಾಲಿಸು | ಮುಂದಕಾ ಹಯ ವಾಯುವೇಗದಿ |
ಬಂದುದಾ ಕ್ಷಣ ಮಗಧ ದೇಶಕೆ | ಚಂದದಿಂದಾ ||೧೦೯||
ಮುನಿಪ ಕೇಳಾ ಪೊಳಲಿಗರ ಸಾ | ರೆನುವದನು ಮತ್ತಾ ನೃಪಾಲನ |
ಜನನ ಪರಿಯೇನಿಹುದು ಭೀಮಗೆ | ಮಣಿದನೇನೈ ||೧೧೦||
ವಾರ್ಧಕ
ಧರೆಯಧಿಪ ಕೇಳ್ ಮಗಧದೊರೆ ಬೃಹದ್ರಥ ತನಗೆ |
ತರಳರಿಲ್ಲದೆ ಮನದಿ ತರಹರಿಸೆ ಮುನಿ ಕೌಶಿ |
ಕರು ಮಂತ್ರಪೂತಾಮ್ರ ಸರಸಫಲಕೊಡಲಿರ್ವರರಸಿಯರು ಸಮದಿ ಮೆಲಲೂ ||
ಸರಿ ಪೊಳ್ಗಳೆರಡು ಜನಿಸಿರಲದನು ಬಿಸುಡಲಾ |
ಜರೆಯೆಂಬ ರಾಕ್ಷಸಿಯು ಭರದಿ ಸಂಧಿಸೆ ಜೀವ |
ಧರಿಸಿ ಬೊಬ್ಬಿರಿಯಲದನರಸ ಕೇಳುತ ಬರಲು ಕರುಣಿಸುತಲವಗಿತ್ತಳೂ ||೧೧೧||
ಭಾಮಿನಿ
ಬಂಧುಸಂದೋಹವನು ಕೂಡುತ |
ನಂದದಲಿ ನಂದನನಿಗೆ ಜರಾ |
ಸಂಧನೆಂಬನ್ವರ್ಥ ನಾಮವನಿಟ್ಟು ವರ್ಧಿಸಲೂ ||
ಇಂದುಮೌಳಿಯ ದಯದಿ ತಾನಿ |
ರ್ದ್ವಂದ್ವ ಭಟನೆನಿಸುತಲಿ ನೃಪಪಶು |
ಬಂಧಲೋಲುಪನಾಗಿರಲು ಮಖಹಯವು ಬರೆ ಪುರಕೇ ||೧೧೨||
ಕಂದ
ಜಂಭಾರಿಯ ಕಡು ವೈರಿಯು |
ಕುಂಭಿನಿಯೊಳು ವಿಪ್ರಚಿತ್ತಿಯೆ ಜರಾಸಂಧಂ ||
ಜೃಂಭಿತ ಮಾಷನನಾಳದ |
ಗಂಭೀರದ ಮೂರ್ಭೇರಿ ಮೊಳೆಯೆ ಸಭೆಗೈದಂ ||೧೧೩||
ರಾಗ ಭೈರವಿ ಝಂಪೆತಾಳ
ಓಲಗಕೆ ಬರಲು ಭೂ | ಪಾಲ ಮಗಧೇಶನೆಡ ||
ತೋಳು ಕಂಪಿಸೆಮನದಿ | ತಾಳಿ ಯೋಚನೆಯಾ ||೧೧೪||
ಶರ್ವವರದಲಿ ದೃಪ್ತ | ನುರ್ವಿಪನು ಶಕುನವನು ||
ಗರ್ವದಲಿ ಲಕ್ಷಿಸದೆ | ಪರ್ವದಿನವೆನುತಾ ||೧೧೫||
ಪರ್ವತದ ಲಿಂಗವನು | ತ್ವರ್ಯದಲಿ ಪೂಜಿಪಡೆ ||
ಸರ್ವಸಾಧನದಿ ಖಳ | ವರ್ಯಪೊರಮಡಲೂ ||೧೧೬||
ಭಾಮಿನಿ
ರುಂಡಮಾಲಿಯ ಪೂಜೆಸಾಧನ |
ಕೊಂಡು ವೈಭವದಿಂದ ಮಾರ್ಗದೊ |
ಳಂಡಜಾಸನವೈರಿ ಶಿವಪಾಷಂಡಿ ಬರಲಿತ್ತಾ ||
ಪುಂಡರೀಕಾಕ್ಷನಲಿ ವೈರವ |
ಗೊಂಡು ದುರುಳರ ಮೇಲೆ ಪಾದದ |
ಚಂಡ ಘಾತವೆ ಲೇಸೆನುವ ತೆರ ಹಾರಿತಾ ಹಯವೂ ||೧೧೭||
ರಾಗ ಶಂಕರಾಭರಣ ತ್ರಿವುಡೆತಾಳ
ಹಯದ ಪಾದದಹತಿಗೆ ಮಗಧೇ | ಶ್ವರನು ಪೂಜೆಯ ವಸ್ತುವಾ ||
ಭರದಿ ಕೆಡಹುತ ಭೂಮಿಗಾ ನೃಪ | ನೊರಗಿ ತಾಳ್ದನು ಕೋಪವಾ ||೧೧೮||
ಅರರಯೇನಾಶ್ಚರಿಯನೆನುತುರು | ರಭಸದಿಂ ತಾನೇಳುತಾ ||
ತಿರುಗಿ ನೋಡುತ ಕಂಡನಶ್ವವ | ಕೊಲುವೆನೆನುತಲಿ ಪಿಡಿಯುತಾ ||೧೧೯||
ಅಸಿಯ ತೆಗೆದಾ ಕ್ಷಣದಿ ತಿರುಹುತ | ಲಿರಲು ಫಾಲದಿ ಮಿನುಗುವಾ ||
ಶಶಿಕಲೆಯ ವೋಲಿರುವ ವೋಲೆಯ | ನೋಡುತಿಳುಹಿದ ಖಡ್ಗವಾ ||೧೨೦||
ಸೈಂಧವದ ಶಿರದಿಂದ ಪಟ್ಟವ | ತೆಗೆದು ಕೈಯೊಳು ಪಿಡಿದನೂ ||
ಬಾಂಧವಾಗ್ರಣಿ ಮಂತ್ರಿಶೇಖರ | ದುರ್ಮದಾಂಧನ ಕರೆದನೂ ||೧೨೧||
ಕಂದ
ಪೊಡವಿಪನಪ್ಪಣೆ ಕೇಳುತ |
ತಡಮಾಡದೆ ಭರದೊಳಗತಿ ವಿಸ್ಮಯದಿಂದಂ ||
ಕೊಡನಿಭದೊಡಲನು ಕೈಯಲಿ |
ಪಿಡಿಯುತ ಪೊಡವಿಯೊಳಡಿಯಿಡುತೈತಂದೆಂದಂ ||೧೨೨||
ರಾಗ ಮಾರವಿ ಏಕತಾಳ
ಭೂಪನೆ ತನ್ನನಕಾಲದಿ ಭರದೊಳ | ಗೀ ಪರಿ ಕರೆಸುವರೆ ||
ತಾಪವು ಮನದೊಳಗೇನೊದಗಿಹುದದ | ನೀ ಪೇಳೆನ್ನ ದೊರೆ ||೧೨೩||
ಸೊಕ್ಕಿದ ಭೂಭುಜರೆಮ್ಮಯ ನಗರಕೆ | ಘಕ್ಕನೆ ಬಂದಿಹರೆ ||
ರಕ್ಕಸ ಸುರ ನರರೊಮ್ಮೆಗೆ ಬರೆ ನಾ | ತಿಕ್ಕುವೆ ಧುರದಿ ಖರೆ ||೧೨೪||
ಮಂತ್ರಿಯ ವೆಗ್ಗಳ ಕೇಳುತ ಮಾಗಧ | ಸಂತೋಷದಿ ನುಡಿದಾ ||
ಬಂತೊಂದಧ್ವರದಶ್ವವು ಪುರಕು | ನ್ನಂತ ಫಣಿಯ ಪಟದಾ ||೧೨೫||
ಪಟ್ಟವ ತೆಗೆದಿಟ್ಟಿರುವೆನು ನೋಡೆನೆ | ದಿಟ್ಟ ಸಚಿವತಾನೂ ||
ಕಟ್ಟುತ ವಸನವ ಕಟಿಯೊಳು ಪತ್ರವ | ಥಟ್ಟನೆ ವೋದಿದನೂ ||೧೩೬||
ರಾಗ ಕೇತಾರಗೌಳ ಅಷ್ಟತಾಳ
ಮಧುವಂಶರತ್ನನಾನಕದುಂದುಭಿಯ ಸುತ | ನದುಭುತ ಗುಣನಿಧಿಯೂ ||
ಪದುಮಾಕ್ಷ ಶ್ರೀಕೃಷ್ಣ ಖಳಕುಲರಾಯರ | ಮದವಿಳುಹುವೆನೆನುತಾ ||೧೨೭||
ಮೋದದಿ ದ್ವಾರಕಿಯೊಳಗೊಂದೆ ದಿನ ವಾಜಿ | ಮೇಧವ ಮಾಡುವಡೆ ||
ಮೇದಿನಿನಾಥರಿಂ ಕರವ ತರ್ವರೆ ಹಯ | ವೀದಿನ ಬಿಟ್ಟಿರುವೆ ||೧೨೮||
ಬಲವಂತ ಭೂಪರು ವಾಜಿಯ ಬಿಗಿಯುತ್ತ | ಕಲಹಕ್ಕೆ ನಿಲ್ಲುವುದೂ ||
ಕೊಳುಗುಳಭೀರುಗಳ್ ಭೀಮಗೊಂದಿಸಿ ಕಪ್ಪ | ಸಲಿಸುತ್ತೊಡನೆ ಬಹದೂ ||೧೨೯||
ಭಾಮಿನಿ
ಪತ್ರದಲಿ ಬರದಿಹುದ ಕೇಳುತ |
ಕೃತ್ರಿಮದ ರಣರಸಿಕ ಮಾಗಧ |
ವೃತ್ರದೈತ್ಯನ ತೆರದಿ ಗರ್ಜಿಸಿ ನೇತ್ರಗಳ ತಿರುಹೀ ||
ಶತ್ರುಗಳು ಯಾದವರು ಸೊಕ್ಕಿ ಧ |
ರಿತ್ರಿಯಲಿ ಪೌರುಷವ ತೋರ್ಪರು |
ಕ್ಷತ್ರಧರ್ಮವನರಿಯರ ವರೆನುತೆಂದ ಮಂತ್ರಿಯೊಳೂ ||೧೩೦||
ರಾಗ ತೋಡಿ ರೂಪಕತಾಳ
ಯಾಗದಶ್ವವನ್ನು ಬಿಗಿಸಿ | ಪೋಗಿ ಪುರಕೆ ಸೇನೆಸಹಿತ ||
ಬೇಗದಿಂದ ಯುದ್ಧಕ್ಕನು | ವಾಗಿ ಬಾರಯ್ಯಾ ||೧೩೧||
ಅರಸನೆಂದ ನುಡಿಗೆ ಮಂತ್ರಿ | ವರನು ಪೇಳ್ದ ಕರಿಯಲೆನ್ನ ||
ಧುರವು ವೊದಗಿತೆಂದು ಸೇನೆ | ವೆರಸಿ ತಂದಿಹೇ ||೧೩೨||
ಭಳಿರೆ ಸಚಿವನೆನುತ ನುಡಿದು | ಚೆಲುವ ಚಾಪ ಕವಚ ಧರಿಸಿ ||
ಕೊಳುಗುಳಕ್ಕೆ ಸೈನ್ಯಸಹಿತ | ಚಳಕದಿ ಬರಲೂ ||೧೩೩||
ವೈರಿನಿಕರ ಕಂಡು ಮಂತ್ರಿ | ವೀರ ಭಟರ ಗೆಲುವೆನೆನಲು ||
ಭೂರಿ ತೋಷದಿಂದ ಕಳುಹಲ್ | ಶೌರ್ಯದಿ ಬಂದಾ ||೧೩೪||
ರಾಗ ಶಂಕರಾಭರಣ, ಮಟ್ಟೆತಾಳ
ಬಂದ ರಿಪುವನು ಕಂಡು ಸಾತ್ಯಕಿ | ಇಂದ್ರಜಾತಗೆ ಮಣಿಯುತೆಂದನು ||
ಮುಂದೆ ಬಂದಿಹ ರಿಪುವ ಸಮರದಿ | ಇಂದು ಭಂಗಿಪೆನೆನಲು ಕಳುಹಲೂ ||೧೩೫||
ಕಂಡು ಮಂತ್ರಿಯು ನುಡಿದನಾ ಕ್ಷಣ | ಖಂಡಿಪೆ ನಿನ್ನ ನೋಡು ಸಾಹಸ ||
ಪುಂಡ ಯಾದವ ದುರ್ಮದಾಂಧನೆ | ಚಂಡವಿಕ್ರಮ ನೋಡು ಧುರದಲೀ ||೧೩೬||
ಹೆಸರಿಗೊಪ್ಪಿಹ ಪಾಪಿ ನಿನ್ನಯ | ಅಸುವ ಹೀರುವೆನೆನುತ ಸಾತ್ಯಕಿ ||
ಮಸೆದ ಖಡ್ಗವಗೊಂಡು ಮಂತ್ರಿಯ | ಎಸೆವ ಜಠರವ ಬಗಿದು ಬಿಸುಡಲೂ ||೧೩೭||
ಭಾಮಿನಿ
ಕಂಡು ಮಂತ್ರಿಯ ಭವಣೆಯನು ರಣ |
ಮಂಡಲದಿ ಮಾಗಧನು ಕಲ್ಪದ |
ರುಂಡಮಾಲಿಯ ತೆರದಿ ಬೊಬ್ಬಿರಿದೆಂದ ಸಾತ್ಯಕಿಗೇ ||
ಚಂಡವೇಗದ ಖಡ್ಗವೆನ್ನೊಳು |
ಗಂಡುಗಲಿ ನೀ ನೋಡೆನುತಲು |
ದ್ದಂಡ ಶರಗಳ ಬಿಡುತಿರಲು ತರಿದೆಂದ ಶಿನಿಸುತನೂ ||೧೩೮||
Leave A Comment