ಭಾಮಿನಿ
ವಂಚಿಸುತ ಮಗುವನ್ನು ನಭದಲಿ |
ಕೊಂಚ ನಿಲ್ಲುತ ಹೂಂಕರಿಸೆ ಪ್ರ |
ಪಂಚ ನಡುಗಲು ಪಾರ್ಥ ಶರ ಬಿಡೆ ವ್ಯರ್ಥವಾಗಿರಲೂ ||
ಉಂಛವೃತ್ತಿಯ ವಿಪ್ರ ಶಿಶು ಗೃಹ |
ಸಂಚರಿಪ ನಾರಿಯರ ಕೇಳಲು |
ವಂಚಿಸಿದರು ಹಾ ಶಿಶುವನೆನುತಿರೆ ದ್ವಿಜನು ನರಗೆಂದಾ ||೧೮೮||
ರಾಗ ಶಂಕರಾಭರಣ ರೂಪಕತಾಳ
ಹರಿಯ ಭಾವ ನೀನೆನುತ್ತ | ಕರೆಯಲೆನಗೆ ಫಲವಿದೇನೊ ||
ನರನೆ ನಾರಿಯಂತೆ ಕುಳಿತೆ | ತರಳನೊಯ್ಯಲೂ ||೧೮೯||
ಖಾಂಡವಾಖ್ಯ ವನವ ಸೂರೆ | ಗೊಂಡು ದಹಿಸಲಗ್ನಿ ಸುರರ ||
ಮಂಡಲಾಧಿಪರನು ಗೆಲ್ದ | ಪುಂಡ ನೀನೆಲಾ ||೧೯೦||
ಇನಿತು ಜರೆಯಲಾಗ ಪಾರ್ಥ | ಮನದಿ ಚಿಂತಿಸುತ್ತ ಪೇಳ್ದ ||
ಕ್ಷಣದಿ ತರುವೆನೀಗ ನಿಮ್ಮ | ತನಯನೆನುತಲೀ ||೧೯೧||
ಕೌಶಿಕಾಖ್ಯ ವಿದ್ಯದಿಂದ | ತಾಸಿನೊಳಗೀರೇಳು ಲೋಕ ||
ವೀಸು ಬಿಡದೆ ಹುಡುಕಿ ತಂದು | ಭಾಷೆ ಸಲಿಸುವೇ ||೧೯೨||
ವಾರ್ಧಕ
ಕ್ಷೋಣಿಪತಿ ಕೇಳಾಗ ಶ್ವೇತವಾಹನ ಮನದಿ |
ಧ್ಯಾನಿಸುತ ಶುಚಿಯೊಳಗೆ ಕೌಶಿಕರು ದಶರಥನ |
ಸೂನುಗಳಿಗುಪದೇಶವಿತ್ತ ಮಂತ್ರವ ಜಪಿಸಿ ನಭಕಡರಿ ಪೋಗುತಿರಲೂ ||
ಶಾಣೆತನದೀರೇಳು ಭುವನಗಳನೆಡೆಬಿಡದೆ |
ಕಾಣಲಾ ಶಿಶು ತೋರದಾ ನರಾಧಿಪನಧಿಕ |
ದೀನಭಾವದಿ ವಿಪ್ರಗೃಹಕೈದಿ ಚಿಂತಿಸುತ ಪೇಳಲೀ ಸ್ಥಿತಿಯನವನೂ ||೧೯೩||
ಕಂದ
ಫಲುಗುಣ ನುಡಿಯಲ್ಕಾ ದ್ವಿಜ |
ವಿಲಯದ ಧೂರ್ಜಟಿಯಂತಾರ್ಭಟಿಸುತಲಾಗಳ್ ||
ನಲಿಯುತ ರೋಷದಿ ತಾವೆ |
ಗ್ಗಳಿಕೆಯ ನಿಂದಿಸುತಾ ನರವೀರನ ಜರೆಯಲ್ ||೧೯೪||
ಭಾಮಿನಿ
ಎಲವೊ ವಿಪ್ರರೆ ಜರೆದು ಬಹುಪರಿ |
ಫಲವು ನಿಮಗೇನೀಗ ಬನ್ನಿರಿ |
ಜಲಜನೇತ್ರನ ಬಳಿಗೆ ಪೋಗುವಸಲಹದಿರಲವನೂ ||
ಚಲುವ ದೇಹವನಿತ್ತು ಭಾಷೆಯ |
ಸಲಿಸುವೆನು ದಿಟವೆಂದು ಪೇಳುತ |
ಫಲುಗುಣನು ದ್ವಿಜಸಹಿತ ಹರಿಯೆಡೆ ಬರೆ ಮುಖಜನೆಂದಾ ||೧೯೫||
ರಾಗ ಸೌರಾಷ್ಟ್ರ ಆದಿತಾಳ
ಹರಿಯ ಬಳಿಗೆ ಬಂದಂತಾಯ್ತು | ತರಳನನ್ನು ತೋರಿಸಯ್ಯ ||
ಬರಿದೆ ಕಾಲಹರಣವ್ಯಾಕೆ | ಶರಗೊಡ್ಡಿ ಕೇಳ್ವೇ ||೧೯೬||
ಮಾತು ಕೊಟ್ಟು ಸಲಿಸದಿರುವ | ಪಾತಕಿ ಗಾಂಡೀವವೇಕೆ ||
ಭೂತಳದೊಳೆಲ್ಲ ನಿನ್ನ | ಖ್ಯಾತಿ ಮೆರೆಸುವೇ ||೧೯೭||
ಮೋಸಗಾರನೆಂದು ತಿಳಿಯ | ದಾಶೆಯಿಂದ ಬಂದುದಕ್ಕೆ ||
ಭಾಷೆ ಕೊಟ್ಟು ತಪ್ಪಿ ನಡದೆ | ಲೇಸು ಪೋಪೆನೈ ||೧೯೮||
ಭಾಮಿನಿ
ಸಿಟ್ಟಿನಲಿ ನಡನಡುಗಿ ಪೋಗುವ |
ದಿಟ್ಟ ವಿಪ್ರನ ತಡೆದು ಹರಿ ತಾ |
ನೆಷ್ಟು ಪೇಳಲು ಕೇಳದಿರೆ ಹರಿ ಯಾದವರ ಸಹಿತಾ ||
ಜಿಷ್ಣು ವಿವನೇನೈವನೆನುತ ಕಿ |
ಬ್ಬೆಟ್ಟಿನಲಿ ನಗ ಪೊತ್ತವನು ತ |
ನ್ನಷ್ಟ ಕಿರುತಿರಲಾಗಲೀ ಪರಿ ಪಾರ್ಥ ಶೋಕಿಸಿದಾ ||೧೯೯||
ರಾಗ ನೀಲಾಂಬರಿ, ಆದಿತಾಳ
ಇಂದ್ರಜಾತನಂದು ವಿಪ್ರ | ನೆಂದ ನುಡಿಗೆ ಮನದೀ ||
ನೊಂದು ಪೇಳ್ದನಿನಿತು ಜಗದಿ | ಕುಂದು ಬಂದಿತಕಟಾ ||೨೦೦||
ಸರಳಪಂಡಿತನ್ನ ಸೇರಿ | ವರ ಮಹಾಸ್ತ್ರ ಕಲಿತೇ ||
ಪರಮವಿದ್ಯವಿಂತು ವ್ಯರ್ಥ | ವರಿಯ ಕಾಣೆನಯ್ಯೋ ||೨೦೧||
ಕುಂತಿಯುದರದಲ್ಲಿ ಜನಿಸು | ತಿಂಥ ವಿಧಿಯು ಬಂತೇ ||
ಪಂಥದಿಂದ ಗೆಲಲು ವೈದ | ಹೊಂತಕಾರಿ ಯಾರೋ ||೨೦೨||
ಭಾವ ಹರಿಯ ಮರೆತುದಕ್ಕೆ | ಈ ವಿಧಿಯಾತು ದಿಟವೂ ||
ಕಾವರ್ಯಾರ ಬೇರೆ ಕಾಣೆ | ಹೇ ವಾರ್ಧಿಜೆಪ್ರಿಯನೇ ||೨೦೩||
ತಂಗಿಯನ್ನು ಕೊಟ್ಟು ತನ್ನ | ಭಂಗ ನೋಳ್ಪುದೇನೋ ||
ರಂಗ ಕೃಷ್ಣ ದ್ವಿಜಗೆ ನುಡಿದ | ತುಂಗಭಾಷೆ ಸಲಿಸೋ ||೨೦೪||
ಗಂಡುಸಾಗಿ ನುಡಿದ ಭಾಷೆ | ಖಂಡಿಸೀಗ ಹೋಯ್ತೂ ||
ಚಂಡಶೌರ್ಯ ಪೋಗಲಗ್ನಿ | ಕುಂಡ ಯೋಗ್ಯವಹುದೂ ||೨೦೫||
ಭಾಮಿನಿ
ಎಂದು ಮರುಗುತ ಪಾರ್ಥ ವಿಶಿಖದೊಳ್ |
ಕುಂದದಗ್ನಿಯ ಕುಂಡಗೈವುತ |
ಮಂದರವ ಪೊತ್ತವನೆ ಸಲಹೆಂದಾಗ ಭಕ್ತಿಯಲೀ ||
ಒಂದೆರಡು ಬಾರಿ ಪ್ರದಕ್ಷಿಣೆ |
ಬಂದು ಬೀಳುವೆನೆನುವ ಸಮಯದಿ |
ಇಂದಿರೇಶನು ಸುತನ ಸಹಿತಲಿ ತಡೆದು ಬಿಗಿದಪ್ಪೀ ||೨೦೬||
ರಾಗ ಭೈರವಿ ಅಷ್ಟತಾಳ
ಏನಯ್ಯ ಪಾರ್ಥ ಏನಯ್ಯಾ || ಪಲ್ಲ ||
ಏನಯ್ಯ ಪಾರ್ಥ ನೀನೀಗ ವಹ್ನಿಯ ಕುಂಡ |
ಏನು ಕಾರಣ ಗೈದೆ ಮೂರ್ಲೋಕಚಂಡಾ || ಏನಯ್ಯಾ || || ಅನು ಪಲ್ಲವಿ ||
ದ್ವಿಜನಸಂತತಿಯುಳಿಸಲು ಪೋದ ವೀರನು |
ಭುಜಪರಾಕ್ರಮ ತೋರ್ದುದೇನು ವಿಖ್ಯಾತನೂ ||
ನಿಜವಾರ್ತೆ ಪೇಳದೆ ಮಾಡುತಗ್ನಿಯ ಕುಂಡ |
ಭಜಿಸುವೆ ಬಲು ವೀರ ಸರಿಯೇನುದ್ದಂಡಾ ||೨೦೭||
ಹರಿಯ ಮಾತಿಗೆ ಪಾರ್ಥ ಲಜ್ಜೆಯೊಳರುಹಿದ |
ನರಿತವರ್ ಯಾರ್ ನಿನ್ನ ಮಹಿಮೆಯ ಗೋವಿಂದಾ ||
ಬರಿದೆ ಯತ್ನಗಳೆಲ್ಲ ನಿನ್ನ ದಯದಿ ವೀರ |
ಉರಿಯೊಳು ಬಿದ್ದೀಗ ಭಾಷೆ ತೀರ್ಪುದೆ ವರಾ ||೨೦೮||
ಲೇಸಾಯ್ತು ಭಾವಯ್ಯ ಸಾಕು ಸಾಹಸವಯ್ಯ |
ಆಶಿಸುತೊದೆ ನೀ ತಂಗಿಯನಯ್ಯಾ ||
ಈ ಸೂಕ್ಷ್ಮಕಾರ್ಯಕ್ಕೆ ದೇಹ ದಹಿಸೆ ಬಂಧು |
ಪಾಶ ಬಿಡದು ದಿಟ ತನಗಿಂದು ಕುಂದೂ ||೨೦೯||
ಭಾಮಿನಿ
ಮರುಳೆಲಾ ಯೆಲ ಪಾರ್ಥ ಸುಮ್ಮನೆ |
ಬರಿದೆ ಶೋಕಿಸಲೇಕೆ ನೀ ಬಿಡು |
ಹರ ವಿರಿಂಚಾದಿಗಳು ಬಲ್ಲರೆ ತನ್ನ ಲೀಲೆಗಳಾ ||
ಭರದಿ ಪೊರಡೀಗೆನುತ ರಥವನು |
ತರಿಸಿ ವಿಪ್ರಾರ್ಜುನರ ಸಹಿತಲಿ |
ಹರಿಯು ತಾನೇರುತ್ತ ಸೌತ್ಯವ ನರನೆ ಮಾಡೆನಲೂ ||೨೧೦||
ವಾರ್ಧಕ
ಗರುಡವಾಹನ ನುಡಿಗೆ ಫಲುಗುಣನು ವಾಘೆಯಂ |
ಭರದಿ ಕೈಗೊಳ್ಳೆ ರಥ ಉತ್ತರಕೆ ಹಾರಿಸೆನೆ |
ಹರಿಸುತನು ನಡಿಸುತ್ತಲೇಳು ವಾರಿಧಿ ದಾಟಿ ಸ್ವರ್ಣಮಯ ಭೂಮಿಗಳನೂ ||
ಚರಿಸುತಲಿ ವಜ್ರಾದಿಲೇಪಿತದ ದೇಶಗಳು |
ಕರಿದಂಧಕಾರಗಳ ನರ ನೋಡಿ ಬೆರಗಾಗೆ |
ಹರಿ ಚಕ್ರದಿಂದಲದ ಕತ್ತರಿಸಿ ತೋರಿಸಿದ ವರಘನೋದಕದ ಸಿರಿಯಾ ||೨೧೧||
ಘನಜಲವನುತ್ತರಿಸಿ ಪರಮಪುರುಷನು ತನ್ನ |
ಮಣಿಮಯೋಜ್ವಲದನಂತಾಸನವ ಕಂಡು ಸ್ಯಂ |
ದನದಿಂದಲಿಳಿಯುತ್ತ ವಿಪ್ರ-ಪಾರ್ಥರ ನಿಲಿಸಿ ನಿಜಭವನವಂ ಪೋಗುತಾ ||
ವನಜನಾಭನು ಮೂಲರೂಪದಿಂದೈಕ್ಯವ |
ನ್ನನುಕರಿಸಿ ದಿನನಾಥಕೋಟಿ ದೀಧಿತಿಯಿಂದ |
ಲನುಪಮದ ವೈಭವವನೀರ್ವರಿಗೆ ತೋರಿಸಲ್ ಬೆರಗಾದರವರು ನೋಡೀ ||೨೧೨||
ಭಾಮಿನಿ
ದಕ್ಷ ಪಾರ್ಥನು ಭಕ್ತಿಯಲಿ ತಾ |
ಪಕ್ಷಿವಾಹನಗೆಂದ ತನ್ನಯ |
ಅಕ್ಷಯಪರಾಧವನು ಕ್ಷಮಿಸೆನ್ನುತ್ತ ಬೀಳ್ಕೊಂಡೂ ||
ಕುಕ್ಷಿಯಲಿ ಬೊಮ್ಮಾಂಡವನು ಮಾ |
ವಕ್ಷ ಧರಿಸುತ ಪೊರೆವ ದೊರೆ ತ |
ನ್ನಕ್ಷಿ ಗೋಚರನಾದೆಯೆನುತಿರೆ ಹರಿಯು ನಗುತಾಗಾ ||೧೧೩||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅದುಭುತದ ಮೋಹವನು ಬಿಡುತಲಿ | ಯದುಕುಲೇಶನ ನುತಿಸೆ ಹರಿ ಪಾ ||
ರ್ಷದರ ಗಡಣದ ನಾಲ್ಕು ಶಿಶುಗಳ | ಮುದದಿ ತಂದು ||೧೧೪||
ಜಡಜನೇತ್ರನು ನಾಲ್ಕು ತರಳರೊಳ್ | ಕಡೆಯ ಸುತತನ್ನೊಂದು ಕರದಲಿ ||
ಬುಡದ ಮೂವರ ಮೂರು ಕರದೊಳು | ಪಿಡಿದು ತಂದೂ ||೧೧೫||
ಶೇಷಶಯನನು ಕೊಡುತ ಪಾರ್ಥಗೆ | ಭಾಷೆ ಪೂರೈಸೆನುತ ಪೇಳಲು ||
ವಾಸವಾತ್ಮಜನಿತ್ತು ನಾಲ್ವರ | ಭೂಸುರಂಗೇ ||೧೧೬||
ಕೊಟ್ಟ ಭಾಷೆಯು ತೀರಿತೆಂದನು | ವಷ್ಟರಲಿ ಮುಖಜೇಂದ್ರ ತರಳರ ||
ತೊಟ್ಟು ಮುದ್ದಿಡುತೆಂದ ನೀ ಜಗ | ಜಟ್ಟಿಯೆನುತಾ ||೧೧೭||
ಒಂದಕಿದು ನಾಲ್ಕಾಯ್ತು ಶಕ್ರನ | ಕಂದ ಸರಿ ನಿನಗಾರು ದೀನರ ||
ಬಂಧು ಖರೆ ನೀನಾಪೆ ರಾಜರ | ವೃಂದಕಧಿಪಾ ||೧೧೮||
ಗೋತ್ರ ರಿಪುಸುತ ಕೇಳು ನಿನ್ನಯ | ಪೌತ್ರನಿಗೆ ಬರೆ ಬ್ರಹ್ಮಶರಭಯ ||
ಈ ತ್ರಿಧಾಮನು ತೆಗೆದು ಸಲಹಲಿ | ಕ್ಷಾತ್ರಕುಲವಾ ||೧೧೯||
ಭಾಮಿನಿ
ನರನು ವಿಸ್ಮಿತನಾಗಿ ಕೇಳಿದ |
ತರಳರಿವರಾರರುಹು ಭೂಮಿಗೆ |
ಬರಲು ಕಾರಣವೇನು ಪುಟ್ಟಿರಲಾರು ವೈದವರೂ ||
ಪರಮಪುರುಷನು ಪೇಳ್ದ ತನ್ನಯ |
ಚರಣಭಜಕ ದ್ವಾರಪರು ಕಿಂ |
ಕರರು ನಂದ-ಸುನಂದ-ಚಂದ್ರ-ಪ್ರಚಂಡನಾಮಕರೂ ||೧೨೦||
ಪಾಕಶಾಸನಿ ಕೇಳು ಮೂಜಗ |
ಕೇಕವೀರನು ಖರೆಯು ನಿನಗದೆ |
ಸಾಕೆನುವಹಂಕಾರ ತೆಗೆವುತ ತೋರ್ದೆ ಲೀಲೆಗಳಾ ||
ಆ ಕುಮಾರರನೊಯ್ಸೆ ಮಾಯದಿ |
ನಾ ಕಳುಹಿದೆನು ತರಲು ದೂತರ |
ವ್ಯಾಕುಲವ ನೀ ಬಿಡುತಲೆನ್ನನು ಭಜಿಸೆ ಸಲಹುವೆನೂ ||೧೨೧||
ಕಂದ
ಶ್ವೇತಾಶ್ವನಿಗೀಪರಿ ಪೇ |
ಳ್ದಾ ತತ್ಕ್ಷಣ ನರವಿಪ್ರಸುತ ಸಹಿತಂ ||
ವಾತಾಧಿಕ ವೇಗದೊಳೈ |
ತರುತ ದ್ವಾರಕಿಯೊಳ್ ವಿಪ್ರನ ಬೀಳ್ಕೊಡುತಂ ||೧೨೨||
ರಾಗ ಭೈರವಿ ಝಂಪೆತಾಳ
ದೇವರಾತನೆ ಕೇಳು | ಶ್ರೀವಾಸುದೇವ ನಿಜ |
ಭಾವ ಪಾರ್ಥಗೆ ಪ್ರೇಮ | ಭಾವ ತೋರಿಸುತಾ ||೧೨೩||
ಆವಾವ ಕಾಲದಲಿ | ನೋವು ಬಾರದ ತೆರದಿ ||
ಶ್ರೀವತ್ಸ ಸೇವಕನ | ಕಾಯ್ದ ತಾ ದಯದೀ ||೧೨೪||
ಲಾಲಿಸೈ ಮುಂಗಥೆಯ | ಮಾಲೋಲನಿತ್ತ ಮುನಿ ||
ಜಾಲವೆರಸೀರ್ಪ ಮಖ | ಶಾಲೆಗೈತಂದೂ ||೧೨೫||
ಶೇಷಶಯನನು ಮಖದೊ | ಳಾಸನವ ಬಿಟ್ಟಿರುವ ||
ದೋಷಹರ ಮಖಗೈದು | ವ್ಯಾಸನಾಜ್ಞೆಯಲೀ ||೧೩೬||
ಭಾಮಿನಿ
ಮೇದಿನೀಪತಿ ಕೇಳು ಭವಭಯ |
ಭೇದಕನು ಯಾದವರ ಸಂತತಿ |
ಗಾದಿಯಲ್ಲಿ ಯಯಾತಿನೃಪತಿಯು ಪೇಳ್ದ ವಾಕ್ಚಯವೂ ||
ಬಾಧಿಪುದು ತಮಗಲ್ಲವೆಂದೆನು |
ತೀ ಧರೆಯೊಳೊಂದಹದಿ ವಾಜಿಯ |
ಮೇಧ ಪೂರೈಸುವಡೆ ಸತಿಯರ ಸೇರ್ದು ಕುಳ್ಳಿರಲೂ ||೧೨೭||
ರಾಗ ಮುಖಾರಿ, ಝಂಪೆತಾಳ
ಸುಮುಹೂರ್ತವೆನುತಾಗ | ಸುಮನಸರು ಪೂಮಳೆಯ |
ವಿಮಲಭಾವದಿ ಕರೆಯಲಾಗಾ ||
ಅಮಲ ಋಷಿವರರೆಲ್ಲ | ಚಮಸಾದಿ ಭಾಜನವ |
ವಿಮಲ ಹಸ್ತದಿಗೊಂಡು ಬರಲೂ ||೧೨೮||
ನಾಗಶಯನನು ಪೇಳ್ದ | ಯಾಗಕಾರ್ಯವನೆಲ್ಲ |
ಸಾಗಿಪುದು ಯೋಗಿವರರೆನುತಾ ||
ವಾಗೀಶನಿಂತುಸುರೆ | ಯಾಗದಶ್ವವ ಯೂಪ |
ಕಾಗ ಬಂಧಿಸೆ ಮೌನಿವರರೂ ||೧೨೯||
ರಾಗ ಕೇತಾರಗೌಳ ಅಷ್ಟತಾಳ
ವ್ಯಾಸಮೌನೀಶ್ವರನಂದು ತೇಜಿಗೆ ವಾರಿ | ತೋಷದಿ ಪ್ರೋಕ್ಷಿಸುತಾ ||
ಈ ಸುಯಜ್ಞದಿ ನಿನ್ನ ಹೋಮಿಸುವೆವು ನಾಕ | ವಾಸವಪ್ಪುವದೆನಲೂ ||೧೩೦||
ಹಯವು ಕೃಷ್ಣನ ಮುಖ ನೋಡೆ ಪಾರ್ಥನು ತದಾ | ಶಯವ ತಿಳಿವುತೆಂದನೂ ||
ಯಯುವು ಶ್ರೀಹರಿಯೆ ವೈಕುಂಠವ ನಿನ್ನಯ | ದಯದಿಂದ ಬಯಸುವದೂ ||೧೩೨||
ವಿಜಯನೆಂದುದ ಕೇಳುತೆಂದ ಮಾಧವ ಸಾ | ಯುಜ್ಯವೀಯುವೆ ದಿಟವೂ ||
ಭಜಿಸಿದ ಭಕ್ತರ್ಗಭೀಷ್ಟ ಕೊಡುವದೆನ್ನ | ನಿಜಲೀಲೆ ನೋಡೆಂದನೂ ||೧೩೩||
ಮುನಿಕುಲೋತ್ತಮನಾಗ ಖಡ್ಗವ ತರಿಸಿ ಪ್ರ | ದ್ಯುಮ್ನನ ಕರೆದು ಪೇಳ್ದಾ ||
ಮನದಿ ಧೈರ್ಯವ ತಾಳುತ್ತೀವಾಜಿಯನು ಛೇದಿ | ಸೆನಲು ವಂದಿಸಿ ತಾತಗೇ ||೧೩೪||
ಭೇರಿ ಮಂಗಳವಾದ್ಯ ದುಂದುಭಿ ಘನಘೋಷ | ಭೋರಿಡುತಿರಲಾ ಕ್ಷಣಾ ||
ಭೂರಿ ಮಂತ್ರಗಳನ್ನು ಋತ್ವಿಜರ್ ಪಠಿಸಲ್ಕೆ | ಮಾರ ಭಕ್ತಿಯಲಿ ತಾನೂ ||೧೩೫||
ಕುಶ-ಹೇಮಭೂಷಿತ ದಿವ್ಯ ವಾಜಿಯ ಶಿರವ | ನಸಿಯಿಂದ ಛೇದಿಸಲೂ ||
ಶಶಿಯಂತೆ ಹಯಜೀವ ನಭದಿ ಪೋಪುದ ಕಂಡು | ವಸುಧೇಶರ್ ಬೆರಗಾದರೂ ||೧೩೬||
ಸ್ತುತ್ಯವಾದಶ್ವದ ತನುವ ಮಾರನು ಸೀಳಿ | ಕತ್ತರಿಸುತ ಪೂಳ್ಗಳಾ ||
ಶಕ್ತಿ ಋಷಿಯ ಮೊಮ್ಮನಿಗೆ ಕೊಡಲ ವರದ | ನೆತ್ತಿ ಹೋಮಿಸುತ ಮತ್ತೇ ||೧೩೭||
ಕರ್ಪುರಖಂಡದಂತಿರುವ ನಾಜಿಯ ವಪ | ವರ್ಪಿಸುತ್ತನಲನಿಂಗೇ ||
ಸರ್ಪಿ-ಪಾಲ್-ಮೊಸರು ಮುಂತಾದಲಂಕೃತಿಗಳ | ಸರ್ಪಶಾಯಿಯು ಹೋಮಿಸೇ ||೧೩೮||
ಸೋಮಾದಿ ದ್ರವ್ಯವ ಸೋಮಪಾಯಿಗಳಿಂಗೆ | ಸಾಮಗಾನವ ಪಠಿಸೀ ||
ಪ್ರೇಮದಿ ಕರೆದಾಗ ಕೊಡಲಗ್ನಿ-ಸುರರಿಂಗೆ | ನೇಮದೊಳ್ ಸಲಿಸಿರ್ದನೂ ||೧೩೯||
ಭಾಮಿನಿ
ವಿಧಿಯ ತಾತನು ಪೇಳ್ದ ಬಂದಿಹ |
ತ್ರಿದಶವರ ದಿಕ್ಪಾಲ ಮೊದಲರು |
ಮುದದಿ ತನ್ನಧ್ವರದಿ ತೃಪ್ತಿಯಗೊಳ್ಳಿರೀಗೆನುತಾ ||
ಪದುಮನಾಭನೆ ಭಜಕರಿಗೆ ನೀ |
ನದುಭುತದ ಸಂತೋಷಗೊಳಿಸಿರು |
ವದನು ಸಾಸಿರಫಣಗೆ ಪೇಳಲಸಾಧ್ಯವೆನಲವರೂ ||೧೪೦||
ವಾರ್ಧಕ
ಮತ್ತೆ ಮುರಹರ ಮುದದೊಳಗ್ರಪೂಜೆಯ ಭಾರ್ಗ |
ವೋತ್ತಮಗೆ ವಿರಚಿಸುತ ಪೃಥ್ವಿಪಾಲರಿಗೆಲ್ಲ |
ಉತ್ತಮದ ಸನ್ಮಾನವಿತ್ತವರನುಪಚರಿಸುತಾ ಯಾಚಕರ ತೃಪ್ತಿಸೀ ||
ಋತ್ವಿಜರ ಸತ್ಕರಿಸಿ ರತ್ನರಾಶಿಯ ಸಹಿತ |
ಸ್ತುತ್ಯಮಾಗಿಹ ಕೋಟಿ ಗೋದಕ್ಷಿಣೆಯನಿತ್ತು |
ಸತ್ಪುರುಷರಾಶಿಷವ ನಿತ್ಯತೃಪ್ತನು ಪಡೆದು ಕ್ರತ್ವಾತ್ಮ ಹರಿಗರ್ಪಿಸೇ ||೧೪೧||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸತ್ಯಲೋಕದ ಭಾವಿದೊರೆ ಮಾ | ರುತ್ತ ಸಂಭವ ಭೀಮನಾಕ್ಷಣ ||
ಕೌಸ್ತುಭವ ತಾ ಕೊಟ್ಟನುಡುಗರೆ | ಯರ್ತಿಯಿಂದಾ ||೧೪೨||
ಮುತ್ತಿನ್ಹಾರವ ಪಾರ್ಥ ಶ್ರೀಹರಿ | ಗಿತ್ತು ರುಕ್ಮಿಣಿ-ಭಾಮೆಯರಿಗತಿ ||
ಕೆತ್ತಿಕೆಯ ಶುಭ ವೈಜಯಂತಿಯ | ನೆತ್ತಿಕೊಡಲೂ ||೧೪೩||
ಕೃಷ್ಣನಾಜ್ಞೆಯೊಳಾಗ ಮದನನು | ಜಿಷ್ಣು-ಭೀಮರಿಗೆಂದನುಡುಗೊರೆ ||
ವೃಷ್ಣಿವರಗಾಯ್ತಧಿಕವೆನೆ ನರ | ಶ್ಲಕ್ಷ್ಣವೆನಲೂ ||೧೪೪||
ಅವಭೃಥಕೆ ಶ್ರೀರಮಣ ಸರ್ವರ | ತವಕದಲಿ ಕರಕೊಂಡು ಶರಧಿಯ ||
ರವಕೆ ಮಿಗಿಲೆನಿಸಿರುವ ವಾದ್ಯವಿ | ಭವದಿ ಬಂದಾ ||೧೪೫||
ಸಿಂಧುತಟಕೈತಂದು ಮಾಧವ | ಕುಂದರದನೆಯರಿಂದ ಕೂಡುತ ||
ಚಂದದೋಕುಳಿ-ಚಪ್ಪೆಯಾಟವ | ನಂದು ಗೈದೂ ||೧೪೬||
ಮಿಂದನಾ ಕ್ಷಣ ಕೃಷ್ಣ ಮುನಿಗಳ | ವೃಂದವೆರಸುತ ಭಾಮೆಯರ ಸೆರ ||
ಗಿಂದ ಜೊತೆಗೊಳಿಸುತ್ತ ಲಬ್ಧಿಯೊ | ಳಂದು ಮುದದೀ ||೧೪೭||
ಭಾಮಿನಿ
ಇಂತು ಕ್ರತ್ವವಭೃಥವ ಮಾಧವ |
ಸಂತಸದಿ ಗೈದಾಗ ಹೇಮದ |
ತಂತುವಿರಚಿತ ಪೀತವಸನವ ಧರಿಸಿ ಸಂಭ್ರಮದೀ ||
ಕುಂತಿಯಾತ್ಮಜರಿಂದ ಕೂಡುತ |
ದಂತಿಪೋತನ ತೆರದಿ ಮಾರ್ಗದೊ |
ಳಂತರದಿ ಮುದವಾಂತು ಮಂಗಳಮೂರ್ತಿ ಬರುತಿರಲೂ ||೧೪೮||
ಧಾತ್ರಿಯಧಿಪನೆ ಕೇಳು ವಿಭವದೊ |
ಳೀ ತ್ರಿಲೋಕದೊಳಾರು ಗೈಯದ |
ಕ್ಷಾತ್ರದರ್ಪವನಿಳುಹಲೊಂದಹದಶ್ವ ಮೇಧವನೂ ||
ಗೋತ್ರಧರ ಗೈದುದನು ಕೇಳುತ |
ಶಾತ್ರವಾಗ್ರಣಿ ದಂತವಕ್ರನು |
ಚೈತ್ರಕೀರ್ತಿಯ ಸಹಿಸದೆ ವಿಡೂರಥನ ಸಹಿತೈದಾ ||೧೪೯||
ಕಂದ
ಕಾರೂಷನು ತಾ ರೋಷದಿ |
ವಾರಿಧಿಯೊಳವಭೃಥವ ಗೈದು ಬಹಮಾಧವನಂ ||
ಭೋರಿಡುತಲಿ ಶಸ್ತ್ರಾಸ್ತ್ರವ |
ಬೀರುತ ಮಾರ್ಗದಿ ತಡೆದಾಡಿದ ನೀ ವಚನಂ ||೧೫೦||
ರಾಗ ಶಂಕರಾಭರಣ ರೂಪಕತಾಳ
ಹಸುವ ಪಾಲ ಕೇಳು ತುರಗ | ದೆಸೆವ ಯಾಗ ಗೈದೆಯೆಂದು |
ಜಸವ ಕೇಳಿ ಬಂದೆ ಯುದ್ಧ | ಕ್ಕಸಮಸಾಹಸಾ ||
ವಸುಮತಿಯೊಳಿರಲು ತಾನು | ಪಸುಳನೆನ್ನ ಗೆಲದೆ ಗೈದ |
ಹುಸಿಯ ಯಾಗಫಲವ ತೋರ್ಪೆ | ಮಸೆದ ಶರದಲೀ ||೧೫೧||
ನುಡಿಯ ಕೇಳಿ ಭೀಮ-ಪಾರ್ಥ | ರೊಡನೆ ಕಾಮ-ಶಿನಿಯ ಸುತರು |
ಫಡೆಫಡೆನುತ ಪೊರಡೆ ರಣಕೆ | ತಡೆದು ಮಾಧವಾ ||
ಕಡು ವಿರೋಧಿಯವನ ಶಿರವ | ಕೊಡುವೆ ಗದೆಗೆ ಬಲಿಯನೆನುತ |
ನುಡಿದು ಹರಿಯು ವೈರಿಯನ್ನು | ತುಡುಕಿ ಪೇಳ್ದನೂ ||೧೫೨||
ಭ್ರಷ್ಟ ನಾವು ಹಸುಪರಹುದು | ಸೃಷ್ಟಿಯೊಳಗೆ ನಿನ್ನ ಪೋಲ್ವ |
ದುಷ್ಟ ಪಶುಗಳನ್ನು ಬಡಿವ | ಯಷ್ಟಿ ಗದೆಯಿದೂ ||
ಇಷ್ಟಯಾಗ ಹುಸಿಯಿದಾದ | ರಷ್ಟಕೀಗ ನಿನ್ನ ತರಿದು |
ಇಷ್ಟಿ ಪೂರ್ತಿಗೈವೆ ನೋಡು | ಕಷ್ಟವಿಲ್ಲದೇ ||೧೫೩||
ಇಂತು ನುಡಿದ ಮಾತ ಕೇಳಿ | ದಂತವಕ್ರ ಕೋಪಿಸುತ್ತ |
ದಂತಿರಾಜನಂತೆ ರಣಕೆ | ನಿಂತು ಪೇಳ್ದನೂ ||
ಕಂತು ಶರದಿ ಸೋತು ಕುಟಿಲ | ಕುಂತಳೇಯರೊಡನೆ ರಮಿಸಿ |
ದಂತೆ ಸಮರವಲ್ಲ ನಿಲ್ಲು | ಪಂಥವಿದ್ದಡೇ ||೧೫೪||
ನಿಲ್ಲು ಖೂಳ ನಿನ್ನ ವಕ್ರ | ಹಲ್ಲು ಮುರಿದು ನಿಮಿಷ ಮಾತ್ರ |
ದಲ್ಲಿ ದುರುಳತನದ ಕೆಟ್ಟ | ಸೊಲ್ಲ ನಿಲಿಸುವೇ ||
ಫುಲ್ಲನೇತ್ರ ನಿಂತು ನುಡಿದು | ಮಲ್ಲರಂತೆ ತಿರುಹಿ ಗದೆಯ |
ಘಲ್ಲನೆನುತ ಹೊಡೆಯೆ ವೈರಿ | ಯಲ್ಲೆ ಬಿದ್ದನೂ ||೧೫೫||
ಭಾಮಿನಿ
ಕಂತುಜನಕನ ಗದೆಯ ಹತಿಗಾ |
ದಂತವಕ್ರನು ಬೀಳುತಷ್ಟರೊ |
ಳಂತಕನ ಪುರ ಸೇರೆ ಕಾಣುತಲಾ ವಿಡೂರಥನೂ ||
ಪಂಥದಲಿ ಶ್ರೀಹರಿಯ ಸನ್ಮುಖ |
ನಿಂತು ಬಹುಶರ ಬಿಡುತ ಬಾಡಬ |
ದಂತರವ ಪೊಗುವಂತೆ ನಡೆಹಾಯ್ದೆಂದ ರೋಷದಲೀ ||೧೫೬||
ರಾಗ ಪಂಚಗಾತಿ ಮಟ್ಟೆತಾಳ
ಕುಟಿಲಗಾರ ದೊರೆಯ ಗೆಲಿದ | ಹಟವ ನಿಲಿಸುವೆ ||
ನಿಟಿಲನೇತ್ರ ಬರಲು ಗೆಲುವ | ಭಟನು ತಾನಹೆ ||೧೫೭||
ಜಡಜನಯನ ಕೋಪಿಸುತ್ತ | ನುಡಿದನವನೊಳೂ ||
ಒಡೆಯ ಪೋದ ಗತಿಯ ತೋರ್ಪೆ | ಬಡಿದು ಧುರದೊಳೂ ||೧೫೮||
ಮತ್ತೆ ದುರುಳ ಪೇಳ್ದನೆಲ್ಲ | ಪೃಥ್ವಿಪಾಲರಾ ||
ಮೊತ್ತಗೆಲಿದ ಪರಿಯಿದಲ್ಲ | ದೃಪ್ತ ಸಂಗರಾ ||೧೫೯||
ಖೂಳನೊಬ್ಬನುಳಿದೆ ವೈರಿ | ಜಾಲಮಧ್ಯದೀ ||
ತೋಳಬಲದಿ ವಸತಿ ತೋರ್ಪೆ | ಕಾಲನಗರದೀ ||೧೬೦||
ಇನಿತು ನುಡಿದ ಹಟದಿ ಭಟರು | ರಣವ ಗೈಯಲೂ ||
ಮನುಮಥಯ್ಯನರಿಯ ಕೂಡೆ | ಸೆಣಸಿ ಬಡಿಯಲೂ ||೧೬೧||
ಭಾಮಿನಿ
ಶ್ರೀಧವನು ಧುರದೊಳಗೆ ಗೆದ್ದುದ |
ಮೋದದಲಿ ಸುರರೆಲ್ಲ ನೋಡುತ |
ಸಾದರದಿ ಸುಮವೃಷ್ಟಿ ಗೈದರು ಜಯವುಜಯವೆನುತಾ ||
ಮಾಧವನು ನಸುನಗುತಲಾ ಕ್ಷಣ |
ಮೇದಿನೀಪತಿ ಭೀಮಪಾರ್ಥರ |
ಗಾಧ ಪ್ರೇಮದೊಳಪ್ಪಿಕೊಳ್ಳುತ ಸಂತಸವನಾಂತೂ ||೧೬೨||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಡಬಲದಿ ಭೀಷ್ಮಕಜೆ-ಭಾಮೆಯರ್ | ಜಡಜಪಾದದ ನಿಕಟ ಭೀಮನು ||
ಪಿಡಿದು ಛತ್ರವ ಪಾರ್ಥ ಹಿಂಗಡೆ | ನಡುವೆ ಹರಿಯೂ ||೧೬೩||
ಅಂಬರದಿ ಸುರದುಂದುಭಿಯ ರವ | ಕಂಬುಮುಖ ಶುಭವಾದ್ಯಘೋಷವು ||
ಕುಂಭಕುಚೆಯರ ಗಾನದಿಂದೈ | ದಂಬುಜಾಕ್ಷಾ ||೧೬೪||
ಈ ತೆರದ ವೈಭವದಿ ಖಗಪತಿ | ಕೇತನದ ರಥವೇರಿ ಯದುಕುಲ ||
ನಾಥ ಬಂದನು ನಭರಿ ವಾರಿಧಿ | ಜಾತನಂತೇ ||೧೬೫||
ಮಂಗಳೆಗೆ ಶುಭಮಂಗಳನು ಮಾ | ತಂಗವರದನು ಬರಲು ದ್ವಾರಕಿ ||
ಯಂಗನೆಯರಾರತಿಯ ಬೆಳಗಿದರ್ | ಮಂಗಲಂಗೇ ||೧೬೬||
ಈ ಮಹಿಯೊಳೂ ಮಹಿಮ ಶುಕಮನಿ | ಶ್ರೀ ಮಹಾಭಾಗವತ ಕಥೆಯನು ||
ಪ್ರೇಮದೊಳಗಿನಿತೊರೆದ ಪಾರ್ಥಿಜ | ಭೂಮಿಪತಿಗೇ ||೧೬೭||
ರಾಜತಾಸನ ಪುರದೊಳಿಹ ಗುರು | ರಾಜಪದರಾಜೀವಮಧುಕರ ||
ರಾಜಗೋಪಾಲಾಖ್ಯಕೃತ ಯದು | ರಾಜಕಥೆಯೂ ||೧೬೮||
ಕೋವಿದರ ಮತಿಗೊಪ್ಪಲೀ ಕೃತಿ | ಶ್ರೀವರನ ಜಯನುತಿಯಿದೆನ್ನುವ ||
ಭಾವದಲಿ ಮನ್ನಿಸಲಭೀಷ್ಟವ | ನೀವ ಹರಿಯೂ ||೧೬೯||
ಮಂದಮತಿಯೊಳು ರಚಿತ ಕೃತಿಯನು | ನಂದಿತೀರ್ಥ ಸುವಾದಿರಾಜ ಹೃ |
ನ್ಮಂದಿರಗೆ ಹರಿಗರ್ಪಿಸುವೆ ಹಯ | ಕಂಧರಂಗೇ ||೧೭೦||
ಮಂಗಲ ಪದ
ರಾಗ ಪಂತುವರಾಳಿ ಆದಿತಾಳ
ಮಂಗಲಂ ಜಯಮಂಗಲಂ || ಪಲ್ಲ ||
ಮಂಗಲ ನಿಗಮವ ಬೋಧಿಪಗೇ | ತುಂಗಶಿರದ ಹಯಕಂಧರಗೇ ||
ಅಂಗನೆ ಧರೆಯನು ಕರದೊಳು ಧರಿಸಿದ | ಭಂಗಾರೇಕ್ಷಣರಿಪು ವರಹನಿಗೇ || ಮಂಗಲಂ ||೧೭೧||
ವೇದವಿಭಾಗವ ರಚಿಸಿದಗೇ | ಸೋದೆಯ ಮಠದಲಿ ಮೋದಿಪಗೇ ||
ಸಾದರದಲಿ ಬ್ರಹ್ಮ ಸೂತ್ರವ ಮಾಡಿದ | ವಾದಿರಾಜಪ್ರಿಯ ಬಾದರಾಯಣಗೇ || ಮಂಗಲಂ ||೧೭೨||
ಕಡಗೋಲು ನೇಣ್ಗಳ ಧರಿಸಿದಗೇ | ನಡುಗೃಹಪೂರ್ವಜಸುತಪ್ರಿಯಗೇ ||
ಹಡಗೇರುತ ಬಂದ ಬಡಜನರನ್ನಗೇ | ಉಡುಪಿಯೊಳ್ ನೆಲಸಿದ ಸಿರಿಕೃಷ್ಣಗೇ ||
ಮಂಗಲಂ ಜಯಮಂಗಲಂ ||೧೭೩||
ಯಕ್ಷಗಾನ ಶ್ರೀಕೃಷ್ಣದಿನಾಶ್ವಮೇಧ ಸಂಪೂರ್ಣವು.
Leave A Comment