ರಾಗ ನಾದನಾಮಕ್ರಿಯೆ ಅಷ್ಟತಾಳ

ದುರುಳ ನೀ ನಮ್ಮ ವಾಜಿಯ | ಬಿಡ | ದಿರಲು ತೋರ್ಪೆನು ಕಾಲ ನಗರಿಯಾ ||
ಮರುಳತನದಿ ನಮ್ಮ ಧುರದೊಳು | ನೀ | ಬರಿದೆ ಕೆಡುವೆ ಮಂದಮತಿಯೊಳೂ ||೧೨೪||

ಮಂದಮತಿಯ ತಾ ಧುರದಲ್ಲಿ | ಶರ | ವೃಂದದಿ ತೋರುವೆ ಜವದಲ್ಲಿ ||
ನಂದಕಂದನ ವಾಜಿಪೃಷ್ಠದಿ | ನೀ | ಬಂದು ನುಡಿವದ್ಯಾವ ಶೌರ್ಯದಿ ||೧೨೫||

ಹುಚ್ಚರಂದದಿ ಲೋಕಸ್ವಾಮಿಯ | ನೀ | ತುಚ್ಛಿಕರಿಸಲೀಗ ಜಿಹ್ವೆಯಾ ||
ಬೆಚ್ಚದ ಛೇದಿಪೆ ನೋಡೀಗ | ನಮ | ಗಚ್ಚುತ ಸೇವೆಯೆ ಲೇಸೀಗಾ ||೧೩೬||

ಇಂತು ಮಾತಾಡುತ್ತ ರೋಷದಿ | ಬಲ | ವಂತರೀರ್ವರು ಕಾದಲ್ ಶೌರ್ಯದಿ ||
ಪಂಥದಿ ಸೋಲುತ್ತ ಹಂಸನು | ತ್ರಿಪು | ರಾಂತಕಗಣಗಳ ನೆನೆದನೂ ||೧೨೭||

ಭಾಮಿನಿ

ಆರ್ತನಿನದವ ಕೇಳುತೀರ್ನಾಲ್ |
ಮೂರ್ತಿದೇವನ ಪ್ರಥಿತಗಣಗಳು |
ತೂರ್ತದಲಿ ಬಂದಾಗ ಕುಂಡೋದರ ವಿರೂಪಾಕ್ಷಾ ||
ಸಾರ್ಥನಾಮರು ಬರುತ ರಣದಿಂ |
ದಾರ್ತಿಗೊಂಡಿಹ ಹಂಸನಿದಿರೊಳ |
ಗರ್ತಿಯಲಿ ಭೋರ್ಗುಟಿಸಿ ಕೇಳ್ದರು ನೆನೆದುದೇಕೆನುತಾ ||೧೨೮||

ಕಂದ

ಈತನ ರಣದೊಳು ಸೋಲಿಸಿ |
ಖ್ಯಾತಿಯನಿಂದೆನಗರ್ಪಿಸಲೋಸುಗ ನಿಮ್ಮಂ ||
ಆತುರದಲಿ ಕರೆದೆನು ಧುರ |
ಭೀತಿಯ ಪರಿಹರಿಸಲೆನಗಾಪುದು ಸುಪ್ರೇಮಂ ||೧೨೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಖೂಳನೆಂದುದ ಕೇಳಿ ಗಣಗಳು | ಕಾಳಗಕೆ ವೀಟಿಕೆಯಗೊಳ್ಳುತ |
ಕಾಳಭೈರವನಂತೆ ಗರ್ಜಿಸಿ | ಬಾಲರವಿಯ ||೧೩೦||

ಮೇಲೆ ಕಗ್ಗತ್ತಲೆಯ ತೆರದಿ ವಿ | ಶಾಲಭುಜ ಮಾರುತಿಯ ಮುಸುಕಲ್ |
ಗೋಳುಗುಡಿಸುತ ಭೀಮ ಬಂದನು | ಕಾಲನಂತೆ ||೧೩೧||

ರಾಗ ಕಾಂಭೋಜಿ ಮಟ್ಟೆತಾಳ

ಭೀಮನಾಗ ಗದೆಯ ತಿರುಹುತೆಂದ ನಿಮ್ಮಯ |
ಸ್ವಾಮಿಯನ್ನು ಬಿಡುತ ಬಂದುದ್ಯಾಕೆ ನಮ್ಮಯಾ ||
ಈ ಮಹಾದ್ಭುತದ ಗದೆಯ ಹತಿಯ ತಿಳಿಯದೆ |
ಕಾಮಿಸುವಿರಿ ಧುರವ ಬರಿದೆ ಜಯವು ದೊರಕುದೇ ||೧೩೨||

ಫಡಫಡೆಂದು ಪೇಳ್ದರಾಗ ಭೂತಗಣಗಳು |
ಕಿಡಿಯನುಗುಳಿ ಜಗವ ನುಂಗುವಂತೆ ಭರದೊಳೂ ||
ಮೃಡನ ಭಕ್ತನನ್ನು ಕೆಡಹೆ ಬಿಡೆವು ಧುರದಲಿ |
ತೊಡಕಿ ನಮ್ಮ ಗೆಲುವರಾರು ಮೂರು ಜಗದಲೀ ||೧೩೩||

ಎಂದ ನುಡಿಯ ಕೇಳಿ ಭೀಮನಂದು ಕೋಪದಿ |
ಕುಂದದಾಗ ಪಿಡಿದು ಭೂತಗಳನು ನಿಮಿಷದೀ ||
ಮುಂದೆ ಮಸಣವನ್ನು ಸಾರಿರೆಂದು ಶಿರದಲೀ |
ಚಂದದಿಂದ ತಿರುಹಿಬಿಸುಟನಾಗ ಕ್ಷಣದಲೀ ||೧೩೪||

ಭಾಮಿನಿ

ಭೂತಗಣಗಳ ಭೀಮನಾಕ್ಷಣ |
ಭೀತಿಯಿಲ್ಲದೆ ತಿರುಹಿ ಬಿಸುಡಲು |
ನಾಥರಿಲ್ಲದೆ ಹಂಸ ನಡುಗುತ ಭಯದಿ ಬೊಬ್ಬಿರಿದೂ ||
ಘಾತಿಪನು ದಿಟವೀತನೆಂದು ನಿ |
ಕೇತನವ ಸೇರುವೆನು ತಾನೆಂ |
ದಾತುರದೊಳವ ನೋಡೆ ಭೀಮನು ಕಚದೊಳೆಳೆತಂದೂ ||೧೩೫||

ರಾಗ ಶಂಕರಾಭರಣ ರೂಪಕತಾಳ

ಎಲ್ಲಿಗೆ ಪೋಪೆಯೊ ಕ್ಷತ್ರಿಯ | ರಲ್ಲಿ ನೀನ್ಯಾತಕೆ ಜನಿಸಿದೇ ||
ಬಲ್ಲವರೋಡುವರೆನುತಲಿ | ಬಿಲ್ಲಲಿ ತಿವಿದೆಂದಾ ||೧೩೬||

ಇಂದಿರೆಯರಸನ ಜಗದೊಳು | ನಿಂದಿಪ ನಿನ್ನಯ ಜಿಹ್ವೆಯ ||
ಚಂದದಿ ಛೇದಿಸಿ ಕುಕ್ಕುರ | ದಂದದಿ ಬಂಧಿಸುವೇ ||೧೩೭||

ಅಂದಿಲಿ ಹಂಸನು ಮರುಗುತ | ವಂದಿಸಿ ಭೀಮಗೆ ಪೇಳ್ದನು ||
ನಂದನನಂದದಿ ತನ್ನಯ | ಕುಂದನು ನೀ ಕ್ಷಮಿಸೈ ||೧೩೮||

ಕೊಡುವೆನು ಕಪ್ಪವನೆನುತಲಿ | ತಡಗೈಯದೆ ವಾಜಿಯ ಕರ ||
ದೊಡಗೂಡುತ ತಾ ತರಿಸುತ | ಲಡಿಯೊಳಗರ್ಪಿಸಲೂ ||೧೩೯||

ಭಾಮಿನಿ

ನಡಿಯೆಲಾ ಯೆಲ ಹೇಡಿ ಗೃಹಕೆ |
ಮ್ಮೊಡೆಯ ಕೃಷ್ಣನ ನಾಮ ಪೇಳುತ |
ಪೊಡವಿಯೊಳು ಬದುಕೆಂದು ಕಳುಹುತ ಭೀಮ ಮೋದದಲೀ ||
ಸಡಗರದಿ ಫಲುಗುಣನ ಕರೆವುತ |
ಜಡಜನಾಭನ ದಯದಿ ದಿಗ್ಜಯ |
ವೆಡರಿರದೆ ಕೈಗೂಡಿತೆನುತಲಿ ನುಡಿದು ಪೊರಮಟ್ಟಾ ||೧೪೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಉತ್ತರೆಯ ಸುತ ಕೇಳು ಶ್ರೀಪುರು | ಷೋತ್ತಮನ ಭಕ್ತರಲಿ ಜಗದಿ ಮಾ |
ರುತ್ತಸುತನಿಂಗಾರು ಸಮರೆ | ನ್ನುತ್ತ ನುಡಿದ ||೧೪೧||

ಸಾದರದಿ ಭಜಿಸಿರ್ದ ಜನರಿಂ | ಗಾದಿಪುರುಷನ ದಯದೊಳಿವ ಮೋ |
ಕ್ಷಾದಿ ಪುರುಷಾರ್ಥಗಳನೀವನು | ಮೋದದಿಂದ ||೧೪೨||

ರಾಜಸಂಘವ ಗೆಲಿದು ರತ್ನದ | ರಾಜಿಸಹಿತಲಿ ಭೂರಿ ವಿಭವದಿ |
ಸೋಜಿಗದಿ ದ್ವಾರಕಿಗೆ ಬಂದರು | ವಾಜಿ ಸಹಿತ ||೧೪೩||

ಭಾಮಿನಿ

ವಸುಮತೀಶನೆ ಕೇಳು ಪವನಜ |
ನೆಸೆವ ಹರಿಯಧ್ವರದ ಶಾಲೆಗೆ |
ಕುಶಲದಿಂ ನರ-ಪುಷ್ಪಶರ-ಶಿನಿಸುತರ ಸಹ ಬಂದೂ ||
ಋಷಿಕುಲದಿ ಶತಲಕ್ಷ ಚಂದ್ರನ |
ಬಸಿವ ಚಂದ್ರಿಕೆಯಂತೆ ಶೋಭಿಪ |
ಹಸಿತ ಶ್ರೀಹರಿಗೊಪ್ಪಿಸಲು ಹಯ ರತ್ನರಾಶಿಗಳಾ ||೧೪೪||

ರಾಗ ಸೌರಾಷ್ಟ್ರ ಏಕತಾಳ

ಶ್ರೀಲೋಲ ಕಂಡು ಭೀಮನ ಬೇಗದೊಳಗಾಗ | ಲಾಲಿಂಗಿಸುತ ಪೇಳ್ದ ಮುದದಿ ||
ಕಾಳಗದೊಳು ನಿನಗೆಣೆಗಾಣೆ ವೀರರೊಳ್ | ಕಾಲ ಮೀರದೆ ತಂದೆ ಕರವ ||೧೪೫||

ಜಗಳದ ಶ್ರಮವಿಲ್ಲ ನಿನಗೆಂದು ಬಲ್ಲೆ ನಾ | ಹಗಲಧಿಪತಮ ತರಿವಂತೆ ||
ಸುಗುಣರರ್ಜುನ ಮೊದಲರು ಬಳಲಿದರೆಂದು | ನಗುತ ಪೇಳಿದನು ಮಾಧವನು ||೧೪೬||

ಭಾಮಿನಿ

ಇನಿತು ಭೀಮಾದ್ಯರನು ದೇವಕಿ |
ತನಯ ಮನ್ನಿಸಿ ಮುದದೊಳಿರಲಾ |
ಕ್ಷಣದಿ ತೊಂಭತ್ತಾರು ವರುಷದವಂತಿದೇಶಜನೂ ||
ತನುವ ಬಗ್ಗಿಸಿ ಬರುತ ಘಲಘಲ |
ವೆನುತ ಕೈ-ಕಾಲ್-ತಲೆಯನೆತ್ತುತ |
ಘನದಿ ಕೈಕೋಲೊತ್ತಿ ಕೂಗುತಲಾ ತೃಣಾವಹನೂ ||೧೪೭||

ರಾಗ ಪೂರ್ವಿ ಅಷ್ಟತಾಳ

ಬಂದನು ಪಾರ್ವ ಬಂದನೂ    || ಪಲ್ಲ ||
ಶ್ರೀಗೋ | ವಿಂದನ ಸ್ಮರಿಸುತ
ಕುಂದಿದ ಮನದಿ ತಾ || ಬಂದನು ||೧೪೮||

ಮಂದರೋದ್ಧರ ಮುಚು | ಕುಂದ ವರದ ಕೃಪಾ
ಸಿಂಧೊ ಯೆನ್ನನು ಮುದ | ದಿಂದ ರಕ್ಷಿಪುದೆಂದೂ ||೧೪೯||

ರಾಗ ಮುಖಾರಿ, ಆದಿತಾಳ

ಹಾಹಾ ನಾನಾರ ಪೇಳಲಿ | ಯೆನ್ನೊಡಲಳಲ | ಮಹಾಜ್ವಾಲೆಗೆ ಬಳಲಿ || ಪಲ್ಲ ||
ಮೋಹಿಸಿ ಸಂಸಾರಕೆ ಸಾಹಸದಿಂದ ವಿ |
ವಾಹಿತ ಮೂರನೆ ಸ್ನೇಹದ ಸುದತಿಯ |
ದೇಹಜ ಸುತಸಂದೋಹವನೊದುದ || ಹಾಹಾ ನಾನಾರ ಪೇಳಲೀ ||೧೫೦||

ಭಾಮಿನಿ

ಅರ್ಜುನನೆ ಫಲುಗುಣನೆ ಪಾರ್ಥನೆ |
ದುರ್ಜನರ ಶಿಕ್ಷಿಪ ಕಿರೀಟಿಯೆ |
ಭರ್ಜಿಸಿದೆ ಹಾ ದುಃಖದಲಿ ನಾ ಶ್ವೇತವಾಹನನೇ ||
ನಿರ್ಜರೇಂದ್ರನ ತರಳನರ ಧುರ |
ಗರ್ಜನೆಗೆ ರಿಪು ಜಿಷ್ಣು ಕೃಷ್ಣನೆ |
ದುರ್ಜಯನೆ ಹರಿ ಸವ್ಯಸಾಚಿ ಧನಂಜಯನೆ ನರನೇ ||೧೫೧||

ಸ್ತೋತ್ರಗಳ ಕೇಳ್ದಾಗ ವಿಪ್ರನ |
ರಾತ್ರಿಚರರಿಪುಸುತನು ಹರುಷದೊ |
ಳೀ ತ್ರಿಲೋಕದೊಳಾರು ತನಗಿದಿರೆಂದು ಗರ್ವದಲೀ ||
ಧಾತ್ರಿ ಸುರನೆಡೆಗೈದು ವಸನದಿ |
ನೇತ್ರಜಲಗಳನೊರಸುತಭಯವ |
ಕ್ಷಾತ್ರತೇಜದೊಳಿತ್ತು ಭೋ ಭಯವೇನು ನಿಮಗೆನಲೂ ||೧೫೨||

ರಾಗ ಕೇತಾರಗೌಳ ಅಷ್ಟತಾಳ

ತ್ರಿದಶಾಧಿಪತಿಯ ಸಂಜಾತನ ನುಡಿ ಕೇಳು | ತದುಭುತ ಭಯದಿವಿಪ್ರಾ ||
ಗದಗದ ಧ್ವನಿಯೊಳಗೊದರಿ ಮರುಗಿ ಬೀಳ | ಲಿದ ಪೇಳ್ದನರ್ಜುನನೂ ||೧೫೩||

ಎಲ ವೃದ್ಧ ಭಯವೇಕೆ ನುಡಿವುದೆನ್ನೊಡನೆಲ್ಲ | ವಿಳೆಯೊಳು ಬಿದ್ದು ನೀವೂ ||
ಬಳಲುವದೇಕಿಂದು ಸಲಹುವೆ ತಾನೆನು | ತಳುವ ವಿಪ್ರನನೆತ್ತಲೂ ||೧೫೪||

ವಸುಧೇಶನೆಬ್ಬಿಸಲೆದ್ದು ನಡುಗಿ ವಿಪ್ರ | ಬಿಸುಸುಯ್ದು ನೆನೆ ನೆನೆದೂ ||
ಉಸುರಾಡಿ ಧೃತಿಗೊಂಡು ಪಾರ್ಥಗಾಶಿಷವಿತ್ತು | ಬೆಸಗೊಂಡನಾಕ್ಷಣದೀ ||೧೫೫||

ಭೂತಳದೊಳಗೆನ್ನ ಭೀತಿಯ ತರಿವ ವಿ | ಖ್ಯಾತರಾರಿಹರು ಪೇಳೂ ||
ನಾಥರ ಕಾಣದೆ ಬಾಯ ಬಿಡುತಲಿಂದ್ರ | ಜಾತ ನಿನ್ನೆಡೆಗೆ ಬಂದೇ ||೧೫೬||

ನುಡಿದ ಮಾತಿಗೆ ಮೂರ್ಜಗದ ಭಟನು ಕರ | ಪಿಡಿದು ವಿಪ್ರಗೆ ನಂಬಿಗೇ ||
ಕೊಡುತ ಪೇಳಿದ ಮೇರು ಶರಧಿಯೊಳ್ ತೇಲಲು | ದೃಢದಿ ಮಾಡುವೆ ಕಾರ್ಯವಾ ||೧೫೭||

ಕೊಟ್ಟ ಮಾತಿಗೆ ನೀನು ತಪ್ಪುವನಲ್ಲೆಂದು | ದಿಟ್ಟ ನಿನ್ನೆಡೆಗೆ ಬಂದೇ ||
ಕೃಷ್ಣರಾಮಾದ್ಯರಿಗರುಹಿದರೀ ಕಾರ್ಯ | ಕೆಟ್ಟು ಹೋಯಿತು ನೀ ನೋಡೂ ||೧೫೮||

ಕೃಷ್ಣ-ರಾಮರ ಪರಿಯಲ್ಲ ತನ್ನಯ ಶೌರ್ಯ | ದಿಟ್ಟತನವ ನೀ ನೋಡೂ ||
ವಿಷ್ಟಪದೊಳಗೆನ್ನ ಸರಿಯಾದ ಧುರಜಗ | ಜಟ್ಟಿಗಳೆಲ್ಲಿಹರೂ ||೧೫೯||

ಇದ ಕೇಳಿ ವಿಪ್ರನು ಮುದಗೊಂಡು ಬೆಸಗೊಂಡ | ಮುದುಕನೆನಗೆ ಮೂರನೇ ||
ಮುದುವೆಯ ಸತಿಯೊಳು ಮೂರು ಬಾಲರು ಪುಟ್ಟ | ಲದರೊದರ್ಯಾರೊ ಕಾಣೇ ||೧೬೦||

ಭಾಮಿನಿ

ವಾಸವನ ಸುತ ಕೇಳು ನಿನ್ನಯ |
ಭಾಷೆ ದಿಟ ಖರೆ ಸಹಜವೋ ದಿಗ್ |
ದೇಶದಲಿ ಜನರಿಂಗೆ ನೀನಪಹಾಸ್ಯನಾಗದಿರೈ ||
ಮಾಸವಿದು ಹತ್ತನೆಯದೆನ್ನಯ |
ಭಾಸುರಾಂಗಿಗೆ ನಾಲ್ಕನೆಯ ಬಸು |
ರೀಸು ತಾಮಸವಿಲ್ಲ ಜನನಕೆ ಸಲಹೊ ಗರ್ಭವನೂ ||೧೬೧||

ರಾಗ ಭೈರವಿ ಏಕತಾಳ

ದ್ವಿಜವರ ಪೇಳ್ದುದ ಕೇಳಿ | ಪಾಂ | ಡುಜನತಿ ರೋಷವ ತಾಳೀ ||
ನಿಜಭುಜಬಲದಿಂದಲೀಗ | ಲಾ | ತ್ಮಜನನ್ನು ಸಲಹುವೆ ಬೇಗಾ ||೧೬೨||

ಪೊರಡು ನೋಡುವದೀಗಲೆಂದು | ಧನು | ಶರವ ಬೇಗದಿ ಪಿಡಿದಂದೂ ||
ತರಳನ ಬದುಕಿಸಿಕೊಡುವೆ | ದಿಟ | ಹರುಷಗೊಳ್ಳುವದೀಗ ಬರುವೇ ||೧೬೩||

ವಾರಿಜಾಕ್ಷನು ನೋಡಿ ನಗುತ | ನರ | ವೀರ ಸಾಧ್ಯವೋ ನಿನಗೆನುತಾ ||
ಮೀರಬಾರದು ನುಡಿಯಿತ್ತು | ನಾ | ಸಾರಿ ಪೇಳಿದೆ ಬೇಡವಿನಿತೂ ||೧೬೪||

ಭೂಸುರ ಪೇಳಿದ ಬಿಡನು | ಖರೆ | ಲೇಸು ಯೋಚಿಸಿ ಪೋಗು ನೀನೂ ||
ಪೂಶರ ರಾಮ ಕಾಮಜರ | ಬಿಡು | ತೋಷದಿ ಗಮಿಸು ಸಹಿತೆಲ್ಲರಾ ||೧೬೫||

ಭಾಮಿನಿ

ಕಪಟನಾಟಕನುಡಿಗೆ ಲಜ್ಜೆಯೊಳ್ |
ವಿಪುಲ ಧೈರ್ಯವನಾಂತು ತವಕದಿ |
ಶಪಥವನು ಗೈದೆಂದನರ್ಜುನನೀಗ ದ್ವಿಜಸತಿಯಾ ||
ಅಪರಿಮಿತ ಸಾಹಸದಿ ಗರ್ಭವ |
ನಪಹರಿಸದಿರ್ಪಂತೆ ರಕ್ಷಿಸ |
ಲಪಟುವಾದಡೆ ವಹ್ನಿ ಕುಂಡವ ಪೊಗುವೆ ತಾನೆಂದಾ ||೧೬೬||

ರಾಗ ಶಂಕರಾಭರಣ ರೂಪಕತಾಳ

ಕುಂತಿಸುತನ ನುಡಿಯ ಕೇಳಿ | ಕಂತುತಾತ ತಲೆಯ ತೂಗ ||
ಲಂತ ರಂಗದಲ್ಲಿ ವಿಪ್ರ | ಚಿಂತೆ ತೊರೆವುತಾ ||೧೬೭||

ತೋಷಶರಧಿಯೊಳಗೆ ತೇಲಿ | ವಾಸವಾತ್ಮಜಂಗೆ ಮಂಗ ||
ಳಾಶೀರ್ವಾದ ಗೈದು ಪೇಳ್ದ | ಭಾಷೆ ನೆನಪಿಡೈ ||೧೬೮||

ಇನಿತು ಪೇಳಲಾಗ ಪಾರ್ಥ | ಧನುವ ಝೇಂಕರಿಸಿ ಬೇಗ ||
ದನುಜರಿಪುಗೆ ನಮಿಸಿ ಸ್ಯಂ | ದನವನಡರುತಾ ||೧೬೯||

ವೀರ ಪಾರ್ಥ ರಥದಿ ವೃದ್ಧ | ನ್ನೇರಿಸುತ್ತ ಜವದಿ ಹಯವ ||
ಹಾರಿಸುತ್ತ ಬಂದನವನಾ | ಗಾರದ್ವಾರಕೇ ||೧೭೦||

ರಾಗ ಸಾಂಗತ್ಯ ರೂಪಕತಾಳ

ಸ್ಯಂದನದಿಂದಿಳಿದು ಬಂದು ಪಾರ್ಥಗೆ ತನ್ನ | ಮಂದಿರದಲಿ ವಿಪ್ರವರನೂ ||
ತಂದು ಪೀಠವನೀವುತುಚಿತದೊಳುಪಚರಿಸು | ತಂದಿಲಿ ಕರೆದ ತಾ ಸತಿಯಾ ||೧೭೧||

ಪತಿಯ ಶಬ್ದವಿದೆಂದು ತಿಳಿದು ಬೇಗದೊಳೇಳ | ಲತಿಶಯದುಃಖದಿ ಸತಿಯೂ ||
ಪೃಥಿವಿಗೆ ಕೈಯೂರಿ ಭುಸುಭುಸುತೆನುತೆದ್ದು | ಪೃಥುಳಕಟಿಗೆ ಕರವಿಡುತಾ ||೧೭೨||

ಪೊರಟು ಮೆಲ್ಲನೆ ಬರುತಾಗ ಕಾಣುತ ಪತಿ | ಕೊರಳನಪ್ಪುತ ರೋದಿಸಿದಳೂ ||
ಹರಹರ ತನಗೇಕೆ ಗರ್ಭ ಸಂಜನಿಸಿತು | ಬರಿದೆ ಯೌವನ ಸರಿಯಾಯ್ತೂ ||೧೭೩||

ಮೂರು ಮಕ್ಕಳ ಪೊತ್ತುತೀ ರೀತಿ ಬಳಲಿ ಬಾ | ಯಾರಿ ಕೂಗಿದರು ನೀವೆನ್ನಾ ||
ಘೋರ ದುಃಖವ ಪರಿಹರಿಸುವ ವೀರರನು | ಸೇರದೆ ಕುಳಿತೇನು ಫಲವೂ ||೧೭೪||

ಪುಟ್ಟಿದ ಮಕ್ಕಳನೊಂದೂ ಕಾಣದ ದುರ | ದೃಷ್ಟಳಾಗಿಹೆನಲ್ಲ ತಾನೂ ||
ಅಷ್ಟರೊಳಗೆ ಯಾವ ದಿಟ್ಟರೊವರೊ ಕಾಣೆ | ಸೃಷ್ಟಿಯೊಳ್ ಪುಟ್ಯೇನು ಫಲವೂ ||೧೭೫||

ಮರುಗುವ ಸತಿಯ ಕಂಬನಿಯನೊರಸಿ ವೃದ್ಧ | ತರಳೆ ದುಃಖಿಸಬೇಡ ಬರಿದೇ ||
ಹರಿಯ ಭಾವನ ಕರತಂದೆ ನಿನ್ನಯ ದುಃಖ | ಪರಿಹರಿಸಲು ಧೀರಳಾಗೇ ||೧೭೬||

ಇವನ ಪೋಲುವ ವೀರರನು ಕಾಣೆ ರಮಣಿ ತ್ರಿ | ಭುವನೇಶಜಾತನೆಂದೆನಲೂ ||
ದಿವಿಜ ಪಾಲಕ ಕೃಷ್ಣ-ರಾಮಾದ್ಯರಿದಕಂಜ | ಲವನ್ಯಾಕೆ ಬರಿದೆಂದಳವಳೂ ||೧೭೭||

ಧಿಕ್ಕಾರನುಡಿ ಕೇಳಿ ಪಾರ್ಥ ಕೋಪಿಸಿ ಸಿಂಹ | ಘಕ್ಕನೆಂಬಂತೆ ಗರ್ಜಿಸುತಾ ||
ಚಿಕ್ಕ ಹುಡುಗಿ ನಿನ್ನ ಸೊಕ್ಕಿನ ನುಡಿ ಸಾಕು | ಹಕ್ಕಿವಾಹನ-ರಾಮರಿರಲೀ ||೧೭೮||

ಪುಟ್ಟಿದ ಮಗುವ ಕೊಂಡೊಯ್ಯಲು ಬಿಡೆ ಬಾಣ | ವೃಷ್ಟಿ ಗೈಯುತ ದಿಗ್ಬಂಧನದೀ ||
ದಿಟ್ಟತನದಿ ನಿನ್ನ ತರಳನುಳಿಸದಿರೆ | ಕೊಟ್ಟ ಭಾಷೆಯ ಕೇಳೆ ಪತಿಯಾ ||೧೭೯||

ಭಾಮಿನಿ

ಸುರಪಜನ ನುಡಿಗೆಂದ ವಿಪ್ರನು |
ತರುಣಿ ಕೇಳ್ ಫಲುಗುಣನು ನಿನ್ನಯ |
ತರಳನಂ ಬದುಕಿಸಲು ಶಪಥವ ದಿಟದಿ ಗೈದಿಹನೂ ||
ಸರಸಿಜಾಂಬಕಿ ಹರುಷಗೊಳುತಿರ |
ಲುರುತರದ ವೇದನೆಯ ಮೊಳಕೆಯು |
ಭರದೊಳುದ್ಭವಿಸಲ್ಕೆ ತಾ ಕಂಗೆಟ್ಟಳೇನೆಂಬೇ ||೧೮೦||

ರಾಗ ಪಂಚಗಾತಿ ಮಟ್ಟೆತಾಳ

ಅಷ್ಟರೊಳಗೆ ವಿಪ್ರ ಸುದತಿ | ಕಷ್ಟಗಳನ್ನು ನೋಡಿ ಭರದೊ |
ಳಿಷ್ಟ ಭೇಷಜಂಗಳನ್ನು | ಥಟ್ಟನೊದಗಿಸೀ ||
ಥಟ್ಟನೊದಗಿಸುತ್ತ ಪೇಳ್ದ | ದಿಟ್ಟ ಪಾರ್ಥನೆಲವೊ ತನ್ನ |
ಪುಟ್ಟ ತರುಣಿಗೀಗ ಪ್ರಸವ | ದಿಟ್ಟ ವದಗಿತೂ ||೧೮೧||

ಎಂತು ಸಹಿಪೆನಯ್ಯೊ ತಾನಿ | ನ್ನಿಂಥ ವೇದನೆಯನಬಲೆ |
ಗಿಂತು ಕುಂತದೊಳಗೆ ಕುಕ್ಷಿ | ಯಂತರಂಗಕೇ ||
ಅಂತರಂಗಕೀಗ ತಿವಿ | ದಂತೆ ಪೇಳಲರಿಯದ ದು |
ರಂತ ದುಃಖವಮ್ಮ ಜಠರ | ಜಂತು ಭೂತವೋ ||೧೮೨||

ಸುತವಿಹೀನ ಸುದತಿಯರಿಗೆ | ಗತಿಯೆ ಯಿಲ್ಲವೆನುತ ಶಾಸ್ತ್ರ |
ತತಿಯು ಪೇಳ್ವದಲ್ಲ ಮನದ | ವ್ಯಥೆಯ ಖಂಡಿಸೋ ||
ವ್ಯಥೆಯ ಖಂಡಿಸಯ್ಯೊ ಶಿವನೆ | ಮತಿವಿಮೂಢಳಾಗಿ ಯೋಗ್ಯ |
ಪಥವ ಕಾಣದಿಹೆನು ಗೌರಿ | ಪತಿಯೆ ರಕ್ಷಿಸೋ ||೧೮೩||

ಹತ್ತುಮಾಸ ಗರ್ಭವನ್ನು | ಪೊತ್ತು ತುದರದಲ್ಲಿ ದೇಹ |
ಸತ್ವ ಗುಂದಿತಾದರೀಗ | ಪುತ್ರನುದಿಸುವಾ ||
ಪುತ್ರನುದಿಪನೆಂದು ತನ್ನ | ಚಿತ್ತದೊಳಗೆ ತೋಷವಿಲ್ಲ |
ಕೃತ್ತಿವಾಸನಯ್ಯೊ ಸುತನ | ದೃಪ್ತನೊಯ್ಯುವಾ ||೧೮೪||

ಆರ ಪೇಳಲೆನುತ ಪತಿಯ | ನಾರಿಮಣಿಯು ಕರದು ಕೊರಳ |
ಬಾರಿಬಾರಿ ಪಿಡಿದು ಮುಖಕೆ | ಮೋರೆ ಚಾಚುತಾ ||
ಮೋರೆ ಚಾಚಿ ಮರುಗಿ ಪೇಳ್ದ | ಳಾ ರಮೇಶಭಾವನಿಂಗೆ |
ಭೂರಿ ಕಾಲವಿಲ್ಲವೆನುತ | ಸಾರಿ ಬನ್ನಿರೀ ||೧೮೫||

ವಲ್ಲಭೆ ಮರುಗಲಿನಿತು ಜಠರ | ವಲ್ಲಿ ಗರ್ಭ ತಿರುಗಿ ತಲೆಯ |
ಮೆಲ್ಲಮೆಲ್ಲಗಾಗ ತೋರ | ಲಲ್ಲಿ ವಿಪ್ರನೂ ||
ಇಲ್ಲಿ ವಿಪ್ರ ಭಯದಿ ನರಗೆ | ತಲ್ಲಣಿಸುತ್ತ ಪೇಳೆ ಬಿಲ್ಲಿ |
ನಲ್ಲಿ ಶರವತೊಟ್ಟು ಭವನ | ಕೆಲ್ಲ ಪಂಜರಾ ||೧೮೬||

ಪಂಜರವನು ಮಾಡಿ ಸರಳ | ಪುಂಜದಿಂದ ಗೃಹಕೆ ಸುತ್ತು |
ತಂಜದಂತೆ ಧೈರ್ಯ ಪೇಳಿ | ರಂಜಿಸುತ್ತಲೀ ||
ರಂಜಿಸುತ ಪೇಳಲಾಗ | ಮಂಜುಳಾಂಗಿ ಸುತನ ಹೆರಲು |
ಕಂಜನಾಭಭಟರು ಮಾಯ | ಪುಂಜದಿಂದಲೀ ||೧೮೭||