ಭಾಮಿನಿ
ಪಂಥದಲಿ ಶಸ್ತ್ರಾಸ್ತ್ರ ಕೋವಿದ |
ರಿಂತು ಸಮಸತ್ವದಲಿ ರಣದೊಳ |
ಗಂತರವ ತೋರಿಸದೆ ಕಾದಿದದ್ಭುತವನೇನೆಂಬೇ ||
ಅಂತರಂಗದಿ ಯುಕ್ತಿಯನು ಶ್ರೀ |
ಕಾಂತತರಳನು ಯೋಚಿಸುತಲಿ ದು |
ರಂತ ಭ್ರಾಮಕ ಶರವ ಬಿಡೆರವಿಸುತನು ಮೋಹಿಸುತಾ ||೫೫||
ಕ್ಷಣದೊಳಗೆ ಚೇತರಿಸಿ ರವಿಸುತ |
ಕನಲುತಾರ್ಭಟಿಸಲ್ಕೆ ಪಾರ್ಥನು |
ಮನಸಿಜನ ತಡವುತ್ತ ರಭಸದಿ ಕರ್ಣಗಿದಿರಾಗೀ ||
ಮಣಿಮಯದ ರಥವೇರಿ ಕೋಪದೊ |
ಳನುಪಮದ ಶೌರ್ಯವನು ತೋರಿಸು |
ತೆಣಿಕೆಯಿಲ್ಲದ ಕಣೆಯನೆಸೆವುತ ಭೋರ್ಗುಟಿಸುತೆಂದಾ ||೫೬||
ರಾಗ ಮೆಚ್ಚು ಅಷ್ಟತಾಳ
ಎಲ ಹಯಚೋರ ಕೇಳೀಗ | ನಮ್ಮ | ಜಲಜನೇತ್ರನ ವಾಜಿಯಬೇಗ ||
ಸಲ್ಲಿಸದೀರ್ದಡೆ ಕಪ್ಪ ಸಹಿತಲಿ | ನಿನ್ನ | ನಳುಕದೆ ಪುಡಿಗೈವೆ ಧುರದಲಿ ||೫೭||
ಹೆಚ್ಚು ಮಾತುಗಳೆಲ್ಲ ಸಾಕು | ಬಾಯ | ಮುಚ್ಚು ಬಿರುನುಡಿಯ ಸೊಕ್ಕು ||
ಅಚ್ಚುತನನುಜೆಯ ಕಳವಿಲಿ | ತಂದ | ತುಚ್ಛ ಚೋರ ನೀ ಜಗದಲೀ ||೫೮||
ಅರೆ ಮೂಢ ಬಿಡು ನಿನ್ನ ನುಡಿಯ | ಸ್ವಯಂ | ವರದಿ ತುಡುಕಿ ಭಾನುಮತಿಯ ||
ಕುರುನೃಪಸಹಿತ ನೀನೆಳೆಯಲು | ಬಲು | ಭರದ ಹತಿಯ ತಿಂದೆ ನೃಪರೊಳೂ ||೫೯||
ಮೂಢಾತ್ಮನಾರೆಂಬುವದನು | ಪೇಳ್ವೆ | ನೋಡೀಗ ಕುರುಭೂಪ ನಿಮ್ಮನೂ ||
ಗೂಢತನದಿ ಜತುಗೃಹದೊಳು | ದಹಿಸೆ | ಕಾಡ ಸೇರಿದಿರಾಗ ಭಯದೊಳೂ ||೬೦||
ಕಾಡ ಸೇರ್ದರು ಮುದದಲ್ಲಿ | ನೋಡು | ರೂಢಿಯಾಳ್ವೆವು ಹರಿದಯದಲ್ಲೀ ||
ಕೇಡ ಮಾಡಲು ಸೇರ್ದ ನಿನ್ನನು | ಈಗ | ಝಾಡಿಸಿಬಿಡುವೆನೆಂದೆಚ್ಚನೂ ||೬೧||
ರಾಗ ಮಾರವಿ ಏಕತಾಳ
ಇಂಥಾ ವೀರರು ಸರಿಸಮ ಯುದ್ಧದಿ | ಪಂಥದಿ ಹೊಡೆಯುತಲೀ ||
ದಂತೀಂದ್ರರ ತೆರ ಕಾದುವ ಮಧ್ಯದಿ | ಕುಂತಿಯ ಸುತ ಕನಲೀ ||೬೨||
ಪೇಳಿದನೆಲೆ ಕುರುಧೊರೆಯೊಳು ನೀ ಬಹು | ಕೂಳ ತಿನ್ನುತ ಮುದದೀ ||
ಬಾಳಿಕೊಂಡಿಹೆ ಗಜಪುರಧಾಳ್ಗೇಡಿಯೆ | ತೋಳ್ಬಲ ನೋಡ್ಭರದೀ ||೬೩||
ತಂದೆಯ ಖಾಂಡವವನವನು ದಹಿಸಿದ | ಮಂದಮತಿಯೆ ನೋಡೂ ||
ಚಂದದಿ ಗೋಪನ ವಾಜಿಯ ಪೃಷ್ಠದಿ | ಬಂದೆಯೊ ನೀ ಪೇಳೂ ||೬೪||
ಇಂದಿರೆಯಾಳ್ದನ ಸೇವೆಯು ದುರ್ಜನ | ವೃಂದಕೊಪ್ಪುದೆ ಮರುಳೇ ||
ಇಂದಿಲಿ ನೀ ನೋಡ್ ಬಹುತರ ಗರೆವುದ | ಚಂದದ ಸರಳಮಳೇ ||೬೫||
ಭಾಮಿನಿ
ಭೂತಳೇಶನೆ ಕೇಳು ನರ ರವಿ |
ಜಾತರೀರ್ವರು ರಣದೊಳುರುಶರ |
ವ್ರಾತಗಳ ಬಿಡುತಿರಲು ಪಾರ್ಥನ ಶರಕೆ ಭಾನುಜನೂ ||
ಧಾತುಗೆಟ್ಟವನಿಯೊಳಗಾ ಪುರು |
ಹೂತಕೇತುವಿನಂತೆ ಬೀಳಲ್ |
ಕಾತತುಕ್ಷಣ ರಣದಿ ಸೈನ್ಯವು ಕಂಡು ಬೆರಗಾಗೇ ||೬೬||
ರಾಗ ಶಂಕರಾಭರಣ ರೂಪಕತಾಳ
ಭೂತಳದಲಿ ಬಿದ್ದಿಹ ರವಿ | ಜಾತನು ಬೇಗೇಳುತ ತಾ |
ಚೇತರಿಸುತ ಸಮ್ಮಂತ್ರಿಸಿ | ಧಾತನ ಶರ ಬಿಡಲೂ ||೬೭||
ಆ ಶರವೇಗದಿ ಸೇನೆಯ | ನಾಶಿಸಿ ಬರುತಿರೆ ಪಾರ್ಥನು |
ರೋಷದಿ ವೈಷ್ಣವಶರದಲಿ | ಘಾತಿಸುತುಸುರಿದನೂ ||೬೮||
ರಾಧೇಯನೆ ಕರ-ಹಯಗಳ | ಕ್ರೋಧದಿ ಕೊಡದಿರೆ ನಿನ್ನನು |
ಬಾಧಿಪ ಸೌರಾಸ್ತ್ರವನೀ | ನಾದರಿಸೆನುತೆಚ್ಚಾ ||೬೯||
ನಾರಾಚವು ಶಿಡಿಲಂದದಿ | ಭೋರ್ಗುಡಿಸುತ ಬಡಿಯಲು |
ಘೋರದ ಹತಿಗಾ ರವಿಸುತ | ತೇರೊಳಗೊರಗಿದನೂ ||೭೦||
ತನಯನ ಮಮತೆಯೊಳಾ ಶರ | ತನುವನು ದಹಿಸದೆ ಬಿಡುತಿರೆ |
ಕ್ಷಣದೊಳಗೇಳುತ ಕರ್ಣನು | ಕನಲುತ ಶರ ತೊಡಲೂ ||೭೧||
ಭಾಮಿನಿ
ಅಷ್ಟರಲಿ ಪಲ್ಧ್ವನಿಯ ಗೈವುತ |
ಸಿಟ್ಟಿನಲಿ ಫಲುಗುಣನು ವೈರಿಯ |
ನಟ್ಟುವೆನು ಸುರಭವನಕೆಂದೆನುತೈಂದ್ರ ಶರ ತೊಡಲೂ ||
ದಿಟ್ಟ ಭೀಮನು ತಡೆದು ಪೇಳಿದ |
ನಿಷ್ಟವಲ್ಲಿದು ಕೊಲಲು ವೈರಿಯ |
ಕಟ್ಟಿ ಕಪ್ಪವ ತರುವೆತಾನೆಂದೆನುತ ಸಂತೈಸೀ ||೭೨||
ರಾಗ ಭೈರವಿ ಏಕತಾಳ
ಕಿಡಿಕಿಡಿಯೆನುತಲಿ ಭೀಮ | ಗದೆ | ಪಿಡಿಯುತ ಬಲು ನಿಸ್ಸೀಮಾ ||
ಕಡೆಕಾಲದ ಭವನಂತೆ | ಧುರ | ಪೊಡವಿಯು ಕಂಪಿಸುವಂತೇ ||೭೩||
ಬಂದಾಕ್ಷಣಗರ್ಜಿಸಲು | ರಿಪು | ಸಂದೋಹವು ಭಯಗೊಳಲೂ ||
ಕುಂದದೆ ರವಿಜನು ಬಂದು | ಶರ | ವೃಂದದಿ ಮುಸುಕಿದನಂದೂ ||೭೪||
ಥಟ್ಟನೆ ಪುಡಿಗೈಯುತಲಿ | ಜಗ | ಜಟ್ಟಿಯು ಭೀಮನು ಕೈಲೀ ||
ಇಷ್ಟಿಯ ಹಯ ಬಿಡದಿರಲು | ಹೊಡ | ದಟ್ಟುವೆ ನೋಡೆಂದೆನಲೂ ||೭೫||
ಭಂಡಿಯ ಅನ್ನವ ತಿಂದು | ದ್ವಿಜ | ಮಂಡಲದಲಿ ಮೆರದೆಂದೂ ||
ಕೊಂಡಾಡುವೆ ತಾನೀಗ | ಶರ | ಖಂಡಿಸದಡೆ ನೀ ಬೇಗಾ ||೭೬||
ಖಳ ಕೌರವನೊಡಗೂಡಿ | ಬಲು | ಚಳಕದಿ ನೀ ಮಾತಾಡೀ ||
ಅಳುಕದೆ ತಂದುದನೀಗ | ತಾ | ನಿಲಿಸುವೆ ಧುರದಲಿ ಬೇಗಾ ||೭೭||
ಇಂತವರುಸುರುತ ಜವದಿ | ಬಲು | ಪಂಥದಿ ಕಾದುತ ಧುರದೀ ||
ಮಂತ್ರಾಸ್ತ್ರವನೆಸೆಯುತಲಿ | ರಣ | ತಂತ್ರವ ತೋರ್ದರು ಕನಲೀ ||೭೮||
ಭಾಮಿನಿ
ರೋಷದಲಿ ರವಿಸುತನ ಬಲ ನಿ |
ಶ್ಶೇಷಿಸುತ ಪಾವನಿಯು ಸೂತನ |
ಘಾಸಿಸುತ ರಥ -ವಾಜಿಗಳ ಧನು-ಖಡ್ಗಗಳ ತರಿಯೇ ||
ಪೌಷಣಿಯು ಬಿದ್ದವನಿಯಲಿ ಜಯ |
ದಾಶೆ ತೋರದೆ ಬಳಲಿ ಕಂಗೆಡು |
ತಾ ಸುಶೀಲನು ತನ್ನೊಳಗೆ ಬಲು ಶೋಕಿಸುತಲೆಂದಾ ||೭೯||
ರಾಗ ನೀಲಾಂಬರಿ ಆದಿತಾಳ
ಕೃತ್ತಿ ವಾಸನಯ್ಯೊ ಯೆನ್ನ | ಶಕ್ತಿ ಭೀಮನೊಳಗೇ ||
ವ್ಯಕ್ತವಾಯಿತಿನಿತು ಸಹಜ | ಸತ್ವ ಗುಂದಿತಯ್ಯೋ ||೮೦||
ಸತ್ವ ಗುಂದಿತೀಗ ಭೀಮ | ಮತ್ತ ಗಜದ ತೆರದೀ ||
ನೆತ್ತಿ ಬಡಿವನಿವನ ಗೆಲುವ | ಯುಕ್ತಿ ತೋರದಿಂದೂ ||೮೧||
ಯುದ್ಧ ಮಾಡಲೆನ್ನ ಸುಸ | ನ್ನದ್ಧ ರಥವು ಧುರದೀ ||
ಸದ್ದಡಗಿ ಪೋಯಿತಿನಿತು | ಮಧ್ಯಧುರದೊಳ್ ಶಿವನೇ ||೮೨||
ಮಧ್ಯದೊಳಿವನ ಗೆಲುವ | ಹದ್ದ ಕಾಣದಾದೇ ||
ಬದ್ಧ ವೈರಿಯೊಡನೆ ನಿಲಲು | ಗುದ್ದಿ ಕೊಲುವನಲ್ಲಾ ||೮೩||
ವೀರನಾಗಿ ಕಟ್ಟಿ ಹಯವ | ಧೀರತನವ ತೊರೆದೂ ||
ನಾರಿಯಂತೆ ಮರುಗಲೆನ್ನ | ನಾರು ಕೇಳ್ವರೀಗಾ ||೮೪||
ಆರು ಕೇಳ್ವರೀಗಲೆನುತ | ಧೈರ್ಯಗೊಂಡು ಮನದೀ ||
ವೈರಿಯೊಡನೆ ಸಮರಕೊಡುವ | ಶೌರ್ಯದಿಂದಲಿನ್ನೂ ||೮೫||
ರಾಗ ಘಂಟಾರವ ಅಷ್ಟತಾಳ
ಏಳುತಾಕ್ಷಣ ರಭಸದಿ ರವಿಸುತ |
ಕಾಳಗಕೆ ನಿಲುತಾಗ ತನ್ನಯ | ತೋಳಬಲವನು ತೋರ್ದನೂ ||೮೬||
ಭುಜವನೆತ್ತುತ ರೋಷದೊಳಂಗ ಭೂ |
ಭುಜನ ಭುಜಕಿದಿರಾಗಿ ಭೀಮನು | ನಿಜ ಪರಾಕ್ರಮ ತೋರಲೂ ||೮೭||
ಚಟಚಟೆನ್ನು ದೋರ್ಘಟ್ಟನಕಗ್ನಿ |
ಚಟುಲ ಕಣೆಗಳ ತೋರ್ದರಾದುರ | ಭಟರು ರಣಮಂಡಲದೊಳು ||೮೮||
ಭಾಮಿನಿ
ಗಂಧವಹಸುತ ಸೂತತನುಜನ |
ಸಂಧಿಸಂಧಿಗೆ ಹೊಡೆಯೆ ಮುಷ್ಟಿಯೊಳ್ |
ನೊಂದು ಬಳಲಿರೆ ಪೇಳ್ದ ರವಿಸುತಗಾ ವೃಕೋದರನೂ ||
ಇಂದಿರೇಶನ ಯಜ್ಞ ಕುದುರೆಯ |
ನಿಂದು ಕರಸಹಿತೆನಗೆ ಕೊಡದಿರೆ |
ಬಂಧಿಸುತ ಕೊಂಡೊದು ಕೆಡಹುವೆ ಹರಿಯ ಚರಣದಲೀ ||೮೯||
ರಾಗ ಮುಖಾರಿ ಝಂಪೆತಾಳ
ರವಿಸುತನು ಪವನಜನ ಪವಿಸಮದ ನುಡಿ ಕೇಳು |
ತವನಿಯಲಿ ಬಿದ್ದು ಮೂರ್ಛಿಸುತಾ ||
ತವಕದಲಿ ಚೇತರಿಸಿ ಭವಣೆಯನು ನೆನೆನೆನೆವು |
ತವಧರಿಸಿ ಮನದಿ ಯೋಚಿಸುತಾ ||೯೦||
ಭೀಮನಂತಿಹ ವೀರನೀ ಮಹಿಯೊಳಗಾರು |
ನಾ ಮರುಳುತನದಿ ಧುರಗೈದೇ ||
ಸಾಮದಲಿ ಕರ ಹಯವನೀ ಮುಹೂರ್ತದಿ ಕೊಡದೆ |
ಕ್ಷೇಮ ದೊರಕದು ಸಿದ್ಧವೆನುತಾ ||೯೧||
ಶಕ್ತಿಯಲಿ ಕಾದುವಡೆ ಸತ್ವ ದೇಹದೊಳಿಲ್ಲ |
ಕ್ರತ್ವಶ್ವ ಕೊಡದಿರಲು ತನ್ನಾ ||
ದೃಪ್ತನಿವ ಬಂಧಿಸುತ ಸತ್ವರದಿ ಕೊಂಡೊವ |
ದೈತ್ಯವೈರಿಯ ಬಳಿಗೆ ದಿಟವೂ ||೯೨||
ದಂತಿಪುರ ಧೊರೆಸಹಿತ ಕುಂತಿಯಾತ್ಮಜರಿಂಗೆ |
ಪಂಥ ತೋರದೆ ಬಿಡೆನು ಮುಂದೇ ||
ಇಂತು ಯೋಚಿಸಿ ಕರ್ಣನಂತರಂಗದಿ ತಾನು |
ಸಂತಸದಿ ಭೀಮನೊಳು ಪೇಳ್ದಾ ||೯೩||
ಭಾಮಿನಿ
ವಾತಸುತ ಕೇಳೆನ್ನ ನುಡಿಗಳ |
ನೀ ತೆರದ ಧುರವೇಕೆ ನಮ್ಮೊಳು |
ಖ್ಯಾತ ಬಹುಬಲನೈಸೆ ಕಪ್ಪವ ಕೊಡುವೆ ತಾನೆನುತಾ ||
ಭೀತಿಯಲಿ ಬಹುತರದ ರತ್ನದ |
ವ್ರಾತವನು ಮಖಹಯವ ಸಹಿತಲಿ |
ಸೂತಜನು ಕೊಟ್ಟಾಗ ವಿನಯದಿ ನುಡಿದು ಪುರಕೈದಾ ||೯೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕರವ ಕೈಗೊಂಡಾಗ ಭೀಮನು | ಕರದು ಫಲುಗುಣ ಕಾಮ ಸಾತ್ಯಕಿ |
ಯರಿಗೆ ಪೇಳಿದ ನಗುತ ಕರ್ಣನ | ಧುರದ ಪರಿಯಾ ||೯೫||
ಜಯವು ನಮಗಿಂದಾಯ್ತು ಕೃಷ್ಣನ | ದಯದಿ ಮುಂದಕೆ ಬಿಡುವ ಯಾಗದ |
ಹಯವ ನೆಂದೆನುತಂಗದಿಂದಲಿ | ಪಯಣಗೈಯೇ ||೯೬||
ಭಾಮಿನಿ
ಕಂಸರಿಪುಪಾಲಿತನೆ ಕೇಳ್ ವಿಪು |
ಲಾಂಸ ಮುಂಗಥೆಯೊರೆವೆನಾ ಹಯ |
ವಂಶುಮಾಲಿಯ ತೇಜಿಯಂದದಿ ಸಾಲ್ವಪುರಕೆ ಬರೆರೆ ||
ಹಂಸಡಿಭಗಾಹ್ವಯರು ದಾನವ |
ರಂಶಜರು ತತ್ಸಮಯದಲಿ ಕುನೃ |
ಶಂಸರಿಂದೊಡಗೂಡಿ ಬರೆ ಡಿಭಗಾಖ್ಯನಿಂತೆಂದಾ ||೯೭||
ರಾಗ ಕಾಂಭೋಜಿ ಆದಿತಾಳ
ಅಗ್ರಜನಡಿಗೆರಗುತ ಡಿಬಗನು ಪೇಳ್ದ | ನಣ್ಣ ಕೇಳು || ಕಾಡೊ |
ಳುಗ್ರಮಿಗಂಗಳ ಬೇಟೆಗೈಯುವ ಯೇಳೀ | ಗಣ್ಣ ಕೇಳು ||೯೮||
ಕರಡಿ ಶರಭ ಹುಲಿ ಹರಿಣ ಹರಿಗಳನ್ನು | ತಮ್ಮ ಕೇಳು || ಅಲ್ಲಿ |
ಇರಗೊಡಿಸದೆ ಶಿತ ಶರಗಳಿಂದಟ್ಟುವ | ತಮ್ಮ ಕೇಳು ||೯೯||
ಬೇಟೆಗಾರರ ವರ ಕೂಟದಿಂದೊಡಗೂಡಿ | ಅಣ್ಣ ಕೇಳು || ಸರಿ |
ಸಾಟಿಯಿಲ್ಲದ ರೀತಿಯಾಟವನಾಡುವ | ಅಣ್ಣಕೇಳು ||೧೦೦೩||
ಭಾಮಿನಿ
ಮತ್ತೆ ಹಂಸನು ಶಬರಬಲಗಳ |
ಸತ್ವರದಿ ತಾವೆರಸಿ ಕರದೊಳು |
ಕತ್ತಿ ಬರ್ಚಿಗಳೀಟಿ ಕೋವಿ ಕಠಾರಿ ಚಾಲಗಳಾ ||
ಬಿತ್ತರಿಸಿಕೊಳುತಾಗ ಮದಿರದ |
ಮತ್ತರಾಗುವ ಪ್ರಾಣಿನಿಕರವು |
ಕತ್ತರಿಸುವಂದದಲಿ ಬೇಟೆಗೆ ಬಂದರ್ವನಕಾಗೀ ||೧೦೧||
ರಾಗ ಘಂಟಾರವ ಅಷ್ಟತಾಳ
ಬಿಲ್ಲು ಬಾಣವ ಧರಿಸಿ ಬೇಗದಿ ಧುರ |
ಮಲ್ಲ ಹಂಸನು ಬಂದನಾ ವನ | ದಲ್ಲಿ ಬೇಡರ ಬಲವ ಸಹಿತಲೀ ||೧೦೨||
ಈಟಿ ಬರ್ಚಿಯು ತೋಮರ ಮೊದಲಾದ |
ಪಾಟಕಾಯುಧಗಳನು ಧರಿಸುತ | ಬೇಟೆಯಾಟವ ಗೈದನೂ ||೧೦೩||
ಕಂಡುಕಂಡಿಹ ವನಮೃಗಗಳ ಬಹು |
ತಂಡವೆಲ್ಲವ ಸೂರೆಗೊಂಡರು | ಚಂಡಹಂಸನ ಬಲದ ಭಟರೂ ||೧೦೪||
ಕರಡಿ ಕೇಸರಿ ಕಾಡ್ಗೋಣ ಹೆಬ್ಬುಲಿ |
ಹರಿಣ ಮುಂತಾಗಿರುವ ಮೃಗಗಳ | ತರಿದು ನಿಮಿಷದೊಳಾಗ ಬಿಸುಟರು ||೧೦೫||
ಭಾಮಿನಿ
ಧರಣಿಯಧಿಪನೆ ಕೇಳು ದುರುಳರು |
ಕರುಣವಿಲ್ಲದೆ ವಿಪಿನಮೃಗಗಳ |
ತರಿದು ಶ್ರಾಂತಿಯೊಳಿರಲು ಭಕ್ತೋದ್ಧರನ ಮಖಹಯವೂ ||
ಸರಸದಲಿ ಕುಣಿದಾಡಿ ಹಂಸನ |
ಪರಿಮುಖಕೆ ರಾಘವನ ಶರದೋಲ್ |
ಬರಲದನು ತಡೆವುತ್ತ ಫಣಪಟವನ್ನು ವಾಚಿಸಿದಾ ||೧೦೬||
ರಾಗ ಕೇತಾರಗೌಳ ಝಂಪೆತಾಳ
ಇಂದುಕುಲಶರಧಿಸೋಮ | ವಸುದೇವ | ನಂದನನು ವೈರಿಭೀಮಾ ||
ಇಂದು ಶ್ರೀಕೃಷ್ಣ ಧರೆಯ | ದುಷ್ಟನೃಪ | ವೃಂದ ಭಂಗಿಸುವ ಪರಿಯಾ ||೧೦೭||
ನೆನೆವುತೊಂದಹದಿ ಹಯದ | ಯಾಗವಿಧಿ | ಯನುಕರಿಸಿ ದಿಗ್ದೇಶದಾ ||
ಜನಪರಿಕರವ ತರಲು | ವಾಜಿಯನು | ಘನತೇಜ ಬಿಟ್ಟು ಬರಲೂ ||೧೦೮||
ಈ ತುರಗ ಪಾಲಿಸುತಲಿ | ಜಗದ ವಿ | ಖ್ಯಾತರೈದಿಹರು ತೆರಳೀ ||
ಸಾತ್ಯಕಿಯು ಧೀರ ಕಾಮ | ಜಗಜಟ್ಟಿ | ವಾತಸಂಭವನು ಭೀಮಾ ||೧೦೯||
ದಿಟ್ಟರಿದ ನೋಡಿ ನೃಪರು | ವಾಜಿಯನು | ಕಟ್ಟಿ ಧುರಗೈವುದವರೂ ||
ಕೊಟ್ಟು ನಮಿಪುದು ಕಪ್ಪವ | ಹೇಡಿಗಳು | ಧೃಷ್ಟ ಭೀಮನ ಪಾದವಾ ||೧೧೦||
ಭಾಮಿನಿ
ಬದ್ಧ ಪತ್ರವ ನೋಡುತಾ ಕ್ಷಣ |
ಕ್ರುದ್ಧರಾಗುತ ಹಂಸಡಿಭಗರು |
ಶುದ್ಧ ಗೋವಳ ಕೃಷ್ಣ ನಮ್ಮಿದಿರೆಂತು ಮಖಗೈವಾ ||
ಬುದ್ಧಿ ಕಲಿಸುವೆನೆನುತ ಹರಿಯೊಳು |
ವೃದ್ಧವೈರರು ಬಿಗಿದು ಹಯವನು |
ಯುದ್ಧಸನ್ನಹಗೈದು ಮಧುಕೈಟಭರ ತೆರ ಬರಲೂ ||೧೧೧||
ಕಂದ
ಅತ್ತಲು ಭೀಮಾದ್ಯರು ಸವ |
ಸಪ್ತಿಯನೊದಿಹ ಕಡು ದುರುಳರನೀಕ್ಷಿಸುತಂ ||
ಸತ್ವದೊಳಿರುಹುತ ಚಾಪವ |
ಸುತ್ತಲು ಕೋಪಿಸಿ ಕಾಡ್ಗಿಚ್ಚಂತೆ ಮುಸುಕುತಂ ||೧೧೨||
ಭಾಮಿನಿ
ವೀರವರರೀ ತೆರದ ಶರಮಳೆ |
ಬೀರುತಲಿ ಮುಂಬರಿದು ಬರೆ ಧುರ |
ಧೀರ ಪಾರ್ಥನು ತಡೆದು ಧನುಝೇಂಕರಿಸಿ ಸಮ್ಮುಖದೀ ||
ಆರು ನಮ್ಮಯ ಹರಿಯ ಮಖಹಯ |
ಚೋರನಭಿಮುಖನಾಗಲೆನ್ನುತ |
ಘೋರ ಲಯಭೈರವನ ತೆರದಲಿ ನಿಲ್ಲಲತಿಬಲನೂ ||೧೧೩||
ರಾಗ ಶಂಕರಾಭರಣ ಮಟ್ಟೆತಾಳ
ವೈರಿನುಡಿಯ ಕೇಳಿ ಡಿಭಗ | ನಾರುಭಟಿಸುತಾ ||
ಭೂರಿ ಸರಳನೆಸೆದು ಪೇಳ್ದ | ನಾರದೆನ್ನುತಾ ||೧೧೪||
ಧೀರ ನಿನ್ನ ಹಯವ ಬಿಗಿದ | ವೀರ ನಾನೆಲಾ ||
ಶೂರನಾದಡೀಗ ಸತ್ವ | ತೋರಿ ಬಿಡಿಸೆಲಾ ||೧೧೫||
ಮಾರಪಿತನ ಸಖನು ಖ್ಯಾತ | ಮೂರು ಲೋಕದೀ ||
ವೀರ ಪಾರ್ಥನೆನುವರೆಲ್ಲ | ಪೋರ ನಿಮಿಷದೀ ||೧೧೬||
ವಾರಿಜಾಕ್ಷನಧ್ವರಾಶ್ವ | ವೀ ರಣಾಗ್ರದೀ ||
ಸಾರ ಸರಳಿನಿಂದ ಸೆಳೆವೆ | ಕ್ರೂರ ಸತ್ವದೀ ||೧೧೭||
ಕೇಳಿಬಲ್ಲೆ ಯಶವ ಗೋ | ಪಾಲ ಸೇವೆಯಾ ||
ಹಾಲಿ ಮಾಳ್ಪ ಪಾರ್ಥನೆಂದು | ಬಾಲಿಶಾಶಯಾ ||೧೧೮||
ನೀಲಕಂಠ ಬರಲು ಹಯವ | ಕಾಳಗಾಗ್ರದೀ ||
ಘಾಳಿ ಸೋಕಬಿಡೆನು ತನ್ನ | ತೋಳ ಸತ್ವದೀ ||೧೧೯||
ಖೂಳ ನಿನ್ನ ಗೆಲುವದೇಕೆ | ಶೂಲಪಾಣಿಯೂ ||
ಕೀಲು ಮುರಿಯಲೇಕೆ ಪರಶು | ಚಾಲಬಯಕೆಯೂ ||೧೨೦||
ಮಾಲಲಾಮವೈರಿ ನಿನ್ನ | ಸೀಳಿ ಶರದಲೀ ||
ಬಾಲಭಾವ ತೋರ್ಪೆನೆನುತ | ಲೆಚ್ಚ ರಣದಲೀ ||೧೨೧||
ಭಾಮಿನಿ
ಅಚ್ಚುತನ ಶಾಲಕನು ತಾನಿಂ |
ತಚ್ಚರದ ಧುರ ತೋರಿ ಶೌರ್ಯದಿ |
ಬೆಚ್ಚದಾ ಖಳನೇರ್ದ ರಥ ಹಯ ಸೂತ ಚಾಪಗಳಾ ||
ವೆಚ್ಚಗೈಯಲು ಮಗುಳೆ ಯುದ್ಧವ |
ನಿಚ್ಛಿಸುತಲಸಿ ತಿರುಹಿ ಮುಂಬಹ |
ತುಚ್ಛ ಡಿಭಗನ ಕ್ಷಣದಿ ಪಾರ್ಥನು ಬಡಿದು ಮೂರ್ಛಿಸಲೂ ||೧೨೨||
ಸೋದರನು ಧುರನೆಲದಿ ಬಿದ್ದಿಹು |
ದಾ ದುರಾತ್ಮಕ ಹಂಸ ಕಾಣುತ |
ಕ್ರೋಧದಲಿ ಧನು ಶರವಗೊಂಡಿದಿರಾಗಲರ್ಜುನಗೇ ||
ಭೇದಿಸುವೆನೀ ದುರುಳನೆಂದೆನು |
ತಾ ಧನಂಜಯನನ್ನು ತಡೆವುತ |
ಮೇದಿನಿಯ ಕಂಪಿಸುತ ಹಾಯ್ದ ಪ್ರಕಂಪನಾತ್ಮಜನೂ ||೧೨೩||
Leave A Comment