ರಾಗ ಮೆಚ್ಚು ಅಷ್ಟತಾಳ
ದುಷ್ಟ ಬಾರ್ಹದ್ರಥ ನಿನ್ನಯ | ಬಾಣ | ವೃಷ್ಟಿಯ ಪುಡಿಗೈದೆ ನಮ್ಮಯ ||
ವಿಷ್ಟಪೇಶನ ಮಖಹಯವನು | ನೀನು | ಬಿಟ್ಟು ವಂದಿಸೆ ಕೈಯ ತಡೆವೆನು ||೧೩೯||
ಧುರ್ತ ಸಾತ್ಯಕಿ ಕೇಳು ಧುರದೊಳು | ದುಷ್ಟ | ವಾರ್ತೆಯುಚಿತ ಯಾದವರೊಳು ||
ಮಾರ್ತಾಂಡನಿಭರಿರಲ್ ನಾವು | ಕೀಟ | ಸಾರ್ಥದತೆರ ನಿಮ್ಮ ಶೌರ್ಯವೂ ||೧೪೦||
ಹುಚ್ಚರಂದದಿ ಯದುವರರನು | ನೀನು | ತುಚ್ಛಿಸಬೇಡ ಬಲಭದ್ರನೂ ||
ಅಚ್ಛ ಲಾಂಗಲದಿಂದ ಬಡಿಯಲು | ಬಲು | ಬೆಚ್ಚು ತೋಡಿದೆ ಮಧುಪುರಿಯೊಳೂ ||೧೪೧||
ಹೆಚ್ಚು ಪೌರುಷವೆಲ್ಲ ಬೇಡ | ಮೂಢ | ಮುಚ್ಚು ಬಾಯನು ತನ್ನ ಗಾಢಾ ||
ಸ್ವಚ್ಛ ಕೂರ್ಗಣೆ ಸಹಿಸೆನುತಲಿ | ಪೇಳು | ತೆಚ್ಚನು ಶರವ ಸಂಗರದಲ್ಲೀ ||೧೪೨||
ಭಾಮಿನಿ
ಉರುತರಾಸ್ತ್ರದಿ ಕಾದುತಲಿ ಶಿನಿ |
ತರಳ ಬಾರ್ಹದ್ರಥನ ರಭಸದ |
ಶರದಿ ಮೈಮರೆತುದನು ಕಾಣುತ ಪಾರ್ಥ ಹರಿಸುತರೂ ||
ಕರದಿ ಚಾಪವಗೊಂಡು ಬಹುತರ |
ಸರಳವೃಷ್ಟಿಯ ಗೈಯೆ ದಿಕ್ತಟ |
ಜರಿದು ಬೀಳ್ವಂತೆಲ್ಲ ಭಯಗೊಳಲಾಗ ಮಾರುತಿಯೂ ||೧೪೩||
ತಡೆದು ಮದನಾರ್ಜುನರ ಭೀಮನು |
ನುಡಿದನಿವನೊಳು ನಿಲಲು ನೀವುಗಳ್ |
ಜಡಜನಾಭನ ಸವಕೆ ಕಾಲಾತ್ಯಯವು ದೊರಕುವದೂ ||
ಕಡುವಿರೋಧಿಯ ತಾನು ನಿಮಿಷದಿ |
ಬಡಿದು ಕಪ್ಪವ ತರುವೆನೆಂದವ |
ರಡಿಯನಡ್ಡೈಸುತಲಿ ಕಲ್ಪದ ಸಿಡಿಲುಧ್ವನಿಯಿಂದಾ ||೧೪೪||
ರಾಗ ಶಂಕರಾಭರಣ ಮಟ್ಟೆತಾಳ
ಬಂದು ರಭಸದಿಂದ ಬಾರ್ಹದ್ರಥನನಿದಿರಲಿ |
ನಿಂದು ಗದೆಯ ತಿರುಹುತೆಂದ ಭೀಮ ಧುರದಲೀ ||
ಇಂದಿರೇಶನಧ್ವರಾಶ್ವವನ್ನು ಬಿಡದಿರೆ |
ಬಂದಿಸೀಗಲೊವೆ ನಿನ್ನ ಧುರದಿ ತಾ ಖರೇ ||೧೪೫||
ಶಂಭುಭಕ್ತನಹೆನು ತಾನೀಗ ಯುದ್ಧದಿ |
ಜಂಭಭೇದಿ ಬರಲು ಗೆಲುವೆ ನಿಜವು ನಿಮಿಷದೀ ||
ಕುಂಭಿನಿಯ ಮಾನವೇಂದ್ರಗಿಂಬು ಕೊಡುವೆನೆ |
ಶಂಬರಾರಿಪಿತನ ಹಯವನಿಂದು ಬಿಡುವೆನೇ ||೧೪೬||
ಹರಿಯ ಭಕ್ತನಹೆನು ತಾನು ದುರುಳ ನೋಡೆಲು |
ಹರನ ಭಜಕ ನೀನು ನಮಗೆ ಗಣ್ಯವೇನೆಲಾ ||
ಕರವ ಸಹಿತ ಹಯವ ಬಿಡದಿರೀಗ ನಿನ್ನಯ |
ಉರವ ಬಗಿದುಬಿಡುವೆ ನೋಡು ಬಲವ ತನ್ನಯಾ ||೧೪೭||
ನಮ್ಮ ಭಯಕೆ ಬೆದರಿ ಹರಿಯು ಸಿಂಧುಮಧ್ಯದಿ |
ಸುಮ್ಮನಿರುವನವನ ಭಜಕ ಯುದ್ಧದೀ ||
ಒಮ್ಮೆಗಿಂದು ಗೆಲಿದು ಗೋಪವರನ ಧುರದಲಿ |
ಹೆಮ್ಮೆ ನೋಳ್ಪೆನವನ ಕುಟಿಲತನವ ತೋರಲೀ ||೧೪೮||
ಭಂಡನೆಲವೊ ಬಗುಳಬೇಡ ಶಲಭವಗ್ನಿಯ |
ಕುಂಡ ಶಮಿಸಿ ಮುಂದೆ ಪೋಪುದುಂಟೆ ನಮ್ಮಯಾ ||
ಚಂಡ ಹರಿಯು ನಿನ್ನ ನಮಿತ ಪಾಪಪುಂಜವ |
ನುಂಡಮೇಲೆ ಕೊಲಿಸಲಿಕ್ಕೆ ಯತನಗೈಯುವಾ ||೧೪೯||
ರುಂಡಮಾಲಿ ಬಿಡನು ತನ್ನನೆಂದು ಧುರದಲಿ |
ಪುಂಡಗೋಪಹರಿಯ ಪೊಗಳಬೇಡವಿಂದಿಲೀ ||
ಗಂಡುಸಾದಡೀಗಲೆನ್ನ ಹತಿಯ ಸಹಿಸೆಲ |
ದಂಡಧರನ ತೆರದೊಳಿಹೆನು ಬಲವ ನೋಡೆಲಾ ||೧೫೦||
ಪಾವಮಾನಿ ಕನಲುತೆಂದನಿಂದು ಧುರದಲಿ |
ಯಾವನೀಗ ಗೆಲುವನವನ ದೇವ ಜಗದಲೀ ||
ಸೇವ್ಯ ಸರ್ವ ಜಗಕೆ ಮಾನ್ಯನವನೆನುತ್ತಲಿ |
ಕೋವಿದಗ್ರಗಣ್ಯ ಫಣವ ಗೈವುತಿಂದಿಲೀ ||೧೫೧||
ಲಕ್ಷಭಾರ ಗದೆಯಗೊಂಡು ತಿರುಹಲಾ ಕ್ಷಣ |
ದಕ್ಷ ಭೀಮ ಹೊಡೆಯಲಾಗ ಕಿಡಿಯು ತತುಕ್ಷಣಾ ||
ರೂಕ್ಷ ವೇಗಕ್ಕೇಳಲಾಗ ಸಮದೊಳೀರ್ವರು |
ಲಕ್ಷಗೊಳ್ಳದವರು ಕ್ರಮದಿ ಕಾದುತೀರ್ದರೂ ||೧೫೨||
ಭಾಮಿನಿ
ಯುದ್ಧಭೂಮಿಯೊಳಿನಿತು ರಣವನು |
ಬದ್ಧವೈರದಿ ಗೈಯುತಿರೆ ಧುರ |
ಗದ್ದಲಕೆ ಬೊಮ್ಮಾಂಡ ನಡುಗಲು ಗದೆಯು ಪುಡಿಯಾಗೇ ||
ಉದ್ದತನು ಕಲಿಭೀಮನಾ ಕ್ಷಣ |
ಗುದ್ದುತಿರೆ ರಿಪುಸಂಧಿಸಂಧಿಗೆ |
ಸದ್ದಡಗಿ ಮಾಗಧನು ಮೂರ್ಛಿಸಿ ಬಿದ್ದನೇನೆಂಬೇ ||೧೫೩||
ರಾಗ ಶಂಕರಾಭರಣ ರೂಪಕತಾಳ
ಕ್ಷಣದಲಿ ಕಣ್ತೆರವುತ ತಾ | ರಣಕೇಳಲು ಬಲ ಗುಂದಿದೆ ||
ಮನದಲಿ ಚಿಂತೆಯ ತಾಳುತ | ಘನ ಶೋಕದೊಳೆಂದಾ ||೧೫೪||
ಶಿವಶಿವ ಹೇ ಹರ ತನ್ನಯ | ಭವಣೆಯುಯಿಂತಾಯಿತೆ ರಣ ||
ದವನಿಯೊಳೇಳದೆ ಬಿದ್ದಿಹೆ | ಭವದೇವನೆ ಸಲಹೋ ||೧೫೫||
ಕಾದಲು ದೇಹದಿ ಸತ್ವವು | ಪೋದುದು ಧುರವೇನ್ಗೈವೆನು ||
ಕ್ರೋಧದಿ ಹೆಮ್ಮಾರಿಯ ತೆರ | ಬಾಧಿಪನೀ ಭೀಮಾ ||೧೫೬||
ಕಪ್ಪವ ಕೊಡದಿರೆ ತನ್ನನು | ಒಪ್ಪಿಸುವನು ಹರಿಚರಣಕೆ ||
ಬಪ್ಪುದು ದುರ್ಯಶ ದಿನಕರ | ನಿಪ್ಪುವ ತನಕ ದಿಟಾ ||೧೫೭||
ವೈಷ್ಣವಯಾಗಕೆ ಕರವನು | ವಿಷ್ಣುವೆ ಮಾಡಲು ಕೊಡುವದು ||
ಉಷ್ಣಘೃತವ ಕುಡಿದಂದದಿ | ತೀಕ್ಷ್ಣದ ದುಃಖವಿದೂ ||೧೫೮||
ಶಿಟ್ಟಿಲಿ ಭೀಮಾರ್ಜೂನರರಿ | ರಟ್ಟೆಯ ಕಟ್ಟಲು ಬರುತಿರೆ ||
ಇಷ್ಟರ ಹಠವೇನೆನುತಲಿ | ದುಷ್ಟನು ಭೋರಿಡುತಾ ||೧೫೯||
ಭಾಮಿನಿ
ಇಂತಧಿಕ ಶೋಕದಲಿ ಮಾಗಧ |
ನಂತರಂಗದಿ ಕಳವಳಿಸುತ ದು |
ರಂತ ದುಗುಡದೊಳೆಂದ ಭೀಮಗೆ ನಮಿಸಿ ಕೊಬ್ಬಳಿದೂ ||
ಪಂಥವೇತಕೆ ರಣದಿ ಸೋತಿಹೆ |
ನಂತಕನ ತೆರ ಕೊಲದಿರೆನ್ನನು |
ಕುಂತಿಸುತ ತಾನೀವೆ ಕರ ಹಯವೆಂದುತರಿಸಿತ್ತಾ ||೧೬೦||
ರಾಗ ಸೌರಾಷ್ಟ್ರ ತ್ರಿವುಡೆತಾಳ
ರನ್ನರಾಶಿಯ ಕೊಟ್ಟು ಭೀಮನ | ಮನ್ನಿಸುತ ಸಾಷ್ಟಾಂಗ ವಂದಿಸಿ ||
ಕನ್ನೆಯರ ತೆರ ಪುರಕೆ ಪೋದನು | ಖಿನ್ನನಾಗೀ ||೧೬೧||
ಭೀಮನಾ ಕ್ಷಣ ಕಾಮಪಾರ್ಥರ | ಪ್ರೇಮದಲಿ ಕರೆದೆಂದ ಕಪ್ಪವ ||
ಶ್ರೀಮನೋಹರ ಕೊಡಿಸಿದನು ಸಂ | ಗ್ರಾಮದೊಳಗೇ ||೧೬೨||
ಮುಂದೆ ಕುದುರೆಯ ಬಿಡುವದೆಂದೆನು | ತಂದದಲಿ ಬಿಡಲಾಗ ಸತ್ವರ ||
ದಿಂದ ದೇಶಗಳನ್ನೆ ಚರಿಸುತ | ಬಂದಿತಾಗಾ ||೧೬೩||
ಭಾಮಿನಿ
ಶೃಂಗರಿಸಿ ಪೊರಟೀರ್ದ ಮಖಹಯ |
ವಂಗ ಮಾಳವ ದ್ರವಿಡ ಕುರುಕಾ |
ಳಿಂಗ ಬರ್ಬರ ಚೋಳ ಕೇರಳ ತೌಳವಾದಿಗಳಾ ||
ಹಿಂಗದತಿವೇಗದಲಿ ಚರಿಸುತ |
ತುಂಗಮಾನದೊಳೀರ್ಪ ರವಿಸುತ |
ನಂಗದೇಶವನೈದಿತೈ ಶ್ರೀಹರಿಯ ದಯದಿಂದಾ ||೧೬೪||
ಎರಡನೆಯ ಸಂಧಿ
ದ್ವಿಪದಿ
ಶ್ರೀಪತಿಯ ಪದಕೆರಗುತ ಪರೀಕ್ಷಿತನೂ |
ತಾಪಸೇಂದ್ರನೊಳೊರೆದ ನೀ ಪರಿಯೊಳವನೂ ||೧||
ಮಂಗಳಾಂಗನೆಸೆವ ತುರಂಗಮವು ಭರದೀ |
ಅಂಗದೇಶಕೆ ಬರಲು ಹಿಂಗದತಿಜವದೀ ||೨||
ಆ ದೇಶಕರಸಾರು ಮಾಧವನ ಹಯವಾ |
ಕ್ರೋಧದಲಿ ಕಟ್ಟಿದನೊ ಗೈದನೇನಿರವಾ ||೩||
ಚಂದದೊಳಗರುಹುವುದು ಮುಂದಣವ ಕಥೆಯಾ |
ಎಂದು ವಿನಯದಿ ನುಡಿದು ವಂದಿಸಲು ಮುನಿಯಾ ||೪||
ಸಾವಧಾನದಿ ಪೇಳ್ದ ದೇವರಾತನಿಗೇ |
ಭಾವಶುದ್ಧದಿ ಕೇಳು ನಾನೊರೆವೆ ನಿನಗೇ ||೫||
ಆ ತೇಜಿಯನುಸರಿಸಿ ಖ್ಯಾತರೈತರಲೂ |
ವಾತಸುತನೊಳು ಮೀನಕೇತು ವಿನಯದೊಳೂ ||೬||
ಬೆಸಗೊಂಡನೀ ಪುರದ ಪೆಸರ ಬೇಗೆನಗೇ |
ಉಸುರುವುದು ಮತ್ತದರ ವಸುಧೀಶ ನಮಗೇ ||೭||
ಸಾಮದಲಿ ಕರವಿತ್ತು ಪ್ರೇಮಗೈವವನೋ |
ಭೂಮಿಪರ ನಯದಿ ಸಂಗ್ರಾಮ ಕೊಡುವವನೋ ||೮||
ಇಂತುಸುರೆ ನಸುನಗುತ ಕುಂತಿಯಾತ್ಮಜನೂ |
ಕಂತುವಿಗೆ ಪೇಳ್ದನತಿ ಸಂತಸದೊಳದನೂ ||೯||
ಗರುಡಿಸದನದಿ ಸುರಪತರಳನತಿ ಮುದದೀ |
ಶರವಿದ್ಯ ಮಂಗಳದಿ ಮೆರೆಯೆ ಸಾಹಸದೀ ||೧೦||
ಕುರುಪತಿಯು ತಾ ಬೆಚ್ಚಿ ಬೆರಗಾಗುತಿರಲೂ |
ತರಣಿಸುತ ಸಾಹಸಿಕ ಪರಶುರಾಮರೊಳು ||೧೧||
ಕಲಿತ ವಿದ್ಯವ ತೋರೆ ಬಲುಮೆಯಲಿ ಬಂದೂ |
ಕಲಿ ಧಾರ್ತರಾಷ್ಟ್ರನವಗೊಲಿದು ಕರತಂದೂ ||೧೨||
ಶ್ವೇತವಾಹನನಿದಿರಿಗೀತ ಭಟನೆನುತಾ |
ಖ್ಯಾತ ರವಿಸುತಗಂಗಭೂತಳವನಿತ್ತಾ ||೧೩||
ರಾಧೇಯನೀಹಯವ ಕ್ರೋಧದಲಿ ಬಿಗಿದೂ |
ಕಾದದಿರ ಜಯಶಿರಿಯ ಸಾಧಿಸುವೆ ಗೆಲಿದೂ ||೧೪||
ಇಂತರುಹಿ ಹಯವ ದಿನಕಾಂತಜನ ಪುರಕೇ ||
ಹೊಂತಕಾರರು ಕಳುಹಿ ನಿಂತರನುಬಲಕೇ ||೧೫||
ವಾರ್ಧಕ
ಪೃಥ್ವಿಪತಿ ಕೇಳ್ಮಖದ ಸಪ್ತಿಯಾ ಪುರದ ಬಳಿ |
ಗರ್ತಿಯಲಿ ಬರಲು ರಾವುತ್ತರಾಕ್ಷಣ ಕಾಣು |
ತೆತ್ತಣದ ಹಯವೆಂದು ಚಿತ್ತದಲಿ ಭ್ರಮೆಗೊಂಡು ಹತ್ತಿರದಿ ನೋಡುತದನೂ ||
ಸತ್ವರದಿ ಪಿಡಿದಾಗ ಮಸ್ತಕದ ಪಟ ಕಂಡು |
ಕ್ರತ್ವಶ್ವವಿದನು ಭೂಪೋತ್ತಮಗೆ ಕೊಡುವೆವೆಂ |
ದಸ್ತಿಪುರದೊರೆಯ ಸಖನಾಸ್ಥಾನಕೈತಂದರುತ್ತಮದ ಹಯ ಸಹಿತಲೀ ||೧೬||
ಕಂದ
ಇತ್ತಲು ರವಿಜಂ ವಿಭವದಿ |
ಮತ್ತೇಭದ ತೆರ ಸುಖದಿಂ ಕುಳಿತಿರಲಾಗಳ್ ||
ಸಪ್ತಿಯ ಸಹಿತಲಿ ಚರರತಿ |
ಸತ್ವರದಿಂ ಬಿನ್ನೈಸಿದರೀ ಪರಿಯವನೋಳ್ ||೧೭||
ರಾಗ ಕಾಂಭೋಜಿ ಅಷ್ಟತಾಳ
ರವಿಜಾತ ಲಾಲಿಸಯ್ಯಾ | ನಾ ಪೇಳುವ | ದವಧರಿಸುವದು ಜೀಯಾ ||
ಜವದಿ ಗೋಪುರದೆಡೆಗವಘಡಿಸುತಲಿ ಸೈಂ | ಧವವು ಬಂದುದ ಕಂಡು ಬೆರಗಾದೆವಯ್ಯಾ ||೧೭||
ಪಂಚವರ್ಣದ ವಾಜಿಯೂ | ಲಲಾಟದೊಳ್ | ಮಿಂಚಿಪ ಪೊನ್ನೋಲೆಯೂ ||
ಸಂಚರಿಸುತ ಬರಲದನು ತಂದಿಹೆವು ಪ್ರ | ಪಂಚದೊಳ್ ಕಾಣೆವೀ ತೆರದ ವಾಜಿಯ ನಾವೂ ||೧೮||
ಅಂಬರ ಧರೆಗೆ ಸರೀ | ಯಾಗಿಹ ರಥ | ತುಂಬಿದ ಭಟರು ಧೊರೀ ||
ಬೆಂಬಿಡದು ವಾಜಿಯ ಬಂದವೀರರ ಸಂ | ರಂಭವ ಕಾಣುತ್ತ ಭಯದಿಂ ಬಂದೆವೂ ||೧೯||
ಭಾಮಿನಿ
ಭೂರಮಣ ಕೇಳಾಗ ಕರ್ಣನು |
ಚಾರಕರ ನುಡಿ ಕೇಳಿ ಬಾಯೊಳ |
ಗಾರುಭಟಿಸುತಲೆಂದ ಮೂರ್ಜಗ ನಡುಗುವಂದದಲೀ ||
ಸೂರೆ ಪೋದುದೆ ತುರಗಮೇಧವು |
ಶೂರ ಮಣಿಮಯಮಕುಟ ತಾನಿರ |
ಲಾರು ಗೈಯುವರೆಂದು ಹಯಶಿರಲೇಖ ವಾಚಿಸಿದಾ ||೨೦||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸೋಮವಂಶಲಲಾಮ ರಿಪುಕುಲ | ಭೀಮ ವಸುದೇವಾತ್ಮಜನು ನಿ ||
ಸ್ಸೀಮ ಗುಣಸಂಪನ್ನ ಕೃಷ್ಣನು | ದ್ದಾಮಬಲನೂ ||೨೧||
ದ್ವಾರಕಾಪುರದಲ್ಲಿ ತನ್ನಯ | ಶೌರ್ಯ ತೋರ್ಪುದಕೊಂದು ದಿನದೊಳ ||
ಗಾರು ಗೈಯದ ವಾಜಿಮೇಧವ | ಧೀರತನದೀ ||೨೨||
ಮಾಡಲೋಸುಗ ಮುದದಿ ಹರಿ ತಾ | ಗಾಢ ದೀಕ್ಷೆಯಗೊಂಡು ಕುದುರೆಯ ||
ರೂಢಿಯಲಿ ಸಂಚರಿಸೆ ಬಿಟ್ಟಿಹೆ | ನೋಡುತಿದನೂ ||೨೩||
ಘನಬಲಾಢ್ಯರು ಯಯುವ ಬಂಧಿಸಿ | ಶೆಣಸುವದು ಸಾಹಸದಿ ಧುರದಲಿ ||
ರಣಪರಾಕ್ರಮಿ ಭೀಮ-ನರ-ಹರಿ | ತನಯರೊಡನೇ ||೨೪||
ಹೇಡಿಗಳು ಬಂಧಿಸದೆ ಕುದುರೆಯ | ನೀಡುವದು ಕಪ್ಪವನು ತಪ್ಪದೆ ||
ಮಾಡಿ ಪವಮಾನಜಗೆ ನಮನವ | ಕೂಡಿ ಬಹದೂ ||೨೫||
ಭಾಮಿನಿ
ಇನಿತು ನೋಡುತ ವಾಚಕವ ರವಿ |
ತನಯ ಕಲ್ಪದ ಧೂರ್ಜಟಿಗೆ ಮಿಗಿ |
ಲೆನಿಸಿ ಭೂಮಂಡಲವು ನಡುಗುವ ಧ್ವನಿಯೊಳಿಂತೆಂದಾ ||
ಸನುಮತವೆ ಭೂಭುಜರಿಗೀ ನುಡಿ |
ಘನಮದಾಂಧರು ಯಾದವರು ಖರೆ |
ಬಿನುಗು ಮಾತಂತಿರಲಿ ತೋರ್ಪೆನು ಧುರದೊಳುತ್ತರವಾ ||೩೬||
ಕಂದ
ಎಂದಾಕ್ಷಣ ಬೇಗದಿ ಹಯ |
ಬಂಧಿಸಲಿಂದೆನುತಾಜ್ಞಾಪಿಸಿ ರವಿಜಾತಂ ||
ಬಂದನು ರಿಪುಗಳ ತಾಣಕೆ |
ಚಂದದಿ ತನ್ನಯ ತಮ್ಮ ವಿಕರ್ಣನ ಸಹಿತಂ ||೨೭||
ಭಾಮಿನಿ
ಸೂತಜನು ರಣಕೆಂದು ಬರೆ ಸುರ |
ನಾಥಜಾತನು ಶೌರ್ಯದಲಿ ಕಂ |
ಡಾತತುಕ್ಷಣ ಪೊರಡೆ ಕಾಣುತಲೆಂದ ಸಾತ್ಯಕಿಯೂ ||
ಖ್ಯಾತನೆನಗಪ್ಪಣೆಯನೀಯುವ |
ದೀತನನು ಜಂಬುಕವ ಕೇಸರಿ |
ಘಾತಿಸುವ ವೋಲ್ ಬಡಿವೆನೆನೆ ನರನಿತ್ತನಾಜ್ಞೆಯನೂ ||೨೮||
ರಾಗ ಶಂಕರಾಭರಣ, ರೂಪಕತಾಳ
ಕರ್ಣನರಿಯ ಬರವ ಕಂಡು | ಸ್ವರ್ಣರಥವನೇರಿ ಬರೆ ವಿ ||
ಕರ್ಣ ನೋಡುತೆಂದ ನಮಿಸಿ | ತೂರ್ಣದಿಂದಲೀ ||೨೯||
ಅಣ್ಣ ಕೇಳು ಧುರಕೆ ಮು | ಕ್ಕಣ್ಣ ಬರಲು ಬಿಡೆನು ತಾನು ||
ತನ್ನ ಕಳುಹುದುಚಿತವಿನಿತು | ಸಣ್ಣ ಕೆಲಸಕೇ ||೩೦||
ಪ್ರಣಯದಿಂದಲನುಜಗ | ಪ್ಪಣೆಯನಿತ್ತು ಕಳುಹಲಾಗ ||
ಶಿನಿಯತನಯನಿದಿರು ಬಂದು | ಕಣೆಯನೆಸೆದನೂ ||೩೧||
ಚಾಪ ಪಿಡಿದು ಸಾತ್ಯಕಿಯು | ಕೋಪಗೊಳ್ಳುತಾಗಲರಿಗೆ ||
ತಾಪ ಗೈಯುವಂತೆ ಶರಪ್ರ | ತಾಪತೋರಲೂ ||೩೨||
ಸರಳಿನುರಿಗೆ ಭ್ರಮಿಸಿ ಪೇಳ್ದ | ಧುರದಿ ತುರಗದಾಶೆಗಾಗಿ ||
ಹರಣಕಾಣಿಕೇಯನೀವ | ದುರುಳ ನಿಲ್ಲೆಲಾ ||೩೩||
ನಾವು ದುರುಳರಲ್ಲಪೋರ | ದೇವ ಹರಿಯ ಹಯವ ದುಷ್ಟ ||
ಭಾವದಿಂದ ಕಟ್ಟಿದಧಮ | ನಾವನುಸುರೆಲಾ ||೩೪||
ಇನಿತು ನುಡಿದು ರಭಸದಿಂದ | ಶೆಣಸುತಾಗ ಧುರದಿ ಮಂತ್ರ ||
ಕಣೆಯ ಬಿಡುತ ತೋರ್ದರಮಿತ | ರಣದ ಚೋದ್ಯವಾ ||೩೫||
ಭಾಮಿನಿ
ತುಂಗವಿಕ್ರಮರಿನಿತು ತಾವ್ ರಣ |
ರಂಗದೊಳಗನ್ಯೋನ್ಯ ಬಹುಪರಿ |
ಭಂಗಿಸುತ ಸಾತ್ಯಕಿ ವಿಕರ್ಣನ ಧುರದಿ ಮೂರ್ಛಿಸಲೂ ||
ಅಂಗಭೂಭುಜ ಕಾಣುತಾಕ್ಷಣ |
ಕಂಗಳಲಿ ಕಿಡಿಗೆದರಿ ಜಗವನು |
ನುಂಗುವಂದದಿ ಸರಳ ಮಳೆಗರೆದೆಂದ ಶಿನಿಸುತಗೇ ||೩೬||
ರಾಗ ನೀಲಾಂಬರಿ, ಅಷ್ಟತಾಳ
ತೋರು ತೋರೆಲೊ ಸಾಹಸ | ನಮ್ಮನುಜನ | ಗಾರುಗೆಡಿಸಿದ ತೋಷಾ ||
ಈ ರಣಾಗ್ರದಿ ನಿನ್ನನಾರು ಕಾಯುವರತ್ತ | ಸಾರು ಮೂರ್ಖನೆ ನಿಲ್ಲದೇ ||೩೭||
ಮೂರ್ಖ ನಾನಲ್ಲ ಕೇಳು | ಕೌರವರೊಳು | ಮೂರ್ಕಾಲ ಬೋಧೆಯೊಳೂ ||
ಆರ್ಕಿಯೆ ಪಾರ್ಥರೊಳು ವಿಗಡ ಸಂಜನಿಸುತ್ತ | ಕಾರ್ಕಶ್ಯ ತೋರ್ಪೆ ಖಳಾ ||೩೮||
ಖಳನೆಂದು ಪೇಳದಿರು | ನಮ್ಮಯ ಕೊಳು | ಗುಳದಲ್ಲಿ ಶೌರ್ಯ ತೋರೋ ||
ಬಿಲದಿ ಮೆರೆವ ಸರ್ಪನಿಗೆ ಖಗರಾಯನೊಳ್ | ಕಲಹದಂತಾಯ್ತು ಮರುಳೇ ||೩೯||
ಮರುಳಾನಾರಯ್ಯ ನೋಡೊ | ನಮ್ಮಯ ಮಖ | ತುರಗ ಬಿಡುತ ಮಾತಾಡೋ ||
ಗರುಡವಾಹನ ದ್ರೋಹ | ಕೊಳಗಾಗಿ ಕೆಡದಿರೆಂ | ದರುಹುತೆಚ್ಚನು ಶರವಾ ||೪೦||
ಬಂದ ಶರವ ಖಂಡಿಸಿ | ಭಾಸ್ಕರಜಾತ | ನೆಂದ ತಾ ಬಲು ಕೋಪಿಸೀ ||
ಇಂದಿನ ಧುರದಲ್ಲಿ | ದ್ರೋಹದ ಪರಿ ಶರ | ವೃಂದದಿ ತೋರ್ಪೆ ನಿಲ್ಲೋ ||೪೧||
ಭಾಮಿನಿ
ಹಟದೊಳಿನಿತಾ ವೀರವರರತಿ |
ಕಠಿಣ ಶರಗಳ ಬಿಡಲು ರಭಸದೊಳ್ |
ಚಟಚಟೆಂಬುವ ರವಕೆ ಧೀರರ ಕಟಕ ಭಯಗೊಳಲೂ ||
ಭಟಕುಲಾಗ್ರಣಿ ಕರ್ಣ ಬಿಟ್ಟಿಹ |
ಕುಟಿಲ ವಿಶಿಖಾಹತಿಗೆ ಸಾತ್ಯಕಿ |
ಪಟುತನವ ಬಿಟ್ಟಾಗ ಭ್ರಮಣೆಯಗೊಂಡು ಪಿಂತಿರುಗೇ ||೪೨||
ರಾಗ ಶಂಕರಾಭರಣ ರೂಪಕತಾಳ
ಹರಿಯ ತನಯ ನೋಡಿ ಶಿನಿಯ | ತರಳ ರಣದಿ ಸೋತನೆನುತ ||
ಭರದಿ ರವಿಜರಂಗದಲ್ಲಿ | ಶರವ ಮುಸುಕುತಾ ||೪೩||
ಅರರೆ ಸೂತಸುತನೆ ಸಾಕು | ಧುರದಿ ಸಾತ್ಯಕಿಯ ಗೆಲಿದ ||
ಹರುಷ ಬೇಡ ವಿಶಿಖ ಪರಿಕಿ | ಸೆನ್ನ ಸಮರದಾ ||೪೪||
ಸೂತನಾದಡೇನು ಪರಶು | ರಾಮಶಿಷ್ಯನಹೆನು ತಾನು ||
ಖ್ಯಾತನಹುದು ನೀನು ಗೋವ | ಕಾವ ಗೊಲ್ಲನೂ ||೪೫||
ವಸುವ ಸಹಿತ ಮಖದಹಯವ | ನರಗೆ ಕೊಡದೆ ಪೋದಡೆಲವೊ ||
ಕುಸುಮವಿಶಿಖದೆಸುಗೆಯಿಂದ | ಲಸುವ ಹೀರುವೇ ||೪೬||
ಸೋತ ಸುದತಿಗಡಣವಲ್ಲ | ಸವಿಯ ಮಾತು ಧುರದೊಳಲ್ಲ ||
ಭೀತಿ ನಮಗೆ ರಣದೊಳಿಲ್ಲ | ನರನ ಬರಿಸೆಲಾ ||೪೭||
ವಸುಮತೀಶ ದ್ರುಪದಸುತೆಯು | ವರಿಸೆ ಪಾರ್ಥ ನಿನಗೆ ರಣದಿ ||
ಮಸೆದ ಶರವ ತೋರ್ದ ಸವಿಯ | ಮರೆತು ಕರೆವೆಯಾ ||೪೮||
ಭೂಪವರರು ಗೈವ ವಾಜಿ | ಮಖವಿದೆಂದು ತಿಳಿಯದಾದೆ ||
ಗೋಪವರರು ಮಾಡಲಿನಿತು | ಚೋದ್ಯವಾಗಿದೇ ||೪೯||
ಸಾಕು ಖೂಳ ನಿನಗಸಾಧ್ಯ | ವೆಂದು ಹರಿಗೆ ಅಸದಳವೆ ||
ನಾಕಿನಮಿತನಿಂಗೆ ನುಡಿವೆ | ದೋಷಮಾತನೂ ||೫೦||
ದ್ವೀಪಿಸದೃಶನಾಪೆನೆನುತ | ನರಿಯು ದೇಹ ದಹಿಸಿ ಬಹಳ ||
ತಾಪಪಡುವ ಪರಿಯಿದಾಯ್ತು | ಮದನ ನೋಡೆಲಾ ||೫೧||
ಕಾಕು ಧಾರ್ತರಾಷ್ಟ್ರನೆಲವೊ | ಹವಿಯ ಶುನಕಗಿತ್ತ ತೆರದಿ ||
ದುಷ್ಕುಲಜಗೆ ಕೊಟ್ಟು ರಾಜ್ಯ | ಕೆಟ್ಟ ಲೋಕದೀ ||೫೨||
ಬಾಯಬಡಿಕ ಯೇಕೆ ನುಡಿವೆ | ಸಾಯಕಂಗಳನ್ನು ತಾಳು ||
ಕಾಯ ಕಾಯ್ವ ರಾರೆನುತ್ತ | ಹೊಡೆದ ಸರಳೊಳೂ ||೫೩||
ಆ ಯದೂದ್ಭವೇಶ ಕರ್ಣರಿನಿತು ಕಾದಲಾಗ ನಭದಿ ||
ಜಾಯರೊಡನೆ ಸುರರು ಸುಮವ | ಸುರಿಸೆ ಚೋದ್ಯದೀ ||೫೪||
Leave A Comment