ಪಶುಗಳಲ್ಲಿ ಅನೇಕ ಸಾಮಾನ್ಯ ರೋಗಗಳು ದಿನನಿತ್ಯ ಕಂಡು ಬರುತ್ತವೆ. ಪ್ರತಿಯೊಂದಕ್ಕೂ ವೈದ್ಯರು ಸರಿಯಾದ ವೇಳೆಗೆ ಸಿಗದೇ ಇರಬಹುದು. ಸಿಕ್ಕರೂ ಸಹ ಚಿಕಿತ್ಸೆ ದುಬಾರಿಯಾಗಬಹುದು. ಕೆಲವು ಸಾರಿ ನಾವೇ ಚಿಕಿತ್ಸೆ ಮಾಡಿದರೆ ಇನ್ನೂ ತೊಂದರೆ ಹೆಚ್ಚಾಗಬಹುದು ಮೊದಲು ರೋಗದ ಬಗ್ಗೆ ತಿಳಿದುಕೊಂಡು ಪ್ರಥಮ ಚಿಕಿತ್ಸೆ ಕೊಡುವುದರಲ್ಲಿ ಏನೂ ತಪ್ಪು ಇಲ್ಲ. ಆದರೆ ಮುಂದಿನ ಚಿಕಿತ್ಸೆಗಾಗಿ ಪಶುವೈದ್ಯರನ್ನು ಸಂಪರ್ಕಿಸಬೇಕು.

೧. ಬಾಯಿಯಲ್ಲಿ ಜೊಲ್ಲು ಸೋರುವುದು ಮತ್ತು ಹುಣ್ಣು

ಸಾಮಾನ್ಯವಾಗಿ ಬಾಯಿಯಿಂದ ಜೊಲ್ಲು ಸುರಿಯುವುದು, ಕಾಲು ಬಾಯಿ ರೋಗ ದೊಡ್ಡರೋಗದಿಂದ ಬಳಲುತ್ತಿರುವಾಗ ಬಾಯಿಯಲ್ಲಿ ಮುಳ್ಳು, ಮೊಳೆ, ಮೇವಿನ ಸಿಬರು ಮುಂತಾದವುಗಳು ಚುಚ್ಚಿ ಇದರಿಂದ ಆದ ಹುಣ್ಣುಗಳು ಕೂಡ ಜೊಲ್ಲು ಸುರಿಸಲು ಕಾರಣ.

ಲಕ್ಷಣಗಳು

೧. ಬಾಯಿಯಿಂದ ಜೊಲ್ಲು ಸುರಿಸುವುದು.

೨. ನಾಲಿಗೆ, ವಸಡುಗಳ ಮೇಲೆ ಹುಣ್ಣಾಗಿ ಬಾಯಿಯಿಂದ ಕೆಟ್ಟ ವಾಸನೆ ಬರುವುದು.

೩. ಪ್ರಾಣಿಯು ಆಹಾರ, ನೀರನ್ನು ತೆಗೆದುಕೊಳ್ಳದೇ ಇರುವುದು.

ಚಿಕಿತ್ಸೆ

೧. ಪ್ರತಿದಿನ ಬಾಯಿಯನ್ನು ಪೋಟ್ಯಾಸಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆಯಬೇಕು.

೨. ನಾಲಿಗೆ ಮತ್ತು ವಸಡುಗಳಿಗೆ ಜೇನುತುಪ್ಪ ಗ್ಲಿಸರಿನ್ ಅಥವಾ ಬೋರೆಕ್ಸ್ ಮಿಶ್ರಣವನ್ನು ಹಚ್ಚಬೇಕು. ಪ್ರಾಣಿಗಳಿಗೆ ಸುಲಭವಾಗಿ ಜೀರ್ಣವಾಗುವ, ಮಿದುವಾದ ಅಕ್ಕಿ, ರಾಗಿ ಅಥವಾ ಗಂಜಿ, ಹಸಿರು ಮೇವು ನೀಡಬೇಕು.

೪. ಪಶುವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆ ಕೊಡಬೇಕು. 

೨. ಹೊಟ್ಟೆ ಉಬ್ಬರ

ಮುಖ್ಯವಾಗಿ ಈ ರೋಗವು ಪಶುಗಳಿಗೆ ಬೂಷ್ಟದೂಷಿತ ಮೇವು ಸೇವಿಸಿದರೆ ಅಥವಾ ನೀರು ಕುಡಿಯುವುದು ಕಡಿಮೆಯಾದಾಗ ಮತ್ತು ಅನ್ನನಾಳದಲ್ಲಿ ಏನಾದರೂ ವಸ್ತು ಸಿಕ್ಕಿಕೊಂಡಾಗ ಉಂಟಾಗುತ್ತದೆ.

ಲಕ್ಷಣಗಳು

೧. ಹೊಟ್ಟೆಯ ಎಡಭಾಗವು ಊದಿಕೊಂಡಿರುತ್ತದೆ.

೨. ಕೈಯಿಂದ ಎಡಭಾಗದ ಹೊಟ್ಟೆಯನ್ನು ತಟ್ಟಿದಾಗ ನಗಾರಿಯಂತೆ ಶಬ್ದ ಬರುತ್ತದೆ.

೩. ಆಹಾರ, ನೀರು ತೆಗೆದುಕೊಳ್ಳುವುದು ಕಡಿಮೆ  ಮಾಡುತ್ತದೆ.

೪. ಮಲಗುವುದು, ಏಳುವುದು, ಕಾಲಿನಿಂದ ಹೊಟ್ಟೆಯ ಮೇಲೆ ಹೊಡೆದುಕೊಳ್ಳುತ್ತದೆ.

೫. ಬಾಯಿಯಿಂದ ಉಸಿರಾಡುವುದು.

೬. ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ಪ್ರಥಮ ಚಿಕಿತ್ಸೆ ನೀಡದೇ ಇದ್ದರೆ ಸಾಯಲೂಬಹುದು.

ಚಿಕಿತ್ಸೆ

ಪ್ರಥಮ ಚಿಕಿತ್ಸೆಯಾಗಿ ೩೦ ಮಿ. ಲೀ. ಟರ್ಪೆಂಟೈನ್ ಎಣ್ಣೆ ಅರ್ಧ ಲೀಟರ್ ಕಡಲೆಕಾಯಿ ಎಣ್ಣೆ ಅಥವಾ ಯಾವುದೇ ಸಸ್ಯಮೂಲ ಎಣ್ಣೆಯನ್ನು ಸ್ವಲ್ಪ ಇಂಗು ಬೆರೆಸಿ, ಕುಡಿಸಬೇಕು ಮೂಗಿನೊಳಗೆ ಹೋಗದಂತೆ ಎಚ್ಚರ ವಹಿಸಬೇಕು ಅಥವಾ ಟೆಂಪಾಲ್ ಅಥವಾ ಬ್ಲೋಟೋಸ್ಪೆಲ್ ಔಷಧಿಯನ್ನು ಕುಡಿಸಬೇಕು. ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಬೇಕು.

೩. ಅಜೀರ್ಣ / ಹೊಟ್ಟೆಯಲ್ಲಿ ಆಹಾರ ಕಟ್ಟುವುದು

ಇದೂ ಸಹ ಹೊಟ್ಟೆಗೆ ಸಂಬಂದಪಟ್ಟ ತೊಂದರೆ, ಆಹಾರ ಪದಾರ್ಥಗಳು ಜೀರ್ಣವಾಗದೇ ಹೊಟ್ಟೆಯೊಳಗೆ ಕಟ್ಟಿಕೊಂಡು, ಸಗಣಿ ಹಾಕದೇ ತೊಂದರೆಯಾಗುವುದು.

ಲಕ್ಷಣಗಳು

೧. ಮೆಲುಕು ಚೀಲಕ್ಕೆ ಇರುವ ಆಕುಂಚನ ಪ್ರಸರಣ ಶಕ್ತಿ ಕಡಿಮೆಯಾಗುವುದು.

೨. ಮೇವು  ತಿನ್ನದೇ ಇರುವುದು. ಜ್ವರ ಸಹ ಬರಬಹುದು.

೩. ಹೊಟ್ಟೆಯ ಎಡಭಾಗವನ್ನು ಒತ್ತಿದರೆ ಗುಳಿ ಬೀಳುವುದು.

ಚಿಕಿತ್ಸೆ

೬೦-೧೦೦ ಗ್ರಾಂ ಮೆಗ್ನೀಸಿಯಂ ಸಲ್ಫೇಟ್ ನ ಜೊತೆ ೬೦-೧೦೦ ಗ್ರಾಂ ಹಿಮಾಲಯನ್ ಬತ್ತಿಸಾ ಸೇರಿಸಿ ತಿನ್ನಲು ಕೊಡಬೇಕು.

೪. ಭೇದಿ

ಮೆಲುಕು ಚೀಲದ ಪ್ರಾಣಿಗಳಲ್ಲಿ (Ruminants) ಸಾಮಾನ್ಯವಾಗಿ ಭೇದಿಯನ್ನು ಹಾಗೂ ಉಳಿದ ಸಾದಾ ಹೊಟ್ಟೆಯ ಪ್ರಾಣಿಗಳಲ್ಲಿ ಭೇದಿ ಮತ್ತು ವಾಂತಿ ಅಥವಾ ಎರಡನ್ನೂ ಕಾಣಬಹುದು. ಅಲ್ಲದೆ, ದೊಡ್ಡರೋಗ, ಜಂತು ಹುಳುವಿನ ಬಾಧೆ ಇದ್ದಾಗ ಸಗಣಿ ಬಹಳ ತೆಳುವಾಗಿ ಹಾಗೂ ಕೆಲವು ಬಾರಿ ದುರ್ವಾಸನೆ ಕೂಡ ಬರುತ್ತದೆ.

ಲಕ್ಷಣಗಳು

೧. ಸದಾ ವಾಂತಿ ಮತ್ತು ಭೇದಿ

೨. ಮೇವು ತಿನ್ನುವುದು ಕಡಿಮೆ ಮಾಡುತ್ತದೆ.

೩. ಹೆಚ್ಚು ನೀರಡಿಕೆಯಾಗುತ್ತದೆ.

೪. ಸಿಂಬಳದಂತಹ ಭೇದಿ, ಅಲ್ಲದೇ ಕೆಲವು ಬಾರಿ ರಕ್ತ ಮಿಶ್ರಿತ ಭೇದಿ.

೫ ಅಶಕ್ತತೆ ಅಥವಾ ನಿಶ್ಯಕ್ತಯಾಗಿ ಸಣ್ಣ ಕರುಗಳು ಸಾಯಲೂ ಬಹುದು.

ಚಿಕಿತ್ಸೆ

ಚಿಕಿತ್ಸೆಯು ಯಾವ ಕಾರಣದಿಂದ ಭೇದಿಯಾಗುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಕೆಲವು ಸಾಮಾನ್ಯ ನಿಯಮಗಳೆಂದರೆ:

೧. ಸಾಕಷ್ಟು ಪ್ರಮಾಣದ ಲವಣಯುಕ್ತ ನೀರನ್ನು  ಕೊಡಬೇಕು.

೨. ಆಹಾರ ಕಡಿಮೆ ಮಾಡಬೇಕು/ಕೊಡುವುದನ್ನು ನಿಲ್ಲಿಸಬೇಕು.

೩. ಭೇದಿಗೆ ಕೊಮೊಲಿನ್ ಪೆಕ್ಟಿನ್ ಭರಿತ ಔಷಧಿ ಕುಡಿಸಬೇಕು.

೪. ತಕ್ಷಣ ಪಶುವೈದ್ಯರನ್ನು ಸಂಪರ್ಕಿಸುವುದು ಉತ್ತಮ

೫. ಕೋರೆಹಲ್ಲು

ಅಪರೂಪ, ಆದರೂ ಕೆಲವು ದನಗಳಲ್ಲಿ ವಿಶೇಷ ಲಕ್ಷಣ ಕಂಡು ಬರಬಹುದು. ಮೇಲಿನ ದವಡೆಗಿಂತ ಕೆಳಗಿನ ದವಡೆಯ ಅಗಲ ಕಡಿಮೆ ಇರುವುದು. ಅಲ್ಲದೆ ಮೇವು ಜಗಿಯುವಾಗ ಕೆಳದವಡೆಯನ್ನು ಅಡ್ಡಡ್ಡವಾಗಿ ಚಲಿಸುವುದು.

ಲಕ್ಷಣಗಳು

೧. ಮೇವನ್ನು ಜಗಿದು ಉಂಡೆ ಮಾಡಿ ಹೊರಕ್ಕೆ ಹಾಕುವುದು.

೨. ವಸಡಿಗೆ ಗಾಯವಾಗಿ ಸ್ವಲ್ಪ ಜೊಲ್ಲು ಸುರಿಸುವುದು.

೩ ಕ್ರಮೇಣ, ಮೇವು ತಿನ್ನುವುದು ಕಡಿಮೆ ಮಾಡುವುದು.

೪ ಪ್ರಾಣಿಯು ಅಶಕ್ತತೆಯಿಂದ ಬಳಲುವುದು.

ಚಿಕಿತ್ಸೆ

೧. ಹಲ್ಲುಗಳನ್ನು ಆಸ್ಪತ್ರೆಯಲ್ಲಿ ಹಲ್ಲನ್ನು ಮಸೆಯುವ ಟೂತ್ ರ‍್ಯಾಸ್ ಪರ್ ನಿಂದ ತಿಕ್ಕುವುದು, ಚೂಪಾಗಿರುವ ಕಡೆ ಒತ್ತು ಕೊಟ್ಟು ತಿಕ್ಕಬೇಕು. ಈ ರೀತಿ ಹಲವು ಬಾರಿ ಮಾಡಬೇಕಾಗುತ್ತದೆ. ಒಂದೇ ಹಲ್ಲು ಜಾಸ್ತಿ ಉದ್ದವಾಗಿದ್ದರೆ ಮೊಲಾರ್ ಕಟ್ಟರ‍‌ನಿಂದ ಕತ್ತರಿಸಬೇಕಾಗುವುದು.

೨. ಹುಲ್ಲು ತಿನ್ನುವಾಗ ಆಗುವ ಹಲ್ಲು ನೋವಿನಿಂದ ಒಂದೆರಡು ದಿನ ಮೇವು ತಿನ್ನುವುದನ್ನು ಬಿಡಬಹುದು. ಆದುದರಿಂದ ಮೆತ್ತಗಿನ ಆಹಾರ ತಿನ್ನಲು ನೀಡಬೇಕು.

೬. ಕೆಮ್ಮುವುದು / ಡಗ್ಗುವುದು

ಶ್ವಾಸಕೋಶದಲ್ಲಿ ತೊಂದರಯಾದಾಗ ಕೆಮ್ಮುತ್ತವೆ/ ಡಗ್ಗುತ್ತವೆ. ಆದರೆ ದೇಹದ ಉಷ್ಣಾಂಶದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಚಿಕಿತ್ಸೆ

೬೦-೧೦೦ ‌ಗ್ರಾಂ ಕ್ಯಾಪ್ಟನ್ / ಕಾಫ್ ಸ್ಟೆಲ್, ಬೆಲ್ಲ ಮತ್ತು ಈರುಳ್ಳಿಯೊಂದಿಗೆ ಮಿಶ್ರಣ ಮಾಡಿ (ಉಂಡೆ) ತಿನ್ನಿಸಬೇಕು.

೭. ಮೂಗೇರಿ/ಮೂಗು ಹುಣ್ಣು/ ಸೊರಕು

ರಕ್ತದಲ್ಲಿ ಸೇರಿಕೊಂಡ ಟ್ರಿಪೆನೊಸೊಮಾ ಜಂತಿನ ಬಾಧೆಯಿಂದ ಮೂಗಿನ ಹೊಳ್ಳೆಗಳಲ್ಲಿ ಸಣ್ಣ ಸಣ್ಣ ಗಡ್ಡೆಯಂತಾಗಿ ರಾಸುಗಳ ಉಸಿರಾಟದಲ್ಲಿ ತೊಂದರೆಯಾಗಿ ಕೆಲಸ ಮಾಡುವ ಎತ್ತುಗಳಿಂದ ಸಮರ್ಪಕವಾಗಿ ಕೆಲಸ ನಿರ್ವಹಿಸಲಾಗುವುದಿಲ್ಲ.

ಚಿಕಿತ್ಸೆ

ಪ್ರಥಮೋಪಚಾರವಾಗಿ ಕಾಪರ್ ಸಲ್ಫೇಟ್ (ಮೈಲುತುತ್ತ) ಅನ್ನು ಮೂಗಿನ ಹೊಳ್ಳೆಗಳಲ್ಲಿ ಹಾಕಿ ತಿಕ್ಕಬೇಕು. ಪಶುವೈದ್ಯರಿಂದ ಚಿಕಿತ್ಸೆ ಮಾಡಿಸಬೇಕು. ಒಂದೇ ಪಾತ್ರೆಯಲ್ಲಿ ಎಲ್ಲಾ ರಾಸುಗಳಿಗೂ ನೀರು ಕುಡಿಸುವುದರಿಂದ ಹಾಗೂ ಕೆರೆ, ಹೊಂಡಗಳಲ್ಲಿನ ಕಲ್ಮಶ ನೀರನ್ನು ಕುಡಿಸುವುದರಿಂದ ಒಂದು ಪ್ರಾಣಿಯಿಂದ ಇನ್ನೋಂದು ಪ್ರಾಣಿಗೆ ಈ ರೋಗ ಹರಡುತ್ತದೆ. 

೮. ಕೊಂಬು ಮುರಿಯುವುದು

ಬೇರೆ ರಾಸುಗಳ ಜೊತೆ ಜಗಳವಾಡುವುದರಿಂದ ಅಥವಾ ಕೋಡಿಗೆ ಏಟು / ಪೆಟ್ಟು ಬಿದ್ದ ಕಾರಣ ಕೊಂಬು/ಕೋಡು ಮುರಿದುಹೋಗಬಹುದು. ಎಷ್ಟೋ ವೇಳೆ ಕೋಡಿನ ಒಳಭಾಗ ಸರಿಯಾಗಿ ಇದ್ದು, ಕವಚ ಮಾತ್ರ ಕಿತ್ತು ಬಂದಿರುತ್ತದೆ. ಇಂತಹ ಸಮಯದಲ್ಲಿ ಕೋಡಿಗೆ ಏಟು ಬೀಳದ ಹಾಗೆ ನೋಡಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಒಳಗಿನ ಭಾಗ ಮುರಿದು ರಕ್ತಸ್ರಾವ ಆಗಬಹುದು.

ಚಿಕಿತ್ಸೆ: ಈ ಸಮಯದಲ್ಲಿ ಪೋಟ್ಯಾಸಿಯಂ ಪರ್ಮಾಂಗನೇಟ್‌ನಿಂದ ತೊಳೆದ ಟಿಂಕ್ಚರ್ ಬೆಂಜೋಯಿಮ್ ದ್ರಾವಣ ಅದ್ದಿದ ಹತ್ತಿಯಿಂದ ಸುತ್ತಿ ಬಟ್ಟೆ ಕಟ್ಟಬೇಕು. ಈ ರೀತಿ ಪ್ರತಿದಿನ ಗಾಯ ಮಾಯವವರೆಗೆ ಮಾಡಬೇಕು.

೯. ಕಣ್ಣಂಚಿನಲ್ಲಿ ನೀರು ಅಥವಾ ಪಿಚ್ಚು ಬರುವುದು

ಕಣ್ಣಿಗೆ ಪೆಟ್ಟು ಬಿದ್ದು, ಕಸ ಅಥವಾ ಕ್ರಿಮಿಗಳು ಬಿದ್ದು, ಕಣ್ಣಿನಿಂದ ನೀರು ಬರುತ್ತದೆ ಜೊತೆಗೆ ರೆಪ್ಪೆ ಊದಿ ಬಾವು ಆಗುವುದು, ಕಣ್ಣು ಕೆಂಪಾಗುವುದು ಹಾಗೂ ಕಣ್ಣು ಮುಚ್ಚಿ ಕೊಂಡಿರುವುದು.

ಚಿಕಿತ್ಸೆ: ಬೋರಿಕ್ ಆಮ್ಲ ದ್ರಾವಣದಿಂದ ಕಣ್ಣನ್ನು ತೊಳೆಯಬೇಕು. ಅಲ್ಲದೇ ೪-೬ ಹನಿ ಮರ್ಕ್ಯೂರೋಕ್ರೋಮ್ ಹಾಕಬೇಕು. ಕಣ್ಣಿನ ಗುಡ್ಡೆ ಬಿಳಿಯಾದಲ್ಲಿ ಪಶುವೈದ್ಯರನ್ನು ಸಂಪರ್ಕಿಸಿರಿ. 

೧೦. ಹೆಗಲ ಬಾವು:

ಕತ್ತಿನ ಮೇಲೆ ಆಗುವ ಗಂಟುಗಳು/ಊತಗಳು ಎತ್ತುಗಳಿಗೆ ಕೆಲಸ ಜಾಸ್ತಿಯಾದಲ್ಲಿ ಸಣ್ಣ ಮತ್ತು ದೊಡ್ಡ ಎತ್ತರದ ಎತ್ತುಗಳನ್ನು ಜೋಡಿ ಮಾಡುವುದರಿಂದ ನೊಗ ಬಹಳ ಒರಟಾಗಿ ಚುಚ್ಚುತ್ತಿದ್ದಲ್ಲಿ ಕತ್ತಿನ ಮೇಲೆ ಬಾವು ಬರುತ್ತದೆ. ಬಾವು ಗಟ್ಟಿಯಾಗಿದ್ದು ಅದರ ಮೇಲೆ ಭಾರ ಹಾಕಬಾರದು ಹಾಗೂ ಕೆಲಸಕ್ಕೆ ಉಪಯೋಗಿಸಬಾರದು.

ಚಿಕಿತ್ಸೆ:

ಗಟ್ಟಿಯಾದ ಭಾಗಕ್ಕೆ ಮ್ಯಾಗ್ ಸಲ್ಫ (ಮೆಗ್ನೀಷಿಯಂ ಸಲ್ಫೇಟ್) ಮತ್ತು ಬಿಸಿ ನೀರಿನ ಸಹಾಯದಿಂದ ಶಾಖ ಕೊಡಬೇಕು. ಅದರ ನಂತರ ಅಯೋಡಿಕ್ಸ (ಅಯೋಡಿನ್ ಮುಲಾಮ್) ಹಚ್ಚಿ ಚೆನ್ನಾಗಿ ತಿಕ್ಕಬೇಕು. ಗಾಯವಾಗಿ ಕೀವು ಸೋರುತ್ತಿದ್ದರೆ, ಪೋಟ್ಯಾಸಿಯಂ ಪರ್ಮಾಂಗನೆಟ್ ದ್ರಾವಣದಿಂದ ಸ್ವಚ್ಛವಾಗಿ ತೊಳೆದು, ಮುಲಾಮು ಹಚ್ಚಬೇಕು, ನೋಣ ಕುಳಿತುಕೊಳ್ಳದಂತೆ ಬೆಳ್ಳುಳ್ಳಿ ಮತ್ತು ಕರ್ಪೂರದ ಎಣ್ಣೆ ಸಹ ಉಪಯೋಗಿಸಬಹುದು. ಬೇವಿನ ಎಣ್ಣೆಯನ್ನು ಸುತ್ತಲೂ ತೆಳುವಾಗಿ ಹಚ್ಚಬೇಕು. 

೧೧. ಕಿವಿಯಲ್ಲಿ ಕೀವು ಬರುವುದು/ ಸೋರುವುದು

ಕಿವಿಯನ್ನು ಚೆನ್ನಾಗಿ ಪ್ರತಿದಿನ ತೊಳೆಯದಿದ್ದರೆ, ಕಿವಿಗೆ ಪೆಟ್ಟುಬಿದ್ದು, ಒಳಭಾಗದಲ್ಲಿ ಗಾಯವಾಗಿ, ಕೀವು ಬರುತ್ತದೆ. ಇಂತಹ ಸಮಯದಲ್ಲಿ ಹೈಡ್ರೋಜನ್ ಪೆರಾಕ್ರೈಡ್ ನಿಂದ ಹತ್ತಿಯನ್ನು ಉಪಯೋಗಿಸಿ ಕಿವಿಯನ್ನು ಸ್ವಚ್ಛಗೊಳಿಸಬೇಕು. ಕಿವಿಯೊಳಗೆ ೬-೮ ಹನಿ ಮರ್ಕ್ಯೂರೋಕ್ರೋಮ್ ದ್ರಾವಣ ಹಾಕಬೇಕು. ಹುಳು ಬಿದ್ದಲ್ಲಿ ಟರ್ಪೆಂಟೈನ್ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಯದೊಳಗೆ ಇಡಬೇಕು. 

೧೨. ಉಳುವುದು /ಕುಂಟುವುದು

ಪೆಟ್ಟುಬಿದ್ದು ಅಥವಾ ಜಾರಿ ಬಿದ್ದು ಕಾಲು ಉಳುದುವುದರಿಂದ ಪ್ರಾಣಿಗಳು ಕುಂಟುತ್ತವೆ. ಇಂತಹ ಸಮಯದಲ್ಲಿ ಪೆಟ್ಟು ಬಿದ್ದ ಜಾಗಕ್ಕೆ ಟರ್ಪೆಂಟೈನ್ ಲಿನ್ ಮೆಂಟ್ ಹಚ್ಚಿ/ ಅಯೋಡಿನ್ ಮುಲಾಮು ಹಚ್ಚಿ ತಿಕ್ಕಬೇಕು. ಬೆಚ್ಚನೆ ಬಟ್ಟೆಯಿಂದ ಕಾವು ಕೊಡಬೇಕು. 

೧೩. ಹೊಕ್ಕಳ ಬಾವು

ಈ ಬಾವು ಹೆಚ್ಚಾಗಿ ಕರುಗಳ ಹೊಕ್ಕಳಲ್ಲಿ ಬರುತ್ತದೆ. ಇಂತಹ ಸಮಯದಲ್ಲಿ ಹೊ‌ಕ್ಕಳ ಬಾವು ಇನ್ನೂ ಹಣ್ಣಾಗಿರದಿದ್ದಲ್ಲಿ ಅಯೋಡಿನ್ ಮುಲಾಮು ಹಚ್ಚಿ ಬಿಸಿ ಕಾವು ಕೊಡಬೇಕು. ಕುರು ಹಣ್ಣಾದರೆ ಬಾವು ಬಿಳಿ ಮಿಶ್ರಿತ ಕೆಂಪು ಬಣ್ಣದ್ದಾಗಿರುತ್ತದೆ. ಮತ್ತು ಒಡೆದು ಕೀವು ಸೋರುತ್ತದೆ. ಮೊದಲು ಪೋಟ್ಯಾಸಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆದು ಟಿಂಚರ್ ಅಯೋಡಿನ್ ನಲ್ಲಿ ಅದ್ದಿದ ಬ್ಯಾಂಡೇಜ್ ಬಟ್ಟೆಯನ್ನು ಗಾಯದ ಒಳಗೆ ಇಡಬೇಕು. ಮರುದಿನ ತೆಗೆದು ಸ್ವಚ್ಛವಾಗಿ ತೊಳೆದು ಮುಲಾಮು ಹಚ್ಚಬೇಕು. ಪ್ರತಿದಿನ ಗಾಯ ಮಾಗುವವರೆಗೆ ಮಾಡಬೇಕು. 

೧೪. ಗಾಯಗಳು

ಗಾಯಗಳಲ್ಲಿ ಎರಡು ವಿಧ:೧) ಹೊಸಗಾಯ೨) ಹಳೆಗಾಯ

೧) ಹೊಸ ಗಾಯ: ಯಾವುದಾದರೂ ಹರಿತವಾದ ವಸ್ತುವಿನಿಂದ ಆಗ ತಾನೇ ಆದ ಗಾಯಕ್ಕೆ ಹೊಸ ಗಾಯ ಎನ್ನುತ್ತಾರೆ. ಈ ಗಾಯಕ್ಕೆ ತಕ್ಷಣ ಸರಿಯಾದ ಚಿಕಿತ್ಸೆ ಮಾಡದಿದ್ದಲ್ಲಿ. ಗಾಯ ಆಳವಿದ್ದ ಪಕ್ಷದಲ್ಲಿ ಒಳಗೆ ಹುಳುಗಳು ಸೇರಿ ಗಾಯ ಮಾಗುವುದು ಕಷ್ಟವಾಗುತ್ತದೆ.

ಚಿಕಿತ್ಸೆ :ಈ ರೀತಿಯ ಗಾಯವನ್ನು ಆಲಮ್ ಅಥವಾ ಸ್ಫಟಿಕದ ದ್ರಾವಣದಿಂದ ತೊಳೆದು ತಣ್ಣೀರು ಉಪಯೋಗಿಸುವುದು ಸೂಕ್ತ. ಅನಂತರ ಪೋಟ್ಯಾಷಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆಯಬೇಕು. ರಕ್ತ ಹರಿಯುವುದು ನಿಲ್ಲದಿದ್ದರೆ, ಟಿಂಚರ್ ಬೆಂಜೋಯಿಕ್ ನಲ್ಲಿ ಅದ್ದಿದ ಹತ್ತಿಯನ್ನು ಗಾಯಕ್ಕೆ ಒತ್ತಿ ಕೆಲಕಾಲ ಹಿಡಿಯಬೇಕು. ನಂತರ ಮುಲಾಮು ಹಚ್ಚಿ ಬ್ಯಾಂಡೇಜ್ ಕಟ್ಟಬೇಕು. ಪ್ರತಿದಿನ ಗಾಯ ತೊಳೆದು ಮುಲಾಮು ಹಚ್ಚಿದಲ್ಲಿ ಬೇಗನೆ ವಾಸಿಯಾಗುವುದು.

೨) ಹಳೆಗಾಯ:

ಗಾಯವಾಗಿ ಸ್ವಲ್ಪ ದಿನವಾಗಿದ್ದು. ಅದರಿಂದ ಕೀವು ಮತ್ತು ಕೆಟ್ಟವಾಸನೆ ಬರುತ್ತಿದ್ದಲ್ಲಿ ಅದನ್ನು ಹಳೆಯ ಗಾಯವೆಂದು ತಿಳಿದುಕೊಳ್ಳುಬೇಕು. ಅನೇಕ ಸಲ ಗಾಯದಲ್ಲಿ ನೋಣಗಳು ಕುಳಿತುಕೊಂಡು ಅವುಗಳು ಗಾಯದ ಮೇಲೆ ಇಟ್ಟ ಮೊಟ್ಟೆಯಿಂದ ಹುಳುಗಳಾಗುತ್ತವೆ. 

೧೫. ಕೆಚ್ಚಲು ಬಾವು

ಈ ಕಾಲೆಯು ಹೆಚ್ಚು ಹಾಲು ಕೊಡುವಂತಹ ಪ್ರಾಣಿಗಳಲ್ಲಿ ಕೊಡುವಂತಹ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಮೊಲೆಗಳ ಮೂಲಕ ರೋಗಾಣುಗಳು(ಕೆಸರು, ತೇವ ನೆಲ, ಸರಿಯಾಗಿ ತೊಳೆಯದ ಕೈ ಮೂಲಕ) ಒಳಸೇರಿ ಕೆಚ್ಚಲು ಊದಿಕೊಳ್ಳುತ್ತದೆ. ಜೊತೆಗೆ ಬಿಸಿಯಾದ ಕೆಚ್ಚಲು ಕೆಂಪಾಗಾಗಿ ನೋವಿನಿಂದ ಪ್ರಾಣಿ ಬಳಲುತ್ತದೆ. ತಕ್ಷಣ ಚಿಕಿತ್ಸೆ ಕೈಗೊಳ್ಳದಿದ್ದಲ್ಲಿ ಕೆಚ್ಚಲಿನ ಊತ ಹೆಚ್ಚುತ್ತದೆ. ಕೀವು, ಬರಿ ನೀರಿನ ತರಹ ತುಂಬಿಕೊಂಡು ಕೆಚ್ಚಲು ಕೆಟ್ಟು ಹೋಗುತ್ತದೆ. ಹಾಗೂ ಹಾಲು ಬರುವುದು. ನಿಂತು ಹೋಗುತ್ತದೆ.

ಬಾವು ಬಂದ ಭಾಗದಿಂದ ಹಾಲು ಕಡಿಮೆ ಬರುತ್ತದೆ ಅಥವಾ ಹಾಲು ಬರುವುದು ನಿಂತು ಹೋಗಬಹುದು. ಮೊಲೆಯನ್ನು ಮುಟ್ಟಿದಾಗ ಪ್ರಾಣಿಯು ಸಹಕರಿಸುವುದಿಲ್ಲ. ಕೆಚ್ಚಲು ಬಿಸಿಯಾಗಿ ಕೆಂಪಾಗಿ, ಗಟ್ಟಿಯಾಗಿರುತ್ತದೆ. ಊದಿಕೊಂಡಿರುವ ಭಾಗದಿಂದ ಬರುವ ಹಾಲು ರಕ್ತ ಅಥವಾ ಕೀವಿನಿಂದ ಕೂಡಿಕೊಂಡಿರುತ್ತದೆ.

ಚಿಕಿತ್ಸೆ: ಈ ರೀತಿಯಾಗಿ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಕೈಗೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ನೋಡಿಕೊಳ್ಳಬೇಕು. ಕಾಯಿಲೆ ಬಂದಿರುವ ಕೆಚ್ಚಲಿನ ಭಾಗದಿಂದ ಪೂರ್ತಿಯಾಗಿ ಹಾಲನ್ನು ಕರೆದ ನಂತರ ಆ ಭಾಗವನ್ನು ಪೋಟ್ಯಾಷಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆದು, ನಂತರ ಆ ಭಾಗಕ್ಕೆ ಅಯೋಡಿನ್ ಮುಲಾಮು ಹಚ್ಚಿ ತಿಕ್ಕಬೇಕು. ಸಾಧ್ಯವಿದ್ದರೆ ಆ ಮೊಲೆಗೆ ಪೆಂಡಿಸ್ಟ್ರೀನ್ ಮುಲಾಮನ್ನು ಹಚ್ಚಬೇಕು ತುರ್ತಾಗಿ ಪಶುವೈದ್ಯರ ಸಲಹೆ ಪಡೆಯಬೇಕು. 

೧೬. ದೇಹದ ಹೊರಗಿರುವ ಪರೋಪಜೀವಿಗಳು

ದೇಹದ ಮೇಲೆ ಇರುವ ರೋಮಗಳಲ್ಲಿ, ಉಣ್ಣೆ, ಚಿಕ್ಕಾಡು, ಹೇನು, ಇವುಗಳಿಂದ ರಾಸುಗಳಲ್ಲಿ ಹಲವಾರುರೋಗಗಳು ಹರಡುತ್ತವೆ. ಉದಾಹರಣೆ- ಉಣ್ಣೆಜ್ವರ, ಥೆಲೇರಿಯಾಸಿಸ್ ಮತ್ತು ಚರ್ಮ ರೋಗಗಳಾದ ಕಜ್ಜಿ, ತುರಿಕೆ, ಅಡಪ್ ಮುಣತಾದವುಗಳು ಬರಬಹುದು. ಈ ರೋಗಗಳು ಒಂದು ಪ್ರಾಣಿಯಿಂದ ಮತ್ತೋಂದು ಪ್ರಾಣಿಗೆ ಹರಡುತ್ತವೆ. ಈ ಹೊರ ಪರೋಪಜೀವಿಗಳು ಮುಖ್ಯವಾಗಿ ತೊಡೆಸಂದು, ಬಾಲದ ಬುಡದ ಸುತ್ತ, ಕುತ್ತಿಗೆ ಭಾಗದಲ್ಲಿ ಇರುತ್ತವೆ. ಕ್ರಮೇಣಬಾಗಿ ರಕ್ತ ಹೀರಿಕೊಳ್ಳುತ್ತಾ ಪ್ರಾಣಿಯನ್ನು ಹಿಂಸಿಸುತ್ತವೆ. ನವೆ, ತುರಿಕೆ, ಮೈತಿಕ್ಕುವುದು ಕಂಡುಬರುವುದು. ಈ ಜಾಗದಲ್ಲಿ ಚರ್ಮ ದಪ್ಪವಾಗಿ ಬಿಳಿ ಹೊಟ್ಟು ಉತ್ಪತ್ತಿಯಾಗುವುದು. ಕೂದಲು ಉದುರುವುದು, ಸಣ್ಣ ಸಣ್ಣ ಗುಳ್ಳೆಗಳಾಗಿ ರಕ್ತ ಸ್ರಾವವಾಗುವುದು.

ಚಿಕಿತ್ಸೆ:

ಪಶುವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಮಾಡಿಸಬೇಕು. ಬ್ಯೂಟಿಕ್ಸ್, ಟಿಕ್ ಟಾಕ್ ಇವುಗಳನ್ನು ಹಚ್ಚಬಹುದು. ಗಂಧಕದಿಂದ ತಯಾರಿಸಿದ ಮುಲಾಮಯ ಅಥವಾ ಹಿಮಾಕ್ಸ-ಡಿ ದ್ರಾವಣವನ್ನು ಸಹ ಉಪಯೋಗಿಸಬಹುದು.

ರಾಸುಗಳನ್ನು ಹೊರಗಡೆ ಬಿಟ್ಟು ಮೇಯಿಸಬಾರದು. ಕೊಟ್ಟಿಗೆಯನ್ನು ಪ್ರತಿನಿತ್ಯ ಕ್ರಿಮಿನಾಶಕ ಔಷಧಿಯಿಂದ ಸ್ಚಚ್ಛಗೊಳಿಸಬೇಕು. ಬಿಳಿಸುಣ್ಣ ಹಚ್ಚುವುದು, ಕೊಟ್ಟಿಗೆಯಲ್ಲಿ ಸಂದು, ಬಿರುಕು ಇರದಂತೆ ನೋಡಿಕೊಳ್ಳುವುದರಿಂದ ಈ ಪರೋಪಜೀವಿಗಳಿಂದ ಉಂಟಾಗಬಹುದಾದ ಕಾಯಿಲೆಗಳನ್ನು ತಡೆಗಟ್ಟಬಹುದು.