ಸಾಹಿತ್ಯ ಕ್ಷೇತ್ರ ಕಲುಷಿತವಾಗಿದೆ : ಎಲ್ಲೆಲ್ಲೂ ಗುಂಪುಗಾರಿಕೆ ; ನಿಜವಾದ ಮೌಲ್ಯಗಳು ಮೂಲೆ ಗುಂಪಾಗಿವೆ ; ನಿಜವಾದ ಮತ್ತು ನಿಷ್ಪಕ್ಷಪಾತವಾದ, ಮುಕ್ತ ಮನಸ್ಸಿನ ವಿಮರ್ಶೆಯೇ ಇಲ್ಲವಾಗಿದೆ-ಇತ್ಯಾದಿ ಮಾತುಗಳನ್ನು ಮತ್ತೆ ಮತ್ತೆ ಕೇಳಿದಾಗ, ಇಂಥ ಮಾತುಗಳೂ ಕ್ಲೀಷೆಗಳಾಗಿ ಬಿಟ್ಟಿವೆಯೇನೋ ಎಂದು ಅನ್ನಿಸುತ್ತದೆ. ಇಂಥ ಮಾತುಗಳನ್ನು ಆಡುವವರ ಕಳಕಳಿಯನ್ನೂ, ನೈತಿಕ ಕಾಳಜಿಗಳನ್ನೂ, ಅರ್ಥಮಾಡಿ- ಕೊಳ್ಳಬಹುದಾದರೂ, ಯಾವ ಕಾಲಗಳಲ್ಲಿ ಸಾಹಿತ್ಯ ಕ್ಷೇತ್ರ, ಈ ಎಲ್ಲವೂ ಇಲ್ಲದೆ, ಅತ್ಯಂತ ಶುದ್ಧ ಹಾಗೂ ಮೌಲ್ಯನಿಷ್ಠವಾಗಿತ್ತು ಎಂದು ಪ್ರತಿಯಾಗಿ ಪ್ರಶ್ನೆ ಹಾಕಬಹುದು. ಆದರೆ ಹಾಗೆ ಮಾಡುವುದರಿಂದ ಸಮಸ್ಯೆಯನ್ನು ಅಥವಾ ಯಥಾಸ್ಥಿತಿಯನ್ನು  ಪಕ್ಕಕ್ಕೆ ತಳ್ಳಿದಂತಾಗುತ್ತದೆ, ಅಷ್ಟೆ ; ಅದರ ಬದಲು ಇಂಥ ಮಾತುಗಳನ್ನು ಕುರಿತು ಗಂಭೀರವಾಗಿ ವಿಚಾರ ಮಾಡುವುದು ಒಳ್ಳೆಯದೆಂದು ತೋರುತ್ತದೆ.

ಸಾಹಿತ್ಯದಲ್ಲಿ ಗುಂಪುಗಾರಿಕೆ ಇದೆ ಎಂದು ಮಾತನಾಡುವವರು, ಕೆಲವು ವೇಳೆ ಮಾಡಬಹುದಾದ ತಪ್ಪೆಂದರೆ, ನಿಜವಾದ ಸಾಹಿತ್ಯಕ ಚಳುವಳಿಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಸಾಹಿತಿಗಳ ಸಂಘಟನೆಗಳನ್ನು ‘ಗುಂಪು’ಗಳೊಂದಿಗೆ ಸಮೀಕರಿಸಿ ಅವರ ಸಾಹಿತ್ಯ ಚಟುವಟಿಕೆಗಳನ್ನು ‘ಗುಂಪುಗಾರಿಕೆ’ ಎಂದು ಕರೆಯುವುದು. ನಿಜ, ಈ ಸಂಘಟನೆಗಳು ‘ಗುಂಪು’ಗಳಂತೆ ತೋರುತ್ತವೆ. ಆದರೆ ಅಷ್ಟರಿಂದಲೇ ಆ ಸಂಘಟನೆಗಳ ಚಟುವಟಿಕೆಗಳನ್ನು ಗುಂಪುಗಾರಿಕೆ ಎಂದು ಕರೆಯಬಹುದೆ ?

ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನೇ ಗಮನಿಸಿದರೆ ನಾವು ನವೋದಯ, ಪ್ರಗತಿಶೀಲ, ನವ್ಯ ಮತ್ತು ಬಂಡಾಯಗಳೆಂಬ ಸಾಹಿತ್ಯದ ಸಂಘಟನೆಗಳನ್ನು ಗುರುತಿಸಬಹುದು. ಇವುಗಳೆಲ್ಲವನ್ನೂ ಗುಂಪುಗಳೆಂದೂ, ಅವರು ಮಾಡಿದ್ದೆಲ್ಲವು ‘ಗುಂಪುಗಾರಿಕೆ’ ಎಂದೂ ಕರೆಯಬಹುದೆ ? ಹಾಗಾದರೆ ಅವುಗಳೊಳಗೆ, ಈಗ ಹಲವರು ಯಾವುದನ್ನು ‘ಗುಂಪುಗಾರಿಕೆ’ ಎಂದು ಕರೆಯುತ್ತಾರೆಯೋ, ಅದು ಅಲ್ಲಿ ಇಲ್ಲವೆ ?

ಸಾಹಿತ್ಯಕ್ಷೇತ್ರ ಸಾಹಿತಿಗಳೆಂಬ ಮನುಷ್ಯರಿಂದ ಕೂಡಿದ್ದು. ಸಾಹಿತಿಗಳೆಲ್ಲರೂ ಒಂದೇ ಥರ ಯೋಚನೆ ಮಾಡುವವರಾಗಿದ್ದು, ಒಂದೇ ಥರ ಬರೆಯುವವರಾಗಿದ್ದರೆ ಅಲ್ಲಿ ಯಾವ ತಕರಾರೂ ಹುಟ್ಟಿಕೊಳ್ಳುತ್ತಿರಲಿಲ್ಲ. ಆದರೆ ಬದುಕಿನ ಬಗ್ಗೆ ವಿವಿಧ ದೃಷ್ಟಿಕೋನಗಳನ್ನು ಉಳ್ಳ ಮತ್ತು ಅನುಭವಗಳನ್ನು ಗ್ರಹಿಸುವ ವಿಭಿನ್ನ ಮನೋ ಧರ್ಮಗಳನ್ನು ಉಳ್ಳ ಸಾಹಿತಿಗಳು, ತಮ್ಮ ತಮ್ಮ ವ್ಯಕ್ತಿ ವಿಶಿಷ್ಟತೆಯ ಕಾರಣದಿಂದಲೇ ತಮಗೆ ತಾವೇ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಹೀಗಿದ್ದರೂ, ಸಾಹಿತ್ಯದ ಬಗ್ಗೆ, ಸಾಹಿತ್ಯ ನಿರ್ಮಿತಿಯ ಬಗ್ಗೆ, ತಮ್ಮದೇ ಆದ ಕೆಲವು ಸಮಾನ ತಾತ್ವಿಕ ನೆಲೆಗಳನ್ನೂ, ಸಿದ್ಧಾಂತಗಳನ್ನೂ, ದೃಷ್ಟಿಕೋನಗಳನ್ನೂ ಉಳ್ಳ ಕೆಲವರು, ತಮಗಿಂತ ಹಿಂದಿನ ಸಾಹಿತ್ಯದಿಂದ ಭಿನ್ನವಾದ ಅಭಿವ್ಯಕ್ತಿಯನ್ನು ಆವಿಷ್ಕಾರ ಮಾಡಿಕೊಳ್ಳುವ ಕೆಲವರು,  ಸಹಜವಾಗಿಯೇ ಒಂದು ಸಂಘಟನೆಗೆ ಒಳಗಾಗುತ್ತಾರೆ. ಸಾಹಿತ್ಯದ ಸ್ವರೂಪದ ಬಗ್ಗೆ,  ಅಭಿವ್ಯಕ್ತಿಯ ಬಗ್ಗೆ ತಮ್ಮದೇ ಆದ ವಿಚಾರಗಳನ್ನು ಮಂಡಿಸುತ್ತಾರೆ, ಮತ್ತು ಹೊಸತೊಂದು ಸಾಹಿತ್ಯಾಭಿವ್ಯಕ್ತಿಯ ಸಂಭ್ರಮದಲ್ಲಿ ತಾವೆಲ್ಲರೂ ಜತೆಗೂಡುತ್ತಾರೆ.

ಇಂಥ ಸಾಹಿತ್ಯಕ ಚಳುವಳಿಗಳಲ್ಲಿ ಸಾಮಾನ್ಯವಾಗಿ ಒಂದುಗೂಡುವವರು ಬಹುಮಟ್ಟಿಗೆ ತರುಣರೇ ಆಗಿರುವ ಸಾಧ್ಯತೆಗಳಿರುವುದರಿಂದ ಮತ್ತು ಹೊಸತೊಂದು ಹಾದಿಯನ್ನು ತಾವು ತೆರೆಯುತ್ತಿದ್ದೇವೆಂಬ ಉತ್ಸಾಹ, ರಭಸ, ಆವೇಶಗಳ ಮನಃಸ್ಥಿತಿಯಲ್ಲಿ ತಾವು ಬರೆದದ್ದನ್ನು ಮತ್ತು ತಮ್ಮಂತೆ ಬರೆಯುವವರನ್ನು  ಸಮರ್ಥಿಸಿಕೊಳ್ಳುವ ಸಂದರ್ಭಗಳಲ್ಲಿ, ಎಷ್ಟೋವೇಳೆ, ತಮಗಿಂತ ಹಿಂದಿನ ಸಾಹಿತ್ಯವನ್ನೂ, ಸಾಹಿತಿಗಳನ್ನೂ ಟೀಕಿಸುವ ಅನುದಾರವಾದ ಪ್ರವೃತ್ತಿಗಳನ್ನು ಪ್ರಕಟಿಸುವುದುಂಟು. ಈ ಸ್ವಸಾಹಿತ್ಯ ಸಮರ್ಥನೆಯ ಸಂದರ್ಭದಲ್ಲಿ ಬರುವ ‘ವಿಮರ್ಶೆ’ ಒಂದು ರೀತಿಯಲ್ಲಿ ‘ಗುಂಪುಗಾರಿಕೆ’ಯಂತೆಯೂ, ಮೌಲ್ಯಗಳನ್ನು ಗಾಳಿಗೆ ತೂರುವಂಥದ್ದಾಗಿಯೂ ತೋರುವುದುಂಟು. ಆದರೆ ನಿಜವಾದ ಸೃಜನ ಸಾಮರ್ಥ್ಯ ಉಳ್ಳ ಹಾಗೂ ಮೌಲಿಕವಾದುದ್ದನ್ನು ನಿರ್ಮಿಸಬಲ್ಲ ಸಾಹಿತಿಗಳ ಸಂಘಟನೆಯ ಸಂದರ್ಭದಲ್ಲಿ, ಈ ಸಂಘಟನೆಗೆ ಸೇರಿಕೊಂಡ ಉತ್ಸಾಹೀ ಸಾಹಿತಿಗಳು ಆಡುವ ಮಾತುಗಳಲ್ಲಿ ಒಂದಷ್ಟು ರಭಸ, ಆವೇಶ, ಇತ್ಯಾದಿಗಳಿದ್ದರೂ, ಅಂಥವರ ವಿಮರ್ಶೆಯ ನಿಲುವುಗಳು ಕೇವಲ ಗುಂಪುಗಾರಿಕೆಯವಾಗಿವೆ ಎಂದು ಸಾರಾಸಗಟು ತಳ್ಳಿಹಾಕುವುದು ಸರಿಯಲ್ಲ. ಅದರ ಬದಲು, ಈ ಸಾಹಿತ್ಯಕ ಚಳುವಳಿಯಲ್ಲಿ ಇಂಥ ಎಷ್ಟೋ ಗೊಂದಲ ವಿಮರ್ಶೆಯ ಮಾತುಗಳಿದ್ದರೂ, ಅದರಾಚೆಗೂ ನಿಲ್ಲುವಂಥ ಹಾಗೂ ಸಲ್ಲುವಂಥದ್ದೇನನ್ನಾದರೂ, ಈ ಸಾಹಿತ್ಯ ಚಳುವಳಿ ಕೊಟ್ಟಿದೆಯೇ ಎಂಬುದನ್ನು ಗುರುತಿಸುವುದು ಒಳ್ಳೆಯದು. ಒಂದು ವೇಳೆ ಇವು ಸಾಹಿತ್ಯದ ಗುಂಪುಗಳೆಂದು ಯಾರಾದರೂ ಕರೆಯುವುದಾದರೆ ಈ ಗುಂಪುಗಳು ಮಾಡಿದ್ದು ಕೇವಲ  ಗುಂಪುಗಾರಿಕೆಯೇ, ಅಥವಾ ಅದನ್ನೂ ಮೀರಿದ ಮೌಲಿಕವಾದದ್ದೇನನ್ನಾದರೂ ನೀಡಿವೆಯೇ ಎಂಬುದನ್ನು ಪರಿಗಣಿಸಬೇಕಾಗಿದೆ. ಆದರೆ ತೀರಾ ಅಪಾಯಕಾರಿಯಾದದ್ದೆಂದರೆ, ದೊಡ್ಡ ದೊಡ್ಡ ತತ್ವಗಳನ್ನು ಬಾಯಲ್ಲಿ ಹೇಳುತ್ತಾ, ತಾವಲ್ಲದೆ ಉಳಿದವರೆಲ್ಲರೂ ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆಂದು ಘೋಷಿಸುತ್ತಾ, ತಾವೇ ಸಾಹಿತ್ಯರಾಜಕೀಯದಲ್ಲಿ ತೊಡಗಿರುವ ವಿಮರ್ಶಕ ನಾಮಧಾರೀ ಹುಸಿ ಸಾಹಿತಿಗಳ ಪ್ರಯತ್ನಗಳು. ಆದ್ದರಿಂದ ಕೇವಲ ವಾದಕ್ಕೆ ಗುಂಪುಗಳಿವೆ ಎನ್ನುವುದನ್ನು ಒಪ್ಪಿಕೊಂಡರೂ, ಅವು ಎರಡು ಬಗೆ ಅನ್ನಬಹುದು : ಒಂದು ‘ಸಾಹಿತ್ಯದ ಗುಂಪುಗಳು;’ ಇವು ನವ್ಯ, ಪ್ರಗತಿಶೀಲ, ಬಂಡಾಯ ಇತ್ಯಾದಿ. ಎರಡನೆಯದು ‘ಸಾಹಿತ್ಯ ರಾಜಕೀಯದ ಗುಂಪುಗಳು.’ ಇವುಗಳಲ್ಲಿ ಅರೆಬರೆ ಸಾಹಿತಿಗಳು, ಹುಸಿ ವಿಮರ್ಶಕರು, ತಮಗೆ ಸಾಧ್ಯವಾಗಬಹುದಾದ ಮಾಧ್ಯಮಗಳ ಮೂಲಕ, ಬೇಕಾದವರನ್ನು ಏರಿಸುವ, ಬೇಡವಾದವರನ್ನು ಇಳಿಸುವ ಅಥವಾ ತುಳಿಯುವ ರಾಜಕೀಯದಲ್ಲಿ ತೊಡಗಿರುತ್ತಾರೆ. ಹೀಗೆ ಮಾಡುವ ‘ರಾಜಕೀಯ ಸಾಹಿತಿ’ಗಳು, ಕೆಲವು ವೇಳೆ, ಸಾಹಿತ್ಯ ಚಳುವಳಿಯ ಗುಂಪುಗಳಲ್ಲೂ ಇರಬಹುದು ಅಥವಾ ಅದರಿಂದಾಚೆಗೂ, ನಿಷ್ಪಕ್ಷಪಾತದ ಸೋಗನ್ನು ಧರಿಸಿ ಇರಬಹುದು.  ‘ಸಾಹಿತ್ಯದ  ಗುಂಪು’ಗಳಲ್ಲಿ ರಾಜಕೀಯವೂ ಇರಬಹುದು ಅಲ್ಪಸ್ವಲ್ಪ. ಮೊದಲನೆಯದು ಸಾಹಿತ್ಯವನ್ನು ಕೇಂದ್ರದಲ್ಲಿರಿಸಿಕೊಂಡು ಚರ್ಚಿಸಿದರೆ, ಎರಡನೆಯದು, ತಮಗೆ ಬೇಕಾದ ಸಾಹಿತಿಗಳನ್ನು ಕೇಂದ್ರಲ್ಲಿರಿಸಿಕೊಂಡು ಚರ್ಚಿಸುತ್ತದೆ. ಸಾಹಿತ್ಯದಲ್ಲಿ ‘ಗುಂಪುಗಾರಿಕೆ’ ಇದೆ, ನಿಜವಾದ ವಿಮರ್ಶೆ ಬರುತ್ತಿಲ್ಲ ಇತ್ಯಾದಿ ಮಾತುಗಳನ್ನು ಎತ್ತರದ ದನಿಯಲ್ಲಿ ಹೇಳುವವರು ಬಹುವೇಳೆ ಈ ‘ಸಾಹಿತ್ಯ ರಾಜಕೀಯ ಗುಂಪಿ’ನವರೇ ಆಗಿರುವುದುಂಟು ; ಆಗ ಇವರ ಜತೆಗೆ ಹತಾಶರಾದ, ಹುಸಿ ಸಾಹಿತಿಗಳು ಸೇರುವುದುಂಟು.

ಆದರೆ ಹೀಗೆ ಮಾತನಾಡುವವರು ಗಮನಿಸಬೇಕು: ಕೇವಲ ವಿಮರ್ಶೆಯೊಂದರಿಂದಲೇ, ಯಾರ ಅಥವಾ ಯಾವ ಕೃತಿಯ ಹಣೆಯಬರಹವೂ ನಿರ್ಣೀತವಾಗುವುದಿಲ್ಲ. ತನ್ನ ಸೃಜನಕ್ರಿಯೆಯ ತೀವ್ರತೆಯಲ್ಲಿ ತಲ್ಲೀನನಾಗುವ ಯಾವ ನಿಜವಾದ ಸಾಹಿತಿಯೂ ಸಾಹಿತ್ಯ ರಾಜಕೀಯದ ಗುಂಪುಗಾರಿಕೆಯ ಬಗ್ಗೆ, ತತ್ಪರಿಣಾಮವಾದ ವಿಮರ್ಶೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆಂದರೆ ನಿಜವಾದ ವಿಮರ್ಶೆಯ ಬಗ್ಗೆ ಹಾಗೂ ಅದರ ಮೌಲಿಕತೆಯ ಬಗ್ಗೆ ಅವನು ತಟಸ್ಥನಾಗಿರುತ್ತಾನೆ ಎಂದೇನೂ ಅಲ್ಲ. ನಿಜವಾದ ವಿಮರ್ಶೆ ಬೆಳೆಯಬೇಕು, ಮತ್ತು ಅದರಿಂದ ಸಾಂಸ್ಕೃತಿಕವಾದ ಪ್ರಯೋಜನವಿದೆ ಎಂಬುದು ನಿಜವಾದರೂ, ವಿಮರ್ಶೆ ಬೆಳೆಯಬೇಕಾದದ್ದು ಓದುಗರಿಗಾಗಿ, ಅವರಲ್ಲಿ ಸಾಹಿತ್ಯಾಭಿರುಚಿಯನ್ನೂ, ತರ-ತಮ ವಿವೇಕವನ್ನೂ ಮತ್ತು ಅವರ ವೈಚಾರಿಕ ಎಚ್ಚರವನ್ನೂ, ಮತ್ತು ಜೀವನ ದೃಷ್ಟಿಯನ್ನೂ ವೃದ್ಧಿಗೊಳಿಸುವುದಕ್ಕಾಗಿ ಎಂಬುದನ್ನು ಮರೆಯಬಾರದು.

ಪ್ರತಿಕ್ರಿಯೆ-೧೯೮೨