ತೀರಾ ಸರಳವಾಗಿ ಹೇಳುವುದಾದರೆ ಸುಪ್ರಸಿದ್ಧ ಸಂಗೀತ ಮನೆತನಗಳನ್ನು ಘರಾಣಾಗಳೆಂದು ಕರೆಯುತ್ತಾರೆ. ಒಂದು ಸಂಗೀತ ಪರಂಪರೆಗೆ ಕೂಡ ಘರಾಣಾ ಎನ್ನಬಹುದು. ಅನೇಕ ಹೆಸರಾಂಗ ಹಾಗೂ ಪ್ರತಿಭಾ ಸಂಪನ್ನ ಗಾಯಕರಿಂದ ಸಮೃದ್ಧವಾಗಿ ಕನಿಷ್ಠ ಮೂರು ತಲೆಮಾರುಗಳವರೆಗೆ ಒಂದು ಸಂಗೀತ ಪರಂಪರೆ ಉಳಿದು ಬಂದರೆ ಅದನ್ನು ಘರಾಣಾ ಎಂದು ಕರೆಯಬಹುದು. ಪ್ರತಿಯೊಂದು ಘರಾಣೆಗೆ ತನ್ನದೇ ಆದ ವಿಶಿಷ್ಟ ಶೈಲಿ ಹಾಗೂ ವಿಭಿನ್ನ ಗುಣ ವಿಶೇಷಗಳಿರುವುದು ಮುಖ್ಯವಾಗಿದೆ. ಒಂದು ಘರಾಣೆಯ ಸಂಸ್ಥಾಪಕನ ಧ್ವನಿ ವಿಶೇಷಕ್ಕೆ ಪೂರಕವಾಗಿ ಆ ಘರಾಣೆಯ ಸಂಗೀತ ಸಂಸ್ಕೃತಿ ಉಳಿದು ಬರುತ್ತದೆ. ಅಲ್ಲದೇ ಸಂಗೀತ ಪ್ರಸ್ತುತಿಯ ಸಂದರ್ಭದಲ್ಲಿ ಸ್ವರ, ಲಯಗಳ ಮೇಲೆ ಕಲಾವಿದ ನೀಡುವ ಒತ್ತು ಕೂಡ ಆ ಗಾಯಕ ಯಾವ ಘರಾಣೆಗೆ ಸೇರಿದವ ಎಂಬುದರ ಸೂಚಕವಾಗುತ್ತದೆ. ಉದಾಹರಣೆಗೆ ಕಿರಾಣಾ ಘರಾಣೆ ಸ್ವರಕ್ಕೆ ಒತ್ತು ನೀಡಿದರೆ ಆಗ್ರಾ ಘರಾಣೆ ಲಯಕ್ಕೆ ಒತ್ತು ನೀಡುತ್ತದೆ. ಘರಾಣೆಗಳನ್ನು ಎರಡು ಪ್ರಕಾರಗಳಾಗಿ ವಿಂಗಡಿಸುತ್ತಾನೆ. ಪಾದರಸದಂತೆ ತುಂಬ ಚುರುಕಾದ ಸ್ವರ -ಲಯ ನಿರೂಪಣೆಯುಳ್ಳ ಘರಾಣೆಗಳು ಇನ್ನೊಂದು ಕಡೆಗೆ ಇಂಬುಗೊಳ್ಳುತ್ತದೆ. ತಾನಗಳ ಬಳಸುವ ರೀತಿಗಳಲ್ಲಿಯ ವ್ಯತ್ಯಾಸದಿಂದಲೂ ಘರಾಣೆಗಳನ್ನು ಗುರುತಿಸಬಹುದಾಗಿದೆ. ಒಂದು ಘರಾಣೆಯ ಒಟ್ಟು ಸೌಂದರ್ಯ ದರ್ಶನ ನೀತಿಗೆ ಪೂರಕವಾಗಿ ನಿರೂಪಿಸಲಾಗುವ ಧ್ವನಿ ಸೃಷ್ಟಿಯ ತಂತ್ರಗಳು ಕೂಡ ಆ ಘರಾಣೆಯನ್ನು ಸೂಚಿಸುವ ಮಾನದಂಡವಾಗಬಹುದು. ಹೀಗೆ ಗಾಯನದ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳು ಆಯಾ ಘರಾಣೆಗಳನ್ನು ಗುರುತಿಸಲು ಸಹಾಯಕವಾಗುತ್ತದೆ.

ಒಟ್ಟಿನಲ್ಲಿ ಸ್ವರ – ಲಯಗಳ ಸಂಕೀರ್ಣ ನಿರೂಪಣೆಗನುಸಾರವಾಗಿ ಅನೇಕ ಘರಾಣೆಗಳು ಅಸ್ತಿತ್ವದಲ್ಲಿ ಉಳಿದುಬಂದಿವೆ. ಅವುಗಳಲ್ಲಿ ಗ್ವಾಲಿಯರ, ಕಿರಾಣಾ, ಅತ್ರೌಲಿ, ಜೈಪುರ, ಆಗ್ರಾ, ಪಾಟಿಯಾಲಾ, ಇಂದೋರ, ದಿಲ್ಲಿ, ಲಖನೌ, ಮೇವತಿ, ರಾಮಪುರ ಸಹಾಸ್ವಾನ, ಭೆಂಡಿ – ಬರವಾ ಘರಾಣೆಗಳು ಪ್ರಮುಖವಾಗಿವೆ.

. ಗ್ವಾಲಿಯರ – ಎಲ್ಲ ಖಯಾಲ ಗಾಕಿ ಶೈಲಿಗಳಲ್ಲಿ ಅತ್ಯಂತ ಹಳೆಯದಾದುದು ಗ್ವಾಲಿಯರ ಘರಾಣಿ, ನಥಾನ ಪೀರಭಕ್ಷ ಹಾಗೂ ನಥುಖಾನರು ಈ ಘರಾಣೆಯ ಮೂಲ ಪುರುಷರು. ನಂತರ ಹದ್ದುಖಾನ ಮತ್ತು ಹಸ್ಸುಖಾನರು ಸುಪ್ರಸಿದ್ಧ ಜುಗಲಬಂದಿ ಗಾಯಕರಾಗಿ ಈ ಘರಾಣೆಯನ್ನು ಮುನ್ನಡೆಸಿದರು. ಬಡೆ ಮೊಹಮ್ಮದ್ ಖಾನ್ ಇನ್ನೋರ್ವ ಸುಪ್ರಸಿದ್ಧ ಗಾಯಕ. ಖಯಾಲ ಪ್ರಕಾರದಲ್ಲಿ ತಾನಗಳನ್ನು ಅಳವಡಿಸಿದನೆಂದು ಹೇಳಲಾಗುತ್ತದೆ. ನಂತರ ಬಂದ ರೆಹಮತ್ ಖಾನ ಮತ್ತು ಪ್ರತಿಭಾವಂತ ಗಾಯಕ ವಿರಾತಿ ವಿರಳ ಕಂಠಸಿರಿ ಹೊಂದಿದ್ದನಲ್ಲದೆ ಪರಿಶುದ್ಧ ಸ್ವರಾಲಾಪನೆಯೊಂದಿಗೆ ರಾಗಗಳ ಸ್ವರೂಪದ ಆಳದೃಷ್ಟಿಯುಳ್ಳವನಾಗಿದ್ದ. ಗ್ವಾಲಿಯರ ಶೈಲಿಯನ್ನು ಪಾರಂಪರಿಕ ಪದ್ಧತಿಯ ಜಡತ್ವದಿಂದ ಮುಕ್ತಗೊಳಿಸಿದ ಖ್ಯಾತಿ ಅವನಿಗಿದೆ.

ಗ್ವಾಲಿಯರ ಘರಾಣೆಯ ವೈಶಿಷ್ಟ್ಯವೆಂದರೆ ಅದರ ನಿರೂಪಣೆಯ ಸ್ಪಷ್ಟತೆ ಹಾಗೂ ಸರಳತೆ. ಈ ಘರಾಣೆಯ ಗಂಭೀರ ನಿಲುವು ಹಾಗೂ ಅತ್ತಿಂದಿತ್ತ ಓಲಾಡುವ ಮಂದಗತಿಯ ಚಲನೆಗಳು ಇದರ ಗುಣ ವಿಶೇಷಗಳಾಗಿವೆ. ಎಲ್ಲರಿಗೂ ಗೊತ್ತಿರುವ ಜನಪ್ರಿಯ ರಾಗಗಳನ್ನು ಹಾಡುವುದು ಕೂಡ ಈ ಶೈಲಿಯ ಸರಳ ಸೂಚಕವಾಗಿದೆ. ಅಡುಯಾ ಬಿಲಾವಲ, ಯಮನ್, ಭೈರವ, ಸಾರಂಗ, ಮುಲ್ತಾನಿ, ಶ್ರೀ, ಭೂಪ, ಕಾಮೋದ, ಹಮೀರ, ಬಸಂತ, ಪರಜ್, ಗೌಡಮಲ್ಹಾರ, ಮಿಯಾ – ಕಿ – ಮಲ್ಹಾರ, ಶಂಕರಾ ಇತ್ಯಾದಿ ಜನಪ್ರಿಯ ರಾಗಗಳು ಈ ಘರಾಣೆಗೆ ಅತ್ಯಂತ ಪ್ರಿಯವಾದವುಗಳು. ಇದರಿಂದ ಶ್ರೋತೃಗಳಿಗೂ ಕೂಡ ಸಹಜವಾಗಿ ರಾಗದ ಆನಂದಾನುಭವ ಪಡೆಯಲು ಸಾಧ್ಯವಾಗುತ್ತದೆ. ಈ ಶೈಲಿ ಪಾರಂಪಾರಿಕ ಬಂದಿಶಗಳನ್ನು ಬಳಸುವುದರ ಕಡೆಗೆ ಒಲವು ತೋರಿಸುತ್ತದೆ. ರಾಗ ನಿರೂಪಣೆಗಿಂತ ಬಂದಿಶಗಳಿಗೇ ಪ್ರಾಶಸ್ತ್ಯ ನೀಡಲಾಗುತ್ತದೆ. ಬಂದಿಶಗಳೇ ರಾಗವನ್ನು ಹೇಗೆ ನಿರೂಪಿಸಬೇಕೆಂಬುದಕ್ಕೆ ಮಾರ್ಗದರ್ಶಿಯಾಗುತ್ತದೆ. ನೂರಾರು ಬಂದಿಶಗಳನ್ನು ಬಾಯಿಪಾಠ ಮಾಡಿದ ಮೇಲೆಯೇ ಗುರುಗಳು ಶಿಷ್ಯರಿಗೆ ಆಲಾಪ ಅಥವಾ ತಾನಗಳನ್ನು ಕಲಿಸುತ್ತಿದ್ದರು. ಗ್ವಾಲಿಯರ ಶೈಲಿ ನೇರ ಹಾಗೂ ಸರಳ ತಾನಗಳಿಗಾಗಿ ಹೆಸರಾಗಿದೆ. ವಿಶೇಷವಾಗಿ ಆರೋಹಿ – ಅವರೋಹಿ ಸಪಾಟ ತಾನಗಳನ್ನು ಹಾಗೂ ಜೋಡು ಸ್ವರಗಳನ್ನು ಈ ಶೈಲಿಯಲ್ಲಿ ಉಪಯೋಗಿಸಲಾಗುತ್ತದೆ. ಧ್ರುಪದ ಶೈಲಿಯ ಖಯಾಲಗಳಲ್ಲಿ ಮೀಂಡ್ ಹಾಗೂ ಗಮಕಗಳಿಗೆ ಗ್ವಾಲಿಯರ ಘರಾಣೆ ಒತ್ತು ನೀಡುತ್ತದೆ. ಈ ಘರಾಣೆಯಲ್ಲಿ ಮಧ್ಯಲಯದಲ್ಲಿ ಖಯಾಲ್ ಪ್ರಸ್ತುತ ಪಡಿಸಲಾಗುತ್ತದೆ. ಸ್ವರಗಳ ಸೂಕ್ಷ್ಮ ನಿರೂಪಣೆಗೆ ಇಲ್ಲಿ ಕಡಿಮೆ ಅವಕಾಶವಿದ್ದು ಬೋಲತಾನಗಳು ಕೂಡ ಹರಿತವಾಗಿರುವುದಿಲ್ಲ. ಈ ಘರಾಣೆಯ ಬಹಳಷ್ಟು ಬಡಾ ಖಯಾಲಗಳು ತಿಲವಾಡ, ಝಮರಾ (೧೪ ಮಾತ್ರಗಳು), ಅಡಾಚೌತಾಲ (೧೪ ಮಾತ್ರೆಗಳು), ಏಕತಾಲಗಳಲ್ಲಿ (೧೨ ಮಾತ್ರೆಗಳು) ನಿಬದ್ಧಗೊಳಿಸಲಾಗುತ್ತದೆ. ಧ್ರುತ ಬಂದಿಶಗಳು ರೂಢಿಯಂತೆ ತೀನತಾಲ ಹಾಗೂ ಏಕತಾಲಗಳಲ್ಲಿ ಪ್ರಸ್ತುತಗೊಳ್ಳುತ್ತದೆ.

ಬಾಲಕೃಷ್ಣ ಬುವಾ ಈಚಲಕರಂಜೀಕರ, ವಿಷ್ಣು ದಿಗಂಬರ ಪಲುಸ್ಕರ, ನಿಸ್ಸಾರ ಹುಸೇನ ಖಾನ, ಶಂಕರರಾವ್ ಪಂಡಿತ, ಕೃಷ್ಣರಾವ್ ಪಂಡಿತ್, ಏಕನಾಥ ಪಂಡಿತ, ಮುಂತಾದವರು ೧೯ನೇ ಶತಮಾನದ ಕೊನೆಯ ಅವಧಿಯ ಹಾಗೂ ಇಪ್ಪತ್ತನೆಯ ಶತಮಾನದ ಆದಿಕಾಲದ ಗಾಯಕರಲ್ಲಿ ಸರ್ವಶ್ರೇಷ್ಠರಾಗಿದ್ದಾರು.

ಈ ಘರಾಣೆಯನ್ನು ಅನುಸರಿಸಿದ ಇನ್ನಿತರ ಶ್ರೇಷ್ಠ ಗಾಯಕರೆಂದರೆ ಪಂಡಿತ್ ವಿನಾಯಕರಾವ್ ಪಟವರ್ಧನ, ನಾರಾಯಣರಾವ್ ವ್ಯಾಸ್, ದಿಗಂಬರ ವಿಷ್ಣು ಪಲುಸ್ಕರ, ಪಂಡಿತ್ ಓಂಕಾರನಾಥ ಠಾಕೂರ ಹಾಗೂ ಶರತ ಚಂದ್ರ ಆರೋಲ್ಕರ (ಕೃಷ್ಣರಾವ್ ಪಂಡಿತವ ಶಿಷ್ಯ). ಮಾಲಿನಿ ರಾಜೂರಕರ, ವೀಣಾ ಸಹಸ್ರಬುದ್ಧೆ ಈ ಶೈಲಿಯಲ್ಲಿ ಸೇರಿಸಬಹುದಾದ ಇತರ ಹೆಸರುಗಳಾಗಿವೆ.

ಗ್ವಾಲಿಯರ ಘರಾಣೆಯ ಗಾಯಕರಾಗಿದ್ದ ನೀಲಕಂಠಬುವಾ ಅವರ ಬಳಿ ಪಂಡಿತ್ ಮಲ್ಲಿಕಾರ್ಜುನ ಮನಸೂರ ಅವರು ಕೆಲಕಾಲ ಸಂಗೀತ ಶಿಕ್ಷಣ ಪಡೆದದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ಅವರು ಜೈಪುರ – ಅತ್ರೌಲಿ ಘರಾಣೆಯನ್ನು ಸ್ವೀಕರಿಸಬಹುದು. ನಂತರ ಅವರು ಜೈಪುರ – ಅತ್ರೌಲಿ ಘರಾಣೆಯನ್ನು ಸ್ವೀಕರಿಸಿದರು. ಈ ಘರಾಣೆಯ ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯರಾಗಿದ್ದ ಬಿ. ಆರ್. ದೇವಧರ ಅವರು ಕುಮಾರ ಗಂಧರ್ವರ ಗುರುಗಳಾಗಿದ್ದರು ಎಂಬುದು ಕೂಡ ಗಮನಾರ್ಹವಾಗಿದೆ. ಆದರೆ ಕುಮಾರ ಗಂಧರ್ವರು ಯಾವುದೇ ಘರಾಣೆಗೆ ಅಂಟಿಕೊಳ್ಳದೇ ತಮ್ಮದೇ ಆದ ಸಂಗೀತಶೈಲಿಯನ್ನು ಹುಟ್ಟುಹಾಕಿದರು.

ಮೇಲೆ ಪ್ರಸ್ತಾಪಿಸಲಾದ ಎಲ್ಲ ಗಾಯಕರ ಗಾಯನವನ್ನು ಕೇಳಿ ಗ್ವಾಲಿಯರ ಘರಾಣೆಯ ಗುಣ ವಿಶೇಷಗಳನ್ನು ಸೂಕ್ಷ್ಮವಾಗಿ ಗ್ರಹಿಸಬಹುದಾಗಿದೆ.

. ಕಿರಾಣಾ ಘರಾಣಾ:

ಖಯಾಲ ಗಾಯನದ ಸಂದರ್ಭದಲ್ಲಿ ಸ್ವರಾಲಾಪ ಹಾಗೂ ವಿಲಂಬಿತ ಲಯಗಳಿಗೆ ಮಹತ್ವ ನೀಡಿದ್ದು ಕಿರಾಣಾ ಘರಾಣೆಯ ವೈಶಿಷ್ಟ್ಯವಾಗಿದೆ. ಕಲಾವಿದನ ಹಾಗೂ ಶ್ರೋತೃಗಳ ಅಂತರಂಗದ ಭಾವ ಸಂವೇದನೆಗಳನ್ನು ಕುದುರಿಸುವಲ್ಲಿ ಹಾಗೂ ಶಮನಗೊಳಿಸುವಲ್ಲಿ ಈ ತಂತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸ್ವರ ಕಂಪನ ಅಥವಾ ಸ್ವರಾಲೋಂದನ, ಮೀಂಡ್ ಹಾಗೂ ಗಮಕಗಳನ್ನು ಬಳಸುತ್ತ, ಸ್ವರಗುಂಜಾರವದ ನಿರಂತರತೆಯನ್ನು ಕಾಪಾಡುವುದು ಈ ಘರಾಣೆಯ ಗುಣ ವಿಶೇಷವಾಗಿದೆ. ಇದರಿಂದ ಸ್ವರಗಳನ್ನು ಅನುಭವಿಸಿ ಹಾಡಲು ಸಾಧ್ಯವಾಗುತ್ತದೆ. ಅಲ್ಲದೆ ಕೇಳುಗರಿಗೂ ಸ್ವರಾನುಭವ ದೊರಕುತ್ತದೆ. ಈ ಶೈಲಿಯಲ್ಲಿ ರಾಗದ ಪ್ರತಿಯೊಂದು ಸ್ವರಕ್ಕೂ ಮಹತ್ವ ಪ್ರಾಪ್ತವಾಗಿ ಸ್ವರಾಭ್ಯಾಸ ಅಥವಾ ಸ್ವರ ಸಂಧಾನ ಸಾಧ್ಯವಾಯಿತು. ಕಣ್ ಸ್ವರಗಳನ್ನು ಉಪಯೋಗಿಸಿ ಮುಖ್ಯ ಸ್ವರದ ರಸಾನಂದ ಹೆಚ್ಚಿಸುವ ಕಲೆಗಾರಿಕೆ ಕಿರಾಣಾ ಘರಾಣೆಯ ಗಾಯಕರಲ್ಲಿದೆ.

ಸ್ವರ ಮಾಧುರ್ಯಕ್ಕೆ ಹೆಸರಾದ ಕಿರಾಣಾ ಘರಾಣೆ ಕರುಣ ರಸ ಪ್ರಧಾನವಾಗಿದೆ. ಕೆಲವೊಂದು ರಾಗಗಳನ್ನು ಹಾಡುವಾಗ ತಾನಪುರಾವನ್ನು ನಿಷಾದ ಸ್ವರಕ್ಕೆ ನಿಬದ್ಧಗೊಳಿಸುವ ಪರಿಪಾಠ ಈ ಶೈಲಿಯ ಗಾಯಕರಲ್ಲಿದೆ. ಇದರಿಂದ ಎಲ್ಲ ಸ್ವರ ಕಂಪನವನ್ನು ಶೃತಿಯ ಮಟ್ಟದಲ್ಲಿ ಕೇಳಲು ಸಾಧ್ಯವಾಗುತ್ತದೆ. ಆದರೆ ಸ್ವರಾಲಾಪಕ್ಕೆ ಬಹಳಷ್ಟು ಮಹತ್ವ ನೀಡುವುದರಿಂದ ಲಯಸಂಚಿತ ಸ್ವರಾಕೃತಿಗಳ ಸ್ವರಮಾಲಿಕೆಗಳನ್ನು ಸೃಷ್ಟಿಸಲು ಇಲ್ಲಿ ಸುಲಭ ಸಾಧ್ಯವಾಗುವುದಿಲ್ಲ. ಇದನ್ನು ಈ ಶೈಲಿಯ ಕೊರತೆ ಎಂದು ಭಾವಿಸಲಾಗಿದೆ.

ಈ ಘರಾಣೆಯ ಸಂಸ್ಥಾಪಕರಾದ ಖಾನ ಸಾಹೇಬ ಅಬ್ದುಲ ಕರೀಮ ಕಾನರನ್ನು ‘ಸ್ವರ ಸಾಮ್ರಾಟ್’ ಎಂದು ಸಂಭೋದಿಸಲಾಗುತ್ತದೆ. ಅವರು ಹುಟ್ಟಿದ್ದು ಕುರುಕ್ಷೇತ್ರ ಬಳಿಯ ಕಿರಾಣಾ ಎಂಬ ಗ್ರಾಮದಲ್ಲಿ (೧೮೭೨-೧೯೩೭). ತೀರ ಚಿಕ್ಕ ವಯಸ್ಸಿನಲ್ಲಿ ಅವರು ತಮ್ಮ ಹುಟ್ಟೂರು ತೊರೆದು ಆಸ್ಥಾನಗಾಯಕರಾಗಿ ಬರೋಡಕ್ಕೆ ಬಂದರು. ಅಲ್ಲಿಂದ ಮೈಸೂರಿಗೆ ತೆರಳಿದರು. ಅವರ ಈ ಸಂಗೀತ ಯಾತ್ರೆಯ ಫಲವಾಗಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅವರ ಕೀರ್ತಿ ವ್ಯಾಪಿಸಲು ಸಾಧ್ಯವಾಯಿತು. ನಂತರ ಅವರ ಹುಟ್ಟೂರಿನ ಹೆಸರು ಅವರ ಘರಾಣೆಗೆ ಪ್ರಾಪ್ತವಾಯಿತು.

ಅಬ್ದುಲ ಕರೀಮ ಖಾನರು ಸ್ವರಗಳಿಗೆ ಅವುಗಳದೇ ಆದ ಸ್ವಂತ ವ್ಯಕ್ತಿತ್ವವಿದೆ ಎಂಬುದನ್ನು ತಮ್ಮ ಮಧುರ ಕಂಠದ ಗಾಯನದಿಂದ ಸಾಧಿಸಿ ತೋರಿಸಿದರು. ಅವರು ಮೂಗಿನಿಂದ ಹಾಡುತ್ತಿದ್ದುದರಿಂದ ಅವರ ಧ್ವನಿ ಕೋಮಲವಾಗಿ ಕೇಳುತ್ತಿತ್ತು. ಸ್ವರ ನಿರೂಪಣೆಗೆ ಅದೊಂದು ಪರೋಕ್ಷ ವರದಾನವೇ ಆಗಿತ್ತು. ಅವರು ಸ್ವರಗಳನ್ನು ಲೀಲಾಜಾಲವಾಗಿ ಬಳಸುತ್ತ, ರಾಗದ ಬೆಳವಣಿಗೆಯ ಕ್ರಮವನ್ನು ಇನ್ನಷ್ಟು ವಿಸ್ತರಿಸಿದರು. ತಮ್ಮ ತಂತಕಾರಿ ಅಂಗದ ಗಾಯನ ಶೈಲಿಯಿಂದ, ಮೀಂಡ ಹಾಗೂ ಗಮಕಗಳ ಮೂಲಕ ಅವರು ಸ್ವರಗಳ ಆಯಾಮವನ್ನು ಹೆಚ್ಚಿಸಿದರು.

ಈ ಘರಾಣೆಯ ಗಾಯಕರು ತಮ್ಮನ್ನು ಬೀನಕಾರ – ದ್ರುಪದಿಯಾ ಪರಂಪರೆಯವರೆಂದು ಕರೆದುಕೊಳ್ಳುತ್ತಾರೆ. ಆದರೆ ಮೀರ ಅವರು ಅಭಿಪ್ರಾಯಪಡುವಂತೆ ಈ ಘರಾಣೆ ಸಾರಂಗಿಯಾ (ಮಿರಾಸಿಯಾ) ಪರಂಪರೆಗೆ ಸೇರಿದ್ದಾಗಿದೆ. ಆ ಕುಲ್ಕೆ ಆಸ್ಥಾನದ ನರ್ತಕಿಯರಿಗೆ (ತವಾಯಿಫ್ ಗಳಿಗೆ) ಸಾಥ್ ನೀಡುವುದು ಮೀರಾಸಿಗಳ ಸಂಪ್ರದಾಯವಾಗಿತ್ತು. ಹೀಗಾಗಿ ಸಾರಂಗಿಯಾ ಪರಂಪರೆಯವರೆಂದು ಹೇಳಿಕೊಳ್ಳುವುದು ಒಂದು ಬಗೆಯ ಕೀಳರಿಮೆ ಎಂದು ಅವರು ಭಾವಿಸಿದ್ದರು. ಈ ಶೈಲಿಯ ಗಾಯಕರ ಧ್ವನಿ ಸೃಷ್ಟಿ ಹಾಗೂ ತಾನಗಳು ಸಾರಂಗಿಯಿಂದ ಪ್ರಭಾವಿತವಾಗಿದ್ದವು. ಅಲ್ಲದೆ ಕಿರಾಣಾ ಘರಾಣೆ ಬಂದಿಶ್‌ಗಳಿಗೆ ಕಡಿಮೆ ಮಹತ್ವ ನೀಡಿತು. ಸಂವೇದನೆಗಳನ್ನು ಸಾಕಾರಗೊಳಿಸಲು ಶಬ್ದಗಳು ಸೋಲುವಲ್ಲಿ ಸ್ವರಗಳು ಜಯಸಾಧಿಸುತ್ತವೆ ಎಂಬ ನಂಬಿಕೆ ಅವರದಾಗಿದೆ. ಸ್ವರಾಲಾಪಕ್ಕೆ ಅನುಕೂಲವಾಗುವಂತೆ, ಈ ಪದ್ಧತಿಯಲ್ಲಿ ಪೂರ್ವಾಂಗ ಪ್ರಧಾನ ರಾಗಗಳನ್ನೇ ಹೆಚ್ಚಾಗಿ ಉಪಯೋಗಿಸುವುದನ್ನು ನಾವು ಕಾಣುತ್ತೇವೆ. ಶುದ್ಧ ಕಲ್ಯಾಣ, ದರ್ಬಾರಿ, ಮಾಲಕೌಂಸ, ಭೀಮಪಲಾಸಿ, ತೋಡಿ, ಜೋಗಿಯಾ ಮುಂತಾದ ರಾಗಗಳನ್ನು ಹೆಚ್ಚಾಗಿ ಹಾಡಲಾಗುತ್ತದೆ.

ಇಲ್ಲಿ ಲಯಕ್ಕಿಂತಲೂ ಸ್ವರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂಬ ಸಾಮಾನ್ಯ ಗ್ರಹಿಕೆಯನ್ನು ಈ ಘರಾಣೆಯ ಗಾಯಕರು ಒಪ್ಪುವುದಿಲ್ಲ. ಸ್ವರ ಪ್ರಧಾನವಾಗಿದ್ದರೂ ಸೂಕ್ಷ್ಮ ಅಥವಾ ಸುಪ್ತಲಯ ಸ್ವರಗಳ ಕೈಹಿಡಿದುಕೊಂಡೇ ಸಾಗುತ್ತದೆ ಎಂಬ ಸಂಗತಿಯತ್ತ ಅವರು ಗಮನ ಸೆಳೆಯುತ್ತಾರೆ. ಏನಿದ್ದರೂ ಏಕತಾಲ ಮತ್ತು ತೀನತಾಲಗಳನ್ನು ಮಾತ್ರ ಇಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ತಾಲ ಗಯಾ ತೊ ಬಾಲ ಗಯಾ ಸೂರ ಗಯಾ ತೊ ಸಿರ ಗಯಾ (ತಾಲ ಹೋದರೆ ಕೂದಲಿನ ಎಳೆ ಹೋದಂತೆ, ಸ್ವರ ಹೋದರೆ ತಲೆಯೇ ಹೋದಂತೆ) ಎಂಬುದು ಈ ಘರಾಣೆಯ ಉಕ್ತಿಯಾಗಿದೆ. ಆದರೆ ಈ ಮಾತು ಮೇಲಿನ ನಿರಾಕರಣೆಗೆ ವ್ಯತಿರಿಕ್ತವಾಗಿದೆ.

ಕಿರಾಣಾ ಘರಾಣೆಯ ಮಹಾನ್ ಗಾಯಕರಲ್ಲಿ ಪಂ. ಸವಾಯಿ ಗಂಧರ್ವರು (ರಾಮಭಾವು ಕುಂದಗೋಳಕರ), ಪಂ. ಸುರೇಶ ಬಾಬು ಮಾನೆ, ಪಂ. ಬಾಲಕೃಷ್ಣ ಬುವಾ ಕಪಿಲೇಶ್ವರ, ಶ್ರೀಮತಿ ಹೀರಾಬಾಯಿ, ಬಡೋಡೆಕರ, ಶ್ರೀಮತಿ ಗಂಗೂಬಾಯಿ ಹಾನಗಲ್ಲ, ಪಂ. ಭೀಮಸೇನ ಜೋಶಿ, ಪಂ. ಬಸವರಾಜ ರಾಜಗುರು, ಪಂ. ಸಂಗಮೇಶ್ವರ ಗುರವ, ಪಂ. ಫಿರೋಜ ದಸ್ತೂರ, ಶ್ರೀಮತಿ ಸರಸ್ವತಿ ರಾಣಿ, ಶ್ರೀಮತಿ ಮಾನಿಕ ವರ್ಮಾ, ಶ್ರೀಮತಿ ಪ್ರಭಾ ಅತ್ರೆ, ಶ್ರೀಮತಿ ಕೃಷ್ಣಾ ಹಾನಗಲ್ಲ ಮುಂತಾದವರು ಪ್ರಮುಖರಾಗಿದ್ದಾರೆ.

. ಜೈಪುರಅತ್ರೌಲಿ ಘರಾಣಾ:

ಅತ್ಯಂತ ಕಠಿಣ ಲೆಕ್ಕಾಚಾರದ ಹಾಗೂ ಸಂಕೀರ್ಣ ಸ್ವರೂಪದ ಜೈಪುರ – ಅತ್ರೌಲಿ ಘರಾಣೆ ಅಲ್ಲಾದಿಯಾ ಖಾನರಿಂದ ಸಂಸ್ಥಾಪಿತವಾಗಿದೆ. ಅಲ್ಲಾದಿಯಾ ಖಾನರ ಪೂರ್ವಜನರು ಅಲಿಗಡ ಹತ್ತಿರದ ಅತ್ರೌಲಿಯವರು ಕೆಲಸಕ್ಕಾಗಿ ಅವರು ಅತ್ರೌಲಿ ತೊರೆದು ಜೈಪುರ ಬಳಿಯ ಉನಿಯಾರಾ ಗ್ರಾಮಕ್ಕೆ ಬಂದು ನೆಲೆಸಿದರು. ಅದಕ್ಕಾಗಿ ಈ ಘರಾಣೆಗೆ ಜೈಪುರ – ಅತ್ರೌಲಿ ಎಂಬ ಹೆಸರು ಪ್ರಾಪ್ತವಾಗಿದೆ.

ಅಲ್ಲಾದಿಯಾ ಖಾನರ ಪೂರ್ವಜರು ದ್ರುಪದ ಗಾಯಕರಾಗಿದ್ದರು. ತಮ್ಮ ಚಿಕ್ಕಪ್ಪ ಜಹಾಂಗೀರ ಖಾನರ ಬಳಿ ಅವರು ದ್ರುಪದ ಹಾಗೂ ಖಯಾಲ ಶೈಲಿಗಳೆರಡನ್ನೂ ಅಭ್ಯಸಿಸಿದರು. ದ್ರುಪದವನ್ನು ಖಯಾಲ ಶೈಲಿಯಲ್ಲಿ ಹಾಡುವುದೇ ಜೈಪುರ ಘರಾಣೆಯ ವೈಶಿಷ್ಟ್ಯವಾಗಿದೆ ಎಂದು ಪಂ. ಮಲ್ಲಿಕಾರ್ಜುನ ಮನಸೂರ ಹೇಳುತ್ತಾರೆ.

ಅಲ್ಲಾದಿಯಾ ಖಾನರನ್ನು ಅವಘಡ ದಾಸ (ಕಠಿಣ ಸವಾಲುಗಳ ಆರಾಧಕ) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಸ್ವರ ನಿಯುಕ್ತ ಲಯ ಅಥವಾ ಲಯ ನಿಯುಕ್ತ ಸ್ವರ ಅಂದರೆ ಸ್ವರ – ಲಯಗಳಿಗೆ ಸಮಾನಾವಕಾಶ ನೀಡುವುದರ ಜೊತೆ ಅವುಗಳ ಮಧ್ಯ ಭಾವೈಕ್ಯತೆ ಸಾಧಿಸುವುದು ಈ ಘರಾಣೆಯ ಲಕ್ಷಣವಾಗಿದೆ. ಮಂದ ಚಲನೆಯ ಮಧ್ಯೆ ಕೂಡ ಮೇಲಿಂದ ಮೇಲೆ ಬದಲಾಗುವ ಸ್ವರಾಕೃತಿಗಳಿಂದ ಬದ್ಧಲಯ ಬಾಧಿತವಾಗಿ, ಒಂದು ಬಗೆಯ ಅಲೆಯಂಥ ಏರಿಳಿತ ಉಂಟಾಗುವುದು ಈ ಶೈಲಿಯ ಗುಣವಾಗಿದೆ.

ಇಲ್ಲಿಯ ಬಂದಿಶಗಳಿಗೆ ಸಾಹಿತ್ಯಿಕ ಮಹತ್ವವಿಲ್ಲ. ಆದರೆ ಅವುಗಳಿಗೆ ಸಂಗೀತಾತ್ಮಕ ಗುಣಧರ್ಮವಿದೆ. ಅಂದರೆ  ಇಲ್ಲಿಯ ಶಬ್ದ ಅಥವಾ ಅಕ್ಷರಗಳನ್ನು ಕೂಡ ಸ್ವರದಂತೆಯೇ ಬಳಸಿಕೊಳ್ಳಲಾಗುತ್ತದೆ. ಈ ಘರಾಣೆ ಹೊಸ ಹೊಸ ಬಂದಿಶಗಳನ್ನು ಸೃಷ್ಟಿಸದೆ ಪಾರಂಪರಿಕ ಬಂದಿಶಗಳ ಬಳಕೆಯತ್ತ ಆಸಕ್ತಿ ವಹಿಸುತ್ತದೆ. ರಾಗ – ತಾಲ ತತ್ವಗಳಿಗೆ ಬಂದಿಶಗಳು ಪೂರಕವಾಗಿರುತ್ತದೆ. ರಾಗವನ್ನು ತಾಲಕ್ಕೆ ಕಟ್ಟಿ ಹಾಕಿದಂತೆ ಭಾಸವಾಗುತ್ತದೆ. ಬಢತ ಹಾಡುವಾಗ ಆಕಾರವನ್ನು ಉಪಯೋಗಿಸದೆ ಬಂದಿಶಗಳ ಬೋಲಗಳನ್ನೇ ಬಳಸುತ್ತಾರೆ. ಬಢತ್ ಸಂದರ್ಭದಲ್ಲಿ, ಧ್ರುತ್ ಲಯದಲ್ಲಿ ಮುರ್ಕಿಗಳನ್ನು ಹಾಗೂ ತಾನಗಳನ್ನು ಕುಶಲವಾಗಿ ಬಿಂಬಿಸುತ್ತಾರೆ. ತಾರಸಪ್ತಕ ತಲಪುವವರೆಗೆ ವಿಲಂಬಿತ ಖಯಾಲನ್ನು ಹಂತ ಹಂತವಾಗಿ ವಿಸ್ತರಿಸುತ್ತಾರೆ. ಈ ಶೈಲಿಯಲ್ಲಿ ಅಂತರಾ ಹಾಡುವ ಪರಿಪಾಠವಿಲ್ಲ. ವಿಲಂಬಿತ ಖಯಾಲದ ನಂತರ ಧ್ರುತ್ ಬಂದಿಶಗಳನ್ನು ಹಾಡುವುದು ಕೂಡಾ ತುಂಬ ಅಪರೂಪ. ಈ ಶೈಲಿಯ ಸಂಕೀರ್ಣತೆಗೆ ಸಾಕ್ಷಿ ಎಂಬಂತೆ, ಇಲ್ಲಿ ನಾಗಮರಿಣೆಯಂಥ ತಿರುವು ಮುರುವಾದ ವಕ್ರತಾನಗಳ ಬಳಕೆಯಾಗುತ್ತದೆ. ಅಲ್ಲದೆ ಒಂದು ನಿರ್ದಿಷ್ಟ ಪ್ರಮಾಣದ ಠೇಕಾಗಿಂತ ಭಿನ್ನವಾದ ಕಾರ್ಯ ಪ್ರವೃತ್ತಲಯದ ಬಳಕೆ ಈ ಘರಾಣೆಯ ಕೇಂದ್ರ ತತ್ವವಾಗಿದೆ.

ಪಂಡಿತ್ ಮಲ್ಲಿಕಾರ್ಜುನ ಮನಸೂರರು ಈ ಘರಾಣೆಯ ಗಾಯಕರಾಗಿದ್ದರೂ ಅವರ ಗಾಯನ ಹೊಸತನ ಹಾಗೂ ಸೃಜನಶೀಲವಾಗಿದೆ. ಅವರು ಹಾಡುವಾಗ ಚೀಜನ್ನು ಲಯದೊಡನೆ ಮೇಳೈಸಿ ಸಂಪೂರ್ಣ ಹೊಸತನದಿಂದ, ಸ್ವಂತಿಕೆಯಿಂದ ಹಾಡುತ್ತಾರೆ. ಚೀಜಗಳ ಪೂರ್ವ – ನಿಯೋಜಿತ ಭಾಗಗಳನ್ನು ಉಪಯೋಗಿಸದೆ, ಉಯ್ಯಾಲೆಯಂಥ ಲಯವಿರಿಸಿಕೊಂಡು, ಯಾರೂ ಭಾವಿಸಿದ ರೀತಿಯಲ್ಲಿ ಇದ್ದಕ್ಕಿದ್ದಂತೆ ಸಮ್ ಸಾಧಿಸುತ್ತಾರೆ. ಹೀಗೆ ಮಾಡುವಾಗ ಮುಖಡಾ ಹಾಗೂ ಬಂದಿಶಗಳಿಗೆ ಬಾಧೆಯಾಗದಂತೆ ಎಚ್ಚರಿಕೆ ವಹಿಸುತ್ತಾರೆ. ತನ್ಮೂಲಕ ಘರಾಣೆ ತತ್ವಗಳಿಗೆ ಬದ್ಧರಾಗುತ್ತಾರೆ. ಅತ್ಯಂತ ಜಟಿಲ ವ್ಯವಸ್ಥೆಯ ಜೈಪುರ ಘರಾಣೆಯ ಅನುಯಾಯಿಯಾದ ಮಲ್ಲಿಕಾರ್ಜುನ ಮನಸೂರರು, ಈ ಪದ್ಧತಿಯ ಕಠಿಣ ಸ್ವರ – ಲಯ ಕಟ್ಟುಗೆಯನ್ನು ಸವಾಲಾಗಿ ಸ್ವೀಕರಿಸಿ, ಪಾಂಡಿತ್ಯ ಪೂರ್ಣವಾಗಿ ಹಾಡಿ, ಶೋತೃಗಳು ರಸೋಲಾಸದಿಂದ ತಲೆದೂಗುವಂತೆ ಮಾಡುತ್ತಾರೆ. ಹೀಗಾಗಿ ಅವರನ್ನು ‘ಸಂಗೀತ ವಿದ್ವಾಂಸರ ವಿದ್ವಾಂಸ’ ಎಂದು ಗೌರವ ನೀಡಿ ಕರೆಯಲಾಗುತ್ತದೆ.

ಜೈಪುರ ಘರಾಣೆಯ ದಿಗ್ಗಜರಲ್ಲಿ ಸೇರಿಸಿಕೊಳ್ಳುವ ಇನ್ನಿತರ ಪ್ರಮುಖ ಹೆಸರುಗಳೆಂದರೆ ಪಂಡಿತ ಭಾಸ್ಕರ ಬುವಾ ಬಖಲೆ, ಮುಂಜೀಖಾನ, ಭುರ್ಜಿಖಾನ (ಮನಸೂರರ ಗುರುಗಳು) ಕೇಸರಭಾಯಿ ಕೇರಕರ, ಮೇನಕಾಬಾಯಿ ಶಿರೋಡಕರ, ಗಜಾನನರಾವ್ ಜೋಶಿ, ಮೋಘುಬಾಯಿ ಕುರಡೀಕರ, ನಿವೃತ್ತಿ ಬುವಾ ಸರನಾಯಕ, ಕಿಶೋರಿ ಅಮೋನಕರ, ಮಾನಿಕ ಭಿಡೆ, ಅಶ್ವಿನಿ ಭಿಡೆ ದೇಶಪಾಂಡೆ, ರಾಜಶೇಖರ ಮನ್ಸೂರ, ಪದ್ಮಾವತಿ ಶಾಲಿಗ್ರಾಮ ಮುಂತಾದವರು. (ಪದ್ಮಾ ತಲ್ ವಲ್ಕರ್, ಶ್ರುತಿ ಸಾಡೋಲಿಕರ)

. ಆಗ್ರಾ ಘರಾಣಾ:

ಪಾರಂಪರಿಕ ಹಾಗೂ ಜಟಿಲ ಆಗ್ರಾ ಶೈಲಿಗೆ, ತಮ್ಮ ಪ್ರತಿಭಾತ್ಮಕ ವರ್ಣಗಳ ಎರಕ ಹೊಯ್ದು, ಹೊಸ ರೂಪ ನೀಡಿದ ಶ್ರೇಯಸ್ಸು ಉಸ್ತಾದ ಪೈಯಾಜ ಖಾನರಿಗೆ ಸಲ್ಲಬೇಕು. ಹಾಗೆ ನೋಡಿದರೆ ಆಗ್ರಾ ಘರಾಣೆಯ ಸಂಸ್ಥಾಪಕರಾದ ಶಾಮರಂಗ ಹಾಗೂ ಸಾಸರಂಗರು ಮೂಲತಃ ದ್ರುಪದ ಧಮಾರ ಗಾಯಕರಾಗಿದ್ದರು. ೧೯ನೆಯ ಶತಮಾನದಲ್ಲಿ ಈ ಘರಾಣೆಯಲ್ಲಿ ಖಯಾಲ ಗಾಯನ ಶೈಲಿಯನ್ನು ಅಳವಡಿಸಿದವರು ಘಗ್ಗೇ ಖುದಾಬಕ್ಷ ಅವರು. ಗ್ವಾಲಿಯರ ಘರಾಣೆಯ ಸಥ್ತಾನ ಪೀರಬಕ್ಷ ಅವರಿಂದ ಸಂಗೀತ ತರಬೇತಿ ಪಡೆದ ಘಗ್ಗೇಖುದಾ ಬಕ್ಷ ತಮ್ಮ ಮಗ ಗುಲಾಮ ಅಬ್ಬಾಸರಿಗೆ ಶಿಕ್ಷಣ ನೀಡಿದರು. ಫೈಯಾಜ ಖಾನರು ತಮ್ಮ ಅಜ್ಜನಾಗಿದ್ದ ಗುಲಾಮ ಅಬ್ಬಾಸ ಹಾಗೂ ಆಗ್ರಾ ಘರಾಣೆಯ ಖ್ಯಾತ ಗಾಯಕರಾಗಿದ್ದ ನಥ್ತನ ಖಾನರ ಬಳಿ ಸಂಗೀತ ಶಿಕ್ಷಣ ಪಡೆದರು. ನಂತರ ಫೈಯಾಜ ಖಾನರು ದಿಲ್ಲಿ ಘರಾಣೆಯ ಕೆಲವು ಅಂಶಗಳನ್ನು ಆಗ್ರಾ ಶೈಲಿಯಲ್ಲಿ ಅಳವಡಿಸಿದ್ದರಿಂದ ಅದಕ್ಕೆ ಆಗ್ರಾ – ರಂಗೀಲೆ – ಘರಾಣೆ ಎಂದು ಕರೆಯಲಾಯಿತು.

ಆಗ್ರಾದ ಉತ್ತರಕ್ಕೆ ನಾಲ್ಕು ಮೈಲು ದೂರದಲ್ಲಿರುವ ಅಕಬರನ ಸಮಾಧಿ ಸಮೀಪದ ಸಿಕಂದರಿಯಾ ಎಂಬ ಗ್ರಾಮದಲ್ಲಿ ಫೈಯಾಜ ಖಾನರು ಜನಿಸಿದರು (೧೮೮೬-೧೯೫೦). ಅವರಿಗೆ ಅನುಕರಣಿಸುವ ಗುಣವುಳ್ಳ ಧ್ವನಿ ಇತ್ತು. ಆಗ್ರಾ ಶೈಲಿಯ ಗಾಯನಕ್ಕೆ ಅವರ ಧ್ವನಿ ಹೇಳಿ ಮಾಡಿಸಿದಂತಿತ್ತು. ಅತ್ಯಂತ ಸಹಜವಾಗಿ ಅವರು ತಮ್ಮ ಧ್ವನಿಯನ್ನು ಏರಿಳಿಸುತ್ತಿದ್ದರು. ಸ್ಫಟಿಕದಷ್ಟು ಪಾರದರ್ಶಕವಾದ ಗರ್ಜಿಸುವ ವೀರದನಿ ಅವರದಾಗಿತ್ತು. ಅವರದು ರಭಸದ ಶೈಲಿಯಾಗಿತ್ತು. ಶ್ರೋತ್ರಗಳಿಗೆಂದೂ ಅವರು ವಿರಾಮ ನೀಡುತ್ತಿರಲಿಲ್ಲ. ಅವರ ಆ ದನಿಗೆ ಅವರೆಲ್ಲ ಬೆಕ್ಕಸ ಬೆರಗಾಗುತ್ತಿದ್ದರು. ಅವರ ಗಾಯನದಿಂದ ಎಲ್ಲೆಡೆ ಅನಿರೀಕ್ಷಿತ ರೋಮಾಂಚನದ ಸಂಚಾರವಾಗುತ್ತಿತ್ತು. ತಬಲಾ ಬೋಲಗಳ ಸಂಗೀತಕ್ಕೆ ತಕ್ಕಂತೆ ಸ್ವರದ ಮೇಲೆ ಮೇಲುಗೈ ಪಡೆಯುವ ಲಯಗಾರಿಕೆ, ರಭಸದಿಂದ ಏರಿಳಿಯಲು ಫಿರತಗಳು, ಧ್ವನಿಯ ಮಂದ್ರ, ತಾರಸಪ್ತಕ ಚಲನೆಗಳಿಂದ ಪ್ರದೀಪ್ತವಾದ ಅವರ ಗಾಯನ ಶೈಲಿಗೆ ಶೋತ್ರಗಳು ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುತ್ತಿದ್ದರು.

ಪೈಯಾಜಖಾನರ ಈ ಧ್ವನಿ ವಿಶೇಷ ಶಕ್ತಿಯನ್ನು ಆಗ್ರಾ ಶೈಲಿಯ ಬಹಳಷ್ಟು ಗಾಯಕರು ಅನುಕರಿಸುತ್ತಿದ್ದರೆಂದು ಹೇಳಲಾಗುತ್ತದೆ. ಫೈಯಾಜ ಖಾನರ ಶೈಲಿಯೇ ಆಗ್ರಾ ಘರಾಣೆಯ ವೈಶಿಷ್ಟ್ಯಗಳೆಲ್ಲವನ್ನು ಮೈಗೂಡಿಸಿಕೊಂಡಿದೆ ಎನ್ನಬೇಕು.

ಆಗ್ರಾ ಶೈಲಿಯ ಗಾಯನ ಲಯಕಾರಿ ಹೆಸರಾಗಿದೆ. ಸ್ವರಕ್ಕಿಂತ ಇಲ್ಲಿ ಲಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಇಲ್ಲಿಯ ಸ್ವರಾಭಿವ್ಯಕ್ತಿಗೆ ಆಕಾರಕ್ಕಿಂತ ಈ ಕಾರವನ್ನು ಬಳಸಲಾಗುತ್ತದೆ. ತುಂಬ ಉದ್ದವಾದ, ವಿಸ್ತಾರವಾದ ಆಲಾಪಕಾರಿ, ರಭಸದಿಂದ ಬೀಸಿ ಬರುವ ಮೀಂಡ, ಮಧ್ಯಲಯದಲ್ಲಿ ನಿಬಿದ್ಧಿತವಾದ ಬಂದಿಶಗಳು ಈ ಘರಾಣೆಯ ವೈಶಿಷ್ಟ್ಯಗಳಾಗಿವೆ. ಬಂದಿಶಗಳ ಶಬ್ದಗಳನ್ನು ಲಯಕ್ಕನುಗುಣವಾಗಿ ಪ್ರಯೋಗಿಸುವುದು ಅಥವಾ ಶಬ್ದಗಳೊಡನೆ ಚಮತ್ಕಾರಿಕವಾಗಿ ಆಟವಾಡುವುದು ಒಂದು ರೀತಿಯಾದರೆ ನಂತರ ಬರುವ ಬೋಲತಾನ ಹಾಗೂ ತಾನಗಳ ಪ್ರತಿಪಾದನೆ ಮೈನವಿರೇಳಿಸುವಂಥದ್ದು. ತಾಲಸಿದ್ದಿಯಾದವರಿಗೆ ಮಾತ್ರ ಆಗ್ರಾ ಶೈಲಿ ಒದಗಿ ಬರಬಲ್ಲದು.

ಈ ಶೈಲಿಯನ್ನು ಮೈಗೂಡಿಸಿಕೊಂಡ ಮಹಾನ ಗಾಯಕರೆಂದರೆ ವಿಲಾಯತ್ ಹುಸೇನ್ ಖಾನ್, ನನ್ಹೆಖಾನ್, ದುರ್ಗಾಬಾಯಿ ಶಿರೋಡಕರ, ಜಗನ್ನಾಥಬುವಾ ಪುರೋಹಿತ, ಸಿ. ಆರ್. ವ್ಯಾಸ, ಜಿತೇಂದ್ರ ಅಭಿಷೇಕ, ಜೋತ್ಸ್ನಾ ಭೋಲೆ, ಶಾಮಲಾ ಮಜಗಾಂವಕರ, ಲಲಿತ ರಾವ್, ಶ್ರೀಕೃಷ್ಣ ಹಲದನಕರ, ಸಮತಿ ಮುಟಾಟಕರ, ದಿನಕರ ಕೈಕಿನಿ, ವಿಜಯ ಕಿಚಲು, ಗೋವಿಂದರಾವ್ ಅಗ್ನಿ ಮುಂತಾದವರು.

ನಿಜ ಹೇಳಬೇಕೆಂದರೆ ಘರಾಣೆಗಳ ಸಂಕೀರ್ಣತೆ ಹಾಗೂ ಮಡಿವಂತಿಕೆಗಳಿಂದಾಗಿ ಘರಾಣಾ ಪರಂಪರೆಯೇ ಕಾಣೆಯಾಗುತ್ತಿದೆ ಎಂದು ಹೇಳಬೇಕು. ಏಕೆಂದರೆ ರೇಡಿಯೋ, ದೂರದರ್ಶನ, ಕ್ಯಾಸೆಟ್, ಸಿಡಿಗಳ ಮೂಲಕ ಎಲ್ಲ ಶೈಲಿಗಳ ಗಾಯನವನ್ನು ಆಲಿಸಬಹುದಾದ ಇಂದಿನ ಯುವ ಪ್ರತಿಭೆಗಳು ಎಲ್ಲ ಪದ್ಧತಿಗಳ ಸಾರ ಸಂಗ್ರಹಿಸಿ ತಮ್ಮದೇ ಆದ ಗಾಯನ ಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಇಂಥ ಬೆಳವಣಿಗೆ ಘರಾಣೆಗಳ ಅಳಿವು – ಉಳಿವಿನ ಪ್ರಶ್ನೆಯಾಗಿದೆ ಎನ್ನಬೇಕು.