‘ಇದು ರುದ್ರವೀಣೆ ಶಿವರುದ್ರವೀಣೆ
ಇದಕೆ
ಸಮನಿನ್ಯಾವುದು ಕಾಣೆ
ಕಡಲ
ಘೋಷದಿ ಗಂಭೀರ ಮರ್ಮರದಿ
ಶಿವತಾಂಡವಕೆ
ಅಣಿಗೊಳಿಸಿದ ವೀಣೆ

ಪ್ರೊ. ಚಂದ್ರಶೇಖರ ವಸ್ತ್ರದ ಅವರು ಬರೆದ ಈ ಪದ್ಯದ ಸಾಲೇ ಹೇಳುವಂತೆ, ‘ರುದ್ರವೀಣೆ’ ಇದೊಂದು ಅಪರೂಪವಾದ, ತನ್ನದೇ ವೈಶಿಷ್ಟ್ಯಗಳನ್ನೊಳಗೊಂಡ, ಗಂಭೀರ ಪ್ರಕೃತಿಯ, ಶಿವನಿಂದ ಆವಿಷ್ಕರಿಸಲ್ಪಟ್ಟ ವೀಣೆ. ಪ್ರಾಚೀನ ಕಾಲದಿಂದಲೂ ‘ರುದ್ರವೀಣೆ’ ಈ ಪದ ಅನೇಕ ಗಾಯನದ ಚೀಜ್‌ಗಳಲ್ಲಿ, ಕಥೆಗಳಲ್ಲಿ, ಕವಿತೆಗಳಲ್ಲಿ, ಗ್ರಂಥಗಳಲ್ಲಿ ಬಳಸಿದ್ದು ಕಂಡುಬರುತ್ತದೆ. ಅಲ್ಲದೇ, ಅಜಂತಾ – ಎಲ್ಲೋರಾ, ಬೇಲೂರು – ಹಳೇಬೀಡು, ಹಂಪಿ ಮುಂತಾದ ಐತಿಹಾಸಿಕ ಸ್ಥಳಗಳಲ್ಲಿ, ಶಿಲೆಗಳಲ್ಲಿ ‘ರುದ್ರವೀಣೆ’ ಎನ್ನಬಹುದು. ಅಲ್ಲದೇ ಭಾರತೀಯ ಸಂಗೀತದ ಇತಿಹಾಸದ ಕಡೆಗೆ ಒಂದು ನೋಟ ಹರಿಸಿದಾಗ ಕಂಡುಬರುವ ಅಂಶವೆಂದರೆ ‘ರುದ್ರವೀಣೆ’ ಹಾಗೂ ‘ಸರಸ್ವತೀ ವೀಣೆ’ ಯ ಪ್ರಪ್ರಥಮ ಉಲ್ಲೇಖವು ‘ನಾರದ ಕೃತ ಸಂಗೀತ ಮಕರಂದ’ದಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ತದನಂತರ ‘ಸಂಗೀತ ಪಾರಿಜಾತ’ ಮತ್ತು ‘ರಾಧಾ ಗೋವಿಂದ ಸಂಗೀತ ಸಾರ’ ಗ್ರಂಥಗಳಲ್ಲಿಯೂ ಇದರ ಉಲ್ಲೇಖಗಳು ಇವೆ.

ಭಾರತದಲ್ಲಿ ವಿಶಾಲವಾಗಿ ಹರಡಿದ ದಂತಕಥೆಯೊಂದರ ಪ್ರಕಾರ ರುದ್ರವೀಣೆಯು ಶಿವನಿಂದ ಶೋಧಿಸಲ್ಪಟ್ಟಿತು. ಶಿವನು ಒಂದು ದಿನ ಪಾರ್ವತಿಯು ಶಯನಾವಸ್ಥೆಯಲ್ಲಿದ್ದಾಗ ಆಕೆಯ ಆಕರ್ಷಕ ನಿದ್ರಾಭಂಗಿಯಿಂದ ಪ್ರೇರಿತನಾಗಿ, ಅದೇ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದು ಸಂಗೀತ ಸಾಧನವನ್ನು ಹಾಗೂ ದೃಷ್ಟಾಂತವನ್ನು ಸೃಷ್ಟಿಸಲು ನಿರ್ಧರಿಸಿದನು. ಹಾಗೇ ಆವಿಷ್ಕಾರಗೊಂಡು ವೀಣೆಗೆ ‘ಪಾರ್ವತಿವೀಣೆ’ ಎಂದು ಕರೆದನು. ಅಂದರೆ ಕ್ರೈಸ್ತ ಶತಮಾನಗಳಿಗಿಂತ ಸುಮಾರು ೨೦೦೦ ವರ್ಷಗಳಿಗಿಂತ ಹಿಂದೆ ಎನ್ನಬಹುದಾಗಿದೆ.

ಹೀಗೆ ಶಿವನಿಂದ ಆವಿಷ್ಕಾರಗೊಂಡ ವೀಣೆಯನ್ನೇ ಶಿವನು ತನ್ನ ತಾಂಡವ ನೃತ್ಯಕ್ಕೆ ಸಮನಾಗಿ ಪಕ್ಕವಾದ್ಯದಂತೆ ಬಳಸಿಕೊಂಡ ಎನ್ನಲಾಗಿದೆ. ಶಿವನ ತಾಂಡವ ನೃತ್ಯಕ್ಕನುಸಾರವಾಗಿ ವೀಣೆಯಲ್ಲಿ ನಾದನ್ನು ಹೊರಡಿಸಲಾಗುತ್ತಿತ್ತೆಂದೂ, ತಾಂಡವ ನೃತ್ಯದಲ್ಲಿನ ರೌದ್ರಾವತೆಗೆ ತಕ್ಕತೆ ವೀಣೆಯಲ್ಲಿನ ನಾದ ಹೊರಹೊಮ್ಮುವುದ ಕಂಡು ಶಿವನು ಅದಕ್ಕೆ ‘ರುದ್ರವೀಣೆ’ ಎಂದೂ ಹೆಸರಿಸಿದನೆಂದು ಹೇಳಲಾಗುತ್ತದೆ.

ಹಿಂದೂ ಗ್ರಂಥಗಳ ಆಧಾರದ ಪ್ರಕಾರ ದೇವಲೋಕದಲ್ಲಿ ಉದ್ಭವವಾದ ‘ರುದ್ರವೀಣೆ’ಯು ದೇವತೆಗಳಿಂದ ನುಡಿಸಲ್ಪಡುತ್ತಿತ್ತು. ಈ ನಂಬಿಕೆಯ ಪ್ರಕಾರ ಶಿವನು ವೀಣೆ ನುಡಿಸುವ ಕಲೆಯನ್ನು ಸರಸ್ವತಿಗೆ ಕಲಿಸಿದನೆಂದೂ, ಸರಸ್ವತಿಯಿಂದ ನಾರದನಿಗೆ ಬಂದ ಈ ವಿದ್ಯೆ ಮುಂದೆ ನಾರದನಿಂದ ಭೂ ಲೋಕಕ್ಕೆ ಬಂತೆಂದೂ ಈ ಮೂಲಕ ಮಾನವ ಮಾತೃರಲ್ಲಿ ಈ ವೀಣೆಯ ಕಲೆ ಪ್ರಸಾರವಾಯಿತೆಂದೂ ಹೇಳಲಾಗಿದೆ.

ಮುಂದೆ ವೇದಕಾಲದಲ್ಲಿ ಈ ರುದ್ರವೀಣೆಯನ್ನು ಋಷಿಮುನಿಗಳು ಯಾವ ಯಜ್ಞಗಳ ಸಮಯದಲ್ಲಿ ಕೂಡ ಬಳಸುತ್ತಿದ್ದರಂತೆ. ಅವರು ಯಜ್ಞ ಯಾಗಾದಿಗಳನ್ನು ನಡೆಸುವಾಗ ಪಠಿಸುವ ವೇದ ಮಂತ್ರ ಫೋಶಗಳನ್ನು ಈ ರುದ್ರವೀಣೆಯಲ್ಲಿಯೂ ನುಡಿಸುತ್ತಿದ್ದರಂತೆ.

ತದನಂತರ ಇದು ಧ್ರುಪದ – ಧಮಾರ್ ಯುಗಗಳಲ್ಲಿ ಬಳಕೆಯಾಗ ತೊಡಗಿತು. ರುದ್ರವೀಣೆಯ ನಾದವು ಗಂಭೀರ ಪ್ರಕೃತಿಯುಳ್ಳದ್ದಾದ್ದರಿಂದ ಧ್ರುಪದ ಧಮಾರ್‌ಗಳು ಇದರಲ್ಲಿ ಬಹು ನೈಜತೆಯಿಂದ ಮಾನವನ ಧ್ವನಿಗುಣವಾಗಿ ಹೊರಹೊಮ್ಮುತ್ತದೆ. ಆದ್ದರಿಂದ ರುದ್ರವೀಣೆಯು ಕೇವಲ ಧ್ರುಪದ ಧಮಾರ್ ಗಳಿಗಷ್ಟೇ ಸೀಮಿತವಾಗಿತ್ತು. ಅಲ್ಲದೇ ಆ ಕಾಲದಲ್ಲಿ ಪ್ರಚಲಿತವಾಗಿದ್ದ ತಾಲವಾದ್ಯವಾದ ಪಖವಾಜ್ ಗಳ ಜೊತೆಗೆ ಮಾತ್ರಿದನ್ನು ನುಡಿಸಲಾಗುತ್ತಿತ್ತು.

೧೯ನೇ ಹಾಗೂ ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಉಸ್ತಾದ್ ‘ಬಂದೇ ಅಲಿಖಾನ್’ ಎಂಬುವವರು ರುದ್ರವೀಣೆಯಲ್ಲಿ ಖ್ಯಾಲವಾದನ ಆವಿಷ್ಕಾರಕ್ಕೆ ನಾಂದಿ ಹಾಡಿದರು. ಮುಂದೆ ಅವರ ಶಿಷ್ಯ ಪರಂಪರೆಯವರಾದ ಉಸ್ತಾದ್ ಮುರಾದ ಖಾನ್, ಉಸ್ತಾದ್ ರಜಬ ಅಲಿಖಾನ್, ಪಂ. ದತ್ತೋಪಂಥ ಪಾಠಕ್ ಹಾಗೂ ಡಾ. ಬಿಂದುಮಾಧವ್ ಪಾಠಕ್ ಮುಂತಾದವರು ರುದ್ರವೀಣೆಯಲ್ಲಿ ಖ್ಯಾಲವಾದನ ಶೈಲಿಯನ್ನೇ ಅಳವಡಿಸಿಕೊಂಡು ಪ್ರಚಾರಕ್ಕೆ ತಂದರು. ರುದ್ರವೀಣೆಯಲ್ಲಿನ ಈ ಖ್ಯಾಲ ವಾದನ ಶೈಲಿಯಲ್ಲಿ ಇನ್ನೂ ಅನೇಕ ಶೋಧ ಕಾರ್ಯಗಳಾಗುವ ಅವಶ್ಯಕತೆಯಿದೆ.

ಈ ರುದ್ರ ವೀಣೆಯೇ ಮುಂದೆ ಹೊಸ ಹುಟ್ಟು ಪಡೆದು ಸಿತಾರದ ಆವಿಷ್ಕಾರವಾಯಿತು. ಈಗಿನ ಖ್ಯಾಲ ಯುಗದಲ್ಲಿ ಸಿತಾರ್ ವಾದ್ಯವು ಬಹಳ ಪ್ರಚಾರದಲ್ಲಿದೆ. ‘ಸೂರ್ ಬಹರ್’ ಇದೇ ರೀತಿ ಆವಿಷ್ಕಾರವಾದ ವಾದ್ಯವಾದರೂ ಅದರಲ್ಲಿ ದ್ರುಪದ ನುಡಿಸುವ ಪದ್ಧತಿ ಜಾರಿಯಲ್ಲಿದೆ.

ರುದ್ರವೀಣೆಯು ನುಡಿಸುವಲ್ಲಿ, ನುಡಿಯುವಲ್ಲಿ ಮತ್ತು ಸ್ವರೂಪ (ಆಕಾರ)ದಲ್ಲಿ ಪ್ರತಿಯೊಂದರಲ್ಲಿ ತನ್ನದೇ ಆದ ಒಂದು ಭಿನ್ನ ಶೈಲಿಯನ್ನೊಳಗೊಂಡಿದೆ. ಇದನ್ನು ತಯಾರಿಸುವವರಲ್ಲಿಯೂ ಕೂಡ ಒಂದು ರೀತಿಯ ವಿಭಿನ್ನತೆ ಕಂಡು ಬರುತ್ತದೆ. ಸಂಗೀತ ಉಪಕರಣಗಳನ್ನು ತಯಾರಿಸುವವರೆಲ್ಲರೂ ರುದ್ರವೀಣೆಯನ್ನು ತಯಾರಿಸಲು ಮುಂದಾಗುವುದಿಲ್ಲ. ಕೆಲವೇ ಕೆಲವರು ವಂಶಪಾರಂಪರ್ಯವಾಗಿ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಲ್ಕತ್ತಾದಲ್ಲಿ ಕೆಲವೇ ಕೆಲವರು ಅತ್ಯುತ್ತಮ ರುದ್ರವೀಣಾ ತಯಾರಕರಿದ್ದಾರೆ. ಆದರೆ ಅವರು ತಯಾರಿಸುವಂಥ ರುದ್ರವೀಣೆಯ ಬೆಲೆಯು ನಮ್ಮಂಥ ಸಾಧಾರಣದವರಿಗೆ ಕೈಗಟುಕುವಂಥದ್ದಲ್ಲ. ಅಂದರೆ ಒಂದು ರುದ್ರವೀಣೆಯ ಬೆಲೆ ೫೦,೦೦೦ ರೂಪಾಯಿಗಳಿಗೂ ಮೇಲ್ಪಟ್ಟಿರುತ್ತದೆ. ಮಿರಜದಲ್ಲಿಯೂ ಒಬ್ಬಿಬ್ಬರು ರುದ್ರವೀಣಾ ತಯಾರಕರಿದ್ದಾರಾದರೂ ಕಲ್ಕತ್ತಾದ ರುದ್ರವೀಣೆಯ ಗುಣಮಟ್ಟ ಇಲ್ಲಿಯ ರುದ್ರವೀಣೆಗಿರುವುದಿಲ್ಲವಾದ್ದರಿಂದ ಬೆಲೆಯಲ್ಲಿಯೂ ಸ್ವಲ್ಪ ಇಳಿಕೆ ಇರುತ್ತದೆ. ಕಾರಣ ಇಲ್ಲಿಯ ಕಲಾವಿದರೂ ಮೀರಜದಲ್ಲಿನ ವಾದ್ಯಗಳನ್ನು ಬಳಸುವುದರಿಂದ ವಾದನದ ಗುಣಮಟ್ಟವನ್ನು  ಕಾಯ್ದುಕೊಂಡು ಹೋಗುವಲ್ಲಿ ಅಡೆತಡೆಯಾಗಿದೆ.

ರುದ್ರವೀಣಾ ತಯಾರಕರು ಸಿತಾರ್ ತಯಾರಕರಿಂದ ಹೆಚ್ಚು ಸಮರ್ಥರಿರಬೇಕು. ರುದ್ರವೀಣೆಯನ್ನು ತಯಾರಿಸುವಾಗ ಆ ವೀಣೆಯನ್ನು ನುಡಿಸುವ ಕಲಾಕಾರನ ಒಂದು ಕೈಯ ಹೆಬ್ಬೆರಳಿನಿಂದ ಇನ್ನೊಂದು ಕೈಯ ಹೆಬ್ಬೆರಳ ತುದಿಯವರೆಗಿನ ಸರಿಯಾದ ಅಳತೆ, ಭುಜದ ಅಳತೆ, ಮತ್ತು ವ್ಯಕ್ತಿಯ ಎತ್ತರ ಹೀಗೆ ಎಲ್ಲ ಅಳತೆಗಳನ್ನು ತಿಳಿದುಕೊಂಡ ಅದಕ್ಕನುಸಾರವಾಗಿ ಶಾಸ್ತ್ರಬದ್ಧವಾಗಿ ತಯಾರಿಸಲಾಗುತ್ತದೆ. ಹಾಗಾಗಿ ಒಬ್ಬರ ರುದ್ರವೀಣೆಯು ಇನ್ನೊಬ್ಬರಿಗೆ ನುಡಿಸಲು ಸರಿಹೊಂದುವುದಿಲ್ಲ. ನುಡಿಸುವ ವ್ಯಕ್ತಿಯ ಅಳತೆಗೆ ಸರಿಹೊಂದುವ ಒಂದು ನಿರ್ದಿಷ್ಟ ಅಳತೆಯ ಪೊಳ್ಳು ಕಟ್ಟಿಗೆಗೆ (ಮೊದಲು ಇದಕ್ಕಾಗಿ ಬಿದಿರಿನ ಬಂಬು ಬಳಸುತ್ತಿದ್ದರು) ಒಂದೇ ಆಕಜಾರ, ಒಂದೇ ಅಳತೆ ಇರುವ ಎರಡು ಕಾಯಿಗಳನ್ನು ನಿರ್ದಿಷ್ಟವಾದ ಅಂತರದಲ್ಲಿ ಜೋಡಿಸಿರುತ್ತಾರೆ. ಮೇಲಿನ ಪೊಳ್ಳು ಕಟ್ಟಿಗೆಯ ಮೇಲೆ ಅಂದರೆ ದಾಂಡಿಯ ಮೇಲೆ ಮೇಣದ ಸಹಾಯದಿಂದ ಮೆಟ್ಟಿಲುಗಳನ್ನು (ಕಟ್ಟಿಗೆಯ ಪಡದಾ) ಸ್ವರಗಳಿಗನುಸಾರವಾಗಿ ಜೋಡಿಸುತ್ತಾರೆ. ಸಿತಾರದಲ್ಲಿಯ ಪಡದಾಗಳಂತೆ ಇವುಗಳನ್ನು ಸರಿಸಲು ಬರುವುದಿಲ್ಲ. ಒಟ್ಟೂ ಏಳು ತಂತಿಗಳನ್ನು ಜೋಡಿಸಿರುತ್ತಾರೆ. ಇದಕ್ಕೆ ಸಿತಾರ್ ಗಿಂತ ದಪ್ಪವಾದ ತಂತಿಗಳನ್ನು ಬಳಸಲಾಗುತ್ತದೆ. ಇದರ ಬ್ರಿಜ್ ಗಳೂ ಕೂಡ ಸ್ಥಿರ ಆಗಿರುತ್ತವೆ. ಮೀಟಲು ಅನುಕೂಲವಾಗುವಂತೆ  ಕೈಯ ಮೊದಲ ಎರಡೂ ಬೆರಳುಗಳಿಗೆ ಮಿಜರಾಬ್ (ಸಖೀ)ನ್ನು ಧರಿಸಲು ಪದ್ಧತಿಯೂ ಕೂಡ ಸಿತಾರ್ ಗಿಂತ ಭಿನ್ನವಾಗಿರುತ್ತದೆ. ಬೆರಳುಗಳನ್ನು ಮೀಟುವ ಪದ್ಧತಿ, ಬೆರಳುಗಳ ಚಲನಾ ಪದ್ಧತಿ ಪ್ರತಿಯೊಂದು ಸಿತಾರ್‌ನ ಕ್ರಮಕ್ಕಿಂತ ಭಿನ್ನವಾಗಿರುತ್ತದೆ. ಬಲಗೈಯ ೫ ಬೆರಳುಗಳನ್ನೂ ಕೂಡ ನುಡಿಸುವಾಗ ಬೇರೆ ಬೇರೆ ರೀತಿಯಿಂದ ಚಾಲನೆಯಲ್ಲಿಡಬೇಕಾಗುತ್ತದೆ. ರುದ್ರವೀಣೆಯನ್ನು ಎಡ ಭುಜದ ಮೇಲೆ ಒಂದು ಕಾಯಿ ಮತ್ತು ಬಲ ತೊಡೆಯ ಮೇಲೆ ಒಂದು ಕಾಯಿ ಬರುವಂತೆ ನುಡಿಸುವವನ ಎದೆಗೆ ಅಡ್ಡವಾಗಿ ಹಿಡಿದುಕೊಳ್ಳಬೇಕಾಗುತ್ತದೆ. ಭುಜದ ಮೇಲಿನ ಕಾಯಿಗೆ ಎಡಗಿವಿಯನ್ನು ಸಮನಾಗಿ ಒತ್ತಿ ನುಡಿಸಿದಾಗ ಅಲ್ಲಿಂದ ಹೊಮ್ಮುವ ನಾದವನ್ನು ಕಲಾಕಾರನು ಸಂಪೂರ್ಣವಾಗಿ ಮನಸ್ಸಿನಲ್ಲಿ ತುಂಬಿಕೊಂಡು ತನ್ಮಯತೆಯಿಂದ ನಾದ ಹೊರಡಿಸಬೇಕಾಗುತ್ತದೆ. ಕಾರಣ, ರುದ್ರವೀಣೆಯ ನಾದ ಕೇಳಲು ಬಹಳ ಸಣ್ಣದಾಗಿರುವುದರಿಂದ ಕಲಾಕಾರನು ಹಾಗೇ ಕಾಯಿಗೆ ಕಿವಿಗೊಟ್ಟು ನುಡಿಸುವುದು ಒಂದು ರೀತಿಯಲ್ಲಿ ಅನಿವಾರ್ಯವೂ ಹೌದು. ವೇದಿಕೆಯ ಮೇಲೆ ಅಥವಾ ಸಭೆಗಳಲ್ಲಿ ನುಡಿಸುವಾಗ ಅದಕ್ಕೆಂದೇ ವಿಶೇಷವಾಗಿ ‘ಪಿಕ್ ಆಪ್’ ಎಂಬ ಧ್ವನಿ ಇಮ್ಮಡಿಗೊಳಿಸುವಂಥ ಚಿಕ್ಕ ಸಾಧನವನ್ನು ವೀಣೆಯ ದಾಂಡಿಗೆ ಅಳವಡಿಸಿಕೊಂಡು ನುಡಿಸುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಈ ಸೌಕರ್ಯಗಳಿರುತ್ತಿರಲಿಲ್ಲವಾದ್ದರಿಂದ ಶ್ರೋತೃಗಳು ನುಡಿಸುವವನ ಅತೀ ಸಮೀಪದಲ್ಲಿ ಕುಳಿತು ಆಲಿಸುತ್ತಿದ್ದರಂತೆ.

ರುದ್ರವೀಣೆಯ ಜೊತೆಗೆ (ಸಾಥ-ಸಂಗತ) ಪಕ್ಕವಾದ್ಯವಾಗಿ ಉತ್ತರ ಭಾರತದಲ್ಲಿ ‘ಪಖವಾಜ್’ನ್ನು ಬಳಸುತ್ತಾರೆ. ಆದರೆ, ಕರ್ನಾಟಕದಲ್ಲಿ ‘ಪಖವಾಜ್ ನುಡಿಸುವವರೇ ಇಲ್ಲವಾದ್ದರಿಂದ’ (ಇದ್ದರೆ ಅವರ ಬಗ್ಗೆ ಮಾಹಿತಿ ಲಭ್ಯವಿಲ್ಲದ) ರುದ್ರವೀಣಾಕಾರರು ಅನಿವಾರ್ಯವಾಗಿ ತಬಲಾ ಜೊತೆಗೆ ನುಡಿಸುವುದನ್ನು ರೂಢಿಸಿಕೊಳ್ಳಬೇಕಾಯಿತು. ಅಂತೆಯೇ ತಬಲಾದಲ್ಲಿ ನುಡಿಸಲ್ಪಡುವ ಖ್ಯಾಲ್ ತಾಲಗಳಲ್ಲೇ (ತೀನ್ ತಾಲ್ – ರೂಪ್ ತಾಲ್) ಗತ್ ಗಳನ್ನು ರಚಿಸಬೇಕಾಯಿತು. ಹೀಗಾಗಿ ಕರ್ನಾಟಕ ರುದ್ರವೀಣಾಕಾರರು ತಬಲಾವನ್ನು ಪಕ್ಕವಾದ್ಯವಾಗಿ ಬಳಸುವುದು ರೂಢಿಯಲ್ಲಿ ಬಂದಿತು.

ಇನ್ನು ರುದ್ರವೀಣೆಯಲ್ಲಿ ರಾಗಗಳನ್ನು ನುಡಿಸುವ, ಕ್ರಮಕ್ಕೆ ಬರೋಣ ರುದ್ರವೀಣೆಯಲ್ಲಿ ರಾಗವನ್ನು ನುಡಿಸುವಾಗ ಕಲಾಕಾರನು ನಿರ್ಧಾರಿದ ಸಮಯದ ಮುಕ್ಕಾಲು ಭಾಗವನ್ನು ಆಲಾಪ, ಜೋಡ, ಝಾಲಾ ಹೀಗೆ ಮೂರು ಭಾಗವಾಗಿ ವಿಂಗಡಿಸಿ, ಉಳಿದ ಕಾಲು ಭಾಗದಲ್ಲಿ ಪಖವಾಜ್ ಅಥವಾ ತಬಲಾದೊಂದಿಗೆ ಧ್ರುಪದ ಬಂದಿಶ ಅಥವಾ ಗತಗಳನ್ನು ನುಡಿಸುತ್ತಾನೆ.

ಆಲಾಪದಲ್ಲಿ ಪ್ರಾರಂಭದಲ್ಲಿ ಮಂದ್ರ ಸಪ್ತಕ ಅತೀ ಮಂದ್ರ ಸಪ್ತಕಗಳಲ್ಲೂ ಕೂಡ ರಾಗ ವಿಸ್ತಾರವನ್ನು ಮಾಡುತ್ತಾರೆ. ಅಲ್ಲದೇ, ಅದಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನೂ ಕೂಡಾ ಕೊಡುತ್ತಾರೆ. ಹೀಗಾಗಿ ರುದ್ರವೀಣೆಯು ಬಹುತೇಕವಾಗಿ ಅತೀ ಗಂಭೀರ ಚಲನೆಯಿಂದಲೇ ಪ್ರಾರಂಭವಾಗುತ್ತದೆ. ರಾಗ ಸ್ವರಗಳನ್ನು ಅತೀ ಮಂದ್ರದಲ್ಲೂ ಕೂಡಾ ಎಳೆಎಳೆಯಾಗಿ ಬಿಡಿಸಬಲ್ಲ ಏಕೈಕ ವಾದನ ರುದ್ರವೀಣೆ ಎಂದರೆ ತಪ್ಪಿಲ್ಲ. ಇದರಲ್ಲಿ ಆಲಾಪಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುವುದರಿಂದ ಸಾಧ್ಯವಾದಷ್ಟು ಮೂರು ಸಪ್ತಕಗಳಲ್ಲೂ ಸಂಚರಿಸಿ, ಆಲಾಪದ ಶ್ರೀಮಂತಿಕೆಯನ್ನು ಎತ್ತಿ ತೋರಿಸುವಲ್ಲಿ  ರುದ್ರವೀಣಾಕಾರನು ಬಹಳವೇ ಪ್ರಾವಿಣ್ಯತೆ ಹೊಂದಿರಲೇ ಬೇಕಾಗುತ್ತದೆ. ಕೇವಲ ಸರಿಯಾದ ಅಭ್ಯಾಸ ಬಲದಿಂದ ಮಾತ್ರ ಇದು ಸಾಧ್ಯ. ಅಲ್ಲದೇ ಆಲಾಪಕ್ಕೆ ಹೆಚ್ಚಿನ ಸಮಯ ಮತ್ತು ಪ್ರಾಧಾನ್ಯತೆ ಇರುವುದರಿಂದ ನುಡಿಸುವವನಿಗೆ ರಾಗದ ಸಂಪೂರ್ಣ ಸ್ಥೂಲ ಮಾಹಿತಿ ಇರಲೇಬೇಕಾಗುತ್ತದೆ. ರಾಗಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಎಚ್ಚರವಹಿಸಿ, ಒಬ್ಬ ಮಾಂತ್ರಿಕನಂತೆ ಶ್ರೋತೃವನ್ನು ನಿಧಾನವಾಗಿ ಒಂದು ಮಾಯಾ ಲೋಕಕ್ಕೆ ಕೊಂಡೊಯ್ಯಬೇಕಾಗುತ್ತದೆ. ಆಲಾಪದಲ್ಲಿಯ ಮೂರು ಮೆಟ್ಟಿಲುಗಳಾದ ಆಲಾಪ,ಜೋಡ, ಝಾಲಾ ಮೂರರಲ್ಲೂ ಇದೇ ನಿಯಮ ಅನ್ವಯಿಸುತ್ತದೆ. ನಂತರ ಬಂದಿಶ ಅಥವಾ ಗತ್  ಇಲ್ಲಿಯೂ ಕೂಡ ಚಿತ್ರಕ್ಕೆ ಒಂದು ಚೌಕಟ್ಟನ್ನು ನಿರ್ಮಿಸಿದಂತೆ, ರಾಗಕ್ಕೆ ಒಂದು ಲಯಬದ್ಧವಾದ ಗತಿಯನ್ನು ಪಕ್ಕವಾದ್ಯದೊಂದಿಗೆ, ಯಾವುದೇ ಚಂಚಲತೆಗೊಳಗಾಗದೇ ಆಲಾಪದಷ್ಟೇ ಗಂಭೀರವಾಗಿ ದರ್ಪದಿಂದೆಂಬಂತೆ ನುಡಿಸಬೇಕಾಗುತ್ತದೆ. ಇಲ್ಲಿ ಸಿತಾರಿನ ಗತ್‌ಗಳಲ್ಲಿರುವಂತೆ ಯಾವುದೇ ಗಿಮಿಕ್ಸಗಳಿರುವುದಿಲ್ಲ. ಸಿತಾರ್ ನಲ್ಲಿರುವಂತೆ ಖಟಕಾ, ಮುರ್ಖಿಗಳನ್ನು ಇದರಲ್ಲಿ ಪ್ರಯೋಗಿಸುವಂತಿಲ್ಲ. ಉಧಕ, ಗಮಕ, ಗಳಂಥಾ ಕ್ಲಿಷ್ಟವಾದ ಬೆರಳ ಚಾಲನೆಯನ್ನೊಳಗೊಂಡ ತಾನಗಳನ್ನು ನುಡಿಸಬೇಕಾಗುತ್ತದೆ. ಪಕ್ಕವಾದ್ಯದವರೊಂದಿಗೆ ಸವಾಲ್ ಜವಾಬ್ ಗಳಿಗೆ ಇದರಲ್ಲಿ ಅವಕಾಶವಿಲ್ಲ. ಇನ್ನು ಪಕ್ಕವಾದ್ಯದವರು ಬಹಳ ನಿಪುಣರಾಗಿದ್ದಲ್ಲಿ  ‘ಲಡಂತ್’ಗಳನ್ನು ಮಾಡಬಹುದು.

ಇವೇ ಮುಂತಾದ ವಿಶಿಷ್ಟತೆಯನ್ನು ರುದ್ರವೀಣೆಯಲ್ಲಿ ಕಾಪಾಡಿಕೊಂಡು ಬರುವುದರಿಂದ ರುದ್ರವೀಣೆ ಒಂದು ಭಿನ್ನ ಶೈಲಿಯ ಗಂಭೀರ ವಾದ್ಯವೆನಿಸಿಕೊಂಡಿದೆ.

ಇಲ್ಲಿ ಶ್ರೋತೃವು ಕಲಾಕಾರನಷ್ಟೇ ತನ್ಮಯನಾಗಿ, ನುಡಿಸುತ್ತಿರುವ ರಾಗದಲ್ಲಿ ಸಂಪೂರ್ಣವಾಗಿ ತನ್ನ ಮನಸ್ಸನ್ನು ಕೇಂದ್ರೀಕರಿಸಿ ನುಡಿಸುತ್ತಿರುವಾತನ ಮಾನಸಿಕತೆಯ ಜೊತೆಗೆ ತಾನೂ ಸಂಪೂರ್ಣ ಬೆಸೆದುಕೊಂಡು ಹೋದಲ್ಲಿ ಮಾತ್ರ ಕಲಾಕಾರನ ಭಾಷೆ ಆತನಿಗೆ ಅರ್ಥವಾಗಲು ಸಾಧ್ಯ. ಇದು ಶ್ರೋತೃವಿಗೆ ರುದ್ರವೀಣೆಯ ನುಡಿಸುವಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಬಗೆ ಬಗೆಯ ಪ್ರಶ್ನೆಗಳೇಳುವುದು ಸಹಜ.

ಮುಂದೆ ಮುಕ್ತಾಯದ ಹಂತದಲ್ಲಿಯೂ ಕೂಡ ಸಿತಾರ್‌ನಲ್ಲಿರುವಂತೆ ರೋಮಾಂಚನಕಾರಿಯಾದ ಅಂತ್ಯ ಇದಕ್ಕೆ ಇರುವುದಿಲ್ಲ. ಇದು ತನ್ನ ಗಾಂಭೀರ್ಯತೆಯನ್ನು ಕೊನೆಯವರೆಗೂ ಬಿಟ್ಟುಕೊಡದೇ ಬಹುತೇಕವಾಗಿ ಪ್ರಾರಂಭಿಸಿದ ಲಯದಲ್ಲೇ ಅಂತ್ಯಗೊಳ್ಳುತ್ತದೆ. ಅಂದರೆ, ಅಂತ್ಯದಲ್ಲಿ ನಮ್ಮ ಹೃದಯ ಬಡಿತದ ಏರುಪೇರಿಗೆ ಇದು ಅವಕಾಶ ಮಾಡಿಕೊಡುವುದಿಲ್ಲ ಎಂದರೆ ಸಮಂಜಸವಾದೀತು.

ದ್ರುಪದ ಶೈಲಿಯಿಂದ ರುದ್ರವೇಣಿಯನ್ನು ನುಡಿಸುವಾಗ ಮುಖ್ಯವಾಗಿ ಪ್ರಚಲಿತವಾದ, ಶಾಸ್ತ್ರಬದ್ಧವಾದ, ಹೆಚ್ಚಾಗಿ ಗಂಭೀರ ಪ್ರಕೃತಿಯುಳ್ಳ ರಾಗಗಳನ್ನೇ ಆಯ್ದುಕೊಳ್ಳುತ್ತಾರೆ. ದ್ರುಪದ ಗಾಯನಕ್ಕೂ ಈ  ನಿಯಮ ಅನ್ವಯಿಸುತ್ತದೆ. ಮಾಲಕಾಂಸ, ತೋಡಿ, ಮಾರವಾ, ಭೈರವ, ಕಾನಡಾದ ಪ್ರಕಾರಗಳು ಇವುಗಳಲ್ಲಿ ಬಹಳ ಆನಂದ ಕೊಡುತ್ತದೆ. ದರ್ಬಾರಿ ಕಾನಡಾದಂಥ ರಾಗ ದ್ರುಪದ ಶೈಲಿಯಲ್ಲಿ ಶಕಿತಯುತವಾಗಿ ಕೇಳಿಬಂದಷ್ಟು ಪವರ್ ಫುಲ್ ಖ್ಯಾತ ಗಾಯಕಿಯಲ್ಲಿ ಕೇಳುವುದಿಲ್ಲ.

ಇನ್ನು ದ್ರುಪದದಲ್ಲಿ ಚೌತಾಲ್, ಸೂಲ್ ತಾಲ್, ಮತ್ ತಾಲ್, ತೇವ್ರಾ, ಬ್ರಹ್ಮತಾಲ್, ಧಮಾಲ್ ಮುಂತಾದ ತಾಲಗಳಲ್ಲೇ ಬಂದಿಷ್‌ಗಳಿರುತ್ತದೆ. ಈ ಬಂದಿಷ್‌ಗಳು ಹೆಚ್ಚಾಗಿ ಶಿವಸ್ತುತಿಯನ್ನೊಳಗೊಂಡ ಸಾಹಿತ್ಯವಾಗಿರುತ್ತವೆ. ಇದೇ ಬಂದಿಷ್‌ಗಳನ್ನು ರುದ್ರವೀಣೆಯಲ್ಲಿ ನುಡಿಸಿದಾಗ ದ್ರುಪದ ಗಾಯಕನ ಧ್ವನಿಯೊಂದಿಗೇ ಮಿಳಿತವಾಗಿ, ತಂತುವಾದ್ಯದ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಗಾಯಕನೊಂದಿಗೆ ಸ್ಪರ್ಧಿಸುವಷ್ಟರ ಮಟ್ಟಿಗೆ ಮಾನವನ ಧ್ವನಿಗೆ ಹತ್ತಿರವಾಗಿ ಸ್ಪಂದಿಸಿ ತಂತು ವಾದ್ಯಗಳಲ್ಲಿ ತನ್ನ ಉಚ್ಚಸ್ಥಾನವನ್ನು ಮರೆಯುವಲ್ಲಿ ಯಶಸ್ವಿಯಾಗಬೇಕಾಗುತ್ತದೆ. ಅಲ್ಲದೇ, ಹಾಗೆ ನುಡಿಸುವುದೂ ರುದ್ರವೀಣಾವಾದನಕಾರನ ಒಂದು ಸಾಮರ್ಥ್ಯದ ಪ್ರಶ್ನೆಯಾಗಿದೆ.

ಧ್ರುಪದ ಗಾಯನ – ವಾದನ ಶೈಲಿಯು ಆಧ್ಯಾತ್ಮಿಕತೆಯನ್ನೊಳಗೊಂಡ, ಗಂಭೀರ ಪ್ರಕೃತಿಯ ಶೈಲಿಯಾದ್ದರಿಂದ ಇದು ಈಗಿನ ‘ಖ್ಯಾಲ್’ ಎಂಬ ಶೃಂಗಾರ ರಸ ಪ್ರಧಾನ, (ಚಂಚಲ ಪ್ರಕೃತಿಯ) ಯುಗದಲ್ಲಿ, ಜನಸಾಮಾನ್ಯನನ್ನು ಕ್ಷಣದಲ್ಲಿ ಆಕರ್ಷಿಸುವ ವಿಷಯದಲ್ಲಿ ಪೈಪೋಟಿಗಿಳಿಯದೇ, ತನ್ನತನವನ್ನು ಕಳೆದುಕೊಳ್ಳಲಿಚ್ಛಸದೇ ಹಿಂದುಳಿಯಬೇಕಾಗಿದೆ.

ಅಲ್ಲದೇ ಧ್ರುಪದ ಗಾಯನ – ರುದ್ರವೀಣಾ ವಾದನ ಕೇವಲ ಗಂಡಸರ ಸೊತ್ತೆಂಬುದು ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿಯಾಗಿದೆ. ಹೆಣ್ಣು ಕಂಠ ಇದಕ್ಕೆ ಹೇಳಿಸಿದ್ದಲ್ಲ. ನಾಭಿಯಿಂದ ಹೊರಡಿಸುವ ಧ್ವನಿ ತರಂಗವನ್ನು ಹೆಣ್ಣು ಧ್ವನಿ ಸೂಕ್ತವಾಗಿ ನಿಭಾಯಿಸದು ಎಂಬ ಹೇಳಿಕೆ – ಇದ್ದರೂ ಕೆಲವೇ ಕೆಲವು ಸ್ತ್ರೀ ಧ್ರುಪದ ಗಾಯಕಿಯರು ಇದರಲ್ಲಿ ಮಿಂಚಿದ್ದಾರೆ.

ಇನ್ನು ರುದ್ರವೀಣಾ ವಾದನದ ವಿಷಯ ಬಂದಾಗ ರುದ್ರವೀಣೆಯಂಥ ಗಂಡು ವಾದ್ಯವನ್ನು ಹೆಣ್ಣು ತನ್ನ ಶರೀರದ ಮೇಲೆ ಹೊತ್ತುಕೊಂಡು ಅಭ್ಯಸಿಸುವದು ಹೆಣ್ಣಿನ ಸಾಮರ್ಥ್ಯಕ್ಕೆ ಅಸಾಧ್ಯವೆಂಬ ದೃಷ್ಟಿಯಿಂದ ಹೆಂಗಸರು ಇದರತ್ತ ಹೆಚ್ಚಿನ ಒಲವು ತೋರಿಸಿರಲಿಕ್ಕಿಲ್ಲ. ಏನೆಂದರೆ ಹೆಣ್ಣು ರುದ್ರವೀಣೆ ನುಡಿಸಿದ್ದೇ ಆದರೆ ಆಕೆ ಬಂಜೆ ಆಗುತ್ತಾಳೆ ಎಂಬುದು. ಆದರೆ ಇದು ಕೇವಲ ಮೂಢನಂಬಿಕೆ ಮಾತ್ರ. ಇದನ್ನು ನುಡಿಸುವಲ್ಲಿ ಗಂಡಸರಿಗಿರುವಷ್ಟೇ ಸಾಮರ್ಥ್ಯ ಹೆಣ್ಣಿಗೆ ಬರಬಲ್ಲದು. ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ಹೆಣ್ಣು ಇದಕ್ಕೆ ಕೈ ಹಾಕಿ ಗಂಡಿನಷ್ಟೇ ಸಮರ್ಥಳೆನಿಸಿಕೊಂಡಿದ್ದೇವೆ.

ಇತ್ತೀಚೆಗೆ ರುದ್ರವೀಣೆ ಒಂದು ಪ್ರಾಚೀನ ಹಾಗೂ ಅಪ್ರಚಲಿತ ವಾದ್ಯವಾಗಿ, ಹಿಂದೂಸ್ತಾನದ ಸಂಗೀತ ಉಪಕರಣಗಳ ಸಂಗ್ರಹಾಲಯಗಳಲ್ಲಿ ಸೇರ್ಪಡೆಯಾಗಿದೆ. ರುದ್ರವೀಣೆ ಕೇವಲ ಮ್ಯೂಸಿಯಂಗಳಲ್ಲಿ ಅಲಂಕಾರಿಕ ವಸ್ತು ಆಗಿರಲು ಬಿಡದೇ ಅದನ್ನು ಇನ್ನೂ ಹೆಚ್ಚಾಗಿ ಪ್ರಚಾರದಲ್ಲಿ ತರುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ರುದ್ರವೀಣಾ ವಾದಕರು ಬಹಳವಾಗಿ ಶ್ರಮಿಸಬೇಕಿದೆ. ಇದಕ್ಕೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಗೀತ ಅಕಾಡೆಮಿಯ ವತಿಯಿಂದಲೂ ಹೆಚ್ಚು ಪ್ರೋತ್ಸಾಹ ಸಿಗುವಂತಾಗಬೇಕು. ಅಂದರೆ ಮಾತ್ರ ಇನ್ನೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಇದನ್ನು ಕಲಿಯುವಲ್ಲಿ ಮುಂದಾಗುತ್ತಾರೆ. ಈ ವಾದ್ಯ ಖಂಡಿತವಾಗಿಯೂ ನಶಿಸಿಹೋಗುವಂಥ ಅಪಾಯದ ಅಂಚಿನಲ್ಲಿರುವುದರಿಂದ ಅದಷ್ಟು ಬೇಗ ಉಳಿವಿಗಾಗಿ ಪ್ರಯತ್ನಿಸುವುದು ಸಂಗೀತಗಾರರಾದ ನಮ್ಮ ನಿಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ.

ರುದ್ರವೀಣೆಯ ಪ್ರಚಾರ ಬಳಕೆ ಉತ್ತರ ಭಾರತದಲ್ಲಿ ಹೆಚ್ಚಾಗಿದೆ ಎಂಬ ಹೇಳಿಕೆ ಇದೆಯಾದರೂ ಅಲ್ಲಿಯೂ ಕೂಡಾ ಇದರ ವಾದಕರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಅವರಲ್ಲಿ ದಿಲ್ಲಿಯ ಉಸ್ತಾದ್ ಅಸದ್ ಅಲಿಖಾನ್, ಮುಂಬಯಿಯ ಉಸ್ತಾದ ಬಹಾಉದ್ಧೀನ್ ಡಾಗರ್, ಪುಣೆಯ ಪಂಡಿತ್ ಹಿಂದರಾಜ್ ದಿವೇಕರ್, ಕೊಲ್ಕತ್ತಾದ ಪಂಡಿತ್ ಅಸಿತ್ ಕುಮಾರ್ ಬ್ಯಾನರ್ಜಿ ಮುಂತಾದವರುಗಳ ಹೆಸರು ಉಲ್ಲೇಖನೀಯವಾಗಿದೆ.

ಧಾರವಾಡದ ‘ಸಿತಾರ್ ರತ್ನ ರಹಿಮತ್ ಖಾನ್’ ಎಂದೇ ಪ್ರಸಿದ್ಧರಾದ ಉಸ್ತಾದ್ ರಹಿಮತ್ ಖಾನ್ರವರು ಕೂಡಾ ಉಸ್ತಾದ್ ಬಂದೇ ಅಲಿಖಾನ್ ರವರಲ್ಲಿ ರುದ್ರವೀಣೆಯನ್ನು ಅಭ್ಯಸಿಸಿದವರು. ರುದ್ರವೀಣೆ ಹಾಗೂ ಸಿತಾರನ್ನು ಅಭ್ಯಸಿಸಿದ ಇವರಿಗೆ ರುದ್ರವೀಣೆಯನ್ನು ಈ ಗಳಿಕೆಯ ಸಾಧನವನ್ನಾಗಿ ಬಳಸಲು ಗುರುವಿನ ಅನುಮತಿ ಇರದ ಕಾರಣ ಮತ್ತು ಜೀವನ ನಿರ್ವಹಣೆಯ ದೃಷ್ಟಿಯಿಂದ ಸಿತಾರವನ್ನೇ ಪ್ರಮುಖ ವಾದ್ಯವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕಾಯಿತು. ಮುಂದೆ ಇವರ ಸುಪುತ್ರರಾದ ಉಸ್ತಾದ್ ಕರೀಂ ಖಾನ್ ರವರು ರುದ್ರವೀಣೆಯನ್ನು ನುಡಿಸುತ್ತಿದ್ದರಾದರೂ ತಂದೆಯ ಮಾರ್ಗದಲ್ಲಿಯೇ ಮುಂದುವರಿದು ಈಗಲೂ ಧಾರವಾಡದ ಉಸ್ತಾದ್ ಹಮೀದ್ ಖಾನ್ ರ ಮನೆಯಲ್ಲಿ ಆ ರುದ್ರವೀಣೆ ಇದೆ. ಧಾರವಾಡದ ಕ. ವಿ. ವಿ. ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಉಸ್ತಾದ್ ಹಮೀದ್ ಖಾನ್ ರವರು ವೃತ್ತಿಯಲ್ಲಿ ಸಿತಾರ್ ವಾದಕರಾದರೂ ತನ್ನ ಪೂರ್ವಜರಿಂದ ಪರಂಪರಾನುಗತವಾಗಿ ಬಂದ ಈ ರುದ್ರವೀಣೆಯನ್ನು ಬಹಳ ಭಕ್ತಿ, ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿದ್ದಾರೆ.

ಕರ್ನಾಟಕದಲ್ಲಿ ರುದ್ರವೀಣೆಯ ಪರಂಪರೆಯನ್ನು ಪೋಷಿಸಿ ಬೆಳೆಸಿದ ಕೀರ್ತಿ ಡಾ. ಬಿಂದುಮಾಧವ್ ಪಾಠಕ್‌ರವರಿಗೆ ಸಲ್ಲುತ್ತದೆ. ಉಸ್ತಾದ್ ರಜಬ ಅಲಿಖಾನ್ ರವರ ಶಿಷ್ಯರಾದ ಇವರು ರುದ್ರವೀಣೆ ಹಾಗೂ ಸಿತಾರ್ ಎರಡು ವಾದ್ಯಗಳಲ್ಲಿ ಪಾಂಡಿತ್ಯವುಳ್ಳವರಾಗಿದ್ದರು. ಇತ್ತ ತಂದೆ ದತ್ತೋಪಂಥ ಪಾಠಕ್‌ರವರಿಂದಲೂ ಬಳುವಳಿಯಾಗಿ ಬಂದ ಈ ವಿದ್ಯೆಯನ್ನು ಪರಂಪರಾಗತವಾಗಿ ಮುಂದುವರಿಸಿಕೊಂಡು, ರುದ್ರವೀಣೆಯಲ್ಲಿ ಖ್ಯಾಲ್ ವಾದನದ ಶೈಲಿಯನ್ನು ಕರ್ನಾಟಕದಲ್ಲೇ ಅಲ್ಲದೇ, ದೇಶದ ತುಂಬೆಲ್ಲ ಹರಡುವಂತೆ ಮಾಡಿದ ಕೀರ್ತಿಗೆ ಪಾತ್ರರಾದವರು. ಡಾ. ಗಂಗೂಬಾಯಿ ಹಾನಗಲ್‌ರವರಿಂದ ಪ್ರೇರಿತವಾಗಿ ಕಿರಾನಾ – ಘರಾನಾ ಶೈಲಿಯನ್ನು ಮೈಗೂಡಿಸಿಕೊಂಡ ಇವರು ಸಂಗೀತವನ್ನೊಳಗೊಂಡ ಯಾವುದೇ ವಿಷಯದ ಬಗ್ಗೆ ಚರ್ಚಿಸಬಲ್ಲ, ಮಾತನಾಡಬಲ್ಲ ಉತ್ತಮ ವಿಮರ್ಶಕಾರರು ಮತ್ತು ಉತ್ತಮ ವಾಗ್ಮೀಯೂ ಆಗಿದ್ದರು. ಅಲ್ಲದೆ, ‘ಭಾರತೀಯ ಸಂಗೀತ ಚರಿತ್ರೆ’, ‘ಡಾ. ಪುಟ್ಟರಾಜ ಗಾವಾಯಿ’ ಎಂಬ ಪುಸ್ತಕವನ್ನು ಬರೆದ ಇವರು ಉತ್ತಮ ಲೇಖಕರೂ ಆಗಿದ್ದರು. ಇವರು ಬರೆದ ಅನೇಕ ಲೇಖನಗಳು ಕೂಡಾ ಪತ್ರಿಕೆ – ಸಂಚಿಕೆ ಸಾಪ್ತಾಹಿಕಗಳಲ್ಲಿ ಪ್ರಕಟಗೊಂಡಿವೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದರೆಂಬ ಗೌರವಕ್ಕೆ ಪಾತ್ರರಾಗಿದ್ದ ಇವರು ‘ಎ ಟಾಪ್’ ಕಲಾವಿದರಾಗಿಯೂ ಬಹುಕಾಲ ಆಕಾಶವಾಣಿಯ ಕೇಳುಗರ ಮನ ತಣಿಸಿದ್ದಾರೆ.

ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತದ ತವರೂರೆನಿಸಿದ ಅವಳೀ ನಗರಗಳಲ್ಲೊಂದಾದ ಹುಬ್ಬಳ್ಳಿಯಲ್ಲಿ ೧೯೩೫ ಏಪ್ರಿಲ್ ೯ ರಂದು ಜನಿಸಿದ ಡಾ. ಬಿಂದುಮಾಧವ್ ಪಾಠಕ್ ರವರು ತಮ್ಮ ೧೭ನೇ ವಯಸ್ಸಿನಲ್ಲಿ ತಮ್ಮ ತಂದೆಯವರಾದ ಪಂಡಿತ್ ದತ್ತೊಪಂಥ ಪಾಠಕ್ ರವರಲ್ಲಿ ಸಂಗೀತದ ಶಿಕ್ಷಣ ನಾಂದಿ ಹಾಡಿದರು. ಮುಂದೆ ಮಧ್ಯಪ್ರದೇಶ ದೇವಾಸ ಉಸ್ತಾದ್ ರಜಬ್ ಅಲಿಖಾನ್ ರವರ ಶಿಷ್ಯತ್ವವನ್ನು ಸ್ವೀಕರಿಸಿದರು.

ಡಾ. ಮಲ್ಲಿಕಾರ್ಜುನ ಮನ್ಸೂರ್, ಡಾ. ಗಂಗೂಬಾಯಿ ಹಾನಗಲ್, ಡಾ. ಬಸವರಾಜ ರಾಜಗುರು ಮುಂತಾದ ಸಂಗೀತ ದಿಗ್ಗಜರ ಮಧ್ಯೆ ಬೆಳೆದ ಇವರಿಗೆ ಸಂಗೀತದ ಒಳ್ಳೆಯ ಸಂಸ್ಕಾರ ದೊರಕಿತೆಂದು ಸದಾ ನೆನೆಯುತ್ತಿದ್ದರು.

ಅನೇಕ ವರ್ಷಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿನ ಎಂ. ಎಂ. ಆರ್ಟ್ಸ್ ಎಂಡ್ ಸೈನ್ಸ್ ಕಾಲೇಜಿನಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಅಲ್ಲಿಯೂ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಯೂ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರಲ್ಲದೇ, ಅನೇಕ ವಿದ್ಯಾರ್ಥಿಗಳನ್ನು ತಮ್ಮ ಗರಡಿಯಲ್ಲಿ ಪಳಗಿಸಿದ್ದಾರೆ.

ಸಂಗೀತದಲ್ಲಿ ಡಾಕ್ಟರೇಟ್ ಪದವಿ ಪಡೆದ ಇವರು ಅನೇಕ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಯ ಮಾರ್ಗದರ್ಶಕರೂ ಆಗಿದ್ದರು. ತಂತು ವಾದ್ಯಗಳಲ್ಲಿಯೇ ಅತೀ ಕ್ಲಿಷ್ಟವಾದ ಮತ್ತು ಅಪ್ರಚಲಿತವಾದ ‘ರುದ್ರವೀಣೆ’ಯಂತಹ ವಾದ್ಯವನ್ನು ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಮೂವರು ಶಿಷ್ಯಂದಿರ ಮೂಲಕ ಈ ರುದ್ರವೀಣೆಯ ಪರಂಪರೆಯನ್ನು ಜೀವಂತವಾಗಿಡಲು ಶ್ರಮಿಸಿದ ಮಹಾನುಭಾವರಿವರು. ಇವರ ಪುತ್ರರಾದ ಡಾ. ಶ್ರೀಕಾಂತ ಪಾಠಕ್‌ರವರು ಇವರ ಶಿಷ್ಯರಲ್ಲಿ ಒಬ್ಬರಾಗಿ ತಂದೆಯವರ ಈ ಆಸ್ತಿಯನ್ನು ಜತನದಿಂದ ಕಾಪಾಡಿ ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಸಂಗತಿ. ಬಹುಭಾಷಾ ಪಾರಂಗತರಾಗಿದ್ದ ಡಾ. ಬಿಂದುಮಾಧವ್ ಪಾಠಕ್‌ರವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿ, ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ, ಹಿಂದಿಯಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್.ಡಿ. ಪದವಿಒ ಮತ್ತು ಫ್ರೇಂಚ್ ಭಾಷೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಮುಂತಾದ ಪದವಿಗಳ ಸರಮಾಲೆಯನ್ನು ಹೊತ್ತ ಸರದಾರರು. ಇವರು ಒಬ್ಬ ಉತ್ತಮ ವಾದಕ, ಭೋದಕ, ಸಂಶೋಧಕ, ವಿಮರ್ಶಕ ಹಾಗೂ ಉತ್ತಮ ವಾಗ್ಮಿ ಎನಿಸಿಕೊಂಡ ಅಪರೂಪದ ವ್ಯಕ್ತಿಯಾಗಿದ್ದರು.

ಅಂತೆಯೇ ಇವರ ಈ ಸಾಧನೆಯನ್ನು ಗುರುತಿಸಿ ೧೯೯೬ರಲ್ಲಿ ಕರ್ನಾಟಕ ಸರಕಾರ ಕರ್ನಾಟಕ ಅತ್ಯುನ್ನತ ಪುರಸ್ಕಾರವಾದ ‘ಶ್ರೀ ಕವಕ ಪುರಂದರ’ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಿತು. ಆರ್ಯಭಟ ಸಂಸ್ಥೆಯ ‘ಸಂಗೀತ ವಿದ್ಯಾ ಪ್ರಪೂರ್ಣ’ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಬಿರುದು ಪಡೆದ ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸದಸ್ಯರೂ ಆಗಿದ್ದರು. ಆಕಾಶವಾಣಿಯ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಇವರನ್ನು ದೇಶದ ಅನೇಕ ಪ್ರತಿಷ್ಠೆತರು ಮನಃಪೂರ್ವಕ ಶ್ಲಾಘಿಸಿದ್ದಾರೆ. ದೂರದರ್ಶನಗಳಲ್ಲಿಯೂ ಇವರ ಕಾರ್ಯಕ್ರಮಗಳು ಪ್ರಸಾರಗೊಂಡಿವೆ.

ತಾವೂ ಬೆಳೆದು ಜೊತೆ ಜೊತೆಗೇ ಶಿಷ್ಯಂದಿರನ್ನೂ ಮುಂದೆ ತಂದ ಮಹಾನುಭಾವರಿವರು. ಡಾ. ಬಿಂದುಮಾಧವ್ ಪಾಠಕ್ ರವರ ಈ ಧ್ಯೇಯ, ಆದರ್ಶ ತತ್ವಗಳನ್ನು ಪರಿಪಾಲಿಸುವುದು ಅವರ ಶಿಷ್ಯಂದಿರ ಕರ್ತವ್ಯವಾಗಿದೆ. ಅಲ್ಲದೇ, ಅವರ ಈ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕೂಡಾ ಅವರ ಶಿಷ್ಯರಿಂದ ಆದ್ಯ ಕರ್ತವ್ಯವಾಗಿದೆ.

ಇವರ ಪೂರ್ವಜರನ್ನೊಳಗೊಂಡು ಕರ್ನಾಟಕದಲ್ಲಿಯ ಇಂದಿನ ರುದ್ರವೀಣೆಯ ಕಲಾಕಾರರವರೆಗೂ ಲಭ್ಯವಿರುದ ಒಂದು ನೀಳ ನಕ್ಷೆ ಹೀಗಿದೆ.

 

– ಉಸ್ತಾದ್ ಬಂದೇ ಅಲಿಖಾನ್ –
(ರುದ್ರವೀಣಾಕಾರರು) (ಮಾಲವಾ-ಇಂಡೋರ್ ಘರಾನ ಮತ್ತು ಕಿರಾನ ಘರಣೆಯ ಸಂಸ್ಥಾಪಕರು)

ಉ: ಮುರಾದ್ ಖಾನ್ (ಜವಾರಾ) (ರುದ್ರವೀಣಾ ಮತ್ತು ಸಿತಾರ್ ವಾದಕರು)

ಉ: ರಜಬ್ ಅಲಿಖಾನ್ (ದೇವಾಸ್) (ಗಾಯಕರು ಮತ್ತು ರುದ್ರವೀಣಾ ವಾದಕರು)

‘ಸಿತಾರ್ ರತ್ನ’ ರಹಿಮತ್ ಖಾನ್ (ಧಾರವಾಡ) (ರುದ್ರವೀಣಾ ಹಾಗೂ ಸಿತಾರ್ ವಾದಕರು)

ಉ: ಬಾಬುಖಾನ್‌(ಇಂದೋರ್) (ರುದ್ರವೀಣೆ ಮತ್ತು ಸಿತಾರ್)

ಪಂ: ಕೃಷ್ಣ ಪಲಾಂಡೆ (ಸಿತಾರ್ ಮತ್ತು ರುದ್ರವೀಣಾ)

ಪಂ: ಕೊಲ್ಲಾಪುರೆ (ಪುಣೆ) (ರುದ್ರವೀಣಾ)

ಪಂ. ದತ್ತೋಪಂಥ್ ಪಾಠಕ್ (ಧಾರವಾಡ) (ರುದ್ರವೀಣಾ ಮತ್ತು ಸಿತಾರ್)

ಉ: ಕರೀಂಖಾನ್ (ಧಾರವಾಡ) (ರುದ್ರವೀಣಾ ಹಾಗೂ ಸಿತಾರ್ ವಾದಕರು)

ಉ: ಅಬ್ದುಲ್ ಹಲೀಮ್ ಜಾಫರ್ ಖಾನ್ (ಸಿತಾರ್‌)

(ಪುತ್ರರು) ಡಾ: ಬಿಂದುಮಾಧವ್ ದಿ. ಪಾಠಕ್ (ಧಾರವಾಡ) (ರುದ್ರವೀಣಾ ಮತ್ತು ಸಿತಾರ್)

ಉ: ಹಮೀದ್ ಖಾನ್ (ರುದ್ರವೀಣೆ ಹಾಗೂ ಸಿತಾರ ವಾದಕರು)

ಪ್ರೊ. ರಾಮಚಂದ್ರ ವಿ. ಹೆಗಡೆ (ಶಿರಸಿ) (ರುದ್ರವೀಣಾ ಮತ್ತು ಸಿತಾರ್)

ಶ್ರೀಮತಿ ಜ್ಯೋತಿ ಜಿ. ಹೆಗಡೆ (ಶಿರಸಿ) (ರುದ್ರವೀಣಾ ಮತ್ತು ಸಿತಾರ್)

ಪ್ರೊ. ಶ್ರೀಕಾಂತ್ ಪಾಠಕ್ (ಗದಗ) (ಪುತ್ರರು) (ರುದ್ರವೀಣಾ ಮತ್ತು ಸಿತಾರ್)

ಕು: ಸುಬ್ರಹ್ಮಣ್ಯ ಹೆಗಡೆ (ಶಿರಸಿ) (ರುದ್ರವೀಣಾ ಮತ್ತು ಸಿತಾರ್‌)