ಕಾವ್ಯವನ್ನು ಸಂಗೀತದ ಸಾಹಚರ‍್ಯದಿಂದ ಪಾರುಮಾಡಬೇಕು. ಅದಕ್ಕೆ ಗದ್ಯದ ಸತ್ವವನ್ನು ತುಂಬಬೇಕು, ಆಡು ಮಾತಿಗೆ ಸವಿಪವನ್ನಾಗಿ ಮಾಡಬೇಕು-ಇತ್ಯಾದಿಯಾಗಿ ಕಾವ್ಯ ಭಾಷೆಯ ಬಗ್ಗೆ ನವ್ಯ ಕಾವ್ಯದ ವಕ್ತಾರರು ಘೋಷಿಸಿದ ಕೆಲವು ವರ್ಷಗಳ ನಂತರವೂ, ಇತ್ತೀಚಿಗೆ, ಯಾರಾದರೂ ಒಳ್ಳೆಯ ಹಾಡುಗಾರರು ತಮ್ಮ ಕವಿತೆಯನ್ನು ಹಾಡುವುದು ಅಪೇಕ್ಷಣೀಯವೆಂದು ಕವಿಗಳನೇಕರು ಭಾವಿಸತೊಡಗಿದ್ದಾರೆ. ತಮ್ಮ ಕವಿತೆ ಹೀಗೆ ಹಾಡುಗಾರಿಕೆಗೆ ಅಳವಡುವುದು ಅಷ್ಟೇನೂ ಕೆಟ್ಟ ಲಕ್ಷಣವಲ್ಲ ಎಂಬ ಹೊಸ ತಿಳುವಳಿಕೆ ಇದಕ್ಕೆ ಕಾರಣವಾಗಿರಬಹುದು ; ಕವಿತೆಯೊಂದು ಹಾಡಲ್ಪಟ್ಟಾಗ ಅದು ಬಹುಜನ ಸಮೂಹವನ್ನು ತಟ್ಟನೆ ಮುಟ್ಟಿದ್ದನ್ನು ಕಂಡ ಖುಷಿಯೂ ಕಾರಣವಾಗಿರಬಹುದು. ತಾನು ಬರೆದ ಕವಿತೆ, ಬಹು ಜನರನ್ನು ಮುಟ್ಟುವುದು ಯಾವ ಕವಿಗೆ ತಾನೇ ಇಷ್ಟವಲ್ಲದ ಸಂಗತಿ ? ಕವಿತೆ ಕೇವಲ ತಾವಾಗಿಯೇ ಓದಿಕೊಳ್ಳುವ, ತನ್ಮೂಲಕ ಅಸ್ವಾದಿಸುವ ಸಹೃದಯ ವರ್ಗದ ಗೆರೆಯನ್ನು ದಾಟಿ, ಜನಪ್ರಿಯವಾಗುವ ಕಾರ‍್ಯದಲ್ಲಿ ಹಾಡುಗಾರಿಕೆ ತುಂಬ ಪರಿಣಾಮಕಾರಿಯಾದ ಮಾಧ್ಯಮವೆಂಬುದನ್ನು ಯಾರೂ ಅಲ್ಲಗಳೆಯಲಾರರು.

ಹಾಗೆ ನೋಡಿದರೆ, ಮೊದಲಿಗೆ ಕಾವ್ಯಕ್ಕೂ ಹಾಡುಗಾರಿಕೆಗೂ ನಿಕಟವಾದ ಸಂಬಂಧವಿತ್ತು. ಕಾವ್ಯಕ್ಕೆ ಅಗತ್ಯವಾದ ಭಾವತೀವ್ರತೆ ಮಾತನಾಡಿದ ಹಾಗಿರುವ ಭಾಷೆಯ ಸ್ಥಿತಿಯನ್ನು ದಾಟಿ, ಹಾಡಿದ ಹಾಗಿರುವ ಭಾಷೆಯ ರೂಪದಲ್ಲಿ ಮೈದಾಳುತ್ತದೆ. ಪ್ರಾಚೀನ  ಕಾಲದಲ್ಲಿಯಂತೂ ಭಾವಾಭಿವ್ಯಕ್ತಿ ಮುಖ್ಯವಾಗಿ ಹಾಡಿನ ಹಾಗೂ ನರ್ತನದ ರೂಪದಲ್ಲಿ ಹೊರಹೊಮ್ಮುತ್ತಿತ್ತೆಂದು ಹೇಳಲಾಗಿದೆ. ಕಾವ್ಯದ ಒಂದು ಪ್ರಕಾರವಾದ ‘ಭಾವಗೀತೆ’ಯನ್ನು ಕುರಿತು ಮಾತನಾಡಿದವರೆಲ್ಲಾ, ಮೊದಲು ಕಾವ್ಯ ಮೂಲತಃ ಒಂದು ರೀತಿಯಲ್ಲಿ ಹಾಡಿನ ರೂಪದಲ್ಲೇ ಇತ್ತೆಂದೂ, ಹಾಗಿರುವುದೇ ಕಾವ್ಯದ ಸಹಜರೂಪವೆಂದೂ ಅಭಿಪ್ರಾಯ ಪಡುತ್ತಾರೆ. ರಾಮಾಯಣವನ್ನು ಮೊದಲಿಗೆ  ಲವ-ಕುಶರೆಂಬ ಗಾಯಕರು, ತುಂಬಿದ ಶ್ರಾವಕ ಸಮೂಹದ ಎದುರು  ತಂತ್ರೀಲಯ ಸಮನ್ವಿತವಾಗಿ ಹಾಡುತ್ತಿದ್ದರೆಂದು ವರ್ಣಿತವಾಗಿದೆ. ಇಂಥ ಕಾವ್ಯಗಳನ್ನು ಚಾರಣರಾದ ಗಾಯಕರು ಹಾಡುತ್ತಾ ಪ್ರಸಾರ ಮಾಡುತ್ತಿದ್ದರೆಂದೂ ಹೇಳಲಾಗಿದೆ.

ಕಾವ್ಯ ಹೀಗೆ ಹಾಡುಗಾರಿಕೆಗೆ ಅಳವಡುವಂತಿದ್ದುದಕ್ಕೆ ಮುಖ್ಯವಾದ ಕಾರಣ, ಅದು ಶ್ರವಣಪ್ರಿಯ ಬಹುಜನ ಸಮೂಹದ ಎದುರು ಸಂವಹನಗೊಳ್ಳಬೇಕಾದ ಸಾಮಾಜಿಕ ಪರಿಸ್ಥಿತಿಯಿದ್ದುದೇ ಆಗಿದೆ. ಹಾಗೆಯೇ ಬಾಯಿಂದ ಬಾಯಿಗೆ ರವಾನಿಸುವುದಕ್ಕೆ ಮತ್ತು ಸುಲಭವಾಗಿ ನೆನಪಿಟ್ಟುಕೊಳ್ಳುವುದಕ್ಕೆ ಹಾಡಿನಂಥ ಅಭಿವ್ಯಕ್ತಿ ತೀರಾ ಅನುಕೂಲಕರವಾದ ಒಂದು ರೂಪವಾಗಿತ್ತು. ಜನಪದ ಹಾಡುಗಳ ಮುಖ್ಯ ಲಕ್ಷಣ ಕೂಡಾ ಇದೇ ಆಗಿದೆ.

ಹಾಡುಗಾರಿಕೆಗೂ ಕಾವ್ಯಕ್ಕೂ ಇಂಥ ಸಂಬಂಧವಿದ್ದರೂ, ಕಾವ್ಯ ಮತ್ತೆ ಹಾಡುಗಾರಿಕೆಯಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಸಂವಹನಗೊಳ್ಳುವ ಪ್ರಯತ್ನ ಮಾಡಿದೆ ಎಂಬುದನ್ನು ಮರೆಯುವಂತಿಲ್ಲ. ಕಾವ್ಯ ಯಾವಾಗ ಹಾಡುಗಾರಿಕೆಗೆ ಹತ್ತಿರವಾಗುತ್ತದೆ ಮತ್ತು ಯಾವಾಗ ಹಾಡುಗಾರಿಕೆಯಿಂದ ಬಿಡಿಸಿಕೊಂಡು ನಿಲ್ಲುತ್ತದೆ ಎನ್ನುವುದರ ಹಿಂದಿರುವ ಕಾರಣಗಳು ಸ್ವಾರಸ್ಯವಾಗಿವೆ.

ಕಾವ್ಯ ಹಾಡುಗಾರಿಕೆಯಿಂದ ದೂರವಾದದ್ದು, ಯಾವ ಒಂದು ಹಂತದಲ್ಲಿ ಕಾವ್ಯಾಭಿವ್ಯಕ್ತಿ, ಬಹುಜನ ಸಮೂಹದಿಂದ ಪ್ರತ್ಯೇಕವಾದ ವ್ಯವಸ್ಥೆಯೊಂದರಲ್ಲಿ ಬದ್ಧವಾಗಿ, ಲಿಖಿತ ರೂಪವನ್ನು ತಾಳಿ ತಕ್ಕಷ್ಟು ಪ್ರೌಢವಾದ ಸಹೃದಯ ವರ್ಗದ ಎದುರು ವಾಚಿತವಾಗಬೇಕಾದ ಸ್ಥಾವರ ಸ್ಥಿತಿಯಲ್ಲಿ. ಇಲ್ಲಿ ಬಾಯಿಂದ ಬಾಯಿಗೆ ರವಾನಿತವಾಗಬೇಕಾದ ಅಗತ್ಯ ಕಡಿಮೆಯಾಗುವುದರಿಂದ, ಅದು ಸಹಜವಾಗಿಯೇ, ತನ್ನ ಮೊದಲಿನ ಹಾಡುಗಾರಿಕೆಯ ಗುಣವನ್ನು ಕಡಿಮೆ ಮಾಡಿಕೊಂಡು ಶಾಸ್ತ್ರನಿಷ್ಠವಾದ ಬಂಧಗಳಲ್ಲಿ ರಚಿತವಾಗುತ್ತಾ, ‘ಗಮಕಿ’ಗಳೆಂಬ ಬೇರೊಂದು ಸಂವಹನಕಾರರ ಮೂಲಕ ವಾಚನವಿಧಾನದಲ್ಲಿ ಪ್ರಸಾರವಾಗತೊಡಗುತ್ತದೆ. ಈ ಹಂತದಲ್ಲಿ ಹಿಂದಿನ ‘ಚಾರಣ’ನಾದ ಹಾಗೂ ಹಾಡುಗಾರನಾದ ಕವಿ, ವ್ಯವಸ್ಥೆಯೊಂದರ ಬೌದ್ಧಿಕ ಪರಿಸರದ ಸ್ಥಾವರ ಬಂಧಗಳಲ್ಲಿ ತನ್ನ ಕಾವ್ಯವನ್ನು ಅಭಿವ್ಯಕ್ತಿಗೊಳಿಸುತ್ತ ಕಾವ್ಯವನ್ನು ಹಾಡುಗಾರಿಕೆಯಿಂದ ದೂರಕ್ಕೆ ತರುತ್ತಾನೆ. ಕನ್ನಡ ಕಾವ್ಯಪರಂಪರೆಯಲ್ಲಿ ಹಳಗನ್ನಡ ಚಂಪೂಕವಿಗಳನ್ನು ಇದಕ್ಕೆ ನಿದರ್ಶನವೆಂದು ತೋರಿಸಬಹುದು.

ಕಾವ್ಯ ಹಾಡುಗಾರಿಕೆಗೆ ಹತ್ತಿರವಾಗುವುದು ವಿಶೇಷತಃ ಅದರ ಅಲಿಖಿತ ಸ್ಥಿತಿಯಲ್ಲಿ, ಬಾಯಿಂದ ಬಾಯಿಗೆ ರವಾನಿತವಾಗಬೇಕಾಗಿದ್ದ ಸಂದರ್ಭದಲ್ಲಿ ಎಂದೆವು. ಆದರೆ ಸರಿಯಾಗಿ ವಿಚಾರಮಾಡಿ ನೋಡಿದರೆ ಇದು ಕೂಡಾ ಪೂರ್ಣಸತ್ಯವಲ್ಲ. ಕಾವ್ಯ ಲಿಖಿತ ಪರಂಪರೆಯಲ್ಲಿ ಕೂಡ ಹಾಡುಗಾರಿಕೆಗೆ ಹತ್ತಿರವಾಗುತ್ತದೆ. ಅದು ಯಾವಾಗ ಅಂದರೆ, ಅದು ಮೂಲತಃ ವ್ಯವಸ್ಥೆಯೊಂದಕ್ಕೆ ಬದ್ಧವಾಗದ ಅಥವಾ ವ್ಯವಸ್ಥೆಯನ್ನು ತಿರಸ್ಕರಿಸಿ ಹೊರಕ್ಕೆ ಬಂದು ಜನ ಸಮೂಹದ ಬದುಕಿನೊಂದಿಗೆ ತನ್ನ ಸಂಬಂಧವನ್ನು ಸ್ಥಾಪಿಸಿಕೊಳ್ಳಲು ಬಯಸಿದಾಗ. ಈ ಹಂತದಲ್ಲಿ ಅದು ತನ್ನ ಅಭಿವ್ಯಕ್ತಿಯಲ್ಲಿ ಮೊದಲ ಕಾವ್ಯರೂಪದ, ಅಂದರೆ ಹಾಡುಗಾರಿಕೆಗೆ ಸಲ್ಲುವಂಥ ಗುಣವನ್ನು ವಿಶೇಷವಾಗಿ ಪಡೆದುಕೊಳ್ಳುತ್ತದೆ. ಆದುದರಿಂದಲೇ ಚಂಪೂ ಕಾವ್ಯದ ನಂತರದ ಕಾವ್ಯ ರೂಪಗಳಾದ  ದೇಶೀಕಾವ್ಯಗಳು ರಗಳೆ, ಷಟ್ಪದಿ, ಕೀರ್ತನೆ, ತ್ರಿಪದಿ, ಸಾಂಗತ್ಯ ಕಾವ್ಯಗಳು ಮೂಲತಃ ತಮಗೆ ಹಿಂದಿನ ಚಂಪೂ ರೂಪದ ವಾಚನ ವಿಧಾನದಿಂದ ಭಿನ್ನವಾದ, ಹಾಡುಗಾರಿಕೆಗೆ ಅಳವಡುವಂಥ ಸ್ವರೂಪದವುಗಳಾಗಿವೆ.[1] ಹಿಂದಿನ ಚಂಪೂ ಕಾವ್ಯಗಳ ‘ಗಮಕ’ಕ್ಕಿಂತ ದೇಸೀ ಕಾವ್ಯಗಳ ‘ಗಮಕ’ ಹಿಂದಿನ ಚಾರಣ ಕವಿಗಳ ಹಾಡುಗಾರಿಕೆಗೆ ಹತ್ತಿರವಾಗಿವೆ.

ಈ ಹಿನ್ನೆಲೆಯಿಂದ ನಿಷ್ಪನ್ನವಾಗುವ ಸಾರಾಂಶವೆಂದರೆ, ಕಾವ್ಯ ಎಲ್ಲೆಲ್ಲಿ ತನ್ನ ‘ಚಾರಣಸ್ಥಿತಿ’ಯಿಂದ ಜನಸಮೂಹಕ್ಕೆ ಹತ್ತಿರವಾಗುತ್ತಾ, ಅವರದೇ ಆದ ಭಾಷೆಯಿಂದ ತನ್ನ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತದೋ ಅಂಥ ಕಡೆ ಅದು ಹಾಡುಗಾರಿಕೆಗೆ ಹತ್ತಿರವಾಗುತ್ತದೆ ; ಆದರೆ ಕಾವ್ಯ ಎಲ್ಲೆಲ್ಲಿ ಜನಸಂಪರ್ಕದಿಂದ ಹಿಂದೆ ಸರಿದು, ಒಂದು ರೀತಿಯಲ್ಲಿ ‘ಸ್ಥಾವರಸ್ಥಿತಿ’ಗೆ ನಿಲ್ಲುತ್ತದೋ ಅಂಥ ಕಡೆ ಅದು ಹಾಡುಗಾರಿಕೆಗೆ ದೂರವಾಗುತ್ತದೆ. ಈ ‘ಸ್ಥಾವರತೆ’ ಪ್ರಾಪ್ತವಾಗುವುದು ಬಹುಶಃ ಎರಡು ಕಾರಣಗಳಿಂದ:  ಒಂದು, ಕಾವ್ಯಾಭಿವ್ಯಕ್ತಿ ವ್ಯವಸ್ಥೆಯ ಒಂದು ಭಾಗವಾದಾಗ ; ಎರಡು, ವ್ಯವಸ್ಥೆಯನ್ನು ತಿರಸ್ಕರಿಸಿದಾಗಲೂ ತಾನು ಅತಿ ಬೌದ್ಧಿಕವಾದ ನಿಲುವುಗಳನ್ನು ಆರೋಪಿಸಿಕೊಳ್ಳುವುದರ ಮೂಲಕ ಜನ ಸಂಪರ್ಕದಿಂದ ದೂರವಾದಾಗ.

ಈ ಮಾತು ಹೊಸಗನ್ನಡ ಕಾವ್ಯದ ಬಗೆಗೂ ನಿಜ ಎಂಬುದನ್ನು ಗಮನಿಸಬಹುದು. ಹೊಸಗನ್ನಡದ ಆರಂಭಕಾಲವನ್ನು ನವೋದಯವೆಂದು ಗುರುತಿಸಲಾಗಿದೆ. ಇದು ಮೂಲತಃ ವ್ಯಕ್ತಿನಿಷ್ಠ ಭಾವಗೀತೆಗಳ ಕಾಲ. ಈ ಕಾಲಕ್ಕೆ ಹಿಂದೆ ಮತ್ತೆ ಕನ್ನಡ ಕಾವ್ಯ ಸ್ಥಾವರಸ್ಥಿತಿಗೆ ಬಂದು, ನಿಂತ ನೀರಾಗಿತ್ತೆಂಬುದನ್ನು ಮರೆಯಬಾರದು. (ಚಿಕ್ಕದೇವರಾಜರ ಕಾಲಕ್ಕೆ ಮತ್ತೆ ಕನ್ನಡಕಾವ್ಯ ಪ್ರಾಚೀನ ಪ್ರೌಢರೂಪಗಳಲ್ಲಿ ಸ್ಥಾವರಗೊಂಡಿತು)-ಈ ಪರಿಸ್ಥಿತಿಯಲ್ಲಿ  ಮತ್ತೆ ಕನ್ನಡ ಕಾವ್ಯ, ಜನದ ಬದುಕಿನೊಂದಿಗೆ ಜೀವಂತ ಸಂಬಂಧವನ್ನು ಸ್ಥಾಪಿಸಿಕೊಳ್ಳಬೇಕಾದ ಅಗತ್ಯವಿತ್ತು. ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ಈ ಸಾಧ್ಯತೆಯನ್ನು ತೆರೆದು ತೋರಿಸಿದವು. ಜತೆಗೆ ಬೇಂದ್ರೆ, ಕುವೆಂಪು, ರಾಜರತ್ನಂ, ಪು. ತಿ. ನ,. ಕೆ. ಎಸ್. ನ. ಮೊದಲಾದ ಕವಿಗಳ ಹೊಸಪ್ರಜ್ಞೆಯಿಂದ ಹೊಮ್ಮಿದ ನವೋದಯ ಕಾವ್ಯ, ತನ್ನ ಹೊಸತನದಿಂದ ಹಾಗೂ ಹಾಡುಗಾರಿಕೆಗೆ ಹತ್ತಿರವಾದ ಗುಣದಿಂದ ‘ಭಾವಗೀತಾ’ ಸಾಹಿತ್ಯವೆನ್ನಿಸಿಕೊಂಡಿತು. ಇಂದಿಗೂ, ಹಾಡುಗಾರರಿಗೆ, ಹಾಡಲು ಅನುಕೂಲವಾದ ರೂಪಗಳುಳ್ಳ ಕವಿತೆಗಳು ಈ ಕಾಲದಲ್ಲಿ ರಚಿತವಾದವುಗಳೇ.

ಭಾವಗೀತಾ ಸಾಹಿತ್ಯ ಸಮೃದ್ಧಿಯ ನವೋದಯ ಕಾವ್ಯಕ್ಕೆ ಪ್ರತಿಕ್ರಿಯೆಯಾಗಿ ಬಂದ ನವ್ಯಕಾವ್ಯದ ಮುಖ್ಯ ಧೋರಣೆಗಳಲ್ಲಿ, ಕಾವ್ಯವನ್ನು ಹೇಗಾದರೂ ಮಾಡಿ ಹಾಡುಗಾರಿಕೆಯಿಂದ ಪಾರುಮಾಡಬೇಕೆನ್ನುವುದು ಒಂದು. ಕಾವ್ಯವನ್ನು ಸಂಗೀತದ ಸಾಹಚರ‍್ಯದಿಂದ ಪಾರು ಮಾಡುವುದು, ಅದಕ್ಕೆ ಗದ್ಯದ ಸತ್ವವನ್ನು ತುಂಬುವುದು, ಮತ್ತು ಅದನ್ನು ಜನದ ಆಡುಮಾತಿನ ಹತ್ತಿರಕ್ಕೆ ತರುವುದು-ಇದು ಕಾವ್ಯ ಭಾಷೆಯ ಬಗ್ಗೆ ನವ್ಯ ಕಾವ್ಯದ ನಿಲುವು. ‘ಕಾವ್ಯವನ್ನು’ ಸಂಗೀತದ ಸಾಹಚರ‍್ಯದಿಂದ ಪಾರುಮಾಡುವುದು-ಇದರ ಧೋರಣೆಗಳಲ್ಲಿ ಒಂದು ಯಾಕೆ ಆಯಿತೆಂದರೆ : ಎಂಥ ಕಳಪೆ ಪದ್ಯಕ್ಕೂ  ಸೊಗಸಾದ ರಾಗ ಹಾಕಿ, ಅದನ್ನೊಂದು ಅದ್ಭುತವೆಂಬಂತೆ ನಂಬಿಸುವ ಒಂದು ಕೌಶಲ ನಮ್ಮ ಸಂಗೀತಗಾರರಿಗೆ ಸಿದ್ಧಿಸಿದೆ. ಈ ಮಾತು ಇಂದಿಗೂ ನಿಜ. ಕವಿತೆಯೊಂದನ್ನು ಸಂಗೀತಗಾರ ಅಮೋಘವಾಗಿ ಹಾಡತೊಡಗಿದಾಗ, ಕೇಳುವವನ ಮುಖ್ಯ ಗಮನ ಅದರ ನಾದಮಾಧುರ್ಯದ ಕಡೆಗೆ ಹೋಗುತ್ತದೆ ;  ಅದರ ಅರ್ಥ ಸ್ವಾರಸ್ಯವನ್ನು ಗ್ರಹಿಸುವ ಬುದ್ಧಿ ತಲೆದೂಗತೊಡಗುತ್ತದೆ. ಕಾವ್ಯ, ನಿಜವಾದ ಕಾವ್ಯ, ಸಂಗೀತದ ಸಾಹಚರ್ಯವಿಲ್ಲದೇನೇ, ತನ್ನ ಕಾವ್ಯತ್ವವನ್ನು ಸಾಬೀತು ಪಡಿಸಿಕೊಳ್ಳಬೇಕು. ಹಾಗಿದ್ದರೆ ಅದು ನಿಜವಾದ ಕಾವ್ಯ.  ಸಂಗೀತದ ಸಾಹಚರ್ಯಕ್ಕೊಳಗಾದಾಗ ಅಮೋಘವೆನ್ನಿಸಿ, ಅನಂತರ ಅದನ್ನು ಬೇರೆಯಾಗಿ ಓದಿದಾಗ ತೀರಾ ಸಪ್ಪೆ ಎನ್ನಿಸುವ ಕಾವ್ಯ, ನಿಜವಾದ ಕವಿತೆಯಾದೀತೆ? ಅಷ್ಟೇ ಅಲ್ಲ, ನಿಜವಾದ ಕವಿತೆಯನ್ನು ಹಾಡಿಗೆ ಅಳವಡಿಸುವುದೇ ಒಂದು ಅಪಚಾರ, ಹಾಗೆ ಮಾಡುವುದರಿಂದ ಅದರ ಕಾವ್ಯತ್ವವನ್ನೇ ನಷ್ಟಗೊಳಿಸಿದಂತಾಗುತ್ತದೆ. ಕಾವ್ಯವನ್ನು ಸಂಗೀತದ ಸಾಹಚರ್ಯದಿಂದ ಪಾರು ಮಾಡಬೇಕೆನ್ನುವ ಧೋರಣೆಯವರು ಕೊಡುವ ಕಾರಣಗಳು ಇವು. ಈ ಕಾರಣಗಳಲ್ಲಿ ಕೆಲವು ಒಪ್ಪತಕ್ಕವೇನೋ ನಿಜ. ಆದರೆ ಆ ಕಾರಣಕ್ಕೆ, ಕಾವ್ಯವನ್ನು ಸಂಪೂರ್ಣವಾಗಿ ಹಾಡುಗಾರಿಕೆಯಿಂದ ಪಾರುಮಾಡಬೇಕೆಂಬುದು ಸರಿಯಲ್ಲ. ತಮ್ಮ ಕವಿತೆಯನ್ನು ಹಾಡಬೇಕೆಂದೇ ಯಾರೂ ಬರೆಯುವುದಿಲ್ಲ, ಮತ್ತು ಬರೆಯಲೂಬಾರದು. ಬರೆದ ಕವಿತೆಯನ್ನು, ಪ್ರಜ್ಞಾವಂತನಾದ ಹಾಡುಗಾರ, ತಕ್ಕ ರಾಗ ಸಂಯೋಜನೆಯಿಂದ, ಕವಿತೆಯ ಭಾಗವನ್ನು ಹಿಡಿದು ಹಾಡಿದಾಗ, ಅಂಥ ಕಡೆ ಕಾವ್ಯಕ್ಕೆ ಅಪಚಾರವೇನೂ ಆಗುವುದಿಲ್ಲ. ಎಲ್ಲಿ ಹಾಡಿಬಿಟ್ಟಾರೋ ಎಂದು, ಕವಿತೆಯನ್ನು ಏನೇನು ಮಾಡಿದರೂ ಹಾಡುವುದಕ್ಕೇ ಸಾಧ್ಯವಾಗದಂತಹ ಒಂದು ನೆಲೆಗೆ ತರುವುದು ನವ್ಯ ಕಾವ್ಯದ ಹಠಯೋಗಗಳಲ್ಲಿ ಒಂದಾಗಿತ್ತೆಂಬುದನ್ನು ಈ ದಿನ ಗಮನಿಸಬಹುದಾಗಿದೆ. ಹೀಗೆ ಸಂಗೀತದ ಸಾಹಚರ್ಯದಿಂದ ಪಾರುಮಾಡುವ ದಿಕ್ಕಿನಲ್ಲಿ ಕಾವ್ಯಕ್ಕೆ ಗದ್ಯದ ಸತ್ವವನ್ನು ತುಂಬಬೇಕು-ಎಂದು ಹೇಳಿದ ಮಾತು ನನಗೆ ಇಂದಿಗೂ ಅರ್ಥವಾಗುತ್ತಿಲ್ಲ. ಗದ್ಯದ ಸತ್ವ ಎಂದರೇನು, ಯಾವ ಗದ್ಯದ ಸತ್ವ ?-ಈ ಮಾತನ್ನು, ವಿವರಿಸಬೇಕಾದವರು ವಿವರಿಸಲಿಲ್ಲ. ಇಂಗ್ಲೀಷ್ ಸಾಹಿತ್ಯದಲ್ಲಿ ಗದ್ಯವೇ ಬೇರೆ, ಪದ್ಯವೇ ಬೇರೆ. ಆದರೆ ಕಾವ್ಯ ಎನ್ನುವುದು ಗದ್ಯದಲ್ಲಾದರೂ ಇರಬಹುದು, ಪದ್ಯದಲ್ಲಾದರೂ ಇರಬಹುದು-ಎಂಬುದನ್ನು ಒಪ್ಪಿಕೊಂಡ ಸಾಹಿತ್ಯ ಪರಂಪರೆ ನಮ್ಮದು. ‘ಕಾವ್ಯ’ವಲ್ಲದ ‘ಗದ್ಯ’ವಾಗಲಿ, ‘ಪದ್ಯ’ವಾಗಲಿ ಇದ್ದರೆ ಅದು ಶಾಸ್ತ್ರದಲ್ಲಿ ಮಾತ್ರ.  ಹೀಗಿರುವಲ್ಲಿ ಕನ್ನಡ ಕಾವ್ಯ ಸಂದರ್ಭದಲ್ಲಿ ‘ಕಾವ್ಯಕ್ಕೆ ಗದ್ಯದ ಸತ್ವವನ್ನು ತುಂಬುವುದು’ ಅಂದರೆ ಏನರ್ಥ? ಇನ್ನು  ಕಾವ್ಯವನ್ನು ಆಡುಮಾತಿನ ಸಮೀಪಕ್ಕೆ ತರಬೇಕೆನ್ನುವುದು ಒಪ್ಪತಕ್ಕ ಮಾತು; ಯಾವುದೇ ಸಾಹಿತ್ಯ ಪರಂಪರೆಯಲ್ಲಿ ಕಾವ್ಯ ಹೊಸತನವನ್ನು ತಾಳುವಂಥ ಸಂದರ್ಭಗಳಲ್ಲೆಲ್ಲಾ ಈ ಮಾತನ್ನು ಎತ್ತಿ ಹೇಳಲಾಗಿದೆ. ಆದರೆ ಕಾವ್ಯ ಆಡುಮಾತಿನ ಸಮೀಪಕ್ಕೆ ಬಂದಾಗಲೆಲ್ಲಾ ಅಥವಾ ಆಡುಮಾತಿನಲ್ಲೇ ಅಭಿವ್ಯಕ್ತವಾಗಲು ತೊಡಗಿದಾಗೆಲ್ಲಾ ಅದು ಮೂಲತಃ ಹಾಡುಗಾರಿಕೆಗೆ ಹತ್ತಿರವಾಗಿದೆ ; ಆದರೆ ನವ್ಯ ಕಾವ್ಯದ ಸಂದರ್ಭದಲ್ಲಿ ಆಡುಮಾತಿನ ಬಗ್ಗೆ ಕಳಕಳಿಯನ್ನು ತೋರಿಸಿಯೂ ಅದನ್ನು ಸಂಗೀತದ ಸಾಹಚರ್ಯದಿಂದ ಪಾರು ಮಾಡಿದ್ದು ಒಂದು ವಿಶೇಷವಾದರೆ, ಅದು ಒಂದು ನಿರ್ದಿಷ್ಟ ಪ್ರೌಢ ಓದುಗ ವರ್ಗವಲಯವನ್ನು ದಾಟಿ ಆಚೆಗೆ ಹೋಗದಂತೆ ನೋಡಿಕೊಂಡದ್ದು ಮತ್ತೊಂದು ವಿಶೇಷವಾಗಿದೆ. ಹಿಂದೆ ಆಗಲೇ ಹೇಳಿರುವಂತೆ, ಇದನ್ನೂ ಕಾವ್ಯಕ್ಕೆ ಒದಗಿದ ಒಂದು ಸ್ಥಾವರಸ್ಥಿತಿ ಎಂದು ಭಾವಿಸಬಹುದು. ಈ ಸ್ಥಾವರತೆಗೆ ಕಾರಣ, ವ್ಯವಸ್ಥೆಗೆ ಬದ್ಧವಾಗುವಿಕೆಯಲ್ಲ ; (ನವ್ಯ ಕವಿಗಳು ವ್ಯವಸ್ಥೆಯ ಕಡು ವಿರೋಧಿಗಳು) ಅತಿಬೌದ್ಧಿಕವಾದ ನಿಲುವುಗಳನ್ನು ಆರೋಪಿಸಿಕೊಂಡದ್ದೂ, ನವ್ಯ ಕಾವ್ಯ ಉದ್ದೇಶಪೂರ್ವಕವಾಗಿ, ಒಂದು ನಿರ್ದಿಷ್ಟ ಓದುಗವರ್ಗದಾಚೆಯ ಜನಸಂಪರ್ಕವನ್ನು ಕಳೆದುಕೊಂಡದ್ದೂ ಬಹುಶಃ ಇದೇ ಕಾರಣದಿಂದ. ಜತೆಗೆ ಯಾಕೋ ಏನೋ ಜನಪ್ರಿಯವಾದದ್ದೆಲ್ಲದರ ಗುಣವನ್ನು ಗುಮಾನಿಯಿಂದ ನೋಡುವ ಒಂದು ಅಹಂನಿಷ್ಠತೆಯೂ ಈ ಧೋರಣೆಯ ಹಿನ್ನೆಲೆಗಿರಬಹುದು.

ಹಾಗೆ ನೋಡಿದರೆ ಹಾಡುಗಾರಿಕೆಯ ಗುಣ ಅಥವಾ ಗೇಯತೆ ಕಾವ್ಯಕ್ಕೆ ಒಳಗಿನದೋ, ಹೊರಗಿನದೋ ? ನಿಜವಾಗಿಯೂ ಒಳಗಿನದೇ ; ಖಂಡಿತ ಹೊರಗಿನದಲ್ಲ. ನಿಜವಾದ ಕಾವ್ಯದ ಪದಬಂಧಗಳಲ್ಲಿ ಒಂದು ಒಳ ಸಂಗೀತವಿದೆ. ಒಂದು ಭಾಷೆಯೊಳಗಿನ ‘ಸಂಗೀತ’ವನ್ನು ಕೇಳಿಸಲಾಗದ ಕವಿಯ ಕಾವ್ಯರಚನೆ, ನಿಜವಾದ ಕಾವ್ಯವಾಗಲಾರದು. ನಿಜವಾದ ಕವಿತೆಯನ್ನು ಹೊರಗಿನ ಸಂಗೀತಕ್ಕೆ ಅಳವಡಿಸಲಿ ಬಿಡಲಿ ; ಅದು ತನ್ನದೇ ಆದ ನಾದಲಯಗಳಿಂದ ಓದುಗನ ಒಳಗಿವಿಗಳಲ್ಲಿ ಅನುರಣಿತವಾಗುತ್ತದೆ. ಅದು ಎಂದೂ ‘ಕೇವಲ ಗದ್ಯ’ವಾಗಿರಲು ಸಾಧ್ಯವಿಲ್ಲ. ಆದರೆ ಈ ‘ಒಳಗಿನ ಸಂಗೀತ’ವನ್ನು, ಹೊರಗಿನ ಸಂಗೀತ ಅಥವಾ ಹಾಡುಗಾರಿಕೆ ಸುಸಮರ್ಥವಾಗಿ ಅಭಿವ್ಯಕ್ತ ಪಡಿಸಬಲ್ಲದಾದರೆ ಅದು ಸ್ವಾಗತಾರ್ಹವೇ. ನಿಜವಾದ ಕವಿತೆ ತನಗೆ ತಾನೇ ಓದಿಕೊಂಡಾಗ ಯಾವ ಅನುಭವವನ್ನು ಕೊಡುವಷ್ಟು ಸತ್ವಯುತವಾಗಿರುವುದೋ ಅದು, ಸರಿಯಾದ ಹಾಡುಗಾರಿಕೆಯಿಂದ ಇನ್ನೂ ಶೋಭಿಸೀತು ; ಅದರ ಬದಲು ಹಾಡುಗಾರಿಕೆಗೆ ಅಳವಟ್ಟು, ಜನಪ್ರಿಯವಾಗಲೆಂಬ ಉದ್ದೇಶದಿಂದ ರಚಿತವಾದ ಕಾವ್ಯ, ಹಾಡುಗಾರಿಕೆಯಲ್ಲಿ ಮಾತ್ರ ರೋಚಕವಾಗಿ ತೋರಿ, ಹಾಗೆಯೇ ಓದಿಕೊಂಡಾಗ ಪೀಚಾಗಿ ತೋರುವುದರಲ್ಲಿ ಸಂಶಯವಿಲ್ಲ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೂ ಒಂದು ಸಂಗತಿಯುಂಟು. ಅದೆಂದರೆ, ಹಾಡುಗಾರಿಕೆಯ ಮೂಲಕ ಜನಕ್ಕೆ ತಲುಪುವುದೆಂದು ಹೇಳಲಾದ ಕವಿತೆ ಪ್ರಸ್ತುತ ಕನ್ನಡ ಕಾವ್ಯದ ಸ್ವಲ್ಪ ಭಾಗ ಮಾತ್ರ ; ಅದೂ ಹಾಡುಗಾರಿಕೆಗೆ ಅಳವಡುವಷ್ಟು ಮಾತ್ರ. ಎಲ್ಲ ಕಾವ್ಯವೂ ಹಾಡುಗಾರಿಕೆಯ ಮೂಲಕವೆ ಸಲ್ಲಬೇಕೆಂದು ಯಾರೂ ಭಾವಿಸಲಾರರು. ಜತೆಗೆ ಕಾವ್ಯವನ್ನು,-ಇನ್ನೂ ಅನಕ್ಷರತೆ ಮನೆ ಮಾಡಿಕೊಂಡಿರುವ ಪರಿಸರದಲ್ಲಿ-ಸಂವಹನಗೊಳಿಸುವ ಹಲವು ಸಾಧ್ಯತೆಗಳಲ್ಲಿ ಹಾಡುಗಾರಿಕೆಯೂ ಒಂದು ಎಂಬ ಸಂಗತಿಯನ್ನು ನಿರಾಕರಿಸುವುದು ಒಳ್ಳೆಯ ಲಕ್ಷಣವಲ್ಲ.

ಪ್ರತಿಕ್ರಿಯೆ- ೧೯೮೨


[1] ದೇಸೀ ಸಂಪ್ರದಾಯದ ಕಾವ್ಯರಚನೆಯೆಲ್ಲಾ ಮುಖ್ಯವಾಗಿ ರಾಜಾಸ್ಥಾನಗಳಂತಹ ವ್ಯವಸ್ಥೆಯ ಹೊರಗೆ ಆದವುಗಳೆಂಬುದನ್ನು ಇಲ್ಲಿ ನೆನೆಯಬಹುದು.