ತುಂಟ ಕೃಷ್ಣ ಬಾಯಲ್ಲಿ ಬ್ರಹ್ಮಾಂಡವೇ ಅಡಗಿದೆ  ಎಂಬ ಮಾತನ್ನು ಕೇಳಿದ್ದೇವೆ. ಹಾಗೆಯೇ ಜಾನಪದ ಅಧ್ಯಯನದಲ್ಲಿ ಜನಾಂಗಗಳನ್ನು ಕುರಿತು ಅಧ್ಯಯನವೂ ಸೇರಿಕೊಂಡಿದೆ. ಮಾನವಶಾಸ್ತ್ರದ ಪ್ರಮುಖ ಅಂಗವಾದ ಆದಿವಾಸಿ, ಬುಡಕಟ್ಟು, ಜನಪದ ಗುಂಪು, ವೃಂದ ಮುಂತಾದವುಗಳ ಅಧ್ಯಯನ ಜಾನಪದದ ಪರಿಧಿಯಲ್ಲಿ ಬರುವುದರಿಂದ, ಜನಾಂಗಿಕ ಅಧ್ಯಯನವನ್ನು ಜಾನಪದದ ಅವಿಭಾಜ್ಯ ಅಂಗವೆಂದು ತಿಳಿಯಬೇಕು. ಯಾವುದೇ ಜನತೆಯ ಸಂಸ್ಕೃತಿಯನ್ನು ತಿಳಿಯಲು ಜಾನಪದ ಅಧ್ಯಯನ ಅಗತ್ಯ ಮತ್ತು ಅನಿವಾರ್ಯ. ಜೀವನ-ವಿಧಾನ, ರೀತಿ-ನೀತಿಗಳನ್ನು ಅಭ್ಯಸಿಸುವುದೆಂದರೆ, ಸಂಸ್ಕೃತಿಯನ್ನೇ ಅಧ್ಯಯನ ಮಾಡುವುದು ಎಂದರ್ಥ.

ಕರ್ನಾಟಕದಲ್ಲಿ ವಾಸಿಸುತ್ತಿರುವ ಅನೇಕ ಬುಡಕಟ್ಟುಗಳಲ್ಲಿ ಲಂಬಾಣಿಗರದು ಒಂದು ಜನಪ್ರಿಯ ವೃಂದ. ಇವರನ್ನು ಲಮಾನ, ಲಮಾನಿ, ಲಮಾಣಿ, ಲಂಬಾಣಿ, ಲಂಬಾಡಾ, ಲಬಾನಿ, ಬಂಜಾರಾ, ಬಣಜಾರಾ, ಸುಕಾಲಿ, ಸುಗಾಲಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಬಂಜಾರಾ ಅಥವಾ ಲಂಬಾಣಿ ಶಬ್ದವೂ ಯಾವುದೇ ಜಾತಿ ಸೂಚಕ ಪದವಾಗಿರದೆ ಅದು ಅವರ ಕುಲ-ವೃತ್ತಿಗಳಿಂದ ಬಂದ ಪದವಾಗಿದೆ. ಉದಾ: ಸಂಸ್ಕೃತ ಭಾಷೆಯಲ್ಲಿ ಲವಣ ಎಂದರೆ ಉಪ್ಪು ಎಂದರ್ಥ. ಲಂಬಾಣಿಗರು ಮೂಲದಲ್ಲಿ ಲವಣದ ವ್ಯಾಪಾರ ಮಾಡುತ್ತಿದ್ದರು. “ಲವಣ” ಶಬ್ದವೂ ಜನರ ಬಾಯಲ್ಲಿ ಅಪಭ್ರಂಶವಾಗಿ ಲವಣ>ಲಮಾಣಿ=ಲಂಬಾಣಿ ಎಂದು ಆಗಿರುತ್ತದೆ. ಇಂದಿಗೂ ಲಂಬಾಣಿ ಬುಡಕಟ್ಟು ಕಾಡು, ಮೇಡು, ಗುಡ್ಡಗಾಡುಗಳಲ್ಲಿ ವಾಸಿಸುತ್ತ, ಜೀವನ ಸಾಗಿಸುತ್ತಿರುವುದನ್ನು ಕಾಣುತ್ತೇವೆ. ಈ ಜನರ ಆಚಾರ-ವಿಚಾರ, ನಡೆ-ನುಡಿ ರೂಢಿ-ಸಂಪ್ರದಾಯ, ಜೀವನ-ವಿಧಾನ, ಹಬ್ಬ-ಹರಿದಿನ, ಅವರ ಸಾಹಿತ್ಯ ಮತ್ತು ಜನಪದ ಕಲೆಗಳು ನೇರವಾಗಿ ಮೌಖಿಕ ಪರಂಪರೆ (Oral tradition)ಯಿಂದ ಉಳಿದು ಬಂದವುಗಳಾಗಿವೆ. ಯಾವುದೇ ಪ್ರೌಢ ಸಂಸ್ಕೃತಿಯ ಅಥವಾ ಸಾಹಿತ್ಯದ ಪ್ರಭಾವ ಈ ಬುಡಕಟ್ಟಿನವರ ಮೇಲೆ ಆಗಿರುವುದಿಲ್ಲ. “ತಾಂಡಾ ಸಂಸ್ಕೃತಿ”ಯ ಚೌಕಟ್ಟಿನಲ್ಲಿಯೇ ಇವರ ಜೀವನ ವಿಧಾನ. ಶುದ್ಧಾಂಗವಾಗಿ ತಮ್ಮ ಪ್ರಾಚೀನ ನಡಾವಳಿಗಳನ್ನು ಇವರು ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಪಾಲಿಗೆ ನಿಸರ್ಗವೇ ಬದುಕಿನ ರೀತಿ ರಿವಾಜುಗಳನ್ನು ಕಲಿಸುವ ಗುರು ಎಂದರೆ ತಪ್ಪಾಗಲಾರದು. ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದಿರುವ ಲಂಬಾಣಿಗರದು ಸಾಹಸಮಯ ಬದುಕು. ಕಾಡು-ಮೇಡುಗಳಲ್ಲಿ ತಮ್ಮದೇ ಆದ “ತಾಂಡಾ”ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಾರೆ.

ಆಸೇತು ಹಿಮಾಚಲದಾದ್ಯಂತ ಹರಡಿಕೊಂಡಿರುವ ಲಂಬಾಣಿಗರು ಒಂದು ಕಾಲಕ್ಕೆ ರಾಜಸ್ಥಾನದ ಸಾಹಸಿ ಜನಾಂಗಗಳಲ್ಲಿ ಒಂದಾಗಿದ್ದ ರಜಪೂತರ “ವಣಿಕ್” (ವ್ಯಾಪಾರಿ) ಸಮಾಜಕ್ಕೆ ಸೇರಿದವರು. ಕಾರಣಾಂತರಗಳಿಂದ ತಮ್ಮ ತಾಯ್ನಾಡನ್ನು ಬಿಟ್ಟು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಬೇಕಾಯಿತು. ಆಗ ಲಂಬಾಣಿಗರು “ಮಾಳವಾ” ಮುಖಾಂತರವಾಗಿ ಹೊರಟು ಕ್ರಮೇಣ ಭಾರತದ ಬೇರೆ ಬೇರೆ ಭೌಗೋಳಿಕ ಪ್ರದೇಶಗಳಲ್ಲಿ ಚದುರಿಕೊಂಡರು. ಇವರ ಸಾಹಸ ಮತ್ತು ಪ್ರಾಮಾಣಿಕತೆಗೆ ಮಾರುಹೋದ ಮೊಘಲ್ ದೊರೆಗಳು ಬಂಜಾರಾಗಳಲ್ಲಿ ಎಷ್ಟೋ ಜನರನ್ನು ತಮ್ಮ ಸೈನ್ಯಕ್ಕೆ ಆಹಾರ ಮತ್ತು ಇತರೆ ಸಾಮಾನು ಸರಂಜಾಮುಗಳನ್ನು ಪೂರೈಸುವ ನಿಯಮಿಸಿಕೊಂಡರು. ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿ ಎಂದರೆ ಬಂಜಾರಾ ಜನಾಂಗ ಎಷ್ಟು ಧೈರ್ಯ-ಸಾಹಸಿಗಳು ಎಂಬುದನ್ನು ಮೊಘಲ್ ದೊರೆಗಳು ತಿಳಿದುಕೊಂಡಿದ್ದರು. ಅದಕ್ಕೆ ಕಾರಣವೂ ಇಲ್ಲದಿಲ್ಲ.

ರಾಜಸ್ಥಾನದ ಸಂಸ್ಕೃತಿ ಉಳಿದ ಭಾರತ ಸಂಸ್ಕೃತಿಗಿಂತ ಭಿನ್ನವಾಗಿದ್ದು ಅದಕ್ಕೆ ತನ್ನದೆ ಆದ ವಿಶಿಷ್ಟತೆಯಿದೆ. ಕಾರಣ ಜನಪದ ಸಂಸ್ಕೃತಿಯ ಕನ್ನೆನೆಲವಾಗಿರುವ ರಾಜಸ್ಥಾನವನ್ನು ತಮ್ಮ ಪೂರ್ವದ ಬೀಡಾಗಿ ಗುರುತಿಸಿಕೊಳ್ಳುವಲ್ಲಿ ಇವರಿಗೆ ಅತೀ ಹೆಮ್ಮೆಯಿದೆ. ಸಹಜವಾಗಿ ಈ ಪ್ರದೇಶಗಳ ವಿಶಿಷ್ಟ ಸ್ವರೂಪದ ಜನಪದ ಕಲೆ, ಹಾಡು, ಕಥೆ, ಸೂಕ್ತಿ, ಗೀತೆ, ಗಾದೆ, ಒಗಟು ಒಡಪು, ಖಯಾಲ್ ಎಂಬ ಜನಪ್ರಿಯ ಹೆಸರಿನ ಜನಪದ ನಾಟಕಗಳನ್ನು ಒಳಗೊಳ್ಳುತ್ತದೆ. ತಮ್ಮ ಪ್ರತ್ಯೇಕತೆಯನ್ನು ಸಂರಕ್ಷಿಸಿಕೊಂಡು ಬಂದವರಾದ್ದರಿಂದ ಜಾನಪದ ವಿದ್ವಾಂಸರಿಗೆ ಮತ್ತು ಮಾನವಶಾಸ್ತ್ರ ವಿದ್ವಾಂಸರಿಗೆ ಈ ಕ್ಷೇತ್ರ ತುಂಬ ಹುಲುಸಾಗಿರುವ ಕನ್ನೆನೆಲ ಎಂದರೆ ತಪ್ಪಾಗದು.

ಲಂಬಾಣಿ ಬುಡಕಟ್ಟಿನವರನ್ನು ಕುರಿತು ಬರೆಯುತ್ತಿರುವವರ ಸಾಲಿನೊಳಗೆ ಡಾ.ಡಿ.ಬಿ. ನಾಯಕರು ಮುಂಚೂಣಿಯಲ್ಲಿದ್ದಾರೆ. ಬುಡಕಟ್ಟು ಅಧ್ಯಯನ ಕುರಿತು ಇವರಿಗೆ ವಿಶೇಷ ಆಸಕ್ತಿ. ಈಗಾಗಲೇ ಲಂಬಾಣಿಗರನ್ನು ಕುರಿತು ಹಲವಾರು ಮೌಲಿಕ ಕೃತಿಗಳನ್ನು ಹೊರತಂದಿದ್ದಾರೆ. “ಲಂಬಾಣಿಗರ‍ನ್ನು ಕುರಿತು ಹಲವಾರು ಮೌಲಿಕ ಕೃತಿಗಳನ್ನು ಹೊರತಂದಿದ್ದಾರೆ. ಲಂಬಾಣಿಗರ ಸಂಸ್ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರದಿಂದ ೧೯೯೩ರಲ್ಲಿ, ಉಪಸಂಸ್ಕೃತಿ ಮಾಲಿಕೆಯಲ್ಲಿ ಪ್ರಕಟಿಸಿದ ಹಲವಾರು ಕೃತಿಗಳಲ್ಲಿ ಇದು ಒಂದು. ಇಂಥ ಮಹತ್ವದ ಯೋಜನೆಗಳನ್ನು ಹಾಕಿ ಬುಡಕಟ್ಟಿನ ಅಧ್ಯಯನ ಮಾಡಿಸಿ ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡಿದ ಶ್ರೇಯಸ್ಸು, ಅಂದಿನ ಅಧ್ಯಕ್ಷರಾದ ಪ್ರೊ. ಬರಗೂರು ರಾಮಚಂದ್ರಪ್ಪನವರಿಗೆ ಸಲ್ಲುತ್ತದೆ. ಆರಂಭದಲ್ಲಿ ಅವರುಸಂಸ್ಕೃತಿ ಉಪಸಂಸ್ಕೃತಿಕುರಿತ ನಲವತ್ತೆರಡು ಪುಟಗಳ ಗಂಭೀರವಾದ ಪ್ರಸ್ತಾವನೆ ಬರೆದಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಎಂಟು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಹಿನ್ನೆಲೆ ಬಗ್ಗೆ ಹೇಳಿದ್ದಾರೆ. ಎರಡನೆಯ ಅಧ್ಯಾಯದಲ್ಲಿ ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆ ಕುರಿತು ವಿವೇಚಿಸಿದ್ದಾರೆ. ಭಾಷೆ ಮತ್ತು ಸಾಹಿತ್ಯ ಕುರಿತು ಮೂರನೆಯ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಆಚರಣೆ ಮತ್ತು ಕಲೆ ಕುರಿತು ಮುಂದಿನ ಅಧ್ಯಾಯ ವಿವರಿಸುತ್ತದೆ. ಪ್ರದರ್ಶನ ಕಲೆಗಳು ಐದನೆಯ ಅಧ್ಯಾಯದಲ್ಲಿ ಸಾಮಾಜಿಕ ಪರಿವರ್ತನೆಯ ಹಿನ್ನೆಲೆಯಲ್ಲಿ ಲಂಬಾಣಿಗರ ಕುರಿತು ಹೇಳಿದ್ದಾರೆ. ಕೊನೆಯ ಅಧ್ಯಾಯದಲ್ಲಿ “ಸಮಾರೋಪ” ಮಾಡಿದ್ದಾರೆ. ಒಟ್ಟಿನಲ್ಲಿ ಈ ಕೃತಿಯಲ್ಲಿ ಲಂಬಾಣಿ ಬುಡಕಟ್ಟಿನ ಒಳನೋಟಗಳನ್ನು ಕಾಣಬಹುದಾಗಿದೆ.

ಡಾ. ಡಿ.ಬಿ. ನಾಯಕರು ಸ್ವತಃ ಲಂಬಾಣಿ ಪಂಗಡಕ್ಕೆ ಸೇರಿದವರಾಗಿದ್ದರೂ ಈ ಕೃತಿಯಲ್ಲಿನ ಜೀವನ ವಿಧಾನ; ಸಾಮಾಜಿಕ ವ್ಯವಸ್ಥೆ, ಸಾಂಸ್ಕೃತಿಕ ಅಧ್ಯಯನ ವಿಶ್ಲೇಷಣೆಗಳಲ್ಲಿ ವಾಸ್ತವಕತೆಗೆ ಮಹತ್ವ ನೀಡಿದ್ದು, ಎಲ್ಲಿಯೂ ವೈಭವೀಕರಣದ ಗೋಜಿಗೆ ಹೋಗಿಲ್ಲ.

ಮೊದಲನೆಯ ಅಧ್ಯಾಯಹಿನ್ನೆಲೆಯಲ್ಲಿ ಮಾನವನ ಸಂಸ್ಕೃತಿಯ ವಿಕಾಸದ ಹಿನ್ನೆಲೆ, ಆದಿವಾಸಿ, ಸಂಸ್ಕೃತಿ, ಗ್ರಾಮೀಣ ಸಂಸ್ಕೃತಿ ಮತ್ತು ನಗರ ಸಂಸ್ಕೃತಿ ಎಂದು ವಿಂಗಡಿಸಿ, ಮಾನವ ವಿಜ್ಞಾನಿಗಳು ಆದಿವಾಸಿ ಬುಡಕಟ್ಟಿನ ಸಂಸ್ಕೃತಿಗಳ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಲಂಬಾಣಿಗರು ತಮ್ಮನ್ನು ತಾವು “ಗೋರಮಾಟಿ”, “ಗೋರವಟ”, “ಗೋರಬಂದಾ”, “ಗೋರಭಾಯಿ”, “ಗೋರ”, “ಗೋರಿಯಾ”, ಎಂದು ಕರೆದುಕೊಳ್ಳುತ್ತಾರೆ. ಭಾರತದ ತುಂಬೆಲ್ಲಾ ಹರಡಿಕೊಂಡಿರುವ ಇವರನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಬಂಜಾರಾ, ಬಂಜಾರಿ, ಬಣಜಾರಾ, ಬ್ರಂಜಾರಿ, ಬಂಜಾರ, ಬ್ರಜವಾಸಿ, ಲಮಾನ, ಲಂಬಾಡಾ, ಲಾಬಾನಾ, ಬಳದಿಯಾ, ಲದೇಣಿಯಾ, ಸುಗಾಲಿ, ಗವಾರ, ಗವಾರಿಯಾ, ಕಾಂಗಸಿಯಾ, ಶಿರಕಿಬಂದ, ಶಿರಕಿವಾಲಾ ಮುಂತಾಗಿ ಇಪ್ಪತ್ತೇಳು ಹೆಸರುಗಳಿಂದ ಗುರುತಿಸಿದ್ದಾರೆ. ಇವರ ವೃತ್ತಿ ಕಸಬುಗಳಿಂದ ಬೇರೆ ಬೇರೆ ಹೆಸರುಗಳು ಇವರಿಗೆ ಬಂದಿವೆ ಎಂದು ವಿವರಣೆ ನೀಡಿದ್ದಾರೆ.

ಲಂಬಾಣಿಗರ ಮೂಲವನ್ನು ಕುರಿತು ವಕ್ತೃಗಳಿಂದ ಐದು ಬೇರೆ ಬೇರೆ ಐತಿಹ್ಯಗಳನ್ನು ಸಂಗ್ರಹಿಸಿ ಈ ಕೆಳಗಿನಂತೆ ಸೃಷ್ಟೀಕರಿಸಿದ್ದಾರೆ. ಮೊದಲನೆಯ ಐತಿಹ್ಯದ ಪ್ರಕಾರ ಮೊಲಾದಾದಾನಿಂದ ಲಂಬಾಣಿ ವಂಶ ಉದ್ಭವವಾಯಿತು. ಎರಡನೆಯ ಐತಿಹ್ಯ ಲಂಬಾಣಿಗರು ವಾಲಿ-ಸುಗ್ರೀವರ ವಂಶಜರು. ಸೃಷ್ಟಿಯ ಪಂಚಭೂತಗಳಿಂದ ಕವರಪಾಳ್, ರಾಜಪಾಳ್, ಸೋಜಾಕರಣ, ತೀಡಾ ಎಂದು ಮೂಲ ಹೇಳಿ ತೀಡಾನಿಂದ ಮೊಲಾ. ಮೊಲಾ ವಂಶಜರೇ ಲಂಬಾಣಿಗಳೆಂದು ಮೂರನೆಯ ಐತಿಹ್ಯದಲ್ಲಿ ಹೇಳಿದ್ದಾರೆ. ಮಾರವಾಡದ ಖೈರಗಡ ರಾಠೋಡನ ಮಗ ಲಾಖನಸಿಂಗ, ಧಾರರಾಜ್ಯದ ಮುಂಜಿ ಪವಾರನ ಮಗ ಲೋಹಾಸಿಂಗ ಮತ್ತು ತೂರಿಗಡದ ಚವ್ಹಾಣದ ಮಗ ರಣಧೀರಸಿಂಗ್. ಈ ಮೂವರು ಸೇರಿಕೊಂಡು ದೆಹಲಿಯ ಕವರಪಾಲ ರಾಜನೊಂದಿಗೆ ಬೇಟೆಗೆ ಹೋದರು. ಮುಂದೆ ನಾಗಾ ಬ್ರಾಹ್ಮಣನ ಮೂವರು ಅಪ್ಸರ ಕನ್ಯೆಯರ ಜೊತೆಗೆ ರಾಠೋಡ, ಪವಾರ ಮತ್ತು ಚವ್ಹಾಣನ ಮದುವೆ ಆಯಿತು. ಇವರಿಂದ ಮುಂದುವರೆದ ಸಂತತಿಯೇ ಲಂಬಾಣಿಗಳೆಂದು ಮುಂದಿನ ಐತಿಹ್ಯದಲ್ಲಿ ಹೇಳಿದ್ದಾರೆ. ಕೊನೆಯ ಐತಿಹ್ಯದ ಪ್ರಕಾರ ಮೊಘಲರ ದೊರೆ ಅಕ್ಬರನಿಂದ ಯುದ್ಧದಲ್ಲಿ ಪರಾಜಿತನಾದ ರಾಣಾ ಪ್ರತಾಪಸಿಂಹನಿಗೆ, ಅಕ್ಬರನು ಶರಣಾಗತನಾದರೆ ಮರಳಿ ರಾಜ್ಯವನ್ನು ಕೊಡುವುದಾಗಿ ಸಂದೇಶವನ್ನು ಕಳಿಸಿದ. ಸ್ವಾಭಿಮಾನಿಯಾದ ರಾಣಾ ಪ್ರತಾಪಸಿಂಹನು ಅದಕ್ಕೆ ಒಪ್ಪದೇ ಯುದ್ಧ ಮಾಡಿ ಮರಳಿ ರಾಜ್ಯಪಡೆಯುವುದಾಗಿ ಪ್ರತಿಜ್ಞೆ ಮಾಡಿ ಕಾಡನ್ನು ಸೇರಿದನು. ಅವನೊಂದಿಗೆ ಅನೇಕ ಕುಟುಂಬಗಳು ಕಾಡನ್ನು ಸೇರಿದವು. ಅವರಲ್ಲಿ ಲಂಬಾಣಿಗರು ಒಬ್ಬರೆಂದು ನಂಬಲಾಗಿದೆ.

ಲಂಬಾಣಿಗರ ಮೂಲವನ್ನು ಕುರಿತು ಈ ಐದು ಐತಿಹ್ಯಗಳನ್ನು ಪರಾಮರ್ಶಿಸಿ ನೋಡಿದಾಗ ಇವುಗಳಲ್ಲಿ ಸತ್ಯ ಸಂಗತಿಗಳನ್ನು ಹೇಳುವುದು ಕಷ್ಟ. ಆದಾಗ್ಯೂ ಐತಿಹ್ಯಗಳ ಹಿನ್ನೆಲೆಯಲ್ಲಿ ಎಷ್ಟೋ ವಾಸ್ತವ ಹುದುಗಿಕೊಂಡಿರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಈ ಐತಿಹ್ಯಗಳಲ್ಲಿ ಕೆಲವು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಲಂಬಾಣಿಗರ ಮೂಲದ ಬಗ್ಗೆ ಎಷ್ಟೋ ವಾಸ್ತವ ಸಂಗತಿಗಳು ಗೋಚರಿಸದೆ ಇರಲಾರವು. ಏಕೆಂದರೆ ವಾಸ್ತವಿಕತೆಯ ಮೇಲೆ ಅಗಣಿತ ವಿವರಗಳು ಬಿದ್ದು ಅನೇಕ ಘಟನೆಗಳ ಪದರುಗಳು ಬಿದ್ದು ಅದೊಂದು ನಿಗೂಢ ಪೌರಾಣಿಕ ವಾಸ್ತವವಾಗಿ ರೂಪಗೊಂಡಿದೆ.

ಲಂಬಾಣಿ ಜನಸಂಖ್ಯೆ ಕುರಿತು ಹೇಳುವಾಗ, ಹಾವನೂರ ವರದಿ ಆಧಾರದ ಮೇಲೆ ಹೇಳಿದ್ದಾರೆ. ಲಂಬಾಣಿಗರನ್ನು ಕುರಿತು ಇಲ್ಲಿಯವರೆಗೆ ನಡೆದಿರುವ ಅಧ್ಯಯನ ಸಮೀಕ್ಷೆ, ಭಾರತದ ತುಂಬೆಲ್ಲಾ ಪ್ರವಾಸ ಕೈಗೊಂಡು ಅಧ್ಯಯನ ಮಾಡಿದಂಥ ವಿದ್ವಾಂಸರ ಮಾಹಿತಿಯನ್ನು ನೀಡಿದ್ದಾರೆ. ಲಂಬಾಣಿಗರ ಮೂಲದ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನು ಈ ಅಧ್ಯಾಯದಲ್ಲಿ ದಾಖಲಿಸಿರುವುದನ್ನು ಕಾಣಬಹುದು.

ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆಕುರಿತ ಎರಡನೆಯ ಅಧ್ಯಾಯದಲ್ಲಿ ಲಂಬಾಣಿಗರು ವಾಸಿಸುವಂಥ ತಾಂಡಾದ ಚಿತ್ರಣ ಅವರು ಕಟ್ಟಿಕೊಳ್ಳುವ ಝೂಪಡಾ (ಹುಲ್ಲಿನ ಮನೆ)ದ ವಿಧಾನ, ಕೋಳಿಗಾಗಿ ತಯಾರಿಸಿದ ಗೂಡು, ಕುರಿಗಳಿಗಾಗಿ ನಿರ್ಮಿಸಿದ ದೊಡ್ಡಿ, ಹಾಗೂ ಜಾನುವಾರುಗಳಿಗಾಗಿ ಕಟ್ಟುವ ಕೊಟ್ಟಿಗೆಯ ಮಾದರಿ. ಇವೆಲ್ಲವುಗಳನ್ನು ನೋಡಿಯೇ ಅರಿಯಬೇಕು.

ಲಂಬಾಣಿಗರ ಆಹಾರ ಪದ್ಧತಿಯ ಬಗ್ಗೆ ಹೇಳುವಾಗ “ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಾದ ಇವರ ಆಹಾರ ಪದ್ಧತಿಗಳಲ್ಲಿ ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಜೋಳ, ಗೋದಿ, ಸಜ್ಜೆ, ಭತ್ತ, ರಾಗಿಗಳನ್ನು ಉಪಯೋಗಿಸುತ್ತಾರೆ. “ಬಾಟಿ ಖಾವತೋ ಮಾಟಿ” (ರೊಟ್ಟಿ ತಿಂದರೆ ಮನುಷ್ಯ ಗಟ್ಟಿ) ಎಂಬ ಗಾದೆ ಇವರಲ್ಲಿ ರೂಢಿಯಲ್ಲಿದೆ. ಮಾಂಸದ ಸಾರು ಮತ್ತು ರೊಟ್ಟಿಯ ಊಟ ಇವರಿಗೆ ಪ್ರಿಯವಾದ ಆಹಾರ, ಸುಂವಾಳಿ (ಪುರಿ) ಕುಲ್ಲರ (ಗೋದಿ ಹಿಟ್ಟಿನಿಂದ ತಯಾರಿಸಿದ ಸಿಹಿ ಪದಾರ್ಥ) ಈ ಪದಾರ್ಥಗಳು ತುಂಬ ಇಷ್ಟ. ಹಬ್ಬ ಹರಿದಿನಗಳಲ್ಲಿ ಪೇಯಗಳಿಗೆ ವಿಶೇಷ ಸ್ಥಾನ. ಉದಾ: ಹೋಕಾ, ಗಾಂಜಾ, ಭಾಂಗ ಇತ್ಯಾದಿಗಳ ಬಗ್ಗೆಯೂ ವಿವರಣೆ ಕೊಟ್ಟಿದ್ದಾರೆ.

ಉಡುಗೆ-ತೊಡುಗೆಗಳ ಕುರಿತು ಹೇಳುವಾಗ ಲಂಬಾಣಿ ಸ್ತ್ರೀಯರು ಧರಿಸುವ ವಸ್ತ್ರಗಳ ಮೇಲೆ ಕೈಯಿಂದ ಬಿಡಿಸಿದ ಅಂದವಾದ ಕಸೂತಿಯು ಎದ್ದು ತೋರುತ್ತದೆ. ಬಣ್ಣ ಬಣ್ಣದ ದಾರದಿಂದ ಕಸೂತಿಯನ್ನು ಹಾಕಿರುತ್ತಾರೆ. ಸ್ತ್ರೀಯರು ತೊಡುವ ಫೇಟಿಯಾ (ಲಂಗ), ಕಾಂಚಳಿ (ಚೋಲಿ), ಛಾಂಟಿಯಾ (ಮೇಲ್ಮುಸುಕು) ಪ್ರಮುಖವಾದವುಗಳು. ತೊಡುಗೆಗಳಲ್ಲಿ ಮೂಗಿನಲ್ಲಿ ಭೂರಿಯಾ ಕೊರಳಲ್ಲಿ ಹಾಂಸಲಿ, ಕರಿಮಣಿ, ರಪಿಯಾಹಾರ ಮುಂಗೈಯಲ್ಲಿ ಕಟ್ಟಿಗೆ ಮತ್ತು ಹಸ್ತದಂತಿಯ ಬೊದ್ದು, ಚೂಡಿ, ಕೈಬೆರಳುಗಳಲ್ಲಿ, ವಿಂಟಿ, ಕಾಲುಗಳಲ್ಲಿ ವಾಂಕಿಯಾ, ಕಸ, ಚಾಲಾವಿಂಟಿ ಮುಂತಾದ ಆಭರಣಗಳನ್ನು ತೊಡುತ್ತಾರೆ. ಪುರುಷರು ಅಂಗಿ, ಧೋತರ, ರಮಾಲ (ಪಾಗಡಿ) ಧರಿಸುತ್ತಾರೆ. ಕಿವಿಯಲ್ಲಿ ಬಂಗಾರದ ಮುರುವು, ಕೈಯಲ್ಲಿ ಕಡಗ, ಸೊಂಟಕ್ಕೆ ಬೆಳ್ಳಿಯ ಕಣದೋರೋ (ಉಡದಾರ) ಇತ್ಯಾದಿ. ಇತ್ತೀಚೆಗೆ ಲಂಬಾಣಿ ಸ್ತ್ರೀಯರ ಕಸೂತಿ ಕಲೆಗಳನ್ನು ಪ್ರೋತ್ಸಾಹಿಸುವಲ್ಲಿ ಸಬಲಾಗಳಂಥ ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡು ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಲಂಬಾಣಿ ಸ್ತ್ರೀಯರು ಕನ್ನಡಿಯನ್ನು ಬಳಸಿಕೊಂಡು ರಚಿಸಲಾದ ಸುಂದರ ಕಸೂತಿಗಳ ರಚನೆ ನೆನಪಿನಲ್ಲಿ ಉಳಿಯುವಂತಹದಾಗಿದೆ.

ಲಂಬಾಣಿಗರ ವೃತ್ತಿಯನ್ನು ಕುರಿತು ಹೇಳುವಾಗ “ಸೇವಾ ಕರತೋ ಮೇವಾ ಮಳಚ” (ಬೆವರು ಸುರಿಸಿದರೆ ಸುಖ ಸಿಗುತ್ತದೆ) ಎಂಬ ಮಾತನ್ನು ಅಕ್ಷರಶಃ ಇವರು ಪಾಲಿಸಿಕೊಂಡು ಬಂದಿದ್ದಾರೆ. ಶ್ರಮಜೀವನದಲ್ಲಿ ಸಂತೃಪ್ತಿ ಕಂಡ ಈ ಬುಡಕಟ್ಟು ಕೂಲಿನಾಲಿ, ರಸ್ತೆಯ ಕೆಲಸದಿಂದ ಹಿಡಿದು, ಪಶುಪಾಲನೆ, ಕೃಷಿ, ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಳಾಡಳಿತ ವ್ಯವಸ್ಥೆ ಕುರಿತು ವಿವರಿಸಿದ್ದಾರೆ. ಗೋತ್ರಗಳನ್ನು ಕುರಿತು ಹೇಳುವಾಗ,

“ಪಾಂಚ ಚೂಲಾ
ಪಚ್ಚೀಸ ನಾತಾ
ಛಾಯೀಸ್ ಮನ್
ಸತ್ತಾಯಿಸ ಸುಬೇದಾರ”

ಅರ್ಥ : ಐದು ತಲೆಗಳಿಂದ ಇಪ್ಪತ್ತೈದು ಪಂಗಡಗಳು, ಇಪ್ಪತ್ತಾರು ಜನ ವ್ಯಕ್ತಿಗಳು ಹಾಗೂ ಇಪ್ಪತ್ತೇಳು ಸುಬೇದಾರರು ಎಂದರ್ಥ.

ಮೂಲದಲ್ಲಿ ಮೋಲಾ, ರಾಧಿಕಾ, ರಾಠೋಡ, ಪವಾರ ಮತ್ತು ಚವ್ಹಾಣ ಈ ಐದು ಜನ. ಮುಂದೆ ಇವರಿಂದ ಇಪ್ಪತ್ತೈದು ಪಂಗಡಗಳು ಉದ್ಭವವಾದವು. ಗೋತ್ರದ ಬಗ್ಗೆ ವಿವರಣೆ ನೀಡಿದ್ದಾರೆ.

ಸಾಮಾಜಿಕ ವ್ಯವಸ್ಥೆ ಕುರಿತು ವಿಭಕ್ತ ಮತ್ತು ಅವಿಭಕ್ತ ಕುಟುಂಬ ಪದ್ಧತಿ ಇವರಲ್ಲಿ ರೂಢಿಯಲ್ಲಿದೆ. ಹೆಚ್ಚಾಗಿ ಪಿತೃಪ್ರಧಾನ ಕುಟುಂಬ ಪದ್ಧತಿ ಜಾರಿಯಲ್ಲಿರುವುದರಿಂದ ಆಸ್ತಿಯ ಹಕ್ಕು ವಂಶದ ಕೀರ್ತಿ, ಬಿರುದು-ಬಾವಲಿಗಳು ತಂದೆಯಿಂದ ಮಗನಿಗೆ ಮುಂದುವರೆದುಕೊಂಡು ಹೋಗುತ್ತದೆ ಎಂದಿದ್ದಾರೆ.

ಸಂಪ್ರದಾಯ ಆಚರಣೆ ಕುರಿತು ಹೇಳುವಾಗ “ಬಡವರಾದರೂ ಲಂಬಾಣಿಗರಲ್ಲಿ ಕುಲಾಚಾರಕ್ಕೆ ಬಡತನವಿಲ್ಲ. ಯಾವುದೇ ಆಚರಣೆ ಸಂಪ್ರದಾಯಗಳಲ್ಲಿ ತುಂಬಾ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಾರೆ. ಕೆಲವು ವಿಶಿಷ್ಟ ಸಂಪ್ರದಾಯ ನಂಬಿಕೆಗಳಿವೆ; ಭೂತ ಪಿಶಾಚಿಗಳ ಬಗ್ಗೆ ಭಯ, ಎಣ್ಣೆಜೋಗಿ, ಬುಡಬುಡಕೆಯರು ಹೇಳಿದ ಮಾತುಗಳನ್ನು ನಂಬುತ್ತಾರೆ. ಕಾಗೆ, ಗೂಗೆ, ನಾಯಿ, ನರಿ, ಬೆಕ್ಕು, ಕತ್ತೆ, ಕುದುರೆ ಮುಂತಾದ ಪ್ರಾಣಿ ಪಕ್ಷಿಗಳ ಶಕುನಗಳನ್ನು ನಂಬುತ್ತಾರೆ.” ಸಂಪ್ರದಾಯಗಳ ಕುರಿತು ಡಾ. ನಾಯಕರು ವಕ್ತೃಗಳಿಂದ ಮಾಹಿತಿ ಸಂಗ್ರಹಿಸಿ ಸ್ಪಷ್ಟೀಕರಿಸಿದ್ದಾರೆ.

ನ್ಯಾಯ ಪದ್ಧತಿ ಬಗ್ಗೆ ಹೇಳುತ್ತ, “ತಾಂಡಾದ ಪ್ರತಿಯೊಬ್ಬ ಸದಸ್ಯರು ತಮ್ಮ ಸಮಾಜದ ಕಟ್ಟು-ಕಟ್ಟಳೆಗಳಿಗೆ ಬದ್ಧನಾಗಿರುತ್ತಾನೆ. ನಾಯಕನು ತಾಂಡಾದ ಮುಖ್ಯಸ್ಥನಾಗಿರುತ್ತಾನೆ. ತಾಂಡಾದ ಆಗುಹೋಗುಗಳು ಇವನ ಮುಖಾಂತರ ನಡೆಯುತ್ತದೆ. ಇವನ ಸಹಾಯಕ್ಕಾಗಿ ಕಾರಭಾರಿ (ಕಾರ್ಯದರ್ಶಿ), ಡಾವ (ಅನುಭವಿ) ಇರುತ್ತಾರೆ. ತಾಂಡಾ ಸಂಸ್ಕೃತಿಯ ಒಳ ವ್ಯವಸ್ಥೆಯಲ್ಲಿ ಸಹಾಯಕರಾಗಿ ಢಾಡಿ (ವೃತ್ತಿಗಾಯಕ), ಢಾಲಿಯಾ (ವಾಲೀಕಾರ), ಸನಾರ (ಅಕ್ಕಸಾಲಿಗ), ನಾವಿ (ಕ್ಷೌರಿಕ) ಮುಂತಾದವರಿರುತ್ತಾರೆ. ಲಂಬಾಣಿಗರ “ಗೋರ ಪಂಚಾಯತ” ಪ್ರಮುಖವಾಗಿ ಮೂರು ಬಗೆಯಲ್ಲಿದೆ.

೧) ಹಸಾಬ (ದಿವಾನಿ) ಆಸ್ತಿಪಾಸ್ತಿಗಳ ತಂಟೆ

೨) ನಸಾಬ (ಫೌಜದಾರಿ) ಒಡೆದಾಟ ಹಾಗೂ ಪ್ರಾದೇಶಿಕ ಸಮಸ್ಯೆ.

೩) ಮಳಾವೋ : ತಾಂಡಾದ ಆಂತರಿಕ ಹಾಗೂ ಪ್ರಾದೇಶಿಕ ಸಮಸ್ಯೆ.

ಈ ಎಲ್ಲ ಬಗೆಯ ಸಮಸ್ಯೆಗಳನ್ನು ಗಂಭೀರವಾದ ಆಲೋಚನೆ, ತರ್ಕ, ಚರ್ಚೆ ಮುಂತಾದವುಗಳ ಮೂಲಕ ಬಗೆಹರಿಸುತ್ತಾರೆ.” ಇಲ್ಲಿ ಡಾ. ನಾಯಕರು ಗೋರ ಪಂಚಾಯತ ಒಳಾಡಳಿತದ ಬಗ್ಗೆ ಸೊಗಸಾಗಿ ವಿವರಣೆ ನೀಡಿದ್ದಾರೆ. ಒಟ್ಟಾರೆ ಗೋರ ಪಂಚಾಯತದಲ್ಲಿ ಕೋಳಿ ಕಾಳಗದಿಂದ ಹಿಡಿದು ಗೂಳಿ ಕಾಳಗದವರೆಗೆ ಇದರ ವ್ಯಾಪ್ತಿ ಇರುವುದನ್ನು ಕಾಣುತ್ತೇವೆ.

ಭಾಷೆ ಮತ್ತು ಸಾಹಿತ್ಯ ಎನ್ನುವ ಮೂರನೆಯ ಅಧ್ಯಾಯದಲ್ಲಿ ಲಂಬಾಣಿಗರ “ಗೋರಬೋಲಿ” ಭಾಷೆ ಕುರಿತು ಹೇಳುತ್ತಾ, ಇದು “ಇಂಡೋ ಆರ್ಯನ್” ಭಾಷಾವರ್ಗಕ್ಕೆ ಸೇರುವ ಭಾಷೆಯಾಗಿದೆ. ಈ ಭಾಷೆಗೆ ಲಿಪಿಯಿಲ್ಲ ಹಾಗೂ ತನ್ನದೇ ಆದ ಸ್ವತಂತ್ರ ಇತಿಹಾಸವೂ ಇಲ್ಲ. ಆಯಾ ಪ್ರಾಂತೀಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಇದೊಂದು ಮಿಶ್ರ ಭಾಷೆಯಂತೆ ತೋರುತ್ತದೆ. “ದೇವನಾಗರಿ” ಲಿಪಿಯೇ ಈ ಆಡುನುಡಿಗೆ ಸಿದ್ಧ ಲಿಪಿಯಾಗುತ್ತದೆ. ಒಂದೇ ಶಬ್ದದ ಅನೇಕ ರೂಪಗಳು ಈ ಭಾಷೆಯಲ್ಲಿ ಕಂಡು ಬರುತ್ತದೆ. ಶಬ್ದ ಸಂಖ್ಯೆ ಕಡಿಮೆ ಇದ್ದರೂ ಒಂದೇ ಶಬ್ದದ ಅನೇಕ ರೂಪಗಳು ಬಳಕೆಯಾಗುವುದು ಒಂದು ಭಾಷೆ ಮೌಲ್ಯದ ಪ್ರತೀಕವಾಗಿದೆ. ಉದಾಹರಣೆಗೆ:

೧) ಖಾಡು (ದನಗಳು) ಢೋರ, ಜನಗಾನಿ

೨) ಡುಂಗರ (ವರ್ಪತ) ಗಟಲಾ, ದಡಿಯಾ

೩) ಬೀರ (ಹೆಂಡತಿ) ತಾಂಡರಿ, ಗೊಣ್ಣಿ, ಬೋಡಿ

ಮೇಲಿನ ಅಂಶಗಳ ಜೊತೆಗೆ ವಿಜಾತಿಯ ದ್ವಿತ್ಯಾಕ್ಷರಗಳನ್ನು ಸರಳಗೊಳಿಸಿ ಬರೆಯುವುದು, ಪದಾಂತ್ಯ (ಪದಗಳ) ವ್ಯಂಜನವು ಲೋಪ ಹೊಂದುವುದು. ಅನೇಕ ಪದಗಳಲ್ಲಿ ಅನುನಾಸಿಕರಣವು ಸ್ಪಷ್ಟವಾಗಿ ಧ್ವನಿತವಾಗುವುದು, ಧ್ವನಿತ ವ್ಯತ್ಯಾಸದಿಂದ ಪದಗಳ ಅರ್ಥ ವ್ಯತ್ಯಾಸವಾಗುವುದು, ಪಂಚಮಿ, ವಿಭಕ್ತಿಗೆ ಪ್ರತ್ಯೇಕ ಪ್ರತ್ಯಯವಿಲ್ಲದಿರುವುದು, ಗೌರವ ಸೂಚಕ ಪದಗಳ ಬಳಕೆಯಿಲ್ಲದಿರುವುದು ಮುಂತಾದ ವಿಶಿಷ್ಟ ವ್ಯಾಕರಣ ಪ್ರಕ್ರಿಯೆಗಳು ಹಾಗೂ ಅಂಶಗಳು ಗೋಚರವಾಗುತ್ತವೆ” ಇಲ್ಲಿ ಲಂಬಾಣಿಗರ ಭಾಷೆಯ ಬಗ್ಗೆ ಕೆಲವು ಮಹತ್ವದ ಅಂಶಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟೀಕರಿಸುತ್ತಾರೆ.

ಲಂಬಾಣಿಗರ ಸಾಹಿತ್ಯ ಕುರಿತು ಬರೆಯುತ್ತಾ, “ತಮಗಾದ ಸುಖ-ದುಃಖ, ನೋವು-ನಲಿವುಗಳನ್ನು ಹಾಡುಗಳ ಮುಖಾಂತರ ಮತ್ತು ಗೀತ ನರ್ತನಗಳ ಮುಖಾಂತರ ಹೊರ ಹಾಕುತ್ತಾರೆ. ಅವರ ಒಂದೊಂದು ಹಾಡಿನಲ್ಲಿಯೂ ಜೀವನಸೌಂದರ್ಯ, ಅನುಭವ, ರಸಿಕತನ ಹೊರಸೂಸುತ್ತದೆ. ಕಥೆ, ಗೀತೆ, ಗಾದೆ, ಒಗಟು ಮೊದಲಾದ ಹತ್ತು ಹಲವು ಪ್ರಕಾರಗಳ ಜನಪದ ಸಾಹಿತ್ಯ ಮೌಖಿಕವಾಗಿಯೇ ಉಳಿದುಕೊಂಡು ಬಂದಿದೆ. ಕಾಡು-ಮೇಡು, ಬೆಟ್ಟ-ಕಣಿವೆ, ಹೊಳೆ-ಹಳ್ಳ, ತಾಂಡಾ ಎಲ್ಲಿಯೆ ಇರಲಿ ಅರ್ಥಗರ್ಭೀತವಾದ ಹಾಡನ್ನೋ, ಗಾದೆಯನ್ನೋ, ಕಥೆಯನ್ನೋ ಇಲ್ಲವೆ ಒಗಟನ್ನೋ ಹೇಳಿ ತಮಗಾದ ಪರಿಶ್ರಮ ಹಾಗೂ ನೋವನ್ನು ಇವರು ಮರೆಯುತ್ತಾರೆ” ಎಂದು ಸೊಗಸಾಗಿ ಹೇಳಿದ್ದಾರೆ. ಉದಾಹರಣೆಗೆ ಒಂದು ಗಾದೆ,

“ವತನೇನ ಜತನ ಕರಣು
ವಗತೇಪರ ಖರಚ ಕರಣು”

ಅರ್ಥ: ಸಂಪತ್ತು, ಸಂತಾನ, ಜ್ಞಾನ ತುಂಬಿದ ಮಾತು ಇವುಗಳನ್ನು ರಕ್ಷಿಸಿಕೊಂಡು ಸಮಯ ಬಂದಾಗ ಮಾತ್ರ ಖರ್ಚು ಮಾಡಬೇಕು ಎಂದರ್ಥ.

ತೀಜ(ಗೋದಿ) ಹಬ್ಬದ ಸಂದರ್ಭದಲ್ಲಿ ಉಭಯ ಪಕ್ಷದವರು ತೀಜ ಗೀತೆಯನ್ನು ಹಾಡುತ್ತಾರೆ. ಆಗ ಪ್ರತ್ಯುತ್ತರವಾಗಿ ತೀಜ ಸಂವಾದವನ್ನು ಹೇಳಬೇಕಾಗುತ್ತದೆ. ಉದಾಹರಣೆಗೆ,

“ಖಲ್ ಖಲ್ ಭಾಂದು ಪಾಗಡಿಯೇ
ಮೋಡ ಮೋಡ ಭಾಂದು ಪೇಟಾ
ಭರೇ ಸಭಾಮ ಹಾತ ಪಕಡು
ಮ ಭುಕಿಯಾರೋ ಬೇಟಾ”

ಅರ್ಥ : ನೀಳವಾಗಿ ಪಾಗಡಿಯನ್ನು ಕಟ್ಟುತ್ತೇನೆ
ಸುತ್ತಿ ಸುತ್ತಿ ಪೇಟಾ ಧರಿಸುತ್ತೇನೆ
ತುಂಬಿದ ಸಭೆಯಲ್ಲಿ ಕೈ ಹಿಡಿಯುತ್ತೇನೆ
ಭುಕಿಯಾ ಬೆಡಗಿನ ಮಗ ನಾನು

ಲಂಬಾಣಿ ಜನಪದ ಸಾಹಿತ್ಯದಲ್ಲಿ ಭಾವಗೀತೆ, ಮತ್ತು ಕಥನಗೀತೆಗಳ ವರ್ಗೀಕರಣ ಮಾಡಿದ್ದಾರೆ. ಧಾರ್ಮಿಕ, ಪೌರಾಣಿಕ, ಐತಿಹಾಸಿಕ, ವೀರಗೀತೆ ಹಾಗೂ ಸಾಮಾಜಿಕ ಕಥನಗೀತೆಗಳು ಲಂಬಾಣಿ ಗೀತ ಸಾಹಿತ್ಯದಲ್ಲಿ ಲಭ್ಯವಾಗುತ್ತವೆ. ಅವುಗಳಲ್ಲಿ ಧಾರ್ಮಿಕ ಮಹಾಪುರುಷ, ಸಂತ ಸೇವಾಲಾಲ, ಜಗದಂಬಾ, ಹೊನಾಸತಿ, ಡೋಲಾಮಾರುಣಿ, ಜೆಮಲ್-ಫತಮಲ್ ಮುಂತಾದ ಗೀತೆಗಳ ಮಾಹಿತಿಯನ್ನು ಡಾ. ನಾಯಕರು ಒದಗಿಸಿದ್ದಾರೆ.

ಆಚರಣೆ ಮತ್ತು ಕಲೆಎಂಬ ನಾಲ್ಕನೆಯ ಅಧ್ಯಾಯದಲ್ಲಿ ಜನನ ಸಂಸ್ಕಾರದಿಂದ ಹಿಡಿದು ಮರಣ ಸಂಸ್ಕಾರದವರೆಗೆ ಆಚರಿಸುವ ವಿಧಿ ವಿಧಾನಗಳ ಮತ್ತು ಕಲೆಗಳ ಬಗ್ಗೆ ಹೇಳಿದ್ದಾರೆ. ಗಂಡು ಮಗುವಿನ ಜನನವಾದಾಗ ನಗಾರಿ ಬಾರಿಸಿ ತಾಂಡಾದ ಜನರೆಲ್ಲರಿಗೂ ಆ ವಿಷಯವನ್ನು ಸೂಚಿಸುತ್ತಾರೆ. ಹೆಣ್ಣು ಮಗುವಾದರೆ ಕಂಚಿನ ತಟ್ಟೆಯನ್ನು ಬಾರಿಸುತ್ತಾರೆ. ಜನನ ಸಂಸ್ಕಾರದ ಸಂದರ್ಭದಲ್ಲಿ “ಏಕಳಪೂಯೇರೋ (ಆನಂದ) ಶಾಸ್ತ್ರ ಮತ್ತು ಐದನೆಯ ದಿನಕ್ಕೆ ದಳವಾ ಧೋಕಾಯೋ ರೋ (ಸೂತಕ ನಿವಾರಣೆ) ಕಾರ್ಯ ಮಾಡುತ್ತಾರೆ. ಹೋಳಿಹಬ್ಬದ ಸಂದರ್ಭದಲ್ಲಿ ಅದೇ ವರ್ಷ ಗಂಡುಮಗು ಹುಟ್ಟಿದವರ ಮನೆಯಲ್ಲಿ “ಧೂಂಡ” ಕಾರ್ಯ ಮಾಡುತ್ತಾರೆ.” ಎಂಬಿತ್ಯಾದಿ ವಿವರಣೆಗಳಿವೆ. ಹೆಣ್ಣು ಮಗು ಹುಟ್ಟಿದರೆ ಇಂಥ ಯಾವ ಕಾರ್ಯವೂ ನಡೆಯುವುದಿಲ್ಲ. ಇಲ್ಲಿ ನಮಗೆ ಎದ್ದು ಕಾಣುವ ಸಂಗತಿ ಎಂದರೆ, ಲಂಬಾಣಿ ಸಮಾಜ ಪುರುಷ ಪ್ರಧಾನ ಕುಟುಂಬ. ಈ ಸಮಾಜದಲ್ಲಿ ಹೆಣ್ಣು ಮಗು ಜನಿಸಿದಾಗ ಅದರ ಅಳುವಿನ ಹೊರತು ಬೇರೆ ಯಾವ ಧ್ವನಿಯೂ ಕೇಳಿಬರುವುದಿಲ್ಲ. ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರಧಾನ್ಯತೆ ಇಲ್ಲದಿರುವುದನ್ನು ಸೂಚಿಸುತ್ತದೆ.

ಮದುವೆ ಸಂಪ್ರದಾಯ ಕುರಿತು ಹೇಳುವಾಗ ಬಹುದಿನಗಳವರೆಗೆ ಜರುಗುವ ಮದುವೆ ಸಂದರ್ಭದಲ್ಲಿ ಶೃಂಗಾರ, ಹಾಸ್ಯ ಹಾಗೂ ಕರುಣ ರಸಗಳ ಅನೇಕ ಗೀತೆಗಳ ಸುರಿಮಳೆಯೇ ಆಗುತ್ತದೆ. ಲಂಬಾಣಿಗರ ರಸಿಕತೆ ಹಾಗೂ ಕಷ್ಟಮಯವಾದ ಬದುಕಿಗೆ ಪ್ರತೀಕಗಳಾಗಿ ಅನೇಕ ಆಚರಣೆ ಹಾಗೂ ಹಾಡುಗಳು ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತೇವೆ. ಕುಂಕುಮ ಕಾರ್ಯ, ಸಗಾಯಿರ ಕೋಸಳಾತ್, ಸೋಬಾನ ಕಾರ್ಯ, ವದಾಯಿ ಸಂಸ್ಕಾರ, ತಿಲಕ ಕಾರ್ಯ, ಸಪ್ತಪದಿ ಕೊನೆಯದಾಗಿ ಹವೇಲಿ ಕಾರ್ಯದೊಂದಿಗೆ ಮದುವೆಯ ವಿಧಿ-ವಿಧಾನಗಳು ಕೊನೆಗೊಳ್ಳುತ್ತವೆ.

ಶವಸಂಸ್ಕಾರ ಕುರಿತು ಹೇಳುವಾಗ, “ಇವರಲ್ಲಿ ಹೂಳುವ ಹಾಗೂ ಸುಡುವ ಎರಡೂ ಪದ್ಧತಿಗಳಿಂದ ಅಂತ್ಯಕ್ರಿಯೆ ಜರುಗುತ್ತದೆ. ಅವಿವಾಹಿತರನ್ನು ಮತ್ತು ಚಿಕ್ಕಮಕ್ಕಳನ್ನು ಹುಗಿಯುತ್ತಾರೆ. ಮದುವೆ ಆದವರನ್ನು ಸುಡುತ್ತಾರೆ. ಸತ್ತ ಮೂರನೆಯ ದಿನಕ್ಕೆ ತಿಥಿ ಮಾಡುತ್ತಾರೆ. ಸತ್ತ ಹನ್ನೆರಡನೆಯ ದಿನಕ್ಕೆ “ಬಾರೋ-ತೇರೋ” ಅನ್ನುವ ಕೊನೆಯ ತಿಥಿ ಮಾಡುತ್ತಾರೆ.

ಆಚರಣೆ ಮತ್ತು ಕಲೆಯನ್ನು ಕುರಿತು ಹೇಳುವಾಗ ಕೆಲವು ಹಬ್ಬಗಳ ವೈಶಿಷ್ಟ್ಯ ಹಾಗೂ ಪರಂಪರೆಗಳ ಆಚರಣೆಯಿಂದ ಅವರ ಧಾರ್ಮಿಕ ಮನೋಭಾವ ಹಾಗೂ ಸಾಂಸ್ಕೃತಿಕ ಪರಂಪರೆಗಳು ವ್ಯಕ್ತವಾಗುತ್ತವೆ ಎಂದಿದ್ದಾರೆ. ದೀಪಾವಳಿ, ಗೋದಿಹಬ್ಬ, ಹೋಳಿ ಮತ್ತು ಯುಗಾದಿ ಮುಂತಾದ ಹಬ್ಬಗಳ ಬಗ್ಗೆ ಹೇಳುವಾಗ ಆ ಸಂದರ್ಭದಲ್ಲಿ ಆಚರಣೆಯಲ್ಲಿರುವ ಹಾಡುಗಳನ್ನು ದಾಖಲಿಸಿ ಅರ್ಥ ಕೊಟ್ಟಿದ್ದಾರೆ. ದೀಪಾವಳಿ ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆಯ ಮೊದಲು, ಹನುಮಾನೇರ ರೋಟ( ಗೋ ಪೂಜೆ) ಮಾಡುತ್ತಾರೆ. ಅಮವಾಸ್ಯೆಯ ರಾತ್ರಿ ಯುವತಿಯರು ಶೃಂಗರಿಸಿಕೊಂಡು ಹರಳೆಣ್ಣೆ ದೀಪದ ಆರತಿಗಳನ್ನು ಹಚ್ಚಿಕೊಂಡು, ತಾಂಡಾದ ನಾಯಕನ ಮನೆಗೆ ಹೋಗಿ ಆರತಿ ಬೆಳಗಿ ಅವರಿಂದ ಅಪ್ಪಣೆ ಪಡೆದು ನಂತರ ತಾಂಡಾದ ಎಲ್ಲ ಮನೆಗಳಿಗೆ ಹೋಗಿ ಆರತಿ ಬೆಳಗುತ್ತಾರೆ. ಪ್ರತಿಯೊಂದು ಮನೆಯವರು ಯುವತಿಯರು ಹಿಡಿದಿರುವ ಢಾಕಣಿ(ದೀಪ)ದಲ್ಲಿ ನಾಲ್ಕಾಣಿ-ಎಂಟಾಣಿ ಹಾಕಿ ಆಶೀರ್ವದಿಸುತ್ತಾರೆ. ಆ ಸಂದರ್ಭದಲ್ಲಿ ಯುವತಿಯರು ಹೇಳುವ ಮೇರಾ(ಆರತಿ) ಗೀತೆ ಹೀಗಿದೆ:

“ಬಾಪು ತೋನ ಮೇರಾ
ವರ್ಷೆ ದಾಡೇರ ಕೋಟ ದವಾಳಿ
ಯಾಡಿ ತೋನ ಮೇರಾ
ವರ್ಷೆ ದಾಡೇರ ಕೋಟ ದವಾಳಿ
ಭೀಯಾ ತೋನ ಮೇರಾ
ವರ್ಷೆ ದಾಡೇರ ಕೋಟ ದವಾಳಿ”

ಅರ್ಥ: ತಂದೆ, ತಾಯಿ, ಸಹೋದರ, ಮನೆದೇವರು ಮುಂತಾದವರ ಗುಣಗಾನ ಮಾಡಿ ಆರತಿ ಬೆಳಗುತ್ತಾರೆ.

ಗೋಬರ್ಧನ ಪೂಜೆ, ಬಲಿಪಾಡ್ಯ ಮುಂತಾದ ಆಚರಣೆಗಳನ್ನು ಮಾಡುತ್ತಾರೆ. ಗೋಬರ್ಧನ ಪೂಜೆ ಸಂದರ್ಭದಲ್ಲಿ ಮಿಟುಭುಕ್ಯಾ, ಹಾಮುಭುಕ್ಯಾ, ಸೇವಾಭಾಯಾ ಮುಂತಾದ ಕುಲದೇವತರ ಗುಣಗಾನ ಮಾಡಿ ರಕ್ಷಣೆ ಮಾಡುವಂತೆ, ಸುಖ-ಸಮೃದ್ಧಿಯನ್ನು ದಯಪಾಲಿಸುವಂತೆ ಪ್ರಾರ್ಥನೆ ಮಾಡುತ್ತಾರೆ.

ತೀಜ (ಗೋದಿ ಸಸಿ) ಹಬ್ಬ : ಪ್ರಸ್ತುತ ಹಬ್ಬವನ್ನು ಕೃಷ್ಣನಿಗೆ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಆಚರಿಸುತ್ತಾರೆ. ಗೋದಿ ಸಸಿಗಳ ಪೂಜೆಗೂ ಕೃಷ್ಣನ ಪೂಜೆಗೂ ಇರುವ ಸಂಬಂಧ ಕುರಿತು ಲಂಬಾಣಿಗರಲ್ಲಿ ಐತಿಹ್ಯವಿದೆ. ಆ ಐತಿಹ್ಯದ ಹಿನ್ನೆಲೆಯಲ್ಲಿ ಆಚರಿಸುವ ಗೀತೆ, ನರ್ತನ ಹಾಗೂ ವಿನೋದಗಳ ಸುರಿಮಳೆಯೇ ಸೂಸುತ್ತದೆ ಎಂಬ ಸುಂದರ ವರ್ಣನೆ ಕೊಟ್ಟಿದ್ದಾರೆ.

ಹೋಳಿ ಹಬ್ಬ : ಸ್ತ್ರೀ-ಪುರುಷರು ಶೃಂಗಾರ ರಸಭರಿತವಾದ “ಲೇಂಗಿ” ಹಾಡುಗಳನ್ನು ಹಾಡುತ್ತಾರೆ. ಗೇರಣಿ(ಯುವತಿ)ಯ ಸೌಂದರ್ಯಕ್ಕೆ ಮಾರುಹೋಗಿರುವ ಗೇರಿಯಾ (ಯುವಕ)ನ ಮನಸ್ಸು ಅವಳಿಗಾಗಿ ಹಂಬಲಿಸಿ ಅವಳನ್ನು ಸಂಬೋಧಿಸಿ ಹಾಡುವ ಒಂದು ಸುಂದರ ಗೀತೆ ಹೀಗಿದೆ :

“ಸೋಳ ಹಾತೇರೋ ತಾರೋ ಘಾಗರೋಯೇ ಗುಜರಣಿ
ನವೇ ಹಾತೇರೋ ವೋರ ಡೋರ
ಘೂಮತೋ ಆವ ತಾರೋ ಘಾಗರೋಯೇ ಗುಜರಣಿ
ರಳಕತೋ ಆವ ತಾರೋ ಡೋರ
ಸೋಳ ಟಿಕಡಿರಿ ತಾರಿ ಕಾಂಚಳಿಯೇ ಗುಜರಾಣಿ
ಚಳಕತಿ ಆವ ತಾರಿ ಕಾಚೆ”

ಅರ್ಥ : ಸುಂದರಿಯೇ ಹದಿನಾರು ಮೊಳದ ಲಂಗವು ನಿನ್ನದು
ಒಂಬತ್ತು ಮೊಳದ ಕಸಿಯು ಅದಕ್ಕೆ
ಅನುಸರಿಸುತ್ತಿದೆ ಕಸಿಯು ಅದಕ್ಕೆ
ಬರುತಿದೆ ಲಂಗವು ಅಳಕುತ ಬಳಕುತ
ಅನುಸರಿಸುತ್ತಿದೆ ಕಸಿಯು ಅದಕ್ಕೆ
ಸುಂದರಿಯೇ ಹದಿನಾರು ಚಿಂದಿಯ ಬಣ್ಣದ ಚೋಲಿಯು ನಿನ್ನದು
ಮುದ್ದಿಸುತಿವೆ ಕಾಜಿನ ಬಿಲ್ಲೆಗಳದನು.

ಹೋಳಿ ಹಬ್ಬದ ಸಂದರ್ಭದಲ್ಲಿ ಗಂಡಸರು ಕುಡಿದು ಉನ್ಮತ್ತರಾಗಿ ಕುಣಿಯುವುದು ಸಹಜ. ಆದರೆ ಕೆಲವು ಸಂದರ್ಭಗಳಲ್ಲಿ ಹೆಂಗಳೆಯರು ಕುಡಿದು ಉನ್ನತ್ತರಾಗಿ ಲೇಂಗಿ ಹಾಡುಗಳನ್ನು ಹಾಡುತ್ತ ರಸಿಕತೆಯ ಸಂಕೇತವಾಗಿ ಮೈದುನರಿಗೆ ಕಟ್ಟಿಗೆಯಿಂದ ಹೊಡೆಯುವ ದೃಶ್ಯ ಸ್ವತಃ ನೋಡಿಯೇ ಆನಂದಿಸಬೇಕು. ಇಲ್ಲಿ ಗೋಪಿಕಾಸ್ತ್ರೀಯರು, ಶ್ರೀಕೃಷ್ಣನಿಗೆ ಕಟ್ಟಿಗೆಯಿಂದ ಹೊಡೆಯುವ ದೃಶ್ಯ ನೆನಪಿಗೆ ತಂದುಕೊಡುತ್ತದೆ. ಡಾ. ನಾಯಕರು ಹಬ್ಬದ ಹಾಡುಗಳನ್ನು ಸಂಗ್ರಹಿಸಿ ಅವುಗಳಿಗೆ ಕನ್ನಡದಲ್ಲಿ ಅರ್ಥವನ್ನು ಕೊಟ್ಟು, ಅನುಕೂಲ ಮಾಡಿಕೊಟ್ಟಿದ್ದಾರೆ, ಮತ್ತು ಸುಂದರವಾಗಿ ವಿವರಿಸಿದ್ದಾರೆ.

“ಧಾರ್ಮಿಕ ಆಚರಣೆ ಮತ್ತು ಕಲೆ”ಯಲ್ಲಿ ಶೀತಳಾ (ಶೀತಲ ಮಾತಾ) ಎಂಬ ಏಳು ಭವಾನಿಗಳ ಪೂಜೆ ಮಾಡುತ್ತಾರೆ. ಶೀತ ವಾತಾವರಣದಿಂದ ಬರುವ ಇತರೆ ರೋಗ-ರುಜಿನಿಗಳು ಬಾರದಿರಲೆಂದು ತಮ್ಮ ಶಕ್ತಿದೇವತೆಗಳಾದ ತುಳಜಾ ಭವಾನಿ, ಶೀತಲಾ ಭವಾನಿ, ಬೋಜರಿ ಭವಾನಿ, ಮತರಾ ಭವಾನಿ, ಮಸೂರ ಭವಾನಿ, ವಾಗ್ಜಾಯಿ ಹಾಗೂ ಹಿಂಗಳಾ ಮಾತಾ ಮತ್ತು ಅವರ ಸೇವಕನಾದ ಲಕ್ಕುಡನಿಗೂ ಪೂಜೆ ಸಲ್ಲಿಸುತ್ತಾರೆ ಎಂಬ ಮಾಹಿತಿಗಳನ್ನು ಕೊಟ್ಟಿರುತ್ತಾರೆ.

ಐದನೆಯ ಅಧ್ಯಾಯದಲ್ಲಿಪ್ರದರ್ಶನ ಕಲೆಗಳ ಕುರಿತು ಹೇಳಿದ್ದಾರೆ. “ಹೆಂಗಸರ ಕುಣಿತವು ವೈಶಿಷ್ಟ್ಯ ಪೂರ್ಣವಾಗಿರುತ್ತದೆ. ಅವರ ಗೀತೆ ಕುಣಿತಗಳಿಗೆ ಯಾವುದೇ ರೀತಿಯ ಕಟ್ಟುಪಾಡುಗಳಿರುವುದಿಲ್ಲ. ಸಾಧ್ಯವಾದಷ್ಟು ಜನ ಸ್ತ್ರೀಯರು ಸೇರಿಕೊಂಡು ಹಾಡಿನ ಲಯಕ್ಕನುಗುಣವಾಗಿ ಮೈ ಬಳಕಿಸುತ್ತಾ ಹೆಜ್ಜೆ ಹಾಕುತ್ತಾರೆ. ಒಮ್ಮೊಮ್ಮೆ ನಗಾರಿ ಅಥವಾ ಹಲಿಗೆ ವಾದ್ಯದ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ” ಎಂಬಿತ್ಯಾದಿ ವಿವರಣೆ ನೀಡಿ, ಲಂಬಾಣಿ ಕುಣಿತಗಳನ್ನು ಈ ಬಗೆಯಾಗಿ ವರ್ಗೀಕರಿಸಿದ್ದಾರೆ.

೧) ಹಬ್ಬ, ಉತ್ಸವ, ಮದುವೆ ಸಂದರ್ಭದ ಕುಣಿತ, ೨) ತೀಜ ಕುಣಿತ, ೩) ಲೇಂಗಿ ಕುಣಿತ, ೪) ಕೋಲಾಟದ ಕುಣಿತ, ೫) ಮಳೆರಾಯನ ಕುಣಿತ ಮತ್ತು ೬) ಕಿಕ್ಲಿ ಕುಣಿತ.

ಲಂಬಾಣಿ ಪುರುಷರ ಕುಣಿತ ವಿಶೇಷವಾಗಿ ಜಾತ್ರೆ, ಉತ್ಸವಗಳಲ್ಲಿ ಹಾಗೂ ಹಬ್ಬ-ಹರಿದಿನಗಳಲ್ಲಿ ಮಾತ್ರ ಎಂದಿದ್ದಾರೆ. ಬಯಲಾಟ, ಭಜನೆ, ಹಚ್ಚೆಕಲೆ, ರಂಗೋಲಿ ಕಲೆ, ಕಸೂತಿ ಕಲೆಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ. ಕಸೂತಿ ಕಲೆ ಕುರಿತು ಹೇಳುವಾಗ “ಸೂಜಿಯು ಲಂಬಾಣಿ ಮಹಿಳೆಯ ಒಡನಾಡಿಯಾಗಿ ಪರಿಣಮಿಸಿದೆ. ಬಣ್ಣ ಬಣ್ಣದ ರಂಗುರಂಗಿನ ತಮ್ಮ ವಸ್ತ್ರಗಳಿಗೆ ಕವಡೆ, ಕನ್ನಡಿ, ಬಣ್ಣದ ವಸ್ತ್ರಗಳನ್ನು ಸೇರಿಸಿ ಫಳಫಳನೆ ಹೊಳೆಯುವಂತೆ, ಮಿರಮಿರನೆ ಮಿಂಚುವಂತೆ ಕಸೂತಿ ಕೆಲಸ ಮಾಡಿ ಹೊಲಿದುಕೊಂಡಿರುತ್ತಾರೆ. ಈ ಪೋಷಾಕುಗಳು ನಿಜಕ್ಕೂ ಕಲಾತ್ಮಕವಾಗಿರುತ್ತವೆ. ಅವರ ಈ ಆಕರ್ಷಕ ಕಲೆಗೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ” ಎಂದು ವಿವರಣೆ ನೀಡಿದ್ದಾರೆ. ಕಸೂತಿ ಕಲೆ ಕುರಿತು ಹೇಳುವಾಗ ಕೆಲವು ಸೂಕ್ಷ್ಮ ಕಲೆಗಳನ್ನು ಗುರುತಿಸಿ ವಿಂಗಡಿಸಿದ್ದಾರೆ. ಕಾಜು, ತವರು, ಗೊಂಡೆ, ಪಾರಿ ಮುಂತಾದ ಸಣ್ಣ ಆಭರಣಗಳ ಕುರಿತು ಸುಂದರವಾದ ವಿವರಣೆಯಿದೆ. ಆದ್ದರಿಂದ ಈ  ಅಧ್ಯಾಯ ವೈಶಿಷ್ಟ್ಯಪೂರ್ಣವಾಗಿ ಮೂಡಿಬಂದಿದೆ.

ಕ್ರೀಡೆಗಳುಎಂಬ ಆರನೆಯ ಅಧ್ಯಾಯದಲ್ಲಿ “ಮಣ್ಣಾಟ, ಹರಳಾಟ, ಕುಂಟಾಟ, ಕಣ್ಣು ಮುಚ್ಚಾಲೆ, ಚಿಪ್ಪಿನಾಟ, ಹುಡುಕಾಟ, ದೆವ್ವದ ಆಟ, ಚೂರಿ ಮಸೆದು ಸವತೆ ಕೊಯ್ಯುವ ಆಟ, ಟಗರು ಕಾಳಗದ ಆಟ, ಗೋಡಾ ಆಟ ಮುಂತಾದ ಆಟಗಳ ವಿವರಣೆ ಕೊಟ್ಟಿದ್ದಾರೆ. ಈ ಆಟಗಳ ಜೊತೆಗೆ ಮಣ್ಣಿನ ಮನೆ ಆಟ, ಕುಂಟಾಟ, ಕಣ್ಣು ಮುಚ್ಚಾಲೆ, ಹುಲಿ ಆಕಳು ಮುಂತಾದ ಆಟಗಳನ್ನು ಈ ಗುಂಪಿಗೆ ಸೇರಿಸಬಹುದು ಎಂದಿದ್ದಾರೆ. ಮಕ್ಕಳು ದನ ಕಾಯುವಾಗ, ಕುಳ್ಳು ಆರಿಸುವಾಗ, ಹುಲ್ಲು ತರುವಾಗ, ಇತರೆ ಕೆಲಸಗಳಲ್ಲಿ ತೊಡಗಿರುವಾಗ ಆಟಗಳಲ್ಲಿ ತೊಡಗುವುದುಂಟು. ಮಕ್ಕಳು ಆಟದಲ್ಲಿ ತೊಡಗಿರುವಾಗ ಅನೇಕ ವಿನ್ಯಾಸಗಳನ್ನು ಹೊರಹಾಕುತ್ತಾರೆ. ಉದಾಹರಣೆಗೆ ಒಂದು ಆಟದ ಹಾಡು.

“ಕಾಟೋಟಿಮ ಆಟೋ
ರಗರಗ ಧಾಟೋ
ನೂಣ ತಟಿಕೋ
ಖಾಡು ಭಡಕೋ
ಕಾಣ್ಯಾ ಕಾಣ್ಯಾ ತಡಕೋಮಾರ”

ಅರ್ಥ:  ಕೋಣಮಿಗೆಯಲ್ಲಿ ಹಿಟ್ಟು
ಬೆಳ್ಳನೆಯ ಉಪ್ಪಿನ ಬೆಳಕು
ಅವಸರದಿಂದ ಓಡುತ್ತೆ
ಬೆಳಕು ಚುಮಚುಮು ಕಾಣಿಸಲಿ

ಕ್ರೀಡೆ ಮಕ್ಕಳ ದೈಹಿಕ ಬೌದ್ಧಿಕ ಹಾಗೂ ಮಾನಸಿಕವಾದ ಬೆಳವಣಿಗೆಗೆ ಸಹಾಕಾರಿಯಾದ ಅಂಶವಾಗಿದೆ. ಜಾನಪದ ಕ್ರೀಡೆಗಳಲ್ಲಿಯೂ ಇಂತಹ ಸಾಮರ್ಥ್ಯವಿದೆ. ಮಕ್ಕಳ ಸರ್ವಾಂಗೀಣವಾದ ಬೆಳವಣಿಗೆಯಲ್ಲಿ ಕ್ರೀಡೆಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಲಂಬಾಣಿಗರಲ್ಲಿ ಪ್ರಚಲಿತವಿರುವ ಕ್ರೀಡೆಗಳ ಬಗ್ಗೆ ಹೊಸ ಬಗೆಯ ಮಾಹಿತಿ ಒದಗಿಸುವಲ್ಲಿ ಲೇಖಕರ ಪ್ರಯತ್ನ ಶ್ಲಾಘನೀಯವಾಗಿದೆ.

ಸಾಮಾಜಿಕ ಪರಿವರ್ತನೆಯ ಹಿನ್ನಲೆಯಲ್ಲಿ ಎಂಬ ಏಳನೆಯ ಅಧ್ಯಾಯದಲ್ಲಿ “ಮೂಲತಃ ಸಂಚಾರಿ ಜೀವಿಗಳಾಗಿದ್ದ ಲಂಬಾಣಿಗಳು ಈಗ ಒಂದೇ ಕಡೆಯಲ್ಲಿ ಸ್ಥಿರವಾಗಿ ನಿಲ್ಲಲು ಪ್ರಾರಂಭಿಸಿದ್ದಾರೆ. ಕೆಲವೊಮ್ಮೆ ಜೀವನೋಪಾಯಕ್ಕಾಗಿ ಪಟ್ಟಣಗಳಿಗೆ ಇಲ್ಲವೆ ಸುಗ್ಗಿಯ ತಾಣಗಳಿಗೆ ವಲಸೆ ಹೋಗಿ ಮರಳಿ ಬರುತ್ತಾರೆ. ಸಂಚಾರಿ ಬದುಕಿನಿಂದ ಅವರು ಅರೆಸಂಚಾರಿ ಬದುಕಿಗೆ ಬಂದು ನಿಂತಿದ್ದಾರೆ. ಅವರ ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಅಕ್ಷರ ಜ್ಞಾನ ಹೊಂದಿದವರು ತಮ್ಮ ಸಾಮಾಜಿಕ ರೀತಿ ನೀತಿಗಳಿಂದ ದೂರವಾಗುತ್ತಿದ್ದಾರೆ. ಮದುವೆ ಸಂಪ್ರದಾಯ, ಆಳುವ ಸಂಪ್ರದಾಯ, ಮೂಢನಂಬಿಕೆ, ಪೂಜಾರಿಗಳಿಂದ ಭವಿಷ್ಯ ಕೇಳುವುದು ಮುಂತಾದವುಗಳು ಕಡಿಮೆಯಾಗುತ್ತಿವೆ. ಕೆಲವರು ಮುಸ್ಲಿಂ ಪೀರರಿಗೆ ದರ್ಗಾಗಳಿಗೆ ನಡೆದುಕೊಳ್ಳುವುದು ಅವರಲ್ಲಿ ಕಂಡುಬರುವ ವೈಶಿಷ್ಟ್ಯವಾಗಿದ್ದು, ಅದು ಲಂಬಾಣಿಗರ ಧಾರ್ಮಿಕ ಸಾಮರಸ್ಯದ ಮನೋಭಾವವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ. ಆಧುನಿಕತೆಯ ಪ್ರಭಾವದಿಂದಾಗಿ ಲಂಬಾಣಿಗರ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅನೇಕ ಬದಲಾವಣೆಗಳು ಕಾಣಿಸಿಕೊಂಡಿವೆ ಎಂಬ ಲೇಖಕರ ಅಭಿಪ್ರಾಯ ಸೂಕ್ತವೆನಿಸುತ್ತದೆ.

ಸಮಾರೋಪ” : ಎಂಟನೆಯ ಅಧ್ಯಾಯದಲ್ಲಿ “ಲಂಬಾಣಿಗರ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳನ್ನು ಕುರಿತು ಇಲ್ಲಿ ಅಧ್ಯಯನ ಮಾಡಲಾಗಿದೆ. ಬುಡಕಟ್ಟಿನ ಜನರಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದು, ಅವು ಅವರ ಸಂಸ್ಕೃತಿಯ ರಕ್ಷಣೆಯನ್ನು ಮಾಡುತ್ತವೆ. ಲಂಬಾಣಿಗರಲ್ಲಿಯೂ ಅನೇಕ ಕಟ್ಟುಪಾಡುಗಳಿವೆ. ಅವರ “ಗೋರಪಂಚಾಯತ” ವ್ಯವಸ್ಥೆಯ ಅವರ ಸಾಮಾಜಿಕ ಸಂಘಟನೆ ಹಾಗೂ ಭದ್ರತೆಗೆ ಕಾರಣವಾಗಿದೆ” ಇಂದಿಗೂ ಲಂಬಾಣಿಗರ ಭದ್ರ ಎನ್ನಿಸುವ ಭಾವನೆ ಉಂಟುಮಾಡದಿರದು. ಲಂಬಾಣಿಗರ ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತವಾದುದು ಎಂಬುದಕ್ಕೆ ಅವರಲ್ಲಿ ರೂಢಿಯಲ್ಲಿರುವ ಸಾಹಿತ್ಯವೇ ಸಾಕ್ಷಿ. ಸಂಸ್ಕಾರ ಗೀತೆಗಳು, ನಿಶ್ಚಯದ ನುಡಿಮುತ್ತು, ಸಕ್ಕರೆ ಹಂಚುವ ನುಡಿಮುತ್ತು, ಢಾವಲೋ ಗೀತೆಗಳು, ಧಾರ್ಮಿಕ ಗೀತೆಗಳು, ಬೀಸುವ ಹಾಡು, ನೃತ್ಯ ಗೀತೆಗಳು, ಸೇವಾಲಾಲರ ಪ್ರಾರ್ಥನೆ, ವೀರ ಹರಿದಾಸರ ಗೀತೆ, ಲಂಬಾಣಿ ಜನಪದ ಕಥೆಗಳು, ಗಾದೆಗಳು, ಒಗಟುಗಳು, ರಂಗೋಲಿ ಕಲೆ, ಒಟ್ಟಾರೆ ಲಂಬಾಣಿ ಜನಪದ ಸಾಹಿತ್ಯ ಕುರಿತು ಡಾ. ನಾಯಕ ಅವರು ಕೂಲಂಕುಷವಾಗಿ ವಿವರಿಸಿದ್ದಾರೆ. ಅಧ್ಯಯನದ ಕೊನೆಯಲ್ಲಿ ಗ್ರಂಥಸೂಚಿ ಹಾಗೂ ಪ್ರಮುಖ ವಕ್ತೃಗಳ ಪಟ್ಟಿಯನ್ನು ಕೊಟ್ಟಿದ್ದಾರೆ. “ಲಂಬಾಣಿಗರ ಸಂಸ್ಕೃತಿ”ಯನ್ನು ಇಡಿಯಾಗಿ ಓದಿದಾಗ ಅಲ್ಲಲ್ಲಿ ಕೆಲವು ಮುದ್ರಣ ದೋಷ ಇರುವುದು ಕಂಡುಬರುತ್ತದೆ. ಉದಾ: ಪ್ರಿಲಿಮ್ಸ್ ಎರಡನೆಯ ಪುಟದಲ್ಲಿ First publication 1994 ಎಂದು ಮುದ್ರಣವಾಗಿದೆ. ಅದೇ ರೀತಿ “ಲೇಖಕರ ಮಾತು” ಇಲ್ಲಿ ಡಾ. ವಾಲೀಕಾರ ಬದಲಾಗಿ “ವಾರೀಕಾರ” ಎಂದಾಗಿದೆ. ಇಂಥ ಇನ್ನೂ ಕೆಲವು ದೋಷಗಳಿರುವುದು ಕಂಡುಬರುತ್ತದೆ.

ಡಾ. ಡಿ.ಬಿ. ನಾಯಕರು ನೇರ ನುಡಿಯುಳ್ಳ ಸ್ವಾಭಿಮಾನಿ. ಪರಿಶುದ್ಧ ನಡೆವುಳ್ಳ ಅಜಾತಶತ್ರು, ಇವೆಲ್ಲವುಗಿಂತ ಮಿಗಿಲಾಗಿ ಒಳ್ಳೆಯ ಪ್ರಾಧ್ಯಾಪಕ, ಅಧ್ಯಯನಶೀಲ ವಿದ್ವಾಂಸರು. ತಮ್ಮ ಅಧ್ಯಯನಕ್ಕೆ ಸ್ಪಷ್ಟವಾದ ಒಂದು ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ನಿಷ್ಠೆಯಿಂದ ಕಾರ್ಯ ಮಾಡುವವರು. ಅವರು ನನ್ನಲ್ಲಿ ವಿಶ್ವಾಸವನ್ನೂ ಇಟ್ಟು “ಲಂಬಾಣಿಗರ ಸಂಸ್ಕೃತಿ” ಕೃತಿ ಸಮೀಕ್ಷೆ ಮಾಡಲು ಗೌರವವನ್ನೂ ತೋರಿದ್ದಾರೆ. ಈ ಸೌಜನ್ಯಕ್ಕಾಗಿ ನಾನು ಕೃತಜ್ಞ. ಡಾ. ನಾಯಕರು ನನ್ನ ಗುರುಗಳು. ಅವರ ಎದುರಿಗೆ ಹಲವಾರು ಅವಕಾಶಗಳು ತೆರೆದುಕೊಂಡಿವೆ. ಅವರು ಸದ್ದುಗದ್ದಲವಿಲ್ಲದೆ ತಮ್ಮ ಅಧ್ಯಯನವನ್ನು ಮುಂದುವರಿಸಿ ಹೆಚ್ಚಿನ ಕೀರ್ತಿ, ಪ್ರತಿಷ್ಠೆಗಳನ್ನು ಪಡೆಯುವಂತಾಗಲಿ ಎಂದು ನಾನು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

* * *