ಹೂಡೋದು ಹೊಸ ಬಂಡಿ ಹೊಡಿಯೋನು ಹಸುಮಗ
ಆಲೀಸಿ ಕೇಳೊ ಬಸವಣ್ಣ | ನಿನ ಬಂಡಿ
ಭೂಮಿ ತಲ್ಲಣಿಸಿ ಹರಿದಾವು

ಕಸವ ಹೊಡೆದ ಕೈ ಕಸ್ತೂರಿ ನಾತಾವು
ಬಸವಣ್ಣ ನಿನ್ನ ಸೆಗಣೀಯ | ಬಳೆದ ಕೈ
ಎಸಳ ಯಾಲಕ್ಕಿ ಗೊನೆನಾತ

ಕಬ್ಬು ಕಾರುಳ್ಳವನೆ ಹುಬ್ಬು ನೇರುಳ್ಳವನೆ
ಗೊಬ್ಬರದ ಗಾಡಿ ಹೊಡೆಯೋನೆ | ಅಣ್ಣಯ್ನ
ಹುಬ್ಬಿಗಿನ್ನೊಂದು ಸರಿಯುಂಟೆ

ಬಂಡಿಕಾರಣ್ಣನ ಬಂಡಾಟ ನೋಡಿರೊ
ಬಾರುಕೋಲವನ ಬಲಗೈಲಿ | ಹಿಡಕೊಂಡು
ಬೋರಾಡಿ ಬಂಡಿ ಹೊಡೆದವನೆ

ಬಂಡೀಯ ಹೂಡುತಾವ ಬಾರ‍್ಕೋಲ ಮರೆತಿವ್ನಿ
ಕಂಡ ಗೆಣೆಯರು ಕೊಡಿರಣ್ಣ | ನಮ್ಮೆತ್ತು
ಬಾಳೆವನಕಾಗಿ ಹರಿದಾವು

ಹೇರು ಕಟ್ಟಾಗ ಬಾರ‍್ಕೋಲ ನಾ ಮರೆತೆ
ಕಂಡು ಕೊಡು ಹೆಣ್ಣೆ ಕಡುಗಾತಿ | ನಮ್ಮೆತ್ತು
ಮುಂದೆ ಮೂರ‍್ಹೆಜ್ಜೆ ತೂಯೊಲ್ಲೊ