ನಮ್ಮ ದೇಹದ ಅಂಗಾಂಗಗಳಲ್ಲಿ ಮಿದುಳು ಅತ್ಯಂತ ಪ್ರಮುಖವಾದುದು. ಆಚಾರ, ವಿಚಾರ, ಭಾವನೆ ಸಂವೇದನೆಗಳು, ವ್ಯಕ್ತಿತ್ವ ಇವೆಲ್ಲ ಮಿದುಳಿನ ಕಾರ್ಯಗಳು ಎಂಬುದನ್ನು ಅರಿತುಕೊಂಡಿರಿ. ಮಿದುಳಿಗೆ ಅಲ್ಪಸ್ವಲ್ಪ ಹಾನಿಯಾದರೂ ಅದರ ಪರಿಣಾಮ ದೇಹ ಮತ್ತು ಮನಸ್ಸಿನ ಮೇಲಾಗುತ್ತದೆ. ವ್ಯಕ್ತಿಯ ಸಾಮರ್ಥ್ಯ ಕುಗ್ಗುತ್ತದೆ ಎಂಬುದೂ ನಿಮಗೆ ಗೊತ್ತು. ಹಾನಿಗೊಂಡ ಮಿದುಳಿನ ಸ್ವ-ರಿಪೇರಿ ಸಾಮರ್ಥ್ಯ ಬಹಳ ಕಡಿಮೆ ಮತ್ತು ಅದನ್ನು ಚುರುಕುಗೊಳಿಸುವ ಔಷಧಿಗಳು, ಹಾನಿಯನ್ನು ಸರಿಪಡಿಸುವ ಚಿಕಿತ್ಸೆಗಳು ಸದ್ಯಕ್ಕೆ ಲಭ್ಯವಿಲ್ಲ ಎಂಬುದು ಗಮನಾರ್ಹ. ಮಿದುಳಿನ ಹಾನಿ ಮತ್ತು ಅದರಿಂದ ಉಂಟಾದ ಕೊರತೆ ನ್ಯೂನತೆಗಳು ಬಹಳ ಕಾಲ ಅಥವಾ ಜೀವನ ಪರ್ಯಂತ ಉಳಿದುಕೊಳ್ಳಬಹುದು. ಕೆಟ್ಟು ಹೋದ ಮೂತ್ರ ಜನಕಾಂಗವನ್ನು ಬದಲಿಸುವಂತೆ ಮಿದುಳಿನ ಬದಲಾವಣೆ, ಅಂಗ ಜೋಡಣೆ ಸಾಧ್ಯವಿಲ್ಲ ಹೀಗಿರುವಾಗ ನಮಗಿರುವ ಮಿದುಳು ಮತ್ತು ನರಮಂಡಲವನ್ನು ಜೋಪಾನ ಮಾಡುವ ಹೊಣೆ ನಮ್ಮದೇ. ಮಿದುಳನ್ನು ರಕ್ಷಿಸುವುದು ಹೇಗೆ? ಅದಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಸಾಧ್ಯವೇ. ನಾವೆಲ್ಲ ಮಿದುಳಿನ ವಿಚಾರವಾಗಿ ಪಾಲಿಸಬೇಕಾದ ಮುಂಜಾಗ್ರತೆ ಕ್ರಮಗಳೇನು, ನೋಡೋಣ.

ಗರ್ಭಧಾರಣೆ ಅವಧಿಯಲ್ಲಿ:

ಮಿದುಳಿನ ರಕ್ಷಣೆ, ನಾವು ತಾಯಿಯ ಗರ್ಭದಲ್ಲಿದ್ದಾಗಲೇ ಪ್ರಾರಂಭವಾಗಬೇಕು. ಮಿದುಳಿನ ರಚನೆ ಶುರುವಾಗಿ ಅದರ ವಿಕಾಸವಾಗುತ್ತಿರುವಾಗಲೇ ತಾಯಿ ಮತ್ತು ಮನೆಯವರು ಎಚ್ಚರ ವಹಿಸಬೇಕು. ತಾಯಿ ಮಿದುಳಿನ ಬೆಳವಣಿಗೆಗೆ ಬೇಕಾದ ಪ್ರೋಟೀನ್, ಕಬ್ಬಿಣ ಅಯೋಡಿನ್ ಇರುವಂತಹ ಆಹಾರವನ್ನು ಸೇವಿಸಬೇಕು. ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ ಯಾವುದೇ ವೈರಸ್ ಸೋಂಕಾಗದಂತೆ ನೋಡಿಕೊಳ್ಳಬೇಕು. ಸಿಹಿ ಮೂತ್ರ ರೋಗ, ಸಿಫಿಲಿಸ್ ರೋಗಗಳಿಗೆ ತಪಾಸಣೆ ಮಾಡಿಸಿ ಇದ್ದರೆ ಚಿಕಿತ್ಸೆ ಪಡೆಯಬೇಕು. ವೈದ್ಯರ ಅನುಮತಿ ಇಲ್ಲದೆ, ಈ ಅವಧಿಯಲ್ಲಿ ಯಾವ ಔಷಧವನ್ನೂ ಸೇವಿಸಬಾರದು. ಹೊಟ್ಟೆಯ ಎಕ್ಸ್‌ರೇ ಚಿತ್ರ ತೆಗೆಸಬಾರದು. ಗರ್ಭಧಾರಣೆ ಅವಧಿಯಲ್ಲಿ ಅವಧಿಗೊಂದಾವರ್ತಿ ವೈದ್ಯ ತಪಾಸಣೆ ಮಾಡಿಸಿಕೊಳ್ಳುತ್ತಾ ಮಗುವಿನ ಬೆಳವಣಿಗೆ ಚೆನ್ನಾಗಿದೆ ಎಂದು ಖಾತ್ರಿ ಮಾಡಿಕೊಳ್ಳಬೇಕು. ನಂಜಿನ ಲಕ್ಷಣಗಳು (ಬಿ.ಪಿ. ಹೆಚ್ಚುವುದು, ಮೂತ್ರದಲ್ಲಿ ಆಲ್ಬುಮಿನ್ ಕಾಣಿಸಿಕೊಳ್ಳುವುದು, ಮುಖ ಕೈ ಕಾಲು ಊದಿಕೊಳ್ಳುವುದು ಫಿಟ್ಸ್‌) ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಬೇಕು.ಮುವತ್ತೈದು ವರ್ಷ ವಯಸ್ಸಿನ ನಂತರ ಗರ್ಭಧಾರಣೆ ಮಾಡಿಕೊಳ್ಳಬಾರದು.

ಹೆರಿಗೆ ಅವಧಿಯಲ್ಲಿ

ಹೆರಿಗೆ ಕಷ್ಟವಾದರೆ ಮಿದುಳಿಗೆ ಹಾನಿಯುಂಟಾಗುವ ಸಂಭವ ಹೆಚ್ಚುತ್ತದೆ ಎಂದು ತಿಳಿದಿದ್ದೀರಿ. ಆದ್ದರಿಂದ ಹೆರಿಗೆ ಸುಸೂತ್ರವಾಗಿ ಆಗುವಂತೆ  ಸಹಾಯ ಮಾಡುವ ತರಬೇತಿ ಪಡೆದ ನರ್ಸ್‌, ವೈದ್ಯರಿಂದ ಹೆರಿಗೆ ಮಾಡಿಸಿ. ಹೆರಿಗೆ ಕಷ್ಟವಾಗಬಹುದೆಂಬ ಸೂಚನೆ ಸಿಕ್ಕಿದರೆ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿ. ಹುಟ್ಟಿದ ಕೂಡಲೇ ಮದು ಅತ್ತು ಅದರ ಉಸಿರಾಟ ಸರಿಯಾಗಿ ಪ್ರಾರಂಭವಾಗಿದೆಯೇ ಎಂದು ಗಮನಿಸಿ.

ಬಾಲ್ಯದ ಅವಧಿಯಲ್ಲಿ:

ಮೊದಲ ಎರಡು ಮೂರು ವರ್ಷಗಳಲ್ಲಿ ಮಗುವಿಗೆ ಪ್ರೋಟೀನ್, ಕಬ್ಬಿಣಾಂಶ, ಅಯೋಡಿನ್ ಇತ್ಯಾದಿ ಅಗತ್ಯ ಪೌಷ್ಟಿಕಾಂಶಗಳು ಕಡಿಮೆಯಾಗದಂತೆ ನೋಡಿಕೊಳ್ಳಿ. ಆರು ತಿಂಗಳ ನಂತರ ಮಗುವಿಗೆ ಕಾಳುಗಳು, ತರಕಾರಿ, ಹಣ್ಣುಗಳಂತರ ಘನ ಆಹಾರವನ್ನು ಕೊಡಿ. ವೈದ್ಯರ ಆದೇಶದಂತೆ ವೇಳೆ ವೇಳೆಗೆ ಸರಿಯಾಗಿ ಕ್ಷಯ, ಗಂಟಲ ಮಾರಿ, ಧನುರ್ವಾಯು, ನಾಯಿ ಕೆಮ್ಮು, ಪೋಲಿಯೋ, ದಢಾರಗಳ ವಿರುದ್ಧ ಚುಚ್ಚು ಮದ್ದು ಲಸಿಕೆಗಳನ್ನು ಹಾಕಿಸಿ. ಮಗುವಿಗೆ ಪದೇ ಪದೇ ಬೇಧಿ, ವಾಂತಿ, ಫಿಟ್ಸ್‌ ಬಂದರೆ ಉದಾಸೀನ ಮಾಡದೇ ಚಿಕಿತ್ಸೆ ನಡೆಸಿ. ಮಗುವಿಗೆ ಪಂಚೇಂದ್ರಿಯಗಳಿಗೆ ಸಾಕಷ್ಟು ಪ್ರಚೋದನೆಗಳನ್ನು ಕೊಡುವಂತೆ ಮಗುವಿನ ಪರಿಸರವನ್ನು ರೂಪಿಸಿ. ವಿವಿಧ ಬಗೆಯ ಆಟದ ಸಾಮಾನುಗಳು, ವಿವಿಧ ವಸ್ತುಗಳು, ತಂದೆ-ತಾಯಿ, ಬಂಧುಗಳ ಸಾಮಿಪ್ಯ, ಪ್ರೀತಿ, ಆರೈಕೆ ಜೊತೆ ಜೊತೆಗೆ ಸರಿಪ್ರಮಾಣದ ಶಿಸ್ತು, ಶಿಕ್ಷೆ, ಮಾರ್ಗದರ್ಶನಗಳು ಮಗುವಿಗೆ ಸಿಗುವಂತೆ ಮಾಡಿ. ಕಷ್ಟ-ಸಮಸ್ಯೆಗಳ ಪರಿಚಯವೂ ಮಗುವಿಗೆ ಆಗಬೇಕು. ನೋವು, ನಿರಾಶೆಗಳನ್ನು ಅನುಭವಿಸುವ ಅಭ್ಯಾಸವೂ ಆಗಬೇಕು. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವ ಆ ಸಮಯದಲ್ಲಿ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವ ವಿಧಾನಗಳನ್ನು ಉದಹರಣೆ ಸಹಿತವಾಗಿ ಮಗುವಿಗೆ ಹೇಳಿಕೊಡಿ. ಅರ್ಥಪೂರ್ಣವಾಗಿ ಹೆಚ್ಚು ಶ್ರಮವಿಲ್ಲದೆ ಕಲಿಯುವ, ಕಲಿತದ್ದನ್ನು ಬಳಸುವ ಸಾಮರ್ಥ್ಯ ಮಗುವಿಗೆ ಕರಗತವಾಗಬೇಕು. ವಾಸ್ತವಿಕ ಪ್ರಜ್ಞೆ ಮತ್ತು ನೈತಿಕ-ಸಾಮಾಜಿಕ ನೀತಿ ನಿಯಮಗಳ ಸ್ಪಷ್ಟ ಅರಿವು ಮಗುವಿಗೆ ಹಂತ ಹಂತವಾಗಿ ಆಗುವಂತೆ ಎಚ್ಚರವಹಿಸಿ.

ಆನಂತರದ ಅವಧಿಯಲ್ಲಿ:

ರೋಗಾಣುಗಳ ವಿರುದ್ಧ ಹೋರಾಡಲು ನಮ್ಮ ದೇಹ ಮತ್ತು ದೇಹದ ರಕ್ಷಣಾ ವ್ಯವಸ್ಥೆ ಬಲವಾಗಿರಬೇಕು. ಆಗ ಮಿದುಳೂ ಸೇರಿದಂತೆ ಎಲ್ಲ ಅಂಗಾಂಗಗಳು ರೋಗಾಣುಗಳ ಧಾಳಿಗೆ ಸಿಕ್ಕುವುದಿಲ್ಲ. ಸಮತೋಲನ ಆಹಾರವನ್ನು ವೇಳೆ ವೇಳೆಗೆ ಸರಿಯಾಗಿ ಸೇವಿಸುವುದು. ಅನಗತ್ಯವಾದ ಸಕ್ಕರೆ, ಉಪ್ಪು, ಕೊಬ್ಬು, ಜಿಡ್ಡು ಪದಾರ್ಥಗಳನ್ನು ವರ್ಜಿಸುವುದು, ದೇಹಕ್ಕೆ ವ್ಯಾಯಾಮವಾಗುವಂತಹ ಚಟುವಟಿಕೆಗಳು, ಮೈಮನಸ್ಸುಗಳಿಗೆ ವಿರಾಮ ಕೊಟ್ಟು ಅವು ಉಲ್ಲಾಸಿತವಾಗಿ ಲವಲವಿಕೆಯಿಂದ ಇರುವಂತೆ ಮಾಡುವ ಸೃಜನಶೀಲ ಹವ್ಯಾಸಗಳು. ಒತ್ತಡ ರಹಿತ ತೃಪ್ತ ಜೀವನ. ಗಾಳಿ ಬೆಳಕು ಸಮೃದ್ಧವಿರುವ ವಾಸ ಸ್ಥಳ, ಚೊಕ್ಕಟ ಪರಿಸರ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ತಲೆಗೆ ಪೆಟ್ಟು ಬೀಳದಂತೆ ಎಚ್ಚರ:

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳೇ ತಲೆಗೆ ಪೆಟ್ಟು ಬೀಳುವ ಸಾಮಾನ್ಯ ಕಾರಣ. ರಸ್ತೆಯಲ್ಲಿ ನಡೆಯುವಾಗ, ವಾಹನವನ್ನು ಚಲಿಸುವಾಗ ರಸ್ತೆ ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸುವುದೇ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನ. ವಾಹನ ಚಾಲನೆಗೆ ಮೊದಲು ಮದ್ಯಪಾನ ಮಾಡಲೇಬಾರದು. ಮದ್ಯಪಾನ ಮಾಡಿದ್ದರೆ, ವಾಹನ ಚಾಲನೆ ಮಾಡುವ ಹೊಣೆ ಹೊರಲೇಬಾರದು. ಗಂಟೆಗಟ್ಟಳೆ, ವಿರಾಮವಿಲ್ಲದೆ ವಾಹನ ಚಾಲನೆಯಲ್ಲಿ ತೊಡಗುವುದು, ವಿಪರೀತ ದೈಹಿಕ ಶ್ರಮವಿದ್ದಾಗ ಮನಸ್ಸು ಪ್ರಕ್ಷುಬ್ದವಾಗಿದ್ದಾಗ ವಾಹನವನ್ನು ನಡೆಸುವುದನ್ನು ಮಾಡಲೇಬಾರದು. ಆಕ್ರಮಣಕಾರೀ ಧೋರಣೆಗೆ, ಕೋಪೋದ್ವೇಷಕ್ಕೆ ವಿವೇಚನೆಯನ್ನು ಬಲಿಕೊಟ್ಟು ಹಿಂಸಾಚಾರಕ್ಕೆ ಇಳಿಯಬಾರದು. ಇದರಿಂದ ಹೊಡೆದಾಟಗಳಲ್ಲಿ ತಲೆಗೆ ಪೆಟ್ಟು ಬೀಳುವುದು ತಪ್ಪುತ್ತದೆ.