ಹಾಲು ಪ್ರಕೃತಿಯು ನೀಡಿರುವ ಒಂದು ಶ್ರೇಷ್ಠ ವರದಾನ. ಇದು ಮಕ್ಕಳು, ಮುದಕರು ಮತ್ತು ರೋಗಿಗಳು ಎಲ್ಲರೂ ಸೇವಿಸಬಹುದಾದ ಮತ್ತು ಸುಲಭವಾಗಿ ಜೀರ್ಣವಾಗುವ “ಸಂಪೂರ್ಣ ಆಹಾರ” ದೇವರ ಪೂಜೆಯಿಂದ, ಮಜ್ಜಿಗೆ ತಯಾರಿಸುವವರೆಗೆ, ಮಾನವನ ಪ್ರತಿಯೊಂದು ಕಾರ್ಯದಲ್ಲಿಯೂ ಹಾಲು ತನ್ನದೇ ಆದ ಸ್ಥಾನವನ್ನು ಹೊಂದಿದೆ. ಆದುದರಿಂದ ಹಾಲನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಕೇವಲ ಒಂದು ವ್ಯವಹಾರದ ಮಾರಾಟದ ವಸ್ತುವಾಗಿ ನೋಡಬಾರದು.

ಹಾಲು ಎಂದರೇನು? ಸಸ್ತನಿ ವರ್ಗದ ಪ್ರಾಣಿಗಳು ಕರುಗಳ ಜನನದ ನಂತರ (ಗಿಣ್ಣು ಹಾಲು ಹೊರತುಪಡಿಸಿ) ಅವುಗಳ ಪೋಷಣೆಗೆ ಅಗತ್ಯವಾದ ನೀರು, ಕೊಬ್ಬು, ಸಸಾರಜನಕ ಸಂಯುಕ್ತ (ಪ್ರೋಟೀನ್) ಸಕ್ಕರೆ (ಲ್ಯಾಕ್ಟೋಸ್) ಖನಿಜಾಂಶ ಹಾಗೂ ಜೀವಸತ್ವ (ಎ, ಡಿ, ಇ, ಕೆ ಮತ್ತು ಬಿ) ಕಾಂಪ್ಲೆಕ್ಸ್- ಎ ಇವುಗಳಿಂದ ಕೂಡಿದ ಬಿಳಿಬಣ್ಣದ ಆಹಾರ ದ್ರವವನ್ನು ಮೊಲೆಗಳಲ್ಲಿ ಕ್ಷೀರೋತ್ಪಾದನೆ ಗ್ರಂಥಿಗಳಲ್ಲಿ ಉತ್ಪಾದಿಸುತ್ತದೆ. ಇದನ್ನು “ಹಾಲು” ಎಂದಯ ಕರೆಯುತ್ತಾರೆ.

ಹಾಲಿನ ಉತ್ಪಾದನೆ ಮಾಡುವ ಸಸ್ತನಿ ವರ್ಗದ ಹೆಣ್ಣು ಪ್ರಾಣಿಗಳು ತಿನ್ನುವ ಆಹಾರ ಜೀರ್ಣವಾಗಿ ಅವುಗಳಿಂದ ಹೊರಹೊಮ್ಮುವ ಪೌಷ್ಟಿಕಾಂಶಗಳು ರಕ್ತದೊಂದಿಗೆ ಹೃದಯದ ಅನುವಂಶಿದ ಗುಣಕ್ಕನುಗುಣವಾಗಿ ಪರಿವರ್ತನೆಗೊಳ್ಳುವ ಮೂಲಕ ಎಲ್ಲಾ ಪೌಷ್ಟಿಕಾಂಶಗಳೊಂದಿಗೆ ಹಾಲಿನ ಉತ್ಪಾದನೆಯಾಗುತ್ತದೆ. ಹಾಲು ಉತ್ಪಾದನೆಯಾಗಲು ಸುಮಾರು ಪ್ರತಿದಿನ ಕೆಚ್ಚಲಿನ ಮುಖಾಂತರ ೯೦ ಲೀಟರ್ ರಕ್ತ  ಪ್ರವಹಿಸುತ್ತದೆ. ಅದರಲ್ಲಿ ೪೦೦ ರಿಂದ ೬೦೦ ಲೀಟರಿನಷ್ಟು ರಕ್ತದಿಂದ ಒಂದು ಲೀಟರ್ ಹಾಲು ಉತ್ಪಾದನೆಯಾಗುತ್ತದೆ.

ಹಾಲಿನಲ್ಲಿ ಏನಿದೆ? ಬಿಳಿ ಮತ್ತು ಹಳದಿ ಬಣ್ಣ ಏಕೆ?

ಹಾಲಿನಲ್ಲಿ ಶೇ. ೮೫ ಭಾಗದಷ್ಟು ನೀರು ಇರುವುದು, ಹಾಲು ದ್ರವರೂಪದಲ್ಲಿರಲು ಮುಖ್ಯ ಕಾರಣವಾಗಿದೆ. ಅದರಂತೆ ಸುಣ್ಣ ಅಥವಾ ಕ್ಯಾಲ್ಸಿಯಂ ಹಾಗೂ ಕೇಸಿನ್ ಇವುಗಳಿಂದಾದ ಕ್ಯಾಲ್ಸಿಯಂ ಕೇಸಿಸೇಟ್ ಇದು ಕ್ಲೋರೈಡ್ ರೂಪದಲ್ಲಿ ಇರುವುದರಿಂದ ಬೆಳಗಿನ ಪ್ರತಿಫಲನದಿಂದಾಗಿ ಹಾಲು ಬೆಳ್ಳಗೆ ಗೋಚರಿಸುತ್ತದೆ. ಹಾಗೆಯೇ ಆಕಳ ಹಾಲಿನಲ್ಲಿ ಬೀಟಾ ಕೆರೋಟಿನ್ ಅಂಶವಿರುವುದರಿಂದ ಅದರ ಬಣ್ಣ ಸ್ವಲ್ಪ ಹಳದಿ ಆಗಿರುತ್ತದೆ. ಆದರೆ ಎಮ್ಮೆ ಹಾಲಿನಲ್ಲಿ ಅದು ಇರುವುದಿಲ್ಲ. ಅದಕ್ಕೆ ಎಮ್ಮೆ ಹಾಲು ಬಿಳಿಯಾಗಿರುತ್ತದೆ. ಹಾಲು ಸಿಹಿ ಮತ್ತು ಉಪ್ಪು ಆಗಿರುತ್ತದೆ. ಇದಕ್ಕೆ ಕಾರಣ ಹಾಲಿನಲ್ಲಿರುವ ಲ್ಯಾಕ್ಟೋಸ್ ಮತ್ತು ಕ್ಲೋರೈಡ್. ಹಾಲು ಬಾಯಿಯಲ್ಲಿ ಮೃದುತ್ವ ಮತ್ತು ರುಚಿ ಬರುವುದಕ್ಕೆ ಕಾರಣ ಕೊಬ್ಬು(ಫ್ಯಾಟ್) 

ಹಾಲು ಕೆಡಲು ಕಾರಣವೇನು?

ಹಾಲು  ಸೃಷ್ಟಿಯ ಒಂದು ಅತ್ಯುತ್ತಮ ಆಹಾರ. ಆದಾಗ್ಯೂ ಹಲವಾರು ರೋಗಗಳನ್ನು ಹರಡಲು ಒಂದು ಉತ್ತಮವಾದ ಮಾಧ್ಯಮವಾಗಿದೆ. ಹಾಲಿನ ಉತ್ಪಾದನೆ, ಉಪಯೋಗ ಮತ್ತು ಮಾರಾಟ, ವಿತರಣೆ ಮೊದಲಾದ ವಿವಿಧ ಹಂತಗಳಲ್ಲಿ ಹಾಲು ಹವಾಮಾನಕ್ಕೆ ತೆರೆದಿರುವುದರಿಂದ ಜೀವಕಣಗಳು ಇವುಗಳೊಡನೆ ಸೇರಿ ಹಾಲು ಕೆಡುವಂತೆ ಮಾಡಬಹುದು. ಆದುದರಿಂದ ಮಾನವನ ಆರೋಗ್ಯಕ್ಕೆ ಮತ್ತು ಆರ್ಥಿಕ ದೃಷ್ಟಿಯಿಂದ ಹಾಲನ್ನು ಶುಚಿಯಾಗಿ ಹಾಗೂ ಕೆಡದಂತೆ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

೧. ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಕ್ಕರೆ ಅಂಶ ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ಜೀರ್ಣಿಸಿಕೊಂಡು ಅವುಗಳ ಸಂಖ್ಯೆಯು ವೃದ್ಧಿ ಹೊಂದುವಂತೆ ಮಾಡುತ್ತದೆ. ಇದರಿಂದಾಗಿ ಲ್ಯಾಕ್ಟೋಸ್ ಅಂಶವು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತನೆ ಹೊಂದಿ ಹಾಲು ಹುಳಿಯಾಗುತ್ತದೆ.

೨. ಹಾಲಿನಲ್ಲಿರುವ ಪೆಪ್ಟೋನೈಜಿಂಗ್ ಬ್ಯಾಕ್ಟೀರಿಯಾಗಳು ಸಸಾರಜನಕವನ್ನು ಅತಿಕ್ರಮಿಸಿ ಒಂದು ವಿಧವಾದ ರಸೋತ್ಪಾದನೆಯಿಂದ ಹಾಲನ್ನು ಮೊಸರನ್ನಾಗಿ ಪರಿವರ್ತಿಸಿ ಘಾಟುವಾಸನೆ ಬರುವಂತೆ ಮಾಡುತ್ತವೆ.

೩. ಅಲ್ಲದೆ ಹಾಲಿನ ಘೃತವಿಭಾಜಕ ಬ್ಯಾಕ್ಟೀರಿಯಾಗಳು ಕ್ಷೀರದಲ್ಲಯ ಘೃತಾಂಶವನ್ನು ವಿಭಜಿಸಿ ಘೃತಾಮ್ಲ ಉತ್ಪಾದಿಸಿ ಹಾಲು ಕೆಡುವಂತೆ ಮಾಡುತ್ತವೆ.

೪. ಹಾನಿಕಾರಕ ಬ್ಯಾಕ್ಟೀರಿಯಾಗಳಾದ ಟ್ಯೂಬರ‍್ಕ್ಯುಲೋಸಿಸ್ (ಕ್ಷಯ) ರೋಗದ ರೋಗಾಣುಗಳು, ಟೈಫಾಯ್ಡ, ಮಲೇರಿಯಾ ಮುಂತಾದ ಅಣುಗಳು ನಿಸರ್ಗದಿಂದ ಇಲ್ಲವೇ ರೋಗಕಾರಕ ಪ್ರಾಣಿಗಳ ದೇಹದಿಂದ ಹಾಲಿಗೆ ಸೇರಿ ಇವುಗಳನ್ನು ಸೇವಿಸಿದ ಜೀವಿಗಳು ದೇಹವನ್ನು ಪ್ರವೇಶಿಸುತ್ತವೆ. ಆದುದರಿಂದ ಹಾಲಿನ ಶುಚಿತ್ವ ಕಾಪಾಡಲು ಹಾಲು ಕರೆದ ತಕ್ಷಣವೇ ಉಪಯೋಗಿಸಬೇಕು. ಇಲ್ಲವೇ ಪಾಶ್ಚೀಕರಿಸಿದ ಹಾಲನ್ನು ಉಪಯೋಗಿಸಬೇಕು.

ಹಾಲಿಗೆ ವಿವಿಧ ರೋಗಾಣುಗಳು ಸೇರುವ ಸಾಧ್ಯತೆಗಳು.

೧. ಆಕಳು ಅಥವಾ ಎಮ್ಮೆಯ ಕೆಚ್ಚಲು: ಹಾಲನ್ನು ಕರೆಯುವ ಮುನ್ನ ಕೆಚ್ಚಲನ್ನು ಚೆನ್ನಾಗಿ ಉಗುರು ಬೆಚ್ಚಗಿರುವ ಶುದ್ಧವಾದ ನೀರಿನಿಂದ ತೊಳೆಯಬೇಕು. ನಂತರ ಶುಭ್ರವಾದ ಬಟ್ಟೆಯಿಂದ ಕ್ಲೋರಿನ್ ದ್ರಾವಣದ ನೀರಿನಲ್ಲಿ ಬಟ್ಟೆ ಅದ್ದಿ ಒರೆಸಬೇಕು. ಮೊದಲಧಾರೆಗಳಲ್ಲಿ ಬರುವ ಹಾಲಿನಲ್ಲಿ ರೋಗಾಣುಗಳ ಪ್ರಮಾಣ ಅದಿಕವಿರುತ್ತದೆ. ಆದ್ದರಿಂದ ಮೊದಲ ಹಾಲನ್ನು ಪ್ರತ್ಯೇಕವಾಗಿ ಕರೆದು ಉಪಯೋಗಿಸದೆ ಚೆಲ್ಲಬೇಕು.

೨. ಆಕಳು ಅಥವಾ ಎಮ್ಮೆಯ ಶರೀರದ ಚರ್ಮ: ಸಾಮಾನ್ಯವಾಗಿ ಆಕಳು ಎಮ್ಮೆ ಕೊಟ್ಟಿಗೆಯಲ್ಲಿ ಮಲಗಿದಾಗ, ಇಲ್ಲವೇ ಹೊರಗಡೆ ಮೇಯಲು ಬಿಟ್ಟಾಗ ಶರೀರದ ಹೊರಭಾಗವಾದ ಚರ್ಮಕ್ಕೆ ಮಣ್ಣು ಸಗಣಿ ಮುಂತಾದುವು ಹತ್ತಿಕೊಂಡು ಚರ್ಮ ಹೊಲಸು ಆಗಬಹುದು. ಹಾಲು ಕರೆಯುವ ಮುನ್ನ ಸ್ವಚ್ಛವಾಗಿ ಮೈಯನ್ನು ತೊಳೆಯದಿದ್ದರೆ ಅವು ಹಾಲಿನ ಪಾತ್ರೆಯಲ್ಲಿ ಬೀಳುವ ಸಂಭವವಿರುತ್ತದೆ. ಹಾಲು ಕರೆಯುವಾಗ, ಬಾಲ ಬೀಸಿ, ಬಾಲಕ್ಕೆ ಅಂಟಿಕೊಂಡಿರುವ ಸಗಣಿ ಹಾಲಿನ ಒಳಗೆ ಬೀಳುತ್ತದೆ. ಆದುದರಿಂದ ಹಾಲನ್ನು ಕರೆಯುವಾಗ ಬಾಲವನ್ನು ಹಿಂದಿನ ಕಾಲಿಗೆ ಕಟ್ಟುವುದು ಒಳ್ಳೆಯದು.

೩. ಹಾಲಿನ ಪಾತ್ರೆಗಳು: ಹಾಲು ಕರೆಯಲು ಉಪಯೋಗಿಸುವ ಪಾತ್ರೆಗಳು ಸಹ ಅತಿ ಮುಖ್ಯವಾದವು. ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆದು ಮತ್ತು ತೊಳೆಯಲು ಉಪಯೋಗಿಸುವ ನೀರು ಅಶುದ್ಧವಾಗಿದ್ದರೂ ಸಹ ಹಾಲು ಕೆಡಬಹುದು. ಆದುದರಿಂದ ಹಾಲನ್ನು ಕರೆಯಲು ಉಪಯೋಗಿದುವ ಪಾತ್ರೆಗಳು ಮತ್ತು ನೀರು ಸ್ವಚ್ಛವಾಗಿರಬೇಕು. ಶುದ್ಧವಾದ ಬಿಸಿನೀರಿನಿಂದ ಪಾತ್ರೆಗಳನ್ನು ತೊಳೆಯಬೇಕು ಮತ್ತು ಅವು ಕಿಲುಬು ರಹಿತವಾಗಿದ್ದು, ಅಡಿಗೆ ಕೆಲಸಕ್ಕೆ ಉಪಯೋಗಿಸಬಾರದು.

೪. ಹಾಲು ಹಿಂಡುವ ವ್ಯಕ್ತಿ: ಹಾಲನ್ನು ಹಿಂಡುವ ವ್ಯಕ್ತಿಯ ಕೈಗಳು ಸ್ವಚ್ಛವಾಗಿದ್ದು, ಸಾಂಕಾಮಿಕ ರೋಗಗಳಿಂದ ಮುಕ್ತವಾಗಿರಬೇಕು. ಅಲ್ಲದೆ ಹಾಲನ್ನು ಹಿಂಡುವ ವೇಳೆಯಲ್ಲೊ ಮೂಗು. ಮುಖ ಅಥವಾ ತಲೆಯನ್ನು ಮುಟ್ಟುವುದು ಮುಂತಾದವನ್ನಿ ಮಾಡಬಾರದು. ಹಾಲನ್ನು ಹಿಂಡುವಾಗ ಬೀಡಿ, ಸಿಗರೇಟ, ಎಲೆ -ಅಡಿಕೆ ಮತ್ತು ನಶ್ಯ ಮುಂತಾದುವನ್ನು ಸೇವಿಸಬಾರದು.

೫. ಹಾಲಿನ ಕಲಬೆರೆಕೆ: ಸಾಮಾನ್ಯವಾಗಿ ಹಾಲಿಗೆ ನೀರನ್ನು ಬೆರೆಸುವುದು ಹಿಂದಿನಿಂದಲೂ ಬಂದ ಪದ್ದತಿ. ಅದರಲ್ಲಿಯೂ ಕಲುಷಿತವಾದ ಕೆರೆ, ಬಾವಿ ನೀರನ್ನು ಸೇರಿಸುವುದರಿಂದ ಮತ್ತು ಕಲುಷಿತವಾದ ಪದಾರ್ಥಗಳನ್ನು ಬೆರೆಸುವುದರಿಂದ ಹಾಲು ಕೆಡುವುದು. ಅಲ್ಲದೇ ಇದು ಕಾನೂನಿನ ಪ್ರಕಾರ ಶಿಕ್ಷಾರ್ಹವಾಗುವುದು ಕೂಡ.

೬. ಆಕಳು ಅಥವಾ ಎಮ್ಮೆಗೆ ನೀಡುವ ಆಹಾರ:  ಹಾಲು ಹಿಂಡುವ ದನಗಳಿಗೆ ಆಹಾರವು ಪೌಷ್ಟಿಕಾಂಶದಿಂದ ಕೂಡಿದ್ದು, ತಾಜಾ ಆಗಿಯೂ ಇರಬೇಕು. ಹಾಲನ್ನು ಹಿಂಡುವ ಕನಿಷ್ಟ ಒಂದು ಗಂಟೆ ಮೊದಲು ಅಥವಾ ನಂತರ ಸಮತೋಲನ ಪಶು ಆಹಾರ ರಸಮೇವು ಕೊಡುವುದು. ಸೂಕ್ತ. ಆಹಾರದಲ್ಲಿ ವಾಸನೆಯುಳ್ಳ ಮತ್ತು ಹಳಸಿದ ಅಥವಾ ಕೆಟ್ಟುಹೋದ ಮುಸುರೆ ನೀರು ಅಥವಾ ಪದಾರ್ಥಗಳನ್ನು ನೀಡಬಾರದು.

ಶುದ್ಧ ಮತ್ತು ಅಧಿಕ ಹಾಲನ್ನು ಉತ್ಪಾದಿಸಲು ಕೆಲವು ಸಲಹೆಗಳು

೧. ದನದ ಮನೆಯಲ್ಲಿ (ಕೊಟ್ಟಿಗೆ) ಸಾಕಷ್ಟು ಗಾಳಿ, ಬೆಳಕು ಬರುವಂತೆ ಇರಬೇಕು. ದನದ ಮನೆಯ ನೆಲವನ್ನು ಪ್ರತಿದಿನವೂ ಕ್ರಿಮಿನಾಶಕ ಔಷಧಿಯನ್ನು ಉಪಯೊಗಿಸಿ ತೊಳೆಯಬೇಕು. ವರ್ಷದಲ್ಲಿ ಕನಿಷ್ಟ ಎರಡು ಸಾರಿಯಾದರೂ ದನದ ಮನೆಗೆ ಸುಣ್ಣವನ್ನು ಹಚ್ಚಬೇಕು.

೨. ದನದ ಮನೆಯ ಸುತ್ತಲೂ ಸ್ವಚ್ಛವಾದ ಪರಿಸರ ಇರಬೇಕು.

೩. ಆರೋಗ್ಯವಂತ ಹಸುವಿನ ಹಾಲನ್ನು ಮಾತ್ರ ಹಿಂಡಬೇಕು. ಕೆಚ್ಚಲಬಾವು ಅಥವಾ ಅನಾರೋಗ್ಯದಿಂದ ಬಳಲುವ ಹಸುವಿ ಹಾಲನ್ನು ಹಿಂಡಿ ಉಪಯೋಗಿಸಬಾರದು.

೪. ಪ್ರತಿದಿನ ಆಕಳು/ಎಮ್ಮೆ ಮೈಯನ್ನು ಸ್ವಚ್ಛವಾಗಿ ಹಾಲು ಹಿಂಡುವ ಮೊದಲು ತೊಳೆಯಬೇಕು.

೫. ಹಾಲು ಹಿಂಡುವ ಮೊದಲು ಉಗುರು ಬೆಚ್ಚಗಿನ ಶುದ್ಧವಾದ ನೀರಿನಿಂದ ಕೆಚ್ಚಲನ್ನು ಸ್ವಚ್ಛವಾಗಿ ತೊಳೆದು, ಅನಂತರ ಕ್ರಿಮಿನಾಶಕ ದ್ರವದಲ್ಲಿ ಕ್ಲೋರಿನ್ ನೀರು, ಪೋಟ್ಯಾಷಿಯಂ ಪರ್ಮಾಂಗನೇಟ್ ದ್ರವದಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ  ಕೆಚ್ಚಲನ್ನು ಒರೆಸಬೇಕು.

೬. ಹಾಲನ್ನು ಕರೆಯುವಾಗ ಸಮತೋಲನ ಪಶು ಆಹಾರವನ್ನಾಗಲೀ, ರಸಮೇವನ್ನಾಗಲೀ ಹಾಕಬಾರದು ಮತ್ತು ಬಾಲವನ್ನು ಹಿಂದಿನ ಕಾಲಿಗೆ ಕಟ್ಟುವುದು ಸೂಕ್ತ.

೭. ಮೊದಲು ಧಾರೆಯ ಹಾಲನ್ನು ಪ್ರತ್ಯೇಕವಾಗಿ ಹಿಂಡಿ ತೆಗೆದು ನಂತರ ಪಾತ್ರೆಯೊಳಗೆ ಹಾಲನ್ನು ಹಿಂಡಿರಿ.

೮ ಹಾಲು ತೊರೆ ಬಿಡಲು ಆಕ್ಸಿಟೋಸಿನ್ ಎಂಬ ಚೋದಕ ಕಾರಣ. ಈ ಕ್ರಿಯೆ ರಕ್ತ ಸಂಚಾರದ ಮೂಲಕ ಕೆಚ್ಚಲಿಗೆ ಬರುವುದು ಮತ್ತು ೫-೬ ನಿಮಿಷವಿರುವುದು. ಅಷ್ಟರಲ್ಲಿ ಪೂರ್ಣ ಹಾಲನ್ನು ಕೆಚ್ಚಲಿನಿಂದ ಹಿಂಡಬೇಕು.

೯. ಹಾಲನ್ನು ಪ್ಲಾಸ್ಡಿಕ್ ಅಥವಾ ಕಲಾಯಿ ಇಲ್ಲದ ಪಾತ್ರೆಗಳಲ್ಲಿ ಹಿಂಡಬಾರದು.

೧೦. ಹಾಲು ಹಿಂಡಲು ಉಪಯೋಗಿಸುವ ಪಾತ್ರೆಗಳನ್ನು ಅಡಿಗೆ ಮಾಡಲು ಉಪಯೋಗಿಸಬಾರದು. ಪಾತ್ರೆ ಬಾಯಿ ಚಿಕ್ಕದಿದ್ದರೂ ಸಹ ಒಳಗೆ ಕೈ ಹಾಕಿ ತೊಳೆಯುವಂತೆ ಇರಬೇಕು.

೧೧. ಹಾಲು ಕರೆಯುವ ವ್ಯಕ್ತಿ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡಿರಬೇಕು. ವ್ಯಕ್ತಿಯು ಆರೋಗ್ಯದಿಂದ ಇದ್ದು. ಸಾಂಕ್ರಾಮಿಕ ರೋಗಗಳಿಂದ ಮುಕ್ತನಾಗಿರಬೇಕು.

೧೨. ಹಾಲು ಕರೆಯುವ ಸಮಯದಲ್ಲಿ ಬೀಡಿ, ಸಿಗರೇಟು, ಎಲೆ-ಅಡಿಕೆ ಮತ್ತು ನಶ್ಯ ಮುಂತಾದವುಗಳ ಸೇವನೆ ಮಾಡಬಾರದು.

೧೩. ಸಾಮಾನ್ಯವಾಗಿ ದಿನಕ್ಕೆರಡು ಬಾರಿ ಹಾಲು ಕರೆಯುವ (ಅದಿಕ ಹಾಲು ಕೊಡುವ ಮಿಶ್ರ ತಳಿಗಳಲ್ಲಿ ೩ ಬಾರಿ ಸಹ ಹಿಂಡಬಹುದು.) ಆದರೆ ಕರೆಯುವ ಸಮಯದಲ್ಲಿ ಬದಲಾವಣೆ ಆಗಬಾರದು.

೧೪. ಹಾಲುಕರೆಯುವ ಸಮಯದಲ್ಲಿ ಆಕಳು/ಎಮ್ಮೆಯನ್ನು ಹೊಡೆಯುವುದು, ಕಾಲು ಕಟ್ಟಿ ಹಿಂಡುವುದು ಮುಂತಾದ ಕ್ರಮಗಳಿಂದ ಹಾಲು ತೊರೆ ಬಿಡದಿರಲು ಕಾರಣವಾಗಬಹುದು.

೧೫. ತುಂಬು ಕೈಯಿಂದ ಸೂಕ್ಷ್ಮವಾಗಿ ಮತ್ತು ತ್ವರಿತವಾಗಿ ಎರಡು ಕೈಗಳನ್ನು ಉಪಯೋಗಿಸಿ ಹಾಲು ಕರೆಯಬೇಕು. ಹೆಬ್ಬೆರಳು ಮಡಚಿ ಅಥವಾ ಮೊಲೆಗಳನ್ನು ಎರಡು ಬೆರಳುಗಳ ಮಧ್ಯದಲ್ಲಿ ಹಿಡಿದು ಹಾಲನ್ನು ಕರೆಯಲೇಬಾರದು.

೧೬. ಶುದ್ಧ ಸ್ವಚ್ಛ ಹಾಲನ್ನು ಸುಮಾರು ೪ ಗಂಟೆಗಳ ಕಾಲ ಇಡಬಹುದು. ಹಾಲು ಕರೆದ ತಕ್ಷಣ ಈ ಬೆಚ್ಚಗಿನ ಹಾಲನ್ನು (೩೮ ಸೆ.) ತಣ್ಣಗೆ ಮಾಡಿದರೆ (೧೦ ಸೆ.) ಸುಮಾರು ೨೪ ಗಂಟೆಗಳ ಕಾಲ ಕೆಡದಂತೆ ಇಡಬಹುದು.

೧೭. ಹಾಲು ಕರೆದ ನಂತರ ನಾಲ್ಕು ಮೊಲೆ ತೊಟ್ಟುಗಳನ್ನು ಸೌಮ್ಯ ಕ್ರಿಮಿನಾಶಕ ದ್ರಾವಣದಲ್ಲಿ ಸ್ವಲ್ಪ ಹೊತ್ತು ಅದ್ದಬೇಕು.

೧೮. ಕೆಚ್ಚಲಿಗೆ ಗಾಯ, ಕೆಚ್ಚಲ ಬಾವು ಉಂಟಾದರಡ ನಿರ್ಲಕ್ಷ್ಯ ಮಾಡದೆ ತಕ್ಷಣ ಚಿಕಿತ್ಸೆ ಕೊಡಿಸಬೇಕು. ಹಾಲು ಕಣ್ಣಿಗೆ ಸರಿಯಾಗಿ ಕಂಡರೂ ಪ್ರತ್ಯೇಕವಾಗಿ ಆಗಾಗ್ಗೆ ಕರೆದು ಪರೀಕ್ಷೀಸುತ್ತಿರಬೇಕು.

ಹಸು ಅಥವಾ ಎಮ್ಮೆ ಅದಿಕ ಹಾಲು ನೀಡಬೇಕಾದರೆ, ಗಭಾವಸ್ಥೆಯಲ್ಲಿ ಗರ್ಭದ ರಾಸುವಿನ ಪಾಲನೆ, ಪೋಷಣೆ ಮಾಡಬೇಕು. ಸರಿಯಾದ  ಸಮತೋಲನ ಪಶು ಆಹಾರ ಗರ್ಭದ ಏಳನೇ ತಿಂಗಳು ಮುಗಿದ ನಂತರ ಹಾಲು ಹಿಂಡುವುದನ್ನು ಬಿಡಬೇಕು ಮತ್ತು ಪಶು ಆಹಾರ ನೀಡುವ ಪ್ರಮಾಣ ಹೆಚ್ಚಿಸಬೇಕು. ಅಂದರೆ ಕ್ಷೀರ ಉತ್ಪಾದನೆ ಮಾಡುವ ಗ್ರಂಥಿಗಳು ಪುನಶ್ಚೇತನಗೊಂಡು ಕರು ಹಾಕಿದ ನಂತರ ಅದಿಕ ಹಾಲು ನೀಡುತ್ತವೆ.

ಹಾಲು ಹಿಂಡುವ ಆಕಳುಗಳಿಗೆ ನೀಡುವ ಪಶು ಆಹಾರವನ್ನು ಅವುಗಳ ಉತ್ಪಾದನೆಗನುಗುಣವಾಗಿ ಮತ್ತು ದೈನಂದಿನ ಚಟುವಟಿಕೆಗಾಗಿ ಎಂದು ಎರಡು ರೀತಿಯಲ್ಲಿ ನೀಡಬೇಕು. ಉದಾರಣೆ: ಎರಡು ಲೀಟರ್ ಹಾಲಿಗೆ ಒಂದು ಕಿ. ಗ್ರಾಂ ಸಾದಾ ಸಮತೋಲನ ಪಶು ಆಹಾರವನ್ನು ದೇಹ ಪೋಷಣೆಗಾಗಿ ಕೊಡಬೇಕು. ಅಲ್ಲದೆ ಹಾಲು ಹಿಂಡುವ ದನಗಳಿಗೆ ಸಾಕಷ್ಟು ಪ್ರಮಾಣದಲ್ಲಿ ದಿನಕ್ಕೆ ೩-೪ ಸಾರಿಯಂತೆ ಶುದ್ಧವಾದ ನೀರನ್ನು ಕುಡಿಯಲು ಕೊಡಬೇಕು. ಹಾಲಿನ ಉತ್ಪಾದನೆಯಲ್ಲಿ ಹಸಿರು ಮೇವಿನ ಪಾತ್ರ ಮುಖ್ಯವಾದದ್ದು. ಹಾಲು ಹಿಂಡುವ ದನಗಳಿಗೆ ಪ್ರತಿನಿತ್ಯ ಹಸಿರು ಮೇವಿನ ಬೆಳೆ ಅಂದರೆ ಏಕದಳ ಮತ್ತು ದ್ವಿದಳ ಹಸಿರು ಬೆಳೆಗಳನ್ನು ೨:೧ ರಂತೆ ಒಂದಕ್ಕೆರಡರಷ್ಟು ಪ್ರಮಾಣದಲ್ಲಿ ನೀಡಿದ್ದೇ ಆದರೆ ಅದಿಕ ಹಾಲಿನ ಉತ್ಪಾದನೆ ಮಾಡಬಹುದು. ಅಲ್ಲದೆ ಹೈನುಗಾರಿಕೆಯಲ್ಲಿ ಹೆಚ್ಚಿನ ಖರ್ಚು ಆಹಾರದ್ದು, ಅದನ್ನು ಕಡಿಮೆ ಮಾಡಬಹುದು.

ಹಾಲು ಹಿಂಡುವ ದನಗಳಿಗೆ ರೋಗ ಬರದಂತೆ ಚುಚ್ಚುಮದ್ದನ್ನು (ಲಸಿಕೆಯನ್ನು) ಸಮಯಕ್ಕೆ ಸರಿಯಾಗಿ ಕೊಡಿಸಬೇಕು. ಜಂತುನಿವಾರಕ ಔಷದಿಯನ್ನು ಕನಿಷ್ಠ ವರ್ಷಕ್ಕೆ ಒಂದು ಸಾರಿಯಾದರೂ ನೀಡುವುದು ಉತ್ತಮ. ಇದರಿಂದ ಅವುಗಳ ಆರೋಗ್ಯ ರಕ್ಷಣೆಯೊಂದಿಗೆ ಅದಿಕ ಹಾಲನ್ನು ಸಹ ಉತ್ಪಾದನೆ ಮಾಡಬಹುದು. ಇದರಿಂದ ಹೈನುಗಾರಿಕೆಯು ಒಂದು ಲಾಭದಾಯಕ ಉದ್ಯೋಗವಾಗುವುದರಲ್ಲಿ ಸಂಶಯವಿಲ್ಲ.

ಭಾರತ ವಿಶ್ವದಲ್ಲಿಯೇ ಹಾಲಿನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವುದೇನೋ ನಿಜ. ಆದರೆ ಹಾಲಿನ ಗುಣಮಟ್ಟಕ್ಕೆ ಹೋಲಿಸಿದರೆ ಇದಕ್ಕೆ ವಿಶ್ವಮಾರುಕಟ್ಟೆಯಲ್ಲಿ ಭಾರತದಲ್ಲಿ ಉತ್ಪಾದನೆಗೊಂಡ ಹಾಲಿಗೆ ಹೆಚ್ಚಿನ ಬೆಲೆ ಬರಬೇಕಾದರೆ ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ಮಾಡುವುದು. ಬಹಳ ಅವಶ್ಯಕ. ವಿಶ್ವಮಾರುಕಟ್ಟೆಯಲ್ಲಿ ಭಾರತದಲ್ಲಿ ಉತ್ಪಾದನೆಗೊಂಡ ಹಾಲಿಗೆ ಮಾರುಕಟ್ಟೆ ಅಥವಾ ಬೆಲೆ ದೊರಕಿದ್ದೇ ಆದರೆ ಹಾಲಿ ಉತ್ಪಾದಕರು ಉತ್ಪಾದಿಸಿದ ಹಾಲಿಗೆ ಇನ್ನೂ ಬಹಳ ಬೆಲೆ ಬರುವುದು. ಅಲ್ಲದೆ ಅವರ ಆರ್ಥಿಕ ಮಟ್ಟ ಸುಧಾರಣೆಯಾಗುವುದು. ಜೊತೆಗೆ ಪ್ರತಿಯೊಬ್ಬ ಭಾರತದ ಪ್ರಜೆಯ ಆರೋಗ್ಯ ಮಟ್ಟ ಸುಧಾರಣೆಯಾಗುತ್ತದೆ. ಶುದ್ಧ ಹಾಲು ಮತ್ತು ಅದಿಕ ಹಾಲು ಉತ್ಪಾದಿಸುವ ಗುರಿಯನ್ನು ಪ್ರತಿಯೊಬ್ಬ ಹಾಲು ಉತ್ಪಾದಕನೂ ಹೊಂದಿರಬೇಕು.