ಸೊಲ್ಲು :          ಗಿಣಿಯೆ ಏ ಗಿಣಿಯೆ ಏ ಗಿಣಿಯೆ
ಸಿರಿಕವಲಿದನs ಹುಲಿತಾಯಿ ಕರಿಲಾಗಿ
ಯಾರು ಕುರುದಾರೊ ಎಂಬುದು ಸಿವನೆ
ಕುಡಿಹುಲ್ಲು ಮೇದಾಳು
ಹೊಳಿ ನೀರು ಕುಡುದಾಳು
ಚಾಜ ಜನಿಸ್ಯಾಳು ಹೇ ಗಂಡಾ ಮಗsನ
ಹೂ ಬಾಲ ಹಣೆ ಚಿಕ್ಕ ಏ ಕಣಬು ಕಾಲು
ಯಾರು ಕುರುದಾರೊ ಎಂಬುದು ಸಿವನೇ
ಬೆಳ್ಳೀಯ ಕೋಡೀನ ಏ ಬಸಾವಣ್ಣಾ
ಚಿನ್ನಾದ ಕೋಡೀನ ಚೆನ್ನೀಗುರಾಮಾ
ಜನಸೀದ ಕಂದಯ್ಯಾಗೆ ಕೊಡುಲಿಲ್ಲ ಮೊಲಿ ಹಾಲಾ
ಮನಿಯಾ ದೇವ್ರಿಗೆ ಮೀಸಲು ಎಂದು
ಬಾಲಾ ಕಂದಯ್ಯ ತಾ ಕರೀಕಂದ
ವಡಿಯಾರ ಮನಿಗೆ ತಾ ಬರುತಾಳ್ರಿ
ಕೆರಿಯಾ ಅಂಗ್ಳಾದಲ್ಲಿ ನಿಂತ್ಯಾಳೆ ಕವಲಿ
ಕವುಲಪ್ಪುನ ದನಿಯ ಕೇಳ್ಯಾಳೆ ವಡೆಯ
ಗಡುಬಡಿಸಿ ಮಂಚಾ ತಗ್ಗೀಗೆ ಇಳದು
ಒಂದೆನ್ನ ತೆಗುದಾಳು ಚವುಕೀ ಬಾಗೀಲಾ
ಚವಕೀಯ ವಳಗೆ ಬರುತಾಳೆ ಕವಲಿ?
ಬೆಳ್ಳಿ ಡವಗಣ್ಣೀಲಿ ಕಟ್ಯಾಳೆ ಕವಲೀಯ
ಚಿನ್ನಾದ ಹಗ್ಗುದಲಿ ಬಿಗುದಾಳೆ ಬಾಲಯ್ಯುಗೆ
ಹೋಗಿ ಕುಂತಾಳ್ರಿ ಮಂಚಾದ ಮ್ಯಾಲೆ
ತಂಪಾದ ನೆರಳು ಕಂಡಾಳೆ ಕವುಲಿ
ತಾಸೊತ್ತ ನಾವು ಸುಕುನಿದ್ರೀಗೈದು
ತಾಸೀನ ಮೇಲೆ ತಾಯೇಳಬೇಕೆ
ತಾಸೀನ ಮ್ಯಾಲೆ ಠಾಯದ್ದಾಳಯ್ಯಾ
ಕವಲವ್ವನ ದನಿಯ ಕೇಳಿದಳು ವಡತಿ
ಗಡಿಬಡಿಸಿ ಮಂಚs ತಗೀಗೆ ಇಳದೂ

ಅಟ್ಟಕ್ಕೆ ಏಣೀ ಹಾಕೀದಳಾಗಾ
ಒಂದು ಎರಡಾನೆ ಮೂರು ಮತ್ತೊಂದೆ
ಮೂರು ಮತ್ತೊಂದೆ ಹುಡೇವ ಇಳಸಿ
ಮೂರು ಮತ್ತೊಂದೆ ಹಂಡೇವ ತೊಳುದಿಟ್ಟು
ಕೊನಿ ಮುಸುರೆ ತಾಯೆ ಕವಲಮ್ಮುಗೆ ಇಟ್ಟು
ಬಾಲಾ ಕಂದಯ್ನ ಬಿಟ್ಟು ಹೊಡುದಾಳ್ರಿ
ಬಾಲಾ ಕಂದಯ್ನ ಬಿಟ್ಟು ಹೊಡಿವಾಗಾ
ಜೋರು ಜೋರೆನ್ನೂತ ಉಣುತಾನೆ ಹೈನಾ
ಬಾಲ ಕಂದಯ್ನಾ ಎಳೆಕಟ್ಯಾಳಾಗಾ
ಹಾಲು ಕರಿಯದಕೆ ಹೋಗಿ ಕುಂತವ್ಳೆ
ಒಂದಾ ಹಂಡಿ ಹಾಲು ಕರೆದಾಳು ದೇವಾ
ಎರಡಂಡೆ ಹಾಲೂವ ಕರಿವಾಗಾ
ಎಲ್ಲಿತ್ತು ಸಿವುನೇ ಮಾಯಾದ ಗಂಗೇ
ಬಂದು ಎರಗೈತೆ ಕವಲಮ್ಮನ ಕೆಚುಲೀಗೆ
ಸಾಕು ಮಾಡಮ್ಮಾ ಹಾಲ ಕರಿಯಾಮ
ಗಂಗೇಯ ಉರಿಯು ನಾ ತಾಳಾಲಾರೆ
ಇಂದೂ ಕೊಡೋ ಹಾಲು ನಾಳೆ ಕೊಡತೀನಿ
ಸಾಕು ಮಾಡವ್ವಾ ಹೇ ಮsನೆ ಮಾತಿ
ಅಸ್ಪಂದೇ ಮಾತಾ ಕೇಳುಲಾರುವೆ
ಹಾಲು ಕರೆಯಾದೆ ಬಿಡುಲಿಲ್ಲ ದೇವಾ
ಗುಂಗೇಯ ಉರಿಯಾ ತಡಿಯಲಾರುವೆ
ಜಾಡೀಸಿ ವದ್ದಾಳೆ ಏ ಕವಾಲವ್ವಾ
ಮನಿಯೊಡತಿ ಆಗಾ ಮಗುಚಿ ಬಿದ್ದಾಳೊ
ಮನಿಯಾಲಿದ್ದಂತಾ ಗೌಡಾರೋಡಿ ಬಂದು
ಮನಿಯ ವಡುತೀಗೆ ಎಬ್ಬುರ‍್ಸಿದಾರೆ
ಮನಿ ವಡುತಿ ಆಗಾ ಎದ್ದಾಳು ಸಿವನೇ
ತಾಯೀ ಕಮಲಮುಗೆ ಬೈದಾಳೊ ಸಿವನೆ
ಕೊಡುಬಾರದ ಸಾಪಾ ಕೊಡುತಾಳೊ ಸಿವುನೆ
ಬೈಯುಬಾರುದ ಬೈಗಳು ಬೈತಾಳೊ ಸಿವನೆ
ಹಿಡಿಯಾ ಕುಂಟೇಲಿ ಹೊಡಿತಾಳೆ ಸಿವನೆ
ವನಿಕೆ ಮುಂಡೀಲಿ ಬಡಿತಾಳೊ ದೇವಾ
ಜಾಡೀಸೊದ್ದಾಳು ಕವಲಮ್ಮಗೆ ತಾಯೀ

ತಾಯೀ ಕವಲಮ್ಮ ಹೇಳಿದಳಾಗಾ
ಕೊಡುಬಾರದ ಸಾಪಾ ಕೊಡುಬೇಡಿ ತಾಯೀ
ಬೈಯುಬಾರದ ಬೈಗುಳುವ ಬೈಯುಬೇಡಿ ತಾಯೀ
ವನಕೆ ಮುಂಡೀಲಿ ಹೊಡಿಬೇಡಿ ತಾಯಿ
ಇಂದು ಕೊಡೋ ಹಾಲಾ ನಾಳೆ ಕೊಡತೀನಿ
ಕೊಡುಬಾರದ ಸಾಪ ಕೊಡುಬೇಡೀ ತಾಯೀ
ಬೈಯುಬಾರುದ ಬಯೂಗಳ ಬೈಯುಬೇಡೀ ತಾಯೀ
ಅಸ್ಟೊಂದೆ ಮಾತೇ ಹೇಳ್ಯಾಳೆ ಕವಲೀ
ಅಸ್ಟಾ ಮಾತುಗಳೇ ಕೇಳ್ಯಾಳೆ ವಡುತೀ
ಅರುಗಳಿಗೆ ಸರುಪಾ ಕಚ್ಚಾಲೆ ನಿನಗೆ
ಹೆಬ್ಬೂಲಿ ನಿನಗೆ ನಿನ್ನಾಲಿ ತಾಯೆ
ನೀ ಕುಡಿಯೊ ಗಂಗೆ ಜಲ ಬತ್ತಾಲವ್ವಾ
ನೀ ಮೇವೊ ಮೇವಾ ನಸಿಗಾರಿಲವ್ವಾ
ನಾಕಾ ತಿಂಗಳ ಗರುಬಾ ನರಿಗಾರಿಲವ್ವಾ
ಹೋದಂತ ದಾರೀಯ ಹಿಂದಾಕೆ ತಿರಗ್ಬೇಡೆ
ಅಸ್ಟೊಂದು ಸಾಪಾ ಕೊಡುತಾಳೊ ದೇವಾ
ಅಸ್ಟಾ ಸಾಪುವ ಕೇಳುಲಾರದೆ ಕವಲವ್ವಾ
ಕಣ್ಣಾ ನೀರನ್ನೇ ಚಲುತಾಳೊ
ಬಾಲಾ ಕಂದಯ್ಯಗೆ ಹೇಳಿದಳಾಗಾ
ಮುಂದೆ ಬಂದಾರೆ ಹಾಯಲಿ ಬೇಡಾ
ಹಿಂದೆ ಬಂದಾರೆ ಒದಿಯಾಲಿ ಬೇಡಾ
ದಂಡು ದಾಳೀನೆ ಬಿಟ್ಟೋಗಾ ಬೇಡಾ
ಹೆಬ್ಬೂಲಿ ಕಂಡಾರೆ ನಿನ ಬಿಡೋದಿಲ್ಲೊ
ಅಸ್ಟೊಂದೇ ಮಾತು ಹೇಳ್ಯಾಳೊ ಕವಲೀ
ಅಸ್ಟೊಂದೇ ಮಾತಾ ಹೇಳ್ವಾಗ ಕವಲೀ
ಮನ ಒಡತಿ ಬಂದು ಕಣ್ಣಿ ಬಿಚ್ಯಾಳ್ರಿ
ಮನಿಯೊಡುತೀ ಬಂದು ಕಣ್ಣೀ ಬಿಚ್ವಾಗಾ
ತಾಯಾದ ಕವಲೀ ಮಗನೀಗ ಹೇಳುತಾಳ್ರಿ
ಹೋಗಿ ಬರುತೀನೊ ನನು ಮಗನೇ ಈಗಾ
ಅಸ್ಟೊಂದಾ ಮಾತಾ ಹೇಳ್ಯಾಳು ಕವಲೀ
ಗುಡ್ಡಾದ ದಾರೀಯ ಹಿಡಿದಾಳು ಕವಲೀ
ಗುಡ್ಡಾದ ದಾರೀಯು ಹಿಡದೂ ಹೋಗುವಾಗ

ಮದ್ದಾನ ಕಾಲಾವಾಗೀತು ದೇವಾ
ಮದ್ದಾನ ಕಾಲಾ ಆಗಾವಾಗಾ
ತಾಯೀ ಕವಲಮ್ಮಾಗೆ ಬಾಯಾರಿಕೆಯಾಗಿ
ಹರಿಯೂವ ಹೊಳಿಯಾ ಹಾದಿ ಹಿಡುದಾಳ್ರಿ
ಹರಿಯೋ ಹೊಳಿಗೆ ಹೋದಾಳೊ ಕವುಲೀ
ಮೇಲ್ಬದಿಯಲ್ಲಿ ನೀರೇ ಕುಡಿತಾಳ್ರಿ
ಕವುಲಯವ್ವನ ಎಂಜಾಲು ಕೆಳಮಾಕನಾಗಿ
ಆ ಹರಿಯಾ ಹೊಳಿಯಲ್ಲಿ ಬರತಿರುವಾಗಾ
ಅದೇಯ ಹೊತ್ತೀಗೆ ಹೆಬ್ಬೂಲಿ ಬಂದು
ಆ ಹುಲಿಯೂ ಹೊಳಿಗಿನ್ನು ಬಂದಿತು ದೇವಾ
ನೀರನ್ನೇ ಹೆಬ್ಬುಲಿ ಕುಡಿತಿರಾವಾಗಾ
ಕವಾಲವ್ವನ ಎಂಜಾಲು ಸಿಕ್ಕೀತು ದೇವಾ
ಕವುಲವ್ವನ ಎಂಜಾಲು ಸೀಗೂವಾಗಾ
ಒಳ್ಳೇ ರುಚಿಯಾಗಿ ಸಿಕ್ಕೀತು ಸಿವುನೇ
ಹೆಬ್ಬೂಲಿ ಆಗಾ ಏನು ಹೇಳುತೈತೆ
ಕವುಲವ್ವನ ಎಂಜಾಲೆ ಹೀಗಿರಾವಾಗಾ
ಕವಲವ್ವನ ಮಾಂಸಾ ಹ್ಯಾಗಿರಾವೋದು
ಎಂದು ಹೆಬ್ಬೂಲಿ ಬರುತೈತೊ ದೇವಾ
ಹೆಬ್ಬೂಲಿ ಅಲ್ಲಿಗೆ ಬರಾತಿರಾವಾಗಾ
ಕವಲವ್ವನ ಎದುರೀಗೆ ಸಿಕ್ಕೀತು ದೇವಾ
ತಡಿಯಮ್ಮ ತಾಯೀ ಏ ಕವಾಲವ್ವಾ
ನಿನ್ನನ್ನು ನೋಡಿದರೆ ತಿನ್ನಂಗಾತೈತೆ
ಕೇಳವ್ವ ತಾಯೀ ಹೆಬ್ಬುಲಿ ನೀನು
ನನ್ನಾ ಮಗುನಾದ ಬಸುವಣ್ಣ ಇರಾವೋನೆ
ನನ್ನಾ ಮಗುನಾದ ಬಸುವನ್ಣಾನೀಗೆ
ಎದಿ ಹಾಲು ಕೊಟ್ಟೂ ನಾ ಬರಾತೀನಿ
ಕೇಳವ್ವ ತಾಯೀ ಏ ಕವಾಲಮ್ಮ
ಬಲಗೈಯಾ ಬಾಸೆ ಕೋಡಮ್ಮ ನನಗೆ
ಎಡಗೈಯ ನಂಬೀಗೆ ಕೋಡವ್ವ ನನಗೆ
ಆ ಮಾತ ಕೇಳ್ಯಾಳೆ ಕವಲೀ
ಬಲಗೈಯ ಬಾಸೆ ಕೊಟ್ಯಾಳೆ ಕವಲೀ
ಎಡಗೈಯ ನಂಬೀಗಿ ಕೊಟ್ಟಾಳೆ ಕವಲೀ
ಬರುತಾಳೊ ತನ್ನಾ ಬಾಲಾ ಕಂದಯ್ನಾ
ಬಾರಪ್ಪಾ ಮಗನೇ ಏ ನನ್ನಾ ಬಸಾವಯ್ಯಾ
ಕಣ್ಣೀರ ಹಾಕುತಾ ಹೇ ಕರಿತಾಳ್ರಿ
ದುಃಕಾವ ಮಾಡುತಾ ಏ ಕರೀತಾಳೊ
ಬಸುವಣ್ಣಾ ಮಗನೂ ಕೇಳೀದನಾಗಾ
ಯಾಕವ್ವಾ ತಾಯೀ ಹೇ ಕವಾಲಮ್ಮ
ಮಾಡುಬಾರುದ ದುಃಕಾ ಮಾಡುತೀಯ ತಾಯೀ
ಕಣ್ಣಾನೀರನ್ನು ಚೆಲ್ಲಾತೀಯ ತಾಯೀ
ಕೇಳಪ್ಪಾ ನನ್ನಾ ಏ ಬಸಾವಣ್ಣಾ
ಹೆಬ್ಬುಲಿಗೆ ನಾನು ಕೊಟ್ಟೇನು ಬಾಸೆ
ಬಾಸೀಗೆ ನಾನು ತೆಪ್ಪೂಲಾರೇನು
ಎಂದೂ-ಮಗನೀಗೆ ಎದಿ ಹಾಲಾ ಕುಡಿಸಿ
ಬರುತಾಳೆ ತಾಯಿ ಏ ಕವಾಲಮ್ಮ
ಬಾರಪ್ಪ ನನ್ನ ಹೆಬ್ಬೂಲಿ ನೀನು
ತಿನ್ನುಬಾರಪ್ಪಾ ನನಗೆ ನೀನು
ಎಂದು ಕರೆದಾಳು ಹೆಬ್ಬೂಲಿಗೆ ಆಗಾ
ಹೆಬ್ಬೂಲಿ ಮಗನು ಅಲ್ಲಿರಾವಾಗ
ಕವಲವ್ವನ ಮsಗ ಅಲ್ಲಿಗೆ ಬರುತಾನ್ರಿ
ಹೆಬ್ಬೂಲಿ ಮಗನು ಕವಲವ್ವನ ಮಗನು
ಅಣ್ಣಾತಮ್ಮುಗಳು ಆಗೀದರವರು
ಎರಡೂ ಜನುವೇ ಸೇರಿದರವರು
ಆಟಗಳನ್ನೇ ಆಡsತಿರುವಾಗಾ
ಹೆಬ್ಬೂಲಿ ಬಂದು ತಆಯಿ ಕವಲಮ್ಮಾಗೆ
ಬಂದು ತಿಂದೈತಲ್ಲೊ ತಾಯಿ ಕವಲಮ್ಮಾಗೆ
ಹೆಬ್ಬೂಲಿ ತಿಂದು ಬರುತೈತೊ-ದೇವಾ
ಬಾರಪ್ಪ ಮಗನೇ ಕುಡಿಬಾರೊ ಎದಿಹಾಲಾ
ಹೆಬ್ಬೂಲಿ ಮಗನೀಗೆ ಕರಿತೈತೊ ದೇವಾ
ಹೆಬ್ಬೂಲಿ ಮಗಾನು ಹೇಳಿದನಾಗಾ
ಕೇಳವ್ವ ತಾಯಿ ಹೆಬ್ಬೂಲಿ ನೀನು
ಬಸುವಣ್ಣಗೆ ಬಿಟ್ಟು ಹ್ಯಾಗೆ ಕುಡಿಲವ್ವಾ
ತಾಯಿ ಕವಲಮ್ಮಾ ಬರಲವ್ವ-ತಾಯೀ
ಬರುತಾಳೆ ಮಗನೆ ಬಾರಪ್ಪ ನೀನು
ಅಣ್ಣಾ ಬಸುವಣುಗೆ ಬಿಟ್ಟು ನಾನೀಗ
ನಿನ್ನಾ ಎದಿ ಹಾಲ ಕುಡಿಯಲಾರೆನೆ ತಾಯೀ
ಎಂದೂ ಹೆಬ್ಬುಲಿ ಮಗನು ಕುಂತಿದಾನೆ ಸಿವನೆ
ತಾಯೀ ಕವುಲಮ್ಮಾ ಬರಲಿಲ್ಲೊ ದೇವಾ
ಹೆಬ್ಬೂಲಿ ಮಗಾನೀಗೆ ಗೊತ್ತಾಗಿತಯ್ಯಾ
ಏ-ನನ್ನ ತಾಯಿ ಮೋಸ್ಯಾ ಮಾಡೀದಾಳೊ
ಎಂದು-ಹೆಬ್ಬುಲಿ ಮರಿಯೇ ನೋಡೀರಿ
ತಾಯಿ ಎದಿ ಹಾಲ ಕುಡಿತಿರವಾಗಾ
ಹೆಬ್ಬೂಲಿ ಹೊಟ್ಟೆ ಬಗಿದಾತೋ ದೇವಾ
ಹೆಬ್ಬೂಲಿ ಹೊಟ್ಟೀ ಬಿಗಿವಾಗಾ
ಕವುಲಮ್ಮನ ಮಾಂಸಾ ಬಿದ್ದೀತು ಅಲ್ಲಿ
ಕವುಲಮ್ಮನ ಮಾಂಸಾ ಹೇ ಬೀಳಾವಾಗ
ಹೆಬ್ಬೂಲಿ ದರಣೀಗೆ ಬಿದ್ದೀತು ದೇವಾ
ಸಿವಾ-ಹೆಬ್ಬೂಲಿ ಪರಾಣಾ ಹೋಗೀತು ದೇವಾ
ಪರದೇಸಿಯಾಗೀತು ಹೆಬ್ಬೂಲಿ ಮರಿಯು
ಹೇಳುತೈತೊ ಹೆಬ್ಬುಲಿ ಮಗನು
ಕೇಪ್ಪಾ ನೀನು  ಬಸಾವಣ್ಣಾ
ನೀನು ಈಗಾಲೆ ಪರದೇಸಿಯಾಗಿದಿಯೊ
ನನ್ನ ತಾಯಾದ ಬೆಬ್ಬುಲಿ ಸಿವಾ
ಎಂತಾ ಮೋಸ್ಯಾವ ಮಾಡಿತೋ ಅಣ್ಣಾ
ಹೋಗಿಬಾರಪ್ಪಾ ಹೇ ಬಸವಣ್ಣಾ
ನಿನ್ನ ಬಂದೂ ಬಳಗಾ ಸೇರಪ್ಪ ಅಣ್ಣಾ
ಒಬ್ಬಾನೆ ನೀನು ಹೋಗುಬೇಡೊ ಅಣ್ಣಾ
ಅಣ್ಣಾ ನಿನ ಬಂದೂ ಬಳಗಾ ಸೇರೋ ನೀನು
ಒಬ್ಬಾನೆ ನೀನು ಹೋಗಾಬೇಡೊ ಅಣ್ಣಾ
ಎಂದು ಹೆಬ್ಬುಲಿ ಮರಿಯೇ ಹೇಳೀತು ನೋಡ್ರಿ
ಚನ್ನಾಬಸವಯ್ಗೆ ಹೇಳೀತು ದೇವಾ
ಹೋಗಿ ಬರುತೀನೊ ಹೇ ಬಸಾವಣ್ಣಾ
ಆರಣ್ಯಾವಾಸಾ ಆಗಾತೇನಿ ನಾನು
ಹೋಗಿ ಬಾರೊ ಹೇ ನನ್ನಾ ಬಸುವಣ್ಣಾ ಆ ಆ*      ಹೆಬ್ಬುಲಿಗೆ ನಾನು ಕೊಟ್ಟೇನು ಬಾಸೆ; ಹಿರಿಯಣ್ಣ ಅಂಬಳಿಕೆ. ಕಿನ್ನರಿ ಸಂಪ್ರದಾಯದ ಕಾವ್ಯಗಳು, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ ಮೈಸೂರು ೧೯೭೯ ಪು.ಸಂ. ೧೫೨-೧೫೭.