ಹೊಗೆ ಇಲ್ಲದ ಊಟ ಮಾಡುವರು ಎಂಬುದೊಂದು ನುಡಿಕಟ್ಟು. ಈ ನುಡಿಕಟ್ಟು ಬರಲು ಅವರಲ್ಲಿಯ ಸಂಪ್ರದಾಯವೇ ಕಾರಣವಾಗಿದೆ.

ಮಾದಿಗರು ಕೊಡುವ ಅನ್ನ-ನೀರು ಪಡೆದುಕೊಂಡೇ ಡಕ್ಕಲಿಗರು ಬದುಕಬೇಕು ಎನ್ನುವುದು ಸಂಪ್ರದಾಯ. ಬೇರೆಯವರು ಕೊಟ್ಟರೆ ತೆಗೆದುಕೊಳ್ಳಬಾರದು ಎನ್ನುವ ಸಂಪ್ರದಾಯಿಕ ನಿಯಮಗಳೂ ಇವೆ. ಆದ್ದರಿಂದ ಡಕ್ಕಲಿಗರು ಒಲೆ ಹೂಡುವ, ಅಡಿಗೆ ಮಾಡುವ ಪ್ರಾಸಂಗವೇ (ಆದರೆ ಈಗ ಕೆಲವೊಂದು ಬದಲಾವಣೆಗಳಾಗಿವೆ) ಬರುತ್ತಿರಲಿಲ್ಲ.

ಡಕ್ಕಲಿಗರು ಅಲೆಮಾರಿ ಸಮುದಾಯದವರಾದುದರಿಂದ ಪ್ರಯಾಣದ ಸಂದರ್ಭದಲ್ಲಿ, ಮಾದಿಗರು ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಬಾಯಾರಿಕೆಯಾದರೆ “ಇದು ಮಾದಿಗರದು’ ಎಂದು ಹೇಳಿ ಒಂದು ಕಡ್ಡಿಯನ್ನು ಹರಿಯುವ ನೀರಿನಲ್ಲಿ ಎಸೆಯುತ್ತಾರೆ. ಆ ಕಡ್ಡಿ ನೀರಲ್ಲಿ ತಾ ನಿಂತ ಸೀಮೆಯನ್ನು ಮೀರಿ ಹೋಗುವ ಮುನ್ನವೆ ಬೊಗಸೆಯಿಂದ ನೀರೆತ್ತಿಕೊಂಡು ಕುಡಿಯಬೇಕು ಎಂಬುದು ಪರ್ಯಾಯವಾಗಿ ರೂಪಿಸಿಕೊಂಡ ಸಂಪ್ರದಾಯ. ಒಬ್ಬ ಮಾದಿಗ ಕಣ್ಣೆದುರು ಇದ್ದಾಗಲೂ ಈ ರೀತಿ ಕಡ್ಡಿ ಎಸೆದು ನೀರು ಕುಡಿಯಬಾರದು. ಒಂದು ವೇಳೆ ಕಣ್ಣೆದುರಿಗಿದ್ದ ಮಾದಿಗನು ನೀರು ಹಾಕದೆ ಹೋದರೆ “ನೀರಾಡಿಸಿ ಬಿದ್ದು ಒದ್ದಾಡಿ ಸಾಯುತ್ತೇವೆಯೇ ವಿನಃ(ನಾವಾಗಿಯೇ) ನೀರು ಕುಡ್ಯಾಂಗಿಲ್ಲ” ಎಂದು ಹೇಳುತ್ತಾರೆ. ಇದು ಡಕ್ಕಲಿಗರು ಪಾಲಿಸುವ ನಿಯಮದ ಪರಿ ಎಂದು ಹೇಳಬಹುದು.