ಯಾರಿಗೆ ಬೇಕಾಗೈತಿ ನಿಮ್ ಕವಿತಾ ?
ಇದ್ರ ಬ್ರೆಡ್ ತಾ, ಮ್ಯಾಲೆ ಬೆಣ್ಣಿ ತಾ,
ಇಲ್ಲ ಎಣ್ಣಿ ತಾ-

ಕವಿ ಬೇಂದ್ರೆಯವರು ಈ ಪದ್ಯ ಓದಿದ್ದು ಉಡುಪಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ವೇದಿಕೆಯಿಂದ. ೧೯೬೦ನೆ ಇಸವಿಯ ಅಂದಿನ ಸಭೆಯಲ್ಲಿ ನಾನೂ ಇದ್ದೆ. ಕಾವ್ಯದ ಬಗ್ಗೆ ಅಸ್ಥೆ ಕಳೆದುಕೊಂಡು, ಕೇವಲ ಹೊಟ್ಟೆಬಟ್ಟೆಯ ಬವಣೆಗೆ ಮಾತ್ರ ಬದ್ಧವಾದ ಒಂದು ಮನಃಸ್ಥಿತಿಯ ವಿಡಂಬನೆ ಈ ಕವಿತೆ. ಜತೆಗೆ ೧೯೬೦ರ ವೇಳೆಗೆ ಕವಿತೆಯ ಬಗೆಗೆ, ನಮ್ಮ ಸಾಮಾಜಿಕ ಪರಿಸರದಲ್ಲಿ ರೂಪುಗೊಂಡ ಒಂದು ತಟಸ್ಥ ಧೋರಣೆಯನ್ನೂ ಈ ಕವಿತೆ ಸೂಚಿಸುತ್ತದೆ ಎಂದು ನನ್ನ ತಿಳಿವಳಿಕೆ.

ಇದೇ ಬೇಂದ್ರೆಯವರು ೧೯೨೯ರಲ್ಲಿ ಬೆಳಗಾವಿಯ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ವೇದಿಕೆಯ ಮೇಲೆ, ಗಾರುಡಿಗನಂತೆ ನಿಂತುಕೊಂಡು, ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಕವಿತೆಯನ್ನು ಓದಿ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿದರೆಂದು ಮಾಸ್ತಿಯವರು ಒಂದೆಡೆ ವರ್ಣಿಸಿದ್ದಾರೆ. ‘ಹಕ್ಕಿ ಹಾರುತಿದೆ ನೋಡಿದಿರಾ’  ಕವಿತೆಯಿಂದ, ‘ಯಾರಿಗೆ ಬೇಕಾಗೈತಿ ನಿಮ್ ಕವಿತಾ’ದವರೆಗಿನ ಈ ಅವಧಿ, ಕವಿತೆಯ ಬಗೆಗಿನ ನಿಲುವುಗಳನ್ನು ಕುರಿತು ಎರಡು ಘಟ್ಟಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಇತ್ತ ನವೋದಯದ ಆರಂಭಕಾಲಕ್ಕೆ ಮೈಸೂರಿನ ಮಹಾರಾಜ ಕಾಲೇಜಿನ ಆವರಣವೂ ಶ್ರೀ ಕುವಂಪು ಕಾವ್ಯವಾಚನದ ಸಮ್ಮೋಹಕತೆಯಿಂದ ತರಂಗಿತವಾಗಿತ್ತು. ಕುವೆಂಪು ಅವರ ಕಾವ್ಯವಾಚನವನ್ನು ಗಂಟೆಗಟ್ಟಲೆ ಕೂತು, ಬಹುಸಂಖ್ಯೆಯ ಶ್ರೋತೃಗಳು ಮಂತ್ರಮುಗ್ಧರಾಗಿ ಆಲಿಸುತ್ತಿದರಂತೆ.

ಆದರೆ  ಇವತ್ತು ? ಕಾವ್ಯವನ್ನು ತಾವಾಗಿಯೇ ಓದುವವರೂ ಕಡಿಮೆ ಆಗಿದ್ದಾರೆ; ಹಾಗೆಯೇ ಕೇಳುವವರೂ ಕಡಿಮೆಯಾಗಿದ್ದಾರೆ. ಕಾವ್ಯ ಹಿಂದಿಗಿಂತ ಇಂದು ಒಂದು ಪ್ರಮುಖ ನೆಲೆಗೆ ಸರಿದಿದೆ-ಎಂದು ಯಾರಿಗಾದರೂ ಅನ್ನಿಸುತ್ತದೆ.

ಹೀಗೆ ಆಗಿರುವುದು ಶೋಚನೀಯವೆಂದಾಗಲೀ, ಹಿಂದಿನಂತೆ ಬಹು ಸಂಖ್ಯಾತರು ನೆರೆದು ಕವಿತೆಯನ್ನು ಕೇಳುವುದರಿಂದ ಮಾತ್ರ ಕಾವ್ಯದ ಸಾರ್ಥಕತೆ ಇದೆ ಎಂದಾಗಲೀ, ಹಾಗೆ ಕೇಳುವವರಿಲ್ಲದ ಕಾರಣದಿಂದ ಕವಿತೆ ಯಾರಿಗೂ ಬೇಡವಾದ ವಸ್ತುವಾಗಿದೆಯೆಂದಾಗಲೀ, ವಿಷಾದದಿಂದ ಯಾರೂ ಯೋಚನೆ ಮಾಡಬೇಕಾಗಿಲ್ಲ. ಹಿಂದೆ, ಅಂದರೆ ನವೋದಯದ ಸಾಹಿತ್ಯೋತ್ಸಾಹದ ಪರಿಸರದಲ್ಲಿ ಬೇಂದ್ರೆ, ಕುವೆಂಪು ಮತ್ತಿತರರ ಕಾವ್ಯವಾಚನಕ್ಕೆ, ಅಥವಾ ಕವಿಗೋಷ್ಠಿಗಳಿಗೆ ಬಹುಸಂಖ್ಯೆಯ ಕಾವ್ಯಪ್ರೇಮಿಗಳು ಕಿಕ್ಕಿರಿಯುತ್ತಿದ್ದರೆಂಬುದೇನೋ ನಿಜ. ಅದಕ್ಕೆ ಮುಖ್ಯವಾದ ಕಾರಣವೆಂದರೆ, ಕನ್ನಡ ಸಾಹಿತ್ಯ ಪರಿಸರದಲ್ಲಿ ಮೊಟ್ಟ ಮೊದಲಿಗೆ ಹೊಸತಾದುದು ಏನೋ ಸಂಭವಿಸುತ್ತಾ ಇದೆ ಎಂಬ, ತಾನು ಅದರಲ್ಲಿ ಪಾಲುಗೊಳ್ಳಬೇಕು ಎಂಬ ಸಂಭ್ರಮವೇ ಪ್ರಧಾನವಾಗಿದ್ದದ್ದು. ಬರೆಯುವ ಕವಿಗೂ ತಾನು ಬೇರೆ ರೀತಿಯಲ್ಲಿ ಬರೆಯುತ್ತಿರುವುದೇ ಒಂದು ರೋಮಾಂಚಕಾರಿಯಾದ ಸಾಹಸವಾಗಿತ್ತು. ತಾನು ಬರೆಯುವುದರಲ್ಲೇ ಅದಮ್ಯವಾದ ಉತ್ಸಾಹವೂ, ಸಂತೋಷವೂ ತಾನೇ ತಾನಾಗಿತ್ತು. ಆದುದರಿಂದ ಅಂದಿನ ಪರಿಸರದಲ್ಲಿ, ಅಂದಿನ ಸಾಹಿತ್ಯಾಸಕ್ತರೂ ಹೊಸ ಉತ್ಸಾಹ ಸಂಭ್ರಮಗಳಲ್ಲಿ ಪಾಲುಗೊಳ್ಳಲು ಕಾತುರರಾಗಿದ್ದರು. ಕೇವಲ ಕವಿತಾ ವಾಚನಕ್ಕೆ ಯಾಕೆ, ಬಿ. ಎಂ. ಶ್ರೀಕಂಠಯ್ಯನವರ ಮೂರು ಮೂರು ತಾಸುಗಳ ಉಪನ್ಯಾಸವನ್ನೂ ಜನ ಹೀಗೇ ಕಿಕ್ಕಿರಿದು ಕೇಳುತ್ತಿದ್ದರಂತೆ.  ಒಂದು ನಿಜವಾದ ‘ನವೋದಯ’ದ ಕಾಲದಲ್ಲಿ ಆಗುವುದೇ ಹೀಗೆ. ನವೋದಯ ಕಾಲದ ಕವಿ, ಹಾಗೂ ಕಾದಂಬರಿಕಾರರಿಗೆ ಅಪಾರವಾಗಿ ದೊರೆತ ಜನಪ್ರಿಯತೆಗೂ ಇದೇ ಕಾರಣ.

ಆದರೆ ಇವತ್ತು ಅಂಥ ಪರಿಸರವನ್ನು ನಾವು ನಿರೀಕ್ಷಿಸುವುದು ತಪ್ಪು. ಕಾಲ ಬದಲಾಗಿದೆ. ಸಾಹಿತ್ಯವೂ ಬದಲಾಗಿದೆ. ಸಾಹಿತ್ಯದಲ್ಲಿ ಸಮೃದ್ಧಿ ವೈವಿಧ್ಯಗಳು ಬಂದಿವೆ.  ಆದರೆ ಒಂದು ಮಾತು ಮಾತ್ರ ನಿಜ. ಕಾವ್ಯ ಒಂದು  ಅಪ್ರಮುಖ ನೆಲೆಗೆ ಸರಿದಿದೆ. ಆದರೆ ಅದು ವ್ಯಥೆ ಪಡಬೇಕಾದ ಸಂಗತಿಯಲ್ಲ. ಸಾಹಿತ್ಯದ ಇತರ ಪ್ರಕಾರಗಳೂ, ತಕ್ಕಷ್ಟು ಪ್ರಮುಖ ನೆಲೆಗೆ ಬಂದಿವೆ. ಸಾಹಿತಿಗಳಲ್ಲಿಯೂ, ಕವಿಗೆ ಅನಗತ್ಯವಾಗಿ ಸಲ್ಲುತ್ತಿದ್ದ ಗಮನ ಹಾಗೂ ಪ್ರಾಧಾನ್ಯತೆಗಳು ಇಂದು ಕಡಿಮೆಯಾಗಿ, ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಗಣನೀಯವಾದ ಸಾಧನೆ ಮಾಡಿದವರ ಬಗೆಗೆ ತಕ್ಕಷ್ಟು ಆಸಕ್ತಿ, ಗಮನ, ಗೌರವಗಳು ಓದುಗರಲ್ಲಿ ಮೂಡುತ್ತಿರುವುದು ಒಂದು ಒಳ್ಳೆಯ ಲಕ್ಷಣವಾಗಿದೆ. ಆದರೆ ಈ ಕಾರಣಕ್ಕೆ, ಕಾವ್ಯದ ಬಗ್ಗೆ ಜನಕ್ಕೆ ಆಸಕ್ತಿಯೇ ಇಲ್ಲವಾಗಿದೆ ಎಂದು ಹೇಳಲು ಆಧಾರವೇ ಇಲ್ಲ. ಯಾಕೆಂದರೆ ಕಾವ್ಯ ಎಲ್ಲ ಕಾಲದಲ್ಲೂ, ನಿಜವಾದ ಸಾಹಿತ್ಯಾಸಕ್ತರ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ. ಇವತ್ತಿಗೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಿಷ್ಠರಾದ ಯಾವುದೇ ಲೇಖಕರು ಕಾವ್ಯದ ಮುಖೇನ ಬರುವ ಅನುಭವದಿಂದ, ತಮ್ಮ ವ್ಯಕ್ತಿತ್ವವನ್ನು ಬೆಳೆಯಿಸಿಕೊಂಡವರು ; ಸಮಕಾಲೀನ ಕಾವ್ಯಾಭಿವ್ಯಕ್ತಿಯಿಂದ ತಮ್ಮ ಸಾಹಿತ್ಯಾಭಿವ್ಯಕ್ತಿಗೆ ನೂತನತೆಯನ್ನೋ, ಪುಷ್ಟಿಯನ್ನೋ, ದೃಷ್ಟಿಯನ್ನೋ ಪಡೆದುಕೊಳ್ಳಬಹುದೆಂದು ತಿಳಿದುಕೊಂಡವರು. ಜತೆಗೆ, ಬಹುಸಂಖ್ಯಾತರ ಆಸಕ್ತಿ ಹಾಗೂ ಜನಪ್ರಿಯತೆಯ ಮೂಲ ಮಾನದಿಂದ ಕಾವ್ಯದ ಪ್ರಾಧ್ಯಾನ್ಯತೆಯನ್ನು ಇಂದು ಅಳೆಯುವುದು ಸಲ್ಲದು. ಜನ ಮನವನ್ನು ತೆಕ್ಕನೆ ಸೆಳೆಯುವ ಮತ್ತು ಅವರಿಗೆ ರುಚಿಸಬಹುದಾದ ಬೇರೆ ಬೇರೆಯ ಹಲವು ಜನಪ್ರಿಯ ಮಾಧ್ಯಮಗಳೂ ರೂಪುಗೊಂಡಿವೆ. ಆದುದರಿಂದ ‘ಜನಪ್ರಿಯ ಸಾಹಿತ್ಯದ ಲೇಖಕ’ರೊಂದಿಗೆ ಗಂಭೀರವಾದ ಸಾಹಿತ್ಯ ನಿರ್ಮಾಪಕರು ಮುಖಾಮುಖಿಯಾಗಿ ತಮಗೆ ತಾವೇ ಪ್ರತ್ಯೇಕವಾಗಿ ನಿಲ್ಲಬೇಕಾದ ಅಗತ್ಯವಿದೆ. ಬರೆಯುವ ಬಗ್ಗೆ ಎಚ್ಚರ, ಬರೆಯುವ ವಿಚಾರದಲ್ಲಿ ಸಂಯಮ, ಬರವಣಿಗೆಗೆ ಲಭಿಸಬೇಕಾದ ಗಟ್ಟಿತನ, ಇತ್ಯಾದಿಗಳು ಸಾಹಿತಿಯ ಸೃಜನಶೀಲತೆಯನ್ನು ನಿಯಂತ್ರಿಸತೊಡಗಿದಂತೆ, ಆತ ಹಿಂದಿನವರಂತೆ, ಸುಲಭವಾಗಿ ಬಹುಜನರನ್ನು ತಟಕ್ಕನೆ ರೋಮಾಂಚನ ಗೊಳಿಸುವುದನ್ನು, ಶ್ರೋತೃಗಳನ್ನು ಸಮ್ಮೋಹನಗೊಳಿಸುವಂಥದನ್ನು ಬರೆಯಲಾರ. ಇವತ್ತಿನ ಗಂಭೀರ ಸಾಹಿತ್ಯ ನಿರ್ಮಿತಿ ಇಂಥ ನಿಕಷಗಳನ್ನು ಹಾದು ಬರಬೇಕಾಗಿದೆ.

ಆದುದರಿಂದಲೇ ಇಂದಿನ ಕವಿತೆ, ನವೋದಯದ ಕಾಲದ ಕವಿತೆಯಂತೆ, ಕವಿ ಸಮ್ಮೇಳನಗಳಲ್ಲಿ ಶ್ರೋತೃಗಳನ್ನು ಎಷ್ಟೋ ವೇಳೆ ತಲುಪದೆ ಹೋಗುತ್ತದೆ. ಓದುಗರಿಗೆ ಕವಿ ಏನನ್ನು ಹೇಳುತ್ತಾನೆಂಬುದೇ ತಿಳಿಯದಿರಬಹುದು.  ಹೀಗಾಗಿ, ಒಂದೊಂದು ಸಲ ಕೆಲವು ಕವಿಗಳೂ ಸಹ, ಇಂಥ ಕವಿಗೋಷ್ಠಿಗಳಲ್ಲಿ ಸೀರಿಯಸ್ಸಾದದ್ದನ್ನು ಓದದೆ, ತಟ್ಟನೆ ‘ಕ್ಲಿಕ್’ ಆಗುವಂಥ ಪದ್ಯಗಳನ್ನೋದಿದ್ದು ನನಗೆ ನೆನಪಿದೆ. ಇದಕ್ಕೆ ಕಾರಣವೆಂದರೆ, ಇಂದಿನ ಕವಿತೆ ಬಹುಜನ ಶ್ರಾವಕರಿಗೆ ತಟ್ಟನೆ ಸಂವಹನ ಸಾಧ್ಯವಾಗುವ ಸ್ವರೂಪದ್ದಲ್ಲ  ಅದು, ಕಾವ್ಯಸಕ್ತರಾದವರು ತಾವೇ ಓದಿಕೊಂಡು, ಮತ್ತೆ ಮತ್ತೆ ಆಸ್ವಾದಿಸುವ, ಪರಿಭಾವಿಸುವ ಹಂತಗಳಲ್ಲಿ ಸಂವಹನಗೊಳ್ಳತಕ್ಕದ್ದು. ಹಾಗೆಂದರೆ, ಹಿಂದಿನ ಕವಿತೆ ಬಹುಜನ ಶ್ರೋತೃಗಳೆದುರು ಕೇವಲ ವಾಚನವಾಗುವಾಗಲೇ ಸಂಪೂರ್ಣ ಸಂವಹನಗೊಳ್ಳುವಷ್ಟು ಸರಳವಾಗಿತ್ತೆಂದು ಅರ್ಥವಲ್ಲ. ಆದರೆ ಆ ಕವಿತೆ, ತನಗಿದ್ದ ಕಥೆಯ ಹಂದರದಿಂದಲೋ, ಅಕ್ಲಿಷ್ಟರಮ್ಯತೆಯಿಂದಲೋ, ವಾಚನ ವಿಧಾನದ  ಮೂಲಕ ಒಂದು ಮಟ್ಟದಲ್ಲಿ ಮಾತ್ರ ಸಂವಹನ ಸಾಧ್ಯವಾಗಿತ್ತು, ಆ ವಾಚನ ವಿಧಾನ ಕೂಡಾ ಮುಖ್ಯವಾಗಿ ಕಾವ್ಯದ ಬಗ್ಗೆ ಅಭಿರುಚಿ ನಿರ್ಮಾಣದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿತ್ತು.  ಅನಂತರ ಅದೇ ಕಾವ್ಯವನ್ನು ಕುರಿತು ಅಧ್ಯಯನ ಮಾಡುವಾಗ, ಓದುಗನು ಪಡೆಯುವ ಸ್ವಾರಸ್ಯ ಹಾಗೂ ಅರ್ಥವಂತಿಕೆಗಳೇ ಬೇರೆ.

ಹಾಗೆಂದರೆ ಇವತ್ತಿನ ಕವಿತೆ ಕವಿಗೆ ಕವಿಗೋಷ್ಠಿಗೆ ಮಾಡಿಸಿದ್ದಲ್ಲ ಎಂದು ಅರ್ಥವಲ್ಲ. ಇಂದಿಗೂ ಕವಿಗೋಷ್ಠಿಗಳು ಸಾಹಿತ್ಯಾಭಿರುಚಿ ನಿರ್ಮಾಣದಲ್ಲಿ ಒಳ್ಳೆಯ ಮಾಧ್ಯಮಗಳೇ. ಕಡೆಯ ಪಕ್ಷ ತಾನು ಬರೆದ ಕವಿತೆಯನ್ನು, ಹೇಗೆ ಓದಬೇಕೆಂಬುದನ್ನಾದರೂ ಕವಿ ತಿಳಿಸಿಕೊಡುವ ಒಂದು ಸಾಧನವಾಗುತ್ತದೆ ಕವಿಗೋಷ್ಠಿ; ಅಥವಾ ಒಂದು ಕವಿತೆಯನ್ನು ಹೇಗೆ, ತಾನು ಓದಬಾರದೆಂಬ ಪಾಠವನ್ನೂ ಕಲಿಯುವ ಸಂಭವಗಳುಂಟು. ಕವಿತೆ ಮೂಲತಃ ಶಬ್ದರೂಪದ ಭಾಷೆಯಲ್ಲಿ ಮೈದಾಳುವುದರಿಂದ, ಅದರ ಸಂವಹನ ತಕ್ಕಮಟ್ಟಿಗಿನ ಭಾಗ, ಅದನ್ನು ಗಟ್ಟಿಯಾಗಿ ಓದುವ ವಿಧಾನವನ್ನೂ ಅವಲಂಬಿಸಿದೆ. ಅಲ್ಲದೆ ಒಂದು ಹೊಸ ಕಾವ್ಯ ಮಾರ್ಗ ರೂಪುಗೊಂಡಾಗ, ಕವಿತೆಯನ್ನು ಹೇಗೆ ಓದಬೇಕೆಂಬುದನ್ನೂ, ಹೇಗೆ ಓದುವುದು ಅಗತ್ಯವೆಂಬುದನ್ನೂ ತಿಳಿಸಿಕೊಡಲು ಕಾವ್ಯವಾಚನಗಳು ಸಾಧನವಾಗುತ್ತವೆ. ಟಿ. ಎಸ್. ಇಲಿಯಟ್, ತನ್ನ ಓದುಗಾರಿಕೆಯನ್ನು ಧ್ವನಿಮುದ್ರಿಕೆಗಳ ಮೂಲಕ ಸಂರಕ್ಷಿಸಿರುವುದರ ಉದ್ದೇಶಗಳಲ್ಲಿ ಇದೂ ಒಂದು.

ಹಿಂದೆ ಮುದ್ರಣ ವ್ಯವಸ್ಥೆ ಇಲ್ಲದಾಗ ಕಾವ್ಯವನ್ನು ಕವಿಯೋ, ಗಮಕಿಗಳೋ ಓದಿ ಹೇಳಲೇಕಾದ ಅಗತ್ಯವಿತ್ತು. ಆದರೆ ಇಂದು ಮುದ್ರಿತವಾದ ಕವಿತೆಯನ್ನು ಕಾವ್ಯಾಸಕ್ತನಾದ ಓದುಗ ತಾನೇ ಓದಿಕೊಳ್ಳುತ್ತಾನೆ. ಹೀಗಿರುವಾಗ ಕವಿ ಓದಿ ತೋರಿಸಬೇಕಾದ ಅಗತ್ಯವೇನಿದೆ ? ಇದರ ಮೇಲೆ ಒಂದು ನಿರ್ದಿಷ್ಟ ಕಾಲಮಾನದಲ್ಲಿ   ಬದುಕಿರುವ ಕವಿ, ತನ್ನ ಸಮಕಾಲೀನರೆದುರು ಕಾವ್ಯವನ್ನು ಓದಿ ತೋರಿಸಬಹುದು. ಆದರೆ ನಾಳಿನ ಪೀಳಿಗೆಯವರು ತಾವೇ ಓದಿಕೊಳ್ಳಬೇಕಲ್ಲವೆ ?

ನಮ್ಮ ಪ್ರಸ್ತುತ ಚರ್ಚೆ, ನಾಳಿನ ಪೀಳಿಗೆಯವರು ಕವಿಯ ಕಾವ್ಯವನ್ನು ಹೇಗೆ ಓದಬೇಕು ಅಥವಾ ಓದುತ್ತಾರೆಂಬುದನ್ನು ಕುರಿತದ್ದಲ್ಲ. ಆದರೆ ಸಮಕಾಲೀನ ಸಾಹಿತ್ಯಕ ಸಂದರ್ಭಗಳಲ್ಲಿ, ಕವಿ ತಾನು ಬರೆದದ್ದನ್ನು, ಕಾವ್ಯಾಸಕ್ತರೆದುರು ಓದುವುದು ಅಪೇಕ್ಷಣೀಯವೆಂದಷ್ಟೇ ಇಲ್ಲಿ ಹೇಳಲು ಹೊರಟಿರುವುದು. ಪ್ರತಿಯೊಂದು ಕಾಲದ ಕವಿಯೂ ತನ್ನ ಕಾಲದ ಸಹೃದಯರೊಂದಿಗೆ ನೇರವಾದ ಸಂಪರ್ಕವಿರಿಸಿಕೊಳ್ಳುವ ಮತ್ತು ಅವರ ಪ್ರತಿಕ್ರಿಯೆಗಳನ್ನು ಗಮನಿಸಲು ಸಾಧ್ಯವಾಗುವ ಸಂದರ್ಭಗಳಲ್ಲಿ ಕವಿ ಗೋಷ್ಠಿಯೂ ಒಂದು ಎಂಬುದನ್ನು ಒತ್ತಿ ಹೇಳಬೇಕಾಗಿದೆ.

ಈ ದಿನ, ನವೋದಯ ಕಾಲದಂಥ ಕವಿಗೋಷ್ಠಿಗಳು ಹೆಚ್ಚು ಯಶಸ್ವಿ- ಯಾಗಲಾರವು ; ಮತ್ತು ಹಾಗೆ ಯಶಸ್ವಿಯಾಗಲು ಬೇಕಾದಂಥ ಕವಿತೆಗಳನ್ನು ಇಂದಿನವರು ಯಾರೂ ಬರೆಯಲಾರರು. ಆದರೆ, ಪರಿಮಿತ ಸಹೃದಯ ವೃಂದದ ಎದುರು ಬೇರೆಯ ರೀತಿಯ ಕವಿಗೋಷ್ಠಿಗಳನ್ನು ಏರ್ಪಡಿಸುವುದು ಒಳ್ಳೆಯದು. ಒಬ್ಬನೇ ಕವಿಯೋ ಅಥವಾ ಹಲವಾರು ಕವಿಗಳೊ, ಮೊದಲು ಕವಿತೆಯೊಂದನ್ನು ಓದುವುದು, ಆನಂತರ ಅಲ್ಲೇ, ಓದಿದ ಕವಿತೆಯನ್ನು ಕುರಿತು ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಬರಮಾಡಿಕೊಳ್ಳುವುದು ಅಥವಾ ಚರ್ಚೆಗಳನ್ನು ಏರ್ಪಡಿಸುವುದು ಹೆಚ್ಚು ಉಪಯುಕ್ತವಾದ ವಿಧಾನ. ಉಳಿದೆಲ್ಲ ಸಾಹಿತ್ಯ ಪ್ರಕಾರಗಳಿಗಿಂತ ಕವಿತೆ ಅತ್ಯಂತ ಹರಳುಗೊಳಿಸಿದ ಅಭಿವ್ಯಕ್ತಿಯಾದುದರಿಂದ, ಸಾಹಿತ್ಯದಿಂದ ದೊರೆಯುವ ಸಂಸ್ಕಾರದ ಬಹುಮುಖ್ಯವಾದ ಭಾಗ ಕವಿತೆಯ ಅಧ್ಯಯನದ ಮೂಲಕ ದೊರೆಯುವುದರಿಂದ, ಕಾವ್ಯವನ್ನು ಓದುಗರ ಹತ್ತಿರಕ್ಕೆ ಒಯ್ಯುವ ಕವಿಗೋಷ್ಠಿಗಳು, ಇಂದಿಗೂ ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಬಲ್ಲವು.

ಪ್ರತಿಕ್ರಿಯೆ-೧೯೮೨