ಪೌರಾಣಿಕ ಹಿನ್ನೆಲೆಯನ್ನು ಕುರಿತು ಗಮನಿಸಿದಾಗ ಡಕ್ಕಲಿಗರು ಹೇಳುವ ಪರಿ ಹೀಗಿದೆ. ಒಂದು ಕೊಡ ನೀರ ತರಾಂವಲ್ಲ, ಬೇರೆಯವರ ಹತ್ರ ಕೆಲಸಕ್ಕೆ ಹೋಗಾಂವಲ್ಲ, ಕುಳಿತ ಜಾಗದಲ್ಲಿಯೇ ಅನ್ನ-ನೀರು ತಂದು ಹಾಕಬೇಕೆಂದು ಜಾಂಬಮುನಿಯಿಂದ ವಚನ ಪಡೆದವನು. ಇವತ್ತಿಗೂ ತಮ್ಮ ದಾಯಾದಿ ಸಂಬಂಧವೆಂದು ಹೇಳಿಕೊಂಡು ಮಾದಿಗರಿಂದ ಅನ್ನ-ನೀರು, ಕಾಳು-ಕಡಿಗಳನ್ನು ಪಡೆದು ಬದುಕುತ್ತಾರೆ. ಮದಿಗರ ಕೇರಿಗಳೇ ಡಕ್ಕಲಿಗರ ಆಸ್ತಿ. ವರ್ಷದಲ್ಲಿ ಒಂದು ಸಲವಾದರೂ ತಮ್ಮ ಬಿಡಾರವನ್ನು ಹೂಡುತ್ತಾರೆ. ಅವರು ಬಂದಂದಿನಿಂದ ಮಾದಿಗರು ಅವರಿಗೆ ಅನ್ನ-ನೀರು ಹಾಕಬೇಕಾಗುತ್ತದೆ. ಊಟದ ಸರಿಯಾದ ಹೊತ್ತಿಗೆ ಮಾದಿಗರ ಕೇರಿಯ ಸಮೀಪದಲ್ಲಿ ನಿಂತು ಗೌಡ್ರ…. ಎಪ್ಪಾ…. ಊಟದ ಹೊತ್ತಾಯ್ತು ನಿಮ್ಮ ಹಳೆಮಕ್ಕಳು ಊಟ ಕಳುಹಿಸಿ ಎಂದು ಮೂರು ನಾಲ್ಕು ಬಾರಿ ಜೋರಾಗಿ ನಿಂತು ಕೂಗುತ್ತಾರೆ. ಇವರ ಕೂಗನ್ನು ಕೇಳಿ ಕೇರಿಯ ಮಾದಿಗರು ನಮ್ಮ ಡಕ್ಕಲು ಮಗ ಬಂದಿದ್ದಾನೆಂದು ಸಂತೋಷದಿಂದ ಮನೆಯಲ್ಲಿ ಮಾಡಿರುವ ಒಂದಿಷ್ಟು ರೊಟ್ಟಿ, ಚಟ್ನಿ, ಸಾರು ಒಂದು ತಂಬಿಗೆ ನೀರನ್ನು ಹಾಕುತ್ತಾರೆ. ವಿಶೇಷವಾಗಿ ಹಬ್ಬ, ಹುಣ್ಣಿವೆ, ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಸಿಹಿ ಅಡುಗೆ ತಂದು ನೀಡುವುದುಂಟು.

ಕೇರಿಗೆ ಬಂದ ಡಕ್ಕಲಿಗರು ಏಳು-ಎಂಟು ದಿನಗಳವರೆಗೆ ಇದ್ದು ಕೊನೆಯ ದಿನ ಮನೆಗಿಷ್ಟು ಕಾಳು-ಕಡಿ, ಬಟ್ಟೆ-ಬರೆ, ಐದು-ಹತ್ತು ರೂಪಾಯಿ, ಆಡು-ಕುರಿ, ಕೋಳಿ ಇತರೆ ವಸ್ತುಗಳನ್ನು ಪಡೆದುಕೊಳ್ಳುತ್ತಾರೆ. ಕೆಲವರು ವಸ್ತುಗಳನ್ನು ಕೊಡಲು ನಿರಾಕರಿಸಿದಲ್ಲಿ, ಅಂಥವರ ಮನೆಯ ಮುಂದೆ ತಮ್ಮ ಬಳಿ ಇರುವ ಚಂಡಾಳ ಗೊಂಬೆಯನ್ನು ಕಟ್ಟಿ ಹೋಗುತ್ತಾರೆ. ಮನೆಯ ಮುಂದೆ ಗೊಂಬೆ ಕಟ್ಟಿಸಿಕೊಂಡ ಮಾದಿಗನು ಆರು ತಿಂಗಳೊಳಗಾಗಿ ಗೊಂಬೆಕಟ್ಟಿ ಹೋದ ಡಕ್ಕಲಿಗನನ್ನು ಕರೆ ತಂದು ಅವನ ಕೈಯಿಂದ ಗೊಂಬಿ ಬಿಚ್ಚಿಸಬೇಕು. ಒಂದು ವೇಳೆ ಗೊಂಬೆಯನ್ನು ಬಿಚ್ಚಿಸದಿದ್ದರೆ, ಗೊಂಬೆ ಕಟ್ಟಿಸಿಕೊಂಡ ಮಾದಿಗರ ಮನೆಗೆ ಕೇಡಗಾಲ ತಪ್ಪದೆಂದು ಮಾದಿಗರ ನಂಬುಗೆ.

ಕ್ಷೇತ್ರಕಾರ್ಯದ ಅವಧಿಯಲ್ಲಿ ದೊರೆತ ಮಾಹಿತಿಯ ಪ್ರಕಾರ, ರಾಮದುರ್ಗ ತಾಲೂಕಿನ ಸೂರೇಬಾನದ ಶ್ರೀ ಬಾಲಪ್ಪ ಹನುಮಪ್ಪ ಡಕ್ಕಲಿಗರು ಹೇಳಿದಂತೆ “ಡಕ್ಕಲಿಗರು ಊರು ಬಿಟ್ಟು ಹೋಗುವ ದಿವಸ ಕಾಳು-ಕಡಿ ಕೊಡದಿದ್ದ ಮಾದಿಗರ ಮನೆಯ ಮುಂದೆ ತಾವು ಸಾಕಿರುವ ಕತ್ತೆ ಅಥವಾ ನಾಯಿಯನ್ನು ಒಯ್ದು ಕಿವಿ ಕತ್ತರಿಸಿ ರಕ್ತ ಬರುವಂತೆ ಮಾಡುತ್ತೇವೆ. ಹೀಗೆ ಮಾಡಿದರೆ ಅಂಥ ಮಾದಿಗರಿಗೆ ಕುಲದಿಂದ ಹೊರತೆಗೆದಂತೆ, ಅಂಥವರ ಜೊತೆಗೆ ಉಳಿದ ಮಾದಿಗರು ಹೆಣ್ಣು-ಗಂಡಿನ ಕೊಡು-ಕೊಳೆಯ ಸಂಬಂಧ ಮಾಡುವುದಿಲ್ಲ. ಇಂಥ ಉದಾಹರಣೆ ಬೈಲಹೊಂಗಲ ಸಮೀಪದ ದವಲಾಪುರದಲ್ಲಿ ನಡೆಯಿತೆಂದೂ ಹೇಳಿದರು. ಮೂರುವರ್ಷಗಳವರೆಗೆ ನ್ಯಾಯ ನಡೆದು ಕೊನೆಗೆ ಅಲ್ಲಿಯ ಮಾದಿಗರು ತಮ್ಮನ್ನು ಕರೆದೊಯ್ದು ನ್ಯಾಯ ಬಗೆಹರಿಸಿಕೊಂಡರೆಂದು ಸ್ಮರಿಸಿಕೊಂಡನು.